ಪರಿಪೂರ್ಣ ಗೆಳೆಯ, ಕೃಷ್ಣ

– ಇಂಗ್ಲಿಷ್‌ ಮೂಲ: ಅಜಿತಾನಂದ ದಾಸ, ಅನುವಾದ : ಎಂ.ಕೆ. ಬದರಿನಾಥ್

ದೇವರ ಅಸಂಖ್ಯ (ಅನಿಯಮಿತ) ಗುಣಗಳ ಬಗ್ಗೆ ನಾವು ಹೆಚ್ಚು ತಿಳಿದಷ್ಟೂ ಆತನೊಂದಿಗಿನ ಸ್ನೇಹಕ್ಕಿಂತ ಬೇರೆ ಯಾವುದೂ ನಮಗೆ ತೃಪ್ತಿ ನೀಡಲಾರದು ಎಂಬುದನ್ನು ನಾವು ಹೆಚ್ಚು ಅರ್ಥ ಮಾಡಿಕೊಳ್ಳಬೇಕು.

ಸ್ನೇಹ ಸಂಪಾದಿಸಬೇಕೆಂಬ ಇಚ್ಛೆ ಎಲ್ಲೆಡೆ ಇರುವಂತಹುದು, ಯಾರನ್ನಾದರೂ ಪ್ರೀತಿಸಬೇಕೆಂಬ ನಮ್ಮ ಇಚ್ಛೆಯೇ ಇದಕ್ಕೆ ಮೂಲ. ಇದನ್ನು ಕೃಷ್ಣ ಪ್ರಜ್ಞಾಚಳವಳಿಯ ಮೂಲಾಧಾರ ಕೃತಿಯೆನ್ನಿಸಿರುವ “ಭಕ್ತಿರಸಾಮೃತಸಿಂಧು” ಎಂಬ ತಮ್ಮ ಕೃತಿಯಲ್ಲಿ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರು ವೈಚಾರಿಕವಾಗಿ ವಿವರಿಸಿದ್ದಾರೆ.

ನಾವು ಯಾರನ್ನಾದರೂ ಪ್ರೀತಿಸಬೇಕೆಂಬ ಸಾಮಾನ್ಯ ಇಚ್ಛೆ ನಮ್ಮಲ್ಲಿರುವುದೇ ಜೀವನದ ಸ್ಥಿತಿಯ ಮೂಲ ತತ್ತ್ವವಾಗಿದೆ. ಈ ಇಚ್ಛೆ ಎಲ್ಲ ಜೀವಿಗಳಲ್ಲೂ ಕಾಣಸಿಗುತ್ತದೆ. ಮನದಾಳದಲ್ಲಿ ಎಲ್ಲೇ ಆದರೂ, ಹುಲಿಯಂತಹ ಪ್ರಾಣಿಯಲ್ಲಿ ಸಹ ಪ್ರೀತಿಸಬೇಕೆಂಬ ಹಂಬಲ ಇರುತ್ತದೆ. ಮನುಷ್ಯನಲ್ಲಿ ಇದು ಸ್ಪಷ್ಟವಾಗಿಯೇ ಇದೆ.

ಆದರೆ ತಪ್ಪಿ, ಹೋಗಿರುವ ಅಂಶವೆಂದರೆ, ಪ್ರತಿಯೊಬ್ಬರೂ ಸಂತೋಷವಾಗಿರುವಂತೆ ನಾವು ಯಾವ ರೀತಿ ಪ್ರೀತಿಯನ್ನು ತೋರ್ಪಡಿಸಬೇಕೆಂಬುದೇ ಆಗಿದೆ. ಕೃಷ್ಣ ಪರಮಾತ್ಮನೇ ಈ ತಪ್ಪಿ ಹೋಗಿರುವ ಅಂಶ ಮತ್ತು ಕೃಷ್ಣನ ಬಗೆಗಿನ ನಮ್ಮ ಮೂಲ ಪ್ರೇಮವನ್ನು ಹೇಗೆ ಉದ್ದೀಪನಗೊಳಿಸಬೇಕು ಮತ್ತು ನಮ್ಮ ಜೀವನ ಸುಖಮಯವಾಗುವಂತೆ ಹೇಗೆ ಆ ಸ್ಥಿತಿಯನ್ನು ತಲಪಬೇಕು ಎಂಬುದನ್ನು ಕಲಿಸುತ್ತಾನೆ.

ದೇವೋತ್ತಮ ಪುರುಷನಾದ ಕೃಷ್ಣನೇ ನಮ್ಮ ಮೂಲ ಸ್ನೇಹಿತ ಎಂಬುದನ್ನು ವೈದಿಕ ಸಾಹಿತ್ಯ ನಮಗೆ ತಿಳಿಸುತ್ತದೆ. ಈ ಭೌತಿಕ ಜಗತ್ತಿನಲ್ಲಿ ನಾವು ಆತನ ಜೊತೆಗಿನ ಸುಖಮಯ, ಪ್ರಾಚೀನ ಸಂಬಂಧವನ್ನು ಇತರೆ ಐಹಿಕ ವಿಷಯಗಳೊಂದಿಗೆ ತಳಕು ಹಾಕಿ ಸಂತೋಷಪಡಲು ಪ್ರಯತ್ನಿಸುತ್ತೇವೆ.

ಆದರೆ ಅನಾದಿ ಕಾಲದಿಂದ ಪ್ರೀತಿಗಾಗಿ ಹಾತೊರೆಯುವ ನಮ್ಮ ಆಕಾಂಕ್ಷೆಯನ್ನು ಸಾಕಾರಗೊಳಿಸುವಲ್ಲಿ ಇವು ವಿಫಲಗೊಳ್ಳುತ್ತವೆ. ಕೃಷ್ಣ ಅಥವಾ ದೇವರೇ ಜಗತ್ತಿನ ಎಲ್ಲ ಜೀವ ರಾಶಿಗಳ, ಪ್ರೀತಿಯೆಂಬ ಭಾವನೆಯ ಹಿಂದಿರುವ ದೈವಿಕ ಮೂಲ. ನಾವೆಲ್ಲ ಪ್ರೀತಿಯನ್ನು ಪರಸ್ಪರ ಹಂಚಿಕೊಳ್ಳಲೆಂದೇ, ದೇವರು ತನ್ನ ತೀರದ ಇಚ್ಛೆಯಿಂದ ನಮ್ಮನ್ನು ಸೃಷ್ಟಿಸಿದ್ದಾನೆ ಎಂದು ವೇದಗಳು ವಿವರಿಸುತ್ತವೆ. ಹೀಗಾಗಿ ದೇವರೊಂದಿಗಿನ ಸ್ನೇಹ ಆತ್ಮದ ಮೂಲ ಸ್ಥಿತಿ ಎನ್ನಿಸಿಕೊಳ್ಳುತ್ತದೆ.

ಅನಾದಿ ಕಾಲದಿಂದ ಶಾಶ್ವತವಾಗಿ ನಾವು ಕೃಷ್ಣನ ಒಂದು ಭಾಗವಾಗಿರುವುದರಿಂದ ಆತನ ಮತ್ತು ನಮ್ಮ ನಡುವೆ ಸಹಜ ಆತ್ಮೀಯತೆ ಬೆಳೆದು ಬಂದಿದೆ. ಜನ್ಮ ಜನ್ಮಾಂತರದಿಂದ, ಚಿರಕಾಲ ಉಳಿಯುವ ಸಂತೋಷವನ್ನು ಅರಸುತ್ತಾ ನಾವು ಇಡೀ ಜಗತ್ತನ್ನೇ ಸುತ್ತುತ್ತಿರುವಾಗ, ಆತ ನಮ್ಮಲ್ಲಿ ಕೃಪೆಯಿಟ್ಟು ಪರಮಾತ್ಮನ ರೂಪದಲ್ಲಿ ನಮ್ಮ ಹೃದಯಗಳಲ್ಲಿ ನೆಲೆಸಿದ್ದಾನೆ ಎಂದು ಭಗವದ್ಗೀತೆಯಿಂದ ನಾವು ತಿಳಿಯುತ್ತೇವೆ.

ನಮ್ಮಂತಲ್ಲದೆ, ಆಧ್ಯಾತ್ಮಿಕ ದೃಷ್ಟಿಯನ್ನು ಹೊಂದಿದ್ದು, ಯಾವುದೇ ಭೌತಿಕ ಸಂಪರ್ಕಗಳಿಗೆ ಮಣಿಯದ ಕಾರಣ, ಆತ ನನ್ನ ದಡ್ಡತನವನ್ನು ಸಂಪೂರ್ಣವಾಗಿ ಅರಿತಿದ್ದಾನೆ. ನಮ್ಮ ನಿಜವಾದ ಗೆಳೆಯನಾಗಿದ್ದು, ನಮ್ಮ ಪ್ರಯತ್ನಗಳ ನಿರರ್ಥಕತೆಯನ್ನು ನಮ್ಮದೇ ಸ್ವಂತ ಅನುಭವಗಳ ಮೂಲಕ ನಾವು ತಿಳಿಯಲು, ತನ್ನ ಪರಮ ದಯೆ ತೋರುವುದರ ಮೂಲಕ ಅನುವು ಮಾಡಿಕೊಡುತ್ತಾನೆ.

ಹಾಗೂ ಎಲ್ಲ ಸುಖದ ಮೂಲವಾದ ತನ್ನ ವಾಸಸ್ಥಾನದ ಕಡೆಗೆ (ಪರಮಧಾಮ) ನಮ್ಮ ಗಮನವನ್ನು ಪ್ರೀತಿಯಿಂದ ಸೆಳೆಯುತ್ತಾನೆ.

ಶ್ರೀಕೃಷ್ಣನು ಅತ್ಯಂತ ಶುದ್ಧನಾಗಿರುವುದರಿಂದ, ಆತನ ಗೆಳೆತನ ಭೌತಿಕ ಸಂಬಂಧಗಳಿಗೆ ಕಳಂಕ ತರುವ ಯಾವುದೇ ಸ್ವಾರ್ಥದ ಉದ್ದೇಶಗಳಿಂದ ಎಂದೂ ಕಲುಷಿತಗೊಂಡಿಲ್ಲ. ಈ ಭೌತಿಕ ಜಗತ್ತಿನಲ್ಲಿ ಅಂತಿಮವಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಹಿತಾಸಕ್ತಿಗಳ ಬಗ್ಗೆ ಕಳಕಳಿ ಹೊಂದಿರುತ್ತಾರೆ. ನಮ್ಮ ಸ್ನೇಹ ಕೂಡಾ ನಮ್ಮದೇ ರಂಜನೆಯ/ ಸುಖದ ಯೋಜನೆಯ ಒಂದು ಭಾಗವಾಗಿದೆ.

ಶ್ರೀಕೃಷ್ಣನಾದರೋ, ಇದಕ್ಕೆ ತದ್ವಿರುದ್ಧವಾಗಿ, ನಮ್ಮ ಅಂತಿಮ ಸುಖದ ಬಗ್ಗೆಯೇ ಯಾವಾಗಲೂ ಯೋಚಿಸುತ್ತಾ, ಆತಂಕದಲ್ಲಿ ಇರುತ್ತಾನೆ. ಆತ ಸರ್ವ ಶ್ರೇಷ್ಠನೆಂಬ ಸ್ಥಾನಮಾನ ಹೊಂದಿರುವುದರಿಂದ ಮತ್ಸರಕ್ಕೆ ಒಳಗಾಗಿ ನಾವು ಆತನಿಂದ ದೂರ ಸರಿದಿದ್ದರೂ, ಆತ ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತಲೇ ಇದ್ದಾನೆ.

ಗಾಳಿ, ಬೆಳಕು, ನಮ್ಮಲ್ಲಿ ಅಡಕವಾಗಿರುವ ಸಾಮರ್ಥ್ಯ ಮತ್ತು ಇತರೆ ಅನೇಕ ಕೊಡುಗೆಗಳು ಆತನ ಸದ್ಭಾವನೆಗೆ ಸ್ಪಷ್ಟ ನಿದರ್ಶನಗಳಾಗಿವೆ. ಕೃಷ್ಣನ ಸಾಂಗತ್ಯವೇ ಆತ ಅಭಿವ್ಯಕ್ತಿಗೊಳಿಸುತ್ತಿರುವ ಸ್ನೇಹದ ಉನ್ನತ ಅಂಶವಾಗಿದ್ದು, ಆತ ಅದನ್ನು ನಮ್ಮನ್ನು ಆಧ್ಯಾತ್ಮಿಕ ಪ್ರಪಂಚಕ್ಕೆ ಆಹ್ವಾನಿಸಲು ಕಾಲದಿಂದ ಕಾಲಕ್ಕೆ ಅವತರಿಸುತ್ತಿರುವ ಸಂತರು, ಆಧ್ಯಾತ್ಮಿಕ ವಿದ್ವಾಂಸರು ಮತ್ತು ದೊರಕಿರುವ ಧರ್ಮ ಗ್ರಂಥಗಳ ಮೂಲಕ ಧಾರಾಳವಾಗಿ ಸಾವಿರಾರು ವರ್ಷಗಳಿಂದ ನೀಡುತ್ತಿದ್ದಾನೆ.

ಜಡ ವಸ್ತುಗಳೊಂದಿಗೆ ತಾಳೆ ಹಾಕಿಕೊಂಡಿರುವ ಕಾರಣದಿಂದ, ಆಕರ್ಷಕವಾದ ಮತ್ತು ಅದ್ಭುತ ಗುಣಗಳುಳ್ಳ ಆತ್ಮವು ಈ ಭೌತಿಕ ಜಗತ್ತಿನಲ್ಲಿ ನಿಶ್ಚಲವಾಗಿ ಉಳಿಯುವ ಸಂಭವವಿದೆ. ಇದರಿಂದಾಗಿ, ಭೌತಿಕ ಸಂಬಂಧಗಳ ರೋಮಾಂಚನ ಶೀಘ್ರ ನಶಿಸುತ್ತದೆ. ಹಗಲೂ-ರಾತ್ರಿ ನೋಡಿದ ಮುಖಗಳನ್ನೇ ನೋಡಿ ನಮಗೂ ಬೇಸರವಾಗುತ್ತದೆ. ಅಲೌಕಿಕ ಗುಣಗಳು ಎಂದೂ ಉಲ್ಲಾಸದಾಯಕ ಹಾಗೂ ನಿರಂತರ ವಿಸ್ತರಿಸುತ್ತ ಹೋಗುವುದರಿಂದ ನಮಗೆ ಬೇಸರ ಅನ್ನಿಸುವುದಿಲ್ಲ.

ವಿಜ್ಞಾನಿಗಳು ಸಮುದ್ರ ದಂಡೆಯಲ್ಲಿರುವ ಎಲ್ಲ ಮರಳಿನ ಕಣಗಳನ್ನು ಅಥವಾ ಇಡೀ ಜಗತ್ತಿನಲ್ಲಿನ ಎಲ್ಲ ಅಣುಗಳನ್ನು ಎಣಿಸಿದರೂ, ಭಗವಂತ ನೀಡುವ ಪರಮ ಸುಖದ, ಆಕರ್ಷಕ ವೈಶಿಷ್ಟ್ಯಗಳ ಒಂದು ಹನಿಯನ್ನೂ ಅಂದಾಜು ಮಾಡಲಾರರು. ಶ್ರೀಕೃಷ್ಣನ ಆಧ್ಯಾತ್ಮಿಕ ಗುಣಗಳ ಪ್ರಕಾಶಮಾನ ವಿವರಣೆಯನ್ನು ‘ಭಕ್ತಿರಸಾಮೃತಸಿಂಧು’ ನೀಡುತ್ತದೆ.

ಇಂತಹ ಮಹಾನ್ ಕೃತಿಯನ್ನು ಭಕ್ತಿಯ ಉತ್ಸಾಹದಲ್ಲಿ ಓದಿದಾಗ ನಾವು ಆ ಭಗವಂತನ ಮಹಿಮೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು ಮತ್ತು ತನ್ಮೂಲಕ ಆತನ ಸ್ನೇಹದ ಶ್ರೇಷ್ಠತೆಯನ್ನು ಅರ್ಥ ಮಾಡಿಕೊಳ್ಳುವ ಇಚ್ಛೆಯನ್ನು ವೃದ್ಧಿಸಿಕೊಳ್ಳಬಹುದು.

ಉದಾಹರಣೆಗೆ, ಆತನ ಸ್ನೇಹಿತನೊಡನೆ ಆತ ನಡೆದುಕೊಂಡ ರೀತಿಯನ್ನು ಗಮನಿಸಿದಾಗ, ಕೃಷ್ಣನಿಗಿಂತ ಹೆಚ್ಚು ಗೌರವಕ್ಕೆ ಅರ್ಹನಾದ ಮತ್ತು ವಿನಿಮಯ ಗುಣವುಳ್ಳವರು ಬೇರೆ ಯಾರೂ ಇಲ್ಲ ಎಂಬುದನ್ನು ‘ಭಕ್ತಿರಸಾಮೃತಸಿಂಧು’ ವಿವರಿಸುತ್ತದೆ.

ಒಮ್ಮೆ ಸುದಾಮನೆಂಬ ಓರ್ವ ಬಡ ಬ್ರಾಹ್ಮಣ, ಕೃಷ್ಣನಿಗೆ ಒಂದು ಹಿಡಿ ಅವಲಕ್ಕಿಯನ್ನು ಕೊಟ್ಟ ಸುದಾಮನಲ್ಲಿ ಒಂದು ಬಿಡಿ ಕಾಸು ಇಲ್ಲದ ಕಾರಣ, ಆತ ತನಗಿದ್ದ ಇಚ್ಛೆಯಂತೆ, ಕೃಷ್ಣನಿಗೆ ಯಾವುದೇ ಬೆಲೆ ಬಾಳುವ ಉಡುಗೊರೆಯನ್ನು ನೀಡಲಾಗಲಿಲ್ಲ. ಆದರೆ ಸುದಾಮ ಪ್ರೀತಿಯಿಂದ ಅವಲಕ್ಕಿಯನ್ನು ನೀಡಿದ ಕಾರಣ, ಕೃಷ್ಣ ಅದನ್ನು ತುಂಬು ಹೃದಯದಿಂದ ಸ್ವೀಕರಿಸಿ ಸೇವಿಸಿದ.

ಇದಕ್ಕೆ ಉತ್ತರವಾಗಿ ಕೃಷ್ಣನು ಅತ್ಯಂತ ಕೃತಜ್ಞತೆಯಿಂದ ಸುದಾಮನಿಗೆ ಜಗತ್ತಿನ ಅತ್ಯಂತ ಶ್ರೀಮಂತ ಸಹ ಊಹಿಸಲಾರದಷ್ಟು ಅಮೂಲ್ಯ ಸಂಪತ್ತನ್ನು ನೀಡಿದ. ಅಂತಿಮವಾಗಿ ತನ್ನ ಆಧ್ಯಾತ್ಮಿಕ ವಾಸಸ್ಥಾನಕ್ಕೆ ಪ್ರವೇಶವನ್ನು ನೀಡಿದ. ತನ್ನ ಭಕ್ತರ ಪ್ರೀತಿಯನ್ನು ಸಂಪೂರ್ಣ ಗೌರವಿಸುವ ಮತ್ತು ಅದಕ್ಕೆ ಸೂಕ್ತ ಉತ್ತರವನ್ನು ನೀಡುವ ಕೃಷ್ಣನ ಅಪರಿಮಿತ ಸಾಮರ್ಥ್ಯವನ್ನು ಕೇಳಿದ ಮೇಲೆ, ಆತನೊಡನೆ ನಮ್ಮ ಸ್ನೇಹವನ್ನು ಪುನರಾರಂಭಿಸಲು ನಮಗೆ ಪ್ರೇರಣೆ ದೊರೆಯುತ್ತದೆ.

ಶ್ರೀ ಕೃಷ್ಣನು ಅತ್ಯಂತ ವಿಶ್ವಾಸಾರ್ಹ ಹಾಗೂ ವಿವೇಚನೆಯುಳ್ಳ ಸ್ನೇಹಿತ. ಆತ ಎಂದೂ ನಮ್ಮ ಕೈ ಬಿಡುವುದಿಲ್ಲ ಹಾಗೂ ನಾವು ಆಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸುವುದಿಲ್ಲ. ಪ್ರೀತಿಯ ಬಗೆಗಿನ ಆತನ ಪ್ರತಿಕ್ರಿಯೆ ಎಷ್ಟು ದೊಡ್ಡದೆಂದರೆ, ಏಕ ಕಾಲದಲ್ಲಿ ಆತ ಅಸಂಖ್ಯ ಜೀವಿಗಳೊಂದಿಗೆ ವ್ಯವಹರಿಸಬಲ್ಲ.

ಒಬ್ಬನೇ ಒಬ್ಬನನ್ನೂ ನಿರ್ಲಕ್ಷಿಸದೆ ಆತ ಅದನ್ನು ಮಾಡಬಲ್ಲ. ಆತ ದ್ವಾರಕೆಯಲ್ಲಿದ್ದಾಗ ತನ್ನ ಮಹಿಮೆಯ ಶಕ್ತಿಯಿಂದ ವಿಶ್ವರೂಪ ಧರಿಸಿ, ಅನೇಕ ಕೃಷ್ಣರುಗಳಾಗಿ ಮಾರ್ಪಟ್ಟು, ತನ್ನ ಹದಿನಾರು ಸಾವಿರ ರಾಣಿಯರಿಗೂ ಆಧ್ಯಾತ್ಮಿಕತೆಯ ಪರಮಸುಖವನ್ನು ನೀಡಿದ್ದಲ್ಲದೆ, ಪ್ರತಿಯೊಬ್ಬರೂ ಕೃಷ್ಣ ತಮ್ಮೊಂದಿಗೆ ಮಾತ್ರವೇ ಇದ್ದಾನೆ ಎಂಬ ಭಾವನೆ ಮೂಡಿಸಿದ.

ಭಗವಂತನ ಸ್ನೇಹ ಅತ್ಯಂತ ಅಪೇಕ್ಷಣಿಯ ಸಂಬಂಧ ಎಂಬುದಕ್ಕೆ ಇನ್ನೊಂದು ಕಾರಣವೆಂದರೆ, ಅದು ಶಾಶ್ವತವಾದುದು. ಭೌತಿಕ ಜಗತ್ತಿನಲ್ಲಿ ನಾವು ಕೆಲವೊಮ್ಮೆ ಇನ್ನೊಬ್ಬರೊಡನೆ ಉತ್ಕೃಷ್ಟ ಗುಣಮಟ್ಟದ್ದು ಎಂಬಂತಹ ಬಾಂಧವ್ಯ ಸಾಧಿಸಬಹುದಾದರೂ, ಅದು ಸಹ ಕನಸಿನಂತೆ ಕರಗಿ ಹೋಗಬಹುದು.

ಸಮುದ್ರದ ಪಾಚಿ ತಾತ್ಕಾಲಿಕವಾಗಿ ಒಟ್ಟಿಗೆ ಇದ್ದು, ಅಲೆಗಳು ದಂಡೆಗೆ ಅಪಳಿಸಿದಾಗ ಶಾಶ್ವತವಾಗಿ ದೂರ ಸರಿಯುವಂತೆ, ಮಿತ್ರರಿಬ್ಬರು, ಸಾವಿನ ಸಮಯದಲ್ಲಿ ಅವರ ಕರ್ಮಫಲದಿಂದಾಗಿ ಒಬ್ಬರಿಂದೊಬ್ಬರು ದೂರ ಸರಿದುಬಿಡುತ್ತಾರೆ.

ಸಂತೋಷದ ಸಂಗತಿ ಎಂದರೆ ಕೃಷ್ಣನ ಸ್ನೇಹ ಸಂಪಾದಿಸಿದರೆ ಹೀಗಾಗುವುದಿಲ್ಲ. ಭಗವಂತ ಮತ್ತು ಜೀವಿಯ ನಡುವಿನ ವಿನಿಮಯಕ್ಕೆ ಅಡ್ಡಿ ಇರುವುದಿಲ್ಲ. ವ್ಯಕ್ತಿಯೊಬ್ಬ ಕೃಷ್ಣನ ಸಾಕ್ಷಾತ್ಕಾರ ಮಾಡಿಕೊಳ್ಳಲು ಪ್ರಯತ್ನಪಟ್ಟು, ಆಧ್ಯಾತ್ಮಿಕ ಅಭಿವೃದ್ಧಿ ಸಾಧಿಸಲು ಈ ಜನ್ಮದಲ್ಲಿ ಪೂರ್ಣ ಸಫಲನಾಗದಿದ್ದರೂ, ಮುಂದಿನ ಜನ್ಮದಲ್ಲಿ, ಆತ ತಾನು ಹಿಂದಿನ ಜನ್ಮದಲ್ಲಿ ಬಿಟ್ಟಲ್ಲಿಂದಲೇ ಪ್ರಾರಂಭಿಸಿ ಪರಿಪೂರ್ಣ ಸಾಕ್ಷಾತ್ಕಾರ ಆಗುವವರೆಗೂ ಸಾಧನೆ ಮಾಡುತ್ತಾನೆ.

ನಾವೆಲ್ಲರೂ ಕೃಷ್ಣನ ಸೇವಕರಾಗಿರುವುದರಿಂದ ಆತನ ಸಾಕ್ಷಾತ್ಕಾರಕ್ಕೆ ಮಾಡುವ ಯಾವುದೇ ಪ್ರಯತ್ನವೂ ಸೇವಾ ಮನೋಭಾವನೆಯಿಂದಲೇ ಕೂಡಿರಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟು ಕೊಳ್ಳುವುದು ಬಹುಮುಖ್ಯ. ಕರುಣಾಮಯಿ ಭಗವಂತ ತನ್ನ ಭಕ್ತರ ಸಂತೋಷಕ್ಕಾಗಿ ಯಾವಾಗಲೂ ಏನನ್ನಾದರೂ ಮಾಡುತ್ತಿರುವಂತೆ, ನಾವು ಸಹ ಆತನ ಸಂತೋಷಕ್ಕಾಗಿ ಏನನ್ನಾದರೂ ಮಾಡಲು ಪ್ರಯತ್ನಿಸಬೇಕು.

ಇದೇ ನಿಜವಾದ ಪ್ರೀತಿಯ ಪ್ರಾರಂಭ. ನಮ್ಮ ಭಕ್ತಿಯ ಭಾವನೆಗಳನ್ನು ನಾವು ಬೆಳೆಸಿಕೊಳ್ಳಲು ಒಪ್ಪಿದಲ್ಲಿ, ಅದರಿಂದ ಏನೂ ನಷ್ಟವಾಗುವುದಿಲ್ಲ. ನಿಜಕ್ಕೂ ಕೃಷ್ಣನ ಸೇವೆ ಎಷ್ಟು ಸಂತೋಷ ಕೊಡುವ ಸ೦ಗತಿ ಎಂದರೆ, ಈ ಆನಂದವನ್ನು ಅನುಭವಿಸಲು ಮತ್ತು ಶ್ರೀಕೃಷ್ಣನ ಸ್ನೇಹ ಸಂಪಾದನೆಗಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ ಎಂದು ಸಾಬೀತುಪಡಿಸಲು, ತಾನೇ ಸ್ವತಃ ಭಕ್ತನಾಗಿ, ಶ್ರೀಕೃಷ್ಣನು ಶ್ರೀಚೈತನ್ಯ ಮಹಾಪ್ರಭುಗಳಾಗಿ ಅವತರಿಸಿದ.

ಕೃಷ್ಣಾ ಪ್ರಜ್ಞಾ ಚಳವಳಿ ನೇರವಾಗಿ ಚೈತನ್ಯ ಮಹಾಪ್ರಭುಗಳಿಂದಲೇ ಬೆಳೆದು ಬಂದಿದೆ. ಮನಸ್ಸಿನಾಳದಲ್ಲಿಯೇ ಹುದುಗಿರುವ ಭಗವಂತನ ಮೇಲಿನ ಪ್ರೀತಿಯನ್ನು ಪುನರಾರಂಭಿಸಲು ತೀವ್ರ ಆಸಕ್ತಿ ಉಳ್ಳವರಿಗೆ ಸಹಾಯ ಮಾಡಲೆಂದೇ ಶ್ರೀಮದ್ ಶ್ರೀಲ ಪ್ರಭುಪಾದರು ಇದನ್ನು ಸ್ಥಾಪಿಸಿದ್ದಾರೆ. ಈ ಚಳವಳಿಯಲ್ಲಿ ತೊಡಗಿಸಿಕೊಳ್ಳಲು ಎಲ್ಲರಿಗೂ ಅವಕಾಶವಿದೆ.

ಪರಿಪೂರ್ಣ ಸ್ನೇಹವನ್ನು ಅರಸುತ್ತಿರುವ ವ್ಯಕ್ತಿಗಳು, ಪರಿಪೂರ್ಣ ಗೆಳೆಯನಾದ ಭಗವಂತ ಕೃಷ್ಣನ ನಿರಂತರ ಸಾಂಗತ್ಯ ಮತ್ತು ದೀರ್ಘಕಾಲ ಉಳಿಯುವ ಆಧ್ಯಾತ್ಮಿಕ ಸುಖ ಕಂಡುಕೊಳ್ಳಲು ಈ ಅಪೂರ್ವ ಮತ್ತು ಅದ್ಭುತ ಅವಕಾಶವನ್ನು ಖಂಡಿತವಾಗಿ ಒಪ್ಪಿಕೊಳ್ಳುತ್ತಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi