ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ |
ಉಪದೇಕ್ಪ್ಯಂತಿ ತೇ ಜ್ಞಾನಂ ಜ್ಞಾನಿನಃ ತತ್ತ್ವದರ್ಶಿನಃ ||

ಎಂಬ ಗೀತೋಕ್ತಿಯಂತೆ ಶ್ರೀ ಚೈತನ್ಯ ಮಹಾಪ್ರಭುಗಳ ದಿವ್ಯ ಕೃಪೆಗೆ ಪಾತ್ರರಾದ ಶ್ರೀಲ ರೂಪ ಗೋಸ್ವಾಮಿಯವರು ಸಾತ್ತ್ವಿಕ ಸಾಧಕ ಜೀವಿಗಳಿಗಾಗಿಯೇ ರಚಿಸಿದ ಶ್ರೀ ಉಪದೇಶಾಮೃತ ಈ ಕೃತಿಯು ಶುದ್ಧ ವೈಷ್ಣವದ ಪಂಥದ ಸಂವಿಧಾನವೆನ್ನಲು ಅಡ್ಡಿಯಿಲ್ಲ. ಇದು ಸಾಧಕ ಸಂಜೀವಿನಿ ಹಾಗೂ ಅತ್ಯಂತ ಬೋಧಪ್ರದವಾಗಿದೆ. ಅಮೃತ ಒಂದು ಬಿಂದು ಕುಡಿದರೂ ಒಂದು ಬಿಂದಿಗೆ ಕುಡಿದರೂ ಪ್ರಯೋಜನ ಮಾತ್ರ ಒಂದೇ. ಈ ಉಪದೇಶಾಮೃತದೊಳಗಿನ ಒಂದೊಂದು ವಾಕ್ಯವೂ ಅಮೃತಬಿಂದು.
ಶ್ರೀ ಚೈತನ್ಯ ಮಹಾಪ್ರಭುಗಳ ದಿವ್ಯ ಕೃಪೆಗೆ ಪಾತ್ರರಾದ ಆರು ಗೋಸ್ವಾಮಿಗಳಲ್ಲಿ ರೂಪ ಗೋಸ್ವಾಮಿಯವರೇ ಮೊದಲಿಗರು. ಕೃಷ್ಣ ಪ್ರಜ್ಞಾ ಆಂದೋಲನದ ಷಟ್‌ಸಂಪತ್ ಸ್ವರೂಪವೇ ಈ ಆರು ಮಂದಿ. ಸನಾತನ, ಭಟ್ಟ ರಘುನಾಥ, ಶ್ರೀ ಜೀವ, ಗೋಪಾಲಕಭಟ್ಟ, ರಘುನಾಥ. ಇವರಲ್ಲಿ ಶ್ರೀಲ ರೂಪ ಗೋಸ್ವಾಮಿಯವರೇ ವೈಷ್ಣವ ಸಂವಿಧಾನದ ಶಿಲ್ಪಿ ಇವರೆಲ್ಲ ಶ್ರೀಕೃಷ್ಣ ಚೈತನ್ಯ ಮಹಾಪ್ರಭುಗಳ ಮಧುರ ಭಾವದ ಮಧುವನದ ಭೃಂಗಗಳು.

ಅವರು ಉಂಡು ತೃಪ್ತರಾಗಿ ನಮಗಿತ್ತ ಪ್ರಸಾದವೇ ಈ ಉಪದೇಶಾಮೃತ. ಇದನ್ನು ನಮಗೆ ಉಣಬಡಿಸಿದ ಮಹಾನುಭಾವರೇ ಶ್ರೀಕೃಷ್ಣ ಪ್ರಜ್ಞೆಯ ಅತ್ಯುನ್ನತ ಶಿಖರವನ್ನೇರಿದ ಶ್ರೀಲ ಶ್ರೀಮದ್ ಎ.ಸಿ.ಭಕ್ತಿವೇಂದಾತ ಸ್ವಾಮಿ ಪ್ರಭುಪಾದರು. ಅವರು ಉಪದೇಶಾಮೃತಕ್ಕೆ ಮಾಡಿದ ಈ ವ್ಯಾಖ್ಯಾನವು ಜೀವಿಗಳಿಗೆಲ್ಲಾ ಸಂತುಷ್ಟಿಯನ್ನು ಉಂಟುಮಾಡಿ ಸಾರ್ವಜನಿಕರಲ್ಲಿ ಸಾತ್ತ್ವಿಕತೆಯನ್ನು ಉಂಟು ಮಾಡುವ ಸಾಮರ್ಥ್ಯವನ್ನು ಪಡೆದಿದೆ.
ಶ್ರೀ ಉಪದೇಶಾಮೃತ ಗ್ರಂಥವು ಓದಿ ಮುಗಿಸುವಂತಹುದಲ್ಲ. ಸದಾ ಮೆಲುಕಾಡಬೇಕಾದ ಗ್ರಂಥ. ಇದು ಕಚ್ಚಿದರೆ ಕಬ್ಬು ಹಿಂಡಿದರೆ ಜೇನು. ಶ್ರೀ ಬಿ.ವಿ. ಶ್ರೀಧರ ಅವರ ಸಮರ್ಥ ಅನುವಾದವು ಕನ್ನಡದ ಕಂಪಿನೊಂದಿಗೆ ಸಾಧಕರ ಹೃದಯಕ್ಕೆ ತಂಪನ್ನೀಯುತ್ತದೆ.






Leave a Reply