ನಿಂಬಾರ್ಕಾಚಾರ್ಯ

ಶ್ರೀ ನಿಂಬಾರ್ಕಾಚಾರ್ಯರು ವೈಷ್ಣವ ಪಂಥದ ಒಂದು ಸಂಪ್ರದಾಯವಾದ “ಕುಮಾರ ಸಂಪ್ರದಾಯ”ದ ಪ್ರವರ್ತಕರು. ಇವರನ್ನು ಭಗವಾನ್‌ ಶ್ರೀವಿಷ್ಣುವಿನ ಆಯುಧವಾದ ಸುದರ್ಶನ ಚಕ್ರದ ಅವತಾರವೆಂದು ಹೇಳಲಾಗುತ್ತದೆ.

ಗೋದಾವರೀ ತೀರದ ವೈಡೂರ್ಯ ಪಟ್ಟಣದಲ್ಲಿ ನಿಂಬಾರ್ಕಾಚಾರ್ಯರು ಶ್ರೇಷ್ಠ ತಾಪಸರಾಗಿದ್ದ ಅರುಣಮುನಿ ಮತ್ತು ಜಯಂತೀ ದೇವಿಯವರ ಪುತ್ರರಾಗಿ ಜನಿಸಿದರು. ಇವರ ಬಾಲ್ಯದ ಹೆಸರು ನಿಯಮಾನಂದಚಾರ್ಯ.

ಆಶ್ರಮಕ್ಕೆ ಭೇಟಿಯಿತ್ತಿದ್ದ ಸಂನ್ಯಾಸಿಯೊಬ್ಬ ಸೂರ್ಯ ಮುಳುಗಿದ ಅನಂತರ ಊಟ ಮಾಡುವುದಿಲ್ಲವೆಂದದ್ದರಿಂದ ತರುಣ ನಿಯಮಾನಂದರು ತಮ್ಮ ಚಕ್ರವನ್ನು ಬೇವಿನ ಮರದ ಮೇಲೆ ಸೂರ್ಯನ ಎದುರಾಗಿಟ್ಟು ಅದು ಸೂರ್ಯನಂತೆಯೇ ಪ್ರಕಾಶಿಸುವ ಭ್ರಮೆ ಮೂಡಿಸಿದ್ದರು.

ಇದರಿಂದ ಮನೆಗೆ ಬಂದು ಅತಿಥಿಯನ್ನು ಊಟ ಮಾಡಿಸದೆ ಕಳುಹಿಸುವ ಬೇಸರದಿಂದ ತಾಯಿಯನ್ನು ಪಾರು ಮಾಡಿದರು. “ನಿಂಬ” ಅಂದರೆ ಬೇವು. “ಅರ್ಕ” ಅಂದರೆ ಸೂರ್ಯ. ಹೀಗೆ ಬೇವಿನ ಗಿಡದಲ್ಲಿ ಸೂರ್ಯನನ್ನು ಮೂಡಿಸಿದ್ದರಿಂದ ಅವರಿಗೆ “ನಿಂಬಾರ್ಕಾಚಾರ್ಯ” ರೆಂದು ಹೆಸರಾಯಿತು.

“ವಿಷ್ಣುಯಾನ” ದಲ್ಲಿ ನಿಂಬಾರ್ಕರ ಆಧ್ಯಾತ್ಮಿಕ ಸ್ಥಾನವನ್ನು ಹೀಗೆ ನಿರ್ದೇಶಿಸಲಾಗಿದೆ. “ಹದಿನೆಂಟು ಅಕ್ಷರಗಳ ಪವಿತ್ರ ಗೋಪಾಲ ಮಂತ್ರವು ಶ್ರೀ ನಾರಾಯಣ ಜಿಹ್ವೆಯಿಂದ ಹೊರ ಹೊಮ್ಮಿತು. ಅದನ್ನು ಹಂಸ ಭಗವಾನನಿಗೆ ಉಪದೇಶಿಲಾಯಿತು.

ಹಂಸ ಭಗವಾನರು ಆ ಗೋಪಾಲ ಮಂತ್ರವನ್ನು ಕುಮಾರರಿಗೂ (ಚತುರ್ಸನ), ಅವರು ಅದನ್ನು ನಾರದ ಮಹರ್ಷಿಗಳಿಗೂ ನೀಡಿದರು. ನಾರದರು ಈ ಗೋಪಾಲ ಮಂತ್ರವನ್ನು ತಮ್ಮ ಶಿಷ್ಯರಾದ ನಿಂಬಾರ್ಕರಿಗೂ ಅವರು ಅದನ್ನು ತಮ್ಮ ಶಿಷ್ಯ ಶ್ರೀನಿವಾಸಚಾರ್ಯರಿಗೂ ಬೋಧಿಸಿದರು.”

ಶ್ರೀನಿಂಬಾರ್ಕಾಚಾರ್ಯರು ದಯೆ, ಕರುಣೆ, ಪ್ರೇಮ ಭಾವಗಳ ಸಾಕಾರ ಮೂರ್ತಿಯಾಗಿದ್ದರು. ಆಗಾಧ ಪಾಂಡಿತ್ಯ ಹೊಂದಿದ್ದ ಅವರು ಪ್ರಪನ್ನಕಲ್ಪವಲ್ಲೀ, ಪ್ರಪತ್ತಿ ಚಿಂತಾಮಣಿ, ಪ್ರಾತಃ ಸ್ಮರಣಸ್ತೋತ್ರ, ಸವಿಶೇಷ ನಿರ್ವಿಶೇಷ ಶ್ರೀಕೃಷ್ಣಸ್ತವ ಇತ್ಯಾದಿ ಗ್ರಂಥಗಳನ್ನು ರಚಿಸಿದ್ದಾರೆ. ಅವರು “ದ್ವೈತಾದ್ವೈತ ತತ್ತ್ವ” ದ ಪ್ರತಿಪಾದಕರಾಗಿದ್ದು, ಅವರ ಅನುಯಾಯಿಗಳು ಶ್ರೀರಾಧಾಕೃಷ್ಣರ ಪೂಜಕರಾಗಿದ್ದಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi