ಕೃಷ್ಣಪಾಕಶಾಲೆ

ಭಕ್ತಿವೇದಾಂತ ದರ್ಶನ ಓದುಗರಿಗಾಗಿ ವಿಭಿನ್ನ ಭಕ್ಷ್ಯಗಳನ್ನು ತಯಾರಿಸುವ ವಿಧಾನವನ್ನು ಶ್ರೀ ಎನ್. ಮಂಜುನಾಥ್‌ ರವರು ಸಂಗ್ರಹಿಸಿ ಕೊಟ್ಟಿದ್ದಾರೆ. ನೀವೂ ತಯಾರಿಸಿ ಭಗವಂತನಿಗೆ ಅರ್ಪಿಸಿ ಅವುಗಳ ರುಚಿಯನ್ನು ಸವಿಯಿರಿ.

ಕ್ಯಾಪ್ಸಿಕಂ ಮೊಸರು ಮಸಾಲ

ಬೇಕಾಗುವ ಪದಾರ್ಥ :

ಟೊಮೊಟೊ – 2-3

ದೊಣ್ಣೆ ಮೆಣಸಿನಕಾಯಿ – 2-3

ಖಾದ್ಯ ತೈಲ (ಎಣ್ಣೆ) – 3 ಟೇಬಲ್ ಚಮಚ

ಜೀರಿಗೆ – 1 ಟೀ ಚಮಚ

ಹಸಿ ಮೆಣಸಿನಕಾಯಿ – 3-4

ಕರಿಬೇವು – 2 ಎಸಳು

ಅರಿಶಿನ ಪುಡಿ – 2 ಚಿಟಿಕೆ

ಒಣಮೆಣಸಿನಕಾಯಿ ಪುಡಿ – 1 ಟೀ ಚಮಚ

ಧನಿಯಾ ಪುಡಿ – 1 ಟೀ ಚಮಚ

ಗರಂ ಮಸಾಲಾ ಪುಡಿ – 1/2 ಟೀ ಚಮಚ

ಗಟ್ಟಿಸಿಹಿ ಮೊಸರು – 2 ಕಪ್

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಒಂದು ಅಗಲ ತಳದ ಪಾತ್ರೆಯಲ್ಲಿ ಖಾದ್ಯತೈಲ (ಎಣ್ಣೆ) ಬಿಸಿಮಾಡಿ ಜೀರಿಗೆ, ಕರಿಬೇವು ಒಗ್ಗರಣೆ ಮಾಡಿ ಅದಕ್ಕೆ ಉದ್ದುದ್ದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ ತುಂಡುಗಳನ್ನು ಹಾಕಿ. ಅನಂತರ ಅರಿಶಿನ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಉಪ್ಪು ಬೆರೆಸಿ.

ಈಗ ಸಣ್ಣಗೆ ಹೆಚ್ಚಿಟ್ಟ ಟೊಮೊಟೊ, ಕ್ಯಾಪ್ಸಿಕಂ (ದೊಣ್ಣೆ ಮೆಣಸಿನಕಾಯಿ) ತುಂಡುಗಳನ್ನು ಸೇರಿಸಿ ಚೆನ್ನಾಗಿ 5-6 ನಿಮಿಷ ಎಣ್ಣೆಯಲ್ಲಿ ಬಾಡಿಸಿ. ಅನಂತರ ಅದಕ್ಕೆ ಒಂದು ಲೋಟ ನೀರು ಬೆರೆಸಿ ಮುಚ್ಚಳ ಮುಚ್ಚಿ. ಪಾತ್ರೆಯಲ್ಲಿನ ಎಲ್ಲ ಪದಾರ್ಥಗಳು ಚೆನ್ನಾಗಿ ಬೆಂದನಂತರ ಸಿಹಿ ಮೊಸರು ಸೇರಿಸಿ ಮೊಸರಿನಲ್ಲಿನ ನೀರಿನಂಶ ಸಂಪೂರ್ಣ ಆವಿಯಾಗುವ ತನಕ ಕುದಿಸಿ. ಪೂರಿ ಹಾಗೂ ಪರೋಟಾಗಳೊಂದಿಗೆ ಕ್ಯಾಪ್ಸಿಕಂ ಮೊಸರು ಮಸಾಲಾ ಬಳಸಬಹುದು.

ದೊಣ್ಣೆ ಮೆಣಸಿನಕಾಯಿ ತೊಕ್ಕು

ಬೇಕಾಗುವ ಪದಾರ್ಥ :

ದೊಣ್ಣೆ ಮೆಣಸಿನಕಾಯಿ – 2 (ದೊಡ್ಡ ಗಾತ್ರದ್ದು)

ಅರಿಶಿನಪುಡಿ – 1ಟೀ ಚಮಚ

ಧನಿಯಾ – 2 ಟೀ ಚಮಚ

ಕಡಲೆಬೇಳೆ – 2 ಟೀ ಚಮಚ

ಒಣ ಮೆಣಸಿನಕಾಯಿ – 2

ಮೆಂತ್ಯ – 1 ಟೀ ಚಮಚ

ಸಾಸಿವೆ – 1 ಟೀ ಚಮಚ

ಇಂಗು – 2 ಚಿಟಿಕೆ

ಖಾದ್ಯ ತೈಲ (ಎಣ್ಣೆ) – 2-3 ಟೇಬಲ್ ಚಮಚ

ಮೆಣಸಿನಕಾಯಿ ಪುಡಿ – 1 ಟೀ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಬೀಜ ತೆಗೆದು ದೊಣ್ಣೆ ಮೆಣಸಿನಕಾಯಿಗಳನ್ನು ತುರಿಯಿರಿ. 1/2 ಚಮಚ ಎಣ್ಣೆಯಲ್ಲಿ ಇದನ್ನು ಸಣ್ಣ ಉರಿಯಲ್ಲಿ ಬಾಡಿಸಿ. ತುರಿ ಮೃದುವಾಗುತ್ತದೆ. ಅದನ್ನು ಒಂದು ತಟ್ಟೆಗೆ ಹಾಕಿ ಆರಲು ಬಿಡಿ. ಚೆನ್ನಾಗಿ ಆರಿದನಂತರ ಅರಿಶಿನಪುಡಿಯೊಂದಿಗೆ ರುಬ್ಬಿಕೊಳ್ಳಿ.

ಅನಂತರ ಕಡಲೆಬೇಳೆ, ಮೆಂತ್ಯ, ಧನಿಯಾ, ಒಣ ಮೆಣಸಿನಕಾಯಿ ಹಾಗೂ ಇಂಗು – ಎಲ್ಲವನ್ನೂ ಎಣ್ಣೆ ಹಾಕದೇ ಹದವಾಗಿ ಹುರಿಯಿರಿ. ಎಲ್ಲ ಪದಾರ್ಥಗಳನ್ನು ಆರಿದನಂತರ ಮಿಕ್ಸಿಯಲ್ಲಿ ಒರಳಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ.

ಈಗ ಒಂದು ಬಾಣಲೆಯಲ್ಲಿ ಉಳಿದ ಎಣ್ಣೆಯನ್ನು ಬಿಸಿಮಾಡಿ ಸಾಸಿವೆ ಒಗ್ಗರಣೆ ಮಾಡಿ. ಆಮೇಲೆ ದೊಣ್ಣೆ ಮೆಣಸಿನಕಾಯಿ ಪೇಸ್ಟನ್ನು ಆದಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು-ಮೆಣಸಿನ ಪುಡಿ ಹಾಕಿ. ಅನಂತರ ಮಿಕ್ಸಿಯಲ್ಲಿ ತಯಾರಿಸಿದ ಮಸಾಲೆಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ ಪದಾರ್ಥಗಳೆಲ್ಲಾ ಒಂದಕ್ಕೊಂದು ಬೆರೆಯುವವರೆಗೂ 5-6 ನಿಮಿಷಗಳಷ್ಟು ಕುದಿಸಿ.

ಇದನ್ನುಇಡ್ಲಿ /ದೋಸೆಯೊಟ್ಟಿಗೆ ಕೃಷ್ಣನಿಗರ್ಪಿಸಿ ಸ್ವೀಕರಿಸಿ.

ರಾಗಿ ಒಣ ರೊಟ್ಟಿ

ಬೇಕಾಗುವ ಪದಾರ್ಥ :

ರಾಗಿ ಹಿಟ್ಟು – 2 1/2 ಬಟ್ಟಲು

ಗೋಧಿ ಹಿಟ್ಟು – 1/2 ಬಟ್ಟಲು

ಕೆನೆರಹಿತ ಮೊಸರು / ಮಜ್ಜಿಗೆ – 1/2 ಬಟ್ಟಲು

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಮೊದಲಿಗೆ 2 1/2 ಲೋಟ ನೀರನ್ನು ಚೆನ್ನಾಗಿ ಕುದಿಸಿ. ನೀರು ಕುದಿಯಲಾರಂಭಿಸಿದಾಗ ಮೊಸರು, ಉಪ್ಪು, ಗೋಧಿ ಹಿಟ್ಟು ರಾಗಿಹಿಟ್ಟುಗಳನ್ನು ಸೇರಿಸಿ ಸೌಟಿನಲ್ಲಿ ಚೆನ್ನಾಗಿ ಕಲಸಿ ಕೆಳಗಿಳಿಸಿ.

ಸ್ವಲ್ಪ ತಣ್ಣಗಾದ ಬಳಿಕ ಚೆನ್ನಾಗಿ ನಾದಿ ಕಲಸಿ ಉಂಡೆಗಳನ್ನು ಮಾಡಿಟ್ಟುಕೊಳ್ಳಿ. ಈ ಉಂಡೆಗಳನ್ನು ರಾಗಿ ಹಿಟ್ಟಿನಲ್ಲಿಯೇ ಹೊರಳಿಸಿಕೊಂಡು ಚಪಾತಿಯಂತೆ ಲಟ್ಟಿಸಿ. ಅನಂತರ ಕಾದ ಕಾವಲಿಯಲ್ಲಿ ಎರಡೂ ಬದಿ ಬೇಯಿಸಿರಿ. ಇದೇ ಹಿಟ್ಟಿನ ಉಂಡೆಗಳನ್ನು ಎಣ್ಣೆ ಹಚ್ಚಿ ಬಾಳೆಎಲೆಯ ಮೇಲೆ ತಟ್ಟಿ ಕಾವಲಿಗೆ ಎಣ್ಣೆ ಹಚ್ಚಿ ಅದರಮೇಲೆ ಮಗುಚಿಹಾಕಿ.

ರೊಟ್ಟಿ ಸ್ವಲ್ಪ ಕಾದಕೂಡಲೇ ಬಾಳೆಎಲೆ ಹಾಗೇ ಬಿಟ್ಟುಕೊಂಡು ಬರುವುದು ಅದನ್ನು ತೆಗೆದುಕೊಂಡು ಹಾಗೇ 7-8 ರೊಟ್ಟಿಗಳನ್ನು ಒಂದೇ ಬಾಳೆ ಎಲೆಯ ಮೇಲೆ ಮಾಡಬಹುದು.

ಅಕ್ಕಿ ರೊಟ್ಟಿ

ಬೇಕಾಗುವ ಪದಾರ್ಥ :

ಅಕ್ಕಿ – 2 ಪಾವು

ಬಿಸಿನೀರು – ಅಗತ್ಯಕ್ಕೆ ತಕ್ಕಷ್ಟು

ತೆಂಗಿನತುರಿ – 1/2 ಹೋಳು

ಹಸಿಮೆಣಸಿನಕಾಯಿ – 2-3

ಉಪ್ಪು – ರುಚಿಗೆ ತಕ್ಕಷ್ಟು

ಹುರಿಯಲು ಬೇಕಾಗುವಷ್ಟು ಖಾದ್ಯತೈಲ (ಎಣ್ಣೆ)

ಮಾಡುವ ವಿಧಾನ : ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಗಂಟೆ ನೆನೆಸಿಡಿ. ಆನಂತರ ನೀರಿನಿಂದ ತೆಗೆದು ಒಂದು ಶುಭ್ರ ಒಣಗಿದ ಬಟ್ಟೆಯಮೇಲೆ ಅಕ್ಕಿಯನ್ನು ಆರಲು ಬಿಟ್ಟು, ಆನಂತರ ಹಿಟ್ಟು ತಯಾರಿಸಿಟ್ಟುಕೊಳ್ಳಿ. ಇಲ್ಲದಿದ್ದರೆ ಸಿದ್ಧವಾಗಿ ದೊರಕುವ ಅಕ್ಕಿ ಹಿಟ್ಟನ್ನು ಬಳಸಿ ಕೂಡ ರೊಟ್ಟಿ ತಯಾರಿಸಬಹುದು.

ತೆಂಗಿನಕಾಯಿ ಹಾಗೂ ಹಸಿಮೆಣಸಿನಕಾಯಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಈ ಮಿಶ್ರಣದೊಂದಿಗೆ ಉಗುರು ಬೆಚ್ಚನೆಯ ನೀರಿಗೆ ಅಕ್ಕಿಹಿಟ್ಟು ಉಪ್ಪು ಬೆರೆಸಿ, ಹಿಟ್ಟು ಸ್ವಲ್ಪ ಗಟ್ಟಿಯಾಗಿ ಬರುವಂತೆ ಕಲೆಸಿ.

ಕಾವಲಿಗೆ ಎಣ್ಣೆ ಹಚ್ಚಿ ರೊಟ್ಟಿ ತಟ್ಟಿ ನಡುವೆ ಎರಡು ರಂಧ್ರಗಳನ್ನು ಕೊರೆದು, ಅಲ್ಲಿ ಹಾಗೂ ರೊಟ್ಟಿಯ ಸುತ್ತಲೂ ಎಣ್ಣೆ ಹಾಕಿ. ಸಣ್ಣ ಉರಿಯಲ್ಲಿ ರೊಟ್ಟಿ ಬೇಯಲಿ. ಕಾವು ಎಲ್ಲೆಡೆ ಮುಟ್ಟುವಂತೆ ಆಗಾಗ ಕಾವಲಿಯನ್ನು ತಿರುಗಿಸುತ್ತಿರಿ. ಹೀಗೆ ಬೇಯಿಸಿದ ರೊಟ್ಟಿಯನ್ನು ಮಗುಚಿ ಬೇಯಿಸುವ ಅಗತ್ಯವಿಲ್ಲ.

ರಾಗಿರೊಟ್ಟಿ ಅಥವಾ ಅಕ್ಕಿ ರೊಟ್ಟಿಯೊಡನೆ ದೊಣ್ಣೆಮೆಣಸಿನಕಾಯಿ ತೊಕ್ಕನ್ನು ಸ್ವೀಕರಿಸಬಹುದು. ಈ ಭಕ್ಷ್ಯಗಳನ್ನು ಸ್ವೀಕರಿಸುವ ಮೊದಲು ಕೃಷ್ಣನಿಗರ್ಪಿಸಿ ಪ್ರಸಾದರೂಪದಲ್ಲಿ ಸ್ವೀಕರಿಸುವುದನ್ನು ಮರೆಯದಿರಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi