ಶ್ರೀ ಚೈತನ್ಯ ವೃಕ್ಷದ ಅತಿ ಮುಖ್ಯ ಶಾಖೆಗಳಲ್ಲಿ ಶ್ರೀ ಸಾರಂಗ ಠಾಕುರರೂ ಒಬ್ಬರೆಂದು ಚೈತನ್ಯ ಚರಿತಾಮೃತದಲ್ಲಿ ಹೇಳಲಾಗಿದೆ. (ಆದಿ: 10-13) ಶ್ರೀ ಸಾರಂಗ ಠಾಕುರರು ನವದ್ವೀಪ ಧಾಮದ ಬಳಿಯ ಮೋದ ಧೃಮ ದ್ವೀಪ (ಮಾಮಗಾಚಿ)ದಲ್ಲಿ ವಾಸ್ತವ್ಯ ಹೂಡಿದ್ದರು.

ಸಾರಂಗ ಠಾಕುರರು ಅತಿದೊಡ್ಡ ಭಕ್ತರಾಗಿದ್ದರು. ಅವರು ತಾವು ಯಾರನ್ನೂ ಶಿಷ್ಯರಾಗಿ ಸ್ವೀಕರಿಸುವುದಿಲ್ಲವೆಂದು ಸಂಕಲ್ಪ ತೊಟ್ಟಿದ್ದರು. ಆದರೆ ಮಹಾಪ್ರಭುಗಳು ಅವರಿಗೆ ಶಿಷ್ಯರನ್ನು ಪಡೆದು ಉಪದೇಶ ನೀಡುವಂತೆ ಮತ್ತೆ ಮತ್ತೆ ಆಗ್ರಹಿಸಿದ್ದರು. ಕೊನೆಗೂ ಮಹಾಪ್ರಭುಗಳ ಆಗ್ರಹವನ್ನು ಮೀರಲಾಗದೆ ಶ್ರೀ ಚೈತನ್ಯರು ಮರುದಿನ ತಾವು ಭೇಟಿಯಾಗುವ ಮೊದಲ ವ್ಯಕ್ತಿಯನ್ನೇ ಶಿಷ್ಯನನ್ನಾಗಿ ಮಾಡಿಕೊಂಡು, ಪವಿತ್ರ ಮಂತ್ರ ಉಪದೇಶಿಸುವುದಾಗಿ ನಿರ್ಧರಿಸಿದರು.
ಮರುದಿನ ಮುಂಜಾನೆ ಸ್ನಾನದ ಸಲುವಾಗಿ ಗಂಗೆಗೆ ಹೋದ ಠಾಕೂರರ ಕಾಲಿಗೆ ಏನೋ ತಡಕಿದಂತಾಯಿತು. ಅವರು ಏನೆಂದು ಗಮನಿಸಿ ನೋಡಿದಾಗ ಅದೊಂದು ಬಾಲಕನ ಶವವಾಗಿತ್ತು. ಇದೆಲ್ಲವನ್ನೂ ನೋಡುತ್ತಿದ್ದ ಮಹಾಪ್ರಭುಗಳು, “ಸಾರಂಗ ! ಅವನ ಕಿವಿಯಲ್ಲಿ ಮಂತ್ರವನ್ನು ಹೇಳು!!” ಎಂದು ಕೂಗಿ ಹೇಳಿದರು. ಠಾಕುರರು ಹಾಗೆಯೇ ಮಾಡಲು ಆ ಬಾಲಕನಲ್ಲಿ ಚೈತನ್ಯ ತುಂಬಿದಂತಾಗಿ ಅವನು ಪ್ರಜ್ಞೆಯನ್ನು ಪಡೆದನು. ಅವನ ಹೆಸರು ಮುರಾರಿ ಎಂದಾಗಿದ್ದಿತು.

ಸಂಪೂರ್ಣ ಎಚ್ಚರ ಹೊಂದಿದ ಮುರಾರಿಯು ಸಾರಂಗ ಠಾಕುರರ ಶಿಷ್ಯನಾಗಿಯೇ ಉಳಿದನು. ಆತನ ಮನೆಯವರು ಕರೆದರೂ ಹೋಗಲಿಲ್ಲ. ಠಾಕುರರು ಈ ಬಾಲಕನಿಗೆ ದೀಕ್ಷೆ ನೀಡಿ, ತಮ್ಮ ಉಪದೇಶಾಮೃತವನ್ನು ಉಣಿಸಿದರು. ಈ ಘಟನೆಯಿಂದಾಗಿ ಸಾರಂಗ ಠಾಕುರರನ್ನು ಸಾರಂಗ ಮುರಾರಿ ಠಾಕುರ ಎಂದೂ ಕರೆಯುತ್ತಾರೆ. ಸಾರಂಗ ಠಾಕುರರು ಕೇಶವ ಮಾಸದ ಕೃಷ್ಣಪಕ್ಷದ ಹದಿಮೂರನೆಯ ದಿನದಂದು (ತ್ರಯೋದಶಿ) ಭಗವದ್ಧಾಮಕ್ಕೆ ತೆರಳಿದರು.
ಕವಿ ಕರ್ಣಾಪುರನ ‘ಗೌರಘನೋದ್ದೇಶ ದೀಪಿಕಾʼ ಕೃತಿಯಲ್ಲಿ, ವ್ರಜಲೀಲೆಯ ನಂದಿಮುಖಿಯೇ ಚೈತನ್ಯ ಲೀಲೆಯ ಸಾರಂಗ ಠಾಕುರರು ಎಂದು ಹೇಳಲಾಗಿದೆ.






Leave a Reply