ಅಕ್ಷಯ ತೃತೀಯಾ

ಅಕ್ಷಯ ತೃತೀಯಾ ಒಂದು ಅತ್ಯಂತ ಶುಭ ದಿವಸ. ಈ ದಿನ ಯಾವ ರೀತಿಯ ಅಮಂಗಳವೂ ಕಾಣಬರದು. ಈ ದಿನ ನಡೆಸುವ ಕಾರ್ಯಕ್ರಮಗಳಿಗೆ ಮುಹೂರ್ತ ನೋಡುವ ಅಗತ್ಯವೇ ಬಾರದು. ಅಕ್ಷಯ ತೃತೀಯಾದ ಪ್ರತಿಫಳಿಗೆಯೂ ಶುಭ ಮುಹೂರ್ತವೇ!

ವೈಶಾಖ ಶುಕ್ಲಪಕ್ಷದ ಮೂರನೆಯ ದಿನವನ್ನು “ಅಕ್ಷಯ ತೃತೀಯಾ” ಎಂದು ಕರೆಯಲಾಗಿದೆ. ಇದೊಂದು ಪವಿತ್ರ ದಿನ. ‘ಅಕ್ಷಯ’ ಎಂದರೆ ಕ್ಷಯವಿಲ್ಲದ್ದು – ನಾಶವಿಲ್ಲದ್ದು. ಹೀಗಾಗಿ ಈ ದಿನ ಶುಭಾರಂಭಗಳಿಗೆ, ಬಹುಮೂಲ್ಯ ವಸ್ತುಗಳ ಖರೀದಿಗೆ ಅತ್ಯಂತ ಪ್ರಶಸ್ತ. ಈ ಮಂಗಳಕರವಾದ ದಿನದ೦ದು ಕೈಗೊಳ್ಳುವ ಕಾರ್ಯಗಳೆಲ್ಲವೂ ಯಶಸ್ವಿಯಾಗುವುದು ಎಂದು ಪ್ರತೀತಿಯಿದೆ.

ಭಗವಾನ್ ವಿಷ್ಣುವು ಕೈಯಲ್ಲಿ ಕೊಡಲಿ ಹಿಡಿದ ವೀರಭಾವದ ಪರಶುರಾಮನಾಗಿ ಅವತರಿಸಿದ್ದು ಅಕ್ಷಯ ತೃತೀಯೆಯಂದು. ಈ ದಿನ ಕೊಳ್ಳುವ ಬಂಗಾರ ಇತ್ಯಾದಿ ವಸ್ತುಗಳನ್ನು ಕಳ್ಳತನವಾಗದಂತೆ ಶ್ರೀ ವಿಷ್ಣು ರಕ್ಷಿಸುವನೆಂಬ ನಂಬಿಕೆ ಜನಸಾಮಾನ್ಯರದು. ಆದ್ದರಿಂದಲೇ ಈ ದಿನದಂದು ಭಾರತಾದ್ಯಂತ ಚಿನ್ನ ಬೆಳ್ಳಿ ಮಾರಾಟದ ವಹಿವಾಟು ಗಗನ ಮುಟ್ಟಿರುತ್ತದೆ.

ಅಕ್ಷಯ ತೃತೀಯೆಯ ಮಹತ್ವ ಒಂದೆರಡಲ್ಲ ನಮ್ಮ ಪುರಾಣ ಕಾಲದ ಅದೆಷ್ಟೋ ಘಟನೆಗಳು ಈ ದಿನದೊಂದಿಗೆ ಬೆಸೆದುಕೊಂಡಿವೆ.

ಹಿಂದೆ ದೇವಾಸುರರು ಮಂದರ ಪರ್ವತವನ್ನಿಟ್ಟು ಕ್ಷೀರ ಸಾಗರವನ್ನು ಕಡೆದಾಗ, ಅಮೃತ ಉದಯಿಸಿದ ಸುದಿನ – ಅಕ್ಷಯ ತೃತೀಯ.

ದ್ರೌಪದಿಗೆ, ವನವಾಸ ಕಾಲದಲ್ಲಿ ಅತಿಥಿ ಸತ್ಕಾರ್ಯಗಳಿಗೆ ಎಂದಿಗೂ ಕುಂದಾಗದಂತೆ, ಸೂರ್ಯ ಭಗವಾನನು ಅನುಗ್ರಹಿಸಿ, “ಅಕ್ಷಯ ಪಾತ್ರೆಯನ್ನು” ನೀಡಿದ ಪುಣ್ಯ ದಿನ ಅಕ್ಷಯ ತೃತೀಯ.

ಪರಮ ಪವಿತ್ರ ವೈಷ್ಣವ ಕ್ಷೇತ್ರವಾದ ‘ಬದರಿಧಾಮ’ದಲ್ಲಿ ಭಗವಂತನ ದರ್ಶನ ಆರಂಭ ಅಕ್ಷಯ ತೃತೀಯ ದಿನದಿಂದ! ಅಕ್ಷಯ ತೃತೀಯ ದಿನವೇ, ನರ-ನಾರಾಯಣರ ಎದುರು ದೇವಲೋಕದ ಸ್ತ್ರೀಯರ ಗರ್ವಭಂಗವಾಗಿದ್ದು! ತಪಸ್ವಿಗಳಾದ ಅವರು, ತಮ್ಮ ತೊಡೆಯ ರೋಮದಿಂದಲೇ ಅಪ್ಸರೆಯರನ್ನು ಸೃಷ್ಟಿಸಿದ್ದು!

ಭಗೀರಥನು ಗಂಗೆಯನ್ನು ದೇವಲೋಕದಿಂದ ಭೂಮಿಗೆ ತರುವ ತನ್ನ ಅನವರತ ಪ್ರಯತ್ನದ ಫಲವಾಗಿ ಗಂಗೋತ್ರಿಯ ಗೋಮುಖದ ಮೂಲಕ ಭೂಲೋಕಕ್ಕೆ ಗಂಗೆಯನ್ನು (ಭಾಗೀರಥಿ) ಯನ್ನು ಹರಿಸಿದ ಪುಣ್ಯದಿನ. ಹಾಗಾಗಿ ಅಕ್ಷಯ ತೃತೀಯ ದಿನದಂದು ಗಂಗಾ ಸ್ನಾನಕ್ಕೆ ವಿಶೇಷ ಮಹತ್ವ.

ನಾರಾಯಣ ಸರೋವರ ಹೆಸರಿನ ಗುಜರಾತ್‌ನ ಬೃಹತ್ ಸರೋವರ, ಹಿಮಾಲಯದಲ್ಲಿನ ಮಾನಸ ಗಂಗೋತ್ರಿ, ಕುರುಕ್ಷೇತ್ರದ ಬ್ರಹ್ಮ ಸರೋವರಗಳಲ್ಲಿ ಅಕ್ಷಯ ತೃತೀಯದ ದಿನವೇ, ತೀರ್ಥೋದ್ಭವ ಎಂದು ನಂಬಿಕೆ.

ಅಕ್ಷಯ ತೃತೀಯ ದಿನವೇ ಕ್ಷೀರ ಸಾಗರ ಮಥನ ಕಾಲದಲ್ಲಿ ಉದಿಸಿ ಬಂದ ‘ಕೌಸ್ತುಭ’ ಮಣಿಯ ಧಾರಣೆಯನ್ನು ಶ್ರೀ ಮಹಾವಿಷ್ಣುವು ಮಾಡಿದ್ದು! ಹಾಗಾಗಿ ಅಕ್ಷಯ ತೃತೀಯದ ದಿನದ೦ದು, ರತ್ನ-ಚಿನ್ನಾಭರಣ ಖರೀದಿ, ಧಾರಣೆಗಳು, ಅತ್ಯಂತ ಶ್ರೇಷ್ಠ ಎಂದು ಪರಂಪರೆಯಿಂದ ನಂಬಲಾಗಿದೆ. ಗುಲಗಂಜಿ ತೂಕವಾದರೂ ಅಂದು ಚಿನ್ನವನ್ನು ಖರೀದಿಸಿ, ಭಗವಂತನಿಗೆ ಅರ್ಪಿಸಿ, ಪ್ರಸಾದ ರೂಪವಾಗಿ ಧರಿಸುವುದು ವಾಡಿಕೆ.

ಅಕ್ಷಯ ತೃತೀಯದ ದಿನವೇ, ಪಾಂಡವರು ಸ್ವರ್ಗಾರೋಹಣ ಆರಂಭಿಸಿದ್ದು, ವ್ಯಾಸರು, ಮಹಾಭಾರತದ ರಚನೆಗಾಗಿ ಗಣಪತಿಯನ್ನು ಪ್ರಾರ್ಥಿಸಿ, ಸಂಕಲ್ಪಿಸಿ, ಬರವಣಿಗೆ ಆರಂಭಿಸಿದ್ದು, ಗಂಡಕಿಯ ನದಿ ಪಾತ್ರದಲ್ಲಿ ಭಗವಂತನು ಸಾಲಿಗ್ರಾಮವಾಗಿ ರೂಪಾಂತರ ಹೊಂದಿ, ಜಗತ್ತನ್ನಾಶೀರ್ವದಿಸಿದ್ದು.

ಚಂದನ ಯಾತ್ರೆ

ಅಕ್ಷಯ ತೃತೀಯೆಯಂದು 20 ದಿನಗಳ ಪರ್ಯಂತ ಸಾಗುವ ‘ಚಂದನ ಯಾತ್ರೆ’ ಆರಂಭವಾಗುತ್ತದೆ. ಸ್ವತಃ ಭಗವಾನ್‌ ಜಗನ್ನಾಥನೇ ರಾಜಾ ಇಂದ್ರದ್ಯುಮ್ನನಿಗೆ ಈ ಉತ್ಸವವನ್ನು ವೈಶಾಖ ಮಾಸದಲ್ಲಿ ನಡೆಸುವಂತೆ ನಿರ್ದೇಶಿಸಿದ್ದನು. ಈ ಸಂದರ್ಭದಲ್ಲಿ ಭಕ್ತಿ ಸೇವೆಯ ಅಂಗವಾಗಿ ಭಗವಂತನಿಗೆ ಗಂಧ ಚೂರ್ಣ ಲೇಪ ಮಾಡುವ ಸಂಪ್ರದಾಯವಿದೆ. ವೈಶಾಖಮಾಸದಲ್ಲಿ ಬಿಸಿಲ ಧಗೆ ವಿಪರೀತವಾಗಿರುವುದರಿಂದ ಗಂಧದ ಲೇಪನ ಭಗವಂತನಿಗೆ ತಂಪೂಡುತ್ತದೆ ಎನ್ನುವುದು ಭಕ್ತರ ಭಾವ.

ವೈಶಾಖ ಮಾಸದಲ್ಲಿ ವಿಶೇಷವಾಗಿ ಅಕ್ಷಯ ತೃತೀಯೆಯಂದು ಮಾಡುವ ಸತ್ಕಾರ್ಯಗಳಿಗೆ ಪ್ರತಿಯಾಗಿ ಅಧಿಕ ಪ್ರಮಾಣದ ಸತ್ಫಲಗಳು ದೊರೆಯುತ್ತವೆ ಎನ್ನುವುದೊಂದು ನಂಬಿಕೆ. ಆದ್ದರಿಂದ ಬಹುತೇಕರು ಈ ದಿನದಂದು ದಾನ ದಕ್ಷಿಣೆ ಇತ್ಯಾದಿಗಳನ್ನು ನೀಡುತ್ತಾರೆ.

ಈ ದಿನ ಬ್ರಾಹ್ಮಣರಿಗೆ ಕೊಡೆ, ಬೀಸಣಿಕೆ, ಗಂಧ ಇತ್ಯಾದಿಗಳನ್ನು ದಾನವಾಗಿ ನೀಡುವ ಪರಿಪಾಠವಿದೆ. ಧರ್ಮಶಾಸ್ತ್ರಗಳಲ್ಲಿ ಈ ದಿನವನ್ನು ವಿಷ್ಣುಪೂಜೆಗೆ ಅತ್ಯಂತ ಪವಿತ್ರವಾದ ದಿನ ಎಂದು ಹೇಳಲಾಗಿದೆ. ಭಗವಾನ್ ಶ್ರೀ ವಿಷ್ಣುವಿನ ಕೃಪಾರ್ಥರಾಗಿ ಜನರು ಅಂದು ವಿಶೇಷ ಪೂಜೆಗಳನ್ನು ನಡೆಸುತ್ತಾರೆ.

ಹೀಗೆ ಅಕ್ಷಯ ತೃತೀಯ ದಿನವು ಅತ್ಯಂತ ಪುಣ್ಯಕರವಾದ ದಿನವಾಗಿರುತ್ತದೆ. ಇದಲ್ಲದೆ, ವೈಶಾಖ ಮಾಸದ ಪೂರ್ಣಿಮೆಯನ್ನು 6 ವ್ಯಾಸ ಪೂರ್ಣಮೆಗಳಲ್ಲಿ ಒಂದೆಂದು ಆಚರಿಸಲಾಗುತ್ತದೆ. ಬದರಿಕಾಶ್ರಮದ ಬಳಿಯಿರುವ ವ್ಯಾಸ ಗುಹೆಯಲ್ಲಿ ಕುಳಿತು, ಮಹರ್ಷಿ ವ್ಯಾಸರು, ಹಿಮಾಲಯದ ಗಿರಿಶಿಖರಗಳಿಗೆ, ನದಿ ತೀರ್ಥಗಳಿಗೆ ಅಂದು ಹೆಸರನ್ನು ಇಟ್ಟರೆಂದು ನಂಬಿಕೆ.

ಭಗವಂತನ ದಶಾವತಾರದಲ್ಲಿ ಒಂದೆಂದು ಹೇಳಲಾಗುವ ಬುದ್ಧಾವತಾರದಲ್ಲಿ, ಭಗವಾನ್ ಬುದ್ಧನು, ಜನಿಸಿದ್ದು, ಅವರಿಗೆ ಜ್ಞಾನೋದಯವಾದದ್ದು, ಸಂನ್ಯಾಸ ಸ್ವೀಕರಿಸಿದ್ದು, ಮಹಾನಿರ್ವಾಣವಾದದ್ದು ವೈಶಾಖ ಪೂರ್ಣಿಮೆಯಂದೇ!

ಇದಕ್ಕೆಲ್ಲ ಕಲಶವಿಟ್ಟಂತೆ, ಇದು ಜಯಂತಿಗಳ ಮಾಸ. ಮಹಾಭಕ್ತ ಪ್ರಹ್ಲಾದ ಮಹಾರಾಜರ ಪ್ರಾರ್ಥನೆ ಮನ್ನಿಸಿ, ಭಾಗವತ ಧರ್ಮದ ಪ್ರತಿಷ್ಠಾಪನೆಯ ಮೂಲಕ ಶರಣಾಗತ ವತ್ಸಲನಾಗಿ, ನರಸಿಂಹರೂಪದಲ್ಲಿ ಭಗವಂತನು ಆವಿರ್ಭವಿಸಿದ ನರಸಿಂಹ ಜಯಂತಿ, ವೈಶಾಖ ಶುದ್ಧ ಚತುರ್ಥಿಯಂದು!

ದೇಶ ಭಾಷೆಯಲ್ಲಿ ಧರ್ಮ ಬೋಧನೆಗೆ ತೊಡಗಿ, ಜನಸಾಮಾನ್ಯರನ್ನು ಭಕ್ತಿ ಮಾರ್ಗದಿಂದ ಪ್ರಪತ್ತಿಗೊಯ್ದ ಮಹಾಸಂತ ಶ್ರೀರಾಮಾನುಜರು ಅವತರಿಸಿದ್ದು ವೈಶಾಖ ಮಾಸದಲ್ಲೇ! (ಶ್ರೀರಾಮಾನುಜರ ತಿರು ನಕ್ಷತ್ರ : ಪುನರ್ವಸು).

ಅಕ್ಷಯ ತೃತೀಯವು ತ್ರೇತಾಯುಗಾರಂಭವೆಂದು ಪರಿಗಣಿತವಾಗಿರುವುದರಿಂದ ಯುಗಧರ್ಮ ದ್ಯೋತಕವಾಗಿ ಈ ದಿನ ಹೋಮವನ್ನು ನಡೆಸಲಾಗುತ್ತದೆ.

ವಸಂತೋತ್ಸವ

ವಸಂತೋತ್ಸವ ಚೈತ್ರ ವೈಶಾಖಗಳ ಋತುಮಾನದ ಹಬ್ಬ. ಪಾನಕ ಕೋಸಂಬರಿಗಳ ಆತಿಥ್ಯ, ಬೀಸಣಿಗೆ ಮುಂತಾದ ಪರಿಕರಗಳ ತಾಣ. ಹರಿಕಥೆ, ಬಯಲಾಟ, ಸಂಗೀತೋತ್ಸವ ನಿರಂತರ ನಡೆಯುತ್ತವೆ. ಜೊತೆಗೆ, ವೈಶಾಖ ಮಾಸವು ವ್ರತಾಚರಣೆಗೆ ಅತ್ಯಂತ ಪ್ರಶಸ್ತವಾದ ಮಾಸ.

ವೈಶಾಖ ಮಾಸದ ಅಕ್ಷಯ ತೃತೀಯದವರೆಗೆ, ವಸಂತೋತ್ಸವ ಮುಂದುವರಿದಿರುತ್ತದೆ. ಉತ್ತರ ಭಾರತದಲ್ಲಿ ‘ವೈಶಾಖಿ’ (ಬೈಸಾಖಿ ಎಂದೂ ಕರೆಯುತ್ತಾರೆ) ಹೆಸರಿನಲ್ಲಿ ವಸಂತೋತ್ಸವ ನಡೆಯುತ್ತದೆ. ಅಲ್ಲಿ ಅದು ಕಾಮನ ಹುಣ್ಣಿಮೆಯಿಂದ (ಫಾಲ್ಗುಣ ಹುಣ್ಣಿಮೆ) ಆರ೦ಭವಾಗಿ ವೈಶಾಖ ಪೂರ್ಣಿಮೆಯವರೆಗೆ ನಡೆಯುತ್ತದೆ.

ವೈಶಾಖ ಮಾಸವನ್ನು ಕಾಳಿದಾಸನು ‘ಋತು ಸಂಹಾರ’ದಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾನೆ. ವೈಶಾಖದ ಹೊತ್ತಿಗೆ ಸಂಜೆ ಹೊತ್ತಲ್ಲಿ ಮಳೆಯೂ ಬೀಳತೊಡಗಿ, ಧರಣಿ ತಂಪಾಗತೊಡಗುತ್ತದೆ.

ವ್ರತ ಮಹಾತ್ಮೆ

ವೈಶಾಖ ಮಾಸದಲ್ಲಿ ವ್ರತ ನಡೆಸಿ ಸದ್ಗತಿ ಪಡೆದ ಬ್ರಾಹ್ಮಣನೊಬ್ಬನ ಕಥೆ ಹೀಗಿದೆ;

ಒಂದು ಊರಿನಲ್ಲಿ ಒಬ್ಬ ಬ್ರಾಹ್ಮಣನಿದ್ದ. ಆತನ ಹೆಂಡತಿ ಬಹಳ ಒಳ್ಳೆಯವಳಾಗಿದ್ದಳು. ಆದರೆ ಆತ ತೀರ ಬಡವನಾಗಿದ್ದ. ಅತ್ಯಂತ ಕಷ್ಟಪಟ್ಟು ಗಳಿಸಿದ ಅತ್ಯಲ್ಪ ಮೊತ್ತವೂ ಕಾರಣಾಂತರಗಳಿಂದ ಖರ್ಚಾಗಿ ಹೋಗುತ್ತಿತ್ತು. ಆ ಬ್ರಾಹ್ಮಣ ದಂಪತಿಯ ದುಃಖ ಹೆಚ್ಚಿಸುವಂತೆ ಅವರು ಸಂತಾನಹೀನರೂ ಆಗಿದ್ದರು.

ಆ ಬಡ ಬ್ರಾಹ್ಮಣನ ಪತ್ನಿಯು ಒಮ್ಮೆ ತನ್ನ ಗಂಡನನ್ನು ತಮ್ಮ ಕಷ್ಟಕ್ಕೆ ಕಾರಣ ತಿಳಿದು ಬರುವಂತೆ ಬಲವಂತಪಡಿಸಿ ವಸಿಷ್ಠ ಮುನಿಗಳ ಬಳಿ ಕಳುಹಿಸಿದಳು.

ವಸಿಷ್ಠ ಮುನಿಗಳು ಆತನನ್ನು ಕುರಿತು, ಅವನು ಕಳೆದ ಜನ್ಮದಲ್ಲಿ ಬಹಳ ಶ್ರೀಮಂತನೂ, ಬಹುಪುತ್ರವಂತನೂ ಆಗಿದ್ದನೆಂದು ತಿಳಿಸಿದರು. ಆದರೆ ಆತ ಬಹು ಜಿಪುಣನಾಗಿದ್ದ ಮತ್ತು ತನ್ನ ಮಕ್ಕಳಿಗೂ ಒಂದು ಕಾಸನ್ನು ಖರ್ಚು ಮಾಡುತ್ತಿರಲಿಲ್ಲವಾದ ಕಾರಣ ಈ ಜನ್ಮದಲ್ಲಿ ಕಡುಬಡತನ ಮತ್ತು ಸಂತಾನ ಹೀನತೆಯನ್ನು ಅನುಭವಿಸುವ ಕಷ್ಟ ಒದಗಿತ್ತು.

ಬ್ರಾಹ್ಮಣ – ಮುನಿಗಳನ್ನು ಕುರಿತು, ತಾನು ಇಷ್ಟು ಒಳ್ಳೆಯ ಪತ್ನಿಯನ್ನು ಪಡೆಯಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ. ಅದಕ್ಕೆ ಮುನಿಗಳು, ಯಾವುದೋ ಒಂದು ಸಂದರ್ಭದಲ್ಲಿ ಯಾವ ಕಾರಣದಿಂದಲೋ ಆತ ವೈಶಾಖ ಮಾಸದ ಕೊನೆಯ ಐದು ದಿನಗಳ ಕಾಲ ವ್ರತವನ್ನು ಆಚರಿಸಿದ್ದನೆಂದೂ, ಅದರಿಂದಾಗಿಯೇ ಆತ ಬ್ರಾಹ್ಮಣನಾಗಿ ಜನಿಸಿ, ಉತ್ತಮಳಾದ ಪತ್ನಿಯನ್ನು ಪಡೆದಿರುವನೆಂದೂ ತಿಳಿಸಿದರು.

ಅನಂತರ ಮುನಿಗಳು ಆತನಿಗೆ ವೈಶಾಖದ ಕೊನೆಯ ಏಳು ದಿನಗಳ ಕಾಲ ಶ್ರೀ ಕೃಷ್ಣನಲ್ಲಿ ಭಕ್ತಿ ಇರಿಸಿ ವ್ರತಾಚರಣೆ ನಡೆಸುವಂತೆ ಸಲಹೆ ನೀಡಿದರು.

ಅವರ ಮಾತಿನಂತೆ ಬ್ರಾಹ್ಮಣನು ಒಂದು ವಾರ ಕಾಲ ವ್ರತಾಚರಣೆ ನಡೆಸಿದ. ಪ್ರತಿಫಲವಾಗಿ ಪುತ್ರರನ್ನೂ, ಸಂಪತ್ತನ್ನೂ ಪಡೆದ ಮತ್ತು ಅಂತಿಮವಾಗಿ ದೇವೋತ್ತಮನ ಪ್ರೇಮವನ್ನು ಗಳಿಸಿ ಆಧ್ಯಾತ್ಮಿಕ ಲೋಕಕ್ಕೆ ಹಿಂದಿರುಗಿದ!

ಭರಣಿ ಮಳೆಗೆ ಧರಣಿ ತಣಿಯುವುದೆಂಬುದು ಒಕ್ಕಲುತನದ ಗಾದೆ ಮಾತು. ಸಂಜೆಯ ವೇಳೆಗೆ, ಮಳೆಯ ಆರ್ಭಟ ವೈಶಾಖದಲ್ಲಿ ಆರಂಭ. ಅಕ್ಷಯ ತೃತೀಯದ ದಿನದಿಂದ ಹೊಸ ‘ಒಕ್ಕಲುತನ’ದ ವರ್ಷಾರಂಭ. ಆ ದಿನ ಹೂಡುವ ನೇಗಿಲಿ (ಆರಂಭ) ಗೆ ”ಹೊನ್ನಾರು/ಹೊನ್ನಾರಂಭ” ಎಂದೇ ಹೆಸರು.

ಅಕ್ಷಯ ತೃತೀಯದ ದಿನ, ವಿಶೇಷವಾಗಿ ಎತ್ತುಗಳಿಗೆ ಅಲಂಕರಿಸಲಾಗುತ್ತದೆ. ಕೋಡುಗಳಿಗೆ ಬಣ್ಣ ಹಚ್ಚಿ ಬಣ್ಣದ ಟೇಪು ಸುತ್ತಿ, ಕೃಷಿಕರು ಸಂಭ್ರಮಿಸುತ್ತಾರೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ”ಚಕ್ಕಡಿ ಓಡಿಸುವ ಸ್ಪರ್ಧೆ”ಯೂ (ಅಲಂಕರಿಸಿದ ಎತ್ತಿನ ಬಂಡಿಗಳ ಓಟ) ನಡೆಯುತ್ತದೆ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi