ದೇವಾನಂದ ಪಂಡಿತ

ದೇವಾನಂದ ಪಂಡಿತರ ಜೀವನಗಾಥೆ ಹಲವು ಏಳುಬೀಳುಗಳಿಂದ ಕೂಡಿದುದಾಗಿದೆ. ಶ್ರೀಮದ್ಭಾಗವತವನ್ನು ಸೊಗಸಾಗಿ ವಾಚಿಸುತ್ತ, ಅದರ ವ್ಯಾಖ್ಯಾನ ನೀಡುವುದರಲ್ಲಿ ಖ್ಯಾತರಾಗಿದ್ದ ದೇವಾನಂದ ಪಂಡಿತರು ಮೊದಲು ಶ್ರೀವಾಸ ಪಂಡಿತರನ್ನು ಅವಮಾನಗೊಳಿಸುವ ಮೂಲಕ ವೈಷ್ಣವಾಪರಾಧದಲ್ಲಿ ಭಾಗಿಯಾಗಿದ್ದರು.

ತಮ್ಮ ಭಾಗವತ ಪ್ರವಚನ ಕೇಳಲು ಬಂದಿದ್ದ ಶ್ರೀವಾಸರು ಭಕ್ತಿಯಿಂದ ಉನ್ಮತ್ತರಾಗಿ ನೆಲದ ಮೇಲೆ ಬಿದ್ದು ಕಂಬನಿಗರೆಯ ತೊಡಗಿದರು. ಅವರನ್ನು ನೋಡಿ ದೇವಾನಂದರ ಶಿಷ್ಯರು ಹುಚ್ಚ ಎಂದು ಜರಿದು, ಅವರನ್ನು ಹೊರ ಹಾಕಿದರು. ಇದನ್ನು ನೋಡುತ್ತಿದ್ದರೂ ತಡೆಯದೆ ಸುಮ್ಮನೆ ಕುಳಿತಿದ್ದರಿಂದ ದೇವಾನಂದ ಪಂಡಿತರು ಕೂಡ ಅಪರಾಧದಲ್ಲಿ ಭಾಗಿಯಾದಂತಾಗಿತ್ತು.

ಈ ಘಟನೆ ನಡೆದುದು ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವಕ್ಕೂ ಮುನ್ನ. ನಂತರ, ಮಹಾಪ್ರಭುಗಳ ಆವಿರ್ಭಾವವಾಗಿ, ಅವರು ತಮ್ಮ ಲೀಲೆಯನ್ನು ಪೂರೈಸಿ, ಪಂಡಿತೋತ್ತಮರಾಗಿ ಖ್ಯಾತರಾಗಿ, ತಮ್ಮನ್ನು ತಾವು ನಾಮಸಂಕೀರ್ತನ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಅವರ ಮತ್ತು ಶ್ರೀವಾಸ ಪಂಡಿತರ ಭೇಟಿಯಾಗುತ್ತದೆ.

ಆವರೆಗೂ ಯಾರಿಗೂ ಶ್ರೀವಾಸರು ದೇವಾನಂದರಿಂದ ಅವಮಾನಿತರಾಗಿದ್ದ ಘಟನೆ ತಿಳಿದಿರಲಿಲ್ಲ. ಆದರೆ, ಮಹಾಪ್ರಭುಗಳು ಶ್ರೀವಾಸ ಪಂಡಿತರಿಗೆ ಆ ಘಟನೆಯನ್ನು ಕುರಿತು ನೆನಪಿಸುತ್ತಾರೆ.

ನಂತರ, ಮಹಾಪ್ರಭುಗಳು ನವದ್ವೀಪದಲ್ಲಿ ಸುತ್ತಾಡುತ್ತಿರುವಾಗೊಮ್ಮೆ ದೇವಾನಂದ ಪಂಡಿತರು ಶ್ರೀಮದ್ಭಾಗವತಕ್ಕೆ ನೀಡುತ್ತಿದ್ದ ವ್ಯಾಖ್ಯೆ ಕಿವಿಗೆ ಬೀಳುತ್ತದೆ. ಅದನ್ನು ಕೇಳಿ ಅವರು ಸಿಟ್ಟಿಗೇಳುತ್ತಾರೆ. ಬಿರುನುಡಿಗಳಿಂದ ದೇವಾನಂದರನ್ನು ಖಂಡಿಸುತ್ತ ಭಾಗವತದ ಔನ್ನತ್ಯವನ್ನು ಸಾರುತ್ತಾರೆ. ಅವರ ಸುತ್ತ ನೆರೆದಿದ್ದ ಭಕ್ತರು ಮಹಾಪ್ರಭುಗಳನ್ನು ಸಮಾಧಾನಪಡಿಸಬೇಕಾಗುತ್ತದೆ. ದೂರದಿಂದ ಇದೆಲ್ಲವನ್ನು ಕೇಳಿಸಿಕೊಳ್ಳುತ್ತಿದ್ದರೂ ದೇವಾನಂದ ಪಂಡಿತ ಅದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ.

ಸ್ವಲ್ಪ ಕಾಲದ ತರುವಾಯು ಶ್ರೀ ಚೈತನ್ಯ ಮಹಾಪ್ರಭುಗಳು ಪುರಿಯಲ್ಲಿ ಸಂನ್ಯಾಸ ತೆಗೆದುಕೊಳ್ಳುತ್ತಾರೆ. ಆಗ ದೇವಾನಂದರಿಗೆ ತಾವು ಈ ಹಿಂದೆ ಮಹಾಪ್ರಭುಗಳನ್ನು ಉಪೇಕ್ಷಿಸಿದ ಘಟನೆ ನೆನಪಾಗಿ ಖೇದವೆನಿಸುತ್ತದೆ. ಈ ನಡುವೆ ಅನಿರೀಕ್ಷಿತವಾಗಿ ದೇವಾನಂದರಿಗೆ ವಕ್ರೇಶ್ವರ ಪಂಡಿತರ ಸೇವೆ ಮಾಡುವ ಭಾಗ್ಯ ಲಭಿಸುತ್ತದೆ. ಅಂದಿನಿಂದ ಅವರ ಭಕ್ತಿಸೇವೆ ಆರಂಭವಾಗುತ್ತದೆ.

ಸಂನ್ಯಾಸ ಪಡೆದ 5 ವರ್ಷಗಳ ನಂತರ ಮಹಾಪ್ರಭುಗಳು ನವದ್ವೀಪಕ್ಕೆ ಭೇಟಿ ನೀಡುತ್ತಾರೆ. ʼಅಪರಾಧಭಂಜನ’ ಎಂದು ಹೆಸರಾಗಿರುವ ಸ್ಥಳದಲ್ಲಿ ಮಹಾಪ್ರಭುಗಳು ಅಪರಾಧ ಕ್ಷಮಾಪಣೆ ನೀಡುವ ಮೂಲಕ ಪತಿತೋದ್ಧಾರ ಲೀಲೆ ನಡೆಸುತ್ತಾರೆ.

ದೇವಾನಂದ ಪಂಡಿತರೂ ಅಲ್ಲಿಗೆ ತೆರಳಿ ಕ್ಷಮೆ ಕೋರುತ್ತಾರೆ. ಮಹಾಪ್ರಭುಗಳ ಆದೇಶದಂತೆ ಶ್ರೀವಾಸ ಪಂಡಿತರಲ್ಲಿಗೆ ತೆರಳಿ ಅವರ ಪಾದಗಳನ್ನು ಹಿಡಿದು ಕ್ಷಮಿಸುವಂತೆ ಬೇಡುತ್ತಾರೆ.

ಮಹಾಪ್ರಭುಗಳು ದೇವಾನಂದ ಪಂಡಿತರಿಗೆ ಭಾಗವತದ ಮುಖ್ಯ ಸ್ರೋತವಾಗಿರುವ ಭಕ್ತಿ ತತ್ತ್ವವನ್ನು ವಿವರಿಸಿ ಹೇಳುತ್ತಾರೆ. ‘ಭಕ್ತಭಾಗವತ’ನ ಕರುಣೆಯಿಂದ ಸುಲಭವಾಗಿ ‘ಗ್ರಂಥ ಭಾಗವತ’ದ ಕರುಣೆ ಗಳಿಸಬಹುದು ಎಂದು ತಿಳಿಸುತ್ತ, ಕೃಷ್ಣ ಮತ್ತು ಶ್ರೀ ಭಾಗವತ ಬೇರೆ ಬೇರೆಯಲ್ಲ ಎಂದು ಮನವರಿಕೆ ಮಾಡಿಕೊಡುತ್ತಾರೆ.

ದೇವಾನಂದ ಪಂಡಿತರ ಮನಃಪರಿವರ್ತನೆಯಾಗಿ ಅವರು ಶ್ರೀ ಚೈತನ್ಯ ಮಹಾಪ್ರಭುಗಳ ಶಿಷ್ಯರಾಗಿ, ಮಹಾಭಕ್ತರಾಗುತ್ತಾರೆ.

ನಿತ್ಯ ಭಾಗವತರೊಡನೆ ಒಡನಾಡುತ್ತಿದ್ದರೂ, ಅದರ ನೈಜತತ್ತ್ವ ಅರಿಯುವವರೆಗೆ ಸಿದ್ಧಿ ದೊರಕದು ಎಂಬುದನ್ನು ದೇವಾನಂದ ಪಂಡಿತರ ಬದುಕಿನ ಈ ಘಟನೆ ಸಾರುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi