ಗೌರಕಿಶೋರ ದಾಸ ಬಾಬಾಜಿ

ಶ್ರೀಲ ಗೌರಕಿಶೋರ ದಾಸ ಬಾಬಾಜಿಯವರು 1838ರಲ್ಲಿ ಹುಟ್ಟಿದರು. ತಮ್ಮ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಂಡು ಗೃಹಸ್ಥರಾಗಿ ಸುಮಾರು ಮೂವತ್ತು ವರ್ಷ ಕಳೆದರು. ಅವರ ಪತ್ನಿಯ ನಿಧನದನಂತರ ತಮ್ಮ ದಿನಸಿ ವ್ಯಾಪಾರವನ್ನು ತ್ಯಜಿಸಿ ಬಾಬಾಜಿಯವರ ಉಪದೇಶಕ್ಕಾಗಿ ಜಗನ್ನಾಥ ದಾಸ ಬಾಬಾಜಿಯವರ ಶಿಷ್ಯರಾದ ಭಾಗವತ ದಾಸ ಬಾಬಾಜಿಯವರನ್ನು ಭೇಟಿ ಮಾಡಿದರು.

ಮುಂದಿನ ಮೂವತ್ತು ವರ್ಷಗಳ ಕಾಲ ಶ್ರೀಲ ಗೌರಕಿಶೋರರು ವೃಂದಾವನದ ಹಳ್ಳಿಹಳ್ಳಿಗೆ ಪ್ರಯಾಣ ಮಾಡಿ ನಿರಂತರವಾಗಿ ಶ್ರೀಕೃಷ್ಣನನ್ನು ಭಜಿಸಿದರು. ಮಧುಕರಿ ಜೀವನ ಅನುಸರಿಸುತ್ತಿದ್ದರು.ರಾತ್ರಿಗೆ ಮರಗಳ ಕೆಳಗೆ ತಂಗುತ್ತಿದ್ದರು. ವ್ರಜ ನಿವಾಸಿಗಳನ್ನು ಶ್ರೀಕೃಷ್ಣ ಸ್ವರೂಪವನ್ನೇ ಹೊಂದಿರುವರೆಂದು ಭಾವಿಸಿ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದರು. ತಮ್ಮ ಸುತ್ತಮುತ್ತಲಿನ ಪುಷ್ಟಗಳು, ವೃಕ್ಷಗಳು ಹಾಗೂ ಭೂಮಿಗೂ ನಮಸ್ಕರಿಸುತ್ತಿದ್ದರು.

ಶ್ರೀಲ ಗೌರ ಕಿಶೋರರು ತದನಂತರ ನವದ್ವೀಪಕ್ಕೆ ತರಳಿ, ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಮಾಡಿ ಕೊನೆಗಾಲವನ್ನು ಅಲ್ಲಿಯೇ ಕಳೆದರು. ಈ ಹಳ್ಳಿಗಳು ವೃಂದಾವನಕ್ಕಿಂತ ವಿಭಿನ್ನವೇ ಅಲ್ಲವೆಂದು ಸಾಕ್ಷಾತ್ಕಾರ ಮಾಡಿಕೊಂಡರು. ಅವರ ಜೀವನ ತುಂಬ ಸರಳವಾಗಿತ್ತು.

ಅವರು ಶವಗಳಿಗೆ ಹೊದಿಸಿದ ಬಟ್ಟೆಗಳನ್ನು ಧರಿಸುತ್ತಿದ್ದರು, ಗೃಹಸ್ಥರಿಂದ ಅಕ್ಕಿಯನ್ನು ಬೇಡಿ ತ್ಯಜಿಸಿದ ಮಡಿಕೆಗಳಲ್ಲಿ ಅನ್ನ ತಯಾರಿಸುತ್ತಿದ್ದರು. ಕೃಷ್ಣನ ಪವಿತ್ರ ನಾಮಗಳನ್ನು ಹಾಡುತ್ತಾ ಕೆಲವೊಮ್ಮೆ ಗಂಗಾನದಿ ತೀರದಲ್ಲಿ ನರ್ತನ ಮಾಡುತ್ತಿದ್ದರು; ಇನ್ನೂ ಕೆಲವೊಮ್ಮೆ ಪ್ರಜ್ಞಾಹೀನರಾಗಿ ನೆಲದ ಮೇಲೆಯೇ ಮಲಗಿರುತ್ತಿದ್ದರು.

ಶ್ರೀಲ ಗೌರಕಿಶೋರರಿಗೆ ಕೆಲವೇ ಸ್ವತ್ತುಗಳಿದ್ದವು. ಕತ್ತಿನ ಸುತ್ತ ಒಂದು ಹಾರ, ಜಪಿಸಲು ಕೈಯಲ್ಲಿ ಇನ್ನೊಂದು ತುಳಸಿ ಹಾರ ಮತ್ತು ನರೋತ್ತಮ ದಾಸ ಠಾಕುರರ ಪ್ರಾರ್ಥನೆ ಮತ್ತು ಪ್ರೇಮ ಭಕ್ತಿ ಚಂದ್ರಿಕಾಗಳಂತಹ ಕೆಲವು ಧರ್ಮಗ್ರಂಥಗಳು. ಶ್ರೀಲ ಗೌರಕಿಶೋರ ದಾಸ ಬಾಬಾಜಿಯವರು ಯಾರಿಂದಲೂ ಸೇವೆಯನ್ನು ಸ್ವೀಕರಿಸುತ್ತಿರಲಿಲ್ಲ.

ಎಷ್ಟೋ ಜನರು ಅವರಿಗೆ ಸೇವೆ ಸಲ್ಲಿಸಲು ಪ್ರಯತ್ನ ಮಾಡಿ ವಿಫಲರಾಗಿದ್ದರು. ಅವರು ಅನಕ್ಷರಸ್ಥರಾಗಿದ್ದರೂ ಮಹಾ ಜ್ಞಾನಿಗಳೆಂದೂ ಆತ್ಮಸಾಕ್ಷಾತ್ಕಾರ ಪಡೆದ ಮಹಾನುಭಾವರೆಂದು ಭಾವಿಸಲ್ಪಟ್ಟಿದ್ದರು. ಬಹಳ ಜನರು ಅವರ ಮಾರ್ಗದರ್ಶನಕ್ಕಾಗಿ ಬರುತ್ತಿದ್ದರು. ಶ್ರೀಲ ಗೌರಕಿಶೋರರಿಗೆ ಜನರ ಪ್ರಾಮಾಣಿಕತೆ ಹಾಗೂ ವಂಚನೆಯ ಮನೋಭಾವವನ್ನು ಕಂಡು ಹಿಡಿದು ಅದನ್ನು ಬಹಿರಂಗಗೊಳಿಸುವ ಸಾಮರ್ಥ್ಯವಿತ್ತು.

ಅವರು ಶತ್ರುಗಳ ಬಗ್ಗೆ ದ್ವೇಷ ಅಥವಾ ಪ್ರಿಯರೊಂದಿಗೆ ಸ್ನೇಹವನ್ನು ತೋರಿಸುತ್ತಿರಲಿಲ್ಲ. ಶ್ರೀಲ ಗೌರಕಿಶೋರರು ಹಲವಾರು ಅಪ್ರಾಮಾಣಿಕ ಭಕ್ತರ ಮಧ್ಯೆಯಿದ್ದರೂ ಅವರನ್ನು ಪ್ರೋತ್ಸಾಹಿಸುತ್ತಿರಲೂ ಇಲ್ಲ ಅಥವಾ ಓಡಿಸುತ್ತಿರಲೂ ಇಲ್ಲ.

ಶ್ರೀಲ ಗೌರಕಿಶೋರರು ಶ್ರೀಲ ಭಕ್ತಿವಿನೋದ ಠಾಕುರರ ಶ್ರೀಮದ್‌ ಭಾಗವತಮ್‌ ಮತ್ತು ಭಕ್ತಿ ಸೇವೆಯ ತತ್ತ್ವಗಳನ್ನು ಕುರಿತಾದ ಇತರ ವಿಷಯಗಳನ್ನು ಆಲಿಸಲು ಗೋದ್ರುವ ದ್ವೀಪದ (ನವದ್ವೀಪದ ಒಂಬತ್ತು ದ್ವೀಪಗಳಲ್ಲಿ ಒಂದು) ಸ್ವಾನಂದ ಕುಂಜ ಎಂಬ ಸ್ಥಳಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು.

ಭಕ್ತಿವಿನೋದರ ಗೃಹದಲ್ಲಿ ಅವರು ಶ್ರೀಮದ್‌ ಭಾಗವತವನ್ನು ಕುರಿತು ಚರ್ಚಿಸುತ್ತಿದ್ದರು. ಶ್ರೀಲ ಗೌರಕಿಶೋರ ದಾಸ ಬಾಬಾಜಿಯವರ ನಿಷ್ಕಪಟ ಸ್ವಭಾವವನ್ನು ಗಮನಿಸಿದ್ದ ‍ಶ್ರೀಲ ಭಕ್ತಿವಿನೋದ ಠಾಕುರರು ಅವರನ್ನು ಅತೀವ ಗೌರವ ಹಾಗೂ ಮೆಚ್ಚುಗೆಯಿಂದ ಕಾಣುತ್ತಿದ್ದರು.

1900ರಲ್ಲಿ ಗೌರಕಿಶೋರ ದಾಸ ಬಾಬಾಜಿಯವರು ಭಕ್ತಿವಿನೋದ ಠಾಕುರರ ಮಗನಾದ ವಿಮಲ್‌ ಪ್ರಸಾದರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು. ಅವರಿಗೆ ವಾರ್ಷಭಾನವಿ-ದೇವಿ-ದಯಿತ ದಾಸರೆಂಬ ಹೆಸರನ್ನು ನೀಡಿದರು. ವಾರ್ಷಭಾನವೀ ದೇವಿ-ದಯಿತ ದಾಸರು ಅನಂತರ ‍ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಸ್ವಾಮಿ ಪ್ರಭುಪಾದರಾಗಿ ಗೌಡೀಯ ಮಠಗಳ ಸಂಸ್ಥಾಪಕರಾದರು.

1908ರಲ್ಲಿ ಗೌರಕಿಶೋರ ದಾಸ ಬಾಬಾಬಿ ಮಹಾರಾಜರು ದೃಷ್ಟಿಯನ್ನು ಕಳೆದುಕೊಂಡರು. ವರ್ಷಭಾನವಿ-ದೇವಿ-ದಯಿತ ದಾಸರು ತಮ್ಮನ್ನು ನೇತ್ರ ತಜ್ಞರ ಬಳಿ ಕರೆದು ಹೋಗುವೆನೆಂದು ಹೇಳಿದ್ದನ್ನು ತಿರಸ್ಕರಿಸಿದರು. ಅದರ ಬದಲಿಗೆ ಕೃಷ್ಣನ ಕುರಿತು ಪೂಜಿಸಿ ಜಪಿಸುವುದೇ ಲೇಸೆಂದು ಅವರು ಭಾವಿಸಿದರು. ಅನಂತರ ಅಂದಿನಿಂದ ಅವರು ಪ್ರಮಾಣ ಮಾಡುವುದನ್ನು ನಿಲ್ಲಿಸಿ ಭಜನ ಕುಟೀರದಲ್ಲಿ ಕುಳಿತು ಕೃಷ್ಣ ಲೀಲೆಗಳಲ್ಲಿ ಗಾಢವಾಗಿ ತಲ್ಲೀನರಾಗಿರುತ್ತಿದ್ದರು.

1915ರ ನವೆಂಬರ್‌ 17 ರಂದು ಗೌರಕಿಶೋರ ದಾಸ ಬಾಬಾಜಿ ಮಹಾರಾಜರು ದೇಹತ್ಯಾಗ ಮಾಡಿದರು. ಅವರನ್ನು ಸಮಾಧಿಯಲ್ಲಿ ಇಡಲಾಯಿತು. ಆದರೆ ಪ್ರವಾಹದಿಂದಾಗಿ ಅವರ ಸಮಾಧಿಯನ್ನು ಬೇರೆ ಜಾಗಕ್ಕೆ ವರ್ಗಾಯಿಸಬೇಕಾಯಿತು. ಹಲವಾರು ಬಾಬಾಜಿಗಳು ಸಮಾಧಿಯ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸಿದಾಗ ಭಕ್ತಿಸಿದ್ಧಾಂತ ಸರಸ್ವತಿಗಳು ಅವರಿಗೆಲ್ಲಾ ಹೀಗೆಂದು ಹೇಳಿದರು:

“ನಾನು ಪರಮಹಂಸ ಬಾಬಾಜಿ ಮಹಾರಾಜರ ಏಕೈಕ ಶಿಷ್ಯನು. ನಾನು ಸಂನ್ಯಾಸತ್ವವನ್ನು ಸ್ವೀಕರಿಸದಿದ್ದರೂ ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದೇನೆ ಮತ್ತು ಬಾಬಾಜಿಯವರ ಕೃಪೆಯಿಂದಾಗಿ ನಾನು ಕೆಟ್ಟ ಅಭ್ಯಾಸಗಳಿಗೆ ರಹಸ್ಯವಾಗಿ ಬಲಿಯಾಗುವುದಾಗಲಿ ಅಥವಾ ಕೆಲವು ಜನರಂತೆ ವ್ಯಭಿಚಾರದಂತಹ ಕೃತ್ಯಗಳಲ್ಲಿ ತೊಡಗಿಲ್ಲ.

ಇಲ್ಲಿರುವ ಜನರ ಪೈಕಿ ಕಳಂಕ ರಹಿತ ಚಾರಿತ್ರ್ಯದ ಒಬ್ಬನಿದ್ದರೂ ಆತ ಬಾಬಾಜಿ ಮಹಾರಾಜರ ಸಮಾಧಿಯನ್ನು ಹೊಂದಬಹುದು. ನಮಗೆ ಅಭ್ಯಂತರವಿಲ್ಲ. ಕಳೆದ ಒಂದು ವರ್ಷ ಅಥವಾ 6 ತಿಂಗಳು, 3 ತಿಂಗಳು, ಒಂದು ತಿಂಗಳ ಅಥವಾ ಕನಿಷ್ಠಪಕ್ಷ 3 ದಿನಗಳ ಹಿಂದೆ ಒಮ್ಮೆ ಸ್ತ್ರೀಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿರದ ವ್ಯಕ್ತಿ ಈ ಆ‍ಧ್ಯಾತ್ಮಿಕ ದೈವಾನಂದದ ದೇಹವನ್ನು ಸ್ವರ್ಶಿಬಹುದು.

ಇನ್ಯಾರೇ ಇದನ್ನು ಸ್ವರ್ಶಿಸಿದರೆ ಸಂಪೂರ್ಣವಾಗಿ ಅವನತಿ ಹೊಂದುತ್ತಾನೆ. ಅಲ್ಲಿದ್ದ ಒಬ್ಬ ಪೊಲೀಸ್‌ ಅಧಿಕಾರಿ ಕೇಳಿದರು, “ಇದಕ್ಕೆ ಸಾಕ್ಷಿಯನ್ನು ಹೇಗೆ ಪಡೆಯಬಹುದು?” ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಉತ್ತರಿಸಿದರು: “ಅವರ ಮಾತುಗಳಲ್ಲಿ ನನಗೆ ಭರವಸೆ ಇದೆ.” ಈ ಮಾತುಗಳನ್ನು ಕೇಳಿ ಎಲ್ಲಾ ಢೋಂಗಿ ಬಾಬಾಜಿಗಳು ಒಂದೂ ಮಾತಿಲ್ಲದೆ ಅಲ್ಲಿಂದ ಒಬ್ಬಬ್ಬರಾಗಿ ಜಾರಿಕೊಂಡರು. ಅನಂತರ, ‍ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರು ಸಮಾಧಿಯನ್ನು ಪಡೆದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi