“ಆಕಾಶದಲ್ಲಿ ದಟ್ಟೈಸಿದ ಮೋಡವು ಎಲ್ಲೆಡೆ ಮಳೆಹನಿಗಳನ್ನು ವಿತರಿಸುವಂತೆ ಜಗದೀಶ ಪಂಡಿತರು ಕೃಷ್ಣಪ್ರೇಮವನ್ನು ಹಂಚುತ್ತಾರೆ” – ಇದು ಚೈತನ್ಯ ಚರಿತಾಮೃತದಲ್ಲಿ (ಆದಿಲೀಲಾ – 11:30) ಶ್ರೀಲ ಜಗದೀಶ ಪಂಡಿತರ ಕುರಿತು ಹೇಳಿರುವ ಒಂದು ಮಾತು.
ಜಗದೀಶ ಪಂಡಿತರು ಕೃಷ್ಣಪ್ರೇಮವನ್ನು ಹಂಚುವ ಕೆಲಸವನ್ನು ತಮ್ಮ ಜೀವನದುಸಿರಾಗಿ ಮಾಡಿಕೊಂಡಿದ್ದರು. ಜಗದೀಶ ಪಂಡಿತರು ವ್ರಜಲೀಲೆಯಲ್ಲಿ ಯಾಜ್ಞಕ ಬ್ರಾಹ್ಮಣರ ಪತ್ನಿಯಾಗಿದ್ದರೆಂದೂ, ಶ್ರೀ ಕೃಷ್ಣನು ಅವರ ಮನೆಯಿಂದ ಆಗಾಗ ಪ್ರಸಾದ ಸ್ವೀಕರಿಸುತ್ತಿದ್ದನೆಂದೂ ಹೇಳಲಾಗಿದೆ. ಈ ಪ್ರಸಂಗ ಚೈತನ್ಯ ಲೀಲೆಯಲ್ಲಿಯೂ ಪುನರಾವರ್ತನೆಗೊಂಡಿದ್ದೊಂದು ಸೋಜಿಗದ ಪ್ರಸಂಗ.
ಜಗದೀಶ ಪಂಡಿತರು ತಮ್ಮ ತಂದೆ-ತಾಯಿಯರ ನಿಧನಾನಂತರ ತಮ್ಮ ಪತ್ನಿ ದುಃಖಿನೀದೇವಿ ಮತ್ತು ಸಹೋದರ ಮಹೇಶನೊಂದಿಗೆ ಗಂಗಾತಟಕ್ಕೆ, ಶ್ರೀ ಜಗನ್ನಾಥ ಮಿಶ್ರರ ಮನೆಯ ಬಳಿ ನೆಲೆಸಿದರು.
ಒಮ್ಮೆ ಬಾಲಕ ನಿಮಾಯ್ ಜೋರಾಗಿ ಅಳಲಾರಂಭಿಸಿದ. ತಾಯಿ ಶಚೀಮಾತೆ ಮಗನನ್ನು ಬಹುವಾಗಿ ರಮಿಸುತ್ತ ಕಾರಣ ಕೇಳಿದರೆ, ಆ ಬಾಲಕ, “ಇಂದು ಜಗದೀಶ ಮತ್ತು ಹಿರಣ್ಯರ ಮನೆಗಳಲ್ಲಿ ವಿಶೇಷ ಏಕಾದಶಿ ಅಡುಗೆಯನ್ನು ಮಾಡಿದ್ದಾರೆ, ನನಗದು ಬೇಕು’ ಎಂದು ಹಠ ಹಿಡಿದು ಕುಳಿತ.

ಈ ಪುಟ್ಟ ಮಗುವಿಗೆ ಇಂದು ಏಕಾದಶಿ ಎಂದು ತಿಳಿದಿದ್ದಾದರೂ ಹೇಗೆ ಎಂದು ಸುತ್ತ ನೆರೆದಿದ್ದ ಹೆಂಗಸರೆಲ್ಲ ಅಚ್ಚರಿಪಟ್ಟರು. ವಿಷಯ ತಿಳಿದ ಜಗದೀಶ ಪಂಡಿತ ಮತ್ತು ಹಿರಣ್ಯರು ತಾವು ತಯಾರಿಸಿದ್ದ ಅಡುಗೆಯನ್ನು ಹೊತ್ತು ತಂದು ಬಾಲಕನಿಗೆ ಸಂಭ್ರಮದಿಂದ ನೀಡಿದರು. ಅವರಿಗೆ ಬಾಲಕ ನಿಮಾಯ್ ದೇವೋತ್ತಮ ಪರಮ ಪುರುಷನಲ್ಲದೆ ಬೇರೆಯಾರೂ ಅಲ್ಲ ಎಂಬ ಅರಿವಿತ್ತು.
ಅವರು ತಂದಿತ್ತ ಆಹಾರ ಸ್ವೀಕರಿಸಿದ ನಿಮಾಯ್ ತನ್ನ ಬಾಲಕೃಷ್ಣ ಸ್ವರೂಪವನ್ನು ಪ್ರಕಟಿಸಿ ಅವರನ್ನು ಕರುಣಿಸಿದ. ಆ ಬ್ರಾಹ್ಮಣದ್ವಯರು ಆನಂದೋನ್ಮತ್ತರಾಗಿ ಮೈಮರೆತರು.
ಮುಂದೆ ಶ್ರೀ ಚೈತನ್ಯ ಮಹಾಪ್ರಭುಗಳ ನಿರ್ದೇಶನದಂತೆ ಜಗದೀಶ ಪಂಡಿತರು ನೀಲಾಚಲಕ್ಕೆ ತೆರಳಿ ಕೃಷ್ಣನಾಮ ಸಂಕೀರ್ತನೆಯನ್ನು ಬೋಧಿಸತೊಡಗಿದರು. ಅಲ್ಲಿಂದ ಜಸೋರಾಕೆ ತೆರಳಿ ನೆಲೆನಿಂತರು. ಜಸೋರಾಕ್ಕೆ ಮಹಾಪ್ರಭುಗಳು ಭೇಟಿ ನೀಡಿದಾಗ ದುಃಖಿದೇವಿಗೆ ಕೊಟ್ಟಿದ್ದ ಗೌರ ಗೋಪಾಲ ವಿಗ್ರಹವು ಇಂದಿಗೂ ಶ್ರೀ ಜಗನ್ನಾಥ – ರಾಧಾವಲ್ಲಭ ಮೂರ್ತಿಗಳೊಡನೆ ಪೂಜೆಗೊಳ್ಳುತ್ತಿದೆ.
ಶ್ರೀ ಜಗದೀಶ ಪಂಡಿತರು ಪೌಷ ಮಾಸದ ಶುಕ್ಲಪಕ್ಷ ತೃತೀಯೆಯಂದು ಅಂತರ್ಧಾನರಾದರು.






Leave a Reply