ಯೋಗಿಯ ಪಂಥ

ಆಕರ: ಅಮೋಘದಾಸ ಮತ್ತು ಭೂರಿಜನ ದಾಸರ ಸಂದರ್ಶನ ಟಿಪ್ಪಣಿಗಳು

ಆಂಗ್ಲಮೂಲ: ಪ್ರಭುಪಾದ ನೆಕ್ಟರ್‌, ಸತ್‌ಸ್ವರೂಪದಾಸ ಗೋಸ್ವಾಮಿ

ಶ್ರೀಲ ಪ್ರಭುಪಾದರ ಸಂನ್ಯಾಸಿ ಶಿಷ್ಯರಲ್ಲೊಬ್ಬ ದಿನದಿಂದ ದಿನಕ್ಕೆ ತನ್ನ ಆಚಾರಗಳನ್ನು ಸಡಲಿಸುತ್ತ ಬದಲಾಗತೊಡಗಿದ. ತನ್ನ ಕೂದಲನ್ನು ಬೆಳೆಸಿಕೊಂಡ. ಧೋತಿ ತೊಡುವುದನ್ನು ಬಿಟ್ಟ. ಆದರೂ ಆತನ ಮನಸ್ಸಿನಲ್ಲಿ ತಾನೊಬ್ಬ ಆಧ್ಯಾತ್ಮಿಕ ಗುರುವಾಗಬಲ್ಲೆ ಎನ್ನುವ ಭ್ರಮೆ ಇತ್ತು. ಅವನು ಮೆಲ್ಬೋರ್ನ್, (ಆಸ್ಟ್ರೇಲಿಯಾ)ನಲ್ಲಿ ಪ್ರಭುಪಾದರನ್ನು ಭೇಟಿಯಾಗಲು ಬಂದಾಗ, ಅವರು ಆಧ್ಯಾತ್ಮಿಕ ಸಾಧನೆಗೆ ನಿಯಮಾಚರಣೆಗಳು ಎಷ್ಟು ಮುಖ್ಯ ಎಂದು ತಿಳಿಸಲು ಈ ಕಥೆಯನ್ನು ಹೇಳಿದರು;

ಒಂದು ಊರಿನಲ್ಲಿ ಒಬ್ಬಶ್ರೀಮಂತ ಜಮೀನ್ದಾರನಿದ್ದ. ಒಮ್ಮೆ ಆತನ ಸೇವಕ ಹೊರಗಿನಿಂದ ಬಂದವನೇ ತಾನು ನದೀ ತೀರದಲ್ಲಿ ಒಬ್ಬ ಕುತೂಹಲಕಾರಿ ಯೋಗಿಯನ್ನು ನೋಡಿದುದಾಗಿ ಹೇಳಿದ. ಆ ಯೋಗಿಯು ತಾನು ನದಿಯ ನೀರಲ್ಲಿ ನಿಂತು ಇಡೀ ರಾತ್ರಿ ಕಳೆಯಬಲ್ಲೆನೆಂದೂ, ಛಳಿಯಿಂದ ರಕ್ಷಿಸಿಕೊಳ್ಳಲು ಹೊರಗಿನ ಯಾವ ರೀತಿಯ ಶಾಖದ ನೆರವು ಪಡೆಯುವುದಿಲ್ಲವೆಂದೂ ಹೇಳಿಕೊಳ್ಳುತ್ತ “ಯಾರಾದರೂ ಪಂಥ ಒಡ್ಡುವುದಿದ್ದರೆ ಮುಂದೆ ಬನ್ನಿ’ ಎಂದು ಆಹ್ವಾನ ನೀಡುತ್ತಿದ್ದ.

ಇದನ್ನು ಕೇಳಿದ ಶ್ರೀಮಂತನಿಗೆ ಪ೦ಥ ಒಡ್ಡಿ ಯೋಗಿಯನ್ನು ಪರೀಕ್ಷಿಸುವ ಮನಸ್ಸಾಯ್ತು. ಸೇವಕನಿಗೆ ತನ್ನ ಮನದಿಂಗಿತ ತಿಳಿಸಿದ. ಇಬ್ಬರೂ ನದೀ ತೀರಕ್ಕೆ ಹೋದರು. ಸವಾಲು ಇತ್ಯರ್ಥವಾಯಿತು. ರಾತ್ರಿಯಾಗುತ್ತಲೇ ಯೋಗಿ ನದಿಯಲ್ಲಿ ಹೋಗಿ ನಿಂತ. ಯಜಮಾನ ಸೇವಕರಿಬ್ಬರೂ ಮನೆಗೆ ಮರಳಿದರು.

ಬೆಳಕು ಹರಿಯಿತು. ಯೋಗಿ, ಇರುಳಿಡೀ ನೀರಲ್ಲೇ ನಿಂತಿದ್ದ ಎನ್ನುವ ವರದಿ ಬಂತು. ಶ್ರೀಮಂತ, ಸೇವಕನೊಡನೆ ತೀರಕ್ಕೆ ಹೋದ. ಆಗಲೇ ಅಲ್ಲಿ ಸಾಕಷ್ಟು ಮಂದಿ ಜಮಾಯಿಸಿದ್ದರು. ಯೋಗಿ ಯಾವ ಉಷ್ಣದ ನೆರವೂ ಪಡೆಯದೆ, ಇನ್ನೂ ನೀರಲ್ಲೇ ನಿಂತಿದ್ದ. ಶ್ರೀಮಂತ ತನ್ನ ಪಂಥ ಸೋತಿದ್ದ.

ಅಲ್ಲಿ ನೆರೆದಿದ್ದ ಗುಂಪಿನಲ್ಲಿ ಶ್ರೀಮಂತನ ಸ್ನೇಹಿತನೊಬ್ಬನಿದ್ದ. ಅವನು ಶ್ರೀಮಂತನನ್ನು ಕುರಿತು, ದೂರದಲ್ಲಿ ಕಾಣುತ್ತಿದ್ದ ದೇವಾಲಯದ ಚಿಕ್ಕ ಜ್ವಾಲೆಯನ್ನು ತೋರಿಸುತ್ತ, “ಅಲ್ಲಿ ನಿನಗೆ ದೀಪಜ್ವಾಲೆ ಕಾಣಿಸುತ್ತಿಲ್ಲವೇ?” ಎಂದ. ಮುಂದುವರಿದು, ” ಈ ಯೋಗಿ ತನ್ನ ಅತೀಂದ್ರಿಯ ಶಕ್ತಿಯಿ೦ದ ಆ ದೂರದ ದೇವಾಲಯದ ದೀಪಜ್ವಾಲೆಯಿಂದಲೇ ಮೈ ಬೆಚ್ಚಗಾಗಿಸಿಕೊಂಡಿದ್ದಾನೆ. ಅಂದಮೇಲೆ, ಇದು ಪಂಥದ ನಿಯಮಕ್ಕೆ ಹೊರತಾಯಿತು. ನೀನಿನ್ನು ಹಣಕೊಡಬೇಕಾದುದಿಲ್ಲ” ಎಂದು ಬೋಧಿಸಿದ.

ಗೆಳೆಯನ ವಾದಸರಣಿಯನ್ನು ಮೆಚ್ಚಿದ ಶ್ರೀಮಂತ, ಅದಕ್ಕೆ ತಲೆದೂಗಿದ. ಯೋಗಿಗೆ, ‘ನಾನು ನಿನಗೆ ಪಂಥದ ಹಣ ಕೊಡುವುದಿಲ್ಲ ನೀನು ನನ್ನನ್ನು ವಂಚಿಸಿರುವೆ” ಎಂದು ಬಿಟ್ಟ. ನೆರೆದವರೆಲ್ಲರೂ ಅಲ್ಲಿಂದ ಚದುರಿದರು. ಮನೆಗೆ ಮರಳಿದ ಶ್ರೀಮಂತ, ಸೇವಕನಿಗೆ ಬೆಳಗಿನ ಉಪಹಾರ ಸಿದ್ಧಪಡಿಸುವಂತೆ ಹೇಳಿದ. ಅದರಂತೆ ಆತ, ಅಡುಗೆ ಮನೆ ಹೊಕ್ಕ.

ಬಹಳ ಹೊತ್ತು ಕಾದರೂ ಉಪಹಾರ ಬರಲಿಲ್ಲ. ಸೇವಕನನ್ನು ವಿಚಾರಿಸಲಾಗಿ, “ದಯವಿಟ್ಟುಕೊಂಚ ತಡೆಯಿರಿ, ನಾನು ಉಪಹಾರ ತಯಾರಿಸುತ್ತಲೇ ಇರುವೆ” ಎನ್ನುವ ಉತ್ತರ ಬಂತು. ಮತ್ತು ಸ್ವಲ್ಪ ಹೊತ್ತು ಕಾದ ಶ್ರೀಮಂತ, ಊಹೂಂ, ಇನ್ನೂ ಬರಲಿಲ್ಲ. ಸೇವಕ ಅಡುಗೆ ಮನೆಯಿಂದ ಮೊದಲಿನ ಉತ್ತರವನ್ನೇ ಕೂಗಿ ಹೇಳಿದ.

ಹಸಿವಿನಿಂದ ಉಂಟಾದ ಆಸಹನೆ, ಕೋಪಗಳಿಂದ ರೇಗುತ್ತಾ ಶ್ರೀಮಂತ ತಾನೇ ವಿಚಾರಿಸುವ ಸಲುವಾಗಿ ಎದ್ದು ಅಡುಗೆ ಮನೆಗೆ ಹೋದ. ಸೇವಕ ತಿಂಡಿ ಬೇಯಿಸುತ್ತಿದ್ದ ವಿಚಿತ್ರ ರೀತಿಯನ್ನು ನೋಡಿ, “ಇದೇನು ನೀನು ಮಾಡುತ್ತಿರುವುದು” ಎಂದು ಅಬ್ಬರಿಸಿದ.

ಸೇವಕ ನೆಲದ ಮೇಲೆ ಅತಿ ಚಿಕ್ಕದಾಗಿ ಉರಿ ಹೊತ್ತಿಸಿದ್ದ. ಸುತ್ತಲೂ ಅತಿ ಎತ್ತರದ ಮೂರು ಬೊಂಬುಗಳನ್ನಿಟ್ಟು, ಅದನ್ನು ತ್ರಿಕೋನಾಕಾರದಲ್ಲಿ ಮೇಲೆ ಸೇರುವಂತೆ ನಿಲ್ಲಿಸಿ, ಅದರ ತುದಿಯಲ್ಲಿ ಮಡಕೆ ಕಟ್ಟಿದ್ದ ಅದು ಹತ್ತಿರ ಹತ್ತಿರ ಮಾಡಿಗೆ ತಗಲುತ್ತಿತ್ತು. ನೆಲದ ಮೇಲಿನ ಪುಟ್ಟ ಜ್ವಾಲೆ, ಯಾವ ಕಾರಣಕ್ಕೂ ಅದಕ್ಕೆ ಶಾಖ ತಗಲಿಸುವಂತೆ ಇರಲಿಲ್ಲ.

” ನೀನು ಏನು ಮಾಡುತ್ತಿದ್ದೀ ಎನ್ನುವ ಪ್ರಜ್ಞೆಯಾದರೂ ಇದೆಯೋ?” ಶ್ರೀಮಂತನ ಕೋಪ ನೆತ್ತಿಗೇರಿತ್ತು. ಸೇವಕ ಮಾತ್ರ ವಿನೀತನಾಗಿಯೇ ನುಡಿದ; ದೂರದ ದೀಪ ಜ್ವಾಲೆಯಿಂದ ನದಿಯಲ್ಲಿ ನಿಂತ ಯೋಗಿ ಮೈಕಾಯಿಸಿಕೊಳ್ಳಬಲ್ಲನೆಂದು ನೀವು ಹೇಳುವಿರಾದರೆ, ನಾನೂ ಈ ಬೆಂಕಿಯಿಂದ ಆಹಾರ ಬೇಯಿಸುವೆನೆಂದು ಹೇಳಬಲ್ಲೆ!”

ಶ್ರೀಮಂತನಿಗೆ ಸೇವಕನ ಮಾತಿನ ಅಂತರಾರ್ಥ ಹೊಳೆಯಿತು. ಯೋಗಿಯ ಪಂಥದ ವಿಷಯದಲ್ಲಿ ಆತನಿಗೆ ಅಸಮಾಧಾನವಾಗಿತ್ತು. ಸೇವಕನ ಜಾಣ್ಮೆಗೆ ಸೋತ ಶ್ರೀಮಂತ, ತಾನೇ ಹೋಗಿ ಯೋಗಿಯ ಪಂಥದ ಮೊತ್ತ ಸಂದಾಯ ಮಾಡಿದ.

ಕಥೆ ಹೇಳಿ ಮುಗಿಸಿದ ಪ್ರಭುಪಾದರು, “ನಿಮಗೆ ಫಲಿತಾಂಶ ಬೇಕೆನ್ನುವುದೇ ಆದರೆ, ಎಲ್ಲ ವಿಧಿ ವಿಧಾನಗಳನ್ನು ಅನುಸರಿಸಲೇಬೇಕು. ಮಾಡಬಾರದ ಚೇಷ್ಟೆಗಳನ್ನೆಲ್ಲ ಮಾಡುತ್ತ ಭಗವನ್ನಾಮ ಸ್ಮರಣೆ ಮಾಡಲು ಯತ್ನಿಸಿದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

ನೀತಿ : ಅಡುಗೆ ತಯಾರಿಸಲು ಬೆಂಕಿ ಎಷ್ಟು ಮುಖ್ಯವೋ, ಕಾರ್ಯಸಫಲತೆಗೆ ಆಚರಣೆಗಳ ಅನುಷ್ಠಾನವೂ ಅಷ್ಟೇ ಮುಖ್ಯ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi