ಸುಂದರ ಪತ್ನಿ, ಲಕ್ಷಾಂತರ ರೂಪಾಯಿಗಳ ಆಸ್ತಿ, ಕೈಗೊಂದು ಕಾಲಿಗೊಂದು ಆಳು, ಐಷಾರಾಮಿ ಜೀವನ – ಇವೆಲ್ಲವನ್ನೂ ಪಡೆಯಬೇಕೆಂಬುದು ಜನಸಾಮಾನ್ಯನ ಕನಸು. ಆದ್ದರಿಂದಲೇ ಅವನು ‘ಜನ ಸಾಮಾನ್ಯ’̤ ಲೌಕಿಕ ಆಸೆಗಳನ್ನು ದೂರ ಮಾಡಿ ತ್ಯಾಗವೇ ಜೀವನದ ಆಧಾರ, ವೈರಾಗ್ಯವೇ ಭಗವದ್ಭಕ್ತಿಯ ಕುರುಹು ಎಂದು ಬಗೆದು ಪರಮ ಪುರುಷನಲ್ಲಿಯೇ ತಲ್ಲೀನನಾದವನೇ ಮಹಾತ್ಮ.

ಶ್ರೀ ಚೈತನ್ಯರ ಶಿಷ್ಯರೆಲ್ಲರೂ ಅಂತಹ ಮಹಾತ್ಮರೇ. ಸ್ವತಃ ಶ್ರೀ ಚೈತನ್ಯರು ‘ವೈರಾಗ್ಯಾ ವಿದ್ಯ ನಿಜ ಭಕ್ತಿಯೋಗ’ ಎಂದು ಬೋಧಿಸಿದರು. ಆ ಆದರ್ಶಕ್ಕೆ ತಕ್ಕ ಹಾಗೆ ತಮ್ಮ ಜೀವನವನ್ನು ನಡೆಸಿದರು. ಮುಂದಿನ ಪೀಳಿಗೆಯವರಿಗೆ ಶ್ರೀ ಚೈತನ್ಯರ ಬೋಧನೆಯನ್ನೂ, ಆದರ್ಶವನ್ನೂ ನೀಡಿದವರಲ್ಲಿ ಪ್ರಮುಖರಾದವರು ಆರು ಜನ ಗೋಸ್ವಾಮಿಗಳು.
ರೂಪ, ಸನಾತನ, ರಘುನಾಥ, ರಘುನಾಥ ಭಟ್ಟ ಶ್ರೀ ಜೀವ ಹಾಗೂ ಗೋಪಾಲ ಭಟ್ಟ ಇವರೇ ಆ ಗೋಸ್ವಾಮಿಗಳು. ‘ಗೋಸ್ವಾಮಿ’ ಎಂದರೆ – ‘ಗೋ’ ಇಂದ್ರಿಯಗಳ ‘ಸ್ವಾಮಿ’ ಎಂದರ್ಥ. ಇಂದ್ರಿಯಗಳನ್ನು ಜಯಿಸಿದವನೇ ಗೋಸ್ವಾಮಿ.
ಆರು ಜನ ಗೋಸ್ವಾಮಿಗಳಲ್ಲಿ ಒಬ್ಬರಾದ ಶ್ರೀ ರಘುನಾಥ ಗೋಸ್ವಾಮಿಗಳು, ಪೂರ್ವಾಶ್ರಮದಲ್ಲಿ ಬಂಗಾಳದ ದೊಡ್ಡ ಜಮೀನ್ದಾರರ ಸೋದರನಾದ ಗೋವರ್ಧನ ಮಜುಮ್ ದಾರರ ಮಗ. ಕ್ರಿ.ಶ. 1494 ರಲ್ಲಿ ರಘುನಾಥರು ಜನಿಸಿದರು. ಮಜುಮ್ ದಾರ ಮನೆಯವರಿಗೂ ಶ್ರೀ ಚೈತನ್ಯರಿಗೂ ಮೊದಲಿನಿಂದಲೂ ಬಹಳ ದೊಡ್ಡ ನಂಟು.
ಅವರ ಕುಟುಂಬದವರೆಲ್ಲ ಶ್ರೀ ಚೈತನ್ಯರ ಭಕ್ತರಾಗಿದ್ದರು ಮತ್ತು ಪ್ರಚಾರ ಕಾರ್ಯಕ್ಕಾಗಿ ಆಗಾಗ್ಗೆ ದಾನವನ್ನೂ ನೀಡುತ್ತಿದ್ದರು. ಹೀಗಾಗಿ ರಘುನಾಥರು ಮನೆಯ ಭಕ್ತಿಯ ವಾತಾವರಣದಲ್ಲಿಯೇ ಬೆಳೆದರು. ಸ್ವಾಭಾವಿಕವಾಗಿಯೇ ಅವರೂ ಭಕ್ತರಾದರು. ಮನೆಯಲ್ಲಿ ಅವರಿಗೆ ಯಾವುದೇ ಲೌಕಿಕ ಕೊರತೆಯೂ ಇರಲಿಲ್ಲ. ಆದರೆ ಎಲ್ಲ ಲೌಕಿಕ ಸೌಲಭ್ಯಗಳ ಮಧ್ಯೆಯೂ ನೀರಿನಿಂದ ದೂರವಾದ ಮೀನಿನಂತೆ ಅವರಾಗಿದ್ದರು.
ಚಿಕ್ಕಂದಿನಿಂದಲೇ ಶ್ರೀ ಚೈತನ್ಯರ ಭಕ್ತರಾಗಬೇಕೆಂಬ ಆಸೆ ಬೆಳೆಯತೊಡಗಿತು. ಯೌವನಾವಸ್ಥೆಯಲ್ಲಿ ಆ ಆಸೆ ಹೆಮ್ಮರವಾಯಿತು. ದುಡ್ಡು ಗಳಿಸಬೇಕು, ಸುಂದರ ಪತ್ನಿಯನ್ನು ಪಡೆಯಬೇಕು ಎನ್ನುವ ಆಸೆ ಅವರ ಮನಸ್ಸಿನಲ್ಲಿ ಎಂದೂ ಬರಲಿಲ್ಲ. ಬದಲಾಗಿ ಸದಾ ಯಾವಾಗ ಈ ಲೌಕಿಕ ಸಂಕೋಲೆಗಳಿಂದ ಮುಕ್ತನಾಗಿ ಶ್ರೀ ಚೈತನ್ಯರ ಪಾದಗಳಿಗೆ ಸೇರುವೆನೆಂದು ಹಪಹಪಿಸುತ್ತಿದ್ದರು.
ಶ್ರೀ ಚೈತನ್ಯರು ವಾಸ್ತವವಾಗಿದ್ದ ಸಮಯ ಅದು. ರಘುನಾಥ ಗೃಹವನ್ನು ತ್ಯಜಿಸಿ ಪುರಿಗೆ ಹೋದರು. ಆದರೆ ರಘುನಾಥನ ತಂದೆ – ತಾಯಿಯರು ಇದನ್ನು ಒಪ್ಪದೆ ತಮ್ಮ ಮಗನನ್ನು ಒತ್ತಾಯ ಪೂರ್ವಕವಾಗಿ ಮನೆಗೆ ವಾಪಸ್ಸು ತಂದರು. ಎಲ್ಲಿ ಮಗ ಮತ್ತೆ ಓಡಿ ಹೋಗುತ್ತಾನೋ ಎಂದು ಯೋಚಿಸಿ, ಅವರನ್ನು ಕಾವಲು ಕಾಯಲು ಆಳುಗಳನ್ನು ನೇಮಿಸಿದರು.
ಸಂಸಾರದಲ್ಲಿ ಸಿಲುಕಿದರೆ ಅವರ ಮನ ಶ್ರೀ ಚೈತನ್ಯರಿಂದ ದೂರವಾಗಬಹುದೆಂದು ಊಹಿಸಿ, ಅತಿ ಸುಂದರಳಾದ ಯುವತಿಯೊಡನೆ ರಘುನಾಥನರ ವಿವಾಹವನ್ನು ನೆರವೇರಿಸಿದರು. ಒಟ್ಟಿನಲ್ಲಿ ಸ್ವರ್ಗ ಸುಖವನ್ನೇ ರಘುನಾಥರ ಮುಂದಿಟ್ಟರು. ಆದರೆ ಇದಾವುದೂ ಅವರ ಮನಸ್ಸನ್ನು ಭಕ್ತಿ ಮಾರ್ಗದಿಂದ ವಿಚಲಿತಗೊಳಿಸಲಿಲ್ಲ.
ರಘುನಾಥರು ಮನೆಯಿಂದ ಓಡಿ ಹೋಗುವುದು ಅವನನ್ನು ಮತ್ತೆ ಮನೆಗೆ ತರುವುದು ಇದು ನಿತ್ಯದ ಕಾರ್ಯವಾಯಿತು. ಒಮ್ಮೆ ಅವನ ತಾಯಿಯೇ ಬೇಸತ್ತು ‘ರಘುನಾಥನು ಹುಚ್ಚನಾಗಿದ್ದಾನೆ ಅವನನ್ನು ಸರಪಳಿಗಳನ್ನು ಹಾಕಿ ಬಂಧಿಸಿ’ ಎಂದು ಹೇಳಿದ್ದಳು.
ಇದಕ್ಕೆ “ಸ್ವರ್ಗ ಸದೃಶ ಐಶ್ವರ್ಯವಿದೆ, ತಿಂಗಳಿಗೆ ಒಂದು ಲಕ್ಷ ವರಹಗಳ ಸಂಪಾದನೆಯಿದೆ, ಸ್ವರ್ಗದ ಕನ್ಯೆಯೇ ಎನ್ನುವಷ್ಟು ಸುಂದರಳಾದ ಪತ್ನಿಯೂ ಇದ್ದಾಳೆ ಇವಾವುದೂ ರಘುನಾಥನನ್ನು ಬಂಧಿಸಲಾಗಿಲ್ಲ ಎಂದ ಮೇಲೆ ಬರಿಯ ಸರಪಳಿಗಳು ಹೇಗೆ ಅವನನ್ನು ಬಂಧಿಸುತ್ತವೆ? ಶ್ರೀ ಚೈತನ್ಯರ ಅನುಗ್ರಹವನ್ನು ಪಡೆದವನು ಲೌಕಿಕ ಆಸೆಗಳಿಗೆ ಕವಡೆಯ ಕಿಮ್ಮತ್ತನ್ನೂ ನೀಡುವುದಿಲ್ಲ. ಆದ್ದರಿಂದ ಅವನನ್ನು ಬಂಧಿಸಲಾಗದು” ಎಂದು ಗೋಗರೆದ ಗೋವರ್ಧನ ಮಜುಮ್‌ದಾರ.

ರಘುನಾಥರು ಹೀಗೆ ಆಳುಗಳ ಬಂಧನದಲ್ಲಿಯೇ ಆಗಾಗ್ಗೆ ಚೈತನ್ಯರಿದ್ದಲ್ಲಿಗೆ ಓಡಿ ಹೋಗುವುದು ನಡೆಯುತ್ತಲೇ ಇತ್ತು. ಆದರೆ ಶ್ರೀ ಚೈತನ್ಯರು ಅವನನ್ನು ಮನೆಯಲ್ಲೇ ಇರು ಇನ್ನೂ ಸಮಯ ಬಂದಿಲ್ಲ ಎಂದೇ ಹೇಳುತ್ತಿದ್ದರು. ಈ ಮಧ್ಯೆ ಒಮ್ಮೆ ಗೋವರ್ಧನ ಮಜುಮ್ ದಾರರು ನವಾಬನ ಕೋಪಕ್ಕೆ ಸಿಲುಕಿದರು.
ತನ್ನ ತಂದೆ, ಭಾವಂದಿರನ್ನು ರಕ್ಷಿಸುವಲ್ಲಿ ರಘುನಾಥರು ಸಫಲರಾದರು. ಈ ಸಮಯದಲ್ಲೇ ಶ್ರೀಲ ನಿತ್ಯಾನಂದ ಪ್ರಭುಗಳು ಪಾನಿಹಾಟಿ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದರು. ಶ್ರೀ ರಘುನಾಥರು ಉಪಾಯ ಮಾಡಿ ಮನೆಯಿಂದ ಓಡಿ ಹೋಗಿ ಪಾನಿಹಾಟಿ ಗ್ರಾಮವನ್ನು ಸೇರಿದರು. ಶ್ರೀ ನಿತ್ಯಾನಂದರ ಆಜ್ಞೆಯ ಮೇರೆಗೆ ನೆರೆದಿದ್ದ ಭಕ್ತರೆಲ್ಲರಿಗೂ ಅವಲಕ್ಕಿ ಹಾಗೂ ಮೊಸರು, ಹಣ್ಣುಗಳೊಂದಿಗೆ ಮಿಶ್ರಿತವಾದ ಪ್ರಸಾದವನ್ನು ಹಂಚಿದರು. ಲಕ್ಷಾಂತರ ಭಕ್ತರು ಬಂದರೂ ಎಲ್ಲರಿಗೂ ರಘುನಾಥರು ಈ ಪ್ರಸಾದ ವಿತರಣೆಯನ್ನು ನೆರವೇರಿಸಿದರು.
ರಘುನಾಥರು ಕೀರ್ತನೆ, ನರ್ತನೆಗಳಲ್ಲಿ ಪಾಲ್ಗೊಂಡು ಮರುದಿನ ಸಾಮಾನ್ಯ ಕಾಲುದಾರಿಗೆ ಹೋಗದೆ ಕಾಡು ಮೇಡುಗಳ ಹಾದಿಯಲ್ಲಿ ಹೋಗುತ್ತ ಹನ್ನೆರಡು ದಿನಗಳಲ್ಲಿ ಪುರಿಯನ್ನು ತಲಪಿದರು. ಈ ಹನ್ನೆರಡು ದಿನಗಳಲ್ಲಿ ಕೆಲವೊಮ್ಮೆ ನೀರು ಕೂಡ ಸೇವಿಸದೆ ತಮ್ಮ ಪ್ರಯಾಣ ಮುಂದುವರಿಸಿದರು.
ಒಟ್ಟಿನಲ್ಲಿ ಮೂರು ದಿನಗಳಷ್ಟು ಮಾತ್ರ ಚೂರು ಪಾರು ದಾನವಾಗಿ ಪಡೆದ ಪ್ರಸಾದವನ್ನು ಸೇವಿಸುತ್ತಿದ್ದರು. ಕೊನೆಗೆ ಚೈತನ್ಯರನ್ನು ತಲಪಿದರು. ಚೈತನ್ಯರು ರಘುನಾಥರನ್ನು ತಮ್ಮ ಆಪ್ತ ಕಾರ್ಯದರ್ಶಿಯೂ ಪರಮ ವೈರಾಗಿಗಳೂ ಆದ ಸ್ವರೂಪ ವಾಸ ಗೋಮಿಗಳ ಆಶ್ರಯದಲ್ಲಿ ಬಿಟ್ಟರು.
ರಘುನಾಥರು ತಂದೆಯವರು ಕಳುಹಿಸಿದ ಸೇವಕರಿಂದ ತಪ್ಪಿಸಿಕೊಂಡು ಸ್ವರೂಪ ದಾಮೋದರರ ಆಶ್ರಯದಲ್ಲಿ ಸಂನ್ಯಾಸ ಸ್ವೀಕರಿಸಿದರು. ಶ್ರೀ ಚೈತನ್ಯರ ಬೋಧನೆಯಂತೆ ಯಾವುದೇ ಗೌರವಾದರಗಳನ್ನು ಅಪೇಕ್ಷಿಸದೆ, ನಿರ್ಲಿಪ್ತರಾಗಿ ರಾಧಾಕೃಷ್ಣರ ನಾಮ ಸಂಕೀರ್ತನೆಯಲ್ಲಿ ತೊಡಗಿ ಭಿಕ್ಷೆ ಬೇಡುತ್ತ, ಸ್ವಾದಿಷ್ಟ ಅನ್ನ ಆಹಾರಗಳನ್ನೂ ಅಪೇಕ್ಷಿಸದ ಸಂನ್ಯಾಸಾಶ್ರಮದ ಜೀವನವನ್ನು ನಡೆಸಿದರು.
ಸಂನ್ಯಾಸಾಶ್ರಮದ ಕಟ್ಟಳೆಗಳನ್ನು ಅದೆಷ್ಟು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರೆಂದರೆ, ಕಲ್ಲಿನ ಮೇಲಿನ ಗೆರೆಗಳಂತೆ ದೃಢವಾಗಿತ್ತು ಅವರ ಭಕ್ತಿ ಸೇವೆಯ ಅನುಷ್ಟಾನ.
ದಿನವಿಡೀ ಹರಿನಾಮ ಸಂಕೀರ್ತನೆ ಮಾಡುತ್ತಾ ಸಂಜೆ ಹೊತ್ತು ಜಗನ್ನಾಥನ ಸಿಂಹ ದ್ವಾರದ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದರು. ಭಿಕ್ಷೆ ದೊರಕಿದರೆ ಸ್ವಲ್ಪ ಪ್ರಸಾದ ಸೇವನೆ. ಇಲ್ಲದಿದ್ದರೆ ಅಂದು ಅವರ ಉಪವಾಸ. ಹೀಗೆ ಒಂದು ಸಂವತ್ಸರ ಕಳೆದು ಹೋಯಿತು. ಇನ್ನೂ ಪರಿಶುದ್ಧರಾಗಬೇಕೆಂದು ನಿಶ್ಚಯಿಸಿ ಸಿಂಹ ದ್ವಾರದ ಬಳಿಗೆ ಹೋಗದೆ ಯಾವುದಾದರು ಭಕ್ತರು ನೀಡುತ್ತಿದ್ದ ದಾನವನ್ನು ಮಾತ್ರ ಸ್ವೀಕರಿಸಲಾರಂಭಿಸಿದರು.
ಈ ಕಠಿಣ ತಪಸ್ಸಿನಿಂದ ಸಂಪ್ರೀತರಾದ ಚೈತನ್ಯರು ತಮ್ಮ ಗೋವರ್ಧನ ಶಿಲ ಮತ್ತು ಅದರ ಶಂಖಗಳ ಮಾಲೆಯನ್ನು ಇತ್ತರು. ರಘುನಾಥರು ದಿನ ನಿತ್ಯ ಇಪ್ಪತ್ತೆರಡು ಘಂಟೆಗಳ ಕಾಲ ಜಪಿಸುತ್ತಿದ್ದರು. ಒಂದೂವರೆ ಘಂಟೆ ಕಾಲ ಮಾತ್ರ ಮಲಗುತ್ತಿದ್ದರು. ಹೀಗೆ ಪರಮ ವೈರಾಗ್ಯಮಯ ಜೀವನ ನಡೆಸಿದ ಆ ಮಹಾನ್ ಭಕ್ತರಿಗೆ ನಮಿಸೋಣ.
ಪಾನಿಹಾಟಿ ಉತ್ಸವವನ್ನು ಆಚರಿಸೋಣ. ಹರೇ ಕೃಷ್ಣ!
ಬಂಗಾಳದ ಕಲ್ಕತ್ತಾದಿಂದ ಸುಮಾರು 220 ಕಿ.ಮೀ ದೂರದಲ್ಲಿರುವ ಸಣ್ಣ ಪಟ್ಟಣ, ಗಂಗಾ ನದಿ ತಟದಲ್ಲಿ ಪಟ್ಟಣದ ಸ್ಥಾನ. ಈಗಲೂ ಸಹ ಪಾನಿಹಾಟಿಗೆ ಲಕ್ಷಾಂತರ ಭಕ್ತರು ಚಿಡಾದಹಿ ಉತ್ಸವಕ್ಕೆ ಸೇರುತ್ತಾರೆ.






Leave a Reply