ಭಗವಂತನ ಚಿತ್ರವನ್ನು ಅರಿಯುವುದು

ಆಸ್ಟ್ರೇಲಿಯಾದ ಮೇಲ್ಬರ್ನ್‌ನಲ್ಲಿ 29ನೇ ಜೂನ್, 1974 ರಂದು, ಶ್ರೀಲ ಪ್ರಭುಪಾದರು ಮತ್ತು ವರದಿಗಾರರೊಂದಿಗೆ ನಡೆದ ಸಂವಾದ

– ಅನುವಾದ: ಡಾ.ಕೆ.ವೈ.ಬಾಲರಾಜ್‌

ವರದಿಗಾರ 3 : ಪರಮ ಪೂಜ್ಯರೇ, ನಾನು ಓದಿರುವ ಅನೇಕ ಶಾಸ್ತ್ರಗಳಲ್ಲಿ ಜೀವ ಉಸಿರಿನ ಬಗ್ಗೆ ಆಧಾರವಿದೆ. ಅವರು ಹೇಳುತ್ತಾರೆ, ಉಸಿರು ನೇರವಾಗಿ ಭಗವಂತನಿಂದ ಬರುತ್ತದೆ. ಆದ್ದರಿಂದ ಯೋಗದ ಒಂದು ಮಾರ್ಗವೆಂದರೆ ಮೊದಲು ಉಸಿರಿನ ಮೇಲೆ ಧ್ಯಾನ ಮಾಡುವುದು, ಆಮೇಲೆ ಭಗವಂತನ ಮೇಲೆ ಧ್ಯಾನ.

ಶ್ರೀಲ ಪ್ರಭುಪಾದ : ಹೌದು, ನಮ್ಮ ದೇಹದಲ್ಲಿ ಅನೇಕ ರೀತಿಯ ವಾಯುಗಳಿವೆ ಮತ್ತು ನಮ್ಮ ಹೃದಯದಲ್ಲಿರುವ ಆತ್ಮವು ಈ ವಾಯುಗಳ ಮೇಲೆ ತೇಲಾಡುತ್ತಿದೆ. ಆದ್ದರಿಂದ ಯೋಗದ ಒಂದು ಪ್ರಾಥಮಿಕ ರೂಪ ಏನೆಂದರೆ ಈ ವಾಯುಗಳನ್ನು ನಿಯಂತ್ರಣ ಮಾಡುವುದು.

ಆದ್ದರಿಂದ ಮರಣ ಸಮಯದಲ್ಲಿ ಹೃದಯದಲ್ಲಿರುವ ಆತ್ಮವನ್ನು ಶಿರದ ತುದಿಯಲ್ಲಿರುವ ಒಂದು ಚಿಕ್ಕ ರಂಧ್ರವಾದ ಬ್ರಹ್ಮ ರಂಧ್ರಕ್ಕೆ ಏರಿಸುವುದು. ಅಲ್ಲಿಂದ ಆತ್ಮವು ತಾನು ಬಯಸಿದ ಲೋಕಗಳಿಗೆ ಹೋಗುತ್ತದೆ. ಸ್ವಾಭಾವಿಕವಾಗಿ ಅವನು ಎಲ್ಲಿ ಐಹಿಕ ಕ್ಲೇಶಗಳಿಲ್ಲವೋ ಮತ್ತು ಭಗವ೦ತನ ಒಡನಾಟವಿರುತ್ತದೋ ಅಂಥ ಆಧ್ಯಾತ್ಮಿಕ ಜಗತ್ತಿಗೆ ಹೋಗಲು ಬಯಸುತ್ತಾನೆ. ಅದೇ ಯೋಗದ ದಾರಿ. ಆದರೆ ನಿಮ್ಮ ದೇಶದಲ್ಲಿ ಯೋಗವೆಂದರೆ ಒಂದು ಭೌತಿಕ ವ್ಯಾಯಾಮ. ಹೌದು.

ವರದಿಗಾರ 3 : ನೀವು ಬೋಧಿಸುತ್ತಿರುವ ಈ ಭಕ್ತಿಯೋಗವು ಈ ಯುಗದ, ಈ ಕಾಲದ ಒಂದು ಪಥವಾಗಿದೆಯೇ?

ಶ್ರೀಲ ಪ್ರಭುಪಾದ : ಹೌದು, ಭಕ್ತಿಯೋಗವೇ ನಿಜವಾದ ಯೋಗ. ಭಗವದ್ಗೀತೆಯಲ್ಲಿ ನೀವು ಕಾಣುತ್ತೀರಿ, ಭಗವಂತ ಯೋಗ ಪದ್ಧತಿಯನ್ನು ಈ ರೀತಿ ವಿವರಿಸುತ್ತಾನೆ –

ಯೋಗಿನಾಮಪಿ ಸರ್ವೇಷಾಂ

ಮದ್ವತೇನಾಂತರಾತ್ಮನಾ

ಶ್ರದ್ದವಾನ್‌ ಭಜತೇ ಯೋ ಮಾಂ

ಮೇ ಯುಕ್ತತಮೋ ಮತಃ ||

‘ಯಾರು ತನ್ನಲ್ಲಿ ನನ್ನ (ಕೃಷ್ಣ) ಬಗ್ಗೆ ಯೋಚಿಸುತ್ತಾನೋ ಮತ್ತು ನನಗೆ ಪಾರಮಾರ್ಥಿಕ ಪ್ರೇಮಪೂರ್ವಕ ಸೇವೆ ಸಲ್ಲಿಸುತ್ತಿದ್ದಾನೆಯೋ ಮತ್ತು ನನಗೆ ಪಾರಮಾರ್ಥಿಕ ಪ್ರೇಮಪೂರ್ವಕ ಸೇವೆ ಸಲ್ಲಿಸುತ್ತಿದ್ದಾನೆಯೋ ಅಂಥವನು (ಪ್ರಥಮ ದರ್ಜೆ) ಯೋಗಿಯು” ಭಕ್ತಿಯೋಗಿಯು ಮೊದಲನೆಯ ದರ್ಜೆಯ ಯೋಗಿಯಾಗಿದ್ದಾನೆ.

ಆದ್ದರಿಂದ ನಮ್ಮ ವಿದ್ಯಾರ್ಥಿಗಳಿಗೆ ದಿನದ 24 ಘಂಟೆಯೂ ಕೃಷ್ಣನ ಸ್ಮರಣೆಯನ್ನು ಬಿಡದೆ ಮಾಡುತ್ತಿರಬೇಕು ಎಂಬುದನ್ನು ಹೇಳಿಕೊಡಲಾಗುತ್ತದೆ. ಅದುವೇ ಮೊದಲನೆಯ ದರ್ಜೆಯ ಯೋಗವಾಗಿದೆ.

ವರದಿಗಾರ 3 : ಯಾವುದನ್ನೇ ಯೋಚನೆ ಮಾಡಬೇಕಾದರೂ ಮೊದಲು ನೀವು ಅದನ್ನು ನೋಡಿರಬೇಕಲ್ಲವೇ?

ಶ್ರೀಲ ಪ್ರಭುಪಾದ: ಹೌದು.

ವರದಿಗಾರ 3 : ಹಾಗಾದರೆ ನೀವು ನಿಮ್ಮ ಶಿಷ್ಯರಿಗೆ ಕೃಷ್ಣನನ್ನು ತೋರಿಸುತ್ತಿದ್ದೀರಾ?

ಶ್ರೀಲ ಪ್ರಭುಪಾದ : ಹೌದು. ಖಂಡಿತವಾಗಿಯೂ.

ವರದಿಗಾರ 3 : ಹಾಗಾದರೆ ಕೃಷ್ಣ ಎಂದರೇನು?

ಶ್ರೀಲ ಪ್ರಭುಪಾದ : ನನ್ನ ಶಿಷ್ಯರಿಗೆ ಕೇಳಿರಿ. ಅವರು ಈಗಾಗಲೇ ಕೃಷ್ಣನನ್ನು ನೋಡಿದ್ದಾರೆ. ಅವರು ನಿಮಗೆ ಕೃಷ್ಣ ಏನೆಂಬುದನ್ನು ಹೇಳುತ್ತಾರೆ. ಆದರೆ ನಾನು ನಿಮಗೆ ಕೇಳುತ್ತೇನೆ. ಮೊದಲು ಒಂದು ವೇಳೆ ಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡ ಮಾಹಿತಿಯನ್ನು ನಿಮಗೆ ಕೊಟ್ಟರೆ ನೀವು ಅದನ್ನು ಸ್ವೀಕರಿಸುತ್ತೀರಾ?

ವರದಿಗಾರ 3 : ಹೌದು.

ಶ್ರೀಲ ಪ್ರಭುಪಾದ : (ಚಲಿಸುತ್ತಾ) ಹಾಗಾದರೆ ನೋಡಿ. ಇಲ್ಲಿ ಕೃಷ್ಣನಿದ್ದಾನೆ.

ವರದಿಗಾರ 3 : ಆದರೆ ಅದೊಂದು ಚಿತ್ರಕಲೆ.

ಶ್ರೀಲ ಪ್ರಭುಪಾದ : ಹೌದು, ಅದು ಒಂದು ಚಿತ್ರಕಲೆ. ಒಂದು ವೇಳೆ ನಿನ್ನ ಚಿತ್ರಪಟವಿರುತ್ತಿದ್ದರೆ ನಾನು ಹೇಳುತ್ತಿರಲಿಲ್ಲವೇ, “ಇವನು ಮಿ ಇಂಥವನೆಂದು”?

ವರದಿಗಾರ 3 : ಹೌದು,

ಶ್ರೀಲ ಪ್ರಭುಪಾದ : ಹಾಗಾದರೆ ಅದರಲ್ಲಿ ತಪ್ಪೇನಿದೆ?

ವರದಿಗಾರ 3 : ಆದರೆ ನನ್ನ ಚಿತ್ರ ಮಾಡಬೇಕೆಂದರೆ ಚಿತ್ರಕಾರ ಮೊದಲು ನನ್ನನ್ನು ನೋಡಿರಬೇಕು.

ಶ್ರೀಲ ಪ್ರಭುಪಾದ : ಇಲ್ಲ, ಮೊದಲಿಗೆ ನೀನು ನಿನ್ನ ಈ ಚಿತ್ರದಲ್ಲಿ ಇದ್ದೀಯೋ ಇಲ್ಲವೋ?

ವರದಿಗಾರ 3 : ಹೌದು, ನಾನಿದ್ದೇನೆ.

ಶ್ರೀಲ ಪ್ರಭುಪಾದ : ಹೌದು. ಅದೇ ರೀತಿಯಾಗಿ ಕೃಷ್ಣನು ಕೂಡ ತನ್ನ ಚಿತ್ರದಲ್ಲಿದ್ದಾನೆ. ಆದರೆ ವ್ಯತ್ಯಾಸವೇನೆಂದರೆ ಜನರು ನಿನ್ನ ಚಿತ್ರದೊಂದಿಗೆ ನೋಡಿ ಮಾತನಾಡಲಾರರು. ಆದರೆ ಕೃಷ್ಣನ ಚಿತ್ರದೊಂದಿಗೆ ಮಾತನಾಡಬಲ್ಲರು. ಅದುವೇ ವ್ಯತ್ಯಾಸ.

ವರದಿಗಾರ 3 : ಆದರೆ ಕೃಷ್ಣನ ಕೆಲವು ಚಿತ್ರಗಳು ಬೇರೆ ಬೇರೆಯಾಗಿ ಕಾಣುತ್ತಿವೆ.

ಶ್ರೀಲ ಪ್ರಭುಪಾದ : ಇಲ್ಲ ನಾವು ಮೂಲ ನಿಯಮಗಳ ಬಗ್ಗೆ ಮಾತನಾಡುತ್ತಿದ್ದೇವೆ. ಕೃಷ್ಣನ ಕಡುನೀಲಿಯ ಬಣ್ಣವಿದೆ. ಕೃಷ್ಣನ ಕೊಳಲಿದೆ, ಕೃಷ್ಣನ ನವಿಲುಗರಿಯಿದೆ. ಇವೆಲ್ಲವನ್ನೂ ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಆದ್ದರಿಂದ ಈ ಚಿತ್ರಕಲೆಗಳು ಶಾಸ್ತ್ರದಲ್ಲಿ ವಿವರಿಸಿದಂತೆ ಕೃಷ್ಣನ ನಿಜವಾದ ರೂಪವನ್ನು ಅನುಸರಿಸುತ್ತದೆ.

ಈಗ ನಿನ್ನದೇ ಒಂದು ಚಿತ್ರವನ್ನು ತೆಗೆದುಕೊಳ್ಳೋಣ. ಒಬ್ಬ ಮನುಷ್ಯ ಒಂದು ಚಿತ್ರವನ್ನು ಚಿತ್ರಿಸುವ ರೀತಿ ಮತ್ತೊಬ್ಬರು ಚಿತ್ರಿಸುವ ರೀತಿಗಿಂತಲೂ ಭಿನ್ನವಾಗಿರುತ್ತದೆ. ಆದರೆ ನಿನ್ನ ರೂಪವು  ಸಂಪೂರ್ಣವಾಗಿ ಅದೇ ರೀತಿಯಾಗಿರುತ್ತದೆ ಮತ್ತು ಅದು ಚಿತ್ರಕಾರನ ಕಲ್ಪನೆಯನ್ನು ಅವಲಂಬಿಸಿರುವುದಿಲ್ಲ.

ಆದ್ದರಿಂದ ಕೃಷ್ಣನ ರೂಪವು ಚಿತ್ರಕಾರನ ಮೇಲೆ ಅವಲಂಬಿತವಾಗಿಲ್ಲ. ಆದರೆ ಶಾಸ್ತ್ರಗಳಲ್ಲಿ ಅವನ ಲಕ್ಷಣಗಳ ವಿವರಣೆಯ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಕೃಷ್ಣನು ಪರಮ ಪರಾತ್ಪರನಾಗಿರುವುದರಿಂದ ಅವನು ಮತ್ತು ಅವನ ಚಿತ್ರ ಎರಡೂ ಭಿನ್ನವಾಗಿಲ್ಲ.

ವರದಿಗಾರ 3 : ಆದರೆ ಒಬ್ಬ ಚಿತ್ರಕಾರನಾಗಿ ನನ್ನ ಅಥವಾ ಬೇರೆ ಯಾವ ಚಿತ್ರವನ್ನು ಚಿತ್ರಿಸಬೇಕಾದರೆ ಮೊದಲಿಗೆ ಆ ವಸ್ತು ಅಥವಾ ವಿಷಯಗಳ ಅಂದರೆ ಒಂದು ಜೀವಂತ ವಿಷಯದ ಬಗ್ಗೆ ಅವನು ನೇರವಾಗಿ ಅಧ್ಯಯನ ಮಾಡಬೇಕು.

ಶ್ರೀಲ ಪ್ರಭುಪಾದ : ಹೌದು, ಈ ವಿಷಯವು ಕೂಡ ಜೀವಂತವಾಗಿದೆ. ಕೃಷ್ಣನು ಜೀವಂತನಾಗಿದ್ದಾನೆ ಮತ್ತು ಶಾಸ್ತ್ರಗಳಲ್ಲಿ ಅವನನ್ನು ಈ ರೀತಿಯಾಗಿ ವರ್ಣಿಸಲಾಗಿದೆ : “ಕೃಷ್ಣನ ಬಣ್ಣ ನೀಲಿಯಾಗಿದೆ, ಕೃಷ್ಣನ ಕೈಯಲ್ಲಿ ಕೊಳಲಿದೆ, ಕೃಷ್ಣನ ತಲೆಯಲ್ಲಿ ನವಿಲುಗರಿಯಿದೆ.”

ಮತ್ತು ತ್ರೈ-ಭಂಗ-ಲಲಿತಮ್ – ಕೃಷ್ಣನು ಮೂರು ವಕ್ರಾಕೃತಿಯಲ್ಲಿ ನಿಲ್ಲುತ್ತಾನೆ. ತ್ರಿಭಂಗ ಅಂದರೆ ಕೃಷ್ಣನು ನಿಂತುಕೊಂಡಾಗ ಅವನ ರೂಪವು ಮೂರು ಕಡೆ ಡೊಂಕಾಗಿರುತ್ತದೆ. ನೋಡಿ ಶ್ಯಾಮಮ್ ತ್ರೈ-ಭಂಗ-ಲಲಿತಮ್ ನಿಯತ- ಪ್ರಕಾಶಮ್, ”ಕೃಷ್ಣನ ಮನೋಹರವಾದ ಗಾಢ ನೀಲಿ ಬಣ್ಣ, ಮೂರು ಕಡೆ ಡೊಂಕಾಗುವ ರೂಪವು ಶಾಶ್ವತವಾದ ಸೃಷ್ಟಿಯಾಗಿದೆ.

ಈ ವಿವರಣೆಗಳಿಂದಲೇ ನನ್ನ ವಿದ್ಯಾರ್ಥಿಗಳು ಇಷ್ಟೊಂದು ಚಿತ್ರಕಲೆಗಳನ್ನು ಚಿತ್ರಿಸಿದ್ದಾರೆ. ಈ ವಿವರಣೆಗಳಿಂದ ““ಈ ಚಿತ್ರ ಹೀಗಿರುತ್ತದೆ” ಎಂದು ನಾನು ಅವರಿಗೆ ಸುಳಿವನ್ನು ಕೊಡುತ್ತೇನೆ. ಆದ್ದರಿಂದ ಅವರು ಈ ಟಿಪ್ಪಣಿಗಳನ್ನು ಮಾಡಿಕೊಂಡು ಚಿತ್ರಗಳನ್ನು ರಚಿಸುತ್ತಾರೆ ಮತ್ತು ಜನರು ನಮ್ಮ ಚಿತ್ರಗಳನ್ನು ಬಹಳವಾಗಿ ಮೆಚ್ಚುತ್ತಾರೆ.

ಆದ್ದರಿಂದ ನೀವು ಶಾಸ್ತ್ರೀಯ ಪ್ರಮಾಣೀಕೃತ ವೇದಗಳಿಂದ ಮತ್ತು ವೇದಗಳನ್ನು ಅಧ್ಯಯನ ಮಾಡಿರುವವರನ್ನು ಭೇಟಿ ಮಾಡಿ ಚಿತ್ರಗಳನ್ನು ರಚಿಸಬಹುದು. ಅದೇ ನಾವು ಮಾಡುತ್ತಿರುವುದು. ನೀವು ಬುದ್ಧಿವಂತರಾದರೆ ನೀವೂ ಕೂಡ ಭಗವಂತನ ಈ ನೈಜ ಚಿತ್ರಗಳನ್ನು ರಚಿಸಬಹುದು.

ವರದಿಗಾರ 3 : ಆದರೂ ಕೃಷ್ಣನನ್ನು ಚಿತ್ರಕಲೆಯಲ್ಲಿ ಮೂಡಿಸಬೇಕಾದರೆ ಯಾರಾದರೂ ಅವನನ್ನು ನೋಡಿರಲೇಬೇಕಲ್ಲವೇ?

ಶ್ರೀಲ ಪ್ರಭುಪಾದ : ಹೌದು. ಜನರು ಕೃಷ್ಣನನ್ನು ನೋಡಿದ್ದಾರೆ. ಉದಾಹರಣೆಗೆ ಕೃಷ್ಣನು ಈ ಭೂಮಿಯಲ್ಲಿ ಆವರಿಸಿದಾಗ ಎಷ್ಟೋ ಜನರು ಅವರನ್ನು ನೋಡಿದ್ದಾರೆ. ಅಂದಿನಿಂದಲೂ ಜನರು – ಅವನಿಗೆ ಅನೇಕ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ವೈದಿಕ ಸಾಹಿತ್ಯದಲ್ಲಿ ವಿವರಿಸಿದಂತೆ ಮತ್ತು ಶತಮಾನಗಳಿಂದಲೂ ಸಾಕಾರವಾಗಿ ಕಂಡ ಕೃಷ್ಣನ ರೂಪವನ್ನು ಈ ಜನರು ದೇವಸ್ಥಾನಗಳಲ್ಲಿ ವಿಗ್ರಹರೂಪದಲ್ಲಿ ಪೂಜಿಸುತ್ತಿದ್ದಾರೆ.

ವರದಿಗಾರ 3 : ಆದರೆ ಈಗ ಯಾರಾದರೂ ಕೃಷ್ಣನನ್ನು ನಿಜವಾಗಿಯೂ ನೋಡಿದ್ದಾರೆಯೇ?

ಶ್ರೀಲ ಪ್ರಭುಪಾದ : ಕೃಷ್ಣನನ್ನು ಈಗ ನೋಡಲು ಹೇಗೆ ಸಾಧ್ಯ? ಕೃಷ್ಣನನ್ನು ನೋಡಿರುವಂಥ ಜನರಿಂದ ಪ್ರಾರಂಭವಾದ ಪರಂಪರೆಯಿಂದ ನಾವು ನೋಡಬೇಕು. ನೀವು ನಿಮ್ಮ ಅಜ್ಜನನ್ನು ನೋಡಿರಲಿಕ್ಕಿಲ್ಲ. ಅವರು ಹೇಗಿದ್ದ ಅಂತ ನಿಮಗೆ ಹೇಗೆ ಗೊತ್ತು? ನಿಮ್ಮ ಅಜ್ಜನನ್ನಾಗಲಿ, ಅವರ ತಂದೆಯನ್ನಾಗಲಿ ನೀವು ನೋಡಿಲ್ಲವೆಂದು ಕೊಂಡಿದ್ದೇನೆ. ಅವರ ಬಗ್ಗೆ ನಿಮಗೆ ಹೇಗೆ ಗೊತ್ತು?

ವರದಿಗಾರ 3 : ನಮಗೆ ನಮ್ಮ ತಂದೆ-ತಾಯಿಗಳು ಹೇಳಿದ ಹಾಗೆ.

ಶ್ರೀಲ ಪ್ರಭುಪಾದ : ಹೌದು. ನಿಮ್ಮ ತಂದೆ ನಿನ್ನ ಅಜ್ಜನನ್ನು ನೋಡಿದ್ದಾರೆ. ನೀನು ಅವರನ್ನು ನೋಡಿರಲಿಕ್ಕಿಲ್ಲ. ಆದರೂ ನಿಮ್ಮ ತಂದೆ ನಿನ್ನ ಅಜ್ಜನ ವಿವರಿಸಬಲ್ಲರು. ”ನನ್ನ ತಂದೆ ಈ ರೀತಿ, ಈ ರೀತಿ, ಈ ರೀತಿ ಆಗಿದ್ದರು” ಏನು ಕಷ್ಟೆ? ಆದ್ದರಿಂದ ನೀವು ಜ್ಞಾನವನ್ನು ಪರಂಪರೆಯ ಪ್ರಮಾಣೀಕೃತ ಮೂಲದಿಂದ ಪಡೆಯಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi