ಹರಿನಾಮವ ನೆನೆದರೆ…

ಹರಿನಾಮಸ್ಮರಣೆಯ ತತ್ವ, ಸತ್ವ, ಮಹತ್ವಗಳ ಸಂಗಮದ ರಂಗಸ್ಥಳ ಈ ಪುಸ್ತಕ. “ಕಲಿಯುಗದಲಿ ಹರಿನಾಮವ ನೆನೆದರೆ ಕುಲ ಕೋಟಿಗಳುದ್ಧರಿಸುವುವೋ ರಂಗ” ಎನ್ನುವ ದಾಸರ ಮಾತಿನ ದರ್ಶನ ಹಾಗೂ ನಿದರ್ಶನ ಶ್ರೀಲ ಪ್ರಭುಪಾದರ ಈ ‍ಕೃತಿ. ಹರಿನಾಮಸ್ಮರಣೆಯೊಂದಕ್ಕೇ ಪಾಪಪರಿಹಾರ ಮಾಡಲು ಎಷ್ಟು ಸಾಮರ್ಥ್ಯವಿದೆಯೋ ಅಷ್ಟು ಪಾಪ ಮಾಡಲು ಎಂತಹ ಕಡುಪಾಪಿಗೂ ಸಾಮರ್ಥ್ಯ ಇಲ್ಲವೆಂಬುದನ್ನು ಈ ಪುಸ್ತಕ ಸಮರ್ಥವಾಗಿ ನಿರೂಪಿಸುತ್ತದೆ.

ಹರಿಯ ಸ್ಮರಣೆಯಾಗಬೇಕು. ಅವನ ಮಾಟದ ನೋಟದಲ್ಲಿ ಮನಸ್ಸು ಮರೆಯಬೇಕು. ಮಾತು ಮಾತಿಗೆ ಹರಿನಾಮದ ಝಳಕು ಬೆಳಕಾಗಿ ತುಳಕಬೇಕು. ಪುಟ್ಟ ಕಂದ ಕೃಷ್ಣ ನಮ್ಮ ನಮಸ್ಸಿನಲ್ಲಿ ಬೆಳಗಬೇಕು. ಅವನ ಕಣ್ಣಿನ ಕಾಂತಿ, ಅವನ ಮುದ್ದು ಮುಖದ ಶಾಂತಿ ನಮ್ಮ ಬದುಕಿಗೆ ತಂಪು ತರಬೇಕು. ಕಂಪು ತರಬೇಕು. ಸೊಂಪು ತರಬೇಕು.

ಹರಿನಾಮಸ್ಮರಣೆಯ ಇಂಪು, ಅದರ ಕಲಕಲ ಕಿಲಕಿಲ, ನಮ್ಮ ಬದುಕಿನ ತುಂಬ ಗಾಳಿ ಗಂಧ ಪರಿಮಳವೂ ಹರಿಡಿಕೊಳ್ಳಬೇಕು. ಈ ಮಹದಾಶಯಗಳನ್ನು ನಿಜಮಾಡುವ ದಿಕ್ಕು ದೆಸೆಯನ್ನು ಪ್ರಭುಪಾದ ಸ್ವಾಮಿಗಳು ಈ ಪುಸ್ತಕದಲ್ಲಿ ತೋರಿಸಿದ್ದಾರೆ.

ಈ ಜೀವನ ಯಾತ್ರೆಯಲ್ಲಿ ಕಡೆಯ ಘಳಿಗೆಯಲ್ಲಿಯೂ ನಮ್ಮೊಡನೆ ಬರುವುದು, ಮುಂದೆಯೂ ನಮ್ಮೊಡನೆ ಇರುವುದು ನಾರಾಯಣ ನಾಮ ಸ್ಮರಣೆಯೊಂದರಲ್ಲದೆ ಬೇರೆ ಯಾವುದೂ ಅಲ್ಲ ಎನ್ನುವುದನ್ನು ಅತ್ಯಂತ ಪರಿಣಾಮಕಾರಿಯಾಗಿ ಅಜಮಿಳನ ವೃತ್ತಾಂತದ ಮೂಲಕ ಶ್ರೀಲ ಪ್ರಭುಪಾದರು ಇಲ್ಲಿ ಸಮರ್ಥಿಸಿದ್ದಾರೆ.

ಯಾರಿಗೂ ಸಮಯ, ವ್ಯವಧಾನ, ಸಹನೆ ಏನೂ ಇಲ್ಲದ ಈ ಕಾಲದಲ್ಲೂ ಅತ್ಯಂತ ಸುಲಭವಾಗಿ ಎಲ್ಲರೂ ಮಾಡಬಹುದಾದದ್ದು ಹರಿನಾಮಸ್ಮರಣೆ, ಅಜಮಿಳನ ಕಥೆಯ ಮೂಲಕ ಶ್ರೀಲ ಪ್ರಭುಪಾದರು, ಎಂತಹ ಪಾಪಮಾಡಿದವರೂ ಸಹ ಪಾರಾಯಣ ನಾಮಸ್ಮರಣೆಯಿಂದ ಪಾಶ್ಚಾತ್ತಾಪಗೊಂಡರೆ ಪರಿಶುದ್ಧರಾಗುತ್ತಾರೆ ಎಂಬ ಸತ್ಯವನ್ನು ಈ ಗ್ರಂಥದಲ್ಲಿ ತೋರಿಸಿದ್ದಾರೆ.

ಮೌಲ್ಯಗಳನ್ನು ಕಳೆದುಕೊಂಡು ನೀತಿಭ್ರಷ್ಟವಾಗಿರುವ ಆಧುನಿಕ ಸಮಾಜದ ಶುದ್ಧೀಕರಣಕ್ಕೆ ಇರುವ ಒಂದೇ ದಾರಿ ಹರಿನಾಮಸ್ಮರಣೆ. ಭಾಗವತದ ವಿಶಿಷ್ಟ ಕಥೆಯಾದ ಅಜಮಿಳನ ವೃತ್ತಾಂತ ಈ ಗ್ರಂಥರೂಪದಲ್ಲಿ ಬಂದಿರುವುದು ಕನ್ನಡ ಜನತೆಯ ಪುಣ್ಯ ವಿಶೇಷ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi