ಸಂವಾದ
ಸ್ಥಳ: ನವವೃಂದಾವನ, ವೆಸ್ಟ್ವರ್ಜೀನಿಯಾ, ದಿನಾಂಕ: 26ನೇ ಜೂನ್, 1976
ಶ್ರೀಲ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರುಗಳೊಂದಿಗೆ ನಡೆದ ಸಂವಾದದ ಮುಂದುವರಿಕೆ
– ಅನುವಾದ: ಡಾ.ಕೆ.ವೈ.ಬಾಲರಾಜ್
ಶ್ರೀಲ ಪ್ರಭುಪಾದ : ನೂಯಾರ್ಕ್ನ ಕೆಲವು ವಾಸಸ್ಥಳಗಳನ್ನು ನಾನು ನೋಡಿರುವೆ. ಅವು ಬಹಳ ಕೊಳಕಾಗಿವೆ. ದುರಾದೃಷ್ಟವಶಾತ್ ಎಷ್ಟೊಂದು ಮನೆಗಳು ಖಾಲಿಯಾಗಿ ಬಿದ್ದಿವೆ. ನಾನು ಅಲ್ಲಿಗೆ ಆಗಮಿಸಿದಾಗ ನಗರದ ವಿವಿಧ ಭಾಗಗಳನ್ನು ನೋಡಲು ಸುಮ್ಮನೆ ಹಾಗೇ ನಡೆದುಕೊಂಡು ಹೋಗುತ್ತಿದ್ದೆ. ಎಂತಹ ನಗರದ ಸ್ಥಿತಿ. ಜನರು ಹೇಳುತ್ತಿದ್ದರು, ಅದು ಅಪಾಯವೆಂದು ಆದರೆ (ನಗುತ್ತಾ) ನನಗೆ ಅದು ಅಪಾಯವೆಂದು ಗೊತ್ತಿರಲಿಲ್ಲ.

ನನ್ನ ಗೆಳೆಯನಾದ ಒಬ್ಬ ಎಲೆಕ್ಟ್ರಿಷಿಯನ್ “ಓ ಸ್ವಾಮೀಜಿ, ನೀವು ಆ ವಸತಿ ಸ್ಥಳಕ್ಕೆ ಹೋಗುತ್ತೀರಾ? ಅದು ನಿಮಗಲ್ಲ. ಹೋಗಬೇಡಿ” ಎಂದು ಹೇಳಿದ.
“ನಾನು ಅದರ ಬಗ್ಗೆ ಯೋಚಿಸುವುದಿಲ್ಲ. ಅವರು ನನ್ನಿಂದ ತೆಗೆದುಕೊಂಡು ಹೋಗುವಂತದ್ದಾದರೂ ಏನಿದೆ?”
ನಾನು ನ್ಯೂಯಾರ್ಕ್ ನಗರದಲ್ಲಿ ಅಲ್ಲಿಂದ ಇಲ್ಲಿಂದ ಸುತ್ತುತಲಿದ್ದೆ. ಎಷ್ಟೊಂದು ಗಲೀಜು ವಸತಿಗಳು. ಲಂಡನ್ ಕೂಡ ಅಷ್ಟೆ, ಅಲ್ಲಿಯೂ ಅನೇಕ ಮನೆಗಳು ಖಾಲಿ ಇದ್ದವು.
ಶಿಷ್ಯ : ಶ್ರೀಲ ಪ್ರಭುಪಾದರೆ, ಕೆಲವು ಜನರು ಹೇಳುತ್ತಾರೆ. ಒ೦ದು ಕಾಡಿನಲ್ಲಿ ನಡೆಯುವುದಕ್ಕಿಂತಲೂ ಹೆಚ್ಚಾಗಿ ನ್ಯೂಯಾರ್ಕ್ ನಗರದಲ್ಲಿ ಕೊಲೆಯಾಗುವ ಅವಕಾಶಗಳು ಬಹಳ ಇವೆ ಎಂದು. ನೆರೆಹೊರೆಯಲ್ಲಿಯೇ ಹಿಂಸಾ ಅಪರಾಧಿಗಳು ಕಳ್ಳತನ ಮತ್ತು ಬಲಾತ್ಕಾರ ಮಾಡಲು ಅಲೆದಾಡುತ್ತಾರೆ. ಏಕೆಂದರೆ ಈ ಆಧುನಿಕ ಸಮಾಜ ಅವರನ್ನು ತಡೆಯುವುದಿಲ್ಲವೆಂದು ಅವರಿಗೆ ಗೊತ್ತು. ಈ ಕಳ್ಳರಿಗೆ ತಾವು ಕೊಲೆ ಮಾಡಿಯ ತಪ್ಪಿಸಿಕೊಳ್ಳಬಹುದು ಎಂದು ಅಕ್ಷರಶಃ ಗೊತ್ತು.
ಶ್ರೀಲ ಪ್ರಭುಪಾದ: ಹೌದು, ಜನರು ಸಂಜೆ ಸೆಂಟ್ರಲ್ ಪಾರ್ಕ್ಗೆ ಹೋಗಬೇಡ ಎಂದು ನನಗೆ ಎಚ್ಚರಿಕೆ ಕೊಟ್ಟರು. ರಾತ್ರಿ ಅಲ್ಲಿ ಯಾರೂ ಹೋಗುವುದಿಲ್ಲವೆಂದು ಅವರು ಹೇಳಿದರು.
ಶಿಷ್ಯ: ಶ್ರೀಲ ಪ್ರಭುಪಾದರೇ ಇದು ಸತ್ಯ. ರಾತ್ರಿಯಲ್ಲಿ ಸಾಮಾನ್ಯ ಜನರು ಅಲ್ಲಿಗೆ ಹೋಗಲು ಹೆದರುತ್ತಾರೆ. ಅವರು ಮುಚ್ಚಿದ ಬಾಗಿಲಿನ ಹಿಂದೆ ಇರಬೇಕಾಗುತ್ತದೆ. ಕೇವಲ ಕೊಲೆಗಡುಕರನ್ನು ಬಿಟ್ಟರೆ ಬೇರೆ ಯಾರೂ ಪಾರ್ಕಿಗೆ ಹೋಗಲು ಆಗುವುದಿಲ್ಲ. ಅವರು ತಮ್ಮ ಕಾರ್ಯ ಎಸಗುವುದಕ್ಕಾಗಿಯೇ ಆ ಸ್ಥಳದಲ್ಲಿ ಸ್ವಾಮ್ಯವನ್ನು ಪಡೆದಿರುತ್ತಾರೆ.
ಶ್ರೀಲ ಪ್ರಭುಪಾದ: ಎಂಥ ಪ್ರಮುಖ ನಗರದಲ್ಲಿ ಅದು ಅತ್ಯಂತ ಪ್ರಮುಖವಾದ ಪಾರ್ಕ್ ಆದರೂ ಅಲ್ಲಿಗೆ ಯಾರೂ ಹೋಗಲು ಆಗುವುದಿಲ್ಲ.
ಶಿಷ್ಯ: ಶ್ರೀಲ ಪ್ರಭುಪಾದರೇ, ಜನರಿಗೆ ಈ ಆಧುನಿಕ ನಾಗರಿಕತೆ ಎಷ್ಟು ಕೆಟ್ಟದಾಗಿದೆ ಎಂದು ಸಾಕ್ಷಾತ್ಕಾರವಾಗುತ್ತಿರಬೇಕು. ನಾಗರಿಕತೆ ಆಕಸ್ಮಿಕವಾಗಿಯಾದರೂ ಏನಾದರೂ ಒಳ್ಳೆಯದನ್ನು ಮಾಡಿದೆಯೇ? ಜನರು ಭರವಸೆಯ ವಿರುದ್ಧ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಏಕೆಂದರೆ ಅವರ ನಾಗರಿಕತೆ ತುಂಬಾ ಕೆಟ್ಟದ್ದಾಗಿದೆ.
ಶ್ರೀಲ ಪ್ರಭುಪಾದ: ಹೌದು, ಆದುದರಿಂದಲೇ ಅವರು ವಿಶ್ವದ ”ಆಕಸ್ಮಿಕ’ ಸಿದ್ಧಾಂತವನ್ನು ಸಮರ್ಥಿಸುತ್ತಾರೆ. ಏಕೆಂದರೆ ಅವರ ನಾಗರಿಕತೆಯಲ್ಲಿ ಏನೂ ಒಳ್ಳೆಯದಿಲ್ಲ. ಒಳ್ಳೆಯದರ ಸಾಧ್ಯತೆಯೂ ಇಲ್ಲ. ಆದರೆ ಕೆಲವು ಒಳ್ಳೆಯದು ಆಕಸ್ಮಿಕವಾಗಿ ಬರಬಹುದು ಅಷ್ಟೆ. ಇಲ್ಲದಿದ್ದರೆ ಜಗತೋಽಹಿತಾಃ, ಜಗತ್ತಿನ ಸರ್ವನಾಶ ಅವರ ಜಗತ್ತಿನಲ್ಲಿ ಕೇವಲ ಇದೊಂದೇ ಲೋಪ.

ಆದರೆ ಕೆಲವು ಸಲ ಆಕಸ್ಮಿಕವಾಗಿ ಒಳ್ಳೆಯದು ಬರುತ್ತದೆ. ಭಾರತದಲ್ಲಿ ಮೊದಲೇ ಇದ್ದರೂ ಕೂಡ ಆಕಸ್ಮಿಕವಾಗಿ ಇಲ್ಲಿ ಈ ಕೃಷ್ಣಪ್ರಜ್ಞೆ ಚಳುವಳಿ (ನಗುತ್ತಾ) ಬಂದಿದೆ. ಯಾರೂ ಇಲ್ಲಿ ವಿಜ್ಞಾನಿಗಳಾಗಲಿ, ರಾಜಕಾರಣಿಗಳಾಗಲಿ ಕೃಷ್ಣ ಪ್ರಜ್ಞೆಗಾಗಿ ಕರೆದಿಲ್ಲ. ಆದರೆ ಅದು ಇಲ್ಲಿ ಆಕಸ್ಮಿಕವಾಗಿ ಬಂತು. ಆಕಸ್ಮಿಕವಾಗಿ ಅವರಿಗೆ ಈ ಲಾಭ ದೊರಕಿತು. ಅವರಿಗೆ ಭಗವಂತನ ಕಾರ್ಯಗಳನ್ನು ವಿವರಿಸಲಾಗುವುದಿಲ್ಲ. ಆದ್ದರಿಂದ ಅವರು ಪ್ರತಿಯೊಂದೂ ಆಕಸ್ಮಿಕ ಎಂದು ತೆಗೆದುಕೊಳ್ಳುತ್ತಾರೆ.
(ಶಿಷ್ಯನಿಗೆ): ಓದುತ್ತಾ ಹೋಗಿ
ಶಿಷ್ಯ: (ಭಗವದ್ಗೀತೆಯ 16.9ನ್ನು ಓದುತ್ತಿರುವುದು) ರಾಕ್ಷಸೀ ಸ್ವಭಾವದವರು ಪ್ರಪಂಚವನ್ನು ನಾಶಕ್ಕೆ ಒಯ್ಯುವ ಚಟುವಟಿಕೆಗಳಲ್ಲಿ ನಿ೦ತರಾಗಿರುತ್ತಾರೆ. ಅವರು ಅಲ್ಪಬುದ್ಧಿಯವರೆಂದು ಪ್ರಭುವು ಇಲ್ಲಿ ಹೇಳುತ್ತಾನೆ. ದೇವರ ಕಲ್ಪನೆ ಇಲ್ಲದಿರುವ ಪ್ರಾಪಂಚಿಕ ವಾದಿಗಳು ತಾವು ಪ್ರಗತಿಹೊಂದುತ್ತಿದ್ದೇವೆ ಎಂದು ಭಾವಿಸುತ್ತಾರೆ.
ಆದರೆ ಭಗವದ್ಗೀತೆಯ ಪ್ರಕಾರ ಅವರು ಬುದ್ಧಿಯಿಲ್ಲದ ಮೂರ್ಖರು. ಅವರು ಈ ಐಹಿಕ ಜಗತ್ತನ್ನು ಸಾಧ್ಯವಾದಷ್ಟು ಭೋಗಿಸಲು ಪ್ರಯತ್ನಿಸುತ್ತಾರೆ. ಆದುದರಿಂದ ಇಂದ್ರಿಯತೃಪ್ತಿಗೆ ಹೊಸದೇನನ್ನಾದರೂ ಸೃಷ್ಟಿಸುವುದರಲ್ಲೇ ಸದಾ ಮಗ್ನರಾಗಿರುತ್ತಾರೆ. ಇಂತಹ ಪ್ರಾಪಂಚಿಕ ಹೊಸ ಸೃಷ್ಟಿಗಳು ಮನುಷ್ಯನ ನಾಗರಿಕತೆಯ ಮುನ್ನಡೆ ಎಂದು ಭಾವಿಸುತ್ತಾರೆ.
ಆದರೆ ಇದರ ಪರಿಣಾಮವೆಂದರೆ ಜನರು ಹೆಚ್ಚು ಹೆಚ್ಚು ಹಿಂಸಾ ಪ್ರವೃತ್ತಿಯವರಾಗುತ್ತಾರೆ ಮತ್ತು ಕ್ರೂರಿಗಳಾಗುತ್ತಾರೆ. ಪ್ರಾಣಿಗಳ ವಿಷಯದಲ್ಲಿಯೂ ಇತರ ಮನುಷ್ಯರ ವಿಷಯದಲ್ಲಿಯೂ ಹೆಚ್ಚು ಕ್ರೂರಿಗಳಾಗುತ್ತಾರೆ. ಅವರಿಗೆ ಒಬ್ಬರೊಡನೆ ಇನ್ನೊಬ್ಬರು ಹೇಗೆ ನಡೆದುಕೊಳ್ಳಬೇಕು ಎನ್ನುವುದು ತಿಳಿಯದು.
ಅಸುರೀ ಸ್ವಭಾವದ ಜನರಲ್ಲಿ ಪ್ರಾಣಿಹತ್ಯೆಯು ಎದ್ದು ಕಾಣುತ್ತದೆ. ಅವರು ಕಟ್ಟಕಡೆಗೆ ಎಲ್ಲರಿಗೂ ವಿನಾಶವನ್ನು ತರುವ ಏನನ್ನಾದರೂ ಕಂಡು ಹಿಡಿಯುತ್ತಾರೆ ಅಥವಾ ಸೃಷ್ಟಿಸುತ್ತಾರೆ. ಆದುದರಿಂದ ಇಂತಹ ಜನರನ್ನು ಪ್ರಪಂಚದ ಶತ್ರುಗಳೆಂದು ಭಾವಿಸಲಾಗುತ್ತದೆ. ಈ ಶ್ಲೋಕವು ಪರೋಕ್ಷವಾಗಿ ಮುಂದೆ ಬರಲಿದ್ದ ಅಣ್ವಸ್ತ್ರಗಳ ಸೃಷ್ಟಿಯನ್ನು ನಿರೀಕ್ಷಿಸುತ್ತದೆ.
ಇಂದು ಇಡೀ ಜಗತ್ತು ಅಣ್ವಸ್ತ್ರಗಳ ವಿಷಯದಲ್ಲಿ ಹೆಮ್ಮೆಪಡುತ್ತದೆ. ಯಾವ ಕ್ಷಣದಲ್ಲಾದರೂ ಯುದ್ಧವಾಗಬಹುದು, ಮತ್ತು ಈ ಅಣ್ವಸ್ತ್ರಗಳು ವಿನಾಶವನ್ನೇ ಮಾಡಬಹುದು. ಇಂತಹ ವಸ್ತುಗಳನ್ನು ಸೃಷ್ಟಿಸುವುದೇ ಪ್ರಪಂಚದ ವಿನಾಶಕ್ಕಾಗಿ ಮಾತ್ರ; ಅದನ್ನು ಇಲ್ಲಿ ಸೂಚಿಸಿದೆ. ದೇವರಲ್ಲಿ ನಂಬಿಕೆ ಇಲ್ಲದಿರುವುದರಿಂದ ಮನುಷ್ಯ ಸಮಾಜದಲ್ಲಿ ಇಂತಹ ಅಸ್ತ್ರಗಳನ್ನು ಸೃಷ್ಟಿಮಾಡುತ್ತಾರೆ. ಜಗತ್ತಿನ ಶಾಂತಿ ಮತ್ತು ಶ್ರೇಯಸ್ಸು ಅವುಗಳ ಉದ್ದೇಶವಲ್ಲ.
ಶ್ರೀಲ ಪ್ರಭುಪಾದ: ಈಗ ಚರ್ಚಿಸಿ.

ಶಿಷ್ಯ: ಶ್ರೀಲ ಪ್ರಭುಪಾದರೇ, ಹಿಂದಿನ ಶತಮಾನವನ್ನು ನಾವು ನೋಡಿದರೆ ನಮಗೆ ಶಾಂತಿಯುತವಾದ ವರ್ಷಗಳೇ ಸಿಗುವುದಿಲ್ಲ. ರಷ್ಯ, ಜಪಾನೀಸ್ ಯುದ್ಧ, ಮೊದಲನೆಯ ಜಾಗತಿಕ ಮಹಾಯುದ್ಧ, ಎರಡನೆಯ ಜಾಗತಿಕ ಮಹಾಯುದ್ಧ, ಕೊರಿಯಾ ಯುದ್ಧ, ವಿಯೆಟ್ನಾ ಯುದ್ಧ, ಮತ್ತು ನೂರಾರು ಶೀತಲ ಮತ್ತು ತೀವ್ರತೆಯುಳ್ಳ ಯುದ್ಧಗಳು; ಸದಾ ಯಾವುದಾದರೂ ಯುದ್ಧ ನಡೆಯುತ್ತಲೇ ಇರುತ್ತದೆ.
ಮಧ್ಯಪ್ರಾಚ್ಯದಲ್ಲಿ ಅಥವಾ ಲ್ಯಾಟೀನ್ ಅಮೆರಿಕಾ ಅಥವಾ ಆಫ್ರಿಕಾದಲ್ಲಾಗಲಿ ಜನರು ಸದಾ ಭೂಮಿ ಮತ್ತು ಕೈಗಾರಿಕಾ ಸಂಪನ್ಮೂಲಗಳಿಗಾಗಿ ಹೋರಾಟ ಮಾಡುತ್ತಲೇ ಇದ್ದಾರೆ. ಒಂದು ರೀತಿಯ ಕದನ ನಡೆಯುತ್ತಲೇ ಇರುತ್ತದೆ.
ಶ್ರೀಲ ಪ್ರಭುಪಾದ: ಹೌದು, ಯಾವಾಗಲೂ “ಶೀತಲಯುದ್ಧ” ಅಥವಾ “ಉಷ್ಣಯುದ್ಧ” ನಡೆಯುತ್ತಲೇ ಇರುತ್ತದೆ. ಯಾವಾಗ ಭೌತಿಕ ಹೋರಾಟವು ಬೆಂಕಿಯಾಗುತ್ತದೋ ಆವಾಗ ಅದು “ಉಷ್ಣಯುದ್ಧ (Hot war)ವಾಗುತ್ತದೆ. ಯಾವಾಗ ಇದರಲ್ಲಿ ರಾಯಭಾರ ಮತ್ತು ರಾಜಕಾರಣವಿರುತ್ತದೋ ಆವಾಗ ಅದು “ಶೀತಲಯುದ್ಧ’ (Cold war) ಆಗುತ್ತದೆ. ಆದ್ದರಿಂದ ಯುದ್ಧ ನಡೆಯುತ್ತಲೇ ಇರುತ್ತದೆ.
ಕೆಲವು ಸಲ ಅದು ಉಷ್ಣ ಮತ್ತು ಕೆಲವು ಸಲ ಅದು ಶೀತಲವಾಗುತ್ತದೆ. ಶಾಂತಿಯೆನ್ನುವುದು ಅಲ್ಲಿ ಇರುವುದೇ ಇಲ್ಲ.
ಶಿಷ್ಯ: ಶ್ರೀಲ ಪ್ರಭುಪಾದರೆ ದೈವಪ್ರಜ್ಞೆಯ ಪಂಗಡಗಳು ಎಂದು ಹೇಳಿಕೊಳ್ಳುವ ಅನೇಕರಲ್ಲಿಯೂ ಕೂಡ ಯುದ್ಧದಂತಹ ಘೋರ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ.
ಶ್ರೀಲ ಪ್ರಭುಪಾದ: ಇಲ್ಲ, ಇಲ್ಲ. ಎಲ್ಲ ಹೋರಾಟ ನಿಂತಿದೆಯೆಂದು ನಾವು ಹೇಳುವುದಿಲ್ಲ. ಅಸುರರಿಂದ ಹೋರಾಟ ಮತ್ತು ದೇವತೆಗಳ ಹೋರಾಟದ ಮಧ್ಯೆ ವ್ಯತ್ಯಾಸವನ್ನು ನಾವು ಕಾಣುತ್ತೇವೆ. ಒಂದು ವೇಳೆ ನೀನು ಅಸುರನಾಗಿರುವೆ ಮತ್ತು ನೀನು ಬಂದು ನನ್ನ ಮೇಲೆ ಆಕ್ರಮಣ ಮಾಡುವಿಯೆಂದರೆ, ಆಗ ನಾನು ನನ್ನ ರಕ್ಷಣೆ ಮಾಡಿಕೊಳ್ಳಲೇಬೇಕು. ಇನ್ನೇನು ಮಾಡುವುದಕ್ಕೆ ಸಾಧ್ಯ?
ನೀನು ಅಸುರನು, ಯುದ್ಧವನ್ನು ನೀನು ಪ್ರಾರಂಭಿಸಿದರೆ ಹೋರಾಟದಿಂದ ನಾನು ಹಿಂದೆ ಸರಿಯಲೇ? “ನಾನು ದೇವತೆಯಾಗಿರುವೆ, ಇಲ್ಲ ನಾನು ಹೋರಾಡುವುದಿಲ್ಲ. ನೀನು ಬಂದು ನನ್ನನ್ನು ಕೊಲ್ಲಬಹುದು.” ಇದು ಬುದ್ಧಿವಂತಿಕೆಯೇ? ನಾನು ಹೋರಾಡಲೇಬೇಕು.
ಯುದ್ಧವು ಅಸುರರಿಂದ ಪ್ರಾರಂಭವಾಗುತ್ತದೆ. ಕುರುಕ್ಷೇತ್ರ ಯುದ್ಧವು ಅರ್ಜುನನಿಂದಲ್ಲ ದುರ್ಯೋಧನನಿಂದ ಪ್ರಾರಂಭವಾಗಿತ್ತು.
(ಮುಂದುವರಿಯುವುದು)






Leave a Reply