ವತ್ಸಾಸುರನನ್ನು ಕೊಂದ!

ಕೃಷ್ಣಂಗೆ ಗೋಪಾಲ ಅನ್ನೋದೂ ಒಂದು ಹೆಸರು. ಗೋಪಾಲ ಅಂದ್ರೆ- ಗೋವುಗಳನ್ನು ಪಾಲಿಸೋನು… ದನ ಕಾಯೋನು!

ಕೃಷ್ಣಂಗೆ ಹಸು-ಕರುಗಳ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ಪುಟ್ಟ ಪುಟ್ಟ ಕರುಗಳ ಮೆತ್ತನೆ ಮೈಯನ್ನ ಸವರುತ್ತ ಋಷಿ ಪಡ್ತಿದ್ದ. ಅವನಿಗಿಂತ ಜಾಸ್ತಿ ಆ ಕರುಗಳು ಖುಷಿಪಟ್ಟು ಕುಣಿದಾಡ್ತಿದ್ವು. ಅಷ್ಟು ದೂರದಲ್ಲಿ ಕೃಷ್ಣನ್ನ ನೋಡಿದ್ರೂ ಸಾಕು, ಬಾಲ ಎತ್ಕೊಂಡು ಛಂಗನೆ ನೆಗೀತಾ ಓಡಿ ಬರುತ್ತಿದ್ವು.

ಕೃಷ್ಣಕೊಳಲೂದ್ತಾ ಕೂತು ಬಿಟ್ಟಂತೂ ಮುಗೀತು. ಹಸು ಕರುಗಳು ಹುಲ್ಲು ತಿನ್ನೋದೂ ಮರ್ತು ತಲೆದೂಗ್ತಾ ನಿಂತು ಬಿಡ್ತಿದ್ವು. ಉಳಿದ ಗೋಪ ಹುಡುಗರ ಕಥೆಯಂತೂ ಬಿಡು. ಅವ್ರು ಯಾವಾಗ್ಲೂ  ಕೃಷ್ಣನ ಹಿಂದೆ, ಮುಂದೇನೇ.

ಅದಿನ್ನೂ ಅವರೆಲ್ಲ ಬೃಂದಾವನಕ್ಕೆ ಬಂದ ಹೊಸತು. ಕೆಟ್ಟ ಕಂಸನಿಂದ ಪುಟಾಣಿ ಕೃಷ್ಣಂಗೆ ಏನಾದ್ರೂ ತೊಂದ್ರೆ ಆಗಬಹುದು ಅಂತ ಹೆದರ್ಕೊಂಡೇ ಅವ್ರೆಲ್ಲ  ಅಲ್ಲಿಗೆ ಬಂದು ಬಿಟ್ಟಿದ್ರು.

ಆದ್ರೆ ಆ ದುಷ್ಟಂಗೆ ಈ ವಿಷ್ಯ ಗೊತ್ತಾಗ್ದೇ ಇರುತ್ತ? ಹೇಗಾದ್ರೂ ಮಾಡಿ ಈ ಪೋರನ್ನ ಕೊಲ್ಲಲ್ಲೇಬೇಕು ಅಂತ ಅವನು ಶಪಥ ಮಾಡಿ ಬಿಟ್ಟಿದ್ದ. ಸರಿ ಈಗ ಮತ್ತೆ ಬೃಂದಾವನಕ್ಕೂ ತನ್ನ ಭಂಟರನ್ನು ಕಳಿಸ್ಲಿಕ್ಕೆ ಶುರುಮಾಡ್ದ. ಹೀಗೆ ಬಂದವ್ರಲ್ಲಿ ಮೊದಲೆಯವನೇ ವತ್ಸಾಸುರ.

ಈ ಕಿಲಾಡಿ ರಾಕ್ಷಸ ಏನು ಮಾಡ್ದ ಗೊತ್ತಾ? ತಾನೊಂದು ಪುಟ್ಟಕರು ವೇಷ ಹಾಕ್ಕೊಂಡು ಕೃಷ್ಣನ ಮನೆ ಸೇರ್ಕೊಂಡ. ಎರಡು ದಿನ ಪೂರ್ತಿ ಅವರ ಮನೆ ಕೊಟ್ಟಿಗೇಲೇ ಇದ್ದು, ಕೃಷ್ಣ ಏನೇನು ಮಾಡ್ತಾನೆ ಅಂತೆಲ್ಲ ನೋಡ್ಕೊಂಡ. ಅಷ್ಟು ದೊಡ್ಡ ಹಸು ಮಂದೇಲಿ ಈ ಪುಟಾಣಿ ಕರು ಒಂದು ಹೊಸತಾಗಿ ಸೇರ್ಕೊಂಡಿದೆ ಅಂತ ಯಾರಿಗೂ ಗೊತ್ತಾಗ್ಲೇ ಇಲ್ಲ. ಆದ್ರೆ… ಒಬ್ಬನ್ನ ಬಿಟ್ಟು!

ಹೌದು. ನಮ್ ಕೃಷ್ಣ ಬೇರೆ ಎಲ್ರ ಹಾಗಲ್ಲ ಅಲ್ವ? ಅವನು ಕೊಳಲೂದುವಾಗ ಎಲ್ಲ ಹಸು ಕರುಗಳು ಅವೆಲ್ಲೇ ಇದ್ದೂ ಓಡಿ ಬರಿದ್ವು ತಾನೆ? ಆದ್ರೆ ಈ ಒಡ್ಡ ರಾಕ್ಷಸನ ಬಡ್ಡು ಕಿವಿಗೆ ಕೊಳಲಿನ ದನಿ ಸೇರ್ತಾನೇ ಇರ್ಲಿಲ್ಲ.  ಎದ್ದು ಹೋಗೋದ್ಯಾಕೆ ಅಂತ ಬಿದ್ದಲ್ಲೇ ಬಿದ್ಕೊಂಡು ಹುಲ್ಲು ಮೇಯ್ತಾ ಇದ್ ಬಿಡ್ತಿದ್ದ. ಕೃಷ್ಣನ ಅನುಮಾನ ಬಲವಾಯ್ತು. ಇದ್ರಲ್ಲೇನೋ ಸಂಚಿದೆ ಅಂತ ಗೊತ್ತಾಯ್ತು.

ಜೊತೇಲಿದ್ದ ಹುಡುಗ್ರೆಲ್ಲ ಕೂತು ನೋಡ್ತಿದ್ದ ಹಾಗೇ ಕೃಷ್ಣ ಎದ್ದ. ಅವ್ನ ಮುಖದಲ್ಲಿ ಯಾವತ್ತೂ ಇರ್ತಿದ್ದ ನಗು ಇರ್ಲಿಲ್ಲ. ಸಿಟ್ಟಿನ ಮುಖ ಮಾಡ್ಕೊಂಡು ಧಡ ಧಡ ಬಂದವ್ನೆ ಆ ಕರುವಿನ ವೇಷದಲ್ಲಿದ್ದ ವಾತ್ಸಾಸುರನ ಹಿಂಗಾಲು ಹಿಡಿದು ಎತ್ತಿದ. ಆ ಹುಡುಗ್ರಿಗೆ ಇವ್ನು ಯಾಕೆ ಹೀಗೆ ಮಾಡ್ತಿದಾನೆ ಅಂತ ಗಾಬರಿ.

ಕೃಷ್ಣಂಗೋ ಹಸು-ಕರು ಅಂದ್ರೆ ಜೀವ ಆದ್ರೆ, ಈಗ್ಯಾಕೆ ಹೀಗೆ ಮಾಡ್ತಿದಾನೆ? ಅವ್ರೆಲ್ಲಾ ಚಡಪಡಿಸಿದ್ರು.

ಕೃಷ್ಣ ಮಾತ್ರ ಹಿಂದೆ ಮುಂದೆ ನೋಡ್ದೆ ಆ ಕರುರೂಪೀ ರಾಕ್ಷಸನನ್ನು ಎತ್ತಿ ಗರ ಗರ ಗರ ತಿರುಗಿಸಿ ಜೋರಾಗಿ ಎಸೆದುಬಿಟ್ಟ! ಆ ಕರು ಕೆಟ್ಟದಾಗಿ ಕೂಗ್ತಾ ಯಮುನೆ ತೀರದಲ್ಲಿ ಹೋಗಿ ಬಿತ್ತು. ಹಾಗೆ ಬೀಳುವಾಗ, ಕರು ಹೋಗಿ ರಾಕ್ಷಸ ವತ್ಸಾಸುರ ಆಗಿ ಬಿಟ್ಟಿದ್ದ! ಅವ್ನ ವಿಕಾರ ದೇಹ ಸೀಳು ಬಿದ್ದು ರಕ್ತ ಹರೀತಿತ್ತು. ಕಣ್ಣು ಗುಡ್ಡೆ ಹೊರಗೆ ಬಂದಿತ್ತು. ಅವನು ಸತ್ ಹೋಗಿದ್ದ ಜೊತೇಲಿದ್ದ ಗೆಳೆಯರೆಲ್ಲ ಕೃಷ್ಣನ ಕರಾಮತ್ತಿಗೆ ಬಾಯಿ ಬಾಯಿ ಬಿಡ್ತಾ ಬೆರಗಾಗಿ ನಿಂತಿದ್ರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi