ಗೌರಾವಿರ್ಭಾವ ಭೂಮೇಸ್ತ್ವಮ್, ನಿರ್ದೇಷ್ಟ ಸಜ್ಜನ ಪ್ರಿಯಃ |
ವೈಷ್ಣವ ಸಾರ್ವಭೌಮಃ ಶ್ರೀ ಜಗನ್ನಾಥಾಯ ತೇ ನಮಃ ||

ಶ್ರೀ ಚೈತನ್ಯ ಮಹಾಪ್ರಭುಗಳು ಆವಿರ್ಭವಿಸಿದ ಸ್ಥಳವನ್ನು ಕಂಡುಹಿಡಿದ, ಸಕಲ ವೈಷ್ಣವ ಬಂಧುಗಳಿಂದ ಅತೀವ ಗೌರವಕ್ಕೆ ಪಾತ್ರರಾಗಿರುವ ವೈಷ್ಣವ ಸಾರ್ವಭೌಮ ಶ್ರೀ ಜಗನ್ನಾಥ ದಾಸ ಬಾಬಾಜಿಯವರಿಗೆ ನಮಸ್ಕಾರಗಳು.
ಗೌಡೀಯ ವೈಷ್ಣವ ಪರಂಪರೆಯಲ್ಲಿ ಶ್ರೀ ಜಗನ್ನಾಥ ದಾಸ ಬಾಬಾಜಿ ಪ್ರಮುಖರಾಗಿ ಪರಿಗಣಿಸಲ್ಪಡುತ್ತಾರೆ. ಅವರು ತಮ್ಮ ನೂರನಲವತ್ತ ನಾಲ್ಕು ವರ್ಷಗಳಷ್ಟು ದೀರ್ಘಾಯಸ್ಸನ್ನು ಕೃಷ್ಣ ಭಕ್ತಿಯಲ್ಲೇ ಕಳೆದರು. ಸದಾ ನಾಮಜಪ, ಸಂಕೀರ್ತನೆಗಳು ಅವರಿಗೆ ಉಸಿರಾಟದಷ್ಟೆ ಸಹಜವಾಗಿದ್ದವು.
ಶ್ರೀ ಜಗನ್ನಾಥ ದಾಸ ಬಾಬಾಜಿಯವರು ಶ್ರೀ ಬಲದೇವ ವಿದ್ಯಾಭೂಷಣರ ಶಿಷ್ಯರ ಶಿಷ್ಯರಾಗಿದ್ದ ಶ್ರೀ ಮಧುಸೂದನದಾಸ ಬಾಬಾಜಿಯವರ ಶಿಷ್ಯರು. ಶ್ರೀ ಜಗನ್ನಾಥ ಬಾಬಾಜಿಯವರು ನವದ್ವೀಪಧಾಮದಲ್ಲಿ ಆರು ತಿಂಗಳು, ವ್ರಜಮಂಡಲದಲ್ಲಿ ವಾಸಿಸುವ ಪರಿಪಾಠವಿಟ್ಟುಕೊಂಡಿದ್ದರು.
ಗೌರ, ವ್ರಜಮಂಡಲದಲ್ಲಿ ಮತ್ತು ಪುರುಷೋತ್ತಮ ಕ್ಷೇತ್ರದಲ್ಲಿ (ಪುರಿ) ಅವರು “ಮಹೋನ್ನತ ರಸಿಕ” ರೆಂದು ಮಾನ್ಯತೆ ಪಡೆದಿದ್ದರು. ಬಾಬಾಜಿಯವರ ಶಿಷ್ಯರಾಗಿದ್ದ ಶ್ರೀ ಭಕ್ತಿವಿನೋದ ಠಾಕುರರು ಅವರನ್ನು “ವೈಷ್ಣವ ಸಾರ್ವಭೌಮ” ಎಂದು ಕರೆದು ಗೌರವಿಸಿದ್ದಾರೆ.
ತಮ್ಮ ನೂರ ಇಪ್ಪತ್ತೈದು ವರ್ಷದ ವಯಸ್ಸಿನಲ್ಲಿ ಜಗನ್ನಾಥ ಬಾಬಾಜಿಯವರ ದೇಹ ಅರ್ಧ ವೃತ್ತಾಕಾರ ತಳೆದಿತ್ತು. ಆದರೂ ಕೂಡ ಅವರು ಒಮ್ಮೆಯೂ ತಮ್ಮ ನಿತ್ಯದ ಭಕ್ತಿಸೇವೆಯನ್ನು ತಪ್ಪಿಸುತ್ತಿರಲಿಲ್ಲ. ಆರಂಭದಿಂದಲೂ ಕಠಿಣ ವ್ರತಿಯಾಗಿದ್ದ ಬಾಬಾಜಿ, ಚಾತುರ್ಮಾಸ್ಯ ಅವಧಿಯಲ್ಲಿ ಅತ್ಯಂತ ನಿಯಮಿತ ಆಹಾರ ಸೇವಿಸುತ್ತಿದ್ದರು.
ಉಳಿದಂತೆ, ಭಗವಂತನಿಗೆ ಪ್ರತಿದಿನ ಸಾವಿರದ ನೂರಾ ಎಂಟು ದಂಡವತ್ ಪ್ರಣಾಮಗಳನ್ನು ಅರ್ಪಿಸುತ್ತಿದ್ದರು. ವೈಷ್ಣವರ ಸೇವೆ ಮಾಡುವುದೆಂದರೆ ಅವರಿಗೆ ಎಲ್ಲಿಲ್ಲದ ಸಂಭ್ರಮ! ದೇಹದ ಸೀಮಿತತೆಯನ್ನೂ ಮೀರಿದ ಬಾಬಾಜಿ ಬಹುತೇಕ ದಿನದ 24 ಗಂಟೆಯೂ ನಾಮಾವೃತ ಪಾನದಲ್ಲಿ ತಲ್ಲೀನರಾಗಿರುತ್ತಿದ್ದರು.

ಒಮ್ಮೆ ಜಗನ್ನಾಥ ಬಾಬಾಜಿ ವೃಂದಾವನದಲ್ಲಿ ದಾರಿ ಗುಡಿಸುವಾತನೊಬ್ಬನಿಂದ ರೊಟ್ಟಿಯನ್ನು ಬೇಡಿದರು. ಈ ಸುದ್ದಿ ಕೇಳುತ್ತಿದ್ದಂತೆಯೇ ಅಲ್ಲಿನ ಪ್ರಮುಖರು ಅವರತ್ತ ಧಾವಿಸಿ, “ಬಾಬಾ, ನೀವು ವ್ರಜಭೂಮಿಯ ಮುಕುಟಮಣಿಯಾಗಿರುವಿರಿ.
ಯಾರಾದರೂ ನಿಮ್ಮನ್ನು ನಿಂದಿಸಿದರೆ ನಮಗೆ ನೋವಾಗುತ್ತದೆ. ಆದರೀಗ ಪ್ರತಿಯೊಬ್ಬರು ನಿಮ್ಮ ವಿರುದ್ಧವಾಗಿದ್ದಾರೆ. “ಬಾಬಾಜಿ ಹುಚ್ಚರಾಗಿದ್ದಾರೆ, ಅವರೇ ಸಂಪ್ರದಾಯದ ಕಟ್ಟಳೆಗಳನ್ನು ಮುರಿದರೆ ಸಮಾಜದ ಗತಿಯೇನು?” ಎಂದು ಪ್ರಶ್ನಿಸುತ್ತಿದ್ದಾರೆ” ಎಂದು ಹೇಳಿದರು.
ಅದಕ್ಕೆ ಬಾಬಾಜಿ ನಸು ನಕ್ಕು ಹೀಗೆ ನುಡಿದರು; “ನೀವೆಲ್ಲರು ತಿಳಿದವರಾಗಿದ್ದೀರಿ. ವೃಂದಾವನದ ಧೂಳು ಎಷ್ಟು ಮಹತ್ತ್ವದ್ದೆಂದು ನಿಮಗೆ ಗೊತ್ತಿಲ್ಲವೇನು? ಕೃಷ್ಣ ಪ್ರೇಮದಿಂದ ಸಂಪನ್ನವಾಗಿರುವ ಇದನ್ನು ಕಂಡ ಬ್ರಹ್ಮನೂ ತಾನು ವ್ರಜ ರಜ (ವೃಂದಾವನದ ಧೂಳು) ವಾಗಲು ಬಯಸುತ್ತಾನೆ.
ಇನ್ನು, ಸದಾ ಈ ಧೂಳಿನಲ್ಲೇ ಇರುತ್ತ, ಅದನ್ನೇ ಉಸಿರಾಡುತ್ತ, ಅದರಲ್ಲಿ ಹೊರಳುತ್ತ, ಹೆಚ್ಚು ಕಡಿಮೆ ಮಣ್ಣಿನ ಸ್ನಾನವನ್ನೇ ಮಾಡುತ್ತಿರುವ ತೋಟಿಗನ ಪಾವಿತ್ರ್ಯದ ಬಗ್ಗೆ ಹೇಳಲು ಬೇರೇನಿದೆ?”
ಬಾಬಾಜಿಯವರ ಪ್ರಶ್ನೆಗೆ ಅಲ್ಲಿ ನೆರೆದಿದ್ದವರೆಲ್ಲ ನಿರುತ್ತರರಾದರು. ಈ ಘಟನೆ ಬಾಬಾಜಿಯವರ ಕೃಷ್ಣಪ್ರೇಮ-ಕೃಷ್ಣಪ್ರಜ್ಞೆಯ ಔನ್ನತ್ಯವನ್ನು ಸೂಚಿಸುತ್ತದೆ. ಗೌಡೀಯ ವೈಷ್ಣವ ಆಚಾರ್ಯ ಪರಂಪರೆಯ ಶ್ರೀಲ ಭಕ್ತಿವಿನೋದ ಠಾಕುರರು ಶ್ರೀ ಜಗನ್ನಾಥದಾಸ ಬಾಬಾಜಿಯ ಪ್ರಮುಖ ಪ್ರಭಾವೀ ಶಿಷ್ಯರು.






Leave a Reply