ಕೃಷ್ಣ ಪಾಕಶಾಲೆ

ಪರೋಟ ಹಾಗೂ ರೊಟ್ಟಿ

ಎಸ್‌.ವಿ.ಗಾಯತ್ರಿ

ಪರೋಟ

ಬೇಕಾಗುವ ಪದಾರ್ಥಗಳು :

ಗೋಧಿ ಹಿಟ್ಟು – 2 ಬಟ್ಟಲು

ತುಪ್ಪ/ ಖಾದ್ಯತೈಲ – 2 ದೊಡ್ಡ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಬಿಸಿನೀರು – ಅಗತ್ಯವಿದ್ದಷ್ಟು

ಮಾಡುವ ವಿಧಾನ : ಸ್ವಲ್ಪ ಬಿಸಿನೀರಿಗೆ ತುಪ್ಪ ಮತ್ತು ಉಪ್ಪು ಬೆರೆಸಿ ಅನಂತರ ಗೋಧಿಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿರಿ, ಪೂರಿ ಹಿಟ್ಟಿಗಿಂತ ತುಸು ಮೃದುವಾದ ಹಿಟ್ಟಾಗಿದ್ದರೆ ಒಳ್ಳೆಯದು. ಅಗತ್ಯವಿದಲ್ಲಿ ಸ್ವಲ್ಪ ಬಿಸಿನೀರನ್ನು ಹಾಕಿ ಚೆನ್ನಾಗಿ ನಾದಿ. ಸುಮಾರು ಒಂದು ಗಂಟೆ ಪಾತ್ರೆಯಲ್ಲಿ ಮುಚ್ಚಿಸಿ.

ಅನಂತರ ಹದಗಾತ್ರದ ಉಂಡೆಗಳನ್ನು ಕಟ್ಟಿ ಗೋಧಿ ಹಿಟ್ಟಿನಲ್ಲಿ ಹೊರಳಿಸಿ ತೆಗೆದು, ಮಣೆಯ ಮೇಲೆ ಚಪಾತಿಯಂತೆ ಲಟ್ಟಿಸಿರಿ. ಹೀಗೆ ಲಟ್ಟಿಸಿದ ನಾಲ್ಕು ಚಪಾತಿಗಳನ್ನು ತೆಗೆದುಕೊಂಡು ಪ್ರತಿಯೊಂದು ಚಪಾತಿಯ ಮೇಲೆ ಸ್ವಲ್ಪ ತುಪ್ಪ ಸವರಿ ಒಂದರ ಮೇಲೊಂದಿಟ್ಟು (ವಿ.ಸೂ. ಅಂಚಿನ ಹತ್ತಿರ ಸ್ವಲ್ಪ ಬಿಟ್ಟು) ಸುರುಳಿ ಸುತ್ತಿ 1/2 ಇಂಚು ದಪ್ಪ ಕತ್ತರಿಸಿ, ಆ ತುಂಡುಗಳನ್ನು ಮತ್ತೆ ನೇರವಾಗಿಟ್ಟು ಚಪ್ಪಟೆ ಮಾಡಿ, ಗೋಧಿ ಹಿಟ್ಟಿನಲ್ಲಿ ಹೊರಳಿಸಿ ದುಂಡಗೆ ಲಟ್ಟಿಸಿ.

ಅನಂತರ ಪರೋಟವನ್ನು ಚಪಾತಿ ತವೆಯ ಮೇಲೆ ಎರಡು ಬದಿಗಳಿಗೂ ತುಪ್ಪ ಸವರಿ ಹುರಿಯಿರಿ.

ಆಲೂ ಪರೋಟ

ಬೇಕಾಗುವ ಪದಾರ್ಥಗಳು :

ಆಲೂಗಡ್ಡೆ – 4-5

ಗೋಧಿಹಿಟ್ಟು – 2 ಬಟ್ಟಲು

ತುಪ್ಪ – 3 ದೊಡ್ಡ ಚಮಚ

ಹಸಿಮೆಣಸಿನಕಾಯಿ – 3-4

ಕೊತ್ತಂಬರಿ ಸೊಪ್ಪು – ಸ್ವಲ್ಪ

ಇಂಗಿನ ನೀರು – 1 ಸಣ್ಣ ಚಮಚ

ತೆಂಗಿನಕಾಯಿ ತುರಿ – 1 ಬಟ್ಟಲು

ಖಾದ್ಯ ತೈಲ ಹುರಿಯಲು ಬೇಕಾಗುವಷ್ಟು

ಮಾಡುವ ವಿಧಾನ : 1/2 ಬಟ್ಟಲು ನೀರಿಗೆ ಹಿಡಿಸುವಷ್ಟು ಉಪ್ಪು 1 ಚಮಚ ತುಪ್ಪ ಹಾಗೂ ಗೋಧಿ ಹಿಟ್ಟನ್ನು ಬೆರೆಸಿ ಚಪಾತಿ ಹಿಟ್ಟಿನಂತೆ ಕಲೆಸಿಟ್ಟುಕೊಳ್ಳಿ. ತೆಂಗಿನಕಾಯಿ ತುರಿದು, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಕತ್ತರಿಸಿಟ್ಟುಕೊಳ್ಳಿ.

ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ನಾದಿ, ಅಗತ್ಯವಿರುವಷ್ಟು ಉಪ್ಪು ಬೆರೆಸಿ ಅದರೊಂದಿಗೆ ತೆಂಗಿನತುರಿ, ಹಸಿಮೆಣಸಿನಕಾಯಿ ಚೂರು ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಜೊತೆಗೆ ಇಂಗಿನ ನೀರನ್ನು (ಇಂಗನ್ನು ಅರ್ಧ ಗಂಟೆ ಮೊದಲೇ 1 ಸಣ್ಣ ಚಮಚ ನೀರಿನಲ್ಲಿ ನೆನೆಸಿಟ್ಟಿದೆ ಅದು ಚೆನ್ನಾಗಿ ಕರಗುವುದು) ಬೆರೆಸಿ ಹದ ಗಾತ್ರದ ಉಂಡೆಗಳನ್ನು ಕಟ್ಟಿ.

ಈ ಮೊದಲೇ ತಯಾರಿಸಿಟ್ಟ ಚಪಾತಿ ಹಿಟ್ಟನ್ನು ತುಸು ಹದ ಗಾತ್ರದ ಉಂಡೆಗಳನ್ನಾಗಿ ಕಟ್ಟಿ ಲಟ್ಟಿಸಿ (ಚಿಕ್ಕ ಪೂರಿಯಷ್ಟು ಗಾತ್ರದಲ್ಲಿ) ಅದಕ್ಕೆ ಸ್ವಲ್ಪ ತುಪ್ಪಸವರಿ ಆಲೂಗಡ್ಡೆ ಉಂಡೆಯ ಹೂರಣವಿಟ್ಟು ಎಲ್ಲ ಬದಿಯಿಂದಲೂ ಮುಚ್ಚಿ ಚಪಾತಿ ಹಿಟ್ಟು ಹೆಚ್ಚಾಗಿದ್ದಲ್ಲಿ ತೆಗೆಯಿರಿ, ನಂತರ ಗೋಧಿಹಿಟ್ಟಿನಲ್ಲಿ ಹೊರಳಿಸಿ ತೆಗೆದು, ಲಟ್ಟಿಸಿ ಚಪಾತಿ ತವೆಯ ಮೇಲೆ ಎಣ್ಣೆ ಸವರಿ ಎರಡೂ ಬದಿ ಹುರಿಯಿರಿ. ಬಿಸಿ ಬಿಸಿಯಾಗಿರುವಾಗಲೇ ತೆಂಗಿನಕಾಯಿ ಚಟ್ಟಿಯೊಂದಿಗೆ ಸವಿಯಿರಿ.

ಅಕ್ಕಿ ರೊಟ್ಟಿ

ಬೇಕಾಗುವ ಪದಾರ್ಥಗಳು :

ಅಕ್ಕಿ ಹಿಟ್ಟು – 2 ಬಟ್ಟಲು

ಉಪ್ಪು – ಅಗತ್ಯವಿದ್ದಷ್ಟು

ತುಪ್ಪ/ ಖಾದ್ಯತೈಲ – 1 ದೊಡ್ಡ ಚಮಚ

ಬಿಸಿ ನೀರು  – 1 1/2 ಬಟ್ಟಲು

ಸಕ್ಕರೆ – 1 ಸಣ್ಣ ಚಮಚ

ಮಾಡುವ ವಿಧಾನ : ಮೊದಲು ಒಂದು ದಪ್ಪತಳದ ಪಾತ್ರೆಯಲ್ಲಿ 1 1/2 ಬಟ್ಟಲು ನೀರನ್ನು ಬಿಸಿಮಾಡಿ ಅದಕ್ಕೆ ತುಪ್ಪ ಉಪ್ಪು ಹಾಗೂ ಸಕ್ಕರೆಯನ್ನು ಬೆರೆಸಿ ಕುದಿ ಬಂದ ಅನಂತರ ಅಕ್ಕಿ ಹಿಟ್ಟನ್ನು ಬೆರೆಸಿ 2-3 ನಿಮಿಷ ಮಗಚುತ್ತಾ ಇರಿ.

ಅನಂತರ 1 ನಿಮಿಷ ಅದನ್ನು ಸಣ್ಣ ಉರಿಯಲ್ಲಿ ಮುಚ್ಚಿಟ್ಟು ನೀರೆಲ್ಲಾ ಆರಿ ಹೋಗಿ ಹಿಟ್ಟು ಬೆಂದ ಮೇಲೆ ಪಾತ್ರೆಯನ್ನು ಒಲೆಯ ಮೇಲಿಂದ ಇಳಿಸಿ. ಅದನ್ನು ಚಪಾತಿ ಮಣೆಯಮೇಲೆ ಹಾಕಿ (ಸ್ವಲ್ಪ ಅಕ್ಕಿ ಹಿಟ್ಟನ್ನು ಚುಮುಕಿಸಿ) ಚೆನ್ನಾಗಿ ನಾದಿ.

ಸ್ವಲ್ಪ ಬಿಸಿಯಿದ್ದಾಗಲೇ ಇದರ ಉಂಡೆಗಳನ್ನು ಕಟ್ಟಿತೆಳುವೂ ಅಲ್ಲ ದಪ್ಪವೂ ಅಲ್ಲದಂತೆ ಹದವಾಗಿ ಲಟ್ಟಿಸಿ, ಎರಡೂ ಬದಿ ಬೇಯಿಸಿ. ಬೇಯಿಸುವಾಗ ಇದಕ್ಕೆ ಎಣ್ಣೆ ಅಥವಾ ತುಪ್ಪ ಸವರುವ ಅಗತ್ಯವಿಲ್ಲ. ಇದು ಉಬ್ಬಿ ಬರುತ್ತದೆ. ಅನಂತರ ಬೇಕಾದಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿಕೊಂಡು ಸ್ವೀಕರಿಸಿ.

ಇದೇ ರೀತಿ ಅಕ್ಕಿ ಹಿಟ್ಟಿಗೆ ಬದಲಾಗಿ ಗೋಧಿಹಿಟ್ಟು, ರಾಗಿಹಿಟ್ಟಿನ ರೊಟ್ಟಿಗಳನ್ನು ಮೇಲೆ ಹೇಳಿದ ವಿಧಾನದಲ್ಲೇ ಮಾಡಬಹುದು. ಇದರೊಂದಿಗೆ ತಿನ್ನಲು ಕಡಲೆಕಾಯಿ, ತೆಂಗಿನಕಾಯಿ – ಚಟ್ನಿಗಳು  ಹೆಚ್ಚು ಹೊಂದುವುದು.

ಬನ್ಸ್‌ ರೊಟ್ಟಿ

ಬೇಕಾಗುವ ಪದಾರ್ಥಗಳು:

ಮೈದಾಹಿಟ್ಟು 4-5  – ಬಟ್ಟಲು

ಕಡ್ಲೆ ಹಿಟ್ಟು – 1 ದೊಡ್ಡ ಬಟ್ಟಲು

ಮೊಸರು – 1 ಬಟ್ಟಲು

ಬಾಳೆಹಣ್ಣು – 1 (ಪಚ್ಚಬಾಳೆ)

ಉಪ್ಪು – ರುಚಿಗೆ ತಕ್ಕಷ್ಟು

ಸಕ್ಕರೆ –  2 ದೊಡ್ಡ ಚಮಚ

ಅಡಿಗೆ ಸೋಡಾ – 1 ಸಣ್ಣ ಚಮಚ

ಖಾದ್ಯ ತೈಲ – ಕರಿಯಲು ಬೇಕಾಗುವಷ್ಟು

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ಸಕ್ಕರೆ, ಸೋಡಾಪುಡಿಯನ್ನು ಚೆನ್ನಾಗಿ ಬೆರೆಸಿ ಅದಕ್ಕೆ 1/4 ಬಟ್ಟಲು ನೀರು ಬೆರೆಸಿ ಅನಂತರ ಸುಲಿದ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ನಾದಿ ಅನಂತರ ಜರಡಿ ಹಿಡಿದಿಟ್ಟುಕೊಂಡ ಕಡ್ಲೆಹಿಟ್ಟನ್ನು ಸೇರಿಸಿ ಆನಂತರ ಮೈದಾಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಬೆರೆಸುತ್ತಾ ಅದನ್ನು ಚೆನ್ನಾಗಿ ನಾದಿರಿ.

ಈ ಹಿಟ್ಟಿನ ಮುದ್ದೆಗೆ ಎರಡು ದೊಡ್ಡ ಚಮಚ ಎಣ್ಣೆ ಹಾಕಿ ಮುಚ್ಚಿಡಿ. ಅನಂತರ 4-5 ಗಂಟೆಗಳು ಬಿಟ್ಟು ದೊಡ್ಡ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿ ಅದನ್ನು ದಪ್ಪಗೆ (ಪೂರಿಗಿಂತಲೂ ದಪ್ಪಗೆ) ಲಟ್ಟಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈ ಬನ್ಸ್‌ನ್ನು (ಬನ್ಸ್‌ ತುಸು ಕೆಂಪಾಗಿದ್ದಲ್ಲಿ ಒಳಗೆ ಚೆನ್ನಾಗಿ ಬೆಂದಿದೆ ಎಂದು ಅರ್ಥ) ಕರಿದು ತೆಗೆಯಿರಿ.

ಇದನ್ನು ದಕ್ಷಿಣ ಕನ್ನಡದಲ್ಲಿ ಗಟ್ಟಿ ಬೇಳೆ ತವೆಯೊಂದಿಗೆ ಸವಿಯುತ್ತಾರೆ. ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೂ ಸೇವಿಸಬಹುದು.

ಮೇಲಿನ ಎಲ್ಲಾ ತಿನಿಸುಗಳನ್ನು ಮರೆಯದೆ ಮೊದಲು ಶ್ರೀ ರಾಧಾಕೃಷ್ಣಚಂದ್ರರಿಗೆ ಸಮರ್ಪಿಸಿ. ಅನಂತರ ತಮ್ಮವರೊಂದಿಗೆ ತಾವೂ ಸವಿಯಿರಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi