ಸಮಾಜ ವ್ಯವಸ್ಥೆಯಲ್ಲಿ ಗೋವಿನ ಪ್ರಾಮುಖ್ಯತೆ

ಎತ್ತು ಮತ್ತು ಹಸುಗಳು ನಿಮ್ಮ ತಂದೆ- ತಾಯಿಗಳಿದ್ದಂತೆ. ಅದು ಹೇಗೆ ಅವುಗಳನ್ನು ಕೊ೦ದು ತಿನ್ನುತ್ತೀರಿ? ಇದೆಂಥ ಧಾರ್ಮಿಕ ತತ್ತ್ವ? ಯಾವ ಧೈರ್ಯದ ಮೇಲೆ ಇಂಥ ಪಾಪ ಕೃತ್ಯ ಎಸಗುತ್ತೀರಿ? ಇದು ಚೈತನ್ಯ ಮಹಾಪ್ರಭುಗಳು ಮುಸ್ಲಿಂ ಖಾಜಿಯೊಬ್ಬನನ್ನು ಕುರಿತು ಕೇಳಿದ ಪ್ರಶ್ನೆ. ಈಗ ಮತ್ತೆ ಈ ಪ್ರಶ್ನೆ ಕೇಳಬೇಕಾದ ಕಾಲ ಬಂದಿದೆ!

ನಮಗೆ ನಿತ್ಯ ಕುಡಿಯಲು ಹಸುವಿನ ಹಾಲು ಬೇಕು. ಉಳುಮೆ ಮಾಡಲು, ಗಾಡಿ ಎಳೆಯಲು ಎತ್ತುಗಳು ಬೇಕು. ನಮಗೆ ತಿನ್ನಲು ಕಾಳು ನೀಡುವವನೇ ತ೦ದೆ; ಹಾಲು ಕುಡಿಸುವವಳೇ ತಾಯಿ. ಇಂಥ ತಂದೆ-ತಾಯಿಯರನ್ನೇ ಕೊಂದು ತಿನ್ನುವುದು ಒಳ್ಳೆಯ ಧರ್ಮವಲ್ಲ ಎಂಬುದು ಚೈತನ್ಯರ ಮಾತಿನ ಸಾರಾಂಶ.

ವೇದಗಳ ಪ್ರಕಾರ ನಮಗೆ ಏಳು ಮಾತೆಯರಿದ್ದಾರೆ. ಆ ಪೈಕಿ ಗೋಮಾತೆಯೂ ಒಬ್ಬಳು. ಆದ್ದರಿಂದ ಯಾವುದೇ ನಾಗರಿಕ ಸಮಾಜ ಗೋಮಾತೆಯನ್ನು ಕೊಂದು ತಿನ್ನಬಾರದು. ಕ್ರೈಸ್ತಧರ್ಮದಲ್ಲೂ ಪ್ರಾಣಿಹತ್ಯೆ ಮಾಡಬಾರದೆಂಬ ನಿಯಮವಿದೆ. ಆದರೆ ಅವರೂ ಮುಸ್ಲಿಮರಂತೆ ಗೋಮಾಂಸ ತಿನ್ನುತ್ತಾರೆ.

ಗೋವುಗಳಿಗೆ ರಕ್ಷಣೆ ಇರದ ಸಮಾಜದಲ್ಲಿ ಶಾಂತಿ ನೆಲೆಸಿರಲು ಸಾಧ್ಯವೇ ಇಲ್ಲ. ಇಂದು ಪ್ರಪಂಚ ಅಶಾಂತಿಯ ಬೀಡಾಗಿರಲು ಹೆಚ್ಚುತ್ತಿರುವ ಗೋಹತ್ಯೆಯೂ ಒಂದು ಮುಖ್ಯ ಕಾರಣ.

ಗೋಮಾಂಸ ಮಾತ್ರವಲ್ಲ ಯಾವುದೇ ಬಗೆಯ ಮಾಂಸವನ್ನೂ ತಿನ್ನಕೂಡದು ಎಂಬುದು ವೇದದ ಆಣತಿ. ಶ್ರೀಕೃಷ್ಣನ ಪ್ರೀತಿ ಪಾತ್ರ ಗೋವುಗಳನ್ನು ಪ್ರೀತಿಯಿಂದ, ಗೌರವದಿಂದ ಸಲಹಬೇಕು ಎಂಬುದು ಇಲ್ಲಿನ ತತ್ತ್ವ.

ದೇವೋತ್ತಮ ಪರಮ ಪುರುಷ ಶ್ರೀಕೃಷ್ಣ ಸದಾಕಾಲ ತನ್ನ ಸುರಭಿ ಗೋವುಗಳ ಜತೆ ಇರುವುದನ್ನು ನಾವು ನೋಡುತ್ತೇವೆ. ಆಧ್ಯಾತ್ಮಿಕ ಜಗತ್ತಿನ ಗೋಲೋಕ ವೃಂದಾವನದಲ್ಲಿ ಸುರಭಿ ಎಂಬ ಹೆಸರಿನ ಅಸಂಖ್ಯಾತ ಗೋವುಗಳಿದ್ದವು. ಈಗ ಭೂಮಿ ಮೇಲಿರುವ ಗೋವುಗಳಿಗೆಲ್ಲಾ ಆ ಸುರಭಿಯೇ ಮೂಲ. ಮಾನವರನ್ನು ಆಧ್ಯಾತ್ಮಿಕ ಲೋಕದಲ್ಲಿರುವ ಶ್ರೀಕೃಷ್ಣನ ಪ್ರತಿರೂಪವನ್ನಾಗಿ ಸೃಷ್ಟಿಸಿರುವುದಾದರೆ ಗೋವುಗಳು ಆ ಸುರಭಿಯ ಪ್ರತಿರೂಪದಲ್ಲಿ ಸೃಷ್ಟಿಸಲಾಗಿದೆ. ಮನುಕುಲ ಗೋವುಗಳಿಗೆ ರಕ್ಷಣೆ ನೀಡಬೇಕು’ ಎಂದು ಶ್ರೀಕೃಷ್ಣ ನಮಗೆಲ್ಲಾ ಆದೇಶ ನೀಡಿದ್ದಾನೆ. (ಭಗವದ್ಗೀತೆ : 18.44).

 “ನಮೋ ಬ್ರಾಹ್ಮಣ್ಯ ದೇವಾಯ

ಗೋ ಬ್ರಾಹ್ಮಣ ಹಿತಾಯ ಚ |

ಜಗದ್‌ ಹಿತಾಯ ಕೃಷ್ಣಾಯ

ಗೋವಿಂದಾಯ ನಮೋ ನಮಃ’ ||

ಪ್ರಭುವೇ, ಗೋವುಗಳು ಮತ್ತು ಬ್ರಾಹ್ಮಣರ ಹಿತರಕ್ಷಕ ನೀನು. ಇಡೀ ಮನುಕುಲ ಮತ್ತು ಪ್ರಪ೦ಚದ ಸ೦ರಕ್ಷಕನೂ ನೀನೇ ಎಂದು ವಿಷ್ಣು ಪುರಾಣದಲ್ಲಿ (1.19.65) ಹೇಳಿದೆ.

ಗೋವು ಮತ್ತು ಬ್ರಾಹ್ಮಣರ ರಕ್ಷಣೆ ಬಗ್ಗೆ ಭಗವಂತನನ್ನು ಕುರಿತ ಪ್ರಾರ್ಥನೆಯಲ್ಲೂ ವಿಶೇಷವಾಗಿ ಉಲ್ಲೇಖಿಸಲಾಗಿದೆ.

ಗೋವಿಂದನಿಗೆ ಗೋವುಗಳ ಬಗ್ಗೆ ವಿಶೇಷ ಪ್ರೀತಿ ಇದೆ ಎಂಬುದನ್ನು ಇದು ತೋರಿಸುತ್ತದೆ. ಮಾನವನ ಏಳಿಗೆಗೆ ಬ್ರಾಹ್ಮಣ ಸಂಸ್ಕೃತಿ ಮತ್ತು ಗೋರಕ್ಷಣೆ ಅತ್ಯವಶ್ಯ ಎ೦ಬುದು ಇದರ ಒಳಾರ್ಥ. ಇಲ್ಲಿ ಬ್ರಾಹ್ಮಣರು ಆಧ್ಯಾತ್ಮಿಕ ಜ್ಞಾನದ ಸಂಕೇತವಾದರೆ, ಗೋವು ಆರ್ಥಿಕ ಶಕ್ತಿಯ ಪ್ರತೀಕ.

ಎಲ್ಲರೂ ಪರಮ ಪುರುಷನೆಡೆಗೆ ಮರುಳಲಿ ಎಂಬ ಉದ್ದೇಶದಿಂದ ಶ್ರೀಕೃಷ್ಣನು ಈ ಜಗತ್ತನ್ನು ನಿರ್ಮಿಸಿ, ಪೋಷಿಸಿ ನಾಶಮಾಡುತ್ತಾನೆ. ಈ ಮೂಲ ಉದ್ದೇಶ ಈಡೇರುವಲ್ಲಿ ಆದರ್ಶ ಮಾನವರ (ಬ್ರಾಹ್ಮಣರು) ಮತ್ತು ಗೋವುಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮಾಜವು ಈ ನಿಟ್ಟಿನಲ್ಲಿನ ಮಾರ್ಗದರ್ಶನ ನೀಡುವಲ್ಲಿ ಆದರ್ಶ ಆಧ್ಯಾತ್ಮಿಕ ವ್ಯಕ್ತಿಗಳು – ಬ್ರಾಹ್ಮಣರು ಮತ್ತು ಇಡೀ ಸಮಾಜಕ್ಕೆ ಉತ್ತಮ ಮೇಧಾಶಕ್ತಿಯನ್ನು ಬೆಳೆಸಬಲ್ಲ ಆಹಾರ – ಕ್ಷೀರೋತ್ಪನ್ನಗಳು ಅತ್ಯಾವಶ್ಯಕ. ಒಬ್ಬ ಉದ್ಯಮಿಯು ತಾನು ನಿರ್ಮಿಸಿದ ಕೈಗಾರಿಕೋದ್ಯಮದಲ್ಲಿ ಪರಿಣಾಮಕಾರಿ ಹಾಗೂ ಫಲಪ್ರದ ನಿರ್ವಹಣೆಗೆ ಉದ್ಯಮದ ಮಹತ್ವಪೂರ್ಣ ಅಂಶಗಳ ಬಗ್ಗೆ ಸೂಕ್ಷ್ಮ ಕಾಳಜಿ ವಹಿಸುತ್ತಾನೆ. ಹಾಗೆಯೇ ಬ್ರಾಹ್ಮಣ ಮತ್ತು ಗೋವುಗಳ ರಕ್ಷಣೆಗೆ ಕೃಷ್ಣನು ಒತ್ತುಕೊಟ್ಟಿದ್ದಾನೆ.

“ನೀವು ಎಷ್ಟೊಂದು ಹಾಲು ಕುಡಿಯುತ್ತೀರಿ. ಬೆಣ್ಣೆ-ಮೊಸರು ತಿನ್ನುತ್ತೀರಿ. ಬದಲಾಗಿ ಹಸುಗಳನ್ನು ಕೊಲ್ಲುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು. ತಾಯಿಯ ಎದೆ ಹಾಲು ಕುಡಿದು ಬೆಳೆದು ಅವಳನ್ನೇ ಕೊಲ್ಲುವುದೇ? ಇದು ಮಾನವೀಯತೆಯೆ? ಗೋಹತ್ಯೆ ಹೀಗೇ ಮುಂದುವರಿದರೆ ಮುಂದೊಂದು ದಿನ ಹಾಲಿನ ಪೂರೈಕೆಯೇ ನಿಂತು ಹೋಗುವುದು. ಕಲಿಯುಗದ ಕೊನೆಯಲ್ಲಿ ಕುಡಿಯಲು ಹಾಲು ಸಿಗುವುದಿಲ್ಲ ಎಂದು ಭಾಗವತದಲ್ಲಿ ಹೇಳಿದೆ” ಎಂದು ಶ್ರೀಲ ಪ್ರಭುಪಾದರೇ ಹೇಳಿದ್ದಾರೆ.

ಈಗಂತೂ ಭೂಮಿ ಮೇಲೆ ಇಡೀ ಮನುಕುಲದ ವಿರುದ್ಧ ಒಂದು ರೀತಿಯ ಯುದ್ಧ ನಡೆಯುತ್ತಿದೆ. ಅಪಘಾತ, ಪ್ರಕೃತಿ ವಿಕೋಪ, ದಂಗೆ, ದೊಂಬಿಗಳಲ್ಲಿ ನಿತ್ಯ ಸಾವಿರಾರು ಮಂದಿ ಸಾಯುತ್ತಿದ್ದಾರೆ. ಇದನ್ನು ತಡೆಯುವುದು ಸಾಧ್ಯವೇ ಇಲ್ಲ. ಇದು ಪ್ರಕೃತಿ ನಿಯಮ. ನಾವು ನಮ್ಮ ತಾಯಿಯನ್ನು ಅರ್ಥಾತ್ ಗೋಮಾತೆಯನ್ನು ನಿರ್ದಯವಾಗಿ ಕೊಲ್ಲುತ್ತಿರುವಾಗ ಶಾಂತಿ ನೆಲೆಸುವುದು ಹೇಗೆ ಸಾಧ್ಯ? ಯಾವ ದೃಷ್ಟಿಯಿಂದ ನೋಡಿದರೂ ಗೋಹತ್ಯೆ ಮಹಾ ಪಾಪ; ಹೀನ ಅಪರಾಧ. ಇಂಥ ಪಾಪಿಗಳನ್ನು ಕಾನೂನು ಕ್ಷಮಿಸಿದರೂ ಪ್ರಕೃತಿ ಕ್ಷಮಿಸುವುದಿಲ್ಲ ಎಂಬುದಕ್ಕೆ ಈಗ ನಡೆಯುತ್ತಿರುವ ಸಾಮೂಹಿಕ ನರಹತ್ಯೆಗಳೇ ಸಾಕ್ಷಿ.

ಆರ್ಥಿಕವಾಗಿ ನಾವಿಂದು ಬಹಳಷ್ಟು ಪ್ರಗತಿ ಸಾಧಿಸಿರಬಹುದು. ಆದರೆ ಮಾನವನ ಆರ್ಥಿಕ ಚಟುವಟಿಕೆಗಳ ಮೂಲ ಆಧಾರ ಭೂಮಿ ಮತ್ತು ಹಸು ಎಂಬುದನ್ನು ಮರೆಯಬಾರದು. ಮಾನವ ಸಮಾಜದ ಮೂಲಭೂತ ಅವಶ್ಯಕತೆಗಳು ಆಹಾರ, ಬಟ್ಟೆ ಮತ್ತು ಮನೆ. ಅಂದರೆ ಹೊಟ್ಟೆಗೆ ಹಣ್ಣು, ಹಾಲು, ಕಾಳು, ಬೇಳೆ, ಮೈ ಮುಚ್ಚಲು ಬಟ್ಟೆ, ತಂಗಲು ಒಂದು ಸೂರು.

ಇವೆಲ್ಲದರ ಮೂಲ ಭೂತಾಯಿ ಮತ್ತು ಗೋಮಾತೆ. ಇದನ್ನು ಬಿಟ್ಟು ಮಾಂಸ, ಮೀನು, ಕಬ್ಬಿಣ, ಯಂತ್ರಗಳೇ ನಮ್ಮ ಜೀವನಾಧಾರ ಎಂದು ತಿಳಿಯುವುದು ಮೂರ್ಖತನ. ಹಾಲು ಕುಡಿಯುವುದರಿಂದ ಸೂಕ್ಷ್ಮ ಆಧ್ಯಾತ್ಮಿಕ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಮರ್ಥವಾಗುವಂತೆ ಮಾನವನ ಮಿದುಳಿನಲ್ಲಿ ಉತ್ತಮ ಜೀವಕೋಶಗಳ ಬೆಳವಣಿಗೆಯಾಗುತ್ತದೆ. ಹಸುವಿನ ಹಾಲು ಅದರ ರಕ್ತದ ರೂಪಾ೦ತರ. ಹಾಲು ಕುಡಿಯುವುದರಿಂದ ಮಾನವನಲ್ಲಿ ಬುದ್ಧಿಶಕ್ತಿ ಧೈರ್ಯ, ಗಟ್ಟಿತನ ಹೆಚ್ಚುತ್ತದೆ.

”ಹಾಲಿನಿಂದ ನೀವು ಪೌಷ್ಠಿಕಾಂಶಭರಿತವಾದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ಮತ್ತೇಕೆ ಹಸುವನ್ನು ಕೊಲ್ಲುತ್ತೀರಿ? ಅದರ ರಕ್ತದಿ೦ದ ನಿಮಗೇನು ಪ್ರಯೋಜನ. ಹಸುವಿನ ಹಾಲು ಅದರ ರಕ್ತದ ರೂಪಾಂತರ.

ಹಾಲಿನಿಂದ ಎಷ್ಟೆಲ್ಲಾ ಪದಾರ್ಥಗಳನ್ನು ಸಿದ್ಧಪಡಿಸಬಹುದು. ತುಪ್ಪ, ಬೆಣ್ಣೆ, ಮೊಸರು, ಬರ್ಫಿ, ಚನ್ನಾ….” ಎ೦ದು ಪ್ರಭುಪಾದರು ಹೇಳಿದ್ದಾರೆ.

ಮಾನವನ ಬೆಳವಣಿಗೆಗೆ ಬೇಕಾದ ಪ್ರಾಣಿಜನ್ಯ ಕೊಬ್ಬು ಹಾಲಿನಿಂದ ಸಿಗುತ್ತದೆ. ಆರ್ಥಿಕ ಪ್ರಗತಿಗೆ ಗೋವು ಬಹುಮುಖ್ಯ ಕಾಣಿಕೆ ನೀಡಬಲ್ಲದು. ಹೀಗಾಗಿ ಗೋವು ಮತ್ತು ಮೇವಿನ ಸಂರಕ್ಷಣೆ ಅನಿವಾರ್ಯ. ಇದಕ್ಕೆ ಶ್ರೀಕೃಷ್ಣನೇ ನಮಗೆ ಮಾದರಿ.

ಗೋಪೂಜೆ ವೈದಿಕ ಸಂಸ್ಕೃತಿಯ ಅವಿಭಾಜ್ಯ ಅಂಗ. ಹಾಗೆಯೇ ದಾನಗಳಲ್ಲೆಲ್ಲಾ ಗೋದಾನ ಶ್ರೇಷ್ಠ ಎಂಬ ನಂಬಿಕೆಯೂ ಇದೆ.

“ಕಾರ್ತಿಕ ಮಾಸದ ಶುಕ್ಲಪಕ್ಷದ ಅಷ್ಟಮಿಯನ್ನು ಆಚಾರ್ಯರು ಗೋಪಾಷ್ಟಮಿ ಎನ್ನುತ್ತಾರೆ. ಅ೦ದಿನಿ೦ದ ಶ್ರೀ ವಾಸುದೇವನು ಗೋಪಾಲನೆಯನ್ನು ಪ್ರಾರ೦ಭಿಸಿದನು ಈ ಮುಂಚೆ ಅವನು ಆಕಳುಗಳನ್ನು ಪಾಲಿಸುತ್ತಿದ್ದನು.”

ಶ್ರೀಕೃಷ್ಣ- ಬಲರಾಮರು ‘ಪೌಗಂಡ’ ವಯೋಮಾನ (6 ರಿಂದ 10 ವರ್ಷ)ಕ್ಕೆ ಕಾಲಿಟ್ಟಾಗ ಸ೦ಪ್ರದಾಯದಂತೆ ವೃಂದಾವನದಲ್ಲಿ ಹಸುಗಳನ್ನು ಮೇಯಿಸುವ ಜವಾಬ್ದಾರಿ ವಹಿಸಲಾಗಿತ್ತು. ಗೋಪೂಜೆ ಸಂದರ್ಭದಲ್ಲಿ ಇದನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತದೆ. ಕೃಷ್ಣ ಆಧ್ಯಾತ್ಮಿಕವಾಗಿ ತನ್ನ ವಯಸ್ಸಿನ ಇತರರಿಗಿಂತ ಹೆಚ್ಚು ಬೆಳೆದಿದ್ದಾನೆಂದು ತಿಳಿದ ಬಳಿಕ ನಂದ ಮಹಾರಾಜ ಅವನಿಗೆ ‘ಬಡ್ತಿ’ ನೀಡಿದ.

ಒಂದು ವರ್ಷದ ನಂತರ ಇಂದ್ರನಿಗೆ ಸಲ್ಲಬೇಕಾದ ಪೂಜೆಯನ್ನು ಶ್ರೀಕೃಷ್ಣನಿಗೆ ನಿಲ್ಲಿಸಿ, ಗೋವರ್ಧನಗಿರಿಗೆ ಮತ್ತು ಗೋವುಗಳಿಗೆ ಪೂಜೆ ನೆರವೇರಿಸಿದನು. ಇದರಿಂದ ಕುಪಿತನಾಗಿ ಇ೦ದ್ರನು ಧಾರಾಕಾರವಾದ ಮಳೆ ಸುರಿಸಿದನು. ಕೃಷ್ಣ ಗೋವರ್ಧನಗಿರಿಯನ್ನೇ ಎತ್ತಿ ಇಂದ್ರನ ಗರ್ವಭಂಗವನ್ನು ಮಾಡಿದನು. ಈ ಗೋವರ್ಧನ ಗಿರಿಯ ಪೂಜೆ ಮತ್ತು ಗೋಪೂಜೆಯನ್ನು ಕಾರ್ತಿಕ ಶುಕ್ಲ ಪಕ್ಷದಲ್ಲಿ ನೆರವೇರಿಸಲಾಗುತ್ತದೆ. ಅನ್ನ ಹಾಗೂ ಇತರ ಖಾದ್ಯಗಳಿಂದ ಗೋವರ್ಧನ ಗಿರಿಯನ್ನು ನಿರ್ಮಿಸಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಗೋವುಗಳಿಗೆ ಅಂದು ಧೂಪ, ದೀಪ ಪುಷ್ಪಾದಿಗಳಿ೦ದ ಪೂಜೆಯನ್ನು ಮಾಡುವುದು ವಾಡಿಕೆ. ಗೋವುಗಳ ಹೃದಯದಲ್ಲಿ ಶ್ರೀಕೃಷ್ಣನು ನೆಲೆಸಿರುವುದರಿಂದ ಮತ್ತು ಗೋವರ್ಧನಗಿರಿಯು ವಿಸ್ತರಣೆಯಾದ್ದರಿ೦ದ ಈ ಪೂಜೆ ಮಾಡಲಾಗುತ್ತದೆ.

ಗೋವು ವೈದಿಕ ಸಂಸ್ಕೃತಿಯ ಮಾನ ಬಿಂದು. ಯುಗಾಂತರ-ಮನ್ವಂತರಗಳಿಂದ ವೈದಿಕ ಸಮಾಜದ ಶ್ರದ್ಧಾಬಿಂದು. ಸಮಸ್ತದೇವತೆಗಳ ಆವಾಸಸ್ಥಾನ. ಸಹಜವಾಗಿಯೇ ಪುರಾಣ, ಇತಿಹಾಸ, ಕಾವ್ಯ, ಜಾನಪದಗಳಲ್ಲಿ ಗೋವಿನ ಮಹಿಮೆ ವ್ಯಾಪಕವಾಗಿ ಪ್ರಸ್ಥಾಪಿಸಲ್ಪಟ್ಟಿದೆ. ಗೋಹತ್ಯೆ ಪಂಚ ಮಹಾಪಾತಕಗಳಲ್ಲೊಂದಾಗಿದೆ. ಗೋವನ್ನು ಕಾಮಧೇನುವೆ೦ದು ಅಥವಾ ಸುರಭಿ ಎಂದೇ ಗೌರವಿಸಲಾಗಿದೆ. ಕಾಮಧೇನು ದೇವಲೋಕದ ಹಸು. ಬೇಡಿದ ವರ ಕೊಡುವ ಕರುಣಾಳು. ಸಮುದ್ರ ಮಥನ ಕಾಲದಲ್ಲಿ ಕಲ್ಪವೃಕ್ಷದೊಡನೆ ಮೂಡಿ ಬಂತು. ದೇವೇಂದ್ರನ ಸ್ವಾಧೀನವಾಯಿತು.

ಇನ್ನೊಂದು ಮನ್ವಂತರದಲ್ಲಿ ಬ್ರಹ್ಮನ ಮುಖದಿಂದ ಜನಿಸಿ, ರಸಾತಲದಲ್ಲಿ ವಾಸಿಸತೊಡಗಿತು. ಸುರೂಪಾ, ಹಂಸಿಕಾ, ಸುಭದ್ರಾ, ನರ್ಯಕಾಮಿ ಧುಘಾ ಎಂಬ ನಾಲ್ವರು ಮಕ್ಕಳಿದ್ದಾರೆ. ಸುರಭಿ ಎಂದೂ ಇದನ್ನು ಕರೆಯುತ್ತಾರೆ. ಕೆಲಕಾಲ ವಸಿಷ್ಠರ ಆಶ್ರಮದಲ್ಲಿತ್ತು. ಅತಿಥಿ ಸೇವೆಗಾಗಿ, ಇದನ್ನು ವಸಿಷ್ಠರು ಉಪಯೋಗಿಸುತ್ತಿದ್ದರು. ವಸಿಷ್ಠರ ಕಾಮಧೇನುವನ್ನು ವಿಶ್ವಾಮಿತ್ರನು ತನ್ನ ಆಶ್ರಮಕ್ಕೆ ಸೆಳೆದೊಯ್ಯಲು ಯತ್ನಿಸಿ ಪರಾಜಿತನಾದ. ವಸಿಷ್ಠರ ಸೂಚನೆಯ ಮೇರೆಗೆ, ದಿಲೀಪ ಚಕ್ರವರ್ತಿಯು ತನ್ನ ಹೆಂಡತಿ ಸುರಕ್ಷಣೆಯೊಡನೆ, ಕಾಮಧೇನುವಿನ ಸೇವೆ ಮಾಡಿ, ಆಕೆಯ ಅನುಗ್ರಹದಿಂದ ‘ರಘು’ ಎಂಬ ಸಂತಾನ ಪಡೆದ. ಅಂದಿನಿಂದ ಪುತ್ರಾಪೇಕ್ಷೆ ಇರುವವರೆಲ್ಲಾ ಗೋಸೇವೆ ಮಾಡುವುದು ಸಂಪ್ರದಾಯವಾಗಿದೆ.

ಕಾಳಿದಾಸನ ರಘು ವಂಶದಲ್ಲಿ ಕಾಮಧೇನು (ಸುರಭಿ) ಕಶ್ಯಪರ ಮಗಳು ನಂದಿನಿ ಎಂಬ ಹಸುವಿನ ಪ್ರಸ್ಥಾಪವಿದೆ. ಈ ನಂದಿನಿಯು ಶಿವನ ವಾಹನವಾದ ನಂದಿಯ ಸೋದರಿ. ನಂದಿನಿಯ ಹಾಲು ಕುಡಿದವರು ಹತ್ತು ಸಾವಿರ ವರ್ಷಗಳವರೆಗೆ ಆರೋಗ್ಯದಿಂದ ಯೌವ್ವನಸ್ಥರಾಗಿಯೂ ಇರುವರೆಂಬ ಹೆಗ್ಗಳಿಕೆ ಈ ಹಸುವಿಗಿದೆ. ಆದ್ದರಿಂದಾಗಿಯೇ ‘ದ್ಯು’ ಎಂಬ ವಸು ಇದನ್ನು ಅಪಹರಿಸಿದನು. ಅವನು ವಸಿಷ್ಠರ ಕೋಪಕ್ಕೆ ಶಾಪಕ್ಕೆ ಗುರಿಯಾಗುತ್ತಾನೆ. ಇದೇ ರೀತಿ ನಂದ ಎಂಬ ಇನ್ನೊಂದು ಹಸುವಿನ ಪ್ರಸ್ಥಾಪವೂ ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ. ಇದರ ಧರ್ಮ ಬುದ್ಧಿ ಮಧ್ಯೆ ಧರ್ಮರಾಯ ಇದನ್ನು ನದಿಯಾಗಿ ಹರಿಯುವಂತೆ ಅನುಗ್ರಹಿಸುತ್ತಾನೆ.

ಪುಣ್ಯಕೋಟಿ ಎಂಬುದು ‘ಸತ್ಯ’ ವ್ರತದ ಹಸುವಿನ ಹೆಸರು. ‘ಗೋವಿನ ಹಾಡು’ ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ. ವ್ಯಾಘ್ರನಿಗೆ ಆಹಾರವಾಗಿ ಸಿಕ್ಕಾಗ, ಅನುಮತಿ ಪಡೆದು ತನ್ನ ಎಳೆಯ ಕರುವಿಗೆ ಹಾಲೂಡಿಸಿ ವಾಪಸ್ಸು ಬಂದು ಹುಲಿಯ ಬಾಯಿಗೆ ಆಹಾರವಾದ ಹಸುವಿದು! ಕನ್ನಡ ಜಾನಪದ ಸಾಹಿತ್ಯದಲ್ಲಿ ಗೋವಿನ ಹಾಡಿಗೆ ತನ್ನದೇ ಆದ ಸ್ಥಾನವಿದೆ. ಗೋವಿನ ಹಾಡಿನ ಮೂಲಕ ಪುಣ್ಯಕೋಟಿಯು ಜನ ಮನದ ಗೋವಾಗಿ, ಶತಮಾನಗಳಿಂದ ನಿಂತಿದ್ದಾಳೆ.

ಇದೇ ರೀತಿ ಬಸವ-ಎತ್ತು ಸಹ ನಮ್ಮ ಸಮಾಜ ವ್ಯವಸ್ಥೆಯ ಭಾಗವಾಗಿದೆ. ಶ್ರದ್ಧೆಯ ಕೇಂದ್ರವಾಗಿದೆ. ಭೂಮಿ ಉಳುವ ರೈತನ ಪಾಲಿಗೆ ಎತ್ತು ಬರೀ ಪ್ರಾಣಿಯಲ್ಲ ಅದು ಬಸವಣ್ಣ ದೇವರೇ ಆಗಿದೆ. ಶಿವನ ವಾಹನವಾಗಿ ನಂದಿಯನ್ನು ಗೌರವಿಸಲಾಗಿದೆ. ಭೂಮಿ ತಾಯಿಯು ತನ್ನ ಧರ್ಮ ಸಂಕಟವನ್ನು ಹೇಳಿಕೊಳ್ಳುವಾಗ, ಭೂಮಾತೆಯು ಗೋವಾಗಿ, ಧರ್ಮವು ವೃಷಭವಾಗಿ ಸಂತೈಸುವುದನ್ನು ಭಾಗವತ ದಾಖಲಿಸಿದೆ. ವೃಷಭ ಎಂದರೆ, ಪರಿಶುದ್ಧನಾದವನು ಎಂದರ್ಥ.

ಭಾರತೀಯ ಆಧುನಿಕ ಕಾದಂಬರಿ ಸಾಹಿತ್ಯ ಪಿತಾಮಹ ಪ್ರೇಮಚಂದರ “ಗೋದಾನ” ಕಾದಂಬರಿಯ ಕೇಂದ್ರ ಬಿಂದು ಗೋ ಶ್ರದ್ಧೆಯೇ ಆಗಿದೆ. ಕನ್ನಡ ಕಾದಂಬರಿ ಸಾಮ್ರಾಟ್ ಡಾ. ಎಸ್.ಎಲ್.ಬೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ – ಗೋವಧೆ, ಗೋಮಾಂಸ ಭಕ್ಷಣೆಯ ತಲ್ಲಣಗಳನ್ನು, ಗೋಶ್ರದ್ಧೆಯ ತುಡಿತಗಳನ್ನು ಪ್ರಭಾವಿಯಾಗಿ ದಾಖಲಿಸುತ್ತದೆ.

ಗೋಪಾಲಕ ಶ್ರೀಕೃಷ್ಣನ ಕರ್ಮ ಭೂಮಿಯಾದ ಭಾರತದಲ್ಲಿ ಗೋಹತ್ಯೆ ಅವ್ಯಾಹತವಾಗಿ ಸಾಗಿರುವುದು ಮನುಕುಲ ಅವನತಿಯತ್ತ ಸಾಗುತ್ತಿದೆ ಎಂಬುದರ ಸಾಕ್ಷಿ.

ದೇಶದಲ್ಲಿರುವ ಒಟ್ಟು ಜಾನುವಾರುಗಳ ಸಂಖ್ಯೆ 50 ಕೋಟಿಗೂ ಅಧಿಕ. ಜಗತ್ತಿನ ಬೇರಾವ ದೇಶದಲ್ಲೂ ಈ ಪ್ರಮಾಣದ ಗೋಸಂಪತ್ತಿಲ್ಲ.

ಇದರಲ್ಲಿ 8.5 ಕೋಟಿ ಗೋವುಗಳು, ದೇಶದ ಸುಮಾರು 160 ದ.ಲ. ಹೆಕ್ಟೇ‌ರ್‌ ಜಮೀನನ್ನು ಸುಮಾರು 4 ಕೋಟಿ ಎತ್ತುಗಳು ಉಳುಮೆ ಮಾಡುತ್ತವೆ. ಇದಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಸರಕು ಸಾಗಣೆಯ ಜವಾಬ್ದಾರಿಯನ್ನು ಹೊತ್ತಿವೆ. ಇನ್ನು ನಮ್ಮ ದೈನಂದಿನ ಜೀವನದಲ್ಲಿ ಹೈನು ಉತ್ಪನ್ನಗಳು ಎಷ್ಟೊಂದು ಅನಿವಾರ್ಯವಾಗಿಬಿಟ್ಟಿವೆ ಎಂಬುದು ಸರ್ವ ವಿಧಿತ. ಇಷ್ಟೇ ಅಲ್ಲ ಹಾಲಿನ ಉತ್ಪನ್ನಗಳನ್ನೇ ನಂಬಿಕೊಂಡಿರುವ ಲಕ್ಷಾಂತರ ಕುಟುಂಬಗಳಿವೆ. ಅದಕ್ಕೇ ಗೋವುಗಳನ್ನು ತಾಯಿ ಎನ್ನುವುದು.

ಇದೆಲ್ಲಾ ತಿಳಿದಿದ್ದರೂ ನಮ್ಮಲ್ಲಿ ಮಾಂಸ ಮತ್ತು ಚರ್ಮಕ್ಕಾಗಿ ಗೋಹತ್ಯೆ ಹೆಚ್ಚುತ್ತಲೇ ಸಾಗಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ 1980-2000ನೇ ಅವಧಿಯಲ್ಲಿ ಮಾಂಸಕ್ಕಾಗಿ ಕತ್ತರಿಸಲಾದ ಗೋವುಗಳ ಸಂಖ್ಯೆ 1.56 ಕೋಟಿಯಿಂದ 2.43 ಕೋಟಿಗೇರಿದೆ. ಗೋಮಾಂಸದ ಮಾರುಕಟ್ಟೆಯಲ್ಲಿ ಶೇ.80 ರಷ್ಟು ಹಸುವಿನ ಮಾಂಸವಾದರೆ ಉಳಿದಿದ್ದು ಎಮ್ಮೆಗಳದು.

ದೇಶದ ಕೆಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಆದರೂ ಬಹುತೇಕ ರಾಜ್ಯಗಳಲ್ಲಿ ಇದು ತೀವ್ರವಾಗಿದೆ. ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಂತೂ ಇದು ಮಿತಿ ಮೀರಿದೆ. ದೇಶದಲ್ಲಿ ಒಟ್ಟು 3600 ಖಸಾಯಿಖಾನೆಗಳಿಗೆ ಪರವಾನಗಿ ಇದೆ. ಆದರೆ ಕಾನೂನು ಬಾಹಿರವಾಗಿ 32 ಸಾವಿರ ಖಸಾಯಿ ಖಾನೆಗಳು ಅಸ್ತಿತ್ವದಲ್ಲಿವೆ. ಲಖನೌ ನಗರದಿಂದ ಬಂದಿರುವ ವರದಿ ಪ್ರಕಾರ ಅಲ್ಲಿ ನಿತ್ಯ 100 ಹಸುಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ತಿಂದು ಸಾಯುತ್ತಿವೆ. ಇದು ನಮ್ಮ ದೇಶದಲ್ಲಿ ಗೋವು ರಕ್ಷಣೆಯ ಪರಿ!

‘ಪಂಚಗವ್ಯ’ ಎಂದರೆ ಗೋವಿನ 5 ಉತ್ಪನ್ನಗಳು. ಇದರಲ್ಲಿ ಹಾಲು, ಮೊಸರು, ತುಪ್ಪ ಗೋಮೂತ್ರ, ಗೋಮೇಧಕ ಸೇರಿವೆ. ಹಸುವಿನ ಸಗಣಿ ಅರ್ಥಾತ್ ಗೋಮೇಧಕ ನಿತ್ಯ ಜೀವನಕ್ಕೆ ಹಲವಾರು ರೀತಿಯಲ್ಲಿ ಉಪಯುಕ್ತ.

ಒಣಗಿಸಿದ ಸಗಣಿ ಅಥವಾ ಗೋಮೇಧಕವನ್ನು ಉರುವಲಾಗಿ ಬಳಸಬಹುದು. ಇದರಿಂದ ದೇಶಕ್ಕೆ ವಾರ್ಷಿಕ 68.6 ದಶಲಕ್ಷಟನ್ ಕಟ್ಟಿಗೆ ಉಳಿತಾಯವಾಗುತ್ತದೆ.

ಗೋಮೇಧಕ ಮತ್ತು ಗೋಮೂತ್ರದಿಂದ ಉತ್ತಮ ಗುಣಮಟ್ಟದ ಗೊಬ್ಬರ ತಯಾರಿಸಬಹುದು. ಒಂದು ಕೆ.ಜಿ. ಗೋಮೇಧಕ, 15 ಕೆ.ಜಿ. ಮಣ್ಣು, 15 ಕೆ.ಜಿ. ಜೈವಿಕ ತ್ಯಾಜ್ಯ ಬೆರೆಸಿ 30 ಕೆ.ಜಿ. ಉತ್ಕೃಷ್ಟಗೊಬ್ಬರ ತಯಾರಿಸಬಹುದು.

ಈ ಗೊಬ್ಬರ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಇದರಿಂದ ಬೆಳೆದ ಫಸಲಿನ ಗುಣಮಟ್ಟವೂ ಉತ್ತಮವಾಗಿರುತ್ತದೆ. ಈ ಗೊಬ್ಬರ ಕೀಟನಾಶಕವಾಗಿಯೂ ಕೆಲಸ ಮಾಡುತ್ತದೆ.

ಹಳ್ಳಿಗಳಲ್ಲಿ ಗೋಮೇಧಕದಿಂದ ಮನೆಯಂಗಳ, ನೆಲ, ಗೋಡೆಗಳನ್ನು ಸಾರಿಸುವ ಪದ್ಧತಿ ಇದೆ. ಏಕೆಂದರೆ ಇದರಿಂದ ಧೂಳು, ಬ್ಯಾಕ್ಟಿರಿಯಾಗಳನ್ನು ದೂರವಿಡಬಹುದು. ಗೋಮೇಧಕ ಲೇಪಿಸಿದ ಮನೆಗಳಿಗೆ ವಿಕಿರಣ ಪ್ರಭಾವ ತಟ್ಟುವುದಿಲ್ಲ.

ಗೋಮೇಧಕದ ಬೂದಿ ಉತ್ತಮ ಕೀಟ ನಿಯಂತ್ರಕವಾಗಬಲ್ಲದು. ಅಲ್ಲದೇ ಈ ಬೂದಿಯನ್ನು ಪಾತ್ರೆಗಳನ್ನು ಬೆಳಗಲು ಬಳಸಬಹುದು.

ಗೋಮೂತ್ರದಲ್ಲಿ ಉತ್ತಮ ಔಷಧೀಯ ಗುಣಗಳಿವೆ. ಹಾಗೆಯೇ ಇದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಲ್ಲದು.

ಗೋಮೂತ್ರ, ಗೋಮೇಧಕ, ಹಾಲು, ಮೊಸರು, ತುಪ್ಪ (ಪಂಚಗವ್ಯ) ಜತೆ ಕುಶೋದಕ ಬೆರೆಸಿ ನಿತ್ಯ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

10 ಲೀಟರ್ ಗೋಮೂತ್ರದೊಂದಿಗೆ 2 ಕೆ.ಜಿ. ಬೇವಿನ ಸೊಪ್ಪು ಹಾಗೂ ಇನ್ನಿತರ ಸೊಪ್ಪುಗಳನ್ನು ಸೇರಿಸಿ ಗಿಡ-ಮರಗಳಿಗೆ ಗೊಬ್ಬರವಾಗಿ ಬಳಸಬಹುದು.

ಗೋಮೂತ್ರವನ್ನು ಹಲವಾರು ಆಯುರ್ವೇದೀಯ ಔಷಧಗಳಲ್ಲಿ ಬಳಸುತ್ತಾರೆ. ಗೋಮೂತ್ರವನ್ನು ತೆರೆದ ಪಾತ್ರೆಯಲ್ಲಿ ಕುದಿಸಿ ಕೊನೆಯಲ್ಲಿ ಉಳಿದ ಗಟ್ಟಿ ಪದಾರ್ಥದಿಂದ ತಯಾರಿಸಿದ ಗುಳಿಗೆಗಳಿಂದ ಹಲವಾರು ರೋಗಗಳನ್ನು ನಿಯಂತ್ರಿಸಬಹುದು.

ಗೋಮೂತ್ರವನ್ನು ಇದ್ದ ಹಾಗೆ ಅಥವಾ ಜೇನುತುಪ್ಪದೊಂದಿಗೆ ಚಿಟಿಕೆ ಉಪ್ಪು ಬೆರೆಸಿ ಸೇವಿಸಿದರೆ ಪಿತ್ಥ ಜನಕಾಂಗದ ಸಮಸ್ಯೆಗಳನ್ನು ನಿವಾರಿಸಬಹುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi