-ಸುನಿಧಿ
ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಹಿರಿಯರ ಗುರುಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು.

ಈ ಜಗದ ಸರ್ವೋಚ್ಚ ಆಡಳಿತಗಾರ. ಜಗತ್ತಿನ ಅತ್ಯಂತ ಶ್ರೇಷ್ಠ ಜೀವಿ. ಬ್ರಹ್ಮ ಎಂಬ ಪದದ ಅರ್ಥವೇ ಅದು ಎಲ್ಲವೂ ಯಾರಿಂದ ಸೃಷ್ಟಿಯಾಗಿದೆಯೋ ಅವನೇ ಬ್ರಹ್ಮ. ಹಾಗಾದರೆ ಬ್ರಹ್ಮನ ಸೃಷ್ಟಿ ಹೇಗಾಯಿತು? ಈ ಜಗತ್ತಿನ ಪ್ರಥಮ ಪುರುಷ ಕರ್ಣೋದಕಶಾಯಿ ವಿಷ್ಣು. ಆತನ ಚರ್ಮ ರೋಮಗಳಿಂದ ಅಸಂಖ್ಯಾತ ಬ್ರಹ್ಮಾಂಡಗಳು ಸೃಷ್ಟಿಯಾಗಿವೆ. ಪ್ರಥಮ ಪುರುಷನು ಗರ್ಭೋದಕಶಾಯಿ ವಿಷ್ಣುವಾಗಿ ಪ್ರತಿಯೊಂದು ಬ್ರಹ್ಮಾಂಡವನ್ನು ಪ್ರವೇಶಿಸುತ್ತಾನೆ. ಬ್ರಹ್ಮಾಂಡದ ಅರ್ಧಭಾಗ ಆತನ ದೇಹ ಜಲದಿ೦ದ ಆವೃತ್ತವಾಗಿದ್ದು, ಆತ ಅಲ್ಲೇ ನೆಲೆಸಿರುತ್ತಾನೆ. ಗರ್ಭೋದಕಶಾಯಿ ವಿಷ್ಣುವಿನ ನಾಭಿಯಿಂದ ಕಮಲ ಉದ್ಭವಿಸಿದ್ದು, ಅದೇ ಬ್ರಹ್ಮನ ಜನ್ಮಸ್ಥಳ. ಈ ಬ್ರಹ್ಮನೇ ಸಕಲ ಜೀವರಾಶಿಗಳ ತ೦ದೆ. ಎಲ್ಲಾ ದೇವಾನುದೇವತೆಗಳ ನಾಯಕ.
ಬ್ರಹ್ಮಸೃಷ್ಟಿ:
ಬ್ರಹ್ಮಾಂಡ ಸೃಷ್ಟಿಯಾದ ತಕ್ಷಣ ಬ್ರಹ್ಮನ ಸೃಷ್ಟಿಯಾಯಿತು. ಬ್ರಹ್ಮನು ನಾರಾಯಣನ ಪುತ್ರ. ಈ ಐಹಿಕ ಜಗತ್ತಿಗೆ ಮೊದಲು ಪ್ರವೇಶಿಸಿದವನು ಗರ್ಭೋಕದಶಾಯಿ ವಿಷ್ಣು ಆರ್ಥಾತ್ ನಾರಾಯಣನ ನಾಭಿಯಿಂದ ಉದ್ಭವಿಸಿದ ಕಮಲದಿಂದ ಜನಿಸಿದವನು ಬ್ರಹ್ಮ. ಹೀಗಾಗಿಯೇ ವಿಷ್ಣುವಿಗೆ ಪದ್ಮನಾಭ ಎಂಬ ಹೆಸರು.
ಬ್ರಹ್ಮನು ತಾಯಿ ಶ್ರೀ ಲಕ್ಷ್ಮಿಯ ಸಂಪರ್ಕವಿಲ್ಲದೇ ನೇರವಾಗಿ ತಂದೆ ನಾರಾಯಣನಿಂದ ಹುಟ್ಟಿದವನು. ಹೀಗಾಗಿ ಬ್ರಹ್ಮನನ್ನು ‘ಆತ್ಮಭೂ’ ಎನ್ನುತ್ತೇವೆ. ಬ್ರಹ್ಮ ಸೃಷ್ಟಿಯಾದಾಗ ಲಕ್ಷ್ಮಿ ಅಲ್ಲಿಯೇ ನಾರಾಯಣ ಸೇವೆಯಲ್ಲಿ ನಿರತಳಾಗಿದ್ದಳು. ಹೀಗೆ ಬ್ರಹ್ಮನು ತಾಯ ಗರ್ಭ ಪ್ರವೇಶಿಸದೇ ತಂದೆಯಿಂದ ನೇರವಾಗಿ ಹುಟ್ಟಿದ ‘ಆತ್ಮಭೂ’.
ಬ್ರಹ್ಮನ ಆಯಸ್ಸು : ಸರಳ ಲೆಕ್ಕಾಚಾರದಲ್ಲಿ ಹೇಳುವುದಾದರೆ ಸಾವಿರ ಮಹಾ ಯುಗಗಳು ಬ್ರಹ್ಮನ ಒಂದು ದಿನಕ್ಕೆ ಸಮ. ಒಂದು ಮಹಾಯುಗವೆಂದರೆ ಸತ್ಯ, ತ್ರೇತಾ, ದ್ವಾಪರ, ಕಲಿಯುಗಳನ್ನೊಳಗೊಂಡ ಒಂದು ಚಕ್ರ. ಹಾಗೆಯೇ ಆತನ ರಾತ್ರಿಗಳ ಅವಧಿಯೂ ಅಷ್ಟೆ. ನಮ್ಮ ಪಾಲಿನ 864 ಕೋಟಿ ವರ್ಷಗಳು ಬ್ರಹ್ಮನಿಗೆ ಒ೦ದು ದಿನ. ಬ್ರಹ್ಮ ಇಂಥ’ 100 ವರ್ಷ ಬದುಕುತ್ತಾನೆ. ಅಂದರೆ ಬ್ರಹ್ಮನ ಆಯಸ್ಸು 311 ಸಾವಿರಕೋಟಿ 40 ದಶಲಕ್ಷ ವರ್ಷಗಳು!
ಬ್ರಹ್ಮಜ್ಞಾನ :
ಬ್ರಹ್ಮ ಸರ್ವಜ್ಞ. ಎಲ್ಲಾ ಜ್ಞಾನಗಳ ಮೂಲ ಆತ ಜ್ಞಾನ ಪಡೆದಿದ್ದು ಶ್ರೀಕೃಷ್ಣನಿಂದ.
“ತೇನೇ ಬ್ರಹ್ಮ ಹೃದಾ ಯ ಆದಿ ಕವಯೇ” (ಶ್ರೀಮದ್ ಭಾಗವತ 1.1.1) ಮೂಲ ಜೀವಿ ಬ್ರಹ್ಮನಿಗೆ ವೈದಿಕ ಜ್ಞಾನವನ್ನು ಧಾರೆ ಎರೆದವನು ಶ್ರೀಕೃಷ್ಣ ಎಂದು ಭಾಗವತ ಹೇಳುತ್ತದೆ. ‘ಸೃಷ್ಟಿಯ ಆರಂಭದಲ್ಲಿ ಭಗವಂತನು ಬ್ರಹ್ಮನ ಹೃದಯದಲ್ಲಿ ಈ ಜ್ಞಾನವನ್ನು ಜಾಗೃತಗೊಳಿಸಿದನು. ಆತನಿಗೆ ಸೃಷ್ಟಿಯ ಸಂಪೂರ್ಣ ಜ್ಞಾನವನ್ನು ಧಾರೆ ಎರೆದನು. ಆ ಜ್ಞಾನ ಬ್ರಹ್ಮನೇ ತನ್ನನ್ನು ಈ ಬ್ರಹ್ಮಾಂಡವನ್ನು ವಿಭಜೀಕರಿಸಿ ಸೃಷ್ಟಿಸಿದನು.
ಬ್ರಹ್ಮ ವಿಷ್ಣುವಿನ ಉದರ ಕಮಲದಿಂದ ಹುಟ್ಟಿ ಬರುತ್ತಿದ್ದಂತೆಯೇ ವೇದ ಜ್ಞಾನವನ್ನು ಪಡೆದ. ಆದ್ದರಿಂದಲೇ ಬ್ರಹ್ಮನಿಗೆ ‘ವೇದಗರ್ಭ’ ಎಂಬ ಹೆಸರು. ಅಂಥ ಪರಿಪೂರ್ಣ, ಅಭಿಜಾತ ವೇದ ಜ್ಞಾನವಿಲ್ಲದೇ ಈ ಜಗತ್ತಿನ ಸಕಲ ಜೀವರಾಶಿಗಳನ್ನು ಸೃಷ್ಟಿಸುವುದು ಸಾಧ್ಯವಿತ್ತೆ? ಎಲ್ಲಾ ವೈಜ್ಞಾನಿಕ ಮತ್ತು ಪರಿಪೂರ್ಣ ಜ್ಞಾನಗಳಿಗೂ ವೇದವೇ ಮೂಲ ಯಾವುದೇ ಮಾಹಿತಿಯನ್ನು ಬೇಕಾದರೂ ವೇದಗಳಿಂದ ಪಡೆಯಬಹುದು. ಇಂಥ ವೈದಿಕ ಜ್ಞಾನವನ್ನು ಹುಟ್ಟಿನಿಂದಲೇ ಪಡೆದಿದ್ದರಿಂದಲೇ ಬ್ರಹ್ಮನಿಗೆ ಸೃಷ್ಟಿಕಾರ್ಯ ಸಾಧ್ಯವಾದುದು.
ಸೃಷ್ಟಿ ಹೇಗೆ?

ಮೂಲ ಭಾಗವತ:
ವಾಸ್ತವವಾಗಿ ಶ್ರೀಮದ್ ಭಾಗವತವನ್ನು ಭಗವಂತನು ಮೊದಲು ಬಾರಿ ಉಪದೇಶಿಸಿದ್ದು ಬ್ರಹ್ಮನಿಗೆ ಆಗ ಅದು ನಾಲ್ಕು ಶ್ಲೋಕಗಳ ರೂಪದಲ್ಲಿತ್ತು. ಶ್ರೀ ವಿಷ್ಣುವಿನ ಮೊಟ್ಟ ಮೊದಲ ಮತ್ತು ಅತ್ಯಂತ ವರಿಷ್ಠ ಭಕ್ತ ಬ್ರಹ್ಮ. ಈ ಬ್ರಹ್ಮನ ನಾಲ್ಕು ಮುಖ್ಯ ಪ್ರಶ್ನೆ ಅಥವಾ ಸ೦ಶಯಗಳಿಗೆ ಭಗವ೦ತನು ನಾಲ್ಕು ಉತ್ತರ ಅಥವಾ ವಿವರಣೆಗಳನ್ನು ನೀಡಿದ. ಅದೇ ‘ಚತುಃ ಶ್ಲೋಕ ಭಾಗವತ’ ಅರ್ಥಾತ್ ನಾಲ್ಕು ಶ್ಲೋಕಗಳಲ್ಲಿರುವ ಮೂಲ ಭಾಗವತ.
ಜ್ಞಾನ ಪ್ರಚಾರ :
ಬ್ರಹ್ಮ ನುಡಿಗಳು ವೇದವಾಕ್ಯ. ಅನಾದಿಕಾಲದಿ೦ದ, ಅ೦ದರೆ ಜಗತ್ತು ಸೃಷ್ಟಿಯಾದ ದಿನದಿ೦ದಲೇ ಬ್ರಹ್ಮ ತನ್ನ ಅತಿಶಯ ಜ್ಞಾನವನ್ನು ಶಿಷ್ಯ ಪರ೦ಪರೆ ಮೂಲಕ ಜಗತ್ತಿಗೆಲ್ಲ ಹಂಚುತ್ತಾ ಬಂದಿದ್ದಾನೆ ಎಂಬುದಾಗಿ ವೈದಿಕ ಅನುಯಾಯಿಗಳು ನಂಬಿದ್ದಾರೆ. ಈ ಐಹಿಕ ಜಗತ್ತಿನಲ್ಲಿ ಬ್ರಹ್ಮ ಪರಿಪೂರ್ಣ ಮತ್ತು ಸ್ವತಂತ್ರ ಜೀವಿ. ಅತಿಶಯ ಜ್ಞಾನ ಪಡೆಯಲು ಬಯಸುವ ಪ್ರತಿಯೊಬ್ಬರೂ ಬ್ರಹ್ಮನ ಮಾತುಗಳನ್ನು ಪರಮ ಸತ್ಯವೆ೦ದೂ ಪ್ರಮಾದರಹಿತವೆಂದೂ ಒಪ್ಪಿಕೊಳ್ಳಲೇಬೇಕು. ವೇದ ಜ್ಞಾನವು ಭಗವಂತನಿಂದ ನೇರವಾಗಿ ಬ್ರಹ್ಮನ ಹೃದಯಕ್ಕೆ ಹರಿದು ಬಂದಿದ್ದರಿಂದ ಅದು ದೋಷರಹಿತವಾದುದು. ಅದರಲ್ಲಿ ತಪ್ಪಿಗೆ ಅವಕಾಶವೇ ಇಲ್ಲ. ಹಾಗೆಯೇ ಅತ್ಯಂತ ಪರಿಪೂರ್ಣ ಜೀವಿ ಎನಿಸಿರುವ ಬ್ರಹ್ಮನೂ ಅಕ್ಷರಶಃ ಸತ್ಯ.
ನಿತ್ಯ ಸತ್ಯ. ಏಕೆಂದರೆ ಭಗವಂತನ ಚರಣ ಕಮಲವೇ ಪರಮ ಸತ್ಯವೆಂದು ಒಪ್ಪಿಕೊಂಡಿರುವ ಬ್ರಹ್ಮ ಆತನ ಪರಮ ಭಕ್ತ ಬ್ರಹ್ಮನು ‘ಬ್ರಹ್ಮ ಸಂಹಿತೆ’ ಯಲ್ಲಿ “ಗೋವಿಂದಂ ಆದಿ ಪುರುಷಂ ತಮ್ ಅಹಂ ಭಜಾಮಿ” ಎಂಬ ಸೂಕ್ತಿಯನ್ನು ಪದೇ ಪದೇ ಉಚ್ಚರಿಸಿದ್ದಾನೆ. ಹೀಗೆ ಬ್ರಹ್ಮನು ಭಗವದ್ರೂಪಿ ಗೋವಿಂದನೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊ೦ದಿರುವುದರಿ೦ದ ಆತ ತನ್ನಿಚ್ಛೆಯಂತೆ ಏನೇ ಮಾಡಿದರೂ ಏನೇ ಹೇಳಿದರೂ, ಏನೇ ಚಿಂತಿಸಿದರೂ ಅದನ್ನು ಸತ್ಯವೆಂದು ಒಪ್ಪಿಕೊಳ್ಳಲೇಬೇಕು. ತನ್ನ ಭಕ್ತರ ಪ್ರೀತಿಯ ಅತಿಶಯ ಸೇವೆಯನ್ನು ಮನಃಪೂರ್ವಕವಾಗಿ ಸ್ವೀಕರಿಸುವ ಗೋವಿಂದನು ಭಕ್ತರ ಎಲ್ಲಾ ಮಾತು ಮತ್ತು ಕೃತಿಗಳಿಗೆ ರಕ್ಷಣೆ ನೀಡುತ್ತಾನೆ.
ಬ್ರಹ್ಮ ಬೋಧನೆ :
ಬ್ರಹ್ಮನು ಪರಮ ಜ್ಞಾನಿ. ಪರಮ ವಿರಕ್ತ ಜೀವನದ ಪರಮೋಚ್ಚ ಮೇಲ್ವಿಚಾರಕ. ಎಲ್ಲಕ್ಕಿಂತ ಮಿಗಿಲಾಗಿ ಸ್ವಯಂ ಸಾಕಾರಗೊಂಡ ಆಧ್ಯಾತ್ಮ ಯೋಗಿ ಸಕಲ ಜೀವಿಗಳ ಪರಮ ಆಧ್ಯಾತ್ಮಿಕ ಗುರುವಾಗಿರುವ ಬ್ರಹ್ಮನು ನಮಗೆ ಬಹುಮುಖ್ಯ ಉಪದೇಶಗಳನ್ನು ನೀಡಿದ್ದಾನೆ. ನಾವು ಯಾವುದೇ ಯಶಸ್ಸು ಸಾಧಿಸಬೇಕಾದರೆ ಭಗವಂತನ ಚರಣ ಕಮಲಗಳಿಗೆ ಶರಣಾಗಬೇಕು. ಈ ಐಹಿಕ ಜಗತ್ತಿನ ಸಂಕೋಲೆಗಳಿ೦ದ ಮುಕ್ತರಾಗುವವರೆಗೆ ಪರಮ ಮಂಗಳಕರ ಆಧ್ಯಾತ್ಮಿಕ ಅಸ್ತಿತ್ವ ನಮ್ಮದಾಗುವವರೆಗೆ ನಮ್ಮನ್ನು ನಾವು ಭಗವಂತನಿಗೆ ಸಮರ್ಪಿಸಿಕೊಳ್ಳಬೇಕು ಎಂದು ಬ್ರಹ್ಮ ಹೇಳಿದ್ದಾನೆ. ಬ್ರಹ್ಮನನ್ನು ‘ಪಿತಾಮಹ’ – ತಂದೆಯ ತಂದೆ ಎನ್ನುತ್ತೇವೆ.
ಸಹಜವಾಗಿಯೇ ತಂದೆ ಒಬ್ಬ ಉತ್ತಮ ಸಲಹೆಗಾರ. ಹೀಗಾಗಿ ಯುವಕರು ಅನೇಕ ವಿಷಯಗಳಲ್ಲಿ `ಅನುಭವಿ’ ತ೦ದೆಯ ಸಲಹೆ ಪಡೆಯುತ್ತಾರೆ. ಆದರೆ ಬ್ರಹ್ಮ ಎಲ್ಲಾ ತಂದೆಯರ ತಂದೆ. ಆತ ಮನುವಿನ ತಂದೆಯ ತಂದೆ. ಮನುವಾದರೋ ಜಗತ್ತಿನ ಎಲ್ಲಾ ಗ್ರಹಗಳಲ್ಲಿ ವಾಸಿಸುವ ಮನುಕುಲದ ತಂದೆ. ಅಂಥ ಮನುವಿಗೂ ಪಿತಾಮಹ ಬ್ರಹ್ಮ ಆದ್ದರಿಂದ ಹುಲು ಮಾನವರಾದ ನಾವೆಲ್ಲರೂ ಬ್ರಹ್ಮನ ಉಪದೇಶವನ್ನು ಚಾಚೂ ತಪ್ಪದೆ ಪಾಲಿಸಬೇಕು. ಬ್ರಹ್ಮ ಹೇಳಿರುವಂತೆ ಭಗವಂತನ ಚರಣ ಕಮಲಗಳಲ್ಲಿ ಶರಣಾಗಿ ಅವನ ಶಕ್ತಿ ಸಾಮರ್ಥ್ಯದ ಆಳ ಅಗಲಗಳನ್ನು ತಿಳಿದುಕೊಳ್ಳಲು ಯತ್ನಿಸಬೇಕು. ವೇದಗಳಲ್ಲಿ ಹೇಳಿರುವಂತೆ ಭಗವಂತನ ಶಕ್ತಿ ಅತೀತವಾದುದು.
ಪರಾಸ್ಯ ಶಕ್ತರ್ ವಿವಿಧೈವ ಶ್ರೂಯತೇ ಸ್ವಾಭಾವಿಕೀ ಜ್ಞಾನಬಲ ಕ್ರಿಯಾ ಚ’
ಶ್ವೇತಾಶ್ವತರ ಉಪನಿಷತ್ 6.8
ಆತ ಸರ್ವಶ್ರೇಷ್ಠ ಸಕಲ ಜೀವಿಗಳಲೆಲ್ಲಾ ಆತ ಉತ್ತಮ. ನಾವು ಮಾಡಬಹುದಾದ ಉತ್ತಮ ಕೆಲಸವೆಂದರೆ ಅವನಿಗೆ ಶರಣಾಗುವುದು ಎಂದು ಬ್ರಹ್ಮ ಹೇಳುತ್ತಾನೆ. ಸಮರ್ಥ ಬ್ರಹ್ಮ: ” ತನ್ನೆದುರು ನಿಂತಿರುವ ಬ್ರಹ್ಮನನ್ನು ನೋಡಿದ ಭಗವಂತ, ಸಕಲ ಜೀವಿಗಳನ್ನು ಸೃಷ್ಟಿಸಲು ಈತ ಸಮರ್ಥ ಎಂದು ತೀರ್ಮಾನಿಸುತ್ತಾನೆ. ನನ್ನಿಚ್ಛೆಯಂತೆ ಈತನನ್ನು ನಿಯಂತ್ರಿಸಬಹುದು ಎಂದು ನಿರ್ಧರಿಸುವ ಭಗವಂತ ತೃಪ್ತಿಯಿಂದ ಬ್ರಹ್ಮನ ಕೈ ಕುಲುಕುತ್ತಾನೆ. ಮುಖದಲ್ಲಿ ನಸುನಗೆ ತುಳುಕಿಸುತ್ತಾ ಆತನನ್ನು ಉದ್ದೇಶಿಸಿ ಮಾತನಾಡುತ್ತಾನೆ.’ (ಶ್ರೀಮದ್ ಭಾಗವತ 2.9.19)

ಈ ಐಹಿಕ ಜಗತ್ತಿನ ಸೃಷ್ಟಿ ಆಕಸ್ಮಿಕವಲ್ಲ. ಭಗವಂತನ ಪ್ರತಿನಿಧಿ ಬ್ರಹ್ಮನ ಮಾರ್ಗದರ್ಶನದಲ್ಲಿ ಮುಕ್ತಿ ಪಡೆಯಲು ಇಲ್ಲಿನ “ನಿತ್ಯ ಬದ್ಧ ಆತ್ಮಗಳಿಗೆ ಅವಕಾಶ ಮಾಡಲಾಗಿದೆ. ಬದ್ಧಾತ್ಮಗಳಿಗೆ ಜ್ಞಾನ ನೀಡಲೆಂದೇ ಭಗವಂತನು ಬ್ರಹ್ಮನಿಗೆ ವೇದಜ್ಞಾನ ಧಾರೆ ಎರೆದಿದ್ದಾನೆ. ಆದ್ದರಿಂದ ಬದ್ಧಾತ್ಮಗಳಿಗೆ ಬುದ್ದಿ ಹೇಳುವ ಗುರುತರ ಜವಾಬ್ದಾರಿಯನ್ನು ಭಗವಂತ ಬ್ರಹ್ಮನಿಗೆ ವಹಿಸಿದ್ದಾನೆ. ಹೀಗಾಗಿ ಬ್ರಹ್ಮ ಭಗವಂತನಿಗೆ ಅತ್ಯಂತ ಆತ್ಮೀಯನಾಗಿದ್ದಾನೆ.
ಬ್ರಹ್ಮ ಸಂಪ್ರದಾಯ : ಭಗವಂತನ ಇಚ್ಛೆಯಂತೆ ಬ್ರಹ್ಮನೂ ತನ್ನ ಕರ್ತವ್ಯವನ್ನು ಪರಿಪೂರ್ಣವಾಗಿ ನಿಭಾಯಿಸುತ್ತಾನೆ. ಜೀವಿಗಳನ್ನು ಸೃಷ್ಟಿಸುವುದರ ಜೊತೆಗೆ ತನ್ನ ವಂಶದವರ ಮೂಲಕ ಪತಿತರನ್ನು ಪಾವನಗೊಳಿಸುವ ಕ್ರಿಯೆಯನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುತ್ತಾನೆ. ಬ್ರಹ್ಮ ವಂಶವನ್ನು “ಬ್ರಹ್ಮಸಂಪ್ರದಾಯ” ಎಂದು ಕರೆಯಲಾಗುತ್ತದೆ. ತನ್ನ ವಿಭಿನ್ನಾಂಶಗಳನ್ನು ಮರಳಿ ಪಡೆಯಲು ಭಗವಂತ ಸದಾ ಉತ್ಸುಕನಾಗಿರುತ್ತಾನೆ. ಯಾರು ದಾರಿ ತಪ್ಪಿದವರನ್ನು ಸರಿದಾರಿಗೆ ತಂದು ಅವರನ್ನು ದೈವತ್ವದೆಡೆಗೆ ಮರಳಿಸುವ ಕೆಲಸ ಮಾಡುತ್ತಾರೋ ಅವರು ಭಗವಂತನ ಪ್ರೀತಿ ಸಂಪಾದಿಸುತ್ತಾರೆ. ಬ್ರಹ್ಮ ಸ೦ಪ್ರದಾಯದಡಿ ಭಗವಂತನ ಸ೦ದೇಶ ಸಾರುವವರೆಲ್ಲರೂ ಆತನ ಕೃಪೆಗೆ ಪಾತ್ರರಾಗುತ್ತಾರೆ. ಭಕ್ತ ಪಂಥದ ಬೋಧಕರನ್ನು ಭಗವಂತ ಮೆಚ್ಚಿ ತೃಪ್ತಿಯಿಂದ ಕೈಕುಲುಕುತ್ತಾನೆ.






Leave a Reply