ವರಾಹ ಸ್ವಾಮಿಯ ಅವತಾರ ದಿನವನ್ನು ಜನ ಸಾಮಾನ್ಯರು ವರಾಹ ಜಯಂತಿಯಾಗಿ ಕರ್ನಾಟಕದಲ್ಲಿ ಆಚರಿಸುವುದಿಲ್ಲ. ವರಾಹ ಸ್ವಾಮಿ ಮೂರ್ತಿಯ ಪೂಜಾರಾಧನೆ, ಗುಡಿಗೋಪುರಗಳೂ ಸ್ವಲ್ಪ ಅಪರೂಪವೇ. ಶ್ರೀವೈಷ್ಣವ ಸಂಪ್ರದಾಯದಲ್ಲಿ ಭೂವರಾಹ ವಿಗ್ರಹರಾಧನೆ ಇಂದಿಗೂ ಉಳಿದು ಬಂದಿದೆ.

ಭೂ ವರಾಹ ಸ್ವಾಮಿಯ ದೇಗುಲಗಳಲ್ಲಿ ತಿರುಪತಿ, ಮೇಲುಕೋಟೆ, ಮೈಸೂರು, ಪುಷ್ಕರ, ಪ್ರಯಾಗ ಮುಂತಾದವು ಪ್ರಮುಖವಾದವು.
ವರಾಹಸ್ವಾಮಿಯ ನೆಲೆಯಾದ ವರಾಹಗಿರಿ (ತಿರುಪತಿಯ ಒಂದು ಬೆಟ್ಟ) ಯಲ್ಲಿ ಶ್ರೀನಿವಾಸ, ವೆಂಕಟೇಶ್ವರ ಭಗವಂತ ನೆಲೆ ನಿಂತಿದ್ದಾನೆ. ಎಲ್ಲ ನಿವೇದನೆಗಳೂ ಮೊದಲಿಗೆ ವರಾಹ ಸ್ವಾಮಿ ಸನ್ನಿಧಿಯಲ್ಲಿ ಆದಮೇಲೆ ಶ್ರೀನಿವಾಸನಿಗೆ ನೆರವೇರುತ್ತವೆ. ಶ್ರೀರಾಮಾನುಜರಿಗೂ ಮೊದಲಿನ ಸಂಪ್ರದಾಯದಲ್ಲಿ ಪ್ರತ್ಯೇಕ ಉತ್ಸವಾದಿಗಳು, ರಥೋತ್ಸವಗಳು, ತಿರುಮಲದ ಶ್ರೀವರಾಹ ಸ್ವಾಮಿಗೆ ನೆರವೇರುತ್ತಿದ್ದವೆಂದು ತಿರುಪತಿ ಇತಿಹಾಸದಿಂದ ತಿಳಿದು ಬರುತ್ತದೆ.
ಪುಷ್ಕರದಲ್ಲಿರುವುದು ಶ್ವೇತ ವರಾಹಸ್ವಾಮಿ ದೇವಸ್ಥಾನ. ಶ್ರೀಲಕ್ಷ್ಮೀದೇವಿಯ ಪ್ರತ್ಯೇಕ ಗುಡಿಯೊಂದು ಸನ್ನಿಧಿಯಲ್ಲಿದೆ.
ಮೈಸೂರಿನ ಶ್ವೇತ ವರಾಹ ದೇವಸ್ಥಾನ, ಅರಮನೆಯ ಆವರಣದಲ್ಲಿದೆ. ಮೈಸೂರರಸರು, ವಿಜಯನಗರದರಸರ ಆಳ್ವಿಕೆಯ ಮುಂದುವರಿದ ರಾಜರೆಂದೇ ಹೇಳಿಕೊಂಡವರು. ವರಾಹ ಧ್ವಜಲಾಂಛನ ವರಾಹ ನಾಣ್ಯಗಳು ವಿಜಯನಗರದ ರಾಜಲಾಂಛನಗಳು. ವರಾಹ ನ್ಯಾಣ – ಹಣ ಎಂಬುದರ ಪರ್ಯಾಯವಾಗಿ ಬಳಕೆಗೆ ಬಂದದ್ದು, ವಿಜಯನಗರದರಸರಿಂದಾಗಿಯೇ. ಮೈಸೂರು ಅರಸರು, ಶ್ವೇತವರಾಹ ದೇವಾಲಯವನ್ನು ಅರಮನೆ ಆವರಣದಲ್ಲಿ ನಿರ್ಮಿಸಿದ್ದಾರೆ.
ಭೂದೇವಿ (ಇಳಾ) ಸಮೇತ ಭೂವರಾಹಸ್ವಾಮಿ ದೇವಾಲಯಗಳು, ತಮಿಳುನಾಡಿನ ಚೋಳ ಮಂಡಳದಲ್ಲಿ ಹಲವಾರು ಇವೆ.
ಬೆಂಗಳೂರಿನಲ್ಲೂ ಕೆಲವು ಮಂದಿರಗಳಲ್ಲಿ ವರಾಹ ಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

ವರಾಹಸ್ವಾಮಿಯು ಭೂಮಿಯನ್ನು ಉದ್ಧರಿಸಿ, ಏರಿಸಿದ್ದು, ಪುರಾಣೋಕ್ತವಾಗಿದೆ. ಹಾಗಾಗಿ ಭೂಮಿ ಸಂಬಂಧಿತನಾದ ಕರ್ಮಗಳಲ್ಲಿ ಗುದ್ದಲಿಪೂಜೆ, ಶಂಕುಸ್ಥಾಪನೆ, ಭೂಮಿಪೂಜೆ – ಇತ್ಯಾದಿ ನೆರವೇರಿಸುವಾಗ ವರಾಹ ಸ್ವಾಮಿಯ ಪೂಜೆ ನಡೆಸಲಾಗುತ್ತದೆ.
ವೇದದಲ್ಲಿ ವರಾಹಾವತಾರದ ಪ್ರಸ್ತಾಪ
ಆಪೋ ವಾ ಇದಮಗ್ರೇ ಸಲಿಲಮಾಸೀತ್ |
ತಸ್ಮಿನ್ ಪ್ರಜಾಪತಿರ್ವಾಯುಭೂತ್ವಾ ಅಚರತ್ |
ಸ ಇಮಾಮಪಶ್ಯತ್ |
ತಾಂ ವರಾಹೋ ಭೂತ್ವಾ ಅಹರತ್ | (ತೈತ್ತಿರೀಯ ಸಂಹಿತಾ, VII, 1-5
(ಇದೆಲ್ಲ ಮೊದಲು ನೀರಾಗಿದ್ದಿತು. ಅದರೊಳಗೆ ಪ್ರಜಾಪತಿಯು ವಾಯುರೂಪದಿಂದ ಸಂಚರಿಸಿದನು. ಇವಳನ್ನು (ಭೂಮಿಯನ್ನು) ಅಲ್ಲಿ ನೋಡಿದನು. ಅವಳನ್ನು ವರಾಹರೂಪದಿಂದ ಮೇಲೆತ್ತಿದನು.)
ಉದ್ಧೃತಾಸಿ ವರಾಹೇಣ ಕೃಷ್ಣೇನ ಶತಬಾಹುನಾ |
ಭೂರ್ಧೇನುಧರಣೀ ಲೋಕಧಾರಿಣೀ ||
(ತೈತ್ತಿರೀಯ ಸಂಹಿತಾ, I, 1-6)
(ಭೂಮಿಯೆಂದೂ ಧೇನುವೆಂದೂ ಧರಣಿಯೆಂದೂ ಲೋಕಧಾರಿಣಿಯೆಂದೂ ಕೊಂಡಾಡಲ್ಪಟ್ಟ ತಾಯಿಯೇ! ನೂರು ತೋಳುಗಳುಳ್ಳ ಕೃಷ್ಣನಿಂದ, ವರಾಹರೂಪಿಯಿಂದ ನೀನು ಮೇಲೆತ್ತಲ್ಪಟ್ಟವಳಲ್ಲವೇ!?)






Leave a Reply