ಕೃಷ್ಣ ಪಾಕಶಾಲೆ
– ಎಸ್.ವಿ. ಗಾಯತ್ರಿ ಶೆಣೈ
ಭಕ್ತಪರಾಧೀನ ಕೃಷ್ಣ ತನ್ನ ಪ್ರಿಯಸಖ ಸುಧಾಮನಿಂದ ಭಕ್ತಿಪೂರ್ವಕವಾಗಿ ಅವಲಕ್ಕಿಯನ್ನು ಸ್ವೀಕರಿಸಿದ ಲೀಲೆ ಎಲ್ಲರಿಗೂ ತಿಳಿದದ್ದೇ. ಆ ರೀತಿ ಕೃಷ್ಣಪ್ರಿಯವಾದ ಅವಲಕ್ಕಿಯಿಂದ ಮಾಡುವ ವಿವಿಧ ತಿನಿಸುಗಳನ್ನು ಈ ಬಾರಿ ನಮ್ಮ ಪ್ರಿಯ ಓದುಗ ಭಕ್ತವೃಂದಕ್ಕೆ ಕೊಡಲಾಗಿದೆ. ತಾವು ಈ ಪದಾರ್ಥಗಳನ್ನು ಮಾಡಿ ಶ್ರೀರಾಧಕೃಷ್ಣನಿರ್ಗಪಿಸಿ, ಕೃತಾರ್ಥರಾಗಿರಿ.
ಕುಟ್ಟವಲಕ್ಕಿ (ಕುಟ್ಟಿದ ಅವಲಕ್ಕಿ)

ಬೇಕಾಗುವ ಪದಾರ್ಥಗಳು:
ಗಟ್ಟಿ ಅವಲಕ್ಕಿ – 500 ಗ್ರಾಂ
ಕೊಬ್ಬರಿ – 200 ಗ್ರಾಂ
ಕೊತ್ತಂಬರಿ (ಧನಿಯಾ) – 50 ಗ್ರಾಂ
ಜೀರಿಗೆ – 25 ಗ್ರಾಂ
ಸಕ್ಕರೆ – 4 ದೊಡ್ಡ ಚಮಚ
ಅರಿಶಿನ ಪುಡಿ – 2 ಚಿಟಕಿ
ಒಣಮೆಣಸಿನಕಾಯಿ ಪುಡಿ – ರುಚಿಗೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಕರಿಬೇವು – 5 ಎಸಳು
ಸಾಸಿವೆ – 1 ಚಿಕ್ಕ ಚಮಚ
ಅಡಿಗೆ ಎಣ್ಣೆ – 2 ದೊಡ್ಡ ಚಮಚ
ಮಾಡುವ ವಿಧಾನ : ಅವಲಕ್ಕಿ ಆರಿಸಿ ದಪ್ಪತಳದ ಬಾಣಲೆಯಲ್ಲಿ ಹುರಿದು, ಅಗಲವಾದ ತಟ್ಟೆಯಲ್ಲಿ ಸುರಿದು ಆರಲು ಬಿಡಿ. ಕೊಬ್ಬರಿ ತುರಿದಿಟ್ಟುಕೊಳ್ಳಿ. ಜೀರಿಗೆ, ಕೊತ್ತಂಬರಿ, ಸ್ವಲ್ಪ ಕರಿಬೇವನ್ನು ಒಂದೊಂದಾಗಿ ಎಣ್ಣೆ ಹಾಕದೇ ಹುರಿಡಿಡಿ. ಹುರಿದಿಟ್ಟ ಅವಲಕ್ಕಿ, ಸಕ್ಕರೆ ಮತ್ತು ಮಿಕ್ಕ ಪದಾರ್ಥಗಳನ್ನು ತಣ್ಣಗಾದ ಬಳಿಕ ಒರಳಲ್ಲಿ ಕುಟ್ಟಿ ಪುಡಿಮಾಡಿ, ಇಲ್ಲದಿದ್ದಲ್ಲಿ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿ.
ಅನಂತರ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಉಳಿದ ಕರಿಬೇವು, ಸಾಸಿವೆಯನ್ನು ಹಾಕಿ ಒಗ್ಗರಣೆ ಕೊಡಿ. ಕಾದಎಣ್ಣೆಗೆ ಅರಿಶಿನಪುಡಿ ಹಾಕಿ, ಉರಿ ಆರಿಸಿದ ಅನಂತರ ಉಪ್ಪು ಒಣಮೆಣಸಿನಕಾಯಿ ಪುಡಿ ಬೆರೆಸಿ. ಅನಂತರ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿ ಕುಟ್ಟಿದ ಅವಲಕ್ಕಿಯನ್ನು ಸ್ವಲ್ಪ ತಣ್ಣಗಾದ ಅನಂತರ ಭರಣಿಯಲ್ಲಿ ಶೇಖರಿಸಿಡಿ. ಬೇಕಾದಲ್ಲಿ ಹುರಿಗಡಲೆ ಅಥವಾ ಕಡಲೇಬೀಜವನ್ನು ಹುರಿದು ಅವಲಕ್ಕಿಯೊಂದಿಗೆ ಪುಡಿಮಾಡಿ ಬೆರೆಸಬಹುದು.
ಸಿಹಿ ಅವಲಕ್ಕಿ (ಪಂಚಕಾದಾಯಿ)

ಬೇಕಾಗುವ ಪದಾರ್ಥಗಳು :
ತೆಳುಅವಲಕ್ಷ್ಮಿ (ನೈಲಾನ್ ಅವಲಕ್ಕಿ) – 250 ಗ್ರಾಂ
ಬೆಲ್ಲ – 250 ಗ್ರಾಂ
ತೆಂಗಿನಕಾಯಿ – 1 (ಒಂದು)
ಏಲಕ್ಕಿ ಪುಡಿ – 1 ಚಿಕ್ಕ ಚಮಚ
ಕರಿಎಳ್ಳು – 2 ದೊಡ್ಡ ಚಮಚ
ತುಪ್ಪ – 2 ದೊಡ್ಡ ಚಮಚ
ಮಾಡುವ ವಿಧಾನ : ಅವಲಕ್ಕಿಯನ್ನು ಆರಿಸಿಟ್ಟುಕೊಳ್ಳಿ. ಬೆಲ್ಲವನ್ನು ಪುಡಿಮಾಡಿಟ್ಟುಕೊಳ್ಳಿ. ತೆಂಗಿನಕಾಯಿಯನ್ನು ತುರಿದು, ಬೆಲ್ಲದೊಂದಿಗೆ ಬೆರೆಸಿಡಿ. ಹತ್ತು ನಿಮಿಷದ ಅನಂತರ ಬೆಲ್ಲ ಹಾಗೂ ತೆಂಗಿನತುರಿಗೆ ಅವಲಕ್ಕಿ ಹಾಕಿ ಸೇರಿಸಿ. ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ಅದರಲ್ಲಿ ಕರಿಎಳ್ಳನ್ನು ಹುರಿದು ಸಿಹಿ ಅವಲಕ್ಕಿಗೆ ಬೆರೆಸಿ. ಪಂಚಕಾದಾಯಿ ಸಿದ್ಧ. ಬೇಕಾದಲ್ಲಿ ಬೆಲ್ಲವನ್ನು ಬಾಣಲೆಯಲ್ಲಿ ಹಾಕಿ ಸ್ವಲ್ಪ ತೆಂಗಿನ ನೀರನ್ನು ಸೇರಿಸಿ ತೆಳು ಪಾಕಮಾಡಿಕೊಂಡು ಅವಲಕ್ಕಿಗೆ ಬೆರೆಸಬಹುದು.
ಮಸಾಲೆ ಅವಲಕ್ಕಿ

ಬೇಕಾಗುವ ಪದಾರ್ಥಗಳು :
(ನೈಲಾನ್) ತೆಳು ಅವಲಕ್ಕಿ – 250 ಗ್ರಾಂ
ತೆಂಗಿನಕಾಯಿ – 1 (ಒಂದು)
ಒಣಮೆಣಸಿನಕಾಯಿ – 3-4 (ರುಚಿಗೆ ತಕ್ಕಷ್ಟು)
ಜೀರಿಗೆ – 1 ಚಿಕ್ಕ ಚಮಚ
ಕೊತ್ತಂಬರಿ – 2 ಚಿಕ್ಕ ಚಮಚ
ಬೆಲ್ಲದ ಪುಡಿ – 2 ಚಿಕ್ಕ ಚಮಚ
ಉಪ್ಪು – ರುಚಿಗೆ ತಕ್ಕಷ್ಟು,
ಕರಿಬೇವು – 2 ಎಸಳು
ಅಡುಗೆ ಎಣ್ಣೆ – 1 ದೊಡ್ಡ ಚಮಚ
ಹುಣಸೇಹಣ್ಣು – ಚಿಕ್ಕ ಚೂರು
ಮಾಡುವ ವಿಧಾನ : ಅವಲಕ್ಕಿಯನ್ನು ಆರಿಸಿಕೊಳ್ಳಿ. ಜೀರಿಗೆ, ಕೊತ್ತಂಬರಿ, ಒಣಮೆಣಸಿನಕಾಯಿ, ತೆಂಗಿನತುರಿ, ಬೆಲ್ಲದ ಪುಡಿ, ಹುಣಸೇಹಣ್ಣನ್ನು ಸೇರಿಸಿ ಮಸಾಲೆ ರುಬ್ಬಿಕೊಳ್ಳಿ (ನೀರು ಬೆರೆಸದೆ ರುಬ್ಬಿದರೆ ತತ್ ಕ್ಷಣ ಕೆಡುವುದಿಲ್ಲ) ಅನಂತರ ಮಸಾಲೆಗೆ ಅವಲಕ್ಕಿ ಮತ್ತು ಉಪ್ಪು ಹಾಕಿ ಕಲೆಸಿ. ಅನಂತರ ಅಡಿಗೆ ಎಣ್ಣೆ ಬಿಸಿಮಾಡಿ, ಸಾಸಿವೆ-ಕರಿಬೇವು ಒಗ್ಗರಣೆ ಕೊಟ್ಟು ಇದಕ್ಕೆ ಸೇರಿಸಿ. ಮಸಾಲೆ ಅವಲಕ್ಕಿ ಸಿದ್ಧ.






Leave a Reply