ಮಕರಂದ
ನಮ್ಮ ಪ್ರಾಚೀನ ಪರಂಪರೆಯಲ್ಲಿ, ಅಂದರೆ ವೇದಗಳ ಕಾಲದಲ್ಲಿ ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸುತ್ತಿದ್ದನು. ಸಂನ್ಯಾಸದಲ್ಲಿ ನಾಲ್ಕು ವಿವಿಧ ಹಂತಗಳಿವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಅವು; ಕುಟೀಚಕ, ಬಹೂದಕ, ಪರಿವ್ರಾಜಕಾಚಾರ್ಯ ಮತ್ತು ಪರಮಹಂಸ.

ಕುಟೀಚಕ
ವ್ಯಕ್ತಿಯು ನಿರ್ದಿಷ್ಟ ವಯಸ್ಸಿನಲ್ಲಿ ನಿಯಮದಂತೆ ಸಂನ್ಯಾಸ ಸ್ವೀಕರಿಸುತ್ತಾನೆ. ಪ್ರಾಥಮಿಕವಾಗಿ ದೈಹಿಕ ವಾಂಛೆಗಳಿಂದ ಮುಕ್ತನಾಗಿರುತ್ತಾನೆ. ಆದರೆ ತನ್ನ ಜೀವನವನ್ನು ಸ್ವತಂತ್ರನಾಗಿ ನಿಭಾಯಿಸುವುದು ಆತನಿಗೆ ಕಷ್ಟಕರವಾಗಿ ತೋರುತ್ತದೆ.
ಹೀಗಾಗಿ, ಆತ ಗ್ರಾಮದ ಹೊರವಲಯದಲ್ಲಿ ಒಂದು ಕುಟೀರವನ್ನು ನಿರ್ಮಿಸಿಕೊಂಡು ವಾಸ್ತವ್ಯ ಹೂಡುತ್ತಾನೆ. ಆತನಿಗೆ ತನ್ನ ಮನೆಯಿಂದಲೇ ಅನ್ನ ಪ್ರಸಾದದ ವ್ಯವಸ್ಥೆ ಪೂರೈಸಲಾಗುತ್ತದೆ. ಹೀಗೆ, ಕುಟೀರದಲ್ಲಿ ವಾಸಿಸುತ್ತ ಸಾಧನೆಯಲ್ಲಿ ತೊಡಗುವ ಹಂತವನ್ನು ‘ಕುಟೀಚಕ’ ಎಂದು ಕರೆಯುತ್ತಾರೆ.
ಬಹೂದಕ
ಯಾವಾಗ ವ್ಯಕ್ತಿಯು ಕುಟೀರದಲ್ಲಿ ನೆಲೆಸಿ, ಸಾಧನೆಯಲ್ಲಿ, ತೊಡಗುತ್ತಾನೋ, ಆಗ ಅವನಲ್ಲಿ ಒಂದು ಬಗೆಯ ಆತ್ಮವಿಶ್ವಾಸ ಮೂಡುತ್ತದೆ. ಅವನು ತನ್ನ ಕುಟುಂಬದ ಸದಸ್ಯರನ್ನು ಉದ್ದೇಶಿಸಿ, “ಇನ್ನು ಮುಂದೆ ನನಗೆ ಆಹಾರ ತರಬೇಡಿ, ನಾನು ಹಳ್ಳಿಯಲ್ಲಿ ಸದ್ಗೃಹಸ್ಥರ ಮನೆಗೆ ಹೋಗಿ ಆಹಾರವನ್ನು ಬೇಡಿ ತರುತ್ತೇನೆ. ಇಂದಿನಿಂದ ನಾನು ನಿಮ್ಮ ಮೇಲೆ ಅವಲಂಬಿತನಾಗಿರದೆ, ಹಳ್ಳಿಗರ ಮೇಲೆ ಅವಲಂಬಿತನಾಗಿರುತ್ತೇನೆ.”
ಈ ಹಂತವನ್ನು ‘ಬಹೂದಕ’ ಎಂದು ಹೇಳುತ್ತಾರೆ. ‘ಬಹು’ ಎಂದರೆ ಬೇರೆ ಬೇರೆ, ಅಥವಾ ತುಂಬಾ ಎಂದು. ಹೀಗೆ ಪ್ರಸಾದಕ್ಕಾಗಿ ಒಂದೇ ಕುಟುಂಬವನ್ನಲ್ಲದೆ, ಬೇರೆ ಬೇರೆ ವ್ಯಕ್ತಿಗಳನ್ನು ಆಶ್ರಯಿಸುವುದರಿಂದ ‘ಬಹೂದಕ’ ಎಂದು ಹೆಸರು.

ಪರಿವ್ರಾಜಕ
ಹೀಗೆ ವ್ಯಕ್ತಿಯು ಪ್ರಸಾದಕ್ಕಾಗಿ ಬೇರೆ ಬೇರೆ ಜನಗಳನ್ನು ಆಶ್ರಯಿಸುತ್ತ ಹೆಚ್ಚಿನ ಸಾಧನೆಯಲ್ಲಿ ನಿರತನಾಗುತ್ತಾನೆ. ಆಗ ಅವನಿಗೆ, ‘ಹೇಗಿದ್ದರೂ ಕೃಷ್ಣನ ದಯೆಯಿಂದ ನನಗೆ ಪ್ರಸಾದ ದೊರಕುತ್ತಿದೆ.
ಹೀಗಿರುವಾಗ, ನಾನೇಕೆ ಒಂದೇ ಕಡೆ ನೆಲೆಸಿರಬೇಕು?’ ಎಂದು ಯೋಚನೆ ಮೂಡುತ್ತದೆ. ಆಗ ಅವನು ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುತ್ತ ಬೋಧನೆಯಲ್ಲಿ ತೊಡಗುತ್ತಾನೆ. ಹೀಗೆ ಸದಾ ಸಂಚಾರಿಯಾಗಿರುವವನು ‘ಪರಿವ್ರಾಜಕ.’ ಈ ಸಂದರ್ಭದಲ್ಲಿ ಆತ ತಾನು ಪಡೆದ ಜ್ಞಾನವನ್ನು ಬೋಧಿಸುತ್ತಾನಾದ್ದರಿಂದ, ಆತ ‘ಪರಿವ್ರಾಜಕಾಚಾರ್ಯ’ ಎನಿಸಿಕೊಳ್ಳುತ್ತಾನೆ.
ಪರಮಹಂಸ
ಸದಾ ಸಂಚಾರಿಯಾಗಿದ್ದುಕೊಂಡು, ಉಪದೇಶದಲ್ಲಿ ನಿರತನಾದ ವ್ಯಕ್ತಿ, ಸಾಕಷ್ಟು ಅನುಭವ ಪಡೆದನಂತರ, ತನ್ನನ್ನು ತಾನು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿ ತೊಡಗಿಸಿಕೊಳ್ಳಬಯಸುತ್ತಾನೆ. ಈ ವೇಳೆಗೆ ಆತ ಭೌತಿಕ ಜಗತ್ತಿನ ಆಕರ್ಷಣೆಯಿಂದ ಸಂಪೂರ್ಣ ಮುಕ್ತನಾಗಿರುತ್ತಾನೆ.
ಈ ಹಂತವೇ ಪರಮಹಂಸ ಹಂತ. ಹಂಸಪಕ್ಷಿಯು ಸಾರವನ್ನು ಗ್ರಹಿಸುವ ಯೋಗ್ಯತೆ ಉಳ್ಳದ್ದು. ನೀರಿನೊಂದಿಗೆ ಹಾಲು ಬೆರೆಸಿಕೊಟ್ಟರೂ ಅದು ಹಾಲನ್ನು ಮಾತ್ರ ಹೀರಿ, ನೀರನ್ನು ಬಿಟ್ಟುಬಿಡುತ್ತದೆ. ಹಾಗೆಯೇ ಕೇವಲ ಕೃಷ್ಣನ ಸಾರವನ್ನು ಗ್ರಹಿಸುವ, ಈ ಅಖಂಡ ವಿಶ್ವವೆಲ್ಲವೂ ಕೃಷ್ಣನಿಂದ ಮಾತ್ರವೇ ಎಂದು ಅರಿಯಬಲ್ಲ ವ್ಯಕ್ತಿಯನ್ನು ‘ಪರಮಹಂಸ’ ಎನ್ನುತ್ತಾರೆ.
ಆದ್ದರಿಂದ ಯಾರು ಕೇವಲ ಕೃಷ್ಣನನ್ನು ಗ್ರಹಿಸುತ್ತಾರೋ ಆತನೇ ‘ಪರಮಹಂಸʼ ಎನಿಸುತ್ತಾನೆ. ಇದೇ ಸಂನ್ಯಾಸದ ಅತ್ಯುನ್ನತ ಹಂತ, ಪ್ರತಿಯೊಬ್ಬನೂ ಈ ಹಂತಕ್ಕೆ ಏರಲು ಪ್ರಯತ್ನಿಸಬೇಕು.






Leave a Reply