ಚೈತನ್ಯ ಚರಿತಾಮೃತದ ಕರ್ತೃ ಶ್ರೀ ಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ಉಲ್ಲೇಖಿಸಿರುವಂತೆ ಗದಾಧರ ಗೋಸ್ವಾಮಿಯ ಹನ್ನೊಂದನೆಯ ಶಾಖೆ, ಭೂಗರ್ಭ ಗೋಸ್ವಾಮಿಗಳು. ಕವಿ ಕರ್ಣಾಪುರನು ತನ್ನ ‘ಗೌರ ಘನೋದ್ದೇಶ ದೀಪಿಕಾ’ ದಲ್ಲಿ, ಭೂಗರ್ಭ ಗೋಸ್ವಾಮಿಗಳು ವೃಂದಾವನ ಲೀಲೆಯಲ್ಲಿ ‘ಪ್ರೇಮ ಮಂಜರೀ’ ಹೆಸರಿನ ಗೋಪಿಕೆಯಾಗಿದ್ದರೆಂದು ಹೇಳಿದ್ದಾನೆ.

ಭೂಗರ್ಭ ಗೋಸ್ವಾಮಿಗಳು ಶ್ರೀ ಚೈತನ್ಯ ಮಹಾಪ್ರಭುಗಳ ಆದೇಶದಂತೆ ತಮ್ಮ ಆಪ್ತ ಸ್ನೇಹಿತ ಲೋಕನಾಥ ಗೋಸ್ವಾಮಿಗಳೊಂದಿಗೆ, ಜೀವಮಾನ ಪರ್ಯಂತ ವೃಂದಾವನದಲ್ಲಿ ನೆಲೆಸಿದ್ದರು. ಈ ಇಬ್ಬರೂ ಗೋಸ್ವಾಮಿಗಳು ಲೋಕಬೋಧಕರಾಗಿದ್ದು, ಅಪ್ರತಿಮ ಸಾಧಕರಾಗಿದ್ದರು.
ಭೂಗರ್ಭ ಗೋಸ್ವಾಮಿಯವರಿಗೆ ವೃಂದಾವನದಲ್ಲಿ ಹಿರಿಯ ಗೋಸ್ವಾಮಿಗಳೆಂಬ ಮನ್ನಣೆ ಇತ್ತು. ಅವರು ವಯಸ್ಸಿನಿಂದಲೂ, ಅನುಭವದಿಂದಲೂ ಹಿರಿಯರಾಗಿದ್ದು, ಉಳಿದ ಭಕ್ತರಿಗೆ ಮಾರ್ಗದರ್ಶಕರಾಗಿದ್ದರು. ಶ್ರೀ ಚೈತನ್ಯ ಮಹಾಪ್ರಭುಗಳ ಆದೇಶದ ಮೇರೆಗೆ ವೃಂದಾವನಕ್ಕೆ ಬಂದು ನೆಲೆಸಿದ ಮೊದಲಿಗರಲ್ಲಿ ಭೂಗರ್ಭ ಗೋಸ್ವಾಮಿ ಮತ್ತು ಲೋಕನಾಥ ಗೋಸ್ವಾಮಿಗಳು ಪ್ರಮುಖರಾಗಿದ್ದಾರೆ.
ಅವರು, ರೂಪ-ಸನಾತನ ಗೋಸ್ವಾಮಿಗಳು ವೃಂದಾವನಕ್ಕೆ ಬರುವ ಮುನ್ನವೇ ರಾಧಾಗೋವಿಂದರ ಲೀಲಾಸ್ಥಳಗಳನ್ನು ಕಂಡು ಹಿಡಿಯಲು ಪ್ರಯತ್ನ ಆರಂಭಿಸಿದ್ದರು. ವೃಂದಾವನದ ಲೀಲಾಸ್ಥಳಗಳನ್ನು ಕಂಡು ಹಿಡಿಯಲು ಭೂಗರ್ಭ ಗೋಸ್ವಾಮಿ ಮತ್ತು ಲೋಕನಾಥ ಗೊಸ್ವಾಮಿಗಳು ಇಂದಿನಂತೆ ಸಿಕ್ಕಲ್ಲೆಲ್ಲ ಭೂಮಿಯನ್ನು ಬಗೆದು, ಹಿಂಸಿಸುವ ಪದ್ಧತಿಯ ಮೊರೆ ಹೋಗಲಿಲ್ಲ.

ಅವರು ಅದನ್ನು ತಮ್ಮ ದೀನಭಾವ ಮತ್ತು ಶರಣಾಗತಿಯಿಂದಲೇ ಸಾಧಿಸಿದರು. ವೃಂದಾವನದಲ್ಲಿ ಸುತ್ತಾಡುತ್ತಾ, ಹನ್ನೆರಡು ವನಗಳನ್ನು ಹೆಸರು ಹಿಡಿದು ಕರೆಯುತ್ತಾ ಸಾಗುತ್ತಿದ್ದರು. ಆಗ ವೃಂದಾವನದ ಕಾಡುಗಳ ನಿರ್ವಾಹಕಿಯಾದ ವೃಂದಾದೇವಿಯು ಪ್ರತಿಯೊಂದು ವನದ ಸರಿಯಾದ ಸ್ಥಳವನ್ನು ನಿರ್ದೇಶಿಸಿ ಪ್ರಕಟಗೊಳಿಸಿದಳು.
ಭೂಗರ್ಭ ಗೋಸ್ವಾಮಿಗಳು ಯಾವ ಲೌಕಿಕ ಅಡೆತಡೆಗಳೂ ಬರಬಾರದೆಂಬ ಉದ್ದೇಶದಿಂದ ಭೂಗರ್ಭದಲ್ಲಿ ಕುಳಿತು ಭಜನೆಯನ್ನು ನಡೆಸುತ್ತಿದ್ದರೆಂದು, ಆ ಕಾರಣದಿಂದಲೇ ಅವರಿಗೆ ಆ ಹೆಸರು ಬಂದಿತೆಂದು ಹೇಳಲಾಗುತ್ತದೆ.
ಭೂಗರ್ಭ ಗೋಸ್ವಾಮಿಗಳು ಕಾರ್ತಿಕ ಮಾಸ ಶುಕ್ಲಪಕ್ಷದ ಹದಿನಾಲ್ಕನೆಯ (ಚತುರ್ದಶಿ) ದಿನದಂದು ಭಗವದ್ಧಾಮಕ್ಕೆ ತೆರಳಿದರು. ವೃಂದಾವನದ ರಾಧಾದಾಮೋದರ ದೇವಾಲಯದ ಆವರಣದಲ್ಲಿ ಶ್ರೀ ರೂಪ ಗೋಸ್ವಾಮಿಗಳ ಸಮಾಧಿಯಲ್ಲಿಯೇ ಶ್ರೀ ಭೂಗರ್ಭ ಗೋಸ್ವಾಮಿಗಳ ಸಮಾಧಿಯಿದೆ.






Leave a Reply