ಆಸುರೀ ಮನೋಧರ್ಮ

ಸ್ಥಳ: ನವ ವೃಂದಾವನ, ವೆಸ್ಟ್‌ವರ್ಜೀನಿಯಾ, ದಿನಾಂಕ: 26ನೇ ಜೂನ್‌ 1976

ಶ್ರೀಲ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರುಗಳೊಂದಿಗೆ ನಡೆದ ಸಂವಾದದ ಮುಂದುವರಿಕೆ

– ಅನುವಾದ: ಡಾ.ಕೆ.ವೈ.ಬಾಲರಾಜ್‌

ಶ್ರೀಲ ಪ್ರಭುಪಾದ (ಶಿಷ್ಯನಿಗೆ): ಓದುತ್ತಾ ಹೋಗಿ

ಶಿಷ್ಯ: (ಭಗವದ್ಗೀತೆಯ 16.10ನ್ನು ಓದುತ್ತಿರುವುದು) : ಕಾಮಮಾಶ್ರಿತ್ಯ ದುಷ್ಪೂರಂ ದಮ್ಭಮಾನ ಮದಾನ್ವಿತಾಃ| ಮೋಹಾದ್‌ ಗೃಹೀತ್ವಾಸದ್‌ ಗ್ರಾಹಾನ್‌ ಪ್ರವರ್ತನ್ನೇs ಶುಚಿ ವ್ರತಾಃ “ತೃಪ್ತಿಯೇ ಆಗದ ಕಾಮವನ್ನು ಆಶ್ರಯಿಸಿ ಡಂಭ ಮತ್ತು ಒಣ ಪ್ರತಿಷ್ಠೆಗಳ ಉನ್ಮಾದದಲ್ಲಿ ಮೈಮರೆತು ಆಸುರೀ ಸ್ವಭಾವದವರು ಮೋಹಕ್ಕೊಳಗಾಗುತ್ತಾರೆ. ಅಶಾಶ್ವತವಾದ ವಿಷಯಗಳಿಂದ ಆಕರ್ಷಿತರಾಗಿ ಸದಾ ಅಶುಚಿ ಕರ್ಮಗಳಿಗೆ ಬದ್ಧರಾಗಿರುತ್ತಾರೆ.”

ಶ್ರೀಲ ಪ್ರಭುಪಾದರ ಭಾವಾರ್ಥ: ಆಸುರೀ ಮನೋಧರ್ಮವನ್ನು ಇಲ್ಲಿ ವರ್ಣಿಸಿದೆ. ರಾಕ್ಷಸರ ಕಾಮಕ್ಕೆ ತೃಪ್ತಿಯೇ ಇಲ್ಲ. ಐಹಿಕ ಭೋಗದಲ್ಲಿ ತೃಪ್ತಿಯೇ ಇಲ್ಲದ ತಮ್ಮ ಬಯಕೆಯನ್ನು ಬೆಳೆಸುತ್ತಾ, ಬೆಳೆಸುತ್ತಾ ಹೋಗುತ್ತಾರೆ. ಅಶಾಶ್ವತವಾದ ವಸ್ತುಗಳನ್ನು ಸ್ವೀಕರಿಸುವುದರಿಂದ ಅವರು ಸದಾ ಆತಂಕದಿಂದ ತುಂಬಿದ್ದರೂ ಮಾಯೆಯ ಕಾರಣದಿಂದ ಇಂತಹ ಕರ್ಮಗಳಲ್ಲಿ ನಿರತರಾಗಿಯೇ ಇರುತ್ತಾರೆ.

ಅವರಿಗೆ ಜ್ಞಾನವಿಲ್ಲ. ತಾವು ತಪ್ಪು ದಾರಿಯಲ್ಲಿ ಹೋಗುತ್ತಿದ್ದೇವೆ ಎಂದು ಅವರು ಹೇಳಲಾರರು. ಅಶಾಶ್ವತವಾದ ವಸ್ತುಗಳನ್ನು ಸ್ವೀಕರಿಸಿ ಆಸುರೀ ಸ್ವಭಾವದ ಈ ಜನರು ತಮ್ಮದೇ ದೇವರನ್ನು ಮತ್ತು ತಮ್ಮವೇ ಸ್ತೋತ್ರಗಳನ್ನು ಸೃಷ್ಟಿಮಾಡುತ್ತಾರೆ. ಮತ್ತು ಅವುಗಳಂತೆಯೇ ಸಂಕೀರ್ತನೆ ಮಾಡುತ್ತಾರೆ.

ಇದರ ಪರಿಣಾಮವೇನೆಂದರೆ ಅವರು ಎರಡು ವಿಷಯಗಳಿಂದ ಆಕರ್ಷಿತರಾಗುತ್ತಾರೆ – ಕಾಮ ಭೋಗ ಮತ್ತು ಐಹಿಕ ಸಂಪತ್ತಿನ ಶೇಖರಣೆ. ಅಶುಚಿವ್ರತಾಃ “ಅಶುಚಿ ವ್ರತಗಳು” ಎನ್ನುವ ಮಾತು ಈ ಸಂದರ್ಭದಲ್ಲಿ ಬಹಳ ಮಹತ್ವದ್ದು. ಇಂತಹ ಆಸುರೀ ಜನರಿಗೆ ಮದ್ಯ, ಸ್ತ್ರೀ, ಜೂಜು ಮತ್ತು ಮಾಂಸಭಕ್ಷಣೆ ಇವುಗಳದೇ ಆಕರ್ಷಣೆ.

ಇವು ಅವರ ಅಶುಚಿಯಾದ ಅಭ್ಯಾಸಗಳು. ಅಹಂಕಾರ ಮತ್ತು ಒಣಪ್ರತಿಷ್ಠೆಗಳಿಂದ ಪ್ರೇರಿತವಾಗಿ ಅವರು ವೈದಿಕ ಆದೇಶಗಳು ಒಪ್ಪದ ಕೆಲವು ಧಾರ್ಮಿಕ ತತ್ತ್ವಗಳನ್ನು ಸೃಷ್ಟಿಸುತ್ತಾರೆ. ಇಂತಹ ಆಸುರೀ ಸ್ವಭಾವದ ಜನರ ಜಗತ್ತಿನಲ್ಲಿ ಅತ್ಯಂತ ಅಸಹ್ಯವನ್ನುಂಟು ಮಾಡುವ ಜನರಾದರೂ ಕೃತಕ ರೀತಿಯಲ್ಲಿ ಜಗತ್ತು ಅವರಿಗೆ ಸುಳ್ಳು ಗೌರವವನ್ನು ಸೃಷ್ಟಿಸುತ್ತದೆ. ನರಕದ ಕಡೆಗೆ ಜಾರುತ್ತಿದ್ದರೂ ತಾವು ತುಂಬ ಮುಂದುವರಿದವರು ಎಂದು ಅವರು ಭಾವಿಸುತ್ತಾರೆ.

ಶ್ರೀಲ ಪ್ರಭುಪಾದ: ಅನೇಕ ಧಾರ್ಮಿಕ ಪದ್ಧತಿಗಳಿವೆ. ಅವುಗಳು “ನೀವು ಏನು ಬೇಕಾದರೂ ತಿನ್ನಬಹುದು ಮತ್ತು ಏನು ಬೇಕಾದರೂ ಮಾಡಬಹುದು” ಎಂದು ಹೇಳಿದರೂ ಧರ್ಮವೆಂದು ಪರಿಗಣಿಸಲಾಗುತ್ತದೆ. ಇದು ಆಸುರೀತನ. ಇದನ್ನು ಮುಂದೆ ವಿವರಿಸಲಾಗುತ್ತದೆ. ಪ್ರವೃತ್ತಿಮ್‌ ಚ ನಿವೃತ್ತಿಮ್‌ ಚ ಜನಾನ ವಿದುರಾಚುರಾಃ. “ಅಸುರರಿಗೆ ತಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಗೊತ್ತಾಗುವುದಿಲ್ಲ.”

ಏಕೆ? ಏಕೆಂದರೆ ಅವರು ಉನ್ನತವಾದ ವಿಚಾರಗಳನ್ನು ತೆಗೆದುಕೊಳ್ಳುವುದಿಲ್ಲ. ಅವರು ತಮ್ಮದೇ ವಿಚಾರಗಳನ್ನು ಸೃಷ್ಟಿಸುತ್ತಾರೆ.

ಶಿಷ್ಯ: ಶ್ರೀಲ ಪ್ರಭುಪಾದರೆ, ಕ್ಯಾಥೋಲಿಕ್‌ ಚರ್ಚ್‌ನ ಮುಂಚಿನ ಧರ್ಮ ಗುರುಗಳು ಮಾಂಸ ಭಕ್ಷಣೆ ಮಾಡದೇ ಇರುವುದನ್ನು ಸಮರ್ಥಿಸಿಕೊಂಡರು. ಅದು ಇತಿಹಾಸದಲ್ಲಿ ದಾಖಲೆ ಮಾಡಲಾಗಿದೆ. ಕಾಲಾಂತರದಲ್ಲಿ ನಾಯಕರು ಸಡಿಲಗೊಂಡರು ಮತ್ತು ಮಾಂಸಭಕ್ಷಣೆಯನ್ನು ಶುಕ್ರವಾರಗಳು ಮಾಡಬಾರದೆಂದು ನಿರ್ಬಂಧನೆ ಮಾಡಿದರು. ಈಗ ಪುನಃ ಅವರು ತಮ್ಮ ಪ್ರಮಾಣವನ್ನು ಬದಲಿಸಿದ್ದಾರೆ.

ಶಿಷ್ಯ-2: ಅವರು ಅನೇಕ ವಿಷಯಗಳನ್ನು ಬದಲಿಸಿದ್ದಾರೆ. ನಾನು ಬಾಲಕನಾಗಿದ್ದ ಕಾಲದಲ್ಲಿ ಸಲಿಂಗ ಕಾಮ ಮತ್ತು ಗರ್ಭಪಾತದ ಸಮರ್ಥನೆಯನ್ನು ಯಾರೂ ಕನಸಿನಲ್ಲಿಯೂ ಮಾಡಲಿಲ್ಲ. ಅಂತಹ ವಿಷಯಗಳನ್ನು ಸಂಪೂರ್ಣವಾಗಿ ಖಂಡಿಸಲಾಗುತ್ತಿತ್ತು. ಆದರೆ ಈಗಲೂ ಕೂಡ ಕೆಲವು ಪಾದ್ರಿಗಳು ಮತ್ತು ಸಂನ್ಯಾಸಿನಿಯರು ಬಹಿರಂಗವಾಗಿ ಈ ವಿಷಯಗಳಿಗೆ ಉತ್ತೇಜನ ಕೊಡುತ್ತಿದ್ದಾರೆ. ಹೀಗಾಗಿ ಪಾವಿತ್ರ್ಯ ಮತ್ತು ಆಧ್ಯಾತ್ಮಿಕತೆಯ ಬಲವನ್ನು ಬಹಳಷ್ಟು ಚರ್ಚುಗಳು ಕಳೆದುಕೊಂಡಿವೆ.

‍‍ಶ್ರೀಲ ಪ್ರಭುಪಾದ: ಅದಕ್ಕೋಸ್ಕರವೇ ಅವರು ಚರ್ಚುಗಳನ್ನು ಮಾರುತ್ತಿದ್ದಾರೆ. ಅನೇಕ ಜನರು ಅದರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ ಲಂಡನ್‌ನಲ್ಲಿ ಅನೇಕ ಚರ್ಚುಗಳು ಆಸಕ್ತಿಯ ಕೊರತೆಯಿಂದಾಗಿ ಮುಚ್ಚಲ್ಪಟ್ಟಿವೆ.

ಶಿಷ್ಯ: ಗರ್ಭಪಾತ ಮತ್ತು ಗರ್ಭನಿಯಂತ್ರಣದ ವಿರುದ್ಧ ಪೋಪ್‌ ಧರ್ಮಗುರುಗಳು ಗಟ್ಟಿ ನಿಲುವು ತಾಳಿದ್ದರಿಂದ ಕಾಲುಭಾಗದಷ್ಟು ಕ್ಯಾಥೋಲಿಕ್‌ನ್ನು ಅನುಸರಿಸುವವರು ತಮ್ಮ ಅಭ್ಯಾಸವನ್ನು ಕಡಿತಗೊಳಿಸಿದ್ದಾರೆ ಅಥವಾ ಚರ್ಚನ್ನೇ ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದಾರೆ.

ಶ್ರೀಲ ಪ್ರಭುಪಾದ: ಅವರೆಲ್ಲರೂ ಎಲ್ಲಿ ಹೋಗಿದ್ದಾರೆ? (ನಗುತ್ತಾ)

ಶಿಷ್ಯ: ಅವರು ಚರ್ಚ್‌ಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.

ಶಿಷ್ಯ-2: ಅವರ ಜೀವನವು ಭರವಸೆ ಇಲ್ಲದ್ದಾಗಿದೆ.

ಶ್ರೀಲ ಪ್ರಭುಪಾದ: ಇಲ್ಲ. ಏಕೆ ಭರವಸೆಯಿಲ್ಲದ್ದು ಎಂದು ಹೇಳುತ್ತಿರುವಿರಿ? ನಿ‍‍ಶ್ಚಿತವಾಗಿಯೂ ಭರವಸೆ ಇದೆ. ಅದುವೇ ಕೃಷ್ಣಪ್ರಜ್ಞೆ.

ಶಿಷ್ಯ: ಶ್ರೀಲ ಪ್ರಭುಪಾದರೆ, ಈ ಶ್ಲೋಕವು ಇಂದಿನ ಪರಿಸ್ಥಿತಿಗೆ ಸರಿಯಾಗಿಯೇ ಇದೆ.

ಅಶುಚಿವ್ರತರು – ಯಾರು ಅಶುಚಿಯಾದ, ಲೌಕಿಕ ಪ್ರಮಾಣವನ್ನು ಮಾಡುತ್ತಿರುತ್ತಾರೋ ಅವರಿಗೆ ಅತೀವ ಗೌರವ ಸಿಗುತ್ತದೆ. ನೈಜ ಭಗವಂತನ ಭಕ್ತರಿಗೆ ಗೌರವ ಸಿಕ್ಕರೂ ಅದು ಸ್ವಲ್ಪವೇ ಸಿಗುತ್ತದೆ.

ಶ್ರೀಲ ಪ್ರಭುಪಾದ: ಈ ಲೌಕಿಕವಾದಿಗಳು ಭಕ್ತರನ್ನು ಶಿಲುಬೆಗೆ ಏರಿಸದೇ ಇರುವುದೇ ಒಂದು ಅತ್ಯಂತ ಅದೃಷ್ಟವಾಗಿದೆ. ಗೌರವ ಕೊಡುವುದರ ಕೊರತೆ ಒಂದು ವಿಷಯವಾದರೆ, ಇವರುಗಳು ಅತ್ಯಂತ ಗೌರವಪೂರ್ಣರಾದ ಯೇಸುಕ್ರಿಸ್ತನನ್ನೇ ಶಿಲುಬೆಗೆ ಏರಿಸಿದ್ದಾರೆ. ಅವನ ಅಪರಾಧವಾದರೂ ಏನು? ಅವನು ದೈವ ಪ್ರಜ್ಞೆಯನ್ನು ಬೋಧಿಸುತ್ತಿದ್ದರಿಂದ ಅವನನ್ನು ಶಿಲುಬೆಗೆ ಏರಿಸಲಾಯಿತು. ಆತ ಭಗವಂತನ ಬಗ್ಗೆ ಮಾತನಾಡುತ್ತಿದ್ದನು. ಆದ್ದರಿಂದ ಸರ್ಕಾರದ ಒಪ್ಪಿಗೆ ಮೇರೆಗೆ ಅವನನ್ನು ಶಿಲುಬೆಗೆ ಏರಿಸಲಾಯಿತು.

‍ಶ್ರೀಮದ್‌ ಭಾಗವತವು ಹೇಳುತ್ತದೆ. ದಸ್ಯು ಧರ್ಮಭಿಃ, ಈ ಯುಗ ಪ್ರಗತಿ ಹೊಂದಿದಂತೆ ಸರ್ಕಾರದಲ್ಲಿ ದಗಾಕೋರರು ಮತ್ತು ಕಳ್ಳರೇ ತುಂಬಿಕೊಳ್ಳುತ್ತಾರೆ. ಹೇಗೆ ದರೋಡೆಕೋರರು ಮತ್ತು ಕಳ್ಳರು ನಿಮ್ಮ ಸಂಪತ್ತನ್ನು ಬಲವಂತವಾಗಿ ಕಸಿದುಕೊಳ್ಳುತ್ತಾರೆಯೋ ಅದೇ ರೀತಿಯಾಗಿ ಸರ್ಕಾರವು ಅತೀವವಾದ ಕಂದಾಯದ ಮೂಲಕ ನಿಮ್ಮ ಸಂಪತ್ತನ್ನು ಕಸಿದುಕೊಳ್ಳುತ್ತದೆ. ಈಗಾಗಲೇ ಅನೇಕ ಮುಗ್ಧ ಜನರು ಪೀಡಿಸಲ್ಪಟ್ಟಿದ್ದಾರೆ.

ಶಿಷ್ಯ: ಶ್ರೀಲ ಪ್ರಭುಪಾದರೆ, ನೈಸರ್ಗಿಕವಾಗಿ ನಾವು ಬದುಕಲು ಆಸೆ ಪಡುತ್ತಿದ್ದರೆ, ಏಕೆ ಜನರು ತಮ್ಮವರನ್ನು ಮತ್ತು ಬೇರೆಯವರನ್ನು ನಾಶಪಡಿಸುವಂತಹ ಘೋರಕೃತ್ಯಗಳಲ್ಲಿ ತೊಡಗುತ್ತಾರೆ?

ಶ್ರೀಲ ಪ್ರಭುಪಾದ: ಬೇರೆಯವರ ಅಸ್ತಿತ್ವವನ್ನು ಕಿತ್ತು ಕೊಳ್ಳುವುದರಿಂದ ತಮ್ಮ ಅಸ್ತಿತ್ವ ಉಳಿಯುತ್ತದೆ ಎಂದು ಅವರು ತಿಳಿಯುತ್ತಾರೆ. ಈ ಲೌಕಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕು. ಆದರೆ ಅವರಿಗೆ ಹೇಗೆ ಅಸ್ತಿತ್ವದಲ್ಲಿರುವುದು ಎಂಬುದೇ ಗೊತ್ತಿಲ್ಲ. ಅದುವೇ ಅವರ ಮೂಢತನ.

ಪ್ರತಿಯೊಬ್ಬರೂ ಅಸ್ತಿತ್ವದಲ್ಲಿರಬೇಕೆಂದು ಬಯಸುತ್ತಾರೆ. ಅವರು ತಮ್ಮ ನಾಶವನ್ನು ಬಯಸುವುದಿಲ್ಲ. ಅದುವೇ ಅವರ ಸ್ವಾಭಾವಿಕ ಒಲವು. ಆದರೆ ಅವರಿಗೆ ಶಾಶ್ವತವಾಗಿ ಹೇಗೆ ಅಸ್ತಿತ್ವದಲ್ಲಿರಬಹುದೆಂದು ಗೊತ್ತಿರುವುದಿಲ್ಲ. ಅದಕ್ಕೆ ನಾವು ಒಂದು ಸೂತ್ರವನ್ನು ಕೊಡುತ್ತಿದ್ದೇವೆ. ನೀವು ಶಾಶ್ವತವಾಗಿ ಅಸ್ತಿತ್ವದಲ್ಲಿರಬೇಕಾದರೆ ಕೃಷ್ಣ ಪ್ರಜ್ಞೆಗೆ ಬನ್ನಿ. ನಾವು ಸರಿಯಾದ ಮಾಹಿತಿಯನ್ನು ಕೊಡುತ್ತಿದ್ದೇವೆ. ಆದರೆ ಜನರು ತಪ್ಪು ಮಾರ್ಗದಿಂದ ಶಾಶ್ವತವಾಗಿರಲು ಬಯಸುತ್ತಿದ್ದಾರೆ. ಅದು ಸಾಧ್ಯವಿಲ್ಲ.

ಶಿಷ್ಯ: ‍ಶ್ರೀಲ ಪ್ರಭುಪಾದರೆ, ಏಕೆ ಆಸುರೀ ಸ್ವಭಾವದ ವ್ಯಕ್ತಿ ಬೇರೆಯವರ ಅಸ್ತಿತ್ವವನ್ನು ಕಿತ್ತುಕೊಳ್ಳುವುದರಿಂದ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಬಯಸುತ್ತಾನೆ?

‍ಶ್ರೀಲ ಪ್ರಭುಪಾದ: ಅದು ಆಸುರೀ ಮನೋಧರ್ಮ. ಬೇರೆಯವರು ಅಸಂತುಷ್ಟರಾದಾಗ ಇವರು ಸಂತೋಷದಿಂದ ಇರುತ್ತಾರೆ. ಮತ್ತು ಬೇರೆಯವರು ಸಂತೋಷದಿಂದ ಇದ್ದಾಗ ಇವರು ಅಸಂತುಷ್ಟರಾಗಿರುತ್ತಾರೆ.

ಆದರೆ ಭಗವಂತನ ಭಕ್ತ, “ಪರ ದುಃಖ ದುಃಖೀ” ಅವನು ಬೇರೆಯವರ ಸಂತೋಷವನ್ನು ಕಂಡು ತಾನು ಸಂತೋಷಗೊಳ್ಳುತ್ತಾನೆ ಮತ್ತು ಬೇರೆಯವರ ದುಃಖ ಕಂಡು ದುಃಖಿಯಾಗುತ್ತಾನೆ. ಅದುವೇ ಕೃಷ್ಣಪ್ರಜ್ಞೆ. ಅದು ಸ್ವಾಭಾವಿಕವಾದದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi