ಪರಾತ್ಪರನ ಪ್ರೀತಿಯ ಅಪೇಕ್ಷೆಗೆ ನಾವೆಲ್ಲರೂ ಮಣಿಯುವ ಸರಳಿ ಆದರೆ ಭವ್ಯ ವಿಧಾನ.

ಶರಣಾಗತಿ, ಅಧೀನವಾಗುವುದು, ಇಂತಹ ಪದಗಳು ಯುದ್ಧ ಮತ್ತು ಆಕ್ರಮಣದ ಚಿತ್ರಗಳ ಕಲ್ಪನೆಯನ್ನು ನೀಡಬಹುದು. ಅಲ್ಲಿ ದುರ್ಬಲರು ಬಹುಶಃ ಭವಿಷ್ಯದ ವಿಜಯ ಅಥವಾ ವಿದ್ವೇಷದ ಆಲೋಚನೆಗಳೊಂದಿಗೆ ಶಕ್ತಿವಂತರಿಗೆ ವಿಷಾದದಿಂದ ಮಣಿಯಬಹುದು. ಮನಸ್ಸಿನಲ್ಲಿ ಅಂತಹ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತ ನಾವು ಕೃಷ್ಣನಿಗೆ ಶರಣಾಗಬೇಕೆಂದು ಭಗವದ್ಗೀತೆಯಲ್ಲಿ ಓದಿದಾಗ ನಮಗೆ ಅಸಹ್ಯ ಭಾವ ಮೂಡಬಹುದು.
ನಮ್ರತೆಯಿಂದ ತಲೆಬಾಗಬಹುದು. ಭಕ್ತರು ಭಗವಂತನಿಗೆ ತಮ್ಮನ್ನು ಒಪ್ಪಿಸಿಕೊಳ್ಳಲು ಸಾಷ್ಟಾಂಗ ಮಾಡುತ್ತ ಶರಣಾಗುವುದನ್ನು ನೋಡಿದಾಗ ನಮಗೆ ಶರಣಾಗತಿ ಕುರಿತ ನಮ್ಮ ಸಂದೇಹ ಹೆಚ್ಚಾಗಬಹುದು. ಆದರೆ ಪವಿತ್ರ ಸಾಹಿತ್ಯಗಳಿಂದ ನೀರೆರೆದಾಗ, ಶರಣಾಗತಿಯನ್ನು ಕುರಿತ ನಮ್ಮ ನಿಲುವಿನ ಮೊಗ್ಗು ತೆರೆದುಕೊಂಡು ಸಾಷ್ಟಾಂಗವನ್ನು ಅರ್ಪಿಸುವ ತೃಪ್ತಿದಾಯಕ ಆಧ್ಯಾತ್ಮಿಕ ಆಚರಣೆಯ ಮೃದು, ಸುವಾಸಿತ, ಉತ್ಕೃಷ್ಟ ಮೋಹಕ ಪುಷ್ಪ ಹೊರಹೊಮ್ಮಬಹುದು.
”ಶರಣಾಗತಿ”ಗೆ ಶ್ರೀಲ ಪ್ರಭುಪಾದರು ನೀಡುವ ಒಂದು ಸಂಸ್ಕೃತ ಪದ ಎಂದರೆ ಪ್ರಪತ್ತಿ. ಅದರ ಅರ್ಥ ”ಒಬ್ಬರ ಚರಣಗಳಿಗೆ ಅಡ್ಡ ಬೀಳುವುದು.”
ನಾವೂ ಶಾಶ್ವತ ಭಾಗವಾಗಿರುವ ಪರಾತ್ಪರನಿಗೆ ನಮ್ಮನ್ನು ನಾವು ಪ್ರೀತಿಯಿಂದ ಮತ್ತು ಸ್ವ ಇಚ್ಛೆಯಿಂದ ಅರ್ಪಿಸಿಕೊಳ್ಳುವುದೇ ಅಂತಿಮ ಆಧ್ಯಾತ್ಮಿಕ ಸಾಕ್ಷಾತ್ಕಾರದ ಭಾಗವಾಗಿದೆ. ಈ ರೀತಿ ಸ್ವಯಂ ಒಪ್ಪಿಸುವುದು ಅಥವಾ ಶರಣಾಗತಿಯು ತಾಯಿಗೆ ಮಗುವು ತನ್ನನ್ನು ತಾನು ಅರ್ಪಿಸಿಕೊಂಡಂತೆ, ಉತ್ತಮವಾದ ತಾಯಿ-ಮಗು ಬಾಂಧವ್ಯದಲ್ಲಿ ಮಕ್ಕಳು ಸ್ವಾಭಾವಿಕವಾಗಿ ತಮ್ಮ ತಾಯಿಯನ್ನು ತಮ್ಮ ಅತ್ಯುತ್ತಮ ಹಿತೈಷಿ ಎಂಬ ನಂಬಿಕೆ ಉಳ್ಳವರಾಗಿರುತ್ತಾರೆ.
ಶ್ರೀಲ ಪ್ರಭುಪಾದರು ಕೃಷ್ಣ ಪುಸ್ತಕದಲ್ಲಿ ಹೇಳುವಂತೆ, (ಅಧ್ಯಾಯ 33) ಭಗವಂತನಿಗೆ ಶರಣಾಗುವುದೆಂದರೆ ಅದೇನೂ ತ್ಯಾಗವಲ್ಲ. ಅದು ಸ್ವತಂತ್ರವಾಗಿ ನೃತ್ಯ ಮಾಡುವುದಕ್ಕಿಂತ “ಕೃಷ್ಣನ ನೃತ್ಯಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುವ” ಸ್ವ ಇಚ್ಛೆಯ ನಿರ್ಧಾರ. ಇಡೀ ಜಗತ್ತು ಕೃಷ್ಣನ ಹಾಡಿನಿಂದ ತುಂಬಿದೆ.
ಯಾರ ಪ್ರತಿಯೊಂದು ಆಲೋಚನೆ, ಶಬ್ದ ಮತ್ತು ಕ್ರಿಯೆಯು ಕೃಷ್ಣನೊಂದಿಗೆ ಸಾಮರಸ್ಯ ಹೊಂದಿರುವ ಹಾಡು ಮತ್ತು ನೃತ್ಯದಂತೆ ಇರುವುದೋ ಅವರು ಅಂತಿಮವಾಗಿ ಶರಣಾಗತಿ ಮತ್ತು ಅಸೀಮಿತ ಆಧ್ಯಾತ್ಮಿಕ ಆನಂದವನ್ನು ಪಡೆಯುವರು ಎಂದೂ ಶ್ರೀಲ ಪ್ರಭುಪಾದರು ಹೇಳಿದ್ದಾರೆ.
ಲೌಕಿಕವಾಗಿಯೂ ಕೂಡ ಸೌಹಾರ್ದಯುತ ನೃತ್ಯ ಪ್ರದರ್ಶನಗಳು ನರ್ತಕರು ಮತ್ತು ಪ್ರೇಕ್ಷಕರನ್ನು ಆನಂದಪಡಿಸುತ್ತದೆ. ಪ್ರತಿಯೊಬ್ಬ ನರ್ತಕನೂ ತನ್ನ ಪ್ರತಿಭೆಯನ್ನು ತೋರುವನು. ಕೃಷ್ಣನ ಹಾಡಿಗೆ ಪ್ರತಿಕ್ರಿಯೆಯಾಗಿ ಅವನಿಗೆ ಶರಣಾಗುವುದು ಭಕ್ತಿ ಯೋಗದ ಪರಾಕಾಷ್ಠೆ. ಇದು ಪ್ರೀತಿಯ ಭಕ್ತಿಯಲ್ಲಿ ಭಗವಂತನೊಂದಿಗೆ ಸಂಪರ್ಕ.
ಪೂರ್ಣವಾಗಿ ಶರಣಾಗತಿಯನ್ನು ಪಡೆಯುವ ವಿಧಾನಗಳು ಅಥವಾ ಈಗಾಗಲೇ ಪಡೆದಿರುವ ಶರಣಾಗತಿಯನ್ನು ವ್ಯಕ್ತಪಡಿಸುವುದು ಯಾವುದೇ ಇರಲಿ, ಕೃಷ್ಣನೊಂದಿಗೆ ಸಾಮರಸ್ಯವನ್ನು ಪ್ರದರ್ಶಿಸಲು ಅನೇಕ ಮಾರ್ಗಗಳಿವೆ. ಹರಿಭಕ್ತಿ ವಿಲಾಸವು (11.676) ಶರಣಾಗತಿಯ ಆರು ವಿಭಾಗಗಳನ್ನು ಪಟ್ಟಿ ಮಾಡಿದ : ಶರಣಾಗತಿಯ ಆರು ವಿಭಾಗಗಳೆಂದರೆ, ಭಕ್ತಿಸೇವೆಗೆ ಪೂರಕವಾದವುಗಳನ್ನು ಸ್ವೀಕರಿಸುವುದು, ಪೂರಕವಲ್ಲದನ್ನು ತಿರಸ್ಕರಿಸುವುದು, ಕೃಷ್ಣನು ರಕ್ಷಣೆ ನೀಡುವನೆಂಬ ನಂಬಿಕೆ, ಭಗವಂತನು ವ್ಯಕ್ತಿಯ ಪೋಷಕ ಅಥವಾ ಮಾಲೀಕ ಎಂದು ಒಪ್ಪಿಕೊಳ್ಳುವುದು, ಸಂಪೂರ್ಣವಾಗಿ ಸ್ವಯಂ ಶರಣಾಗತಿ ಮತ್ತು ವಿನಯ, ನಮ್ರತ.” ಶರಣಾಗತಿಯನ್ನು ದೇಹ, ಮನಸ್ಸು ಮತ್ತು ಮಾತುಗಳೂ ಸೇರಿರುವಂತೆ ನಿರೂಪಿಸಬಹುದು. ಶ್ರೀಲ ಪ್ರಭುಪಾದರು ಕೃಷ್ಣ ಪುಸ್ತಕದ 14ನೆಯ ಅಧ್ಯಾಯದಲ್ಲಿ ಹೇಳುವಂತೆ, “ಅತ್ಯುತ್ತಮ ಮಾರ್ಗವೆಂದರೆ, ದೇಹ, ಮನಸ್ಸು ಮತ್ತು ಮಾತಿನೊಂದಿಗೆ ದೇವೋತ್ತಮ ಪರಮ ಪುರುಷನಿಗೆ ಶರಣಾಗುವುದು ಮತ್ತು ಸದಾ ಅವನ ಸೇವೆಯಲ್ಲಿ ತೊಡಗುವುದು. ಶರಣಾದ ಮನಸ್ಸಿನ ಚಟುವಟಿಕೆಯನ್ನು ಇನ್ನಷ್ಟು ನಿರೂಪಿಸಬಹುದು; “ಪರಿಶುದ್ಧ ಭಕ್ತಿಸೇವೆಯ ಪ್ರಾಪ್ತಿಗಾಗಿ ತಮ್ಮ (ಭೀಷ್ಮ) ಚಿಂತನೆ, ಭಾವನೆ ಮತ್ತು ಇಚ್ಛಾಶಕ್ತಿಗಳನ್ನು ಸಂಪೂರ್ಣವಾಗಿ ದೇವೋತ್ತಮ ಪರಮ ಪುರುಷ ಭಗವಾನ್ ಕೃಷ್ಣನಲ್ಲಿ ನೆಲೆ ನಿಲ್ಲಿಸಲು ಅವರು ಬಯಸಿದರು.” (ಶ್ರೀಮದ್ ಭಾಗವತ 1.9.32, ಭಾವಾರ್ಥ)

ಶರಣಾಗತಿಯ ಪ್ರದರ್ಶನ
ದಂಡವತ್ ಅಥವಾ ಸಾಷ್ಟಾಂಗವನ್ನು ಅರ್ಪಿಸುವ ದೈಹಿಕ ಕ್ರಿಯೆಯ ಮೂಲಕ ಶರಣಾಗತಿಯ ಎಲ್ಲ ಅಂಶಗಳನ್ನು ಪೋಷಿಸಬಹುದು ಮತ್ತು ಪ್ರದರ್ಶಿಸಬಹುದು : ಕೃಷ್ಣ ಅಥವಾ ಅವನ ಭಕ್ತರ ಮುಂದೆ ಅಧೋಮುಖನಾಗಿ ಅಡ್ಡ ಬೀಳುವುದು, ಪ್ರಭುಪಾದರು ವಿವರಿಸುತ್ತಾರೆ; “ದಂಡ ಎಂದರೆ ಕೋಲು ಎಂದರ್ಥ. ಕೋಲು ನೇರವಾಗಿ ಬೀಳುತ್ತದೆ. ಅದೇ ತರನಾಗಿ, ಒಬ್ಬ ವ್ಯಕ್ತಿಯು ತನ್ನ ಹಿರಿಯರಿಗೆ ಪ್ರಣಾಮಗಳನ್ನು ಅಷ್ಟಾಂಗದೊಂದಿಗೆ ಅರ್ಪಿಸಿದಾಗ ಆತನು ದಂಡವತ್ ಪ್ರಣಾನು ಮಾಡುತ್ತಾನೆ.” (ಚೈತನ್ಯ ಚರಿತಾಮೃತ ಮಧ್ಯಲೀಲ 1.67, ಭಾವಾರ್ಥ)
ಎಂಟು ದೈಹಿಕ ಭಾಗಗಳನ್ನು ಈ ರೀತಿ ವಿವರಿಸಲಾಗಿದೆ:
ದೋರ್ಭ್ಯಾಂ ಪದ್ಛ್ಯಾಂಚ ಜಾನು ಭ್ಯಾಂ
ಉರಸಾ ಶಿರಸಾ ದೃಷಾ
ಮನಸಾ ವಚಸಾ ಚೇತಿ
ಪ್ರಣಾಮೋ ಅಷ್ಟಾಂಗೈರಿತಃ
“ಉಭಯ ತೋಳು, ಕಾಲು, ಮಂಡಿ ಮತ್ತು ಎದೆ, ಶಿರ, ಕಣ್ಣುಗಳು, ಹೃದಯ ಮತ್ತು ಮಾತುಗಳಿಂದ ಬಾಗಬೇಕು. ಇದನ್ನು ದೇಹದ ಎಂಟು ಭಾಗಗಳಿಂದ ಬಾಗುವುದು ಎಂದು ಕರೆಯುತ್ತಾರೆ.” (ಹರಿಭಕ್ತಿ ವಿಲಾಸ 8.360)
ದಂಡವತ್ ಭಕ್ತಿಸೇವೆಯ ಒಂಬತ್ತು ವಿಧಾನಗಳಲ್ಲಿ ಒಂದಾದ ವಂದನ ವರ್ಗಕ್ಕೆ ಸೇರುತ್ತದೆ. ಶ್ರೀಲ ಪ್ರಭುಪಾದರು ಬರೆಯುತ್ತಾರೆ, ”ವಂದನ ಎಂದರೆ ನಮಸ್ಕಾರ, ಪ್ರಣಾಮಗಳನ್ನು ಅಥವಾ ಪ್ರಾರ್ಥನೆಯನ್ನು ಅರ್ಪಿಸುವುದು.’ (ಭಾಗವತ, 7.5.23-24, ಭಾವಾರ್ಥ)
ದೇಹದೊಂದಿಗೆ ಗೌರವವನ್ನು ಅರ್ಪಿಸುವ ಮತ್ತೊಂದು ವಿಧಾನವು ಐದು ಭಾಗಗಳನ್ನು ಒಳಗೊಂಡಿದೆ ಮಂಡಿಗಳು, ತೋಳುಗಳು, ಶಿರ, ಬುದ್ಧಿ ಮತ್ತು ಮಾತುಗಳು (ಹರಿಭಕ್ತಿ ವಿಲಾಸ 8.381). ವಂದನೆಯ ಅತ್ಯಂತ ಸರಳ ವಿಧಾನವೆಂದರೆ ಅಂಜಲಿ ಮುದ್ರೆ ಅಥವಾ ಪ್ರಣಾಮ ಮುದ್ರೆ.
ಇಲ್ಲಿ ಭಕ್ತನು ಕೈಗಳನ್ನು ಜೋಡಿಸಿ ಶಿರವನ್ನು ಸ್ವಲ್ಪ ಬಾಗಿಸುತ್ತಾನೆ. ವಂದನೆಯು ಪ್ರಾರ್ಥನೆಯನ್ನು ಸಲ್ಲಿಸುವುದನ್ನು ಸೂಚಿಸುವಾಗ, ಪ್ರಾರ್ಥನೆಗಳು ನಿರ್ದಿಷ್ಟವಾದ ಭಂಗಿಯಿಂದ ಅಥವಾ ಇಲ್ಲದೆಯೂ ಕೂಡಿರಬಹುದು. ಆದರೆ ದೇಹದ ಮೂಲಕ ಗೌರವವನ್ನು ಅರ್ಪಿಸುವಾಗ ಗಟ್ಟಿಯಾಗಿ ಪ್ರಾರ್ಥನೆ ಅಥವಾ ಮಂತ್ರವನ್ನು ಜಪಿಸಬೇಕು. (ಭಕ್ತಿ ರಸಾಮೃತ ಸಿಂಧು, ಅಧ್ಯಾಯ 8 ಭಾಗವತ 11.27.45)
ವಾಕ್ ವಂದನೆಯ ವರ್ಗಗಳು
ದೈಹಿಕ ವಂದನೆಯಂತೆಯೇ ವಾಕ್ ವಂದನೆಯಲ್ಲಿಯೂ ವರ್ಗಗಳಿವೆ. ಧ್ವನಿ ವಂದನೆಯ ಮೊದಲ ವರ್ಗವು ಈ ಕೆಳಗೆ
ಯುವತೀನಾಂ ಯಥಾ ಯುನೀ
ಯೂನಾಂ ಚ ಯುವತೌ ಯಥಾ
ಮನೋ ಅಭಿರಮತೇ ತದ್ವನ್
ಮನೋ ಮೇ ರಮತಾಂ ತ್ವಯಿ
“ಯುವತಿಯರು ಯುವಕರ ಬಗೆಗೆ ಯೋಚಿಸುತ್ತ ಆನಂದಿಸುವಂತೆ ಮತ್ತು ಯುವಕರು ಯುವತಿಯರ ಬಗೆಗೆ ಯೋಚಿಸುತ್ತ ಸಂತೋಷಪಡುವಂತೆ ನನ್ನ ಮನಸ್ಸು ನಿನ್ನಲ್ಲಿ (ಕೃಷ್ಣ) ಮಾತ್ರ ಆನಂದಪಡುವಂತೆ ಮಾಡು. (ವಿಷ್ಣು ಪುರಾಣ 1.20.19)
ಮೌಖಿಕ ಪ್ರಾರ್ಥನೆಯ ಎರಡನೆಯ ವಿಧವು ನಮ್ರತೆಯನ್ನು ಸಾರುವುದಾಗಿದೆ ;
ಮತ್ ಸಮೋ ನಾಸ್ತಿ ಪಾಪಾತ್ಮಾ
ನಾಪರಾಧಿ ಚ ಕಶ್ಚನ
ಪರಿಹಾರೇ ಆಪಿ ಲಜ್ಜಾ ಮೇ
ಕಿಂ ಬ್ರೂವೇ ಪುರುಷೋತ್ತಮ
“ಪ್ರೀತಿಯ ಪ್ರಭುವೇ, ನನಗಿಂತ ಹೆಚ್ಚು ಪಾಪಾತ್ಮರು ಯಾರೂ ಇಲ್ಲ, ನನಗಿಂತ ಹೆಚ್ಚು ಅಪರಾಧಿಗಳೂ ಯಾರೂ ಇಲ್ಲ ಎಂದು ನಾನು ನಿನಗೆ ತಿಳಿಸಲು ಇಚ್ಛಿಸುತ್ತೇನೆ. ನನ್ನ ಪಾಪದ ಕರ್ಮಗಳನ್ನು ಹೇಳಲು ನಾನು ಬಯಸಿದರೆ, ನಾನು ತತ್ಕ್ಷಣ ಲಜ್ಜಿತನಾಗುತ್ತೇನೆ. (ಪದ್ಮ ಪುರಾಣ, ಭಕ್ತಿ ರಸಾಮೃತ ಸಿಂಧುವಿನಲ್ಲಿ ಉಲ್ಲೇಖ) ಮೂರನೆಯದು ಪ್ರಜ್ಞೆಯಲ್ಲಿ ಪ್ರಗತಿಹೊಂದಿದವರ ಪ್ರಾರ್ಥನೆಯಾಗಿದೆ. ಇದರಲ್ಲಿ ಭಗವಂತನ ಅಲೌಕಿಕ ದೇಹಕ್ಕೆ ಚಾಮರ ಬೀಸುವಂತಹ ಸೇವೆಯ ವಿಶೇಷ ಕೋರಿಕೆಯು ಸೇರಿದೆ. ದೈಹಿಕ ಭಂಗಿಯೊಂದಿಗೆ ಅಥವಾ ಇಲ್ಲದಂತೆ ಸಲ್ಲಿಸುವ ಪ್ರಾರ್ಥನೆಯು ಸರಳ ಆದರೆ ಭವ್ಯವಾಗಿರಬಹುದು. ಮಹಾಮಂತ್ರದಂತೆ : ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ. ಭಗವಂತನ ಪವಿತ್ರ ನಾಮಗಳನ್ನು ಮತ್ತು ಅವನ ಆನಂದ ಶಕ್ತಿಯನ್ನು ಕರೆಯುತ್ತ, ಹರೇ ಕೃಷ್ಣ ಮಹಾಮಂತ್ರವು ಪ್ರೀತಿಯ ಸೇವೆಗೆ ಕೋರಿಕೆಯಾಗಿದೆ.

ಮೇಲೆ ತಿಳಿಸಿರುವ ಪ್ರಾರ್ಥನೆಯ ವಿಧಾನಗಳ ಜೊತೆಗೆ ಅಥವಾ ಪ್ರತಿಯಾಗಿ ಭಕ್ತರು ದೈಹಿಕವಾಗಿ ಪ್ರಾರ್ಥನೆ ಸಲ್ಲಿಸುವಾಗ ನಮ್ಮ ಆಧ್ಯಾತ್ಮಿಕ ಗುರುಗಳನ್ನು ಕೊಂಡಾಡುವರು. ದಂಡವತ್ ಸಲ್ಲಿಸುವಾಗ ಹೇಳುವ ಮತ್ತೊಂದು ಸರಳ ಪ್ರಾರ್ಥನೆ ಎಂದರೆ ಪ್ರಸೀದ ಭಗವನ್ : ”ಓ, ಪ್ರಭುವೇ, ನನ್ನ ಬಗೆಗೆ ಕರುಣೆ ತೋರು!” (ಭಾಗವತ, 11.27.45) ಅನಂತರ ಭಕ್ತನು ಪ್ರಭುವಿನ ಮುಂದೆ ಕೈ ಜೋಡಿಸಿ ನಿಂತು ಪ್ರಾರ್ಥಿಸಬೇಕು, “ಓ, ನನ್ನ ಪ್ರಭುವೇ, ನಿನಗೆ ಶರಣಾಗಿರುವ ನನ್ನನ್ನು ದಯೆಯಿಟ್ಟು ರಕ್ಷಿಸು. ಸಾವಿನ ಬಾಯೊಳಗೆ ನಿಂತಿರುವ ನಾನು ಈ ಲೌಕಿಕ ಅಸ್ತಿತ್ವದ ಸಾಗರದ ಬಗೆಗೆ ಭಯಭೀತನಾಗಿದ್ದೇನೆ.” (ಭಾಗವತ 11.27.46)
ಸಂಪೂರ್ಣ ಶರಣಾಗತಿ ಪ್ರಾರ್ಥನೆಯ ದೈಹಿಕ ಅಭಿವ್ಯಕ್ತಿಯಾದ ದಂಡವತ್ ಭಕ್ತಿ ಯೋಗಿಗೆ ಅವನ ಭಗವತ್ ಪ್ರೇಮವನ್ನು ನೆನಪಿಸುವುದಾಗಿದೆ ಮತ್ತು ಅದು ಭಕ್ತರಿಗೆ ಅತ್ಯಂತ ಸಂತೋಷನೀಡುವಂತಹುದು. ಭಕ್ತನು ದಂಡವತ್ ಅರ್ಪಿಸುವುದನ್ನು ನೋಡಿದಾಗ ಕೃಷ್ಣನ ಸಹಜವಾದ ಮೃದು ಹೃದಯವು ತೃಪ್ತಿಯಿಂದ ಕರಗುತ್ತದೆ ಮತ್ತು ಅವನು ಎಲ್ಲ ಭಯದಿಂದ ಮುಕ್ತರಾಗುವಂತೆ ಮಾಡುತ್ತಾನೆ (ಭಗವದ್ಗೀತೆ, 18.66). ದಂಡವತ್ ಸಲ್ಲಿಸುವ ಭಕ್ತರು ಶಾಂತಚಿತ್ತರಾಗಿರುತ್ತಾರೆ ಮತ್ತು ಪ್ರೀತಿಯ ಸೇವೆಯಲ್ಲಿ ತಮ್ಮನ್ನು ಅರ್ಪಿಸಿಕೊಳ್ಳಲು ಮೇಲೆದ್ದು ಸಿದ್ಧರಾಗುತ್ತಾರೆ.
ಆದುದರಿಂದ ಭಕ್ತಿ ಯೋಗದ ವಿಧಾನದ ಬಗೆಗೆ ತನ್ನ ಪತ್ನಿ ದಿತಿಗೆ ನೀಡಿದ ಬೋಧನೆಯಲ್ಲಿ ಮುನಿ ಕಶ್ಯಪ ಹೇಳುತ್ತಾರೆ, “ವ್ಯಕ್ತಿಯು… ಹರ್ಷಚಿತ್ತನಾಗಿ, ತೃಪ್ತಿಯಿಂದ ದೀರ್ಘದಂಡ ಪ್ರಣಾಮಗಳನ್ನು ಸಲ್ಲಿಸಬೇಕು. (ದಂಡವತ್).” (ಭಾಗವತ 8.16.42). ಮಹಿಳೆಯರು ಪುಂಸವನ ವಿಧಿಯನ್ನು ಹೇಗೆ ಆಚರಿಸಬೇಕು ಎಂಬುವುದನ್ನು ವಿವರಿಸುವಾಗ ಶುಕದೇವ ಗೋಸ್ವಾಮಿಯವರು ಹೇಳುತ್ತಾರೆ, ‘ಭಕ್ತಿಯಿಂದ ದೈನ್ಯವಾದ ಮನಸ್ಸಿನಿಂದ ಭಗವಂತನಿಗೆ ನಮಸ್ಕಾರ ಮಾಡಬೇಕು. ನೆಲದ ಮೇಲೆ ದಂಡವತ್ ಪ್ರಣಾಮ ಮಾಡುವಾಗ ಮೇಲೆ ಹೇಳಿದ ಮಂತ್ರವನ್ನು ಹತ್ತು ಸಲ ಜಪಿಸಬೇಕು…” (ಭಾಗವತ 6.19.10)
ಧರ್ಮ ಗ್ರಂಥಗಳ ನಿದರ್ಶನ
ದಂಡವತ್ ಅನ್ನು ಅರ್ಪಿಸುವ ಬಗೆಗೆ ಇರುವ ಅನೇಕ ಧರ್ಮ ಗ್ರಂಥಗಳ ಉದಾಹರಣೆಗಳು ನಮಗೆ ನಮ್ಮದೇ ಆಚರಣೆಗೆ ಸ್ಫೂರ್ತಿದಾಯಕವಾಗಬಹುದು. ನಾವು ಸ್ವಲ್ಪ ಗಾಬರಿಯಿಂದ ಮೊದಲ ಬಾರಿ ಆಚರಿಸುತ್ತಿರಬಹುದು ಅಥವಾ ಭಕ್ತಿ ಯೋಗದ ನಮ್ಮ ಕ್ರಮ ಬದ್ಧ ಆಚರಣೆ ಇರಬಹುದು, ಧರ್ಮ ಗ್ರಂಥಗಳು ನಮಗೆ ಸ್ಫೂರ್ತಿ ನೀಡುತ್ತವೆ. ಈಗಷ್ಟೇ ಹೇಳಿದಂತೆ ಮೊದಲ ಉದಾಹರಣೆಯು ಕಶ್ಯಪನ ಸತಿ ದಿತಿಯದು. ಶತ್ರುಗಳ ಭಯ ಮತ್ತು ಅವರ ಶಕ್ತಿಯ ಸ್ಥಾನದ ಬಗೆಗಿನ ಅಸೂಯೆಯು ಅವಳನ್ನು ಆವರಿಸಿತ್ತು. ದಂಡವತ್, ಪ್ರಾರ್ಥನೆ ಮತ್ತು ಭಗವಂತನ ಆರಾಧನೆಯ ಮೂಲಕ ದಿತಿಯು ಪರಿಶುದ್ಧಳಾದಳು ಮತ್ತು ಅವಳಿಗೆ ಶಾಂತಿ ಲಭಿಸಿತು.
ಮತ್ತೊಂದು ಪುರಾತನ ಉದಾಹರಣೆಯು ರಾಜಕುಮಾರ ಧ್ರುವನಿಗೆ ಸಂಬಂಧಿಸಿದ್ದು. ಭಗವಂತನನ್ನು ನೋಡಬೇಕೆಂಬ ಹಂಬಲದಿಂದ ಅವರು ಮಗುವಾಗಿದ್ದಾಗಲೇ ಅರಣ್ಯದಲ್ಲಿ ತಪಸ್ಸು ಕೈಗೊಳ್ಳುತ್ತಾನೆ. ಶ್ರೀ ವಿಷ್ಣುವು ಪ್ರತ್ಯಕ್ಷನಾದಾಗ, ಧ್ರುವನು ಪ್ರೀತಿಯಿಂದ ದಂಡವತ್ ಅರ್ಪಿಸಿದನು. ಮೇಲೆದ್ದಾಗ ಅವನು, ”ತನ್ನೆದುರಿನಲ್ಲಿ ನಿಂತಿದ್ದ ಭಗವಂತನನ್ನು ನೋಡಿ ಉತ್ತೇಜಿತನಾಗಿ ಅವನಿಗೆ ನಮಸ್ಕರಿಸಿ ಗೌರವ ಸಲ್ಲಿಸಿದನು. ಭಗವಂತನ ಮುಂದೆ ದಂಡದಂತೆ ಬಿದ್ದು ನಮಸ್ಕರಿಸಿ ಭಗವತ್ಪ್ರೇಮದಲ್ಲಿ ಮುಳುಗಿ ಹೋದರು. ಭಾವಪರವಶನಾದ ಧ್ರುವನು ತನ್ನ ಕಣ್ಣುಗಳಿಂದ ಆ ಭಗವಂತನ ಸೌಂದರ್ಯಾಮೃತವನ್ನು ತಾನು ಪಾನ ಮಾಡುತ್ತಿರುವಂತೆ, ಬಾಯಿಂದ ಅವರ ಪಾದಾರವಿಂದಗಳನ್ನು ಮುತ್ತಿಡುತ್ತಿರುವಂತೆ ತನ್ನ ತೋಳುಗಳಿಂದ ಪರಮ ಪುರುಷನನ್ನು ಆಲಿಂಗಿಸಿಕೊಳ್ಳುವಂತೆ ಭಗವಂತನನ್ನು ದರ್ಶಿಸಿದನು.” (ಭಾಗವತ 4.9.3), ದೇವತೆ ಅದಿತಿಗೂ ಕೂಡ ಭಗವಂತನ ಪೂಜೆ ಮಾಡಿ ಅವನನ್ನು ನೋಡಿದಾಗ ಧ್ರುವನಂತೆ ಅನುಭವವಾಯಿತು.

ದೇವೋತ್ತಮ ಪರಮ ಪುರುಷನು ಕಣ್ಣ ಮುಂದೆ ಗೋಚರನಾದಾಗ ಅದಿತಿಯು ಅದೆಷ್ಟು ದಿವ್ಯಾನಂದದಲ್ಲಿ ಮುಳುಗಿದ್ದಳೆಂದರೆ ಅವಳು ಕೂಡಲೇ ಎದ್ದು ನಿಂತಳು ಹಾಗೂ ಅವನಿಗೆ ಗೌರವಯುತ ನಮಸ್ಕಾರವನ್ನು ಸಲ್ಲಿಸಲು ದಂಡದಂತೆ ಭೂಮಿಗೆರಗಿದಳು. ದಿವ್ಯಾನಂದದಿಂದ ಕಣ್ಣಲ್ಲಿ ನೀರು ತುಂಬಿಕೊಂಡು ಪುಳಕಿತಳಾದ ಅದಿತಿಯು ಭಗವಂತನನ್ನು ಸ್ತುತಿಸಲಾಗದೆ ಕೈಜೋಡಿಸಿಕೊಂಡು ಮೌನದಿಂದ ನಿಂತುಬಿಟ್ಟಳು. ದೇವೋತ್ತಮ ಪರಮ ಪುರುಷನನ್ನು ಮುಖತಃ ನೋಡಲು ಶಕ್ಯವಾದ್ದರಿಂದ ಅವಳು ಆನಂದಾತಿರೇಕಭರಿತಳಾದಳು ಮತ್ತು ಅವಳ ದೇಹವು ಕಂಪಿಸತೊಡಗಿತು. (ಭಾಗವತ 8.17.5-6)
ಕೃಷ್ಣಾವತಾರದ ಸಮಯದಲ್ಲಿ ಅವನಿಗೆ ಭಕ್ತರು ದಂಡವತ್ ಅರ್ಪಿಸಿದ ಅನೇಕ ಉದಾಹರಣೆಗಳಿವೆ. ವಿಶ್ವದ ಮುಖ್ಯ ಶಿಲ್ಪಿ ಬ್ರಹ್ಮದೇವನು ಕೃಷ್ಣನ ವೈಭವವನ್ನು ಕಂಡಾಗ ದಂಡವತ್ ಅರ್ಪಿಸಿದನು. ಅವನ ಹೊಳೆಯುವ ಚಿನ್ನದಂತಹ ರೂಪವು ಚಿನ್ನದ ದಂಡವು ಕೆಳಗೆ ಬೀಳುತ್ತಿರುವಂತೆ ಕಂಡಿತು. ಅವನ ನಾಲ್ಕು ಶಿರಗಳ ಕಿರೀಟಗಳು ಕೃಷ್ಣನ ಚರಣ ಕಮಲವನ್ನು ಸ್ಪರ್ಶಿಸುತ್ತಿದ್ದವು. ಕೃಷ್ಣನನ್ನು ಅವನ ದ್ವಾರಕ ನಗರದಲ್ಲಿ ನೋಡಿದಾಗ ಅನೇಕ ಸ್ವರ್ಗವಾಸಿಗಳು ಪ್ರಭುವಿಗೆ ದಂಡವತ್ ಅರ್ಪಿಸಿದರು. ಯಮುನಾ ನದಿಯನ್ನು ವಿಷವಾಗಿಸಿದ ತಮ್ಮ ಪತಿಯನ್ನು ಕ್ಷಮಿಸಬೇಕೆಂದು ಕೋರುವಾಗ ಕಾಲಿಯಾನ ಪತ್ನಿಯರು ಮಾಡಿದ ಮೊದಲ ಕೆಲಸವೆಂದರೆ ಕೃಷ್ಣನಿಗೆ ದಂಡವತ್ ಸಲ್ಲಿಸಿದ್ದು.
ಸಮಕಾಲೀನ ಉದಾಹರಣೆಗಳನ್ನೂ ನೀಡಬಹುದು. ಶ್ರೇಷ್ಠ ಸಂತ ಸನಾತನ’ ಗೋಸ್ವಾಮಿಯವರು ಶ್ರೀ ಚೈತನ್ಯ ಪ್ರಭುಗಳಿಗೆ ಯಾವಾಗಲೂ ದಂಡವತ್ ಅರ್ಪಿಸುತ್ತಿದ್ದರು. ಆದರೆ ಒಮ್ಮೆ ಚರ್ಮ ವ್ಯಾಧಿಯ ಕಾರಣ ಅವರು ಪ್ರಭುಗಳಿಂದ ದೂರವೇ ಇದ್ದರು.
ಸನಾತನರ ವಿನಯಶೀಲ ಶರಣಾಗತಿಯಿಂದ ಆನಂದಿತರಾದ ಪ್ರಭುಗಳು ಅವರನ್ನು ಆಲಿಂಗಿಸಿಕೊಂಡು ಅವರು ಅತ್ಯಂತ ಸುವಾಸಿತರಾಗಿದ್ದಾರೆಂದು ಸಾರಿದರು. ಪ್ರಭುಗಳ ಆಲಿಂಗನದಿಂದ ಸನಾತನರ ವ್ಯಾಧಿ ಗುಣವಾಯಿತು. ಸನಾತನರ ಸೋದರ ರೂಪ ಗೋಸ್ವಾಮಿಯವರೂ ಕೂಡ ಪ್ರಭುವಿಗೆ ದಂಡವತ್ ಅರ್ಪಿಸುತ್ತಿದ್ದರು. ಸಂತ ಹರಿದಾಸ ಠಾಕುರರನ್ನು ಸೆಳೆಯಲು ಯತ್ನಿಸಿದ್ದ ವೇಶ್ಯಯೊಬ್ಬಳು ಅವರ ಶಿಷ್ಯಯಾದಳು. ಅವಳು ಅವರಲ್ಲಿ ಕ್ಷಮೆ ಯಾಚಿಸಿದಳು. ಕೃಷ್ಣನ ಅವತಾರವಾದರೂ ಶ್ರೀ ಚೈತನ್ಯರು ತಮ್ಮ ತಾಯಿಗೆ ದಂಡವತ್ ಅರ್ಪಿಸುವ ಮೂಲಕ ತಮ್ಮ ಗೌರವ ಸಲ್ಲಿಸಿದರು.
ದೇವಸ್ಥಾನದಲ್ಲಿನ ಪೂಜೆಯ ಒಂದು ಭಾಗವಾಗಿ ದಂಡವತ್ ಆರ್ಪಿಸುವ ಪುರಾವೆಗಳನ್ನು ಶ್ರೀರಂಗ ಮಂದಿರದ ಕಲ್ಲಿನ ಕೆತ್ತನೆಗಳಲ್ಲಿ ವ್ಯಾಪಕವಾಗಿ ನೋಡಬಹುದು. ಅನೇಕ ಸ್ಥಳಗಳಲ್ಲಿ ನೆಲದ ಕೆತ್ತನೆಯಲ್ಲಿ ಸ್ತ್ರೀ ಪುರುಷರಿಬ್ಬರೂ ದಂಡವತ್ ಸಲ್ಲಿಸುತ್ತಿರುವುದನ್ನು ಕಾಣಬಹುದಾಗಿದೆ.
ಚೈತನ್ಯ ಚರಿತಾಮೃತದಲ್ಲಿ ಹೇಳಿರುವಂತೆ ಸ್ಥಳೀಯ ಗ್ರಾಮಸ್ಥರು ಪ್ರತಿ ದಿನ ಗೋಪಾಲನ ವಿಗ್ರಹಕ್ಕೆ ದಂಡವತ್ ಸಲ್ಲಿಸುತ್ತಿದ್ದರು. ದೈಹಿಕ ಕ್ರಿಯೆ ದಂಡವತ್ ಮೂಲಕ ಶರಣಾಗತಿಯನ್ನು ತೋರಿಸಬೇಕೆಂದು ಶ್ರೀಲ ಪ್ರಭುಪಾದರೂ ತಮ್ಮ ಅನುಯಾಯಿಗಳಿಗೆ ಬೋಧಿಸಿದ್ದರು. ಇದು ಇಂದಿಗೂ ಎಂದೆಂದಿಗೂ ಅಪಾರ ತೃಪ್ತಿಯನ್ನು ತಂದುಕೊಡುತ್ತದೆ. ಅವರು ಸ್ವರ್ಗವಾಸಿಗಳಾಗಿರಬಹುದು, ಭೂಮಿಯಲ್ಲಿರುವವರಾಗಿರಬಹುದು, ಅವರು ವೃದ್ಧರೋ ಯುವಜನರೋ ಆಗಿರಬಹುದು, ಸ್ತ್ರೀಯರೋ ಪುರುಷರೋ ಶ್ರೀಮಂತರೋ ಬಡವರೋ ಆಗಿಬಹುದು ಎಲ್ಲರಿಗೂ ತೃಪ್ತಿ ನೀಡುತ್ತದೆ.
ಸ್ಕಾಂದ ಪುರಾಣವು ಹೇಳುತ್ತದೆ, “ವ್ಯಕ್ತಿಯೊಬ್ಬನು ವಿಷ್ಣುವಿನ ಮುಂದೆ ಬಾಗಿ ನಮಸ್ಕರಿಸಿದಾಗ ಅವನ ಮೈಯನ್ನಲಂಕರಿಸಿದ ಧೂಳಿನ ಕಣಗಳ ಸಂಖ್ಯೆಯನ್ನು ಸಾವಿರ ಪಟ್ಟು ಗುಣಿಸಿದಾಗ ಬರುವ ಸಂಖ್ಯೆಯ ವರ್ಷಗಳಷ್ಟು ಕಾಲ ವಿಷ್ಣು ಲೋಕದಲ್ಲಿ ಅವನನ್ನು ಕೊಂಡಾಡಲಾಗುತ್ತದೆ.” (ಹರಿಭಕ್ತಿ ವಿಲಾಸದಲ್ಲಿ ಉಲ್ಲೇಖ 8.371) ಅಂತಹ ಆಚರಣೆಯು ಈ ಫಲಿತಾಂಶವನ್ನು ನೀಡುತ್ತದೆ ಎಂದು ರೂಪ ಗೋಸ್ವಾಮಿ ಅವರು ಹೇಳುತ್ತಾರೆ: “ಒಮ್ಮೆ ಭಗವಂತನ ವಿಗ್ರಹದ ಮುಂದೆ ಬಾಗಿ ಗೌರವ ಅರ್ಪಿಸಿದವನು ಈ ಲೋಕಕ್ಕೆ ಹಿಂದಿರುಗುವುದಿಲ್ಲ. ಏಕೆಂದರೆ ಅವನು ನೇರವಾಗಿ ಕೃಷ್ಣನ ಧಾಮಕ್ಕೆ ಹೋಗುತ್ತಾನೆ.” (ಭಕ್ತ ರಸಾಮೃತ ಸಿಂಧು ಅಧ್ಯಾಯ 9) ಹರಿ ಭಕ್ತಿ ಸುಧೋದಯ ಹೇಳುತ್ತದೆ.
‘ಶ್ರೀ ವಿಷ್ಣುವಿಗೆ ದಂಡವತ್ ಪ್ರಣಾಮ ಸಲ್ಲಿಸಲು ನೆಲದ ಮೇಲೆ ಬೀಳುವ ಭಕ್ತನು ಆ ಸ್ಥಳದಲ್ಲಿಯೇ ತನ್ನ ಎಲ್ಲ ಪಾಪ ಕರ್ಮಗಳನ್ನು ಬಿಟ್ಟುಬಿಡುತ್ತಾನೆ. ಅವು ಅಲ್ಲಿಂದ ಪುನಃ ಮೇಲೇಳುವುದಿಲ್ಲ.” ಬಹುಶಃ ಈ ಹೇಳಿಕೆಯು ಅಚ್ಚರಿ ಉಂಟು ಮಾಡುತ್ತದೆ : ”ಶ್ರೀ ಕೃಷ್ಣನ ಮುಂದೆ ಬಾಗುವ ನಾಟಕವಾಡುವ ಕಪಟಿಯೊಬ್ಬನು ತನ್ನ ನೂರಾರು ಪಾಪಗಳಿಂದ ಮುಕ್ತನಾಗಿ ಶುದ್ಧಗೊಳ್ಳುತ್ತಾನೆ. ಒಂದು ಕ್ಷಣದಲ್ಲಿ ಅವರ ಪಾಪ ಕರ್ಮಗಳೆಲ್ಲ ನಾಶವಾಗುತ್ತವೆ.” (ಹರಿಭಕ್ತಿ ವಿಲಾಸ 8.370)
ಅಂತಹ ಅದ್ಭುತ ಫಲಿತಾಂಶಗಳಿಂದ ನಾವು ಸೋಜಿಗಗೊಳ್ಳಬಾರದು. ಏಕೆಂದರೆ ಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿದ್ದಾನೆ (9.34) ”ಸದಾ ನನ್ನನ್ನು ಚಿಂತಿಸುವುದರಲ್ಲಿ ಮನಸ್ಸನ್ನು ತೊಡಗಿಸು, ನನ್ನ ಭಕ್ತನಾಗು, ನನಗೆ ನಮಸ್ಕಾರ ಮಾಡು ಮತ್ತು ನನ್ನನ್ನು ಪೂಜಿಸು. ಆಗ ನನ್ನಲ್ಲಿ ಸಂಪೂರ್ಣವಾಗಿ ಮಗ್ನನಾಗಿ ನಿಶ್ಚಯವಾಗಿಯೂ ನೀನು ನನ್ನಲ್ಲಿಗೆ ಬರುವೆ.” ಬಾಹ್ಯವಾಗಿ ದಂಡವತ್ ಸಲ್ಲಿಸುವ ಕ್ರಿಯೆಯು ಸರಳ ಮತ್ತು ಧಾರ್ಮಿಕ ವಿಧಿಗಳ ಆಚರಣೆಯಂತೆಯೂ ಕಾಣಬಹುದು. ಆದರೆ ಲಕ್ಷ್ಯ ಮತ್ತು ಶ್ರದ್ಧೆಯಿಂದ ಇದನ್ನು ಆಚರಿಸಿದರೆ ಇದು ಪ್ರೀತಿಯ ಆತ್ಮ ಮತ್ತು ಅಕ್ಕರೆಯ ಭಗವಂತನನ್ನು ಪ್ರೇಮದ ಶರಣಾಗತಿಯ ಶಾಶ್ವತ ಸಮಾಗಮದಲ್ಲಿ ಕಟ್ಟಿಹಾಕುತ್ತದೆ.






Leave a Reply