ಆಧುನಿಕ ನಾಗರಿಕತೆ – ಮೃಗೀಯ ಬದುಕಿನ ಐಷಾರಾಮಿ ಆವೃತ್ತಿ

ಶ್ರೀಲ ಪ್ರಭುಪಾದರು ಅತಿಥಿಯೊಬ್ಬರೊಡನೆ ನಡೆಸಿದ ಸಂವಾದ, ಸ್ಥಳ: ಹೈದರಾಬಾದ್, ಆಗಸ್ಟ್ 1976

ಅತಿಥಿ: ಕೃತಕ ವಿಧಾನಗಳನ್ನು ಬಳಸಿ ಗರ್ಭನಿರೋಧಿಸುವ ಪದ್ಧತಿಯ ಬಗೆಗೆ ನಿಮ್ಮ ದೃಷ್ಟಿ ಯಾವ ತೆರನದು?

ಶ್ರೀಲ ಪ್ರಭುಪಾದ : ಅದು ಅತ್ಯಂತ ಪಾಪಕಾರಿಯಾದ ಕೃತ್ಯ. ಲೈಂಗಿಕ ಕ್ರಿಯೆಯನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದರ ಮೂಲಕ ಗರ್ಭನಿರೋಧವನ್ನು ಸಾಧಿಸಬೇಕು.

ಅತಿಥಿ : ಅದು ಒಂದು ವಿಧಾನ.

ಶ್ರೀಲ ಪ್ರಭುಪಾದ : ಶಾಸ್ತ್ರಗ್ರಂಥಗಳು ಮಾನ್ಯಮಾಡಿರುವುದು ಅದೊಂದೇ. ಬೇರೆಲ್ಲ ವಿಧಾನಗಳೂ ಪಾಪಪೂರ್ಣ ಆಗಿವೆ.

ಅತಿಥಿ : ಆದರೆ ಪಾಪಪೂರಿತ ಚಟುವಟಿಕೆಗಳನ್ನು ಮತ್ತು ಗರ್ಭಪಾತವನ್ನು ಜನ ಮಾಡುತ್ತಲೇ ಇದ್ದಾರೆ. ಅವರಿಗೆಲ್ಲ ಏನಾಗುತ್ತದೆ?

ಶ್ರೀಲ ಪ್ರಭುಪಾದ : ಆ ಜನ ನೋವನ್ನನುಭವಿಸುತ್ತಾರೆ. ಯಾರು ಮಕ್ಕಳನ್ನು ಗರ್ಭದಲ್ಲೇ ಕೊಲ್ಲುತ್ತಿದ್ದಾರೋ ಅವರೇ ಕೊಲ್ಲಲ್ಪಡುತ್ತಾರೆ. ಅವರು ತಾಯಗರ್ಭವನ್ನು ಪ್ರವೇಶಿಸುತ್ತಾರೆ. ಹಾಗೂ ಅಲ್ಲಿ ಅವರ ಸಾವಾಗುತ್ತದೆ. ಅವರಿಗೆ ಶಿಕ್ಷೆಯಾಗುತ್ತದೆ. ಮುಯ್ಯಿಗೆ ಮುಯ್ಯಿ. ಆದರೆ ಆ ಜನಕ್ಕೆ ಇದು ತಿಳಿಯದು.

ಈ ಮೂಢ ಜನಕ್ಕೆ ಪ್ರಕೃತಿ ನಿಯಮಗಳ ಬಗೆಗೆ ಶಿಕ್ಷಣವಾಗಿಲ್ಲ. ಅವರು ತುಂಬ ಸ್ವತಂತ್ರವಾಗಿ ವರ್ತಿಸುತ್ತಿದ್ದಾರೆ. ಇರುತ್ತ ಕೃಷ್ಣನು ಭಗವದ್ಗೀತೆಯಲ್ಲಿ (3.27) ಅಹಂಕಾರ ವಿಮೂಢಾತ್ಮಾಕರ್ತಾಹಮಿತಿ ಮನ್ಯತೇ ಎಂದು ಹೇಳುತ್ತಾನೆ. ತಾವು ಪ್ರಕೃತಿಯ ವಿರುದ್ಧ ಸ್ವತಂತ್ರವಾಗಿ ವರ್ತಿಸಬಹುದೆಂದು ಭಾವಿಸುವವರು ವಿಮೂಢಾತ್ಮರು, ಅವಿವೇಕಿಗಳು. ಪ್ರಕೃತಿ ನಿಯಮಗಳಿಂದ ಅವರು ಶಿಕ್ಷೆಗೊಳಗಾಗುತ್ತಾರೆ, ಸರಕಾರದ ನಿಯಮಗಳನ್ನು ಮೀರಿ ನಡೆಯುವ ಕಳ್ಳನು ಶಿಕ್ಷೆಗೊಳಪಡುತ್ತಾನಲ್ಲ, ಹಾಗೆ.

ಅತಿಥಿ : ಮಕ್ಕಳನ್ನು ಪಡೆಯಲು ಅರ್ಹನಾದವನ ಗುಣವಿಶೇಷಗಳು ಯಾವ ಬಗೆಯದಾಗಿರಬೇಕು?

ಶ್ರೀಲ ಪ್ರಭುವಾದ : ಒಂದು ಮಗುವಿಗೆ ಜನನ ಮರಣಗಳು ಪುನರ್ಘಟಿಸದಂತೆ ಪೂರ್ಣ ಹೊಣೆಗಾರಿಕೆ ತಾಯಿ ತಂದೆಗಳು ಪಡೆಯುವತನಕ ಅವರು ಮಗುವನ್ನು ಹೊಂದಬಾರದು. ಇದು ಶಾಸ್ತ್ರಗಳ ಆಣತಿ. ಪಿತ ನ ಸ ಸ್ಯಜ್ ಜನನಿ ನ ಸ ಸ್ಯಾತ್… ನ ಮೋಚಯೇದ್ ಯಃ ಸಮುಪೇತ ಮೃತ್ಯುಮ್.

ಐಹಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಜನನ ಮರಣಗಳ ಚಕ್ರದ ಸುತ್ತುವಿಕೆಗೆ ಒಳಪಟ್ಟವರು. ಒಂದು ದೇಹ ಬಿಟ್ಟು ಇನ್ನೊಂದು ದೇಹ ಪ್ರವೇಶ ಮಾಡುವ ಪರಕಾಯ ಪ್ರವೇಶ ಪ್ರಕ್ರಿಯೆಗೆ ಒಳಪಟ್ಟವರು (ತಥಾ ದೇಹಾಂತ್‌ ಪ್ರಾಪ್ತಿಃ) ಮತ್ತು ಅನೇಕ ಕೋಟಿ ವರ್ಷಗಳ ತರುವಾಯ ವ್ಯಕ್ತಿಗೆ ಮನುಷ್ಯನಾಗಿ ಹುಟ್ಟುವ ಅವಕಾಶ ಲಭಿಸುತ್ತದೆ.

ಹಾಗೂ ಈ ಜನ್ಮದಲ್ಲಿ ವ್ಯಕ್ತಿಯು ಜನನ ಮರಣಗಳನ್ನು ನಿಲುಗಡೆಗೆ ತರಬಹುದು. ಇದೇ ದೈವಿಕ ಸಂಸ್ಕೃತಿ – ಮೇಲಿಂದ ಮೇಲೆ ಬರುವ ಜನನ ಮರಣಗಳನ್ನು ಜಯಿಸುವುದನ್ನು ಕಲಿಯುವುದು (ಪುನರ್ ಜನ್ಮ ಜಯ).

ಆದರೆ ಇದು ಸಾಧ್ಯವಾಗುವುದು ಮನುಷ್ಯ ಜನ್ಮದಲ್ಲೇ. ಆದ್ದರಿಂದ ತಾಯಿತಂದೆಯರ ಕರ್ತವ್ಯವು ಯಾವುದಿರಬೇಕೆಂದರೆ ತಮ್ಮ ಮಗುವಿನ ಈಗಿನ ಜನ್ಮವೇ  ಅದರ ಕೊನೆಯ ಜನ್ಮವಾಗಿರುವಂತೆ ಮಗುವಿಗೆ ತರಬೇತಿ ನೀಡುವುದು.

ದುರದೃಷ್ಟವಶಾತ್ ಜನರು ಈ ವಿಜ್ಞಾನದ ಬಗೆಗೆ ತಿಳಿವಿಲ್ಲದವರಾಗಿದ್ದಾರೆ. ಹೀಗಾಗಿ ತಾಯಿತಂದೆಯರೂ ಮಕ್ಕಳೂ ಜನನ ಮರಣಗಳ ಚಕ್ರದ ಸುತ್ತುವಿಕೆಯಲ್ಲೇ ಉಳಿದುಕೊಂಡು ಮನುಷ್ಯ ದೇಹ ಪಡೆದಿರುವುದರ ಲಾಭವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಇದು ಆಧುನಿಕ ನಾಗರಿಕತೆ.

ಜನಕ್ಕೆ ಈ ವಿಜ್ಞಾನ ತಿಳಿಯದು. ಅವರನ್ನು ಕತ್ತಲಿನಲ್ಲಿ ಇಡಲಾಗಿದೆ. ಅವರ ಹೆಸರಿಗೆ ಮಾತ್ರದ ಶಿಕ್ಷಣ ವ್ಯರ್ಥ. ಹೀಗಾಗಿ ಮಾನವನ ಈ ಹೆಚ್ಚು ಬುದ್ಧಿವಂತಿಕೆಯು ತಿನ್ನುವುದು, ನಿದ್ರಿಸುವುದು, ಸಂಭೋಗ ಹಾಗೂ ಸ್ವರಕ್ಷಣೆ ಇವುಗಳ ಐಷಾರಾಮಿ ಆವೃತ್ತಿಯನ್ನು ಸೃಷ್ಟಿಸುತ್ತಿದೆ.

ಅತಿಥಿ : ಈ ಹೊತ್ತಿನ ಸಮಾಜವು ಸಾಧಿಸಿರುವ ಲೌಕಿಕ ಪ್ರಗತಿಯು ಬದುಕನ್ನು ಪ್ರಯೋಜನಕಾರಿಯದಾಗಿ ಮಾಡುತ್ತದೆಂದು ಜನ ಪಟ್ಟು ಹಿಡಿಯುತ್ತಾರೆ.

ಶ್ರೀಲ ಪ್ರಭುಪಾದ : ಐಹಿಕ ಪ್ರಗತಿಯನ್ನಿಟ್ಟುಕೊಂಡು ನಿಮ್ಮ ಮರಣಕಾಲದಲ್ಲಿ ಏನು ಮಾಡುತ್ತೀರಿ? ನೀವು ಬ್ಯಾಂಕ್‌ನಲ್ಲಿ ದೊಡ್ಡ ಮೊತ್ತದ ಹಣ ಇಟ್ಟಿದ್ದೀರಿ ಎಂದುಕೊಳ್ಳೋಣ; ಒಳ್ಳೆಯದೊಂದು ಮನೆ ನಿಮಗಿದೆ; ಒಳ್ಳೆಯ ಸ್ನೇಹಿತರೂ ಇದ್ದಾರೆ ಎನ್ನೋಣ. ಇಷ್ಟರಿಂದ ಏನಾಯಿತು? ಮರಣವು ಯಾವುದೇ ಕ್ಷಣದಲ್ಲಿ ಬಂದು ನಿಮ್ಮನ್ನು ಒದ್ದು ಓಡಿಸಿಬಿಡಬಹುದು.

ನೀವೇನು ಮಾಡಬಲ್ಲಿರಿ? ಮೃತ್ಯುಃ ಸರ್ವ ಹರಸ್ ಚಾಹಮ್. ಕೃಷ್ಣನು ಮೃತ್ಯು ರೂಪದಲ್ಲಿ ಒಂದು ದಿನ ಬಂದು ನಿಮ್ಮಲ್ಲಿರುವುದನ್ನೆಲ್ಲ ಕಸಿದುಕೊಂಡುಬಿಡುತ್ತಾನೆ. ಅಲ್ಲಿಗೆ ಮುಗಿಯಿತು. ಮತ್ತು ಅವನು ನಿಮ್ಮನ್ನು ಒಂದು ನಾಯಿಯಾಗಿ ಮಾಡಬಹುದು. ಈಗ ಬಗುಳಿ. ನೀವೇನು ಅದನ್ನು ಹೇಗೆ ತಡೆಯಬಲ್ಲಿರಿ? ಶಾಸನ ಸಭೆಯಲ್ಲಿ ಕುಳಿತು ಬಗಳುವುದನ್ನು ನೀವು ಹೇಗೂ ಅಭ್ಯಾಸ ಮಾಡಿದ್ದೀರಿ. ಆದ್ದರಿಂದ ಈಗ ನಾಯಿಯಾಗಿ ಬೌಬೌಬೌ ಅಂತ ಬೊಗಳುತ್ತಾ ಬಿದ್ದಿರಿ. ಹೀಗೆ ನಡೆಯುತ್ತಿದೆ.

ಬದುಕಿನ ಉದ್ದೇಶವನ್ನು ಯಾರೂ ಅರಿಯರು. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವಂತೆ ಅಸತ್ಯಮ್‌ ಅಪ್ರತಿಷ್ಟಮ್‌ ತೇ ಜಗದ್‌ ಆಹುರ್‌ ಅನೀಶ್ವರಮ್‌. ಈ ಜಗತ್ತು ಸುಳ್ಳು (ಅಸತ್ಯಮ್) ಎಂದು ಜನ ಹೇಳತೊಡಗಿದ್ದಾರೆ.  ಕಾರಣವಿಲ್ಲ (ಅಪ್ರತಿಷ್ಟಮ್) ಎನ್ನುತ್ತಾರೆ.  

ಹೀಗೆ ಆಧುನಿಕ ನಾಗರಿಕತೆಯು ದೇವರನ್ನು ನಿರಾಕರಿಸುತ್ತದೆ. ಆದರೂ ಅದೇ ನಾಗರಿಕತೆ ಬದುಕಿನ ಬವಣೆಗಳನ್ನು ಕಡಿಮೆಗೊಳಿಸಲು ಯತ್ನಿಸುತ್ತಿದೆ. ಇರುತ್ತ ನಿಮ್ಮ ನಿಜವಾದ ಯಾತನೆ ಯಾವುದೆಂಬುದನ್ನು ನೀವು ಮೊಟ್ಟಮೊದಲಿಗೆ ಅರ್ಥಮಾಡಿಕೊಳ್ಳಬೇಕೆಂದು ಭಗವದ್ಗೀತೆಯು ಪ್ರತಿಪಾದಿಸುತ್ತದೆ. ನಿಮ್ಮ ಬದುಕಿನ ನಿಜವಾದ ಯಾತನೆ ಯಾವುದೆಂಬುದನ್ನು ನೀವು ಬಲ್ಲಿರಾ?

ಅತಿಥಿ: ದೈವಪ್ರಜ್ಞೆಯಿಲ್ಲದೆ ಬಾಳುವುದು ಬದುಕಿನ ನಿಜವಾದ ಯಾತನೆ.

ಶ್ರೀಲ ಪ್ರಭುಪಾದ : ಹೌದು. ನೀವು ಜನನ ಮರಣಗಳಲ್ಲಿದ್ದ ನಿರಂತರಾತ್ಮ ಆಗಿದ್ದೂ ದೇಹವು ಪುನಃ ಪುನಃ ಜನಿಸಿ ಮರಣಕ್ಕೊಳಪಡುವ ಯಾತನೆ ನಿಮ್ಮದು. ಇದು ಬದುಕಿನ ನಿಜವಾದ ಯಾತನೆ. ಆದ್ದರಿಂದ ಜನನ ಮರಣಗಳು ಬದುಕಿನ ನಿಜವಾದ ಬವಣೆಗಳು (ಜನ್ಮ ಮೃತ್ಯು ಜರಾ – ವ್ಯಾಧಿ, ದುಃಖ, ದೋಷ ಸುದರ್ಶನಮ್) ಇದು ತಿಳಿವು.

ಆದರೆ ಇವನ್ನೆಲ್ಲ ಅರ್ಥಮಾಡಿಕೊಳ್ಳಲು ಜನಕ್ಕೆ ಬುದ್ಧಿ ಇಲ್ಲದಾಗಿದೆ. ಕೃಷ್ಣನು ಸ್ಪಷ್ಟವಾಗಿ, ನ ಜಾಯತೇ ಮ್ರೀಯತೇ ವಾ ಎಂದು ಹೇಳಿದ್ದಾನೆ. “ಆತ್ಮಕ್ಕೆ ಜನನವಾಗಲಿ, ಮರಣವಾಗಲಿ ಇಲ್ಲ.” ಆದರೆ ಧೂರ್ತರು, ‘ನಾನೇಕೆ ಹುಟ್ಟುತ್ತೇನೆ? ನನಗೆ ಮರಣ ಏಕೆ ಬರುತ್ತೆ?’ ಎಂದು ಆಲೋಚಿಸುವುದೇ ಇಲ್ಲ.

ಅವರ ಶಿಕ್ಷಣ ಎಲ್ಲಿ ಹೋಯಿತು? ಅವರು ದುಃಖಾವಸ್ಥೆಯಿಂದ ಪಾರಾಗಲು ಹೆಣಗಾಡುತ್ತಿದ್ದಾರೆ. ಆದರೆ ನಿಜವಾದ ದುಃಖ ಯಾವುದೆಂಬುದೇ ಅವರಿಗೆ ತಿಳಿಯದು. ಬದುಕಲಿಕ್ಕಾಗಿ ಹೋರಾಡುವುದರಲ್ಲಿ ಈ ಜನ ಮೂರ್ಖತನದಿಂದ ಪ್ರಯತ್ನಿಸುತ್ತಾರೆ; ಬಲವಿದ್ದವನು ಬದುಕುತ್ತಾನೆ ಎಂದು ಆಶಿಸುತ್ತಾರೆ.

ಅತಿಥಿ : ಅತ್ಯಂತ ಸಮರ್ಥನು ಬದುಕಿಕೊಳ್ಳುತ್ತಾನೆ ಎಂಬ ತತ್ತ್ವವು ನಮ್ಮ ವಿಷಯಕ್ಕೆ ಸಮಂಜಸವಾದದ್ದು ಎನ್ನಿಸುತ್ತದೆ. ಏಕೆಂದರೆ ‘ಅರ್ಹ’, ‘ಯೋಗ್ಯ’ ಎಂಬ ಪದಕ್ಕೆ ಅರ್ಥ ಏನೆಂದರೆ…

ಶ್ರೀಲ ಪ್ರಭುಪಾದ : ಅರ್ಹ ಎಂದರೆ, “ಇನ್ನೊಂದು ದೇಹವನ್ನು ಪಡೆಯದಿರುವುದು” ಎಂದರ್ಥ. ಅರ್ಹತೆ ಅಂದರೆ ಅದೇ. ಏಕೆಂದರೆ ಇನ್ನೊಂದು ಐಹಿಕ ದೇಹವನ್ನು ನೀವು ಪಡೆದ ಕೂಡಲೇ ನೀವು ನೋವನ್ನು ಅನುಭವಿಸಲೇಬೇಕು. ಜನ ಹುಚ್ಚರು ಹಗಲೂ ರಾತ್ರಿ ದುಡಿಯುತ್ತಾರೆ.

ಆದರೆ ತಮ್ಮ ಹಿತಾಸಕ್ತಿಗೆ ವಿರುದ್ಧವಾದಂಥ ಕೆಲಸವನ್ನೇ ಅವರು ಮಾಡುತ್ತಾರೆ. ನಿಮಗೆ ಯಾತನೆಯನ್ನು ತಂದೊಡ್ಡುತ್ತಿರುವ ದೇಹವೊಂದು ಈಗಾಗಲೇ ನಿಮಗಿದೆ. ಮತ್ತು ನಿಮ್ಮ ಕರ್ಮದಿಂದಾಗಿ ನೀವು ಇನ್ನೊಂದು ಸೃಷ್ಟಿಸುತ್ತಿದ್ದೀರಿ. ಇನ್ನೊಂದು ಐಹಿಕ ದೇಹ ನಿಮಗೆ ದೊರಕಿದ ಕೂಡಲೇ ನೀವು ಯಾತನೆ ಅನುಭವಿಸಲೇಬೇಕು. ನಿಮ್ಮ ದೇಹ ರಾಜನದೋ ನಾಯಿಯದೋ ಆ ಮಾತು ಬೇರೆ.

ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಜನಕ್ಕೆ ಮೆದುಳಿಲ್ಲ. ಸಮಸ್ಯೆಗೆ ಪರಿಹಾರವಂತೂ ಇದೆ. ತ್ಯಕ್ತ್ವಾ ದೇಹಮ್ ಪುನರ್ ಜನ್ಮ ನೈತಿ ಮಾಮ್ ಏತಿ : ನೀವು ಕೃಷ್ಣನನ್ನು ನಿಜವಾಗಿಯೂ ಅರ್ಥಮಾಡಿಕೊಂಡರೆ ಜನನ ಮರಣಗಳ ಚಕ್ರದಿಂದ ನೀವು ಹೊರಬರಬಹುದು ಮತ್ತು ಭಗವದ್ಧಾಮಕ್ಕೆ ಮರಳಿ ಹೋಗಬಹುದು, ಜನನ ಮರಣದ ಪ್ರಶ್ನೆಯೇ ಇರುವುದಿಲ್ಲ. ಇದು ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವ ಮಾತು.

ನೀವು (ಸದಸ್ಯ) ನಮ್ಮ ಸಂಸ್ಥೆಯ ಅಜೀವ ಸದಸ್ಯರಾಗಿದ್ದೀರಿ. ಭಗವದ್ಗೀತಾ ತತ್ತ್ವವನ್ನು ಪ್ರಸಾರ ಮಾಡಲು ಪ್ರಯತ್ನಿಸಿ. ಸದಸ್ಯತ್ವದ ಅರ್ಥ ಇದೇಯೆ. ಭಗವದ್ಗೀತೆಯಲ್ಲಿ ಎಲ್ಲವೂ ಇದೆ. ‘ಭಗವದ್ಗೀತಾ-ಯಾಥಾರೂಪ’ ಎಂಬ ಕೃತಿಯನ್ನು ಆಮೂಲಾಗ್ರವಾಗಿ ಓದಿ. ಕೃಷ್ಣಪ್ರಜ್ಞಾ ಸಿದ್ಧಾಂತವನ್ನು ಅರ್ಥ ಮಾಡಿಕೊಳ್ಳಿ. ಆ ತತ್ತ್ವವನ್ನು ನಿಮ್ಮ ಬದುಕಿಗೇ ಅನ್ವಯಿಸಿಕೊಳ್ಳಿ ಮತ್ತು ಸಿದ್ಧಾಂತವನ್ನು ನಿಮ್ಮ ಗೆಳೆಯರ ವಲಯದಲ್ಲೂ ಪ್ರಸಾರಮಾಡಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi