“ಕೃಪಣ”ರಾಗದೆ ಕೃಷ್ಣಪ್ರಜ್ಞಾವಂತರಾಗಿ
ಪ್ರಭುಪಾದರನ್ನು ತಾವು ಮೊದಲು ಸಲ ಕಂಡ ಬಗೆಗೆ ಮಹಾಬುದ್ಧಿದಾಸರು ಆಗಾಗ ಹೇಳುತ್ತಿರುತ್ತಾರೆ. ದಾಸರ ಆಗಿನ ಹೆಸರು ರ್ಯಾಂಡಿ ಎಂಬುದಾಗಿದ್ದಿತು. ಆಗ ಅವರು ಕೆಂಚು ಬಣ್ಣದ ನೀಳಕೇಶಿಯಾಗಿದ್ದರು.

ರ್ಯಾಂಡಿ ಸ್ಯಾನ್ ಡೈಗೋ ಸಂಸ್ಥಾನದ ವಿಶ್ವವಿದ್ಯಾಲಯದ ಫುಟ್ಬಾಲ್ ತಂಡದ ಸದಸ್ಯರಾಗಿದ್ದರು, ವಿದ್ಯಾರ್ಥಿಗಳ ಆಡಳಿತ ಮಂಡಳಿಯ ನಾಯಕರಾಗಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಶ್ರೀಮಂತ ತಂದೆ ತಾಯಿಗಳ ಪುತ್ರರಾಗಿದ್ದರು ಈ ರ್ಯಾಂಡಿ. ಒಂದು ದಿನ ಈತ ಲಾಸ್ ಏಂಜಲೀಸ್ನ ದೇವಾಲಯದಲ್ಲಿ ನಡೆಯುತ್ತಿದ್ದ ಸಾಮೂಹಿಕ ಕೀರ್ತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡುತ್ತಿದ್ದಾಗ, ಪ್ರಭುಪಾದರಿದ್ದ ಮೇಲಿನ ಕೋಣೆಗೆ ಬರಬೇಕೆಂದು ಆಹ್ವಾನ ಬಂತು.
ಈ ಸೂಚನೆ ರ್ಯಾಂಡಿಗೆ ಒಪ್ಪಿಗೆಯಾಯಿತೇನೋ ಹೌದು. ಆದರೆ ಪ್ರಭುಪಾದರ ಕೋಣೆಯಲ್ಲಿ ಅವರೊಬ್ಬರೇ ಅಂದಿನ ಅತಿಥಿಯಾಗಿದ್ದುದು ಅವನ ಗಮನಕ್ಕೆ ಬಂತು.
ಸಂನ್ಯಾಸಿಗಳು ಹಾಗೂ ಆಡಳಿತ ನಿರ್ವಾಹಕ ಮಂಡಳಿಯ ತಮ್ಮ ಶಿಷ್ಯರ ನಡುವೆ ಪ್ರಭುಪಾದರು ಅವರ ಕಿರು ಮೇಜಿನ ಮುಂದೆ ಕುಳಿತಿದ್ದರು. ಅಲ್ಲಿದ್ದ ಯಾರಿಗೂ ರ್ಯಾಂಡಿಯ ಪರಿಚಯವಿರಲಿಲ್ಲ. ಆ ಕೋಣೆಯ ಪರಿಸರಕ್ಕೆ ಹೊಂದಿಕೊಳ್ಳಲು ರ್ಯಾಂಡಿಯು ಪ್ರಯಾಸ ಪಡುತ್ತಿದ್ದಂತೆಯೇ ಪ್ರಭುಪಾದರು “ಕೃಪಣರಾಗಿರಬೇಕೇಕೆ?” ಎಂದು ಕೇಳಿದರು.
“ಕೃಪಣ ಎಂದರೇನಿರಬಹುದು?” ಎಂದು ರ್ಯಾಂಡಿ ಆಲೋಚಿಸುತ್ತಿದ್ದಂತೆಯೇ ಪ್ರಭುಪಾದರು “ಕೃಪಣ ಎಂದರೆ ಜಿಪುಣ, ಜೀನ” ಎಂದರು. ತನ್ನ ಕುಟುಂಬದ ಶ್ರೀಮಂತಿಕೆ, ತಾನೂ ಹಾಗೂ ತನ್ನ ತಾಯಿ ತಂದೆಯವರು ತಮಗಿರುವ ಸಂಪತ್ತನ್ನು ಬಳಸಲು ಹಾಕಿಕೊಂಡಿದ್ದ ಯೋಜನೆಗಳೆಲ್ಲವೂ ರ್ಯಾಂಡಿಯ ಸ್ಮೃತಿಪಟಲದ ಮೇಲೆ ಸುಳಿದುಹೋಯಿತು.
ಇತ್ತ ಪ್ರಭುಪಾದರು ಕೃಪಣ ಬುದ್ಧಿಯ ಬಗೆಗೆ ಮಾತನಾಡುತ್ತಲೇ ಇದ್ದರು. ತಮ್ಮೊಳಗೆ ಪುಟಿದೇಳುತ್ತಿದ್ದ ಪ್ರತಿಭಟನಾತ್ಮಕ ಆಲೋಚನೆಗಳನ್ನು ಮುರಿಯಲು ತಮ್ಮ ಮನಸ್ಸನ್ನೇ ಉದ್ದೇಶಿಸಿ ಪ್ರಭುಪಾದರು ಮಾತಾಡುತ್ತಿದ್ದಾರೋ ಹೇಗೆಂಬ ಅನುಮಾನ ಇಷ್ಟು ಹೊತ್ತಿಗೆ ರ್ಯಾಂಡಿಯ ತಲೆಯನ್ನು ಹೊಕ್ಕಿತ್ತು. ರ್ಯಾಂಡಿಯ ಮೊಂಡು ಆಲೋಚನೆಗಳ ಹಾಗೂ ಪ್ರಭುಪಾದರ ಹರಿತವಾದ ಮಾತುಗಳ ನಡುವೆ ಒಂದು ಸಂಭಾಷಣೆಯೇ ನಡೆಯುತ್ತಿತ್ತೇನೋ ಎನ್ನುವ ಹಾಗಿತ್ತು ಆಗಿನ ಒಟ್ಟು ಸಂದರ್ಭ.

ಗೋಡೆಗೆ ಒರಗಿಕೊಂಡು ಕುಳಿತಿದ್ದ ರ್ಯಾಂಡಿಯತ್ತ ನೋಡುತ್ತ ಪ್ರಭುಪಾದರು, “ಕೃಷ್ಣನು ನಿಮಗೆ ಸಾಮರ್ಥ್ಯ, ಸಂಪತ್ತು ಹಾಗೂ ಸಮೃದ್ಧಿಗಳನ್ನು ದಯಪಾಲಿಸಿದ್ದಾನೆ. ಈ ಎಲ್ಲವನ್ನೂ ನೀವು ಕೃಷ್ಣನ ಸೇವೆಗಾಗಿಯೇ ವಿನಿಯೋಗ ಮಾಡಬೇಕು. ನಿಮಗಿರುವ ಸಂಪತ್ತು ಇತ್ಯಾದಿಯನ್ನು ನೀವು ನಿಮ್ಮ ವೈಯಕ್ತಿಕ ಇಂದ್ರಿಯ ತೃಪ್ತಿಗಾಗಿ ಬಳಸಿದರೆ ಅದು ಶುದ್ಧ ಕೃಪಣತನ. ನೀವು ಕೃಷ್ಣಪ್ರಜ್ಞೆಯನ್ನು ಸ್ವೀಕರಿಸದೆ ಇದ್ದುಬಿಟ್ಟರೆ ನಿಮಗೆ ಒದಗಿ ಬಂದಿರುವ ಮನುಷ್ಯ ಜನ್ಮವನ್ನು ಹಾಳು ಮಾಡಿಕೊಳ್ಳುತ್ತೀರಷ್ಟೆ” ಎಂದರು.
ಮಾತು ಮುಂದುವರಿಸಿದ ಪ್ರಭುಪಾದರು ಭಕ್ತಿಸೇವಾ ಪ್ರಕ್ರಿಯೆಯನ್ನು ವಿವರಿಸುತ್ತಲೇ ಇದ್ದರು. ಇಷ್ಟು ಹೊತ್ತಿಗೆ ರ್ಯಾಂಡಿಯು ತಮ್ಮ ಹಮ್ಮನ್ನೂ, ರಕ್ಷಣಾತ್ಮಕ ಸ್ವಭಾವವನ್ನೂ ಸ್ವಲ್ಪಮಟ್ಟಿಗೆ ಪುನರ್ಗಳಿಸಿಕೊಂಡಿದ್ದರು. ಪ್ರಭುಪಾದರು ತಮ್ಮನ್ನು ಕೃಪಣನೆಂದು ಕರೆದು ಅವಮಾನಕ್ಕೆ ಈಡು ಮಾಡಿದರಲ್ಲ ಎಂಬ ಭಾವನೆ ರ್ಯಾಂಡಿಯಲ್ಲಿ ಬಲಿಯುತ್ತಿತ್ತು.
ತಮ್ಮ ಒಳತೋಟಿಯನ್ನು ಅರಿಯುವಲ್ಲಿ ಪ್ರಭುಪಾದರು ಯಶಸ್ವಿಯಾಗಿದ್ದರು ಎಂಬುದನ್ನು ರ್ಯಾಂಡಿ ತಮ್ಮಲೇ ನಿಶ್ಚಯಿಸಿಕೊಂಡರು. ಪ್ರಭುಪಾದರು ನಿಜವಾಗಿಯೂ ಸಿದ್ಧಪುರುಷರೇ ಆಗಿದ್ದ ಪಕ್ಷದಲ್ಲಿ ಅವರಿಗೆ ತನ್ನ ಭವಿಷ್ಯವೂ ಗೊತ್ತಾಗಬೇಕಲ್ಲ ಎಂದು ರ್ಯಾಂಡಿಯ ಆಲೋಚನೆ ಸಾಗಿತ್ತು. ಒಟ್ಟಿನಲ್ಲಿ ರ್ಯಾಂಡಿ ತಮ್ಮ ಎಂದಿನ ಹಮ್ಮನ್ನು ಪುನರ್ ಪ್ರತಿಷ್ಠಾಪಿಸಿಕೊಳ್ಳುತ್ತಿದ್ದಂತೆ ಕಂಡಿತು.
ರ್ಯಾಂಡಿಯವರ ಈ ಆಲೋಚನಾ ಲಹರಿಗೆ ಸ್ಪಂದಿಸಲೋ ಎಂಬಂತೆ ಪ್ರಭುಪಾದರು ಇದ್ದಕ್ಕಿದ್ದಂತೆ ಶ್ರೀಮದ್ಭಾಗವತ ಗ್ರಂಥವನ್ನು ತರಿಸಿಕೊಂಡು ಅದರ ಹನ್ನೆರಡನೆಯ ಸ್ಕಂಧವನ್ನು ಗಟ್ಟಿಯಾಗಿ ಓದತೊಡಗಿದರು. ಕಲಿಯುಗದಲ್ಲಿ ಅವನತಿಗೆ ಬೀಳುವ ಮನುಜಕುಲದ ವರ್ಣನೆ ಶ್ರೀಮದ್ಭಾಗವತದ ಆ ಭಾಗದಲ್ಲಿತ್ತು. ಅಲ್ಲಿದ್ದುದು ಇದು.
“ನೀಳ ಕೇಶರಾಶಿಯನ್ನು ಹೊಂದಿದ್ದಲ್ಲಿ ತಾವು ಸುಂದರರೆಂದು ಜನ ಪರಿಗಣಿಸುತ್ತಾರೆ.” ಈ ವಾಕ್ಯ ಕಿವಿಯನ್ನು ತಾಗಿದ್ದೇ ತಡ ರ್ಯಾಂಡಿ ನಡುಗತೊಡಗಿದರು, ಸ್ತಂಭಿತರಾಗಿ ಹೋದರು. ಹಾಗೇ ಆಲೋಚಿಸುತ್ತಾ ತಮ್ಮಲ್ಲಿಯೇ, “ಪ್ರಭುಪಾದರು ನನ್ನನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟರು” ಎಂದುಕೊಂಡರು.






Leave a Reply