ಶ್ರೀ ಗೌರ ಕಿಶೋರ ದಾಸ ಬಾಬಾಜಿ

ವೈಷ್ಣವ ಗುರುಪರಂಪರೆಯಲ್ಲಿ ಶ್ರೀಗೌರ ಕಿಶೋರ ದಾಸ ಬಾಬಾಜಿ ಮಹಾರಾಜರಿಗೊಂದು ವಿಶಿಷ್ಟ ಸ್ಥಾನವಿದೆ. ಅವರು ಶ್ರೀ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರ ಆಧ್ಯಾತ್ಮಿಕ ಗುರುಗಳು. ಮಹಾನ್ ಭಕ್ತಸಾಧಕರು. ಶ್ರೀಗೌರ ಕಿಶೋರ ದಾಸ ಬಾಬಾಜಿ ನಿರಂತರ ನಾಮಜಪದಲ್ಲಿ ನಿರತರಾಗಿರುತ್ತಿದ್ದರು. ಈ ಕಾರಣದಿಂದಾಗಿಯೇ ಅವರನ್ನು “ಭಜನಾನಂದಿ” ಎಂದು ಕರೆಯುತ್ತಿದ್ದರು.

ಶ್ರೀ ಗೌರ ಕಿಶೋರ ದಾಸ ಬಾಬಾಜಿ ಶ್ರೇಷ್ಠ ವೈಷ್ಣವ ಸಂತರಾಗಿದ್ದು, ವೈಷ್ಣವ ಉನ್ನತ ಲಕ್ಷಣಗಳಾದ ದೈನ್ಯ ಮತ್ತು ಬಡತನಗಳ ಪ್ರತೀಕವಾಗಿದ್ದರು. ಅವರು ಎಂದಿಗೂ ಯಾರಿಂದಲೂ ಲೌಕಿಕ ವಸ್ತುಗಳನ್ನು ಸ್ವೀಕರಿಸುತ್ತಿರಲಿಲ್ಲ. ಮಧುಕರಿ ವೃತ್ತಿಯಿಂದ (ಭಿಕ್ಷೆ ಬೇಡುವುದು) ತಂದ ಅಕ್ಕಿಯನ್ನು ನೀರಿನಲ್ಲಿ ಬೇಯಿಸಿ, ಅದನ್ನು ಉಪ್ಪು ಮೆಣಸುಗಳೊಂದಿಗೆ ತಿನ್ನುತ್ತಿದ್ದರು.

ಅವರು ಯಾರಿಂದಲೂ ಯಾವುದನ್ನು ಅಪೇಕ್ಷಿಸುತ್ತಲೇ ಇರಲಿಲ್ಲ. ಶುದ್ಧ ಪರಿತ್ಯಾಗದ ಬದುಕು ಅವರದಾಗಿತ್ತು. ಕೌಪೀನ ವಿನಾ ಅವರ ದೇಹದ ಮೇಲೆ ಬೇರೆ ವಸ್ತ್ರವನ್ನೇ ಧರಿಸುತ್ತಿರಲಿಲ್ಲ. ಕೆಲವೊಮ್ಮೆ ಕೊರಳಲ್ಲಿ ತುಳಸೀ ಮಾಲೆ ಇರುತ್ತಿತ್ತು. ಕೆಲವು ವೇಳೆ ಅದೂ ಕೂಡ ಇಲ್ಲ. ಬಾಬಾಜಿ ನಾಮ ಜಪಕ್ಕಾಗಿ ಜಪಮಾಲೆ ಹೊಂದಿದ್ದರು. ಕೆಲವೊಮ್ಮೆ ಬಟ್ಟೆಯ ಚೂರನ್ನೇ ಗಂಟು ಹಾಕಿ ಅದರಲ್ಲಿಯೇ ಜಪ ಪೂರೈಸುತ್ತಿದ್ದರು. ಜಗತ್ತಿನೊಡನೆ ಅವರಿಗಿದ್ದ ನಿರ್ಲಿಪ್ತತೆ ಈ ಬಗೆಯದು!

ಗೌರ ಕಿಶೋರ ದಾಸ ಬಾಬಾಜಿಯವರು ಡಾಂಭಿಕ ಭಕ್ತಿಯ ಜನರಿಂದ ದೂರವಿರಲು ಬಯಸುತ್ತಿದ್ದರು. ಪಾದಧೂಳಿ ತೆಗೆದುಕೊಳ್ಳಲು ಧಾವಿಸುವ ಅಂತಹ ಭಕ್ತರಿಂದ ಪಾರಾಗುವ ಸಲುವಾಗಿ ಒಮ್ಮೆ ಅವರು ತಮ್ಮೆರಡು ಕಾಲುಗಳಿಗೆ ಬಿಳಿ ಬಟ್ಟೆಯನ್ನು ಸುತ್ತಿಕೊಂಡು ಕುಳಿತುಬಿಟ್ಟಿದ್ದರು !

ಬಾಬಾಜಿ ಶ್ರೀ ಭಕ್ತವಿನೋದ ಠಾಕುರರು ಪಠಿಸುತ್ತಿದ್ದ “ಶ್ರೀಮದ್ಭಾಗವತ” ವನ್ನು ಆಲಿಸಲೆಂದೇ ಗೋದ್ರುಮ ದ್ವೀಪಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ಚೈತನ್ಯ ಮಠಗಳು ಮತ್ತು ಗೌಡೀಯ ಮಠಗಳ ಸ್ಥಾಪಕರಾದ ಶ್ರೀ ಭಕ್ತಿಸಿದ್ಧಾಂತ ಠಾಕುರರು ತಮ್ಮ ತಂದೆ ಶ್ರೀ ಭಕ್ತಿ ವಿನೋದ ಠಾಕುರರ ಆಣತಿಯಂತೆ ಬಾಬಾಜಿಯವರಿಂದ ಶಿಷ್ಯ ದೀಕ್ಷೆ ಪಡೆದರು.

ಗೌರ ಕಿಶೋರ ದಾಸ ಬಾಬಾಜಿಯವರ ದೈವೀಗುಣಗಳು, ಶ್ರೇಷ್ಠ ವೈಷ್ಣವ ಸಂತನ ಲಕ್ಷಣಗಳಿಂದ ಆಕರ್ಷಿತರಾದ ಜನರು ಸದಾ ಅವರಿಗೆ ಸೇವೆ ಸಲ್ಲಿಸಲು ಬಯಸುತ್ತಿದ್ದರು. ಆದರೆ ಬಾಬಾಜಿ ಹಾಗೆ ಎಲ್ಲರಿಂದಲೂ ಸೇವೆ ಸ್ವೀಕರಿಸುತ್ತಿರಲಿಲ್ಲ.

ಒಮ್ಮೆ ಗಿರಿಬಾಬು ಎನ್ನುವ ಭಕ್ತನೊಬ್ಬ ಬಾಬಾಜಿಯವರನ್ನು ತನ್ನ ಮನೆಯಲ್ಲಿ ಬಂದು ನೆಲೆಸುವಂತೆ ಕೇಳಿಕೊಂಡ. ಆ ದಂಪತಿ ಇಬ್ಬರೂ ಪ್ರಾಮಾಣಿಕರೂ ಸಾತ್ತ್ವಿಕರೂ ಆಗಿದ್ದುದರಿಂದ ಅವರು ಅವನ ಮನೆಗೆ ಹೋಗಲು ಒಪ್ಪಿದರು. ಆದರೆ, ತಾವು ಅವನ ಮನೆಯ ಬಚ್ಚಲಿನಲ್ಲಿಯೇ ವಾಸ ಹೂಡುವುದಾಗಿ ಕರಾರು ಹಾಕಿಬಿಟ್ಟರು.

ಅವರ ಮನ ಬದಲಿಸಲು ಗಿರಿಬಾಬು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಕೊನೆಗೆ ಆತ ಮನೆಯ ಬಚ್ಚಲನ್ನು ಶುಚಿಗೊಳಿಸಿ ಅದನ್ನು ಶುದ್ಧವಾದ ವಾಸಸ್ಥಳವಾಗಿ ಮಾರ್ಪಡಿಸಬೇಕಾಯಿತು. ಬಾಬಾಜಿಯವರು ಲೌಕಿಕ ಜಗತ್ತನ್ನು ಕಾಣುತ್ತಿದ್ದ ದೃಷ್ಟಿಈ ರೀತಿಯದು!

ಶ್ರೀಭಕ್ತಿಸಿದ್ಧಾಂತ ಠಾಕುರರು ಶ್ರೀ ಗೌರ ಕಿಶೋರ ದಾಸ ಬಾಬಾಜಿ ಮಹಾರಾಜರ ಏಕೈಕ ಶಿಷ್ಯರಾಗಿದ್ದರು. ಬಾಬಾಜಿ ಅವರಿಗೆ “ವರ್ಷಭಾನವೀ ದೇವಿ ದಯಿತ ದಾಸ’ ಎಂಬ ಹೆಸರು ನೀಡಿದ್ದರು. ಸದಾ ನಾಮಜಪದಲ್ಲಿ ತಲ್ಲೀನರಾಗಿದ್ದು, ಪರಮ ವಿರಾಗಿಯಾಗಿ ಬಾಳಿದ ಬಾಬಾಜಿ, 1915ನೇ ಇಸವಿ ನವೆಂಬರ್ 17ರಂದು (ಉತ್ಥಾನ ಏಕಾದಶಿಯಂದು) ಈ ಜಗತ್ತನ್ನು ತೊರೆದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi