ದೇವೋತ್ತಮ ಪರಮ ಪುರುಷನ ಶಕ್ತ್ಯಾಯುಧ
ಸೃಷ್ಟಿ-ಸ್ಥಿತಿ-ಪ್ರಳಯ ಸಾಧನ ಶಕ್ತಿರ್ ಏಕ
ಛಾಯೇವ ಯಸ್ಯ ಭುವನಾನಿ ಬಿಭರ್ತಿ ದುರ್ಗಾ |
ಇಚ್ಛಾನುರೂಪಮ್ ಅಪಿ ಯಸ್ಯ ಚ ಚೇಷ್ಟತೇ ಸಾ
ಗೋವಿಂದಮ್ ಆದಿಪುರುಷಮ್ ತಮ್ ಆಹಮ್ ಭಜಾಮಿ ||

ದುರ್ಗೆಯು ಯಾರ ನೆರಳಿನಂತೆ ಇದ್ದುಕೊಂಡು ಮೂರು ಲೋಕಗಳನ್ನು ಸಲಹುವಳೋ, ಸೃಷ್ಟಿ, ಸ್ಥಿತಿ, ಪ್ರಳಯಗಳ ಸಾಧನ – ಶಕ್ತಿಯೋ ಯಾರ ಇಚ್ಛೆಯಂತೆ ಅವಳು ಕಾರ್ಯ ನಿರ್ವಹಿಸುವಳೋ ಅಂತಹ ಆದಿಪುರುಷನಾದ ಗೋವಿಂದನನ್ನು ನಾನು ಭಜಿಸುವೆ.
“ತೇನವಿನಾ ತೃಣಮಪಿ ನ ಚಲತಿ”, ದೇವೋತ್ತಮ ಪರಮ ಪುರುಷನ ಇಚ್ಛೆಯಿಲ್ಲದೆ ಒಂದು ಹುಲ್ಲು ಕಡಿಯೂ ಅಲುಗಾಡದು! ಇದು ವಾಸ್ತವ.
ಕೃಷ್ಣನ ಇಚ್ಛೆಯಿಲ್ಲದೆ ಯಾವ ಕ್ರಿಯೆಯೂ ನಡೆಯದು, ನಮ್ಮೆಲ್ಲರ ಪ್ರತಿ ಚಲನೆಯನ್ನು ನಿರ್ಧರಿಸುವವನು ಶ್ರೀಕೃಷ್ಣ. ಆದರೆ ಇದನ್ನು ಅವನು ನೇರವಾಗಿ ನಿಯಂತ್ರಿಸದೆ, ತನ್ನ ಪ್ರತಿನಿಧಿಯ ಮೂಲಕ ಸಾಧಿಸುತ್ತಾನೆ. ಈ ಸಾಧನೆಯೇ “ಪ್ರಕೃತಿ”. ಪ್ರಕೃತಿ ಅಂದರೆ, “ದುರ್ಗಾ”.
ಪ್ರಕೃತಿ ಅಂದರೆ “ತಾಯಿ”. ಆದ್ದರಿಂದಲೇ ದುರ್ಗೆ “ಜಗಜ್ಜನನಿ” ಎನಿಸುತ್ತಾಳೆ. ದೇವಿ ದುರ್ಗಾ ಭೌತಿಕ ಪ್ರಕೃತಿಯಾಗಿದ್ದಾಳೆ. ಅವಳೆಂದೂ ಸ್ವತಂತ್ರಳಾಗಿರದೆ, ದೇವೋತ್ತಮ ಪರಮ ಪುರುಷನ ನಿಷ್ಠಾವಂತ ಸೇವಕಿಯಾಗಿದ್ದು, ಅವನ ಅಣತಿಯಂತೆ ಕಾರ್ಯ ನಿರ್ವಹಿಸುತ್ತಾಳೆ.
“ಸೃಷ್ಟಿ-ಸ್ಥಿತಿ-ಪ್ರಳಯ ಸಾಧನ ಶಕ್ತಿರ್ ಏಕ ಛಾಯೇದ ಯಸ್ಯ ಭುವನಾನಿ ಬಿಭರ್ತಿ ದುರ್ಗಾ” ತಾಯಿ ದುರ್ಗೆಯು ಅದೆಷ್ಟು ಶಕ್ತಿವಂತಳೆಂದರೆ, ಅವಳು ಜಗತ್ತನ್ನು ಸೃಷ್ಟಿಸಬಲ್ಲಳು. ನಿಯಂತ್ರಿಸಬಲ್ಲಳು. ನಿಯಂತ್ರಿಸುವುದು ಕೂಡ ಆಕೆಯ ಶಕ್ತಿಯ ಪಾರಮ್ಯವನ್ನು ತೋರುತ್ತದೆ. ಅವಳು ಶ್ರೀಕೃಷ್ಣನ ಸೇವಕಿಯಾಗಿರುವುದರಿಂದ – “ಛಾಯೇದ ಯಸ್ಯ ಭುವನಾನಿ ಭಿಭರ್ತಿ ದುರ್ಗಾ” – ದುರ್ಗಾ ಬಿಭರ್ತಿ – ಅಂದರೆ, ನಿಯಂತ್ರಿಸಬಲ್ಲಳು ಎಂದು.
ದುರ್ಗಾದೇವಿ ಸ್ವತಂತ್ರಳಲ್ಲ. ಗೋವಿಂದನ ಇಚ್ಛೆಯಂತೆ, ಅವನ ನಿರ್ದೇಶನದಂತೆ ಅವಳು ಕರ್ತವ್ಯ ನಿರ್ವಹಿಸುತ್ತಾಳೆ. ಇದನ್ನು ಸ್ವತಃ ಗೋವಿಂದನೇ ಭಗವದ್ಗೀತೆಯಲ್ಲಿ ಹೇಳಿಕೊಂಡಿದ್ದಾನೆ-
”ಮಯಾಧ್ಯಕ್ಷೇಣ ಪ್ರಕೃತಿ: ಸೂಯತೇ ಸ ಚರಾಚರಮ್” (ಭಗೀ – 9.10)
‘ಮಯಾಧ್ಯಕ್ಷೇಣ’ – ನನ್ನ ಆದೇಶದಿಂದ ಇದು ಸ್ವತಃ ಶ್ರೀ ಕೃಷ್ಣನ ಘೋಷಣೆ.
ಪ್ರಕೃತಿ ದಯಾಹೀನಳೂ ಆಗಿರಬಹುದು, ನಾವು ನೋಡಿದ್ದೇವೆ. ತಾಯಿ ದುರ್ಗೆ, ಅಸುರನ ಎದೆ ಮೇಲೆ ನಿಂತು ತ್ರಿಶೂಲದಿಂದ ಇರಿಯುತ್ತಿದ್ದಾಳೆ. ಯಾಕೆ? ಅವನೊಬ್ಬ ಅಸುರ. ಭಕ್ತನಲ್ಲದವನೇ ಅಸುರ, ದುರ್ಗೆ, ಶ್ರೀಕೃಷ್ಣನ ಪ್ರತಿನಿಧಿಯೆಂದು ಈಗಾಗಲೇ ಹೇಳಿದೆ.

ಅವಳು ಶ್ರೀಕೃಷ್ಣನ ಬಹಿರಂಗ ಶಕ್ತಿ. ಅವಳು ದೇವೋತ್ತಮ ಪರಮ ಪುರುಷನ ಪ್ರೇಮಯುತ ಸೇವೆಗೆ ಅರ್ಪಿತಳಾದವಳು, ಹೀಗಾಗಿ, ದುರ್ಗೆಯ ಲೀಲೆಯನ್ನು ಭಕ್ತರು, ಕೃಷ್ಣನ ಲೀಲೆಯಾಗೇ ತಿಳಿಯುತ್ತಾರೆ, ”ಓಹ್! ಮಾಯೆಯು ಕೃಷ್ಣನ ನಿರ್ದೇಶನದಂತೆ ಎಷ್ಟು ಸುಲಲಿತವಾಗಿ ಕಾರ್ಯ ನಿರ್ವಹಿಸುತ್ತಿರುವಳು” ಎಂದು ಆನಂದಿಸುತ್ತಾರೆ.
ಇದು, ನಾವು ಒಬ್ಬ ದಕ್ಷ ಪೊಲೀಸ್ ಅಧಿ ಕಾರಿಯ ಕಾರ್ಯಕ್ಷಮತೆ ಕುರಿತು ಮೆಚ್ಚುಗೆ ಮಾತನಾಡಿದಾಗ, ಹೇಗೆ ಅದು ಇಡಿಯ ವ್ಯವಸ್ಥೆಗೆ ಸರ್ಕಾರಕ್ಕೆ ಸಲ್ಲುತ್ತದೆಯೋ ಹಾಗಿದೆ.
ದುರ್ಗಾ ಭೌತಿಕ ಶಕ್ತಿಯಾಗಿದ್ದಾಳೆ ಎನ್ನುವುದು ಸರಿಯೇ. ಅವಳು ಎಷ್ಟು ಶಕ್ತಿವಂತಳೆಂದರೆ, ಸೃಷ್ಟಿ- ಸ್ಥಿತಿ – ಪ್ರಳಯಗಳೆಲ್ಲವೂ ಅವಳಿಂದ ಸಾಧ್ಯ. ಆದರೆ ಈ ಎಲ್ಲ ಕಾರ್ಯಗಳನ್ನು ಅವಳು ನಡೆಸುವುದು ಕೃಷ್ಣನ ಬಲದಿಂದ, ಆತನ ದಯೆಯಿಂದ. ವಿಷ್ಣು ಕೃಷ್ಣನ ವಿಸ್ತರಣೆಯಾಗಿರುವಂತೆ; ಕಾಳಿ, ದುರ್ಗೆಯ ವಿಸ್ತರಣೆಯಾಗಿದ್ದಾಳೆ. ಭೂಲೋಕದ ಚಟುವಟಿಕೆಗಳನ್ನು ನಿಯಂತ್ರಿಸಬೇಕಾಗಿರುವುದರಿಂದ ಆಕೆ ದಶ ಮಹಾವಿದ್ಯೆಯಿಂದಾಗಿಯೂ ವಿಸ್ತರಣೆಗೊಂಡಿದ್ದಾಳೆ.
ಕೃಷ್ಣಾವತಾರ ಲೀಲೆಯಲ್ಲಿ ನಂದಗೋಪನ ಮನೆಯಲ್ಲಿ ಜನಿಸುವ ಯೋಗಮಾಯೆ, ವಸುದೇವನಿಂದ ಕ೦ಸನ ಅರಮನೆಗೆ ಕರೆತರಲ್ಪಡುತ್ತಾಳೆ. ದುಷ್ಟ ಕಂಸ ಮಗುವಾಗಿದ್ದ ಯೋಗಮಾಯೆಯನ್ನು ಎತ್ತಿ ಅಪ್ಪಳಿಸಲು ಯತಿಸಿದಾಗ, ತಪ್ಪಿಸಿಕೊಂಡು ಮೇಲೆ ಹಾರಿ, ಅಷ್ಟು ಭುಜೆಯ ದುರ್ಗೆಯಾಗಿ ಪ್ರಕಟಗೊಳ್ಳುತ್ತಾನೆ.
ಕಂಸನನ್ನು ಎಚ್ಚರಿಸಿದ ನಂತರ ದೇವೋತ್ತಮ ಪರಮ ಪುರುಷನ ಆದೇಶದಂತೆ ಯೋಗಮಾಯೆಯು ವಾರಣಾಸಿ ಮೊದಲಾದ ಹಲವು ಪ್ರದೇಶಗಳಲ್ಲಿ ದುರ್ಗೆ, ಅನ್ನಪೂರ್ಣೆ, ಕಾಳಿ, ಭದ್ರಾ ಮೊದಲಾದ ಹೆಸರುಗಳಿಂದ ಆವಿರ್ಭವಿಸುತ್ತಾಳೆ.
ದೇವೋತ್ತಮ ಪರಮ ಪುರುಷನ ಬಹಿರಂಗ ಶಕ್ತಿಯನ್ನು ಪೂಜಿಸುವವರನ್ನು ‘ಶಾಕ್ತ’ರು ಎಂದು ಕರೆಯಲಾಗಿದೆ. ಭೌತಿಕ ಪ್ರಕೃತಿ ಶಕ್ತಿಯಾದ ದುರ್ಗೆಯನ್ನು ಅವರು ಭೌತಿಕ ಸುಖ ಸಂಪದಗಳಿಗಾಗಿ ಅರ್ಚಿಸುತ್ತಾರೆ.
ಈ ಭೌತಿಕ ಜಗತ್ತಿನಲ್ಲಿ ಜೀವರಾಶಿಗಳು ಬಗೆ ಬಗೆಯ ದೇಹಗಳನ್ನು ಅಂಗೀಕರಿಸಲೇಬೇಕು.
”ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ’ (ಭ.ಗೀ. 18.61) ಜೀವರಾಶಿಗಳ ಬಯಕೆಯಂತೆ, ಯೋಗಮಾಯೆ, ಮಾಯೆ ಅಥವಾ ದುರ್ಗೆಯು ಅವುಗಳಿಗೆ ನಿರ್ದಿಷ್ಟ ಬಗೆಯ ದೇಹವನ್ನು ನೀಡುತ್ತಾಳೆ. ಇದನ್ನು “ಯಂತ್ರ” ಎಂದು ಕರೆಯಲಾಗಿದೆ.
ದುರ್ಗಾ, ಭೌತಿಕ ಜಗತ್ತಿನ ಕೋಟೆಯನ್ನು ಕಾಯುವವಳು. ಈ ಜಗತ್ತಿನಿಂದ ಅವಳ ಕಣ್ತಪ್ಪಿಸಿ, ಹೊರಬರಲು ಸಾಧ್ಯವಿಲ್ಲ, ಗಮಿಸಲು (ಗಾ) ಕಷ್ಟಕರವಾದುದೇ (ದುಃ) ‘ದುರ್ಗಾ’.

ತಟಸ್ಥ ಶಕ್ತಿಯಿಂದ ಜನ್ಮ ತಳೆದ ಜೀವರು ಕೃಷ್ಣ ಸೇವೆಯನ್ನು ಮರೆತಾಗ, ಮಾಯಾಕೋಟೆಗೆ ತಳ್ಳಲ್ಪಡುತ್ತಾರೆ. ಈ ಸ್ಥಳದಲ್ಲಿ ಕರ್ಮಚಕ್ರ ಬಂಧನವೇ ಘೋರ ಶಿಕ್ಷೆ. ಈ ಬದ್ಧ ಜೀವಗಳನ್ನು ಪವಿತ್ರಗೊಳಿಸಿ ಮುಕ್ತಿಗೆ ಅರ್ಹವಾಗಿಸುವುದು ದುರ್ಗೆಗೆ ವಹಿಸಲಾಗಿರುವ ಕರ್ತವ್ಯ. ಗೋವಿಂದನ ಆಜ್ಞಾನುವರ್ತಿಯಾಗಿ ಆಕೆ ನಿರಂತರ ಕಾರ್ಯದಲ್ಲಿ ತೊಡಗಿರುತ್ತಾಳೆ.
ಅದೃಷ್ಟವಶಾತ್, ಕೃಷ್ಣಪ್ರಜ್ಞೆಯನ್ನು ಹೊಂದಿರುವ ಮುಕ್ತಾತ್ಮಗಳ ಸಾಹಚರ್ಯದಿಂದಾಗಿ ಬದ್ಧಾತ್ಮಗಳ ಗೋವಿಂದ ವಿಸ್ಮೃತಿಯು ಕಳೆದು, ಅವರು ತಮ್ಮ ಮೂಲ – ಸಹಜವಾದ ಶ್ರೀಕೃಷ್ಣನ ಸೇವೆಯಲ್ಲಿ ಪ್ರೇಮದಿಂದ ತೊಡಗಿಕೊಂಡರೆ, ದುರ್ಗೆಯು ತಾನೇ ತಾನಾಗಿ ಈ ಜೀವದ ಮುಕ್ತಿಗೆ ಮಧ್ಯಸ್ಥಿಕೆ ವಹಿಸುತ್ತಾಳೆ. ಆದ್ದರಿಂದ ಮುಕ್ತಿ ಬಯಸುವ ಬದ್ಧಾತ್ಮಗಳು, ದುರ್ಗೆಗೆ ಅತ್ಯಂತ ಪ್ರಿಯವಾದ ಶ್ರೀಕೃಷ್ಣನ ನಿಸ್ವಾರ್ಥ ಭಕ್ತಿ ಭಕ್ತಿ ಸೇವೆಯಲ್ಲಿ ತೊಡಗಿ, ಆಕೆಯ ಕರುಣೆಯನ್ನು ಪಡೆಯುವುದು ಮುಖ್ಯವಾಗುತ್ತದೆ.
ದುರ್ಗಾ ದೇವಿಗೆ ‘ಪಾರ್ವತಿ’ ಎಂದೂ ಹೆಸರಿದೆ ಈಕೆ, ಪರಮ ವೈಷ್ಣವನಾದ ಶಿವನ ಪತ್ನಿಯಾಗಿದ್ದಾಳೆ. ಈಕೆಯು ಕಾರ್ತಿಕೇಯ ಮತ್ತು ಗಣಪತಿ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದು, ಸೌಂದರ್ಯ – ಯಶಸ್ಸುಗಳ ಪ್ರತಿಮೂರ್ತಿಯಾಗಿದ್ದಾಳೆ.
ದುರ್ಗಾದೇವಿಯ ನೆಲೆಯನ್ನು “ದೇವಿಧಾಮ” ಎನ್ನಲಾಗಿದೆ. 14 ಲೋಕಗಳನ್ನೊಳಗೊಂಡಿರುವ ದೇವಿಧಾಮಕ್ಕೆ ದುರ್ಗೆಯೇ ಅಧಿಪತಿ, ಇಲ್ಲಿ ಈಕೆ ದಶಭುಜ ಧಾರಿಣಿಯಾಗಿದ್ದು, ಈ ಹತ್ತು ಬಾಹುಗಳು ಹತ್ತು ಫಲಾಪೇಕ್ಷಿತ ಕರ್ಮಗಳನ್ನು ಸೂಚಿಸುತ್ತವೆ. ಈಕೆ ಸಿಂಹ ಇಲ್ಲವೇ ಹುಲಿಯನ್ನು ವಾಹನವಾಗಿರಿಸಿ ಕೊಂಡಿದ್ದಾಳೆ.
ಇದು ಆಕೆಯ ಶೌರ್ಯವನ್ನು ಬಿಂಬಿಸುತ್ತದೆ. ಲೌಕಿಕ ಅದೃಷ್ಟದೇವತೆ ಲಕ್ಷ್ಮಿ ಮತ್ತು ಅಲೌಕಿಕ ವಿದ್ಯಾಧಿದೇವತೆ ಸರಸ್ವತಿಯರ ನಡುವೆ ದುರ್ಗಾದೇವಿ ವಿರಾಜಮಾನಳಾಗಿದ್ದಾಳೆ. ಈಕೆ ವೇದಗಳ ನಿರ್ದೇಶನದಂತೆ, ದುಷ್ಟನಿಗ್ರಹದ ಪವಿತ್ರ ಕಾರ್ಯಕ್ಕೆ ಪ್ರಾತಿನಿಧಿಕವಾಗಿ 20 ಬಗೆಯ ಆಯುಧಗಳನ್ನು ಹಿಡಿದಿದ್ದಾಳೆ.
ದುರ್ಗಾದೇವಿಯ ಜನಪ್ರಿಯ ಚಿತ್ರಗಳಲ್ಲಿ, ಆಕೆ ಇಲ್ಲಿ ಆಕೆ ಅಸುರನೊಬ್ಬನನ್ನು ಸಂಹರಿಸುತ್ತಿರುವುದೂ ಒಂದು. ಇಲ್ಲಿ ಆಕೆಯ ದಶಭುಜಗಳು ಜಗತ್ತಿನ ದಶದಿಕ್ಕುಗಳ ಆಳ್ವಿಕೆಯನ್ನು ಸೂಚಿಸುತ್ತವೆ. ಆಕೆಯ ವಾಹನ ಸಿಂಹವು ರಕ್ಕಸನ ಮೇಲೆರಗಿದ್ದು, ದುರ್ಗೆಯು ತನ್ನ ತ್ರಿಶೂಲದಿಂದ ಅವನನ್ನು ಇರಿಯುತ್ತಿರುವ ದೃಶ್ಯವು ಬಹಳ ಅರ್ಥಪೂರ್ಣವಾಗಿದೆ.
ನಾವು ಇದನ್ನು ಕೂಲಂಕಷವಾಗಿ ಗಮನಿಸಿದರೆ, ಆ ರಕ್ಕಸ ನಾವೇ ಆಗಿದ್ದು, ತ್ರಿಶೂಲವು ಭೌತಿಕ ಜಗತ್ತಿನ ಯಾತನಾಮಯ ತಾಪತ್ರಯಗಳೇ ಆಗಿವೆ ಎಂಬುದು ಅರಿವಾಗುತ್ತದೆ.
ಕೆಲವು ಯಾತನೆಗಳು ಇತರ ಜೀವಿಗಳಿಂದ ಒದಗಿ ಬಂದರೆ, ಕೆಲವು ಪ್ರಾಕೃತಿಕ ವಿಪತ್ತುಗಳಿಂದ ಒದಗುತ್ತವೆ. ಮತ್ತೆ ಕೆಲವು ಯಾತನೆಗಳು ಸ್ವತಃ ನಮ್ಮ ಮನಸ್ಸು ಮತ್ತು ದೇಹದ ಕಾರಣದಿಂದ ಉಂಟಾಗುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ನಾವು ಈ ತಾಪತ್ರಯಗಳ ಯಾತನೆಗಳಿಗೆ ಒಳಗಾಗುತ್ತಲೇ ಇರುತ್ತೇವೆ.
ಯಾರೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾವೇನೋ ದುರ್ಗಾಮಾತೆಯನ್ನು ಆರಾಧಿಸಿ, ಕಾಣಿಕೆ ಅರ್ಪಿಸುವ ಮೂಲಕ ಆಕೆಯನ್ನು ಒಲಿಸಿಕೊಳ್ಳಬಹುದು. ಆದರೆ ಆಕೆ ಮಾತ್ರ ನಾವು ಕೃಷ್ಣ ಸೇವೆಯಲ್ಲಿ ನಿರತರಾಗುವ ಹೊರತು, ನಮ್ಮನ್ನು ತಾಪತ್ರಯಗಳಿಂದ ಪಾರು ಮಾಡಿ, ಮುಕ್ತರಾಗಲು ಎಂದೂ ಸಹಕರಿಸುವುದಿಲ್ಲ!






Leave a Reply