ದ್ವಿವಿದ ವಾನರನ ಸಂಹಾರ
-ಡಾ| ಬಿ.ಆರ್. ಸುಹಾಸ್
ಅದೊಂದು ಸುಂದರ ದಿನ. ದಿನಕರನು ತನ್ನ ಹಿತಕರವಾದ ಎಳೆಯ ಕಿರಣಗಳನ್ನು ಬೀರಿ ಕಮಲ ಪುಷ್ಪಗಳನ್ನು ಮೆಲ್ಲನೆ ಅರಳಿಸಿದ್ದ. ಇನಿದನಿಯ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಾ ಸಂತಸದ ಹಾಡನ್ನು ಹಾಡುತ್ತಿದ್ದವು. ಸಿಹಿಯಾದ ಮಕರಂದವನ್ನು ಹೂಗಳ ಮಧ್ಯದಿಂದ ಹೀರುತ್ತಾ ಭ್ರಮರಗಳು ಝೇಂಕರಿಸುತ್ತಿದ್ದವು.

ಝುಳು ಝುಳು ಹರಿಯುತ್ತಿದ್ದ ನದಿ ಸರೋವರಗಳು, ವಿಕಸಿತ ಪುಷ್ಪಗಳೆಂಬ ಆಭರಣಗಳಿಂದ ಮೆರೆಯುತ್ತಿದ ಮರಗಿಡಗಳು, ಹಸಿರು ಐಸಿರಿಯಿಂದ ಕೂಡಿದ್ದ ಗಿರಿಶಿಖರಗಳು, ರಮ್ಯ ಮನೋಹರವಾಗಿದ್ದವು. ಪ್ರಕೃತಿಯು ತನ್ನನ್ನು ನವವಧುವಿನಂತೆ ಸಿಂಗರಿಸಿಕೊಂಡು, ತನ್ನ ಪ್ರಭುವಾದ ಭಗವಂತನನ್ನು ಸೇವಿಸಲು ಕಾತುರಗೊಂಡಿರುವಂತೆ ಕಾಣುತ್ತಿತ್ತು!
ಆ ದಿನ, ಬಲರಾಮನು, ಯಾದವ ಸ್ತ್ರೀಯರೊಂದಿಗೆ ವಿಹಾರಕ್ಕಾಗಿ ರೈವತಕ ಪರ್ವತಕ್ಕೆ ಹೋದನು. ಹಾಸ್ಯಮಯವಾಗಿ ಮಾತನಾಡುತ್ತಾ ಅವರು ಸಂತೋಷದಿಂದ ಕಾಲ ಕಳೆದರು. ಯಾದವ ಸ್ತ್ರೀಯರು ಮಧುರವಾಗಿ ಹಾಡುತ್ತಾ ನರ್ತನ ಮಾಡಿದರು. ವಿವಿಧ ಭಕ್ಷ್ಯ ಭೋಜ್ಯಗಳನ್ನು ಸೇವಿಸಿ, ಅವರು ದಿವ್ಯ ವಾರುಣೀ ಮಧುವನ್ನು ಕುಡಿದರು. ನೀಲಾಂಬರದಿಂದಲೂ ಕಮಲ ಪುಷ್ಪಗಳ ಮಾಲೆಯಿಂದಲೂ ರತ್ನಾಭರಣಗಳಿಂದಲೂ ಅಲಂಕೃತನಾಗಿದ್ದ ಗೌರವರ್ಣದ ಬಲದೇವನು ಮನ್ಮಥನಿಗೂ ಮನ್ಮಥನಂತೆ ಶೋಭಿಸಿದನು.
ಮಧುಪಾನದಿಂದ ಮತ್ತನಾಗಿದ್ದ ಅವನು ಕಮಲದಳಗಳಂತೆ ವಿಶಾಲವಾಗಿದ್ದ ತನ್ನ ಕಂಗಳನ್ನು ಮತ್ತೆ ಮತ್ತೆ ತಿರುಗಿಸುತ್ತಿದ್ದನು. ಅನೇಕ ಹೆಣ್ಣಾನೆಗಳ ಮಧ್ಯೆ ಮೆರೆಯುವ ಗಜರಾಜನಂತೆ ಕಂಗೊಳಿಸುತ್ತಿದ್ದನು. ಅನೇಕ ಹೆಣ್ಣಾನೆಗಳ ಮಧ್ಯೆ ಮೆರೆಯುವ ಗಜರಾಜನಂತೆ ಕಂಗೊಳಿಸುತ್ತಿದ್ದ ಬಲರಾಮನ ಸೌಂದರ್ಯಕ್ಕೆ ಪಕೃತಿಯೇ ನಾಚುವಂತ್ತಿತ್ತು!
ಆಗ ಇದ್ದಕ್ಕಿದಂತೆ ಅವರ ಮುಂದೆ ಕಲ್ಲುಗಳು ಬಂದು ಬಿದ್ದವು! ಅವು ಎಲ್ಲಿಂದ ಬಂದು ಬಿದ್ದವೆಂದು ಎಲ್ಲರೂ ಕಣ್ಣರಳಿಸಿ ನೋಡುತ್ತಿದ್ದಾಗ, ಕಿಲ ಕಿಲ ಎಂದು ವಿಕಾರವಾಗಿ ನಗುತ್ತಾ ಒಬ್ಬ ದೈತ್ಯ ವಾನರನು ಪತ್ಯಕ್ಷನಾದನು! ಅಸಹ್ಯಕರ ಮುಖಭಾವಗಳನ್ನು ಪ್ರದರ್ಶಿಸುತ್ತಾ ಅವನು ಬಗೆ ಬಗೆಯ ಚೇಷ್ಟೆಗಳನ್ನು ಮಾಡಹತ್ತಿದನು.
ಮರಗಳನ್ನು ಹತ್ತಿ ರೆಂಬೆಕೊಂಬೆಗಳನ್ನು ಬಲವಾಗಿ ಜಗ್ಗಾಡಿದನು; ಹುಬ್ಬುಗಳನ್ನು ಏರಿಸುತ್ತಾ ಹಲ್ಲುಗಳನ್ನು ತೋರಿಸತೊಡಗಿದನು. ಸ್ತ್ರೀಯರ ಮುಂದೆ ನಗುತ್ತಾ ಅವರನ್ನು ಅವಮಾನಿಸಿ ಹೆದರಿಸಲೆತ್ನಿಸಿದನು. ಆದರೆ ಅವರು ಅವನನ್ನು ಕಂಡು ಜೋರಾಗಿ ನಕ್ಕರು! ಆಗ ಆ ವಾನರನು ವಾರುಣಿ ಮಧುವಿನಿಂದ ತುಂಬಿದ್ದ ಮಡಕೆಯನ್ನೆತ್ತಿಕೊಂಡು ಓಡತೊಡಗಿದನು. ಕೋಪಗೊಂಡ ಬಲರಾಮನು ಅವನ ಮೇಲೆ ಒಂದು ದೊಡ್ಡ ಕಲ್ಲನ್ನೆಸೆದನು.
ಆದರೆ ವಾನರನು ಉಪಾಯವಾಗಿ ಆ ಕಲ್ಲಿನ ಹೊಡೆತವನ್ನು ತಪ್ಪಿಸಿಕೊಂಡನು. ಈಗ ಅವನು ಬಲರಾಮನ ಮತ್ತು ಸ್ತ್ರೀಯರ ಸುಂದರ ವಸ್ತ್ರಗಳನ್ನು ಎಳೆದು ಹರಿಯತೊಡಗಿದನು!
“ಅವನೇ ದ್ವಿವಿದ!” ಯಾರೋ ಹೇಳಿದರು. ಬಲರಾಮನು ಈಗಾಗಲೇ ದ್ವಿವಿದನ ವಿಚಾರವಾಗಿ ಕೇಳಿದ್ದನು. ಹತ್ತು ಸಾವಿರ ಆನೆಗಳ ಬಲವನ್ನು ದ್ವಿವಿದನು ಪಡೆದಿದ್ದ. ನರಕಾಸುರನ ಪರಮ ಸ್ನೇಹಿತನಾಗಿದ್ದನು. ಮೈಂದನೆಂಬ ವಾನರನ ಸಹೋದರನಾಗಿದ್ದ ಅವನು ಹಿಂದೆ ಸುಗ್ರೀವನ ಮಂತ್ರಿಯಾಗಿದ್ದನು.
ಈಗ, ತನ್ನ ಸ್ನೇಹಿತನಾದ ನರಕಾಸುರನು ಶ್ರೀ ಕೃಷ್ಣನಿಂದ ಹತನಾದನೆಂದು ತಿಳಿದು ಬಹಳ ಕ್ರುದ್ಧನಾಗಿದ್ದನು. ಕೃಷ್ಣನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ಯೋಚನೆ ಮಾಡಿ ದ್ವಾರಕೆಗೆ ಬಂದಿದ್ದನು. ಇಡಿಯ ನಗರದಲ್ಲಿ ದಂಧೆಯೆಬ್ಬಿಸಿದ್ದನು. ಪೇಟೆಗಳಿಗೂ, ಪುರಜನರ ಮನೆಗಳಿಗೂ ಬೆಂಕಿಯಿಡಲಾರಂಭಿಸಿದ್ದನು!

ಒಮ್ಮೊಮ್ಮೆ ದೊಡ್ಡ ಪರ್ವತಗಳನ್ನು ಕೆಡವಿ ಪುಡಿ ಮಾಡುತ್ತಿದ್ದನು! ಸಾಧು ಸಂತರ ಆಶ್ರಮಗಳನ್ನು ಹಾಳುಗೆಡವಲು ಮೊದಲು ಮಾಡಿದ್ದನು! ಯಜ್ಞ ಯಾಗಾದಿಗಳು ನಡೆಯುತ್ತಿದ್ದ ಸ್ಥಳಗಳಲ್ಲಿ ಮಾಂಸ ಮೂತ್ರ ಪುರೀಷಗಳನ್ನು ಚೆಲ್ಲಾಡಿ ಆ ಸ್ಥಳಗಳನ್ನು ಅಪವಿತ್ರಗೊಳಿಸುತ್ತಿದ್ದನು ! ಸ್ತ್ರೀ ಪುರುಷರನ್ನು ಅಪಹರಿಸಿ ಗುಹೆಗಳಲ್ಲಿಟ್ಟು ಅವುಗಳ ದ್ವಾರಗಳನ್ನು ಬಂಡೆಗಳಿಂದ ಮುಚ್ಚಿಬಿಡುತ್ತಿದ್ದನು! ಹೆಂಗಸರ ಮಾನಭಂಗವನ್ನೂ ಮಾಡುತ್ತಿದ್ದನು!
ಇಷ್ಟೆಲ್ಲಾ ಅನಾಚಾರಗಳನ್ನೆಸಗಿದ್ದ ಅದೇ ದ್ವಿವಿದನೇ ತನ್ನ ಮುಂದೆ ಇಂಥ ಚೇಷ್ಟೆಗಳನ್ನು ಮಾಡುತ್ತಿದ್ದನೆಂದು ತಿಳಿದ ಬಲರಾಮನು ವಿಪರೀತ ಕೋಪಗೊಂಡನು. ಸುನಂದವೆಂಬ ತನ್ನ ಗದೆಯನ್ನೆತ್ತಿಕೊಂಡು ಅವನನ್ನು ಕೊಲ್ಲಲುದ್ಯುಕ್ತನಾದನು. ಆಗ ದ್ವಿವಿದನು ಬೃಹದಾಕಾರದ ಮರವೊಂದನ್ನು ಬುಡಮೇಲಾಗಿಸಿ ಬಲರಾಮನ ತಲೆಗೆ ಗುರಿಯಿಟ್ಟು ಎಸೆದನು.
ಬಲರಾಮನಾದರೋ ಆ ಮರವನ್ನು ಒಂದೇ ಕೈಯಲ್ಲಿ ಹಿಡಿದು ಬಂಡೆಯಂತೆ ಅಚಲವಾಗಿ ನಿಂತನು. ಅನಂತರ ತನ್ನ ಗದೆಯಿಂದ ವಾನರನ ತಲೆಗೆ ಬಡಿದನು. ವಾನರನ ತಲೆಯಲ್ಲಿ ಗಾಯವಾಗಿ ರಕ್ತವು ಪ್ರವಾಹದಂತೆ ಹರಿಯತೊಡಗಿತು! ಆದರೆ ಅವನು ಧೃತಿಗೆಡದೆ, ಮತ್ತೊಂದು ಮರವನ್ನು ಕಿತ್ತು ಬಲರಾಮನ ತಲೆಗೆ ಅದರಿಂದ ಹೊಡೆಯಲಾರಂಭಿಸಿದನು. ಬಲರಾಮನು ತನ್ನ ಗದೆಯನ್ನು ಆ ಮರಕ್ಕೆ ಅಪ್ಪಳಿಸಿ ಅದನ್ನು ನುಚ್ಚು ನೂರಾಗಿಸಿದನು. ಕ್ರೋಧಾವಿಷ್ಟನಾದ ದ್ವಿವಿದ, ಮತ್ತೊಂದು ಮರವನ್ನು ಕಿತ್ತು ಬಲರಾಮನ ಎದೆಗೆ ಬಡಿದ.
ಬಲರಾಮನು ಅದನ್ನು ಚೂರು ಚೂರಾಗಿಸಿದ. ದ್ವಿವಿದನು ಒಂದೊಂದಾಗಿ ಅಲ್ಲಿದ್ದ ಮರಗಳನ್ನೆಲ್ಲಾ ಕಿತ್ತು ಹಾಕಲು, ಆ ಸ್ಥಳದಲ್ಲಿ ಮರಗಳೇ ಇಲ್ಲವಾದವು!
ಈಗ ದ್ವಿವಿದನು ದೊಡ್ಡ ದೊಡ್ಡ ಬಂಡೆಗಳನ್ನೂ ಬಲರಾಮನ ಮೇಲೆ ಮಳೆಗರೆದನು. ಬಲರಾಮನು ಆಟವಾಡುವಂತೆ ಆ ಬಂಡೆಗಲ್ಲುಗಳನ್ನು ಪುಡಿ ಮಾಡಿ ಪುಟ್ಟ ಪುಟ್ಟ ಕಲ್ಲುಗಳಾಗಿಸಿದನು! ದ್ವಿವಿದನು ಈಗ ತನ್ನ ಮುಷ್ಟಿಗಳನ್ನು ಬಿಗಿ ಮಾಡಿ ಬಲಭದ್ರನ ಎದೆಗೆ ಮತ್ತೆ ಮತ್ತೆ ಗುದ್ದಲಾರಂಭಿಸಿದನು.
ಇದರಿಂದ ವಿಪರೀತ ಕ್ರುದ್ಧನಾದ ಬಲರಾಮನು ತಾನೂ ತನ್ನ ಮುಷ್ಟಿಯಿಂದ ವಾನರನ ಕೊರಳ ಮೂಳೆಗೆ ಹೊಡೆದನು. ಅ ಏಟು ಸಾಕಾಯಿತು, ದ್ವಿವಿದನು ಒಮ್ಮೆಲೇ ಬಾಯಿಂದ ರಕ್ತ ಕಾರುತ್ತಾ ಸತ್ತು ಕೆಳಗೆ ಬಿದ್ದನು! ಅವನು ಕೆಳಗೆ ಬಿದ್ದಂತೆ, ಗಿರಿವನಗಳು ಥರಥರನೆ ನಡುಗಿದಂತಾಯಿತು!
ಬಲರಾಮನ ಅದ್ಭುತ ಸಾಹಸವನ್ನು ಕಂಡು ದಿವ್ಯ ಲೋಕ ನಿವಾಸಿಗಳಾದ ಸಿದ್ಧ ಚಾರಣರೂ, ಋಷಿ ಮುನಿಗಳೂ ಅವನ ಮೇಲೆ ಪುಷ್ಪವೃಷ್ಟಿಗೈದರು. “ಜಯ ಜಯ ಬಲರಾಮ! ನಿನಗೆ ಜಯವಾಗಲಿ! ನಿನ್ನ ಪಾದ ಪದ್ಮಗಳಿಗೆ ನಮ್ಮ ನಮಸ್ಕಾರ! ದ್ವಿವಿದನನ್ನು ಕೊಂದು ನೀನು ವಿಶ್ವಕ್ಕೇ ಮಂಗಳವನ್ನುಂಟು ಮಾಡಿರುವೆ!” ಎಂದು ಅವರು ಜಯಕಾರವನ್ನು ಉದ್ಘೋಷಿಸಿದರು.
ಹೀಗೆ ಅವರೆಲ್ಲರೂ ಬಲರಾಮನ ಮಹಿಮೆಯನ್ನು ಕೊಂಡಾಡಿದ ಬಳಿಕ, ಅವನು ಯಾದವ ಸ್ತ್ರೀಯರೊಂದಿಗೆ ದ್ವಾರಕೆಗೆ ಹಿಂದಿರುಗಿದರು.
ಕೌರವರ ಗರ್ವಭಂಗ
ಹಸ್ತಿನಾಪುರದಲ್ಲಿ ಸಂಭ್ರಮದ ವಾತಾವರಣ ಹರಡಿತ್ತು. ವಿವಿಧ ದೇಶಗಳಿಂದ ರಾಜರೂ ರಾಜ ಕುಮಾರರೂ ಸಮಲಂಕೃತರಾಗಿ ನಗರಕ್ಕೆ ಆಗಮಿಸುತ್ತಿದ್ದರು. ಪ್ರಜೆಗಳೂ ಸಂತೋಷ ಸಡಗರಗಳಿಂದ ತುಂಬಿದ್ದರು. ಅಂದು ಕೌರವೇಂದ್ರ ದುರ್ಯೋಧನನ ಮಗಳಾದ ಲಕ್ಮ್ಮಣೆಯ ಸ್ವಯಂವರ ಸಮಾರಂಭವಾಗಿತ್ತು. ಅಪೂರ್ವ ಸೌಂದರ್ಯವತಿಯಾಗಿದ್ದ ಲಕ್ಷ್ಮಣೆಯ ಕೈಹಿಡಿಯಲು ಅನೇಕಾನೇಕ ರಾಜಕುಮಾರರು ಆಶಿಸಿದ್ದರು.

ನೂತನ ವಸ್ತ್ರಾಭರಣಗಳಿಂದ ಅಲಂಕೃತಳಾಗಿದ್ದ ಲಕ್ಷ್ಮಣೆಯ ಕೈಯಲ್ಲಿ ಪುಷ್ಪಮಾಲೆ ಹಿಡಿದು ಹಂಸನಡಿಗೆಯಿಂದ ರಾಜ ಕುವರರ ಬಳಿ ನಡೆದು ಬರುತ್ತಿದ್ದಂತೆ, ಅವಳ ಕಡೆಗೆ ಆಸೆಯ ಕಂಗಳಿಂದ ನೋಡುತ್ತಾ ಅವರು ಮೈಮರೆತರು. ಆಗ ಇದ್ದಕ್ಕಿಂದ್ದಂತೆ, ಸಿಂಹದ ಮರಿಯಂತಿದ್ದ ಒಬ್ಬ ತರುಣನು ಸ್ವಯಂವರ ನೋಡುತ್ತಿದ್ದಂತೆಯೇ ಅವನು ಲಕ್ಷ್ಮಣೆಯನ್ನು ಅಪಹರಿಸಿಕೊಂಡು ಹೊರಟನು!
ಆ ತರುಣನು, ಶ್ರೀ ಕೃಷ್ಣ ಜಾಂಬವತಿಯರ ಪುತ್ರನಾಗಿದ್ದನು. ಸದಾ ತನ್ನ ತಾಯಿಯೊಂದಿಗಿರುತ್ತಿದ್ದ ಮುದ್ದು ಮಗನಾದ ಅವನನ್ನು ಸಾಂಬನೆಂದು ಕರೆಯುತ್ತಿದ್ದರು. ಲಕ್ಷ್ಮಣೆಯನ್ನು ಬಯಸಿದ್ದ ಅವನು, ಲಕ್ಷ್ಮಣೆಗೆ ಅವನ ಮೇಲೆ ಆಸೆಯಿರದಿದ್ದರೂ ಅವಳನ್ನು ಅಪಹರಿಸಿದನು. ಇದರಿಂದ ಕೌರವರು ಕ್ರುದ್ಧರಾದರು.
“ಹೀಗೆ ಮಾಡಲು ಅವನಿಗೆಷ್ಟು ಧೈರ್ಯ!? ಇದು ನಮ್ಮ ವಂಶಕ್ಕೇ ಮಾಡಿರುವ ಅವಮಾನವಾಗಿದೆ!” ದುರ್ಯೋಧನನು ಗುಡುಗಿದ.
“ಲಕ್ಷ್ಮಣೆಯೇನೂ ಅವನನ್ನು ಪ್ರೀತಿಸಿರಲಿಲ್ಲವಲ್ಲ! ಆದರೂ ಸಾಂಬನು ಬಲತ್ಕಾರದಿಂದ ಅವಳನ್ನು ಸೆಳೆದೊಯ್ದಿದ್ದಾನೆ. ಅವನಿಗೆ ತಕ್ಕ ಪಾಠ ಕಲಿಸಲೇ ಬೇಕು”, ಕರ್ಣ ಹೇಳಿದ.
“ಆದರೆ ಸಾಂಬನು ಲಕ್ಮ್ಮಣೆಯನ್ನು ಸ್ಪರ್ಶಿಸಿಬಿಟ್ಟಿದ್ದಾನೆ! ಅವಳನ್ನು ಇನ್ನಾರು ವರಿಸುತ್ತಾರೆ? ಆದ್ದರಿಂದ ಅವನನ್ನು ಕೊಲ್ಲುವುದು ಬೇಡ; ಬಂಧಿಸೋಣ”, ಭೀಷ್ಮರು ಹೇಳಿದರು.
“ಯಾದವರು ನಮ್ಮೊಂದಿಗೆ ಯುದ್ಧಕ್ಕೆ ಬಂದರೆ ಏನು ಮಾಡುವುದು?” ಧೃತರಾಷ್ಟ್ರನು ಕೇಳಿದನು.
“ಯಾದವರು ನಮಗೆ ಸಮಾನರೇ? ನಾವು ಸಾಮ್ರಾಟರಾದರೆ ಅವರು ಸಾಮಂತರು, ಅಷ್ಟೆ! ಅವರು ಯುದ್ಧಕ್ಕೆ ಬಂದರೆ ಬರಲಿ! ನಾವು ಅವರಿಗೊಂದು ಒಳ್ಳೆಯ ಪಾಠ ಕಲಿಸೋಣ!” ದುರ್ಯೋಧನನು ಹೇಳಿದನು.
ಹೀಗೆ ಸಮಾಲೋಚಿಸಿ ಕೌರವರು, ಭೀಷ್ಮ ಧ್ರತರಾಷ್ಟ್ರರಂಥ ಹಿರಿಯರ ಅಪ್ಪಣೆ ಪಡೆದು ಸಾಂಬನನ್ನು ಬಂಧಿಸಲು ಹೊರಟರು. ಆರು ಮಹಾರಥರಾದ ಕರ್ಣ, ಶಲ, ಭೂರಿಶ್ರವನ್, ಯಜ್ಞಕೇತು ಮತ್ತು ದುರ್ಯೋಧನರು ತಮ್ಮ ರಥಗಳಲ್ಲಿ ಕುಳಿತು ಸಾಂಬನನ್ನು ಬೆನ್ನಟ್ಟಿದರು. ಕರ್ಣನು ಅವರಿಗೆ ಮುಖಂಡನಾದನು.
“ಏ ಸಾಂಬ! ಏಕೆ ಓಡುತ್ತಿರುವೆ? ನಿಲ್ಲು! ನಿನಗೆ ಬುದ್ಧಿ ಕಲಿಸುತ್ತೇವೆ,” ಕರ್ಣನು ಸಾಂಬನಿಗೆ ಸವಾಲೆಸೆದನು.
ಸಾಂಬನು ಸಾಮಾನ್ಯನಾಗಿರಲಿಲ್ಲ. ಅವನೂ ಮಹಾರಥಿಯೇ; ಆದರೆ ಆರು ಜನರು ಒಬ್ಬನ ಮೇಲೆ ಆಕ್ರಮಣ ಮಾಡುವುದು ಸಮಂಜಸವಾಗಿರಲಿಲ್ಲ. ಆದರೂ ಸಾಂಬನು ಧ್ರತಿಗೆಡದೆ, ಸಿಂಹವು ತೋಳಗಳೊಂದಿಗೆ ಹೋರಾಡುವಂತೆ ಅವರೊಂದಿಗೆ ಹೋರಾಡಿದನು. ಆರು ಬಾಣಗಳನ್ನು ಪ್ರಯೋಗಿಸಿ ಅವನು ಅವರ ಸಾರಥಿಯರನ್ನು ಕೊಂದನು.
ಆನಂತರ, ನಾಲ್ಕು ಬಾವಣಗಳನ್ನು ಪ್ರಯೋಗಿಸುತ್ತಾ ಪ್ರತಿ ರಥಕ್ಕೆ ಹೂಡಿದ್ದ ನಾಲ್ಕು ಕುದುರೆಗಳನ್ನೂ ಕೊಂದನು. ಆ ಬಳಿಕ, ಒಬ್ಬೊಬ್ಬಕೌರವ ವೀರನನ್ನೂ ಘಾಸಿಗೊಳಸಿದನು. ಕೌರವರು ಕೋಪಗೊಂಡಿದ್ದರೂ ಅವನನ್ನು ಪ್ರಶಂಶಿಸಿದರು.
ಆದರೆ ಬಹುಬೇಗನೆ ಕೌರವ ವೀರರು ಒಟ್ಟಾಗಿ ಸಾಂಬನ ಮೇಲೆ ಆಕ್ರಮಣ ನಡೆಸಿದರು. ಒಬ್ಬನು ಅವನ ಸಾರಥಿಯನ್ನು ಕೊಂದರೆ, ಮತ್ತೊಬ್ಬನು ಕುದುರೆಗಳನ್ನು ಕೊಂದು ಅವನ ರಥವನ್ನು ಮುರಿದು ಹಾಕಿದನು. ಇನ್ನೊಬ್ಬನು ಅವನ ವಿರಥಿಯೂ ನಿರಾಯುಧನೂ ಆದ ಸಾಂಬನನ್ನು ಕೌರವ ವೀರರು ಬಂಧಿಸಿ, ಲಕ್ಷ್ಮಣೆಯನ್ನು ತಮ್ಮೊಂದಿಗೆ ಕರೆದೊಯ್ದರು.
ದೇವರ್ಷಿಗಳಾದ ನಾರದರು ತ್ರಿಲೋಕ ಸಂಚಾರಿಗಳು. ನಡೆದ ಘಟನಾವಳಿಯನ್ನು ವೀಕ್ಷಿಸಿದ್ದ ಅವರು ಕೂಡಲೇ ದ್ವಾರಕೆಗೆ ಹೋಗಿ, ಯಾದವರಿಗೆ ಸಾಂಬನ ಬಂಧನದ ಸುದ್ದಿಯನ್ನು ಮುಟ್ಟಿಸಿದರು. ಆರು ಮಹಾರಥರು ಸೇರಿ ಮೋಸದಿಂದ ಸಾಂಬನನ್ನು ಬಂಧಿಸಿದರೆಂದು ಕೇಳಿ ಯಾದವರು ಬಹುಕ್ರುದ್ಧರಾದರು.
ಅವರು ಕೂಡಲೇ ಕೌರವರೊಂದಿಗೆ ಯುದ್ಧ ಮಾಡುವುದಾಗಿ ನಿರ್ಧರಿಸಿದರು. ಉಗ್ರ ಸೇನ ರಾಜನೂ ಇದಕ್ಕೆ ಒಪ್ಪಿಬಿಟ್ಟನು. ಆದರೆ ಬಲರಾಮನಿಗೆ ಇದು ಸರಿ ಕಾಣಲಿಲ್ಲ. ಈಗಾಗಲೇ ಕಲಿಯುಗವು ಕಾಲಿಡುತ್ತಿತ್ತು. ಜನರನ್ನು ಸ್ವಲ್ಪ ಉದ್ರೇಕಿಸಿದರೂ ಅವರು ಕಾದಾಡುವ ಸಂಭವವಿತ್ತು. ಆದ್ದರಿಂದ ಹೇಗಾದರೂ ಯುದ್ಧವನ್ನು ತಡೆಯಬೇಕೆಂದು ಅವನು ಯೋಚಿಸಿ, ಹೇಳಿದನು, “ಯುದ್ಧವೀರರೇ, ನಾನು ಒಬ್ಬನೇ ಹೋಗಿ ಪರಸ್ಪರ ಒಪ್ಪಂದದಿಂದ ಕಲಹ ತಪ್ಪಿಸಿ ಸಂಧಿ ಸಾಧ್ಯವಾಗುವುದೇ ಎಂದು ನೋಡುತ್ತೇನೆ. ಈಗಲೇ ಯುದ್ಧ ಬೇಡ.”
ಬಲರಾಮನ ಯುಕ್ತವಾದ ಮಾತಗಳಿಗೆ ಎಲ್ಲರೂ ಒಪ್ಪಿದರು. ಅವನು ಕೆಲವು ಬ್ರಾಹ್ಮಣರನ್ನೂ ಯದುವಂಶದ ಹಿರಿಯರನ್ನೂ ತನ್ನೊಂದಿಗೆ ರಥದಲ್ಲಿ ಕರೆದೊಯ್ದನು. ತನ್ನ ಮಾತಿಗೆ ಕೌರವರು ಖಂಡಿತವಾಗಿಯೂ ಒಪ್ಪುವರಂಬ ಭರವಸೆ ಅವನಿಗಿತ್ತು. ಅವನು ಹಸ್ತಿನಾಪುರವನ್ನು ಸಮೀಪಿಸಿದ; ಆದರೆ ನೇರವಾಗಿ ಪುರವನ್ನು ಪ್ರವೇಶಿಸದೆ, ನಗರದ ಹೊರಗೆ ಒಂದು ಪುಟ್ಟ ಶಿಬಿರ ಹೂಡಿದ.

ಯಾದವ ಪ್ರಮುಖ ಉದ್ಧವನನ್ನು ಕೌರವ ಪ್ರಮುಖರನ್ನು ಭೇಟಿ ಮಾಡಿ ವಿಷಯವನ್ನು ಇತ್ಯರ್ಥ ಮಾಡಲು ಕಳಿಸಿದ. ಉದ್ಧವನು ಪುರ ಪ್ರವೇಶ ಮಾಡಿ, ಧೃತರಾಷ್ಟ್ರ, ಭೀಷ್ಮ, ದ್ರೋಣ, ದುರ್ಯೋಧನ, ಬಾಹ್ಲೀಕ ಮೊದಲಾದ ಕೌರವ ಪ್ರಮುಖರನ್ನು ಭೇಟಿಯಾದ. ಬಲರಾಮನು ಆಗಮಿಸಿರುವ ವಿಷಯವನ್ನು ಅವರಿಗೆ ಅರುಹಿದ. ಬಲರಾಮನು ಆಗಮಿಸಿರುವನೆಂದು ಕೇಳಿ ದುರ್ಯೋಧನನೇ ಮೊದಲಾದ ಕೌರವರಿಗೆ ಬಹಳ ಸಂತೋಷವಾಯಿತು.
ಬಲರಾಮನು ಅವರ ಹಿತೈಷಿಯೆಂದು ಅವರಿಗೆ ತಿಳಿದಿತ್ತು. ಬಲರಾಮನು ಭೀಮ, ದುರ್ಯೋಧನರಿಬ್ಬರೂ ಗದಯುದ್ಧದ ಗುರುವಾಗಿದ್ದನು. ಭೀಮನು ಬಲಾಢ್ಯನಾಗಿದ್ದರೆ, ದುರ್ಯೋಧನನು ಕುಶಲನಾಗಿದ್ದನು. ಬಲರಾಮನಿಗೆ ದುರ್ಯೋಧನನ ಮೇಲೆ ವಿಶೇಷ ಪ್ರೀತಿಯಿತ್ತು. ಆದ್ದರಿಂದ ಕೌರವರು ಮಂಗಳ ದ್ರವ್ಯಗಳನ್ನು ಹಿಡಿದು ಬಲರಾಮನನ್ನು ಸ್ವಾಗತಿಸಲು ಹೋದರು. ಅವನಿಗೆ ಆರ್ಘ್ಯ ಪಾದ್ಯಾದಿಗಳನ್ನರ್ಪಿಸಿ, ಉತ್ತಮ ಗೋವುಗಳನ್ನು ದಾನ ನೀಡಿದರು. ಅನಂತರ ಕುಶಲ ಪ್ರಶ್ನೆ ಮಾಡಿದರು.
ಬಲರಾಮನು ಶಾಂತವಾಗಿ ಮೇಘ ಗಂಭೀರವಾಗಿದ್ದ ತನ್ನ ಧ್ವನಿಯಿಂದ ಹೇಳಿದನು. “ಪ್ರಿಯ ಮಿತ್ರರೇ, ನಾನೀಗ ಮಹಾ ಶಕ್ತಿವಂತನಾದ ಉಗ್ರಸೇನ ಮಹಾರಾಜನ ದೂತನಾಗಿ ಬಂದಿದ್ದೇನೆ. ಆದ್ದರಿಂದ ನೀವೆಲ್ಲರೂ ಅವನ ಆಜ್ಞೆಯನ್ನು ಜಾಗರೂಕತೆಯಿಂದ ಕೇಳಿ. ಒಂದು ಕ್ಷಣವೂ ತಡ ಮಾಡದೇ ಅದನ್ನು ಪಾಲಸಿ.
ನೀವೆಲ್ಲರೂ ಹೇಗೆ ಸಾಂಬನನ್ನು ಒಟ್ಟಿಗೆ ಆಕ್ರಮಿಸಿ ಮೋಸದಿಂದ ಸೆರೆಹಿಡಿದಿರುವಿರೆಂದು ನಮ್ಮ ರಾಜನಿಗೆ ತಿಳಿದಿದೆ. ಆದರೆ ನೀವು ನಿಮಗೆ ಬಹಳ ಹತ್ತಿರದ ಸಂಬಂಧಿಗಳಾದುದರಿಂದ ನಾವು ಈ ವಿಷಯವನ್ನು ಕೇಳಿಯೂ ಕೋಪಗೊಂಡಿಲ್ಲ. ನಮ್ಮ ಒಳ್ಳೆಯ ಸಂಬಂಧ ಮತ್ತು ಮೈತ್ರಿ ಹಾಳಾಗಬಾರದೆಂದು ನನ್ನ ಅಭಿಪ್ರಾಯ. ಕಲಹವು ನಡೆಯದೆ ನಮ್ಮ ಸ್ನೇಹ ಮುಂದುವರೆಯಬೇಕಲ್ಲವೇ? ಆದ್ದರಿಂದ ಈಗಲೇ ಸಾಂಬನನ್ನು ಬಿಡುಗಡೆಗೊಳಿಸಿ ಅವನ ಪತ್ನಿ ಲಕ್ಷ್ಮಣೆಯೊಂದಿಗೆ ಅವನನ್ನು ಕಳಿಸಿಕೊಡಿ.”
ಬಲರಾಮನು ವೀರೋಚಿತವಾಗಿ ಹೀಗೆ ಮಾತನಾಡಲು, ಕೌರವರು ಕೋಪಗೊಂಡರು. “ಓಹೋ! ಈ ಮಾತುಗಳು ಆಶ್ಚರ್ಯಕರವೆನಿಸಿದರೂ ಕಲಿಯುಗಕ್ಕೆ ಸೂಕ್ತವಾಗಿದೆ!” ಅವರು ಹೇಳಿದರು, “ಇಲ್ಲವಾದರೆ ಬಲರಾಮನು ಹೀಗೆ ಮಾತನಾಡುವುದೆಂದರೇನು? ಈ ಮಾತಿನ ಭಾಷೆ, ಧಾಟಿ, ಎಲ್ಲವೂ ಎಷ್ಟು ನಿಂದನೀಯವಾಗಿವೆ! ಅಯ್ಯೋ! ಕಾಲದ ಮಹಿಮೆ ಎಷ್ಟು ಕೆಟ್ಟದ್ದು ನೋಡಿ! ಕಾಲಿನಲ್ಲಿರಬೇಕಾದ ಪಾದರಕ್ಷೆಯು, ಕಿರೀಟವಿರಬೇಕಾದ ತಲೆಯ ಮೇಲೇರಲು ಯತ್ನಿಸುತ್ತಿದೆ! ವಿವಾಹ ಸಂಬಂಧದಿಂದ ನಾವು ಯದುವಂಶಜರೊಂದಿಗೆ ಸಂಬಂಧಿಸಿದ್ದೇವೆ ನಿಜ.
ಅದಕ್ಕಾಗಿ ನಾವು ನಿಮಗೆ ನಮ್ಮೊಂದಿಗೆ ಕುಳಿತು ತಿನ್ನಲೂ, ಕುಡಿಯಲೂ, ಮಲಗಲೂ ಅವಕಾಶ ಮಾಡಿಕೊಟ್ಟೆವು. ಆದರೆ ಈಗ ನೀವು ಆ ಸಲಿಗೆಯ ದುರ್ಬಳಕೆ ಮಾಡಿಕೊಳ್ಳುತ್ತಿರುವಿರಿ! ನಾವು ನಮ್ಮ ರಾಜ್ಯದ ಸ್ವಲ್ಪ ಭಾಗವನ್ನು ನಿಮಗೆ ಬಿಟ್ಟುಕೊಡುವ ಮೊದಲು ನಿಮಗೆ ಯಾವುದೇ ಸ್ಥಾನಮಾನಗಳಿರಲಿಲ್ಲ.
ಈಗ ನಮಗೇ ಆಜ್ಞೆ ಮಾಡುತ್ತಿರುವಿರಾ!? ನಾವೇ ನಿಮಗೆ ರಾಜ ಲಾಂಛನಗಳಾದ ಸಿಂಹಾಸನ, ಚಾಮರ, ಶ್ವೇತಚಕ್ರ, ಕಿರೀಟ, ಮೊದಲಾದವುಗಳನ್ನು ಬಳಸಲು ಅನುಮತಿ ನೀಡಿದ್ದು! ನಮ್ಮೆದುರು ನೀವು ಅವುಗಳನ್ನು ಬಳಸಬಾರದಿತ್ತಾದರೂ ನಾವು ನಿಮ್ಮೆನ್ನೇನು ತಡೆಯಲಿಲ್ಲ. ಆದರೆ ಈಗ ನಮಗೇ ಆಜ್ಞೆ ಮಾಡಹೊರಟಿರುವ ನಿಮ್ಮ ಅಹಂಕಾರವೆಷ್ಟು!?
ಹಾವಿಗೆ ಹಾಲೆರೆದರೆ ಅದರ ವಿಷವು ಹೆಚ್ಚುತ್ತದೆ, ಅಷ್ಟೆ! ಅಂತೆಯೇ, ನಾವು ಯಾದವರಿಗೆ ಅನ್ನ ಹಾಕಿ ಬೆಳೆಸಲು, ಅವರು ನಮಗೇ ತಿರುಗಿ ಬೀಳುತ್ತಿದ್ದಾರೆ! ಭೀಷ್ಮ ದ್ರೋಣ, ಅರ್ಜುನರಂಥ ಕುರುವೀರರ ಅನುಮತಿಯಿಲ್ಲದೇ ಪ್ರಪಂಚದ ಯಾರೊಬ್ಬರೂ ಸುಖ ಪಡಲಾಗುವುದಿಲ್ಲ! ಸಿಂಹದ ಎದಿರು, ಕುರಿಮರಿಯು ಸಂತೋಷ ಪಡಲಾರದು. ಅಂತೆಯೇ ನಮ್ಮ ಇಚ್ಛೆಗೆ ವಿರುದ್ಧವಾಗಿ ದೇವೇಂದ್ರ ಸಹಿತರಾದ ದೇವತೆಗಳೂ ಸುಖ ಪಡಲಾರರು! ಇನ್ನು ಸಾಮಾನ್ಯ ಜನರ ಮಾತೇನು?”
ಹೀಗೆ ಬಿರುನುಡಿಗಳನ್ನಾಡುತ್ತಾ ಬಲರಾಮನನ್ನೂ ಯಾದವರನ್ನೂ ನಿಂದಿಸಿ ಕೌರವ ವೀರರು ನಗರಕ್ಕೆ ಹೊರಟು ಹೋದರು.

ವಸುದೇವನ ತಂಗಿಯಾದ ಪೃಥೆ ಅಥವಾ ಕುಂತಿ ಕುರು ವಂಶದ ರಾಜನಾದ ಪಾಂಡುವಿನ ಪತ್ನಿಯಾಗಿದ್ದಳು. ಅವಳ ಮಕ್ಕಳು ಪಾಂಡವರಾದರೆ, ಅವಳ ವಾರಗಿತ್ತಿ ಗಾಂಧಾರಿಯ ಮಕ್ಕಳೇ ದುರ್ಯೋಧನಾದಿ ಕೌರವರು. ಹೀಗೆ ಯಾದವರು ಕುರುವಂಶಜರಿಗೆ ಹತ್ತಿರದ ಸಂಬಂಧಿಗಳಾಗಿದ್ದರು. ಮೇಲಾಗಿ ಭಗವಂತನಾದ ಶ್ರೀಕೃಷ್ಣನೇ ಅವರ ವಂಶದಲ್ಲಿ ಅವತರಿಸಿದ್ದನು. ಆದರೂ, ರಾಜ್ಯ ಕೋಶಮನೆತನಗಳ ಬಲದಿಂದ ಮದಾಂಧರಾಗಿದ್ದ ಕೌರವರು ಅನಾಗರಿಕರಂತೆ ಬಲರಾಮನ್ನೂ ಯಾದವರನ್ನೂ ನಿಂದಿಸಿದರು.
ಕೌರವರು ಹೇಳಿದುದನ್ನು ಮೌನವಾಗಿ ಕೇಳಿದ ಬಲರಾಮನನ್ನು ಭಯಂಕರ ಕೋಪವಾವರಿಸಿತು. ಅವನ ಕಣ್ಣುಗಳು ಕೆಂಡದ ಚೆಂಡುಗಳಂತೆ ಕೆಂಪಾದವು. ಅವನ ದೇಹವು ಥರ ಥರ ನಡುಗಿತು. ಅವನ ಅಧರಗಳು ಕಂಪಿಸಿದವು. ಆಗ ಅವನು ನೋಡಲು, ಪ್ರಳಯಕಾಲದ ರುದ್ರನಂತೆ ಕಾಣುತ್ತಿದ್ದನು. ಭಯಂಕರವಾಗಿ ಅಟ್ಟಹಾಸಗೈಯುತ್ತಾ, ಅರಿಗಳ ಎದೆಬರಿಯುವಂತೆ ಜೋರಾಗಿ ಗರ್ಜಿಸಿದನು.
“ಆಹಾ! ಮನುಷ್ಯನು ತನ್ನ ಸೌಂದರ್ಯ, ಐಶ್ವರ್ಯ, ಕುಟುಂಬಗಳ ವೃದ್ಧಿಯಿಂದ ಅಹಂಕಾರಕ್ಕೊಳಗಾಗಿ ಮದಾಂಧರಾಗುವುದು ನಿಜ! ಆದರೆ ಅಂಥ ಮನುಷ್ಯನಿಗೆ ನೆಮ್ಮದಿಯ ಜೀವನ ರುಚಿಸುವುದಿಲ್ಲ. ಬದಲಿಗೆ, ಅವನು ಎಲ್ಲರಿಗೂ ಕಂಟಕಪ್ರಾಯನಾಗುತ್ತಾನೆ! ಅಂಥವನಿಗೆ ಉಪದೇಶ ಮಾಡುವ ಬದಲು, ದಂಡನೆ ನೀಡಬೇಕು!
ಈ ಕೌರವರು ಎಷ್ಟು ಉದ್ಧಟರು! ನಮ್ಮ ಯಾದವರೆಲ್ಲರೂ ಕೋಪ ಗೊಂಡಿದ್ದರೂ ನಾನೇನೋ ಶಾಂತಿ ಸಂಧಾನ ಮಾಡಲೆತ್ನಿಸಿದರೆ, ಈ ಮೂಢರು ಹೇಗೆ ವರ್ತಿಸುತ್ತಿದ್ದಾರೆ?! ದುರಹಂಕಾರಿಗಳಾದ ಇವರು, ನನ್ನನ್ನೂ ಯಾದವರನ್ನೂ ಪದೇ ಪದೇ ದುರ್ವಾಕ್ಯಗಳಿಂದ ನಿಂದಿಸಿದ್ದಾರೆ.
“ಮೂರ್ಖ ಕೌರವರೇ!” ಬಲರಾಮನು ಗುಡುಗಿದನು, “ಸ್ವರ್ಗದ ರಾಜನಾದ ದೇವೇಂದ್ರನೂ ನಮ್ಮ ಉಗ್ರಸೇನ ಮಹಾರಾಜ ಆಜ್ಞೆಯನ್ನು ಪಾಲಿಸುತ್ತಾನೆ! ವೃಷ್ಣ್ಯಂಧಕ ಭೋಜಯದುವಂಶಗಳ ಪತಿಯಾದ ಉಗ್ರಸೇನನನ್ನು ಒಂದು ಪುಟ್ಟ ಅಕ್ಷೌಹಿಣಿಯ ಒಡೆಯನೆಂದು ಭಾವಿಸಿರುವಿರಾ? ಅಯ್ಯೋ ಮೂರ್ಖರೇ! ಯಾದವರು ದೇವಲೋದಕದ ಪಾರಿಜಾತ ವೃಕ್ಷವನ್ನೂ, ಸುಧರ್ಮ ಸಭೆಯನ್ನು ಉಪಯೋಗಿಸುತ್ತಿದ್ದಾರೆ.
ಅವರು ನಿಮಗೆ ಆಜ್ಞೆ ಗೌರವ ನೀಡಿ ಸ್ವಾಗತಿಸಿದರು. ಅನಂತರ ಅವರು ಅವನಿಗೆ ಉಚಿತಾಸನವನ್ನರ್ಪಿಸಿ ಸಂಪೂಜಿಸಿದರು. ಬಲರಾಮನು ಕ್ಷತ್ರಿಯ ಕುಲದಲ್ಲಿ ಅವತರಿಸಿದ್ದರೂ ಅವನು ಭಗವಂತನೆಂದು ಅವರು ತಿಳಿದಿದ್ದರು. ಆದರೆ, ವ್ಯಾಸಾಸನದಲ್ಲಿ ಕುಳಿತಿದ್ದ ರೋಮಹರ್ಷಣನು ಮಾತ್ರ ಏಳಲಿಲ್ಲ. ಅವನು ವೇದವ್ಯಾಸರ ಶಿಷ್ಯನಾಗಿದ್ದು, ಪುರಾಣ ಪ್ರವಚನ ಮಾಡುತ್ತಿದ್ದನು. ಭಗವಂತನಿಗಿಂತಲೂ ತಾನೇ ದೊಡ್ಡವನೆಂದು ಭಾವಿಸಿದನು.
ರೋಮ ಹರ್ಷಣನು ಸೂತ ಕುಲದಲ್ಲಿ ಜನಿಸಿದ್ದನು. ಬ್ರಾಹ್ಮಣ ತಾಯಿಗೂ ಕ್ಷತ್ರಿಯ ತಂದೆಗೂ ಜನಿದವರೇ ಸೂತರು. ತಾಯಿಯು ಉಚ್ಚಕುಲಕ್ಕೆ ಸೇರಿ, ತಂದೆಯು ನೀಚಕುಲಕ್ಕೆ ಸೇರಿದ್ದರೆ, ಆ ಜನ್ಮಕ್ಕೆ ಪ್ರತಿಲೋಮವೆಂದು ಹೆಸರು. ಇದಕ್ಕೆ ವಿರುದ್ಧವಾದುದು ಅನುಲೋಮ ಜನ್ಮ. ಆದರೆ ವ್ಯಕ್ತಿಯು ಸಂಸ್ಕಾರ ಮತ್ತು ವಿದ್ವತ್ತಿಗೆ ತಕ್ಕಂತೆ ಪುರಾಣ ಪ್ರವಚನ ಮಾಡಬಹುದಿತ್ತು.
ರೋಮಹರ್ಷಣ ಸೂತನು ವ್ಯಾಸಾಸನದ ಮೇಲೆ ಕುಳಿತಿದ್ದ ಕಾರಣ, ಯಾರೇ ಬಂದರೂ ಎದ್ದು ನಿಲ್ಲಬೇಕಿರಲಿಲ್ಲ. ಆದರೆ, ಈಗ ಆಗಮಿಸಿದ್ದು ಸಾಕ್ಷಾತ್ ಭಗವಂತನೇ ಆಗಿದ್ದನು. ಆದ್ದರಿಂದ ರೋಮಹರ್ಷಣನು ಎದ್ದು ಗೌರವ ಸಲ್ಲಿಸಬೇಕಿತ್ತು. ಅವನ ಅಹಂಕಾರದ ವರ್ತನೆ, ಬಲದೇವನಿಗೆ ಹಿಡಿಸಲಿಲ್ಲ.
ಅವನು ತನ್ನಲ್ಲಿಯೇ ಯೋಚಿಸಿದನು. “ಅಂತರಂಗದಲ್ಲಿ ನೀಚರಾಗಿದ್ದರೂ, ಬಹಿರಂಗದಲ್ಲಿ ವಿದ್ವಾಂಸರಂತೆಯೂ, ಧಾರ್ಮಿಕರಂತೆಯೂ ವರ್ತಿಸುವ ಡಾಂಭಿಕರನ್ನು ಶಿಕ್ಷಿಸುವ ಸಲುವಾಗಿಯೇ ನಾನು ಅವತರಿಸಿದ್ದೇನೆ. ಆದ್ದರಿಂದ ಇಂಥವರನ್ನು ಕೊಂದು ಈ ಡಾಂಭಿಕತೆಯನ್ನು ನಿಲ್ಲಿಸಬೇಕು.”
“ಇವನು ಸಾಯಲರ್ಹನಾಗಿದ್ದಾನೆ. ಏಕೆಂದರೆ, ವೇದವ್ಯಾಸರ ಶಿಷ್ಯನಾಗಿ ಸಕಲ ಶಾಸ್ತ್ರ ಪುರಾಣಗಳನ್ನು ಅಭ್ಯಸಿಸಿದ್ದರೂ ಭಗವಂತನ ಎದಿರು ವಿನಮ್ರನಾಗಿ ನಡೆದುಕೊಳ್ಳುತ್ತಿಲ್ಲ!” ಹೀಗೆ ಹೇಳಿ ಬಲರಾಮನು ಒಂದು ಕುಶದರ್ಭೆಯಿಂದ ರೋಮಹರ್ಷಣನನ್ನು ಹೊಡೆದು ಕೊಂದೇ ಬಿಟ್ಟನು!
ಭಗವಂತನು ಮಹಾಮಹಿಮನು; ಸರ್ವಶಕ್ತನು; ಆದ್ದರಿಂದಲೇ ಅವನಿಗೆ ರೋಮಹರ್ಷಣನನ್ನು ಕೇವಲ ಒಂದು ದರ್ಭೆಯ ಹೊಡೆತದಿಂದಲೇ ಕೊಲ್ಲಲು ಸಾಧ್ಯವಾಯಿತು.
ರೋಮಹರ್ಷಣ ಸೂತನ ಸಾವಿನಿಂದ ಅಲ್ಲಿ ನೆರೆದಿದ್ದ ಬ್ರಾಹ್ಮಣರಿಗೂ, ಖುಷಿಗಳಿಗೂ ಅತೀವ ದುಃಖವಾಯಿತು. ಅವರೆಲ್ಲರೂ ರೋದಿಸುತ್ತಾ ಬಲರಾಮನು ಭಗವಂತನೆಂದು ತಿಳಿದಿದ್ದರೂ ಅವನ ಕಾರ್ಯವನ್ನು ಖಂಡಿಸಿದರು. “ಹೇ ಭಗವಾನ್”, ಅವರು ಹೇಳಿದರು, “ನಿನ್ನ ಕಾರ್ಯ ಧರ್ಮಸಮ್ಮತವಾದುದಲ್ಲವೆಂದು ನಮ್ಮ ಅಭಿಪ್ರಾಯ.
ಯದುನಂದನನೇ, ಈ ಸತ್ರ ಯಜ್ಞವು ಮುಗಿವವರೆಗೆ ಪುರಾಣ ಪ್ರವಚನ ಮಾಡುತ್ತಿರಲೆಂದು ನಾವೇ ರೋಮಹರ್ಷಣನನ್ನು ಉಚ್ಛ ಸ್ಥಾನವಾದ ವ್ಯಾಸಾಸನದಲ್ಲಿ ಕೂರಿಸಿದ್ದೆವು. ಆ ಸ್ಥಾನದಲ್ಲಿ ಕುಳಿತಿರುವವರು ಇತರರನ್ನು ಸ್ವಾಗತಿಸಲು ಎದ್ದು ನಿಲ್ಲುವುದು ಸೂಕ್ತವಲ್ಲ. ಅಲ್ಲದೆ, ನಾವೆಲ್ಲರೂ ರೋಮಹರ್ಷಣನಿಗೆ ದೀರ್ಘಾಯುಸ್ಸನ್ನು ನೀಡಿದ್ದೆವು.

ಇವನ್ನೆಲ್ಲಾ ತಿಳಿಯದೇ ಇವನನ್ನು ನೀನು ಕೊಂದಿರುವುದು ಬ್ರಹ್ಮಹತ್ಯೆಗೆ ಸಮವೆಂದು ನಮ್ಮ ಭಾವನೆ. ಆದರೆ ನೀವು ವೈದಿಕ ನಿಯಮಗಳನ್ನು ಬಲ್ಲವನು. ಯೋಗೀಶ್ವರನಾದ ನಿನಗೆ ಈ ನಿಯಮಗಳೂ ಅನ್ವಯಿಸುವುದಿಲ್ಲವೆಂದು ನಾವು ಬಲ್ಲೆವು. ಆದರೆ ಇತರರ ಅರಿವಿಗಾಗಿ ನೀನು ಯಾವುದಾದರೂ ರೀತಿಯಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಶ್ರೇಷ್ಠ ವ್ಯಕ್ತಿಯು ಮಾಡಿದುದನ್ನು ತಾನೇ ಸಾಮಾನ್ಯರು ಅನುಸರಿಸುವುದು?”
“ಹೌದು”, ಬಲರಾಮನು ಹೇಳಿದನು, “ಈ ಕಾರ್ಯ ನನಗೆ ಸರಿಯೆನಿಸಿದರೂ ಅದು ಇತರರಿಗೆ ಸರಿಯಾದುದಲ್ಲ. ಆದ್ದರಿಂದ ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳಲೇ ಬೇಕು. ನಾನೀಗಲೇ ರೋಮಹರ್ಷಣನಿಗೆ ಪುನಃ ಜೀವ ನೀಡಿ, ತೋಜೋ ಬಲಗಳಿಂದ ಕೂಡಿರುವ ದೀರ್ಘಾಯುಸ್ಸನ್ನು ನೀಡಬಲ್ಲೆ. ಅವನಿಗಾಗಿ ಇನ್ನೇನಾದರೂ ವರವನ್ನೂ ನೀಡಬಲ್ಲೆ.”
ಬಲರಾಮನ ಮಾತುಗಳು ಭಗವಂತನು ಸರ್ವ ಸ್ವತಂತ್ರನೆಂದು ದೃಢೀಕರಿಸುತ್ತವೆ. ರೋಮಹರ್ಷಣನನ್ನು ಕೊಂದ ಬಲರಾಮನಿಗೆ ಪುನಃ ಅವನನ್ನು ಬದುಕಿಸಲೂ ಸಾಧ್ಯ. ಆದ್ದರಿಂದ ಸಾಮಾನ್ಯ ಜನರು ಭಗವಂತನ ಕಾರ್ಯಗಳನ್ನು ಅನುಕರಿಸಬಾರದು.
“ಪ್ರಭು”, ಋಷಿಗಳು ಹೇಳಿದರು, “ರೋಮಹರ್ಷಣನನ್ನು ನೀನು ಅಸಾಧಾರಣವಾಗಿ ಕುಶದರ್ಭೆಯಿಂದ ಕೊಂದುದು ಸುಳ್ಳಾಗಬಾರದು. ಅವನನ್ನು ನೀನು ಕೊಲ್ಲ ಬಯಸಿದುದರಿಂದ ಪುನಃ ನೀನು ಅವನನ್ನು ಬದುಕಿಸುವುದು ಬೇಡ. ಆದರೆ ಅಂತೆಯೇ, ಅವನಿಗೆ ದೀರ್ಘಾಯುಸ್ಸನ್ನು ನೀಡಿದ ನಮ್ಮ ವರವೂ ಸುಳ್ಳಾಗಬಾರದು.”
ಈ ಇಬ್ಬಂದಿಯನ್ನು ಪರಿಹರಿಸಲು ಬಲರಾಮನು ಹೇಳಿದನು, “ವೇದವಿಧಿಗಳ ಪ್ರಕಾರ, ಮಗನು ತಂದೆಯ ದೇಹದಿಂದ ಉತ್ಪನ್ನನಾಗುವ ಕಾರಣ, ಅವನು ತಂದೆಯನ್ನು ಪ್ರತಿನಿಧಿಸುತ್ತಾನೆ. ಆದ್ದರಿಂದ ಇನ್ನು ಮುಂದೆ, ರೋಮಹರ್ಷಣನ ಸ್ಥಾನವನ್ನು ಅವನ ಮಗ ಉಗ್ರಶ್ರವಸೂತನು ಅಲಂಕರಿಸಲಿ. ಅವನೇ ಇನ್ನು ಮುಂದೆ ಪುರಾಣ ಪ್ರವಚನ ಮಾಡುತ್ತಾನೆ. ರೋಮಹರ್ಷಣನಿಗೆ ನೀಡಿದ್ದ ಆರೋಗ್ಯ ಬಲ ತೇಜಸ್ಸುಗಳಿಂದ ಕೂಡಿದ ದೀರ್ಘಾಯುಸ್ಸನ್ನು ಉಗ್ರಶ್ರವನು ಅನುಭವಿಸುತ್ತಾನೆ. ಋಷಿವರ್ಯರೇ, ಇಷ್ಟೇ ಅಲ್ಲದೆ ಇನ್ನೇನಾದರೂ ವರ ಬೇಕಿದ್ದರೆ ಕೇಳಿಕೊಳ್ಳಿ.”
ಋಷಿಗಳು ಹೇಳಿದರು, “ಪ್ರಭು, ಇಲ್ಲಿಯೇ ಸನಿಹದಲ್ಲಿ ಬಲ್ವಲನೆಂಬ ರಾಕ್ಷಸನಿದ್ದಾನೆ. ಅವನು ಇಲ್ವಲನೆಂಬ ರಾಕ್ಷಸನ ಮಗ. ಮಹಾಶಕ್ತಿವಂತನಾದ ಅವನು ಈ ಯಜ್ಞಸ್ಥಳಕ್ಕೆ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಬಂದು ಈ ಸ್ಥಳವನ್ನು ಅಪವಿತ್ರಗೊಳಿಸುತ್ತಾನೆ. ಅವನು ರಕ್ತ, ಮಾಂಸ, ಮದ್ಯ, ಮಲ ಮೂತ್ರಾದಿಗಳನ್ನು ಸುರಿದು ಯಜ್ಞವನ್ನು ಹಾಳುಗೆಡವುತ್ತಾನೆ. ಈ ಬಲ್ವಲನನ್ನು ಕೊಂದು, ಹನ್ನೆರಡು ತಿಂಗಳುಕಾಲ ನಿನ್ನ ತೀರ್ಥಯಾತ್ರೆ ಮುಂದುವರೆಸು, ಆಗ ನೀನು ಎಲ್ಲಾ ದೋಷಗಳಿಂದಲೂ ಮುಕ್ತನಾಗುವೆ.”
ಬಲರಾಮನು ಇದಕ್ಕೊಪ್ಪಿ ಬಲ್ವಲನೆಂಬ ಆ ರಾಕ್ಷಸನ ಬರುವಿಗಾಗಿ ಕಾದನು. ಬಲ್ವಲನು ಬರುತ್ತಿದ್ದಂತೆ, ಆಕಾಶವೆಲ್ಲಾ ಧೂಳಿನಿಂದ ಮುಚ್ಚಿಹೋಯಿತು. ದೊಡ್ಡ ಚಂಡಮಾರುತವೆದ್ದಿತು. ಎಲ್ಲೆಲ್ಲೂ ದುರ್ಗಂಧ ಹರಡಿತು. ಕೂಡಲೇ ಬಲ್ವಲನು ಆಕಾಶದಲ್ಲಿ ಹಾರಾಡುತ್ತಾ ಮಲ, ಮೂತ್ರ, ರಕ್ತ, ಮಾಂಸಾದಿ ಅಪವಿತ್ರ ವಸ್ತುಗಳ ಮಳೆಗರೆದನು.
ಅನಂತರ, ಒಂದು ದೊಡ್ಡ ತ್ರಿಶೂಲ ಹಿಡಿದು ಅವನು ಕಾಣಿಸಿಕೊಂಡನು. ದೈತ್ಯಾಕಾರದ ಅವನ ದೇಹ, ಇದ್ದಿಲಿನಂತೆ ಕಡುಗಪ್ಪಾಗಿತ್ತು. ಅವನ ತಲೆಗೂದಲೂ ಗಡ್ಡ ಮೀಸೆಗಳೂ ತಾಮ್ರದಂತೆ ಕೆಂಪಾಗಿದ್ದವು. ಅವನನ್ನು ಹೇಗೆ ಸಂಹರಿಸುವುದೆಂದು ಬಲರಾಮನು ಯೋಚಿಸಿ, ತನ್ನ ಗದೆಯನ್ನೂ ಹಲಾಯುಧವನ್ನೂ ಸ್ಮರಿಸಿದನು.
ಆ ದಿವ್ಯಾಯುಧದಿಂದ ಆಕಾಶದಲ್ಲಿ ಹಾರಾಡುತ್ತಿದ್ದ ರಾಕ್ಷಸನನ್ನು ಕೆಳಗೆಳೆದು, ಅವನ ತಲೆಯನ್ನು ತನ್ನ ಗದೆಯಿಂದ ಬಡಿದನು. ಆ ಏಟಿನಿಂದ ಬಲ್ವಲನ ತಲೆಯೊಡೆದು, ರಕ್ತ ಸುರಿಯತೊಡಗಿತು. ಭಯಂಕರವಾಗಿ ಕಿರುಚುತ್ತಾ ಆ ರಾಕ್ಷಸನು ನೆಲಕ್ಕುರುಳಿ ಸತ್ತನು. ಸಿಡಿಲಿನ ಬಡಿತಕ್ಕೆ ಸಿಕ್ಕಿ ಕೆಂಪು ಪರ್ವತವೊಂದು ಚೂರಾಗಿ ಕೆಳಗೆ ಬೀಳುವಂತೆ ಬಲ್ವಲನು ಉರುಳಿ ಬಿದ್ದನು.
ಬಲ್ವಲನ ಸಂಹಾವಾಗಲು, ಋಷಿ ಮುನಿಗಳು ಬಹಳ ಸಂತೋಷಗೊಂಡರು. ಅವರು ಬಲರಾಮನನ್ನು ಸುತ್ತಿಸಿ, ಅವನ ಯಾವ ಕೆಲಸ ಮಾಡಿದರೂ ಅದು ನಿರ್ವಿಘ್ನವಾಗಿ ನೆರವೇರುವಂತೆ ಆಶೀರ್ವದಿಸಿದರು. ಅನಂತರ, ವಿಜಯಶಾಲಿಯಾದ ಇಂದ್ರನಿಗೆ ದೇವತೆಗಳು ಮಂಗಳಸ್ನಾನ ಮಾಡಿಸುವಂತೆ, ಋಷಿಗಳು ಬಲರಾಮನಿಗೆ ಮಂಗಳಸ್ನಾನ ಮಾಡಿಸಿದರು. ಆ ಬಳಿಕ, ಅವರು ಅವನಿಗೆ ನೂತನ ವಸ್ತ್ರಾಭರಣಗಳನ್ನೂ ಎಂದೆಂದೂ ಬಾಡದ ಕಮಲ ಹೂಗಳ ಮಾಲೆಯನ್ನೂ ಅರ್ಪಿಸಿದರು.
ತೀರ್ಥಯಾತ್ರೆ
ಈ ಘಟನಾವಳಿಯ ನಂತರ, ಬಲರಾಮನು ತನ್ನ ತೀರ್ಥಯಾತ್ರೆಯನ್ನು ಮುಂದುವರೆಸಿದನು. ತನ್ನೊಂದಿಗೆ ಕೆಲವು ಬ್ರಾಹ್ಮಣರನ್ನು ಕರೆದುಕೊಂಡು ಸರಯೂ ನದಿಯ ತೀರದ ದೇವಾಲಯಗಳನ್ನು ಸಂದರ್ಶಿಸಿದನು. ಅನಂತರ ಅವನು ಪುಲಹಾಶ್ರಮವನ್ನು ಭೇಟಿ ಮಾಡಿ, ಗಂಡಕೀ, ಗೋಮತೀ, ವಿಪಾಶಾ ಶೋಣಾ ನದಿಗಳನ್ನು ಸಂದರ್ಶಿಸಿ ಅಲ್ಲಿ ಪವಿತ್ರ ಸ್ನಾನ ಮಾಡಿದನು. ಅವನು ಗಯೆಗೆ ಬಂದಾಗ, ಅಲ್ಲಿನ ವಿಷ್ಣು ಮಂದಿರಕ್ಕೆ ಭೇಟಿ ನೀಡಿ, ತನ್ನ ಪಿತೃಗಳಿಗೆ ತರ್ಪಣ ನೀಡಿದನು.
ಆನಂತರ ಅವನು ಗಂಗೆಯು ಸಾಗರವನ್ನು ಸೇರುವ ಗಂಗಾ ಸಾಗರವೆಂಬ ಪುಣ್ಯಕ್ಷೇತ್ರಕ್ಕೆ ಹೋದನು. ಅಲ್ಲಿಂದ ಅವನು ಮಹೇಂದ್ರ ಪರ್ವತಕ್ಕೆ ಹೋಗಿ, ಪರಶುರಾಮರನ್ನು ಭೇಟಿಯಾದನು. ಅವರಿಗೆ ಭಕ್ತಿಯಿಂದ ನಮಸ್ಕರಿಸಿ ಮುಂದೆ ನಡೆದನು. ದಕ್ಷಿಣ ಭಾರತದೆಡೆಗೆ ಪಯಣಿಸುತ್ತಾ ಗೋದವರೀ, ವೇಣಾ, ಪಂಪಾ, ಭೀಮರಥೀ ನದಿಗಳನ್ನು ಸಂದರ್ಶಿಸಿದನು. ಭೀಮರಥಿಯ ದಂಡೆಯ ಮೇಲೆ ಕಾರ್ತಿಕೇಯ ದೇವನ ಮಂದಿರವನ್ನು ದರ್ಶಿಸಿ, ಶೈಲಪುರಕ್ಕೆ ಹೋದನು.
ಆ ಬಳಿಕ, ಅವನು ದ್ರಾವಿಡದೇಶಕ್ಕೆ ಪಯಣಿಸಿ, ವೆಂಕಟಾಚಲ, ವಿಷ್ಣು ಕಾಂಚೀ, ಶಿವಕಾಂಚೀಗಳನ್ನು ಸಂದರ್ಶಿಸಿ ಕಾವೇರಿ ನದಿಯಲ್ಲಿ ಮಿಂದು ಶ್ರೀರಂಗಕ್ಷೇತ್ರಕ್ಕೆ ಹೋದನು. ಅಲ್ಲಿ ಶ್ರೀರಂಗನಾಥ ಸ್ವಾಮಿಯ ದರ್ಶನ ಪಡೆದು, ಮಧುರೆಗೆ ಹೋದನು. ಆನಂತರ ಶ್ರೀರಾಮಚಂದ್ರನು ಲಂಕೆಗೆ ಹೋಗಲು ಸೇತುವೆ ನಿರ್ಮಿಸಿದ್ದ ಸ್ಥಳವಾದ ಸೇತುಬಂಧನ (ರಾಮೇಶ್ವರ)ಕ್ಕೆ ಹೋಗಿ ಅಲ್ಲಿದ್ದ ಅಗಸ್ತ್ಯ ಮುನಿಗಳಿಗೆ ವಂದಿಸಿ ಅವನ ಆಶೀರ್ವಾದ ಪಡೆದನು. ಅನಂತರ ಬಲರಾಮನು ಕನ್ಯಾಕುಮಾರಿ, ಪಾಲ್ಗುಣ ತೀರ್ಥ, ಪಂಚಾಪ್ಸರಸ ಮೊದಲಾದ ತೀರ್ಥಗಳನ್ನು ಸಂದರ್ಶಿಸಿದ.

ಅನಂತರ ಅವನು ಕೇರಳಕ್ಕೆ ಭೇಟಿ ನೀಡಿದ. ಅಲ್ಲಿಂದ ಶೈವ ಕ್ಷೇತ್ರವಾದ ಗೋಕರ್ಣಕ್ಷೇತ್ರಕ್ಕೆ ಹೋದ. ಅನಂತರ ದ್ವೀಪದಲ್ಲಿದ್ದ ಆರ್ಯಾದೇವಿಯ ಆಲಯವನ್ನು ಸಂದರ್ಶಿಸಿ, ಶೂರ್ಪಾರಕವೆಂಬ ಪುಣ್ಯ ಸ್ಥಳಕ್ಕೆ ಹೋದನು. ಅನಂತರ ಅವನು ತಾಪೀ, ಪಯೋಷ್ಣೀ, ನಿರ್ವಿಂಧ್ಯಾ ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ, ಶ್ರೀ ರಾಮನು ಹಿಂದೆ ವನವಾಸ ಮಾಡಿದ್ದ ದಂಡಕಾರಣ್ಯಕ್ಕೆ ಹೋದನು.
ಅನಂತರ ಅವನು ನರ್ಮದಾ ನದಿಗೆ ಹೋಗಿ, ಅದರ ದಂಡೆಯ ಮೇಲಿರುವ ಮಾಹಿಷ್ಮತೀ ಪುರಿಯನ್ನು ಸಂದರ್ಶಿಸಿದ. ಅನಂತರ ಅವನು ತಾನು ತೀರ್ಥಯಾತ್ರೆ ಆರಂಭಿಸಿದ್ದ ಪ್ರಭಾಸಕ್ಷೇತ್ರಕ್ಕೆ ಹಿಂದಿರುಗಿದ.
ಬಲರಾಮನಿಗೆ ಭೀಮ, ದುರ್ಯೋಧನರ ಯುದ್ಧ ನಿರರ್ಥಕವೆಂದು ತೋರಿತು. ಯುದ್ಧವನ್ನು ನಿಲ್ಲಿಸಬೇಕೆಂಬ ಆಸೆಯಿಂದ ಅವನು ಇಬ್ಬರಿಗೂ ತಿಳಿ ಹೇಳಿದನು. “ಭೀಮ! ದುರ್ಯೋಧನ! ನೀವಿಬ್ಬರೂ ಒಳ್ಳೆಯ ಯುದ್ಧ ಪಟುಗಳು; ಮಹಾವೀರರು; ಆದರೆ ನನಗನಿಸುತ್ತದೆ, ಭೀಮ ಬಲದಲ್ಲಿ ಹೆಚ್ಚಾದರೆ, ದುರ್ಯೋಧನ ಗದಾಯುದ್ಧ ಕೌಶಲ್ಯದಲ್ಲಿ ಹೆಚ್ಚು. ಆದ್ದರಿಂದ ನಿನ್ನ ಯುದ್ಧದಲ್ಲಿ ಯಾರೊಬ್ಬರೂ ಸೋಲಲು ಸಾಧ್ಯವಿಲ್ಲ.
ಅದಕ್ಕಾಗಿಯೇ ನಾನು ಕೇಳಿಕೊಳ್ಳುತ್ತೇನೆ, ಈ ನಿರರ್ಥಕ ಯುದ್ಧವನ್ನು ದಯವಿಟ್ಟು ನಿಲ್ಲಿಸಿ” ಬಲರಾಮನ ಉಪದೇಶ ಭೀಮ, ದುರ್ಯೋಧನರಿಗೆ ರುಚಿಸಲಿಲ್ಲ. ಅವರು ಪರಸ್ಪರ ಯುದ್ಧ ಮಾಡಲೇಬೇಕೆಂಬ ದೃಢ ನಿರ್ಧಾರ ಮಾಡಿದ್ದರು. ಬಲರಾಮನು ಹೆಚ್ಚೇನೂ ಹೇಳದೆ ದ್ವಾರಕೆಗೆ ಹಿಂದಿರುಗಿದನು.
ಬಲರಾಮನು ದ್ವಾರಕೆಗೆ ಹಿಂದಿರುಗಲು, ಉಗ್ರಸೇನನೇ ಮೊದಲಾಗಿ, ಹಿರಿಯರೂ, ಸ್ನೇಹಿತರೂ ಅವನನ್ನು ಆದರದಿಂದ ಸ್ವಾಗತಿಸಿದರು. ಅನಂತರ ಬಲರಾಮನು ಪುನಃ ನೈಮಿಷಾರಣ್ಯಕ್ಕೆ ಹೋದನು. ಅಲ್ಲಿನ ಬ್ರಾಹ್ಮಣರೂ, ಋಷಿಗಳೂ ಎದ್ದು ನಿಂತು ಅವನನ್ನು ಸ್ವಾಗತಿಸಿದರು. ಬಲರಾಮನು ಕ್ಷತ್ರಿಯನಾಗಿದ್ದರೂ ರಕ್ತಪಾತವನ್ನಿಷ್ಟಪಡದೆ ಯುದ್ಧದಿಂದ ವಿಮುಖನಾಗಿದ್ದನು. ಸದಾ ಶಾಂತಿಯನ್ನಿಷ್ಟಪಡುತ್ತಿದ್ದ ಋಷಿಮುನಿಗಳಿಗೆ ಅವನ ನಿರ್ಧಾರದಿಂದ ಬಹಳ ಸಂತೋಷವಾಗಿತ್ತು.
ಎಲ್ಲರೂ ಅವನನ್ನು ಪ್ರೀತಿಯಿಂದ ಆಲಂಗಿಸಿಕೊಂಡರು. ಅವನಿಗೆ ವಿವಿಧ ಯಜ್ಞಗಳನ್ನು ಮಾಡುವಂತೆ ಸಲಹೆಯಿತ್ತರು. ಭಗವಂತನಾದ ಬಲರಾಮನು ಸ್ವಯಂ ಯಜ್ಞಗಳ ಭೋಕ್ಷವೇ ಆಗಿದ್ದನು. ಅವನೇನೂ ಯಜ್ಞಗಳನ್ನು ಮಾಡುವ ಅಗತ್ಯವಿರಲಿಲ್ಲ. ಆದರೆ ಜನರು ವೇದ ವಿಧಿಗಳನ್ನು ಹೇಗೆ ಪಾಲಿಸಬೇಕೆಂದು ನಿರೂಪಿಸಲು ಅವನು ಅನೇಕ ಯಜ್ಞಗಳನ್ನು ಮಾಡಿದನು. ಆ ಸಮಯದಲ್ಲಿ ಅವನು ಅಲ್ಲಿದ್ದ ಋಷಿಮುನಿಗಳೆಲ್ಲರಿಗೂ ಜ್ಞಾನೋಪದೇಶ ಮಾಡಿದನು.
ಭಗವಂತನಿಗೂ, ಜೀವಿಗಳಿಗೂ, ವಿಶ್ವಕ್ಕೂ ಇರುವ ಸಂಬಂಧ, ಭಗವಂತನು ಹೇಗೆ ಪರಮಾತ್ಮನಾಗಿ ಎಲ್ಲೆಲ್ಲೂ ಇರುವನು, ಮೊದಲಾದ ವಿಷಯಗಳ ಬಗ್ಗೆ ಅವರಿಗೆ ಉಪದೇಶ ಮಾಡಿದನು. ಯಜ್ಞಗಳ ಆಚರಣೆಯಾದ ಬಳಿಕ, ಅವನು ಅವಭೃಥ ಸ್ನಾನ ಮಾಡಿ, ನೂತನ ವಸ್ತ್ರಾಭರಣಗಳನ್ನು ಧರಿಸಿದನು. ಆಗ ಅವನು, ತಾರೆಗಳ ನಡುವೆ ಶೋಭಿಸುವ ಪೂರ್ಣಚಂದ್ರನಂತೆ ಕಂಗೊಳಿಸಿದನು.
ಭೀಮ, ದುರ್ಯೋಧನರ ಯುದ್ಧದಲ್ಲಿ ಭೀಮನಿಗೆ ಗೆಲುವಾಯಿತು. ಅಲ್ಲಿಗೆ ಕೌರವರೆಲ್ಲರೂ ಹತರಾದಂತಾಯಿತು. ಯುಧಿಷ್ಠಿರನು ಸಾರ್ವಭೌಮನಾಗಿ ಪಟ್ಟಾಭಿಷಿಕ್ತನಾದನು. ಭೂ ಭಾರವು ಬಹುಮಟ್ಟಿಗೆ ಕಡಿಮೆಯಾಗಿತ್ತು. ಆದರೆ ಶೌರ್ಯ ಪರಾಕ್ರಮಗಳಿಂದ ಅಹ೦ಕಾರಕ್ಕೊಳಗಾಗಿದ್ದ ಯಾದವರು ಅಳಿಯುವವರೆಗೂ ಭೂಭಾರ ಕಡಿಮೆಯಾಗುವಂತಿರಲಿಲ್ಲ. ಆದರೆ ಯಾರಿಂದಲೂ ಜಯಿಸಲಶಕ್ಯರಾದ ಯಾದವರು ತಮ್ಮ ತಮ್ಮಲ್ಲೇ ಕಲಹ ಮಾಡಿ ಅಳಿಯ ಬೇಕಿತ್ತು. ಈ ಕಾರ್ಯವನ್ನು ಸಂಕಲ್ಪಿಸಿದ ಭಗವಂತನು ಅದಕ್ಕೊಂದು ನಿಮಿತ್ತವುಂಟುಮಾಡಿದ.
ಒಮ್ಮೆ, ಅಸಿತ, ದೇವಲ, ವಿಶ್ವಾಮಿತ್ರ, ನಾರದ, ಮೊದಲಾದ ಋಷಿಗಳು ದ್ವಾರಕೆಯ ಬಳಿಯ ಪಿಂಡಾರಕ ಕ್ಷೇತ್ರಕ್ಕೆ ಆಗಮಿಸಿದರು. ಆಗ ಕೆಲವು ತುಂಟ ಯಾದವರು ತಮಾಷೆಗಾಗಿ, ಸಾಂಬನಿಗೆ ಸೀರೆಯನ್ನುಡಿಸಿ ಆ ಮುನಿಗಳ ಬಳಿಗೆ ಕರೆದೊಯ್ದರು. ಸ್ತ್ರೀ ವೇಷದ ಸಾಂಬನು ಗರ್ಭಿಣಿಯೆಂದು ಹೇಳಿ, “ಅವಳಿಗೆ” ಎಂಥ ಮಗುವು ಜನಿಸುವುದೆಂದು ಅವರನ್ನು ಕೇಳಿದರು. ಕೋಪಗೊಂಡ ಅವರು, ಅವಳಿಗೆ ಒಂದು ಒನಕೆ ಜನಿಸುವುದೆಂದೂ ಅದರಿಂದ ಅವರ ಕುಲವೇ ನಾಶವಾಗುವುದೆಂದೂ ಶಪಿಸಿದರು!
ಯಾದವರು ಸಾಂಬನ ಸೀರೆಯನ್ನು ಬಿಚ್ಚಲು, ಅಲ್ಲಿ ನಿಜವಾಗಿಯೂ ಒಂದು ಒನಕೆಯಿತ್ತು! ಹೆದರಿ ಕಂಗಾಲಾದ ಯಾದವರು, ಉಗ್ರಸೇನನ ಬಳಿ ಎಲ್ಲವನ್ನೂ ವಿವರಿಸಿದರು. ಉಗ್ರಸೇನನು ಆ ಒನಕೆಯನ್ನು ಪುಡಿ ಮಾಡಿ, ಸಾಗರದಲ್ಲಿ ಆ ಪುಡಿಯನ್ನು ಚೆಲ್ಲಿಬಿಡಲು ಆಜ್ಞೆ ಮಾಡಿದನು. ಯಾದವರು ಹಾಗೆಯೇ ಮಾಡಿದರು. ಆದರೆ ಆ ಒನಕೆಯ ಚೂರುಗಳು, ಸಾಗರದ ಅಲೆಗಳೊಂದಿಗೆ ತೇಲಿ ಬಂದು, ಅವರ ತೀರದಲ್ಲಿ ಜೊಂಡುಹುಲ್ಲಾಗಿ ಬೆಳೆದವು!
ಯಾದವರ ಅಂತರ್ಧಾನ

ಒಂದು ದಿನ ಯಾದವರೆಲ್ಲರೂ ಪ್ರಭಾಸ ಕ್ಷೇತ್ರಕ್ಕೆ ಹೋದರು. ಅಲ್ಲಿ ಅವರು ಕಂಠಪೂರ್ತಿ ಮದ್ಯಪಾನ ಮಾಡಿ ಮತ್ತರಾದರು. ಮಾತಿಗೆ ಮಾತು ಬೆಳೆದು ಒಬ್ಬರು ಇನ್ನೊಬ್ಬರೊಂದಿಗೆ ಕಲಹಕ್ಕಿಳಿದರು. ತಮ್ಮ ಆಯುಧಗಳಿಂದ ಹೊಡೆದಾಡತೊಡಗಿದರು! ಆಯುಧಗಳೆಲ್ಲವೂ ಮುಗಿದು ಹೋಗಲು, ಸಮುದ್ರ ತೀರದಲ್ಲಿದ್ದ ಜೊಂಡು ಹುಲ್ಲನ್ನೇ ಕಿತ್ತು ಹೊಡೆದಾಡತೊಡಗಿದರು!
ಆ ಹುಲ್ಲು ವಿವಿಧ ಆಯುಧಗಳಾಗಿ ರೂಪಾಂತರ ಹೊಂದುತ್ತಿತ್ತು! ಯಾದವರು ತಮ್ಮತಮ್ಮಲ್ಲೇ ಶತ್ರುಗಳಂತೆ ಕಾದಾಡಿದರು. ಆಗ ಕ್ರುದ್ಧರಾದ ಕೃಷ್ಣ ಬಲರಾಮರು, ತಾವೂ ಅನೇಕ ಯಾದವವೀರರನ್ನು ಸಂಹರಿಸಿದರು!
ಯಾದವ ವೀರರ ಸಂಹಾರವಾಗಲು, ಭೂಭಾರವು ಪೂರ್ಣವಾಗಿ ಕಡಿಮೆಯಾಯಿತೆಂದು ಭಗವಂತನಿಗೆ ಸಮಾಧಾನವಾಯಿತು. ಆದರೆ ಅವನಿಗೆ ಬಲರಾಮನು ಎಲ್ಲಿಯೂ ಕಾಣಲಿಲ್ಲ. ಬಲರಾಮನನ್ನು ಶ್ರೀ ಕೃಷ್ಣನು ಹುಡುಕಿಕೊಂಡು ಹೋಗಿ ನೋಡಲು, ಅವನು ಸಮುದ್ರ ತೀರದಲ್ಲಿ ಯೋಗಯುಕ್ತನಾಗಿ ಕುಳಿತಿದ್ದನು.
ಶ್ರೀ ಕೃಷ್ಣನು ನೋಡ ನೋಡುತ್ತಿದ್ದಂತೆ ಅವನ ಬಾಯಿಂದ ಸಾವಿರ ಹೆಡೆಗಳ ಶ್ವೇತ ಸರ್ಪವೊಂದು ಹೊರಟಿತು! ಅದು ನಿಧಾನವಾಗಿ ಚಲಿಸುತ್ತಾ, ಸಮುದ್ರದೊಳಗೆ ಸೇರಿಹೋಯಿತು! ಬಲರಾಮನು ಆದಿಶೇಷನಾಗಿದ್ದನು. ತನ್ನ ಅವತಾರ ಕಾರ್ಯವನ್ನು ಮುಗಿಸಿ, ತನ್ನ ದಿವ್ಯ ಧಾಮಕ್ಕೆ ಮರಳಿದನು.
ಬಲರಾಮನು ತನ್ನ ಅವತಾರವನ್ನು ಕೊನೆಗೊಳಿಸಿದುದನ್ನು ಕಂಡ ಶ್ರೀ ಕೃಷ್ಣನು, ತನ್ನ ಅವತಾರವೂ ಮುಗಿಯುವ ಅವಧಿಯಾಯಿತೆಂದು ಅರಿತು, ನಿಧಾನವಾಗಿ ಮುನ್ನಡೆದನು.
ಬಲರಾಮನು ಸಾಕ್ಷಾತ್ ಅನಂತನು, ಆದಿ, ಅಂತ್ಯಗಳಿಲ್ಲದ ಅವನು, ಮನಸ್ಸು ಮಾತುಗಳಿಗೆ ನಿಲುಕದ ದೇವೋತ್ತಮ ಪರಮ ಪುರುಷನು. ಮಾನವ ಮಾತ್ರನಂತೆ ಅವತರಿಸಿದ ಅವನು ಹಲವಾರು ಲೀಲೆಗಳನ್ನು ನಡೆಸಿದನು. ಭಗವಂತನ ಮತ್ತು ಅವನ ಅವತಾರ ರೂಪಗಳ ಲೀಲೆಗಳು ದಿವ್ಯ ಸ್ವರೂಪವುಳ್ಳವು ಆದ್ದರಿಂದ ಬಲರಾಮನ ಲೀಲೆಗಳನ್ನು ಪ್ರಾತಃ ಕಾಲ, ಸಾಯಂಕಾಲಗಳಲ್ಲಿ ಕೀರ್ತಿಸುವವರು ಭಗವದ್ಭಕ್ತರಾಗಿ ಸರ್ವಾರ್ಥ ಸಿದ್ಧಿ ಪಡೆಯುವರು.
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ||






Leave a Reply