ಸಂಕೀರ್ತನ ಯಶೋಗಾಥೆಗಳು
1977 ರಲ್ಲಿ ಒಮ್ಮೆ ಶ್ರೀಲ ಪ್ರಭುಪಾದರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಆ ಸಮಯದಲ್ಲಿ ಅವರನ್ನು ಉಲ್ಲಸಿತರನ್ನಾಗಿರಿಸುವುದು ಹೇಗೆ? ಎಂದು ಅವರ ಶಿಷ್ಯರು ಚಿಂತನೆ ನಡೆಸಿದ್ದರು.

ಪುಸ್ತಕ ಸಂಕೀರ್ತನೆಯೊಂದೇ ಅದಕ್ಕಿರುವ ಸುಲಭ ಉಪಾಯ ಎಂದು ಅವರು ಅರಿತಿದ್ದರು. ಈ ಕಾರಣದಿಂದಲೇ ಮತ್ತೊಂದು ಓಟ (ಮ್ಯಾರಾಥಾನ್) ಆರಂಭವಾಯಿತು. ಈ ಓಟದಲ್ಲಿ ಭಾಗಿಯಾಗಿದ್ದ ಭಕ್ತರಲ್ಲಿ ಸ್ವಿಡ್ಜರ್ಲೆಂಡಿನ ಉಜ್ವಲ ನೀಲಮಣಿದಾಸರು ಒಬ್ಬರು. ಸಂಕೀರ್ತನ ಯಶೋಗಾಥೆಯ ಅವರ ಅನುಭವ ಹೀಗಿದೆ :
ಶ್ರೀಲ ಪ್ರಭುಪಾದರು ಅನಾರೋಗ್ಯದಿಂದ ಮಲಗಿಬಿಟ್ಟಿದ್ದರು. ಅವರನ್ನು ಸಂತೋಷಗೊಳಿಸಲು ಪುಸ್ತಕ ಸಂಕೀರ್ತನೆಯ ಫಲಿತಾಂಶಗಳಿಂದ ಮಾತ್ರವೇ ಸಾಧ್ಯ ಎನ್ನುವುದು ನಮಗೆ ಗೊತ್ತಿತ್ತು. ಹೀಗಾಗಿ ನಾವೊಂದು ಪುಸ್ತಕ ಓಟವನ್ನೇ ಆರಂಭಿಸಿದೆವು.
ಈ ಸಂಬಂಧ ನಾನು ಲೂಸೇರ್ನ್‌ನ ಬೀದಿಯೊಂದರಲ್ಲಿ ಪುಸ್ತಕಗಳನ್ನು ಹಂಚುವ ಕೆಲಸಕ್ಕೆ ತೊಡಗಿದೆ. ನಾನು ಇರಿಸಿಕೊಂಡಿದ್ದ ಪುಸ್ತಕಗಳನ್ನು ನೋಡುತ್ತ ನಿಂತಿದ್ದ 15ರ ಹುಡುಗನೊಬ್ಬ ಬಳಿ ಬಂದು ಬಹಳ ಹೊತ್ತು ಅವುಗಳನ್ನು ವೀಕ್ಷಿಸಿದ. ಅವನು, ತನಗೆ ಬಹಳಷ್ಟು ವ್ಯಾಪಾರ ಮಾಡುವುದಿದೆಯೆಂದೂ ಆದರೆ ಅದಕ್ಕೆ ತನ್ನಲ್ಲಿರುವ ಹಣ ಕಡಮೆ ಬೀಳಬಹುದೆಂದು ಹೇಳಿ, ನಾನು ಪುನಃ ಬಂದೇ ಬರುವುದಾಗಿ ಆಶ್ವಾಸನೆಯಿತ್ತು ಹೊರಟು ಹೋದ.
“ಮತ್ತೊಬ್ಬ ಅಂಥದೇ ಗಿರಾಕಿ’ ನಾನು ಯೋಚಿಸಿದೆ. ಏಕೆಂದರೆ, ಹೀಗೆ ಬಂದು ಪುಸ್ತಕಗಳನ್ನು ನೋಡಿ ಮತ್ತೆ ಬರುವೆನೆಂದು ಹೇಳಿ ಬಾರದೇ ಉಳಿದ ಸಾಕಷ್ಟು ಜನರನ್ನು ನಾನು ನೋಡಿದ್ದೆ. ಅಂದು ಮಧ್ಯಾಹ್ನದ ವೇಳೆಗೇ ಆ ಸ್ಥಳವನ್ನು ತೆರವುಗೊಳಿಸಿ ನಾನು ಹೊರಟುಬಿಟ್ಟೆ.
ಈ ಘಟನೆಯ ಎರಡು ದಿನದ ಅನಂತರ, ನಾನು ಮನೆ ಮನೆಗೆ ಹೋಗಿ ಪುಸ್ತಕ ಮಾರುವ ಕೆಲಸದಲ್ಲಿ ತಲ್ಲೀನನಾದೆ. ಆ ದಿನ ಮೊದಲ ಮನೆಯ ಬಾಗಿಲು ಬಡಿದಾಗ, ಕದ ತೆಗೆದವನು ಆ ಅದೇ ಹುಡುಗನಾಗಿದ್ದ! ನನ್ನನ್ನು ನೋಡಿ, “ಓಹ್, ನೀವು ಇಲ್ಲಿದ್ದೀರಿ, ನಾನು ಮೊನ್ನೆ ಅಲ್ಲಿಗೆ ಮರಳಿದಾಗ ನೀವು ಇದ್ದಿರಲೇ ಇಲ್ಲ” ಎಂದು ಅಚ್ಚರಿಯಿಂದ ನುಡಿದ.

ಆ ದಿನ ಅವನ ಶಿಕ್ಷಕರೊಬ್ಬರಿಗೆ ಆರೋಗ್ಯವಿಲ್ಲದಿದ್ದುದರಿಂದ ತಾನಿನ್ನೂ ಮನೆಯಲ್ಲಿರುವುದಾಗಿ ಹೇಳಿ, ಆಗ ತಾನೇ ಜರ್ಮನ್ ಭಾಷೆಗೆ ತರ್ಜುಮೆಗೊಂಡಿದ್ದ ಭಕ್ತಿರಸಾಮೃತ ಸಿಂಧು ಪುಸ್ತಕವನ್ನು ಖರೀದಿಸಿದ. ಕೃಷ್ಣನ ಈ ಅದ್ಭುತ ವ್ಯವಸ್ಥೆಗೆ ನಾನು ಬೆರಗಾದೆ.
ಮೂರು ವರ್ಷಗಳ ಅನಂತರ ಮತ್ತೆ ನಮ್ಮ ಭೇಟಿಯಾಯಿತು. ಈ ಭೇಟಿ ನಡೆದದ್ದು ಎಲ್ಲಿ ಗೊತ್ತೆ? ದೇವಾಲಯದಲ್ಲಿ! ಸಂಕೀರ್ತನ ಪ್ರವಾಸ ಮುಗಿಸಿ ನಾವು ಮರಳುವ ವೇಳೆಗೆ ಆತ ಅಲ್ಲಿದ್ದ.
“ನೀವು ಕೊಟ್ಟ ಪುಸ್ತಕ ನನ್ನ ಜೀವನಕ್ಕೆ ಹೊಸ ತಿರುವು ನೀಡಿತು. ಆ ದಿನದಿಂದ ಹೋದಲ್ಲಿ ಬಂದಲ್ಲಿ ಮಹಾಮಂತ್ರ ಮತ್ತು ಭಕ್ತರು ನನ್ನ ಸುತ್ತ ಮುತ್ತ ಇರಲಾರಂಭಿಸಿದರು. ಮೂರು ವರ್ಷ ಹೀಗೆ ಕಳೆದ ಅನಂತರ ನಾನು ಶಾಲೆ ಬಿಟ್ಟು ದೇವಾಲಯ ಸೇರಿದೆ.” ಅವನ ಮಾತು ಮುಂದುವರಿದಿತ್ತು. ಪ್ರಭುಪಾದರ ಪುಸ್ತಕಗಳು ಬದ್ಧಾತ್ಮಗಳನ್ನು ತಲಪಲು ಶ್ರೀಕೃಷ್ಣನು ನಡೆಸಿದ ವ್ಯವಸ್ಥೆ ನಮ್ಮನ್ನು ಅಚ್ಚರಿಗೊಳಿಸಿತ್ತು.
ಆ ಹುಡುಗ ಈಗ ಇಸ್ಕಾನ್ ಭಕ್ತರಲ್ಲೊಬ್ಬ. ಸಂಕೀರ್ತನೆಗೆ ತನ್ನದೇ ಆದ ರೀತಿಯಲ್ಲಿ ಮಹತ್ತರ ಕೊಡುಗೆ ನೀಡುತ್ತಿದ್ದಾನೆ. ಜನರನ್ನು ಕೃಷ್ಣ ಪ್ರಜ್ಞೆಗೆ ಸೆಳೆಯಲು ದೇವೋತ್ತಮನೇ ದಾರಿ ಮಾಡಿಕೊಡುತ್ತಾನೆ. ನಾವು ಸಂಕೀರ್ತನೆ ನಡೆಸುವ ಮೂಲಕ ಕೇವಲ ವಾಹಕಗಳಾದರೆ ಸಾಕು !!
ಈ ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಅಜ್ಞಾನ ಮತ್ತು ಮಾಯೆಯ ಅಂಧಕಾರವನ್ನು ಹೊಡೆದೋಡಿಸುವ ಪ್ರಬಲ ಅಸ್ತ್ರಗಳಾಗಿವೆ. ನಾವು ಈ ಬಗೆಯ ಸಾಹಿತ್ಯವನ್ನು ಹೆಚ್ಚು ಹೆಚ್ಚು ವಿತರಣೆ ಮಾಡಿದಷ್ಟು ಲೋಕದ ಜನರ ಆತ್ಮಹತ್ಯೆ ಪ್ರಕ್ರಿಯೆಯನ್ನು (ಮಾಯಾವಾದವನ್ನು ನಂಬುವ) ತಡೆಯಬಹುದು. ಈ ಕಾರಣದಿಂದ ಸಂಕೀರ್ತನೆಯ ಕೆಲಸ ಅತಿ ಮಹತ್ವದ್ದಾಗಿದೆ.
– ಶ್ರೀಲ ಪ್ರಭುಪಾದರು, 13 ನವೆಂಬರ್ 1972, ಜಯಾದ್ವೈತರಿಗೆ ಬರೆದ ಪತ್ರ






Leave a Reply