ಕ್ರೈಸ್ತ ಮಿಷನರಿ ಮತ್ತು ಗಣಿ ಕಾರ್ಮಿಕರು

ಆಂಗ್ಲಮೂಲ: ಪ್ರಭುಪಾದ ನೆಕ್ಟರ್‌, ಸತ್‌ಸ್ವರೂಪದಾಸ ಗೋಸ್ವಾಮಿ

ಇಸ್ಕಾನ್‌ ಸಂಸ್ಥೆಯ ತಾರುಣ್ಯದಲ್ಲಿ ಅದರ ಬ್ರಹ್ಮಚಾರಿ ಸದಸ್ಯರಾಗಿದ್ದ ತಮಾಲ ಕೃಷ್ಣರು ಒಮ್ಮೆ ಶ್ರೀಲ ಪ್ರಭುಪಾದರರನ್ನು ಕುರಿತು “ಕೃಷ್ಣ ಲೋಕ ಹೇಗಿರುತ್ತದೆ?” ಎಂದು ಕೇಳಿದರು. ಅದಕ್ಕುತ್ತರವಾಗಿ ಪ್ರಭುಪಾದರು ಅಲ್ಲಿ ಯಾವ ರೀತಿಯ ಡ್ರಾಫ್ಟ್‌ ಬೋರ್ಡ್‌ಗಳು ಇರುವುದಿಲ್ಲ ಎಂದು ಚಟಾಕಿ ಹಾರಿಸಿದರು. ಅಲ್ಲಿ ನೆರೆದಿದ್ದ ಭಕ್ತರೆಲ್ಲ ನಕ್ಕರು. ಮುಂದುವರಿದ ಪ್ರಭುಪಾದರು ಕ್ರೈಸ್ತ ಮಿಷನರಿಯೊಬ್ಬ ಗಣಿಕಾರ್ಮಿಕರಿಗೆ ನರಕವನ್ನು ವರ್ಣಿಸಿದ ಕಥೆ ಹೇಳಿದರು.

ಒಮ್ಮೆ ಕ್ರೈಸ್ತ ಮಿಷನರಿ ಗಣಿಕಾರ್ಮಿಕರನ್ನುದ್ದೇಶಿಸಿ ಮಾತನಾಡಲು ಹೋದ. ಅವರೆದುರಿಗೆ ಪಾಪ-ಪುಣ್ಯಗಳ ಬಗ್ಗೆ ಪ್ರಚಂಡ ಭಾಷಣ ಬಿಗಿದ. “ಪಾಪಿ ಮನುಷ್ಯ ನರಕಕ್ಕೆ ಹೋಗಲೇಬೇಕು. ಏಸುಕ್ರಿಸ್ತನಿಗೆ ಶರಣಾದರೆ ಮಾತ್ರ ನರಕಕ್ಕೆ ಹೋಗುವುದನ್ನು ತಪ್ಪಿಕೊಳ್ಳಬಹುದು” ಎಂದು ಬೋಧಿಸ ತೊಡಗಿದ.

ಗಣಿಕಾರರಲ್ಲಿ ಒಬ್ಬ ಪಾದ್ರಿಯನ್ನು ತಡೆದು ಕೇಳಿದ. “ಅವನ ನಂಬರ್‌ ಏನು?”

ಗಣಿಕಾರ್ಮಿಕರಲ್ಲಿ ಎಲ್ಲರಿಗೂ ಒಂದೊಂದು ನಂಬರ್‌ ಇರುತ್ತಿರಲಾಗಿ, ಅವನು ಕ್ರಿಸ್ತನಿಗೂ ಒಂದು ನಂಬರ್‌ ಇದ್ದೀತು ಎಂದು ಯೋಚಿಸಿದ್ದ. ಅವನ ಪಾಲಿಗೆ ಕ್ರಿಸ್ತನೂ ತಮ್ಮಂತೆಯೇ ಒಬ್ಬ ಕಾರ್ಮಿಕ! ಹೀಗಾಗಿಯೇ ಆತ ಕೇಳಿದ್ದು. “ಕ್ರಿಸ್ತನ ನಂಬರ್‌ ಏನು?” ಎಂದು.

ಪಾದ್ರಿ ನರಕದ ಯಾತನೆಯನ್ನು ಬಣ್ಣಿಸಲು ಯತ್ನಿಸುತ್ತಿದ್ದ. “ನರಕ! ಅದು ಕತ್ತಲುಕೂಪ, ಪಾತಾಳದಲ್ಲಿರುತ್ತೆ!!”

ಗಣಿಕಾರರು ಪಾದ್ರಿಯ ಮಾತು ಕೇಳಿ, ತಮ್ಮ ಹಿಂದಿನ ಗವಿಯನ್ನು ದಿಟ್ಟಿಸಿ ನೋಡಿದರು. ಅವರಿಗೆ ನರಕವೂ ಈ ಗಣಿಯ ಹಾಗೇ ಇರಬಹುದು ಎನಿಸಿತು.

ಪಾದ್ರಗೀಗ ಅಲ್ಲಿಯ ಸನ್ನಿವೇಶದ ಅರಿವಾಯ್ತು. ತಮ್ಮ ವ್ಯಾಪ್ತಿಯ ಹೊರತಾಗಿ ಬೇರೆ ಜಗತ್ತಿನ ಅರಿವಿರದ ಜನರಿಗೆ ಅವರ ರೀತಿಯಲ್ಲೇ ಅರ್ಥ ಮಾಡಿಸಿಕೊಡಬೇಕು ಎಂದು ಯೋಚಿಸಿ ಮಾತು ಮುಂದುವರಿಸಿದ. “ನರಕದಲ್ಲಿ….. ನಿಮಗೆ ಗೊತ್ತೇ? ಅಲ್ಲಿ ಒಂದು ನ್ಯೂಸ್‌ ಪೇಪರ್‌ ಕೂಡು ಇರುವುದಿಲ್ಲ!”

ಓಹ್‌! ನ್ಯೂಸ್‌ ಪೇಪರ್‌ ಇರುವುದಿಲ್ಲವೇ? “ಕಷ್ಟ ಕಷ್ಟ” ಅತಿ ಭಯಾನಕ! ಗಣಿ ಕಾರ್ಮಿಕರಿಂದ ಉದ್ಗಾರಗಳು ಹೊರಟವು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi