ಸುರಭಿಯ ಸುಧೆ

ಒಂದು ವೈಜ್ಞಾನಿಕ ವಿಶ್ಲೇಷಣೆ

– ಶ್ರೀಮತಿ ಶಶಿಕಲಾ ಶ್ರೀಧರ್‌

ಗೋವಿಗೂ ಗೋಪಾಲ ಶ್ರೀಕೃಷ್ಣನಿಗೂ ಅವಿನಾಭಾವ ಸಂಬಂಧ. ಗೋವನ್ನು ಭಕ್ತಿಯಿಂದ, ಪ್ರೀತಿಯಿಂದ ಕಾಣುವವರಿಗೆ ಗೋವಿಂದನೂ ಹತ್ತಿರ. ಗೋಕ್ಷೀರ, ಮರ್ತ್ಯಲೋಕದ ಅಮೃತವೇ ಸರಿ. ಅದರ ಪೋಷಕ ತತ್ತ್ವಗಳ ವೈಜ್ಞಾನಿಕ ವಿಶ್ಲೇಷಣೆ ಮತ್ತು ಮಹತ್ವಗಳ ಸವಿವರ ಇಲ್ಲಿದೆ.

ಪಂಚ’ಗ’ ಕಾರಗಳಾದ ಗೋವು, ಗಂಗಾ, ಗೀತಾ, ಗಾಯತ್ರೀ ಮತ್ತು ಗೋವಿಂದ ಇವು ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಪ್ರತೀಕ.

ಈ ಐದರಲ್ಲಿ ಗೋವು ಮತ್ತು ಗೋಪಾಲನಿಗೆ ಅತ್ಯಂತ ನಿಕಟ ಸಂಬಂಧ ಪ್ರಾಚೀನ ಋಗ್ವೇದದಿಂದ ಪ್ರಾರಂಭವಾಗಿ ಆಧುನಿಕ ಕನ್ನಡ ನಾಡಪದವಾದ ‘ಗೋವಿನಗೀತೆ’ಯವರೆಗೂ ಗೋವನ್ನು ಗೋವಿಂದನನ್ನೂ ಕುರಿತು ಅನೇಕ ಅದ್ಭುತ ಸುಂದರ ಸ್ತೋತ್ರ ಹಾಗೂ ಸಾಹಿತ್ಯವನ್ನು ಕಾಣುತ್ತೇವೆ.

ಋಗ್ವದದಲ್ಲಿ –

ಯುಯಂ ಗಾವೋ ಮೇದಯಥಾ ಕೃಶಂಚಿತ್‌

ಅಶ್ಲೀಲಂ ಚಿತ್ಕೃಣುಥಾ ಸುಪ್ರತೀಕಮ್ |

ಭದ್ರಂ ಗೃಹ ಕೃಣುಥ ಭದ್ರವಾಚಃ

ಬೃಹನ್ವೋ ನಯ ಉಚ್ಯತೇ ಭಾಸು || (6.28.8)

“ಎಲೈ ಗೋವುಗಳೇ, ನೀವು ನಮಗೆ ಸಂತೋಷವನ್ನುಂಟು ಮಾಡಿರಿ. ನಮ್ಮ ಕೃಶವಾದ ಅಂದವಿಲ್ಲದ ಅಂಗಾಂಗಗಳನ್ನು ಲಕ್ಷಣಯುತವನ್ನಾಗಿ ಮಾಡಿರಿ. ಮಂಗಳಕರಗಳಾದ ಎಲೈ ಗೋವುಗಳೇ ನಮ್ಮ ಗೃಹಗಳನ್ನು ಕಲ್ಯಾಣಾತ್ಮಕವಾಗಿ ಮಾಡಿರಿ. ನಮ್ಮ ಯಜ್ಞ ಸಭೆಗಳಲ್ಲಿ ನಿಮಗೆ ಪ್ರಭೂತವಾದ ಆಹಾರವು ಅರ್ಪಿತವಾಗುತ್ತದೆ” ಎಂಬುದಾಗಿ ಸ್ತುತಿಸಲ್ಪಟ್ಟರೆ

ಆಧುನಿಕ ನಾಡಗೀತೆಯಾದ “ಗೋವಿನಗೀತೆ”ಯಲ್ಲಿ –

ಗೋವು ವಿಷಯದ ಪುಣ್ಯ ಕಥೆಗಳ

ಸಾವಧಾನದಿ ಕೇಳಿದವರಿಗೆ

ಈವನು ಸೌಭಾಗ್ಯ ಸಂಪದ

ಭಾವಜಾಪಿತ ಕೃಷ್ಣನು

ಎಂದು ಕೊಂಡಾಡಿದ್ದಾರೆ.

ಇಂತಹ ಪವಿತ್ರಗೋವು ಮಾನವ ಜನಾಂಗಕ್ಕೆ ಅನಾಧಿಕಾಲದಿಂದಲೂ ಸುರಿಸುತ್ತಿರುವ ಅಮೃತಧಾರೆ ‘ಗೋಕ್ಷೀರʼ ಸಕಲ ಇಷ್ಟಾರ್ಥಗಳನ್ನು ಕರುಣಿಸುವ ಕಲ್ಪವೃಕ್ಷಕ್ಕೆ ಸಮಾನವಾದುದು.

ಸ್ವರ್ಗಲೋಕಕ್ಕೆ ಕಾಮಧೇನುವಾದರೆ ಮರ್ತ್ಯಲೋಕಕ್ಕೆ ಅಮೃತ ಸಮಾನವಾದುದು ಗೋವಿನಹಾಲು.

ಅಮೃತೇ ಅಮೃತೋದ್ಭವೇ

ಅಮೃತೇಶ್ವರಿ ಅಮೃತವರ್ಷಿಣಿ |

ಅಮೃತಂ ಅಮೃತಂ ಅಮೃತಂ

ಸ್ರಾವಯ ಸ್ರಾವಯ ಸ್ವಾಹಾ ||

ಶ್ರೀಕೃಷ್ಣನ ಅವತಾರಲೀಲೆಯಲ್ಲಿ ಅತ್ಯಂತ ಮಧುರ ಅವನ ಬಾಲ್ಯ. ಆ ಬಾಲ್ಯದ ಒಡನಾಡಿಗಳು ಗೋವಳರು. ಅವನ ಆಟ ಗೋವು ಮತ್ತು ಕರುಗಳೊಂದಿಗೆ, ಅವನಿಗೆ ಅತ್ಯಂತ ಪ್ರಿಯವಾದ ಪೇಯ ಗೋಕ್ಷೀರ ಹಾಗೂ ಅದರಿಂದುತ್ಪನ್ನವಾದ ನವನೀತ.

ಶತಮಾನಗಳಿಂದಲೂ ಜೀವಿಗಳು ಸೇವಿಸುತ್ತಾ ಬಂದಿರುವ ಈ ‘ಗೋಕ್ಷೀರʼ‌ ಎಂಬುದು ಏನು? ಇದರ ಉತ್ಪತ್ತಿ ಹೇಗೆ? ಇದಕ್ಕೆ ಇಷ್ಟೊಂದು ಪ್ರಾಶಸ್ತ್ಯ ಏಕೆ ಕೊಡಲ್ಪಟ್ಟಿದೆ? ಇದು ಇಂದಿನ ವೈಜ್ಞಾನಿಕ ಯುಗದಲ್ಲೂ ಅಷ್ಟೇ ಮಹತ್ವವನ್ನು ಪಡೆದಿರುವುದೇ? ಇದರ ರಾಸಾಯನಿಕ ರಚನೆ ಏನು? ಇದರಲ್ಲಿರುವ ಔಷಧೀಯ ಗುಣಗಳೇನು? ಪೌಷ್ಟಿಕಾಂಶಗಳ ವಿವರಗಳೇನು? ಸಾಂಪ್ರದಾಯಿಕ ಉಪಯೋಗಗಳಾವುವು? – ಈ ಎಲ್ಲ ಪಶ್ನೆಗಳ ವಿಶ್ಲೇಷಣೆಯೇ ಪ್ರಸ್ತುತ ಲೇಖನದ ಉದ್ದೇಶ.

ಗೋಕ್ಷೀರ – ಇದರ ನಿರೂಪಣೆ : (Definition of Milk)

“ಆರೋಗ್ಯವಾಗಿರುವ ಸಸ್ತನಿ ಪ್ರಾಣಿಗಳ ಕೆಚ್ಚಲಿನಿಂದ ಅಥವಾ ಸ್ತನದಿಂದ ಪ್ರಸವಿಸುವ ಹೆಚ್ಚಿನ ಸೂಕ್ಷ್ಮಾಣುಗಳ ಅಥವಾ ಬಾಹ್ಯ ವಸ್ತುಗಳ ಸಂಪರ್ಕ ಹೊಂದದಿರುವ ಆರೋಗ್ಯಕರವಾದ ದ್ರವರೂಪದ ಆಹಾರ’ – ಇದು ಹಾಲಿನ ನಿರೂಪಣೆ.

ಹಾಲಿನ ಮೂಲ – ಅದರ ಉತ್ಪತ್ತಿ ಹೇಗೆ?

ಹಸು ತನ್ನ ಮೊದಲ ಕರುವನ್ನು ಹೆತ್ತ ಮೇಲೆ ಅದಕ್ಕೆ ಹಾಲು ಹೊಮ್ಮಿ ಅದು ಕ್ಷೀರವಾಹಿನಿಯಾಗುವುದು. ಮೊದಲು ಅದರ ಕರುವಿಗೆ ಹಾಲನ್ನು ಕುಡಿಯಲು ಬಿಟ್ಟು ಅನಂತರ ನಮಗಾಗಿ ಹಾಲನ್ನು ಕರೆದರೆ ಆ ಗೋಮಾತೆ ಕ್ಷೀರಧಾರೆಯನ್ನೇ ಸುರಿಸುವಳು. ಅವಳು ತನ್ನ ಕಂದನಿಗೆ ಮಾತ್ರವಲ್ಲ, ಈ ಸೃಷ್ಟಿಯ ಎಲ್ಲ ಕಂದಮ್ಮಗಳಿಗೂ ಉಣಿಸುತ್ತಾಳೆ, ಈ ಜಗನ್ಮಾತೆ.

ಇಂತಹ ಪವಿತ್ರ ಕ್ಷೀರ ಗೋವಿನಲ್ಲಿ ಉತ್ಪನ್ನವಾಗುವುದಾದರೂ ಹೇಗೆ ಎಂಬುದನ್ನು ನೋಡೋಣ.

ಗೋವಿನಲ್ಲಿ ನಿರ್ನಾಳ ಗ್ರಂಥಿಗಳು ಬಲಿತ ಮೇಲೆ ಅವುಗಳಿಂದೊಸರುವ ‘ರಸದೂತ’ ರಕ್ತದೊಡನೆ ಬೆರೆತು ಎಲ್ಲ ಅವಯವಗಳನ್ನು ಸೇರಿ ಉತ್ತೇಜನಗೊಳಿಸುವುದು. ಆಗ ಅದರ ಅಂಗಾಂಗಗಳೆಲ್ಲ ಉಚಿತ ರೀತಿಯಲ್ಲಿ ರೂಪುಗೊಂಡು ಕೆಚ್ಚಲುಗಳು ಮೂಡುವುವು.

ಈ ಕೆಚ್ಚಲು ಬರಿಯ ಮಾಂಸದ ಮುದ್ದೆಯಲ್ಲ ಅದು ತೆಳುವಾದ ಪೊರೆಗಳಿಂದ ನಾಲ್ಕು ಭಾಗಗಳಾಗಿವೆ. ಒಂದೊಂದು ಭಾಗವನ್ನಾಧರಿಸಿ ಒಂದೊಂದು ಮೊಲೆಯಿದೆ. ಈ ಒಂದೊಂದು ಭಾಗದಲ್ಲಿಯೂ ಅಸಂಖ್ಯಾತ ‘ಸೆಕ್ರೀಟಿಂಗ್ ಸೆಲ್ಸ್ʼ ಎಂಬ ಸೂಕ್ಷ್ಮ ಕ್ಷೀರ ಗ್ರಂಥಿಗಳಿರುವ ಹಾಲ್ಬಟ್ಟಲುಗಳು ಇರುತ್ತವೆ.

ಈ ಗ್ರಂಥಿಯಿಂದ ಒಸರುವ ಹಾಲು, ಹಾಲ್ದಾರಿಯಿಂದ ಸಾಗಿ, ಸ್ವಲ್ಪ ದೊಡ್ಡದಾದ ಹಾಲ್ಗೊಳವನ್ನು ಸೇರುವುದು. ಅಲ್ಲಿಂದ ಕ್ಷೀರ ನಾಳದ ಮೂಲಕ ಸಾಗಿ ಅಂಗುಲೀಯ ದ್ವಾರದಿಂದ ಹಾಲಿಳಿಯುವುದು. ಹೀಗೆ ಇಳಿಯುವ ಹಾಲನ್ನು ನಾವು ಕರೆದು ಸಂಗ್ರಹಿಸಿ ಸೇವಿಸುತ್ತೇವೆ.

ಇಂತಹ ಗೋಕ್ಷೀರ ಸರ್ವತ್ರ ಮಾನ್ಯವಾದ ಎಣೆಯಿಲ್ಲದ ಪೌಷ್ಟಿಕಾಹಾರ, ಮ್ಲಾನವದನವನ್ನು ಮಲ್ಲಿಗೆಯಂತೆ ಅರಳಿಸುವ ಶಕ್ತಿ ಈ ಕ್ಷೀರಕ್ಕಿದೆ. ಏಕೆಂದರೆ ಇದರಲ್ಲಿ ಶರೀರದ ಆರೋಗ್ಯಕ್ಕೆ ಬೇಕಾದ ಎಲ್ಲ ವಸ್ತುಗಳೂ ಯೋಗ್ಯ ಪ್ರಮಾಣದಲ್ಲಿ ಬೆರೆತಿವೆ.

ಶರೀರವ್ಯಾಪಾರಕ್ಕೆ ಬೇಕಾದ ನೀರನ್ನು, ದೇಹದ ನಶಿಸಿದ ಭಾಗ ಪುನರುಜ್ಜೀವಿಸಲು ಬೇಕಾದ ಸಸಾರಜನಕವನ್ನು, ಜೀವಕ್ಕೆ ಶಕ್ತಿ ಮತ್ತು ಶಾಖವನ್ನೊದಗಿಸಲು ಮೇಧಸ್ಸು, ಸಕ್ಕರೆಗಳನ್ನು ಅನ್ನಾಂಗ ಎ.ಬಿ.ಸಿ.ಡಿ ಇತ್ಯಾದಿ ಜೀವಸತ್ತ್ವಗಳನ್ನು ಉತ್ತೇಜಕಗಳಾದ ರಂಜಕೀಯ ಮೇದಸ್ಸನ್ನು ಎಲುಬಿನ ದೃಢತೆಗೆ ಬೇಕಾದ ಸುಣ್ಣವನ್ನು ಮತ್ತು ವೇಗವರ್ಧಕ ರಸಗಳನ್ನು ಹೊಂದಿರುವ ಒಂದು ಅದ್ಭುತ ರಸಾಯನ ಈ ಕ್ಷೀರ.

ಗೋಕ್ಷೀರದ ರಾಸಾಯನಿಕ ರಚನೆ (Composition)

ಶುದ್ಧವಾದ ಹಸುವಿನ ಹಾಲಿನಲ್ಲಿ ಆಹಾರದ ಎಲ್ಲ ಅಂಶಗಳೂ ಸಮತೂಕವಾದ ಪ್ರಮಾಣದಲ್ಲಿದೆ. ಈ ಹಾಲಿನಲ್ಲಿ ಪ್ರಧಾನಾಂಗವಾದ ನೀರು 85.8% ಇರುತ್ತದೆ. ಉಳಿದ ಒಟ್ಟು ಘನವಸ್ತುಗಳು 14.2% ಇರುತ್ತದೆ.

ಉಳಿದ ಘನವಸ್ತುಗಳ ವಿವರ ಹೀಗಿದೆ:

1. ಕೊಬ್ಬಿನಂಶ (Fat)- 5.3%

2. ಸಾರಜನಕ ಪದಾರ್ಥಗಳು (Proteins)- 3.2%

3. ಶರ್ಕರ ಪಿಷ್ಟಾದಿಗಳು (Lactose)- 5.0%

4. ಖನಿಜಾಂಶಗಳು (Minerals)- 0.7%  ಒಟ್ಟು – 14.2%

1. ಕೊಬ್ಬಿನಂಶ (Fat):-

ಹಾಲಿಗೆ ಅದರಲ್ಲಿರುವ ಮಧುರವಾದ ರುಚಿ ಈ ಕೊಬ್ಬಿನಂಶದಿಂದ ಬರುತ್ತದೆ. ಹಸುವಿನ ಹಾಲಿನಲ್ಲಿ 5.3% ಕೊಬ್ಬಿನಂಶವಿರುತ್ತದೆ. ಇದು ಗ್ರಾಂ ಒಂದಕ್ಕೆ ಸುಮಾರು 9 ಕ್ಯಾಲೋರಿಯಷ್ಟು ಶಕ್ತಿಯನ್ನು ಕೊಡುತ್ತದೆ. ಹಾಲಿನಲ್ಲಿರುವ ಕೊಬ್ಬು ಬಹಳ ಸೂಕ್ಷ್ಮವಾದ ಗೋಳಗಳಂತೆ ಹರಡಿರುತ್ತದೆ. ಇದರಿಂದಾಗಿ ಇದು ಶರೀರದ ಪೋಷಣೆಗೆ ಉತ್ತಮವಾದುದು ಮತ್ತು ಬೇರೆ ಪದಾರ್ಥಗಳಲ್ಲಿರುವ ಕೊಬ್ಬಿನಂಶಗಳಿಗಿಂತ ಹಾಲಿನ ಕೊಬ್ಬಿನಂಶ ಸುಲಭವಾಗಿ ಜೀರ್ಣವಾಗುವುದು.

2. ಸಾರಜನಕ ಪದಾರ್ಥಗಳು (Proteins):-

ಪ್ರೋಟೀನುಗಳು ಅಥವಾ ಸಾರಜನಕ ವಸ್ತುಗಳು ಮಾನವನ ಬೆಳವಣಿಗೆಗೆ, ಊರ್ಜಿತತೆಗೆ ಹಾಗೂ ಜೀವನ ಸಂರಕ್ಷಣೆಗೆ ಅತ್ಯಂತ ಅಗತ್ಯವಾದುದು. ಇದು ಹಸುವಿನ ಹಾಲಿನಲ್ಲಿ 3.2% ಇರುತ್ತದೆ. ಹಾಲಿನಲ್ಲಿರುವ ಪ್ರೋಟೀನುಗಳು ಇತರ ಧಾನ್ಯಗಳಲ್ಲಾಗಲೀ, ತರಕಾರಿ ಹಣ್ಣುಗಳಲ್ಲಾಗಲೀ ಇರುವ ಪ್ರೋಟೀನುಗಳಿಗಿಂತ ಉತ್ತಮವಾದುದು. ಇದು ಅರ್ಬುದ ರೋಗವನ್ನು (Cancer)ತಡೆಗಟ್ಟುವ ಗುಣವುಳ್ಳದ್ದಾಗಿದೆ.

ಪ್ರೋಟೀನಿನ ಮುಖ್ಯ ಕಾರ್ಯಗಳು:

ಎ) ಶರೀರದ ಭಾಗಗಳ ಬೆಳವಣಿಗೆ ಮತ್ತು ಅವುಗಳ ದುರಸ್ತು

ಬಿ) ರೋಗನಿವಾರಕ ವಸ್ತುಗಳ (antibodies) ಉತ್ಪತ್ತಿ

ಸಿ) ಜೈವಿಕ ಕಾರ್ಯಾಣುಗಳ (harmones) ಮತ್ತು ಜೈವಿಕ ವೇಗವರ್ಧಕಗಳ ಉತ್ಪತ್ತಿ ಮತ್ತು ಶಕ್ತಿಯನ್ನು ಒದಗಿಸುವುದು

ಒಬ್ಬ ವ್ಯಕ್ತಿಯ ಜೀವನದ ಮುಖ್ಯವಾದ ನಾಲ್ಕು ಹಂತಗಳಲ್ಲಿ ಪ್ರೋಟೀನಿನ ಪಾತ್ರ ಬಹಳ ಮಹತ್ತರವಾದುದು

ಎ) ಮೊದಲ ಹಂತ: ಶಿಶು ತಾಯಿಯ ಗರ್ಭದಲ್ಲಿರುವಾಗ ಮತ್ತು ಜನನಾನಂತರ 6 ತಿಂಗಳವರೆಗೆ

ಬಿ) ಎರಡನೆಯ ಹಂತ : ಶೈಶವಾವಸ್ಥೆ, 1 ತಿಂಗಳಿಂದ 7 ವರ್ಷದವರೆಗೆ

ಸಿ) ಮೂರನೆಯ ಹಂತ : ಬಾಲ್ಯಾವಸ್ಥೆ: 7 ವರ್ಷದಿಂದ 14 ವರ್ಷದವರೆಗೆ

ಡಿ) ನಾಲ್ಕನೆಯ ಹಂತ : ತಾರುಣ್ಯಾವಸ್ಥೆ: 14 ವರ್ಷದಿಂದ 25 ವರ್ಷದವರೆಗೆ

ಬೆಳವಣಿಗೆಯ ಅತಿ ಮುಖ್ಯ ಕಾಲವಾದ ಈ ನಾಲ್ಕು ಹಂತಗಳ ಕಾಲಾವಧಿಯಲ್ಲಿ ಪ್ರೋಟೀನು ಕಡಮೆಯಾದರೆ ಶಾರೀರಕ ಹಾಗೂ ಮಾನಸಿಕ ಕ್ಷೀಣತೆಯುಂಟಾಗಿ ಬೇಗ ಮುಪ್ಪು ಉಂಟಾಗುತ್ತದೆ. ಆದ್ದರಿಂದ ಈ ಮುಖ್ಯ ಕಾಲಾವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನು ಸಿಕ್ಕಿದರೆ ಇಡೀ ಜೀವಮಾನದಲ್ಲಿ ಯಾವುದೇ ರೀತಿಯ ಧಕ್ಕೆಯುಂಟಾಗದೆ ಶರೀರದ ಬೆಳವಣಿಗೆ ಮತ್ತು ಬುದ್ಧಿಶಕ್ತಿ ತೃಪ್ತಿಕರವಾಗಿದ್ದು ಅವರು ಸತ್ಪ್ರಜೆಗಳಾಗಿ ಮುಂದೆ ದೇಶಕ್ಕೆ ಆರೋಗ್ಯಪೂರ್ಣ ಸತ್ಪ್ರಜೆಗಳನ್ನು ಕೊಡುವವರಾಗುತ್ತಾರೆ.

ಒಬ್ಬ ಮನುಷ್ಯನಿಗೆ ಪ್ರತಿದಿನಕ್ಕೆ ಅವನ ಶರೀರದ ಪ್ರತಿಯೊಂದು ಕೆ.ಜಿ ತೂಕಕ್ಕೂ ಒಂದು ಗ್ರಾಂ ಪ್ರೋಟೀನಿನ ಅವಶ್ಯಕತೆ ಇದೆ. ಹೀಗೆ ಜೀವನಕ್ಕೆ ಅತ್ಯಗತ್ಯವಾದ ಇಂತಹ ಪ್ರೋಟೀನು ಹಾಲಿನಲ್ಲಿ ವಿಶೇಷವಾಗಿದ್ದು ಅದು ಹೆಚ್ಚಿನ ಜೈವಿಕ ಮೌಲ್ಯವನ್ನು ಪಡೆದಿರುವುದಾಗಿದೆ. ಇಂತಹ ಒಂದು ಸಮತೋಲನ ಪೌಷ್ಟಿಕಾಂಶಗಳು ಗೋಕ್ಷೀರದಿಂದ ಪ್ರಾಪ್ತಿಯಾಗುತ್ತವೆ.

3. ಶರ್ಕರ ಪಿಷ್ಟಾದಿಗಳು (Lactose):-

ಹಾಲಿನಲ್ಲಿರುವ ಕಾರ್ಬೋ ಹೈಡ್ರೇಟನ್ನು ಲ್ಯಾಕ್ಟೋಸ್ ಎನ್ನುತ್ತಾರೆ. ಇದು ಒಂದು ವಿಶೇಷವಾದ ಸಕ್ಕರೆ. ಸಾಮಾನ್ಯ ಸಕ್ಕರೆಯಲ್ಲಿನ 1/6 ಅಂಶ ಸಿಹಿಯನ್ನು ಈ ಲ್ಯಾಕ್ಟೋಸ್ ಹೊಂದಿರುತ್ತದೆ. ಇದು ಚಿಕ್ಕ ಕರುಳಿನಲ್ಲಿ ಜೀವಸತ್ವಗಳ ತಯಾರಿಕೆಗೆ ಸಹಾಯ ಮಾಡುತ್ತದೆ.

ಶರೀರದಲ್ಲಿ ಕೊಬ್ಬು ಶೇಖರವಾಗುವುದನ್ನು ತಪ್ಪಿಸುತ್ತದೆ. ಕ್ಯಾಲ್ಸಿಯಂ ಖನಿಜ ನಮ್ಮ ಶರೀರಕ್ಕೆ ಉಪಯೋಗವಾಗುವಂತೆ ಅದನ್ನು ಕ್ಯಾಲ್ಸಿಯಂ ಲ್ಯಾಕ್ಟೇಟ್ ಆಗಿ ಪರಿವರ್ತಿಸುತ್ತದೆ. ಮಕ್ಕಳ ಮೇಧಾಶಕ್ತಿಗೂ ಜೀರ್ಣಶಕ್ತಿಗೂ ಸಹಕಾರಿ.

4. ಖನಿಜಾಂಶಗಳು (Minerals) –

ಹಾಲಿನಲ್ಲಿ ಕ್ಯಾಲ್ಸಿಯಂ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. (100 ml ಹಸುವಿನ ಹಾಲಿನಲ್ಲಿ 120 mg ಕ್ಯಾಲ್ಸಿಯಂ ಇರುತ್ತದೆ) ರಂಜಕ (Phosphorus) 100 ml ಹಾಲಿನಲ್ಲಿ 100 mg ಇರುತ್ತದೆ. ಈ ಕ್ಯಾಲ್ಸಿಯಂ ಮತ್ತು ರಂಜಕ ಎರಡೂ ಮನುಷ್ಯನ ಶರೀರದ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಅತಿ ಮುಖ್ಯವಾದುದು. ನಮ್ಮ ದೇಹಕ್ಕೆ ಪ್ರತಿದಿನಕ್ಕೆ 800 mg ಕ್ಯಾಲ್ಸಿಯಂ ಅಗತ್ಯವಿದೆ. ಇದರ ಹೆಚ್ಚಿನ ಅಂಶವನ್ನು ಹಸುವಿನ ಹಾಲಿನಿಂದಲೇ ಪಡೆಯಬಹುದು.

ಹಾಲಿನಲ್ಲಿರುವ ಇತರ ಮುಖ್ಯವಾದ ಖನಿಜಾಂಶಗಳೆಂದರೆ ಮೆಗ್ನಿಷಿಯಂ ಮತ್ತು ಪೊಟಾಷಿಯಂ ಇವು ನಮ್ಮ ಶರೀರದ ರಕ್ತದ ಒತ್ತಡವನ್ನು ನಿಯಮಿತಗೊಳಿಸುತ್ತದೆ ಮಾತ್ರವಲ್ಲ ಈ ಖನಿಜಾಂಶಗಳು ಜೈವಿಕ ವೇಗವರ್ಧಕ (Enzymes) ಗಳ ರಚನೆಯಲ್ಲಿ ಮತ್ತು ಅವುಗಳ ಕಾರ್ಯ ನಿರ್ವಹಣೆಯಲ್ಲಿ ನೆರವಾಗುತ್ತವೆ.

ಹಾಲು ಮತ್ತು ಜೀವಸತ್ವಗಳು (Vitamins)

ಜೀವಸತ್ವಗಳೆಂದರೆ ನಮ್ಮ ಶರೀರದಲ್ಲಿ ಸಾಮಾನ್ಯವಾಗಿ ಉತ್ಪನ್ನವಾಗದಿರುವ, ನಾವು ತೆಗೆದುಕೊಳ್ಳುವ ಆಹಾರದ ಮೂಲಕವೇ ದೊರಕಬೇಕಾದ, ಶರೀರದ ಬೆಳವಣಿಗೆಗೆ ಅತ್ಯಗತ್ಯವಾದ ಪೋಷಕ ವಸ್ತುಗಳು. ಇವು ಶಕ್ತಿವಿನಿಮಯ ಮತ್ತು ಶಾರೀರಕ ಚಟುವಟಿಕೆಗಳಿಗೆ ಬೇಕಾದ ಸತ್ವಾಂಶಗಳು. ಇಂತಹ ಉತ್ತಮ ಜೀವಸತ್ವಗಳು ಹಾಲಿನಲ್ಲಿರುವುದು ದೈವದತ್ತ ವರ.

ಜೀವಸತ್ವ (Vitamins)

ಜೀವಸತ್ವ ‘A’ – ಚರ್ಮದ ಆರೋಗ್ಯ, ದೃಷ್ಟಿ ಪಾಟವ, ಇರುಳು ಕುರುಡುತನ ನಿವಾರಣೆ, ಮೂಳೆ ಹಲ್ಲುಗಳ ಬೆಳವಣಿಗೆ, ಚಿಕ್ಕ ಕರುಳಿನ ಸೋಂಕನ್ನು ತಡೆಗಟ್ಟುವಿಕೆ, ಬೆಳವಣಿಗೆಯ ಕುಂದುನಿವಾರಣೆ.

ಜೀವಸತ್ವ ‘D’ – ಕರುಳಿನ ಮೂಲಕ ಕ್ಯಾಲ್ಸಿಯಂ ಗ್ರಹಣ, ಮಕ್ಕಳಲ್ಲಿ ರಿಕೆಟ್ (ಮೂಳೆ ವ್ಯಾಧಿ) ತಡೆಗಟ್ಟುವಿಕೆ.

ಜೀವಸತ್ವ ‘B’ – ದೃಷ್ಟಿಪಾಟವ ರಕ್ಷಣೆ, ಚರ್ಮದ ಆರೋಗ್ಯ ರಕ್ಷಣೆ, ಸಹಾಯಕ ಜೈವಿಕ ವೇಗವರ್ಧಕ, ಕಣ್ಣಿನ ಬಳಿ ಗುಡ್ಡೆಯ ವ್ಯಾಧಿ ನಿಯಂತ್ರಣ, ಬಾಯಿಯ ತುದಿಯಲ್ಲಿ ಬಿರಸು ತಡೆಗಟ್ಟುವಿಕೆ.

ಜೀವಸತ್ವ ‘B12 – ರಕ್ತದ ಕೆಂಪು ಕಣಗಳ ಅಭಿವೃದ್ಧಿ, ನರಗಳ ಅಭಿವೃದ್ಧಿ, ನರಗಳ ಆರೋಗ್ಯ ಸಹಾಯಕ, ಜೈವಿಕ ವೇಗವರ್ಧಕ, ಆಯಾಸ, ನಿದ್ರಾಹೀನತೆಯ ನಿವಾರಣೆ.

ಹೀಗೆ ಶರೀರದಲ್ಲಿ ಸವೆಯುವ ಮತ್ತು ಸಾಯುವ ಜೀವಕೋಶಗಳಿಗೆ ಪೂರಕವಾದುದು ಗೋಕ್ಷೀರ. ಜೀವಕೋಶಗಳಲ್ಲಿರುವ ಸಸಾರಜನಕವನ್ನು ಪೂರೈಸಿ ಹೊಸ ಜೀವಕೋಶಗಳನ್ನು ರಚಿಸುವುದಕ್ಕೆ ಅತ್ಯಂತ ಸಹಕಾರಿ ಈ ಗೋಕ್ಷೀರ. ಇದಕ್ಕೆ ಆಯುರ್ವೇದದಲ್ಲಿ ಹೀಗೆ ಹೇಳುತ್ತಾರೆ. ಗೋವಿನಲ್ಲಿರುವ ಅಗ್ನಿತತ್ತ್ವ ಮತ್ತು ವಾಯುತತ್ತ್ವದ ಪ್ರಭಾವದಿಂದ ಗೋಕ್ಷೀರ ಪಾನ ಮಾಡುವವರಲ್ಲಿ ಅಗ್ನಿತತ್ತ್ವ ಮತ್ತು ಪ್ರಾಣಶಕ್ತಿಯು ಉದ್ದೀಪನಗೊಂಡು ವಿಶೇಷ ಸ್ಫೂರ್ತಿಯನ್ನು ನೀಡುವುದು.

ಗೋಕ್ಷೀರದಲ್ಲಿ

02 ರೀತಿಯ ಸಸಾರಜನಕ ವಸ್ತುಗಳು

10 ಪ್ರಕಾರದ ಅಮೈನೋ ಆಮ್ಲಗಳು

11 ನಮೂನೆಯ ಸ್ನಿಗ್ಧ ಆಮ್ಲಗಳು

06 ತೆರನಾದ ಜೀವಸತ್ವಗಳು

08 ತೆರನಾದ ಜೀವಾಣುರಹಿತ ಕಿಣ್ವಗಳು

ಇವೇ ಮೊದಲಾದ ಅನೇಕ ಪದಾರ್ಥಗಳು ಇರುತ್ತವೆ. ಶಿಶುವಿನ ಬೆಳವಣಿಗೆಗೆ ಬೇಕಾಗುವ ಎಲ್ಲ ಆಹಾರಾಂಶಗಳು ನೀರಿನೊಡನೆ ಅವಶ್ಯಕ ಪ್ರಮಾಣದಲ್ಲಿ ಬೆರೆತು, ಸುಲಭವಾಗಿ ಜೀರ್ಣವಾಗುವ ರೂಪದಲ್ಲಿರುತ್ತವೆ. ಶೈಶವದಲ್ಲಿ ಉಂಟಾಗಬಹುದಾದ ಅನೇಕ ನ್ಯೂನತೆಗಳಿಗೆ ಇದು ರೋಗನಿವಾರಕ ವಸ್ತುಗಳನ್ನು ಹೊಂದಿರುತ್ತದೆ. ಇದರಿಂದಲೇ ಹಾಲನ್ನು ʼಆದರ್ಶ ಆಹಾರʼ (Nature’s Perfect Food)ಎಂದು ಕರೆಯುತ್ತೇವೆ.

ಹಾಲಿನ ಗುಣಮಟ್ಟ ರಕ್ಷಣೆ

1. ಗೋವಿನ ಆರೋಗ್ಯ ತಪಾಸಣೆ ಕ್ರಮಬದ್ಧವಾಗಿ ನಡೆಯಬೇಕು.

2. ಗೋವಿನ ಕೆಚ್ಚಲನ್ನು ಚೆನ್ನಾಗಿ ತೊಳೆದು ಶುಭ್ರ ವಸ್ತ್ರದಿಂದ ಒರೆಸಿಟ್ಟಿರಬೇಕು.

3. ಹಾಲನ್ನು ಕರೆಯುವ ಕೈಗಳನ್ನು, ಯಂತ್ರಗಳನ್ನು ಶುಭ್ರವಾಗಿ ತೊಳೆದಿರಬೇಕು.

4. ಹಸುಗಳಿರುವ ಸ್ಥಳ ಉತ್ತಮವಾಗಿದ್ದು ಗಾಳಿ, ಬೆಳಕು, ಧಾರಾಳವಾಗಿರಬೇಕು, ಸಗಣಿ, ಗಂಜಲಗಳನ್ನು ಆ ಕೂಡಲೇ ತೆಗೆದು ಶುದ್ಧಮಾಡಿಬಿಡಬೇಕು.

5. ಹಸುಗಳಿಗೆ ಶುದ್ಧವಾದ ನೀರು ಯಥೇಚ್ಛವಾಗಿ ದೊರಕಬೇಕು.

6. ಹಾಲನ್ನು ಶೇಖರಿಸುವ ಪಾತ್ರೆಗಳು ಶುದ್ಧವಾಗಿರಬೇಕು.

7. ಕರೆದ ಹಾಲಿನಲ್ಲಿ ಕ್ರಿಮಿಗಳು ಬಹುಬೇಗ ವೃದ್ಧಿಯಾಗುವುದರಿಂದ ಹಾಲನ್ನು ಒಂದು ನಿರ್ದಿಷ್ಟಶಾಖದವರೆಗೆ ಚೆನ್ನಾಗಿ ಕಾಯಿಸಬೇಕು. ಆಗ ಅದರಲ್ಲಿನ ಎಲ್ಲ ರೋಗಾಣುಗಳು ಕೊಲ್ಲಲ್ಪಡುತ್ತವೆ. ಇದನ್ನು ಪಾಶ್ಚರೀಕರಣ (Pasteurization) ಎನ್ನುತ್ತಾರೆ.

ಇದುವರೆವಿಗೂ ಗೋಕ್ಷೀರದ ನಿರೂಪಣೆ, ಉತ್ಪತ್ತಿ, ರಾಸಾಯನಿಕ ರಚನೆ, ಹಾಲಿನ ಜೀವ ಸತ್ವಗಳು, ಇತರ ಆಹಾರಾಂಶಗಳು ಮತ್ತು ಹಾಲಿನ ಗುಣಮಟ್ಟ ರಕ್ಷಣೆ ಇವುಗಳ ವಿಶ್ಲೇಷಣೆಯಾಯಿತು. ಇನ್ನು ಆಯುರ್ವೇದದಲ್ಲಿ ಹೇಳಲಾದ ಗೋಕ್ಷೀರದ ಅವಶ್ಯಕತೆ ಹಾಗೂ ಅದರ ಗುಣಗಳನ್ನು ತಿಳಿಯಲು ಪ್ರಯತ್ನಿಸೋಣ.

ಆಯುರ್ವೇದದಲ್ಲಿ ಗೋಕ್ಷೀರ

ಆಯುರ್ವೇದದ ಪಂಡಿತರಾದ ಶ್ರೀಚರಕರು ಗೋವಿನ ಹಾಲು ಓಜೋವೃಧಿಕಾರಕವೂ, ರಸಾದಿಧಾತುಗಳನ್ನು ವೃದ್ಧಿಸುವುದೂ, ಕ್ಷೀಣರಾದವರಿಗೆ ಪ್ರಾಣಶಕ್ತಿದಾಯಕವೂ, ಧಾರಣಶಕ್ತಿಯನ್ನು ಹೆಚ್ಚು ಮಾಡುವಂಥದೂ, ಶಕ್ತಿ ವರ್ಧಕವೂ, ಶ್ರಮ, ಭ್ರಮ, ಮದ, ಶ್ವಾಸ, ಕೆಮ್ಮು, ನೀರಡಿಕೆ, ಹಸಿವು, ಜೀರ್ಣಜ್ವರ ಹಾಗೂ ದಾರಿದ್ರ್ಯತ್ವವನ್ನು ನಾಶ ಮಾಡುವುದೂ ಆಗಿದೆ ಎನ್ನುತ್ತಾರೆ.

ಒಟ್ಟಿನಲ್ಲಿ ಆಕಳಹಾಲು ರುಚಿಯಲ್ಲಿ ಸುವಾಸನೆಯಲ್ಲಿ ಮಧುರವಾಗಿದ್ದು ಶ್ರೀಘ್ರವಾಗಿ ಪಚನವಾಗುವಂತೆ ಮಾಡಿ, ಮನಸ್ಸನ್ನು ಶಾಂತವಾಗಿ ಮತ್ತು ಸಮಾಧಾನಕರ ಸ್ಥಿತಿಯಲ್ಲಿಡುವ ವಿಶೇಷ ಸಾಮರ್ಥ್ಯವನ್ನು ಹೊಂದಿದೆ.

ಇದು ಮಕ್ಕಳಿಗೆ ಅತ್ಯಾವಶ್ಯಕ

ಯುವಕರಿಗೆ ಆರೋಗ್ಯಕರ

ಮುದುಕರಿಗೆ ಉತ್ತಮಪೇಯ

ರೋಗಿಗಳಿಗೆ ಶಕ್ತಿವರ್ಧಕ

ಮಾನವ ಅನಾದಿಕಾಲದಿಂದಲೂ ಸೇವಿಸಿಕೊಂಡು ಬರುತ್ತಿರುವ ಈ ಗೋಕ್ಷೀರ ಸಹಜವಾದ ಕೆಲವು ಗುಣಗಳನ್ನು ಹೊಂದಿದೆ.

ಎ) ಪ್ರಾತಃಕಾಲ ಕುಡಿಯುವ ಹಾಲು – ಶಕ್ತಿವರ್ಧಕ, ಅಗ್ನಿವರ್ಧಕ, ಬಹಾರಕ.

ಬಿ) ಮಧ್ಯಾಹ್ನ ಕುಡಿಯುವ ಹಾಲು – ವಾತ, ಪಿತ್ತ, ಕಡಮೆ ಮಾಡುವುದು ಮೂತ್ರತಡೆ ನಿವಾರಣೆ ಹಾಗೂ ಮೂತ್ರಕೋಶದ ಕಲ್ಲು ಕರಗಿಸುವುದು.

ಸಿ) ರಾತ್ರಿ ಕುಡಿಯುವ ಹಾಲು – ದೇಹದ ನಿಶ್ಯಕ್ತಿ ನಿವಾರಣೆ, ರಕ್ತ ಅಭಿವೃದ್ಧಿಗೊಳ್ಳುವುದು.

ಹಾಲಿನಲ್ಲಿರುವ ಔಷಧೀಯ ಗುಣಗಳು :-

ಎ) ನಿಶ್ಯಕ್ತಿಯುಳ್ಳವರು: ಶುದ್ಧವಾದ ಹಸುವಿನ ಹಾಲಿನಲ್ಲಿ ತುಪ್ಪ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. ಕಲ್ಲುಸಕ್ಕರೆ ಹಾಕಿ ಕುಡಿದರೂ ಧಾತು ವೃದ್ಧಿಯಾಗುವುದು.

ಬಿ) ಬಿಕ್ಕಳಿಕೆ ಇರುವವರು: ಹಸುವಿನ ಹಾಲನ್ನು ಚೆನ್ನಾಗಿ ಕಾಯಿಸಿ ಅದು ಬಿಸಿಯಾಗಿರುವಾಗಲೇ ಕುಡಿಯಬೇಕು.

ಸಿ) ನೆಗಡಿಯಿರುವವರು: ಬಿಸಿ ಹಾಲಿಗೆ ಕಲ್ಲು ಸಕ್ಕರೆ ಮತ್ತು ಕಾಳು ಮೆಣಸಿನ ಪುಡಿಯನ್ನು ಕಲೆಸಿ ಕುಡಿಯಬೇಕು.

ಡಿ) ತಲೆನೋವಿನ ಬಾಧೆಯಿರುವವರು: ಹಸುವಿನ ಹಾಲಿನಲ್ಲಿ ಒಣಶುಂಠಿಯನ್ನು ಅರೆದು ಹಣೆಗೆ ದಪ್ಪವಾಗಿ ಲೇಪಿಸಿದರೆ ನೋವು ಶಮನವಾಗುವುದು.

ಇದೇ ರೀತಿ ಇನ್ನು ಅನೇಕ ಬಾಧೆಗಳಿಗೆ ಹಾಲಿನಿಂದ ಉಪಶಮನ ಪಡೆಯಬಹುದಾಗಿದೆ. ಇದಲ್ಲದೆ ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇವುಗಳೂ ಔಷಧೀಯ ಗುಣ ಹೊಂದಿದ್ದು ಅನೇಕ ರೋಗಗಳಿಗೆ – ಬಾಧೆಗಳಿಗೆ ಉಪಶಮನ ನೀಡುತ್ತದೆ.

ಎಚ್ಚರಿಕೆ: ಒಡೆದ ಹಾಲು ಮತ್ತು ಉಪ್ಪು ಮಿಶ್ರಿತ ಹಾಲನು ಸೇವಿಸಬಾರದು. ಅದರಿಂದ ಬುದ್ಧಿ ಮಾಂದ್ಯವಾಗಿ ಹಲವು ಬಗೆಯ ರೋಗಗಳಿಗೆ ಆಸ್ಪದವಾಗುವುದು.

ಶಿಶುವಿಗೆ ಶೈಶವದಲ್ಲಿ ತಾಯಿ ಹಾಲು ಹೊರತು ಬೇರೆ ಯಾವುದೂ ಜೀರ್ಣಕ್ಕೆ ಬಾರದು. ಎಳೆಯಕಂದ ತಾಯಿಯ ಹಾಲಿನಿಂದ ವಂಚಿತವಾಗಿದ್ದರೆ, ಆ ಸ್ಥಾನವನ್ನು ಗೋಮಾತೆ ತುಂಬುವಳು. ಅಂತೆಯೇ ವೃದ್ಧಾಪ್ಯದಲ್ಲಿ ಜೀರ್ಣಶಕ್ತಿ ಕಡಮೆಯಾಗುತ್ತಾ ಬರುವುದರಿಂದ ಹಾಲು ಸುಲಭ ಜೀರ್ಣಕಾರಿ ಹಾಗೂ ಶಕ್ತಿದಾಯಕ. ಈ ಎರಡು ಹಂತಗಳ ನಡುವಿನ ಯೌವನಾವಸ್ಥೆಯಲ್ಲಿ ಕ್ಷೀರ ಶಕ್ತಿ ಸಂಜೀವಿನಿ. ಎಂತಹ ಕಷ್ಟದ ಕೆಲಸವನ್ನಾದರೂ ಮಾಡಲು ಸಿದ್ಧ.

ಹಾಲು ಮತ್ತು ಕೊಲೆಸ್ಟ್ರಾಲ್ (Cholesterol)

ಕೊಲೆಸ್ಟ್ರಾಲ್ ಎಂಬುದು ರಕ್ತದಲ್ಲಿರುವ ನೈಸರ್ಗಿಕ ಉಪಾಂಗ. ಇದು ಶರೀರದ ಅನೇಕ ನಿಯಮಿತ ಕಾರ್ಯಗಳಿಗೆ ಅತ್ಯಂತ ಸಹಾಯಕಾರಿ. ಇದು 100ml ರಕ್ತದಲ್ಲಿ 200mg ಯಷ್ಟು ಇದ್ದರೆ ಅತ್ಯಂತ ಕ್ಷೇಮಕರ. ಇದಕ್ಕಿಂತಲೂ ಹೆಚ್ಚಾಗಿಬಿಟ್ಟರೆ ಆ ವ್ಯಕ್ತಿಗೆ ಹೃದಯಾಘಾತವಾಗುವ ಸಂಭವ ಹೆಚ್ಚು.

ಹಾಲನ್ನು ಸೇವಿಸುವುದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಬಿಡುವುದು ಎಂಬುದು ತಪ್ಪು ತಿಳುವಳಿಕೆ. 1992ರಲ್ಲಿ ಮೆಡಿಕಲ್‌ ಕೌನ್ಸಿಲ್‌ ಆಫ್ ಯು.ಕೆ. (U.K) ಹೃದಯಾಘಾತವನ್ನು ತಡೆಯಲು ನಿತ್ಯವೂ ಹಾಲನ್ನು ನಿಯಮಿತವಾಗಿ ಸೇವಿಸಬೇಕು ಎಂದು ಸಲಹೆ ನೀಡಿದೆ.

ಹೀಗೆ ಗೋಕ್ಷೀರ ಮಾನವನ ದೇಹದ ಮೇಲೆ ಮಾತ್ರವಲ್ಲ ಅವನ ಹೃದಯದ ಮೇಲೂ ತನ್ನ ಪ್ರಭಾವವನ್ನು ಬೀರುತ್ತದೆ.

ಹಾಲು ಮತ್ತು ಸ್ಥೂಲಕಾಯ (Obesity):-

ಹಾಲನ್ನು ಸೇವಿಸುವುದರಿಂದ ಸ್ಥೂಲಕಾಯವಾಗಿ ಅನೇಕ ತೊಂದರೆಗಳಿಗೆ ಈಡಾಗಬೇಕಾಗುವ ಪರಿಸ್ಥಿತಿಗಳುಂಟಾಗುತ್ತವೆ ಎಂಬುದು ಮತ್ತೊಂದು ತಪ್ಪು ತಿಳುವಳಿಕೆ ಎಂದು ಟೀಸಾ ಡೇವಿಸ್ ಎಂಬುವವರು ಹೇಳುತ್ತಾರೆ. ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ಥೂಲಕಾಯವನ್ನು ತಡೆಗಟ್ಟಬಹುದೆಂದು ಅನೇಕ ಸಾಕ್ಷ್ಯಾಧಾರಗಳಿಂದ ಪ್ರಮಾಣೀಕರಿಸಿ ಹೇಳುತ್ತಾರೆ ಡೇವಿಸ್.

ಹೀಗೆ ಕ್ಷಾರೋಪಚಾರದ ಚಮತ್ಕಾರಿಕ ಚಿಕಿತ್ಸೆ ಆಧುನಿಕ ವೈದ್ಯಕೀಯ ವಿಜ್ಞಾನ ಶಾಸ್ತ್ರದಲ್ಲೂ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲೂ ಪ್ರಾಚೀನಕಾಲದಿಂದ ಬಂದಿರುವ ಸಾಂಪ್ರದಾಯಿಕ (Traditional) ಚಿಕಿತ್ಸೆಯಲ್ಲೂ ಬಹಳವಾಗಿ ಶ್ಲಾಘಿಸಲ್ಪಟ್ಟಿದೆ.

ಏಕೆಂದರೆ ಹಾಲು ಅನಾದಿ ಕಾಲದಿಂದಲೂ ಉಪಯೋಗಿಸಲ್ಪಡುತ್ತಿರುವ ಅತ್ಯುತ್ತಮವಾದ ಸಾತ್ವಿಕ ಆಹಾರ ಮಾತ್ರವಲ್ಲ, ಅತ್ಯುತ್ತಮ ಔಷಧಿಯೂ ಹೌದು. ಈ ಗೋಕ್ಷೀರದಿಂದ ಅತ್ಯಂತ ಭಯಾನಕ ಮಾರಣಾಂತಿಕ ಕಾಯಿಲೆಗಳೂ ವಾಸಿಯಾಗಿರುವ ಅನೇಕ ಜೀವಂತ ಉದಾಹರಣೆಗಳಿವೆ.

ಇದೊಂದು ಸತ್ಯ ಕಥೆ:-

ಇದು 1945ನೇ ಇಸವಿಯಲ್ಲಿ ನಡೆದ ಸತ್ಯ ವಿಷಯ. ಕಾಶಿಯ ಪ್ರಖ್ಯಾತ ವೈದ್ಯ ಪಂಡಿತ ರಾಜೇಶ್ವರದತ್ತ ಶಾಸ್ತ್ರಿಗಳ ಬಳಿ ಬಿಹಾರದ ಶ್ರೀಮಂತ ಜಮೀನ್ದಾರರೊಬ್ಬರು ಮಾರಣಾಂತಿಕ ನೋವಿನಿಂದ ನರಳುತ್ತಾ, ಆಸ್ತಿಪ೦ಜರದಂತಾಗಿದ್ದ ದುರ್ಬಲ ಶರೀರದ 30 ವರ್ಷ ವಯಸ್ಸಿನ ತಮ್ಮ ಪತ್ನಿಯನ್ನು ಕರೆತಂದರು.

ಅದುವರೆವಿಗೂ ಅವರು ಮಾಡದ ಔಷಧಿಯಿಲ್ಲ, ನೋಡದ ವೈದ್ಯರಿಲ್ಲ. ಯಾರಿಗೂ ರೋಗ ಇಂತಹುದೆಂದು ಪತ್ತೆ ಹಿಡಿಯಲೂ ಸಾಧ್ಯವಾಗಿರಲಿಲ್ಲ. ಇದರಿಂದ ತಮ್ಮ ಪತ್ನಿ ಬದುಕುವಳೆಂಬ ಆಶೆಯನ್ನೇ ಕಳೆದುಕೊಂಡು ಬಿಟ್ಟಿದ್ದರು. ಜಮೀನ್ದಾರರು ಕಟ್ಟ ಕಡೆಯ ಪ್ರಯತ್ನ ಮಾಡಿಬಿಡೋಣವೆಂದು ರಾಜೇಶ್ವರದತ್ತ ಶಾಸ್ತ್ರಿಗಳ ಬಳಿ ಪತ್ನಿಯನ್ನು ಕರೆದು ತಂದರು. ಶಾಸ್ತ್ರಿಗಳು ಅವಳ ನಾಡಿ ಹಿಡಿದು ಪರೀಕ್ಷೆ ಮಾಡಿ, ಆಕೆಗೆ ಮಾರಣಾಂತಿಕ ರೋಗವಿದೆಯೆಂದು ಹೇಳಿ ಜಮೀನ್ದಾರರಿಗೆ ಧೈರ್ಯಗೆಡದಿರಲು ಹೇಳಿದರು.

ಭಗವಂತನಲ್ಲಿ ವಿಶ್ವಾಸವಿಟ್ಟ ಅವರು ಹೇಳಿದಂತೆ ಆಕೆಯನ್ನು ಉಪಚರಿಸಿದರೆ ಆರು ತಿಂಗಳಲ್ಲಿ ಅವಳು ಸಂಪೂರ್ಣ ಗುಣ ಹೊಂದುವಳೆಂದು ಹೇಳಿದರು. ಅವರು ಹೇಳಿದ ಚಿಕಿತ್ಸೆ ಇಷ್ಟೇ; ಆಕೆ ಕುಡಿಯುವಷ್ಟು ಕೃಷ್ಣವರ್ಣದ ಗೋವಿನ ಹಾಲನ್ನು ಕೃಷ್ಣತುಲಸಿ ಪತ್ರದೊಡನೆ ಸೇವಿಸಬೇಕು. ಇದರೊಡನೆ ಬೇರೆ ಯಾವ ಔಷಧಿಯನ್ನು ಸೇವಿಸಬಾರದು.

ಜಮೀನ್ದಾರರು ಚಾಚೂ ತಪ್ಪದೆ ವೈದ್ಯರ ನಿಯಮಗಳನ್ನು ಪಾಲಿಸಿ ತಮ್ಮ ಪತ್ನಿಯನ್ನು ಉಪಚರಿಸಿದರು. ಕೇವಲ ಆರೇ ತಿಂಗಳಲ್ಲಿ ಅವಳು ಸಂಪೂರ್ಣ ಗುಣಹೊಂದಿ, ಸ್ವಸ್ಥ ಪ್ರಸನ್ನ ಮುಖದಿಂದ ವೈದ್ಯರ ಬಳಿ ಬಂದಾಗ ಸಂತೋಷಗೊಂಡ ವೈದ್ಯರು “ದೇಖಾನ ಗೋದುಗ್ಧ ಔರ್ ತುಲಸೀಕಾ ಚಮತ್ಕಾರ್! ಗೋಮಾತಾ ನೇ ಆಪ್ ಪರ್ ಕೃಪಾ ಕೀ ಹೈ” ಎಂದು ಉದ್ಗರಿಸಿದರು. ಇದು ಗೋಕ್ಷೀರದ ಅಮೃತತ್ತ್ವಗುಣವಲ್ಲದೆ ಮತ್ತೇನು?

ಇವಿಷ್ಟೂ ಗೋಕ್ಷೀರದ ಪ್ರವೃತ್ತಿ ಮಾರ್ಗದ, ಐಹಿಕ ಸುಖಸಂಪತ್ತು ಹಾಗೂ ಆರೋಗ್ಯದಾಯಕ ಶಕ್ತಿಯ ನಿರೂಪಣೆ.

ಗೋಕ್ಷೀರದಿಂದ ಗೋವಿಂದನವರೆಗೆ

ಇನ್ನು ನಿವೃತ್ತಿ ಮಾರ್ಗಕ್ಕೆ, ಪಾರಮಾರ್ಥಿಕ ಸಾಧನೆಗೆ ಗೋಕ್ಷೀರದ ಮಹತ್ವವೇನು ಎಂಬುದನ್ನು ವಿವೇಚಿಸಿದರೆ ಈ ವಿಶ್ಲೇಷಣೆ ಪೂರ್ಣವಾಗುವುದು.

ಹಸುವಿನ ಹಾಲು ಆರೋಗ್ಯಕರ ಮೆದುಳಿನ ಬೆಳವಣಿಗೆಗೆ ಉತ್ತೇಜನಕಾರಿ ಹಾಗೂ ಚೈತನ್ಯದಾಯಕವಾದುದು. ಇಂತಹ ಮೇಧೆ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಲು ಬೇಕಾದ ಭಕ್ತಿ ಹಾಗೂ ಭಗವಂತನ ಸೇವೆಗೆ ಬೇಕಾದ ಶಕ್ತಿಯನ್ನು ಕರುಣಿಸುವಂತಹುದು.

ಸಪ್ತ ಸಾಗರಗಳಲ್ಲಿ ಕೀರ ಸಾಗರವೂ ಒಂದು ಎಂದು ಪುರಾಣಗಳು ಸಾರುತ್ತಿವೆ. ಭಗವಂತನಾದ ಶ್ರೀಮನ್ನಾರಾಯಣನು ಕ್ಷೀರಸಾಗರದಲ್ಲಿಯೇ ಪವಡಿಸಿರುತ್ತಾನೆ ಎಂದ ಮೇಲೆ ಈ ಕ್ಷೀರದ ಮಹಿಮೆ ಸಾಮಾನ್ಯವೇ?

ವ್ಯಾಸ ಮಹರ್ಷಿಗಳು ತಮ್ಮ ವೇದಾಂತ ದರ್ಶನದ ಒಂದು ಸೂತ್ರದಲ್ಲಿ ಭಗವತತ್ತ್ವ ನಿರೂಪಣೆ ಮಾಡುತ್ತಾ ಜಗತ್ತಿನಲ್ಲಿ ಭಗವದಸ್ತಿತ್ವದ ಭಗವದ್ದ್ಯಾಪಕತೆಯ ಮತ್ತು ಭಗವತ್ಪರಿಪೂರ್ಣತೆಯ ಅನುಭಾವವನ್ನು ಅನುಭವಿಸಲು ಗೋಕ್ಷೀರವನ್ನು ಸಾಧನವಾಗಿರಿಸಿಕೊಂಡು ಅದರ ಭಗವತ್ಸಾಮ್ಯಭಾವ ಗುಣ ವಿಶಿಷ್ಟತೆಯನ್ನು ದರ್ಶನ ಮಾಡಿಸುತ್ತಾ ಗೋವು ಮತ್ತು ಗವ್ಯ ಪದಾರ್ಥಗಳ ಮಹಿಮೆಯನ್ನು ಸಾರಿ ಹೇಳಿದ್ದಾರೆ.

ಹಾಲಿನ ಪರ್ಯಾಯ ಪದಗಳು:

ಗೋಕ್ಷೀರ, ಅಮೃತ, ಪಯ, ಸಿಂಧು, ಮಹ್, ಮಧು, ಉಸ್ರ, ದುಗ್ಧ, ಊರ್ವ, ಪಕ್ವ, ಪರೀಕ್ಷೀಣ, ಊಧ, ಸುಧಾ

ಅಥರ್ವವೇದದಲ್ಲಿ:

ಮಾತಾದಿತ್ಯಾನಾಂ ದುಹಿತಾವಸುನಾಂ

ಪ್ರಾಣಃ ಪ್ರಜಾನಾಂ ಅಮೃತಸ್ಯ ನಾಭಿಃ

ಹಿರಣ್ಯವರ್ಣಾ ಮಧುಕಶಾ ಘೃತಾಚಿ

ಮಹಾನ್ ಭರ್ಗಶ್ಚರತಿ ಮರ್ತ್ಯೇಷು ||

ಹೊಂಬಣ್ಣದ ದಿವ್ಯ ತೇಜೋಮಯಿಯಾದ ಗೋವು ಆದಿತ್ಯರ ಮಾತೆಯೂ, ವಸುದೇವತೆಗಳ ಕನ್ಯೆಯೂ ಪ್ರಜೆಗಳ ಪ್ರಾಣಶಕ್ತಿಯೂ ಆಗಿರುವ ‘ಅಮೃತ’ದ ಕೇಂದ್ರವಾಗಿದೆ ಗೋ-ಕ್ಷೀರ ಮತ್ತು ಗೋಘೃತಗಳ ಪ್ರಭಾವದಿಂದ ಮರ್ತ್ಯದಲ್ಲಿ ಮಹತ್ತರವಾದ ಅದ್ಭುತ ತೇಜಸ್ಸು ಪ್ರಸರಿಸುವುದು ಎಂದು ಗೋವನ್ನು ಗೋಕ್ಷೀರವನ್ನು ಸ್ತುತಿಸಿದೆ.

ಹಸುವು ಸಾತ್ತ್ವಿಕ, ಅದರ ಹಾಲೂ ಸಾತ್ತ್ವಿಕ, ಸೇವಿಸಿದವರಿಗೆ ಸಾತ್ತ್ವಿಕ ಸ್ವಭಾವವನ್ನೇ ವೃದ್ಧಿ ಮಾಡುತ್ತದೆ. ಸನಾತನ ಆರ್ಯ ಮಹರ್ಷಿಗಳಲ್ಲಿ ಎಷ್ಟೋ ಮಂದಿ ಬರಿಯ ಹಾಲನ್ನು ಸೇವಿಸಿಕೊಂಡೇ ತಪಸ್ಸು ಮಾಡುತ್ತಿದ್ದರು. ಅದೇ ಅವರಿಗೆ ಪರಿಪೂರ್ಣ ಆಹಾರವಾಗುತ್ತಿತ್ತು ಸಾಧನೆಗೂ ಸಹಕಾರಿಯಾಗಿತ್ತು.

ಇನ್ನು ಗೋವಿಗೂ ಗೋವಿಂದನಿಗೂ ಅತಿ ನಿಕಟ ಸಂಬಂಧ ಗೋವಿನ, ಗೋಕ್ಷೀರದ, ನವನೀತದ ಮಹಿಮೆಯನ್ನು ಸಾರಲೆಂದೇ ಮಹಾವಿಷ್ಣು ಗೋಪಾಲನಾಗಿ ಜನ್ಮತಳೆದನೇನೋ ಎನ್ನಿಸುತ್ತದೆ.

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ |

ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||

ಎಲ್ಲ ಉಪನಿಷತ್ತುಗಳು ಗೋವಿನಂತೆ, ಈ ಗೋವಿನ ಹಾಲನ್ನು ಕರೆಯುವವನು ಶ್ರೀಕೃಷ್ಣ, ಅರ್ಜುನನೇ ಕ್ಷೀರೋದಯಕ್ಕೆ ಕಾರಣನಾದ ಕರು, ಹೀಗೆ ಕೃಷ್ಣ ಕರೆದ ಹಾಲೇ ಗೀತಾಮೃತ. ಧನ್ಯರಾದ ಭಕ್ತರು ಈ ಕ್ಷೀರಪಾನದಲ್ಲಿ ಮಗ್ನರಾಗಿರುತ್ತಾರೆ.

ಆದ್ದರಿಂದ ಇಂತಹ ಮಹಿಮೆಯುಳ್ಳ ಗೋಕ್ಷೀರವನ್ನು ನಾವೆಲ್ಲರೂ ಸೇವಿಸೋಣ. ಈ ಅಮೃತವನ್ನು ಕರುಣಿಸುವ ಗೋವುಗಳ ರಕ್ಷಣೆ ಮಾಡೋಣ. ಪರೋಪಕಾರಕ್ಕಾಗಿಯೇ ಹಾಲನ್ನು ಕರೆಯುವ ಹಸುಗಳಂತೆಯೇ ಪರೋಪಕಾರಾರ್ಥಮಿದಂ ಶರೀರಂ” ಎಂಬುದಾಗಿ ನಮ್ಮ ಜೀವನವನ್ನು ಪರೋಪಕಾರಕ್ಕಾಗಿಯೇ ಮೀಸಲಾಗಿಟ್ಟು ಧನ್ಯರಾಗೋಣ.

ನಮೋ ಗೋಭ್ಯಃ ಶ್ರೀಮತೇಭ್ಯಃ

ಸೌರಭೇರ್ಯಿಭ್ಯ ಏವಚ |

ನಮೋ ಬ್ರಹ್ಮ ಸುತಾಭ್ಯಾಶ್ಚ

ಪವಿತ್ರಾಭ್ಯೋ ನಮೋ ನಮಃ || (ಅಗ್ನಿಪುರಾಣ)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi