– ಡಾ. ಕಬ್ಬಿನಾಲೆ ವಸನ್ತ ಭಾರದ್ವಾಜ್, ಮೈಸೂರು, ವಿದ್ವಾಂಸರು, ಅವಧಾನಿಗಳು.
“ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇಸ್ಕಾನ್ ಬೆಂಗಳೂರು ‘ಚೈತನ್ಯ ಪಂಥ ಮತ್ತು ದಾಸ ಪಂಥ’ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ನಾಡಿನ ಹತ್ತು ಹಲವು ಪ್ರಾಜ್ಞರು ಸಂಕಿರಣದ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡನೆ ಮಾಡಿದರು. ಆ ಪ್ರಬಂಧಗಳ ಸಾರಾಂಶವನ್ನು ‘ಭಕ್ತಿವೇದಾಂತ ದರ್ಶನ’ ತನ್ನ ಓದುಗರಿಗಾಗಿ ನೀಡುತ್ತಿದೆ.”

ಹರೇ ಕೃಷ್ಣ !
ಎಲ್ಲ ಕನ್ನಡ ಮನಸ್ಸುಗಳೇ,
ಚೈತನ್ಯ ಪಂಥ ಮತ್ತು ದಾಸ ಪಂಥಗಳ ಒಂದು ತೌಲನಿಕ ವಿವೇಚನೆಯನ್ನ ನಾನಿಲ್ಲಿ ಮಂಡಿಸುತ್ತೇನೆ. ಚೈತನ್ಯ ಮತ್ತು ದಾಸ ಇವೆರಡೂ ಪಂಥಗಳೂ ಕೂಡ ಭಕ್ತಿಯ ಮೂಲಕ ಭಗವಂತನನ್ನು ಭಜಿಸುವ ದಾರಿಯನ್ನ ಆಯುಕೊಂಡವುಗಳು.
ಭಾಗವತದಲ್ಲಿ ಒಂದು ಶ್ಲೋಕ ಬರುತ್ತದೆ ಆ ಮೂಲಕವಾಗಿಯೇ ಭವಿಷ್ಯದಲ್ಲಿ ಚೈತನ್ಯರು ಅವತಾರ ತಾಳಿ, ಹರಿಸಂಕೀರ್ತನೆಯನ್ನು ಮಾಡ್ತಾರೆ ಅನ್ನುವ ಸೂಚನೆಯನ್ನು ನಾವು ಗ್ರಹಿಸಬಹುದು.
ಕೃಷ್ಣವರ್ಣ೦ ತ್ವಿಷಾ ಕೃಷ್ಣಂ ಸಾಂಗೋಪಾಂಗಾಸ್ತ್ರಪಾರ್ಷದಂ |
ಯಜ್ಞೈ ಸಂಕೀರ್ತನ ಪ್ರಾಯೋರ್ ಯಜಂತಿಹಿ ಸುಮೇದಸಃ ||
”ಹಳದಿ ಬಣ್ಣದ ಮೈ ಕಾಂತಿಯಿಂದ, ಸಂಕೀರ್ತನೆ ಮಾಡುತ್ತ ಇರುವವನಿಂದ ಒಂದು ಚಳುವಳಿ ಆರಂಭವಾಗುತ್ತದೆ. ಬುದ್ಧಿವಂತ ಜೀವಿಗಳೆಲ್ಲರೂ ಇದೇ ಮಾರ್ಗವನ್ನ ಅನುಸರಿಸುತ್ತಾರೆ’ ಅನ್ನುವುದು ಈ ಶ್ಲೋಕಾರ್ಥ. ಹಾಗಾಗಿ, ಭಾಗವತ ಕಾಲದಲ್ಲಿಯೇ ಚೈತನ್ಯರ ಪಂಥದ ಗಮನವನ್ನು ಗ್ರಹಿಸುವಂಥಹ ಒಂದು ವಿಚಾರವನ್ನು ನಾವು ನೋಡಬಹುದು.
ಚೈತನ್ಯರು ಕೂಡ ಹಾಗೆಯೇ, ತನ್ನ ಉಪದೇಶಗಳನ್ನ ಹೇಳುವುದಕ್ಕಿಂತಲೂ ಹೆಚ್ಚು ‘ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇಹರೇ ಹರೇರಾಮ ಹರೇರಾಮ ರಾಮರಾಮ ಹರೇಹರೇ ಎನ್ನುವಂಥ ಸಂಕೀರ್ತನ ಪದ್ಧತಿಯನ್ನೇ ಒಂದು ಚಳುವಳಿಯನ್ನಾಗಿ ಮಾಡಿದರು. ಭಾಗವತದಲ್ಲಿಯೂ ಕೂಡ ಈ ರೀತಿ ಹರಿನಾಮ ಸಂಕೀರ್ತನೆಯ ಅಭಿವೃದ್ಧಿಯನ್ನ ಕಾಣಬಹುದು.
‘ಕೃತೇ ಯತ್ ಧ್ಯಾಯತೋ ವಿಷ್ಣುಮ್
ತ್ರೇತಾಯಾಂ ಯಜತೋರ್ಮಖೈಃ
ದ್ವಾಪರೇ ಪರಿಚರ್ಯಾಯಾಂ ಕಲೌ
ತತ್ ಹರಿಕೀರ್ತನಮ್ ||
ಕೃತ, ತ್ರೇತಾ, ದ್ವಾಪರ, ಕಲಿಯುಗಗಳಲ್ಲಿ ಜ್ಞಾನ, ಯಜ್ಞ, ಸೇವೆ ಮತ್ತು ಭಜನೆ ಎನ್ನುವಂಥ ನಾಲ್ಕು ವಿಧಗಳಲ್ಲಿ ಹರಿಯನ್ನ ಉಪಾಸಿಸಬಹುದು ಅನ್ನುವಂಥ ಮಾತನ್ನ ನಾವು ಅಲ್ಲಿ ನೋಡಬಹುದು.
ವಿಷ್ಣು ಪುರಾಣದಲ್ಲಿಯೂ ಕೂಡ ಕಲೌ ಸಂಕೀರ್ತ್ಯ ಕೇಶವಃ ಎನ್ನುವಂಥ ಮಾತು ಬರುತ್ತದೆ. ಕನ್ನಡದ ನೆಲದಲ್ಲಿ ಆವಿರ್ಭವಿಸಿದಂಥ ದಾಸ ಸಾಹಿತ್ಯ ಕೂಡ ಇದೇ ರೀತಿಯ ಹರಿಸಂಕೀರ್ತನೆಯನ್ನು ತನ್ನ ಮೈಯಲ್ಲಿ ಆತುಕೊಂಡಂತಹ ಒಂದು ಚಳುವಳಿಯಾಗಿದೆ.
”ಕಲಿಯುಗದಲ್ಲಿ ಹರಿನಾಮವ ನೆನೆದರೆ” ಎನ್ನುವ ಹಾಡು ಇರಬಹುದು, ‘ಕೃಷ್ಣಾಎನಬಾರದೆ’ ಎನ್ನುವಂಥ ಮಾತಿರಬಹುದು ‘ಹರಿನಾಮಕೀರ್ತನೆ ಮಾಳ್ವಗೆ ನರಕ ಭಯಗಳುಂಟೇ? ಎನ್ನುವ ಕೀರ್ತನೆ ಇರಬಹುದು. ಇವೆಲ್ಲವೂ ಕೂಡ ಹರಿದಾಸ ಸಾಹಿತ್ಯದಲ್ಲಿ ಕೂಡ ಸಂಕೀರ್ತನ ಸಂಪ್ರದಾಯವನ್ನು ಪ್ರತಿಪಾದನೆ ಮಾಡುತ್ತದೆ.
ಮಧ್ವಾಚಾರ್ಯರ ನೇರ ಶಿಷ್ಯರಾಗಿದ್ದಂತಹ ನರಹರಿತೀರ್ಥರು 14ನೆ ಶತಮಾನದಲ್ಲಿ ಮೊತ್ತ ಮೊದಲಿಗೆ ಕೀರ್ತನೆಗಳನ್ನ ಬರೆದರು. ಅನಂತರ, ಶ್ರೀಪಾದರಾಜರು 14ನೆ ಶತಮಾನದ ಕೊನೆಯಲ್ಲಿ 15ನೆ ಶತಮಾನದ ಆರಂಭದಲ್ಲಿ ದಾಸ ಸಾಹಿತ್ಯಕ್ಕೆ ಕನ್ನಡದಲ್ಲಿ ಭದ್ರ ಬುನಾದಿಯನ್ನು ಹಾಕಿದರು.

ದೇವರ ಪೂಜಾ ಕಾಲದಲ್ಲಿ, ಯತಿಗಳಾಗಿದ್ದಂತಹ ಶ್ರೀಪಾದ ರಾಜರು ಮಠದ ಒಳಗೆ, ದೇವರ ಪೂಜಾ ಕಾಲದಲ್ಲಿಯೂ ಕೂಡ ಹರಿಕೀರ್ತನೆಗಳನ್ನು ಹಾಡುವಂಥಹ, ಕನ್ನಡದ ಕೀರ್ತನೆಗಳನ್ನು ಹಾಡುವಂಥಹ ಕ್ರಮವನ್ನು ಆರಂಭಿಸಿದರು. ಇದಕ್ಕೆ ತಮಿಳಿನ ‘ತೇವಾರಂ’ ದಿವ್ಯ ಪ್ರಬಂಧಗಳಿಂದ ಅವರಿಗೆ ಪ್ರೇರಣೆ ದೊರೆತಿರಬಹುದು.
ಅನಂತರ ಈ ಯತಿ ಪರಂಪರೆಯಲ್ಲಿ ಕೂಡ, ವ್ಯಾಸರಾಯರಿರಬಹುದು, ವಾದಿರಾಜರಿರಬಹುದು, ರಾಘವೇಂದ್ರ ತೀರ್ಥರು ಇರಬಹುದು, ಹಾಗೆಯೇ ಪುರಂದರ ಕನಕದಾಸಾದಿ ವಿಜಯದಾಸ, ಗೋಪಾಲ ದಾಸಾದಿಗಳೆಲ್ಲರು ಕೂಡ ಈ ಕೀರ್ತನ ವಿಧಾನದ ಮೂಲಕ ಭಗವಂತನನ್ನು ಆರಾಧಿಸುವಂಥಹ ಒಂದು ಹಂತವನ್ನು ತಲುಪಿದರು.
ಚೈತನ್ಯರು ಕೂಡ ದೂರದ ಬಂಗಾಳದಲ್ಲಿ ಇದನ್ನೇ ಮಾಡಿದ್ದು. ಹಾಗಾಗಿ, ಕನ್ನಡದ ನೆಲದಲ್ಲಿ ಉಂಟಾದಂತಹ ದಾಸ ಸಾಹಿತ್ಯ ಹಾಗೂ ಉತ್ತರದ ಬಂಗಾಳದಲ್ಲಿ ಚೈತನ್ಯ ಪಂಥ ಅನುಸರಿಸಿದ ಸಂಕೀರ್ತನ ಈ ಎರಡೂ ಮಾರ್ಗಗಳ ಅಂತರ ಭಕ್ತಿಯೊಂದೇ ಅನ್ನುವುದನ್ನು ನಾವು ಇಲ್ಲಿ ಗ್ರಹಿಸಬಹುದು.
ಶ್ರೀ ಚೈತನ್ಯ ಚರಿತಾಮೃತದಲ್ಲಿ ಕವಿರಾಜ ಗೋಸ್ವಾಮಿಗಳು ಕೃಷ್ಣನನ್ನು ಆರಾಧಿಸುವಂತಹ ಮಾರ್ಗಗಳಲ್ಲಿ ಮುಖ್ಯವಾಗಿ ‘ಸಖ’ಭಾವ, ‘ಪುತ್ರ’ಭಾವ ಮತ್ತು ‘ಪ್ರೇಮಿ’ಭಾವ ಎನ್ನುವಂಥದ್ದನ್ನು ಹೇಳ್ತಾರೆ. ದಾಸ ಸಾಹಿತ್ಯದಲ್ಲಿಯೂ ಕೂಡ ಇಂಥ ಪಂಚಭಾವಗಳನ್ನ ನಾವು ನೋಡುತ್ತೇವೆ. ದಾಸ್ಯದಿಂದ ಅಥವಾ ಸಖ್ಯ, ಮಾಧುರ್ಯ, ವಾತ್ಸಲ್ಯ, ಶಾಂತಭಾವಗಳೆನ್ನುವ ಐದು ರೀತಿಯ ಭಾವಗಳನ್ನು ನಾವು ದಾಸ ಸಾಹಿತ್ಯದಲ್ಲಿ ನೋಡುತ್ತೇವೆ.
‘ನೀನ್ಯಾಕೋ, ನಿನ್ನ ಹಂಗ್ಯಾಕೋ?” ಎಷ್ಟು ಸಲುಗೆಯಿಂದ ಮಾತಾಡಿದಂತಹ ರೀತಿ ನೋಡಿ, ದಾಸರುಗಳು ತಮ್ಮ ಹಾಡಿನ ಚೌಕಟ್ಟಿನ ಒಳಗೂ ಕೂಡ ಭಗವಂತನೊಂದಿಗೆ ನಡೆಸಿದಂತಹ ಸಂವಾದದ ಒಳಗೆ ಒಂದು ಆತ್ಮೀಯತೆಯಿದೆ. ಒಂದು ಗೆಳೆತನದ ಸಲುಗೆಯಿದ’ ಅನ್ನೋದನ್ನ ನಾವು ಇಲ್ಲಿ ನೋಡಬಹುದು.
”ಯಾಕೆ ನನ್ನ ಈ ರಾಜ್ಯಕಳೆತಂದೆ? ಸಾಕಲಾರದೆ ಏಕೆ ನನ್ನ ಪುಟ್ಟಿಸಿದೆ?’
ಎಷ್ಟು ಸಲಿಗೆಯ ಮಾತು ನೋಡಿ! ನಮ್ಮನ್ನು ಸಾಕಬೇಕಾಗಿದ್ದ ಹೊಣೆ ನಿನ್ನದು ಎನ್ನುವಂತಹ ಗೆಳೆತನದ ಒತ್ತಾಯವನ್ನ ನಾವಿಲ್ಲಿ ನೋಡಬಹುದು.
‘ಎನಗೂ ಆಣೆ ರಂಗಾ, ನಿನಗೂ ಆಣೆ’ ಅಥವಾ ‘ಇವಗೇಕೆ ಪರಿಮಳ? ಇವಗೇಕೆ ಶೃಂಗಾರ?’ ಇಂಥಹಾ ನಿಂದಾ ಸ್ತುತಿಗಳ ಹಾಡುಗಳನ್ನು ನಾವು ನೋಡಬಹುದು.
“ಕರುಣಾಕರ ನೀನೆಂಬುವರೇತಕೋ? ಭರವಸೆ ಇಲ್ಲೆನಗೆ,” ಆ ಭರವಸೆ ಇಲ್ಲ. “ಕರುಣಾಕರ ನೀನಾದರೆ ಈಗಲೆ ಕರಪಿಡಿದೆತ್ತುತ ಹರಿ ಕಾಯೋ” ಎನ್ನುವಂಥ ಒತ್ತಡ, ಇದು ಸ್ನೇಹದಲ್ಲಿ ಮಾತ್ರ ಸಾಧ್ಯವಾಗುವಂಥದ್ದು. ಹಾಗೆಯೇ ಇನ್ನೊಂದು ಭಾವ, ವಾತ್ಸಲ್ಯ ಪ್ರಧಾನವಾದದ್ದು. ಒಬ್ಬಳು ತಾಯಿಯಾಗಿ, ಮಗುವಾಗಿ ಆ ಕೃಷ್ಣನನ್ನ ಕಾಣುವಂಥ ವಾತ್ಸಲ್ಯಭಾವ ಈ ದಾಸ ಕೀರ್ತನೆಗಳಲ್ಲಿ ಹೊಳೆಯಾಗಿ ಹರಿದಿದೆ. ಆಡಿಸಿದಳೇ ಯಶೋದಾ’ ʼಮೆಲ್ಲ ಮೆಲ್ಲನೆ ಬಂದನೇ,ʼ ‘ಮನೆಯೊಳಗಾಡೋ ಗೋವಿಂದ,ʼ ‘ಜೋ ಜೋ ಶ್ರೀ ಕೃಷ್ಣ ಪರಮಾನಂದ’.
ತೊಟ್ಟಿಲು ತೂಗುವುದರಿಂದ ತೊಡಗಿ, ಮಗುತನದ ರೀತಿಯಲ್ಲಿ ಭಗವಂತನನ್ನತನ್ನ ವಾತ್ಸಲ್ಯದ ಪರಿಧಿಯೊಳಗೆ ಸೆಳೆದುಕೊಳ್ಳುವಂಥ, ಅಪ್ಪುವ ಆಲಿಂಗಿಸುವ ಪ್ರೀತಿಯ ಆ ಬೇರೆ ಬೇರೆ ಭಾವಗಳನ್ನ ನಾವು ದಾಸ ಸಾಹಿತ್ಯದಲ್ಲಿ ನೋಡ್ತೇವೆ. ಇದಕ್ಕಿಂತಲೂ ಮುಖ್ಯವಾದದ್ದು, ಬಂಗಾಳದ ಚೈತನ್ಯ ಪಂಥದಲ್ಲಿ ಬಹಳ ಪ್ರಧಾನವಾಗಿದ್ದಂತಹ ಭಾವ – “ಮಾಧುರ್ಯ ಭಾವ.” ಗಾಢವಾಗಿ ಆವರಿಸಿದೆ ಎಂದು ಹೇಳಬಹುದು.
ವಿಶೇಷವಾಗಿ, ಶ್ರೀಪಾದರಾಜರಂಥ ಯತಿಗಳಲ್ಲಿಯೂ ಕೂಡ ಈ ರೀತಿಯ ಮಾಧುರ್ಯ, ಶಕ್ತಿ ರಸಭಾವ ಹೇಗೆ ಪ್ರಕಟವಾಗಿದೆ ನೋಡಿ. ಒಂದು ಕಡೆ ಶ್ರೀಪಾದರಾಜರ ರಚನೆಯಲ್ಲಿ ನಾವು ನೋಡಬಹುದು.
ತಿಂಗಳು ಮೂಡಿತು, ಪಿಕ ಸಂಗೀತ ತೊಡಗಿತು
ಭೃಂಗ ತನ್ನಂಗನೆಯರ ಸಂಗಡ ನಲಿದುಬಂದ
ಶೃಂಗಾರವನದ ಮೃದು ತಂಗಾಳಿ
ಬೀಸಿತು ನೋಡಾ
ಅನಂಗ ನೆಟ್ಟ ಬಾಣದೊಳೆಂತೋ
ಅಂತರಂಗ ತಾಕಿದ ಎನ್ನ ಈ ಕಾಯವ
ದೇವೋತ್ತುಂಗ ಕಾಯದಿರೆ
ಉಳಿವಂದವ ಕಾಣೇ…

‘ಅನಂಗ ನೆಟ್ಟ ಬಾಣಗಳು’, ಒಬ್ಬ ಮಠಾಧಿಪತಿ, ಕಾವೀವಸನಧಾರಿ, ಎಂಥಹ ಪದಪ್ರಯೋಗ ಮಾಡಿ ಭಗವಂತನನ್ನು ತನ್ನ ಮಾಧುರ್ಯ ಭಾವದಿಂದ ಆರಾಧಿಸುತ್ತಾರೆ ಅನ್ನೋದನ್ನ ನಾವಿಲ್ಲಿ ಗ್ರಹಿಸಬೇಕು. ಇದು ಬಹಳ ಮುಖ್ಯವಾದದ್ದು. ಯಾಕೆ? ವ್ಯಾಸರಾಜರಂಥ ಸ್ವಾಮಿಗಳು ಕೂಡ “ಕಾಣದೆ ನಿಲ್ಲಲಾರೆ” ಎನ್ನುವಂಥ ಒಂದು ಹಾಡಿನಲ್ಲಿ ಇದೇ ಮಾತನ್ನ ಇದೇ ಭಾವವನ್ನ ಪ್ರಕಟಪಡಿಸಿದ್ದಾರೆ. ಹೀಗೆ ಮಾಧುರ್ಯ ಭಾವ ಎರಡೂ ಪಂಥಗಳಲ್ಲಿದೆ. ಆದರೆ, ಚೈತನ್ಯ ಪಂಥದಲ್ಲಿ ತುಸು ಹೆಚ್ಚೇ ಇದೆ ಎನ್ನಬಹುದು.
ದಾಸ ಪಂಥದಲ್ಲಿ ‘ಸೆರಗ ಬಿಡು ರಂಗ ಸೆರಗ ಬಿಡು’, ‘ರಂಗನೇತಕೆ ಬಾರನೇ’ ಇಂಥ ಅನೇಕ ಹಾಡುಗಳನ್ನ ನಾವು ಉದಾಹರಣೆಗೆ ನೋಡಬಹುದು. ಹರಿನಾಮ ಸ್ಮರಣೆಗೆ ಅತ್ಯಂತ ಪ್ರಾಶಸ್ತ್ಯ ದಾಸ ಸಾಹಿತ್ಯದಲ್ಲಿ ಇದೆ ಅನ್ನೋದನ್ನ ನಾವೀಗಾಗಲೇ ಗಮನಿಸಿದ್ದೇವೆ. ‘ಯಾಗ, ಯಜ್ಞ ಮಾಡಬೇಕೆ? ಯೋಗಿ-ಯತಿಯು ಆಗಲೇಕೆ? ನಾಗಶಯನ ನಾರದ ವಂದ್ಯನ ಕೂಗಿ ಭಜನೆ ಮಾಡು.’
ಆ ‘ಕೂಗಿ ಭಜನೆ ಮಾಡು’ವುದರಲ್ಲಿ ಈ ಯಾಗ- ಯಜ್ಞಗಳಲ್ಲಿ ಸಂಚಯವಾಗುವಂಥಹ ಪುಣ್ಯಕ್ಕಿಂತಲೂ ಅಧಿಕವಾದಂಥಹ ಒಂದು ಸುಖ ಸಂತೋಷ ಪ್ರಾಪ್ತವಾಗುತ್ತದೆ ಅನ್ನುವಂಥ ಒಂದು ಸುಖ ಸಂತೋಷ ಪ್ರಾಪ್ತವಾಗುತ್ತದೆ ಅನ್ನುವಂಥ ಮಾತಿದೆಯಲ್ಲ, ಅದು ಬಹಳ ಮುಖ್ಯ. ಮತ್ತು ಆ ಕಾಲಘಟ್ಟದಲ್ಲಿದ್ದಂಥಹ ಸಾಂಪ್ರದಾಯಿಕ ಬಂಧನದ ಒಳಗೆ ಇಂಥಹ ಮಾತು ಮೂಡಿ ಬಂದದ್ದು ಬಹಳ ಗಮನಾರ್ಹವಾದದ್ದು, ಆ ಕಾಲದಲ್ಲಿ ಇದು ಬಂಡಾಯ ಎಂದೇ ನಾವು ಗ್ರಹಿಸಬಹುದು.
‘ಕೃಷ್ಣ ಎನಬಾರದೇ?’ ‘ಹರಿಯ ನೆನೆಯದ ನರಜನ್ಮವೇಕೆ?’, ‘ನಾರಾಯಣಾ ಎನ್ನಬಾರದೇ? ನಿಮ್ಮ ನಾಲಿಗೆಯೊಳು ಕಲ್ಲು ಜರಿದಿಹುದೆ? ಮುಳ್ಳು ಮುರಿದಿಹುದೆ?’ ಎಂಥ ಮಾತು ನೋಡಿ! ಇವೆಲ್ಲವೂ ಸಹ ಹರಿಯ ಜಪ-ನಾಮ ಸಂಕೀರ್ತನೆಯನ್ನ ಸೂಚಿಸುವಂಥವು” ಹರಿಯ ಸ್ಮರಣೆ ಮಾಡು ನಾಲಗೆ, ನರಹರಿಯ ಭಜಿಸು ಕಂಡ್ಯಾ?”
”ಗಾಯತಿ, ಉನ್ಮಾದವನ್ ನೃತ್ಯತಿ ಲೋಕದಾಸ್ಯತಾ” ಅನ್ನುವಂಥ ಮಾತಿದೆ. ಭಗವಂತನ ಮೇಲೆ ಅತ್ಯಂತ ಪ್ರೀತಿ ಉಂಟಾದಾಗ ಅಳು, ನಗು, ಹಾಡು, ಕುಣಿತ ಇತ್ಯಾದಿ ಲೋಕವನ್ನೇ ಮರೆಸುವಂಥ ವಿಚಿತ್ರ ಭಾವತೀವ್ರತೆಯ ಮನೋವೃತ್ತಿಗಳು ಉಂಟಾಗುತ್ತವೆ ಎಂದು ಹೇಳಲಾಗಿದೆ.
ಸಹಜವಾಗಿ ಭಗವದ್ಭಕ್ತಿಯ ಉತ್ಕಟತೆಯಲ್ಲಿ ಇಂಥಹ ಭಾವ ತೀವ್ರತೆಗಳು ಮನಸ್ಸನ್ನ ಕಾಡೋದುಂಟು. ಹರಿದಾಸರಲ್ಲಿಯು ಕೂಡಾ ಈ ಗೋಪಾಳ ಬುಟ್ಟಿಯನ್ನು ಹಿಡಿದು, ಗೆಜ್ಜೆ ಕಟ್ಟಿ ತಾಳವನ್ನು ತಟ್ಟುತ್ತ ಹೊರಟಾಗ, ಪುರಂದರ ದಾಸರು ಒಂದು ಕಡೆ ಇದನ್ನ ಹೇಳುತ್ತಾರೆ –
“ಹುಚ್ಚು ಹಿಡಿಯಿತು ಎನಗೆ ಹುಚ್ಚು ಹಿಡಿಯಿತು. ಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ, ಹುಚ್ಚುಹಿಡಿಯಿತು.”
ಹೇಗೆ ಚೈತನ್ಯರು ಈ ಉನ್ಮಾದದ ಅವಸ್ಥೆಯನ್ನ ಹೇಳುತ್ತಾರೋ, ಅದೇ ರೀತಿ ದಾಸ ಸಾಹಿತ್ಯದಲ್ಲೂ ಇಂಥಹದ್ದನ್ನ ನಾವು ಗಮನಿಸ್ತೇವೆ. ಚೈತನ್ಯರು ತಮ್ಮ ಶಿಷ್ಯರೊಂದಿಗೆ ಸಂವಾದ ಮಾಡುತ್ತಾ, ಭಗವದ್ಗೀತೆಯ ಅನೇಕ ಶ್ಲೋಕಾರ್ಥಗಳನ್ನು ವಿವೇಚನೆ ಮಾಡುತ್ತಾರೆ. ದಾಸ ಸಾಹಿತ್ಯದಲ್ಲಿಯೂ ಕೂಡ ಭಗವದ್ಗೀತೆಯ ಪ್ರಭಾವವನ್ನ ಬಹಳಷ್ಟು ನೋಡಬಹುದು.
ಒಂದು ಕಡೆ ಚೈತನ್ಯರು ಹೇಳುತ್ತಾರೆ;
ಅನ್ತವತ್ತು ಫಲಂ ತೇಷಾಂ
ತದ್ ಭವತ್ಯಲ್ಪಮೇಧಸಾಮ್|
ದೇವಾನ್ ದೇವಯಜೋ ಯಾನ್ತಿ
ಮದ್ಭಕ್ತಾ ಯಾನ್ತಿ ಮಾಮಪಿ ।।
ಭಗವದ್ಗೀತೆಯ ಏಳನೇ ಅಧ್ಯಾಯದ ಒಂದು ಶ್ಲೋಕ ಇದು. ಬೇರೆ ಬೇರೆ ದೇವತೆಗಳ ಉಪಾಸನೆಯಿಂದ ಪ್ರಯೋಜನವಿಲ್ಲ. ಪುರುಷೋತ್ತಮನಾದಂಥಹ, ದೇವೋತ್ತಮನಾದ ಭಗವಂತನನ್ನು ಮಾತ್ರ ಆರಾಧಿಸು ಎಂದು ಹೇಳಲಿಕ್ಕಾಗಿ ಚೈತನ್ಯರು ಈ ಶ್ಲೋಕವನ್ನು ಹೇಳಿದ್ದುಂಟು. ದಾಸರಲ್ಲೂ ಹಾಗೆ ಅಲ್ವೇ?
ಹರಿಸರ್ವೋತ್ತಮತ್ವ ‘ಶ್ರೀ ಮನ್ ಮಧ್ವಪತೇ ಹರಿಃ ಪರತರಃ’ ಎನ್ನುವ ಶ್ಲೋಕಾರ್ಥವನ್ನು ಒಳಗೊಂಡಂತೆಯೇ ದಾಸ ಸಾಹಿತ್ಯದ ರಚನೆಗಳು ನಡೆದಿವೆ. ಬೇರೆ ದೈವಗಳ ಉಪಾಸನೆಯಿಂದ ಪ್ರಯೋಜನವಿಲ್ಲ” ಎನ್ನುವ ಮಾತನ್ನ ಹರಿದಾಸರು ಕೂಡ ಹೇಳುತ್ತಾರೆ.

ಈ ತಾರತಮ್ಯ ಪ್ರಕರಣ ಒಂದು ಸಿದ್ಧವಾದಂತಹ ತಾತ್ವಿಕ ನೆಲೆಗಟ್ಟು, ಅದರ ಹಿಂದೆ ಅವರು ಹೇಳುತ್ತಾರೆ “ವಿಧಿತ ನೆಲೆಗಳೆಲ್ಲ ವಿಷ್ಣುವಿನ ಹಿಂದೆ. “ಪುರುಷೋತ್ತಮತ್ವ”, -ನಾರಾಯಣ ಮೊತ್ತ ಮೊದಲ ದೇವರು. ಉಳಿದ ದೈವಗಳೆಲ್ಲ ವಿಷ್ಣುವಿನ ಹಿಂದೆ ಇದು ತಾರತಮ್ಯ ಜ್ಞಾನದ ಆಲೋಚನೆ.
“ಬದುಕಿದೆನು ಬದುಕಿದೆನು ಭವ ಎನಗೆ ಇಲ್ಲಿ’ – ಕನಕದಾಸರು ಹೇಳುವಂಥಹ ಕೀರ್ತನೆಯಲ್ಲಿಯೂ ಕೂಡ ‘ಹರಿ ತೀರ್ಥಪ್ರಸಾದ ಜಿಹ್ವೆಗೆ ದೊರಕಿತು, ಹರಿಕಥಾಮೃತ ಎನ್ನ ಕಿವಿಗಾಯಿತು. ಹರಿಯದಾಸರು ಎನ್ನ ಬಂಧುಗಳು ಆದರು, ಹರಿಯ ಶ್ರೀ ಮುದ್ರೆ, ಎನಗಾಭರಣವಾಯಿತು.” ಆ ಮುದ್ರಾಧಾರಣದ ಆಲೋಚನೆಯನ್ನು ಕೂಡ ಕನಕದಾಸರು ತಮ್ಮ ಕೀರ್ತನೆಯ ಒಳಗೆ ತಂದಿಟ್ಟು ಈ ವೈಷ್ಣವ ತತ್ತ್ವವನ್ನು ಪ್ರತಿಪಾದಿಸಿದ್ದಾರೆ.
ಈ ಆಧ್ಯಾತ್ಮದ ಹಂದರದ ಹೊರಗೆ ನಾವು ಆಲೋಚನೆ ಮಾಡುವಾಗ, ಈ ಹೊತ್ತಿನ, ಈ ಕ್ಷಣದ ಆಧುನಿಕ ಆಲೋಚನೆಗಳ ಹಿನ್ನೆಲೆಯಲ್ಲಿಯೂ ಕೂಡ ಚೈತನ್ಯ ಪಂಥ ಮತ್ತು ದಾಸ ಪಂಥ ಬಹಳ ಸಾಮ್ಯತೆಯನ್ನು ಹೊಂದಿದೆ ಎಂದು ನಾನು ಅಂದುಕೊಳ್ಳುತ್ತೇನೆ.
ಜಾತ್ಯತೀತವಾದ ಆಲೋಚನೆಗಳು… ಚೈತನ್ಯರು ಕೂಡ ಇದನ್ನು ಬಂಗಾಳದಲ್ಲಿ ಹೇಳಿದರು. ಮುಸಲ್ಮಾನರನ್ನ ವೈಷ್ಣವರಾಗಿಸಿದಂತಹ ಒಂದು ಪವಾಡ ಚೈತನ್ಯರ ಜೀವನ ಚರಿತ್ರೆಯಲ್ಲಿ ನಾವು ನೋಡ್ತೇವೆ. ಆ ಮುಸಲ್ಮಾನರನ್ನ ವೈಷ್ಣವರಾಗಿಸಿದ ಮೇಲೆ, ಅವರಿಗೆ ‘ಪಠಾಣ ವೈಷ್ಣವ’ ಎಂಬ ಹೆಸರನ್ನ ಬಂಗಾಳದಲ್ಲಿ ಕೊಟ್ಟರು.
ಪಂಢರಾಪುರದಲ್ಲಿ ತುಕಾರಾಮನಿಗೆ ದೀಕ್ಷೆಯನ್ನು ಚೈತನ್ಯರು ಕೊಟ್ಟರು. ಬಹಳ ಮುಖ್ಯವಾಗಿ ಬಂಗಾಳದಲ್ಲಿ ನವಾಬ್ ಹುಸೇನ್ ಷಾ ಎಂಬುವಂಥಹ ಅರಸನ ಆಸ್ಥಾನದಲ್ಲಿ ಮಂತ್ರಿಗಳಾಗಿದ್ದಂತಹ ದಬೀರ್ ಖಾಸ್ ಮತ್ತು ಸಾಕರ್ ಮಲ್ಲಿಕ್ ಎನ್ನುವ ಇಬ್ಬರನ್ನ ತನ್ನ ವೈಷ್ಣವ ಆಕರ್ಷಣೆಯ ಒಳಗೆ ಸೆಳೆದುಕೊಂಡಂತಹ ಚೈತನ್ಯರು, ಅವರಿಗೆ ಸನಾತನ ಗೋಸ್ವಾಮಿ ಮತ್ತು ರೂಪ ಗೋಸ್ವಾಮಿ ಎಂಬ ಹೊಸ ಹೆಸರನ್ನು ಕೊಡ್ತಾರೆ.
ಹೀಗೆ ಜಾತ್ಯತೀತವಾದ ನೆಲೆಗಟ್ಟಿನಲ್ಲಿ ಕೂಡ ಚೈತನ್ಯ ಪಂಥದ ಆಲೋಚನೆ ಮೂಡಿದೆ. ಅದೇ ರೀತಿಯ ಆಲೋಚನೆಯನ್ನು ಕನ್ನಡದ ದಾಸ ಸಾಹಿತ್ಯ ಚಳುವಳಿಯಲ್ಲಿ ಕೂಡ ನಾವು ನೋಡುತ್ತೇವೆ. ಬಡೇ ಸಾಬ್ ಅಂಥವರೂ ಹರಿದಾಸರಾಗಿದ್ದಾರೆ.
“ವ್ಯಕ್ತಿಗೆ ಗುಣಗಳು ಮುಖ್ಯ, ಕುಲಾಚಾರವಲ್ಲ?” ಅನ್ನುವಂಥ ಮಾತನ್ನು ಚೈತನ್ಯರು ಬಹಳ ಅವಧಾರಣೆಯಿಂದ ಹೇಳ್ತಾರೆ. ದಾಸ ಪಂಥದಲ್ಲಿಯೂ ಕೂಡ ನಾವು “ಕುಲ ಕುಲ ಕುಲವೆಂದು ಹೊಡೆದಾಡದಿರು” ಎನ್ನುವ ಮಾತನ್ನು ಹೇಳುತ್ತೇವೆ. ಹೊಲೆಯ ಹೊರಿಗಿಹನೇ? ಊರೊಳಗಿಲ್ಲವೇ?ಎನ್ನುವಂಥ ಪ್ರಶ್ನೆಯನ್ನು ದಾಸರು ಕೇಳುತ್ತಾರೆ.
ಜಾತೀಯವಾದಂಥಹ ಆಲೋಚನೆಗಳಲ್ಲಿ ಎಂಥಹ ಅನರ್ಥ ಪರಂಪರೆಗಳಿವೆ ಎನ್ನುವುದನ್ನು ಆ ಕಾಲದಲ್ಲಿ ದಾಸರು ಪ್ರಕಟಪಡಿಸಿದ್ದರು ಅನ್ನೋದು ಕನ್ನಡದ ನೆಲದ ಹೆಚ್ಚುಗಾರಿಕೆ ಅಂತ ನಾನು ಅಂದ್ಕೊಳ್ತೇನೆ. ಕುಲ ಯಾವುದು? ಸತ್ಯ ಸುಖವುಳ್ಳ ಜನರಿಗೆ ಯಾಕೆ ಬೇಕು ಕುಲಾಚಾರಗಳು?
ಸತ್ಯವನ್ನು, ಸುಖವನ್ನು ಅನುಭವಿಸಬೇಕಾದಂಥಹ ನೀವುಗಳು ವೃಥಾ ಈ ಕುಲಗಳ ಆಲೋಚನೆಯನ್ನು ಯಾಕೆ ಮಾಡುತ್ತೀರಿ? ಎನ್ನುವಂಥ ಮಾತುಗಳನ್ನ ದಾಸ ಸಾಹಿತ್ಯ ನಮಗೆ ಹೇಳಿಕೊಟ್ಟಿದೆ. ವಿಶೇಷವಾಗಿ ಚೈತನ್ಯರ ಬಗ್ಗೆ ನಾವು ಮಾತನಾಡುವಾಗ ಅವರ ಶಿಕ್ಷಾಷ್ಟಕದ ಬಗ್ಗೆ ನಾವು ವಿವೇಚನೆ ಮಾಡಬೇಕು.
ಅದರ ಹೆಸರೇ ಹೇಳುವ ಹಾಗೆ ಅಲ್ಲಿರುವುದು ಕೇವಲ 8 ಪದ್ಯಗಳು. ಎಂಟು ಪದ್ಯಗಳ ಗುಚ್ಛ ಅದು ಅಷ್ಟೇ. ಅದು ಹೇಳುವಂತಹ ಸಾರಭೂತವಾದಂತಹ ಭಾವ, ಇಡೀ ಚೈತನ್ಯ ಪಂಥವನ್ನ ನಮ್ಮ ಕಣ್ ಮುಂದೆ ಕಟುತ್ತದೆ. ಅಜ್ಞಾನವನ್ನು ಕಳೆದು, ಜನನ ಮರಣಗಳಿಂದ ನನ್ನನ್ನು ಪಾರು ಮಾಡು. ನಾಮಸಂಕೀರ್ತನೆ ಮಾಡುವ ಭಾಗ್ಯವನ್ನು ಕೊಡು ಎನ್ನುವಂಥಹ ಪ್ರಾರ್ಥನೆ. ಭಕ್ತಿ ಸೇವೆಯನ್ನು ಕರುಣಿಸು ಎನ್ನುವ ವಿನಂತಿ. ಇದೇ ಈ ಹಾಡುಗಳಲ್ಲಿ ತುಂಬಿಕೊಂಡಿದ್ದವು.
ದಾಸ ಸಾಹಿತ್ಯದಲ್ಲಿ ಇರೋದು ಏನು? ಇವೇ ಅಲ್ವೇ? ”ಹುಟ್ಟಿಸಲು ಬೇಡವಿನ್ನು, ಹುಟ್ಟಿಸಿದರೆ ಪಾಲಿಸಿನ್ನು ಅಷ್ಟು ಮಾತ್ರ ಬೇಡಿಕೊ೦ಬೆ ಕೃಷ್ಣರಾಯನೇ!” ಎಷ್ಟು ಸರಳವಾದ ಭಾಷೆಯಲ್ಲಿ ತನ್ನ ಮನಸ್ಸಿನ ಒಳಗೆ ಇರುವಂಥಹ ಆ ಭಾವ ಬಂಧನದಿಂದ ಬಿಡುಗಡೆಗೊಳ್ಳಬೇಕೆಂಬ ಅಭೀಪ್ಸೆ ಹೇಗೆ ಪ್ರಕಟವಾಗಿದೆ ನೋಡಿ!
“ನಾ ನಿನ್ನ ಧ್ಯಾನದೊಳಿರಲು’ ಇರಬಹುದು, ಬಿನ್ನಹಕೆ ಬಾಯಿಲ್ಲವಯ್ಯ’ ಇರಬಹುದು, ‘ಮರೆಯಬೇಡ ಮನವೇ ನೀನು ಹರಿಯ ಸ್ಮರಣೆಯನು’ ಎನ್ನುವಂಥ ಕೀರ್ತನೆಯಿರಬಹುದು. ಇಲ್ಲೆಲ್ಲ ಈರೀತಿಯ, ಚೈತನ್ಯ ಪಂಥದ ಶಿಕ್ಷಾಷ್ಟಕದಲ್ಲಿ ಯಾವ ರೀತಿಯ ಪ್ರಾರ್ಥನೆ ಮಡುಗಟ್ಟಿ ನಿಂತಿದೆಯೋ, ಅದೇ ಭಾವವನ್ನ ದಾಸ ಸಾಹಿತ್ಯದ ಕೀರ್ತನೆಗಳೂ ಕೂಡ ಪ್ರಕಟಪಡಿಸುತ್ತವೆ.

“ಹುಲ್ಲಿಗಿಂತಲೂ ನಿಕೃಷ್ಟ ಎಂಬ ಭಾವನೆ ನನ್ನದು” ಎಂದು – ಜೀವಿ, ಆ ದೇವನಲ್ಲಿ ಪ್ರಾರ್ಥನೆ ಮಾಡ್ತಾನೆ. ದಾಸ ಸಾಹಿತ್ಯ ಕೂಡ ಅದನ್ನೇ ಹೇಳೋದಿಲ್ವೆ? ‘ದಾಸ ದಾಸರಾ ಮನೆಯ ಕಸ ಗುಡಿಸುವಾ ದಾಸ’ ಎಂಥಹಾ ಮಾತು! ‘ದಾಸ’ ಅನ್ನುವ ಶಬ್ದದಲ್ಲಿಯೇ ಈ ‘ತೃಣಸಮಾನ’ ಎನ್ನುವ ಭಾವವಿದೆ. ಅಲ್ಲಿ ಅಹಂಕಾರ ಅಳಿಯುವ ಒಂದು ವಿನೀತಪ್ರಜ್ಞೆ ಇದೆ. “ದಾಸನ ಮಾಡಿಕೋ ಎನ್ನ” ಅಥವಾ “ಹೆಣ್ಣು-ಹೊನ್ನುಗಳ ಆಸೆಯಿಲ್ಲ ಎನ್ನುವಂಥಹ ಶಿಕ್ಷಾಷ್ಟಕದ ಭಾವನೆಯನ್ನು ಕೂಡ ಹರಿದಾಸ ಸಾಹಿತ್ಯ ಅಷ್ಟೇ ಸಷ್ಟವಾಗಿ ಹೇಳುತ್ತದೆ.
“ಆರು ಹಿತವರು ನಿನಗೆ? ಈ ಮೂವರೊಳಗೆ!” ಅನ್ನುವಂಥ ಹಾಡಿರಬಹುದು… “ಮುನ್ನ ಶತಕೋಟಿ ರಾಜರುಗಳಾಳಿದ ನೆಲವ ತನ್ನದೆಂದೆನುತ ಶಾಸನವ ಬರೆಸಿ, ಬಿನ್ನಾಣದ ಮನೆಕಟ್ಟಿ ಕೋಟಿ ಕೊತ್ತಲವಿಕ್ಕಿ, ಚೆನ್ನಿಗನ ಅಸುವಳಿಯ ಹೊರಗೆ ಹಾಕುವರು.” ಹಾಗಾಗಿ ಈ ಭೂಮಿಯ ಬಗ್ಗೆ ವ್ಯಾಮೋಹ ಬೇಡ. ಹೆಣ್ಣಿನ ಬಗ್ಗೆ ಮಮಕಾರ ಬೇಡ. ಎನ್ನುವಂತಹ ಶಿಕ್ಷಾಷ್ಟಕದ ಆಕಾಂಕ್ಷೆಗಳನ್ನು ದಾಸ ಸಾಹಿತ್ಯವೂ ಕೂಡ ಅಷ್ಟೇ ಗಂಭೀರವಾಗಿ ಪ್ರತಿಪಾದನೆ ಮಾಡಿದೆ.
“ಮಾಯ ಪಾಶದ ಬಲೆಯೊಳಗೆ ಸಿಕ್ಕಿರುವಂಥ ಕಾಯ-ಪ೦ಚೇಂದ್ರಿಯಗಳು ನನ್ನವು”, ಎಷ್ಟು ಸೊಗಸಾದ೦ಥ ನಿವೇದನ ನೋಡಿ. ಈ ಮಾಯಪಾಶದೊಳಗೆ ನಾನು ಸಿಕ್ಕಿ ಬಿದ್ದಿದ್ದೇನೆ ಅನ್ನುವ ನಿವೇದನೆ, ಈ ರೀತಿಯ ಶರಣಾಗತಿ, ವಿನೀತ ಭಾವನೆಯ ಶ್ರದ್ಧೆಯಿಂದ ಮೂಡಿಬಂದಂಥದ್ದು. ಭಗವಂತನ ವಿರಹ – ಶಿಕ್ಷಾಷ್ಟಕದಲ್ಲಿ ಬಂದಿರುವಂತಹ ಮತ್ತೊಂದು ಮುಖ್ಯ ಸೆಲೆ – ಭಗವಂತನಿಗೋಸ್ಕರ ಸದಾ ಹಪಹಪಿಸುವಂಥಾದ್ದು.
”ಹನ್ನೆರಡು ವರ್ಷದಲ್ಲಿ ಅತ್ಯಂತ ದೀರ್ಘವಾಗಿದ್ದಂಥ ಈ ಕಾಲ, ನನಗೆ ಬಹಳ ಕಷ್ಟವಾಗ್ತಿದೆ. ಒಂದು ನಿಮಿಷ ಅನ್ನೋದು, ಹನ್ನೆರಡು ವರ್ಷದ ಹಾಗೆ ಅನ್ನಿಸ್ತಾ ಇದೆ. ನಿನ್ನ ಅಗಲಿಕೆಯನ್ನ ಸಹಿಸಲಾರೆ” ಎಂದು ಚೈತನ್ಯರು ಹೇಳುತ್ತಾರೆ.
ದಾಸ ಪಂಥದ “ಎಲ್ಲಿ ನೋಡಿದಿರಿ… ಪಿಳ್ಳಂಗೋವಿಯ ಚೆಲ್ವಕೃಷ್ಣನ ಎಲ್ಲಿ ನೋಡಿದಿರಿ?” ಅನ್ನುವ ಹುಡುಕಾಟ ಇದೆಯಲ್ಲ, ಇದು ಕೂಡ ವಿರಹೋತ್ಕಟತೆಯೇ ಅಂತ ನಾವು ಹೇಳಬಹುದು.
ಹೀಗೆ, ಸಾಮ್ಯಗಳ ಬಗ್ಗೆ ಸುಲಭವಾಗಿ ಹೇಳಬಹುದು. ಆದ್ರೆ ಒಬ್ಬ ಎರಡೂ ಆಧ್ಯಾತ್ಮಿಕ ಸಿದ್ಧಾಂತಗಳ ವಿನೀತ ವಿದ್ಯಾರ್ಥಿಯಾಗಿ ಅವುಗಳಲ್ಲಿ ಇರಬಹುದಾದ ಸೂಕ್ಷ್ಮ ವ್ಯತ್ಯಾಸಗಳನ್ನು ಕೂಡ ನಾವು ಗ್ರಹಿಸಬೇಕು. ಯಾಕೆಂದ್ರೆ, ವಿಚಾರ ಸಂಕಿರಣದ ಈ ವೇದಿಕೆಯಲ್ಲಿ ಒಂದಷ್ಟು ಬುದ್ಧಿಗಮ್ಯವಾದ ಆಲೋಚನೆಯನ್ನು ನಾವು ಮಾಡಬೇಕು.
ಭಾವಗಮ್ಯದಿಂದ ಹೊರಗೆ ಬಂದು, ವೇದಾಂತದ ಹಿನ್ನೆಲೆಯಲ್ಲಿ ದಾಸ ಸಾಹಿತ್ಯಕ್ಕೂ ಚೈತನ್ಯ ಪಂಥಕ್ಕೂ ಕೂದಲೆಳೆಯ ಅಂತರವಿದೆ ಅಂತ ನನಗೆ ಅನ್ನಿಸ್ತದೆ. ಅದು ಸತ್ಯ ಕೂಡ. ದಾಸ ಪಂಥ, ನೀವೆಲ್ರೂ ತಿಳಿದ ಹಾಗೆ, ಮಾಧ್ವ ತತ್ತ್ವಜ್ಞಾನದ ಅಡಿಗಲ್ಲಿನ ಮೇಲೆ ನಿರ್ಮಾಣಗೊಂಡಂಥದ್ದು. ನಾನು ಅದನ್ನು ಮಧ್ವ ತತ್ತ್ವಜ್ಞಾನ ಎನ್ನುತ್ತೇನೆ. ಅದರ ಮುಖ್ಯ ಜೀವ ಕಲೆ ಪಂಚಭೇದಗಳು. ಜೀವ-ಜೀವ ಭೇದ, ಮತ್ತು ಜಡ-ಜಡ ಭೇದ.
ಈ ಪಂಚಭೇದಗಳ ಮನುಷ್ಯ – ಮತ್ತು ಭಗವಂತ ಬೇರೆ ಬೇರೆ, ಮನುಷ್ಯ – ಪ್ರಕೃತಿ ಬೇರೆ ಬೇರೆ, ಮನುಷ್ಯ- ಪ್ರಕೃತಿ ಬೇರೆ ಬೇರೆ, ಎನ್ನುವಂಥಹ ತ್ರಿಕೋನದಲ್ಲಿ ಈ ಪಂಚಭೇದಗಳನ್ನ ವಿವರಿಸಲಾಗಿದೆ. ಯಾವುದೇ ಎರಡು ಒಂದಾಗಿರುವುದಿಲ್ಲ ಒಂದರ ಹಾಗಿರುವುದಿಲ್ಲ. ಒಂದರ ರೀತಿ ಮತ್ತೊಂದಿಲ್ಲ ಅನ್ನುವಂಥದ್ದು ಮಧ್ವಾಚಾರ್ಯರ ದ್ವೈತ ಸಿದ್ಧಾಂತದ ತಿರುಳು.
ಎರಡು ಒಂದೇ ಬಗೆಯದಾಗಿರೋದಿಲ್ಲ. ಒಂದೇ ಅರಳಿ ಮರದ ಎರಡು ಎಲೆಗಳನ್ನು ತೆಗೆದು ನೋಡಿದ್ರೆ, ಅವೆರಡೂ ಒಂದೇ ರೀತಿಯದ್ದಾಗಿರೋದಿಲ್ಲ. ಹಾಗಾಗಿ, ‘ದ್ವೈತ’ ಅನ್ನೋದು ಈ ಜಗತ್ತಿನ ಬಹಳ ಸ್ಪಷ್ಟವಾದಂಥಹ ಲಕ್ಷಣ ಅನ್ನೋದು ಮಾಧ್ವ ತತ್ತ್ವಜ್ಞಾನದ ತಿರುಳು. ಆದ್ರೆ, ಚೈತನ್ಯ ಪಂಥದಲ್ಲಿ ಇದನ್ನು ಮೀರಿದಂಥಹ ಒಂದು ಗಂಭೀರವಾದ ಆಲೋಚನೆಯಿದೆ.
ಅದನ್ನ “ಅಚಿಂತ್ಯ ಭೇದಾಭೇದ” ಎಂದು ಕರೆಯುತ್ತಾರೆ. ಅರ್ಥಾತ್ ಅಭೇದದಲ್ಲಿ ಭೇದವಿದೆ. ಆದರೆ ಅದು ಅಚಿಂತ್ಯವಾಗಿದೆ. ಬಹಳ ಕ್ಲಿಷ್ಟವಾದಂತಹ ವಾಕ್ಯರಚನೆ ಅನ್ನಿಸಿದರೂ ಮನಸ್ಸಿನಲ್ಲಿ ಅನುಸಂಧಾನ ಮಾಡ್ಕೊಂಡ್ರೆ ಇದನ್ನ ಗ್ರಹಿಸಲಿಕ್ಕೆ ಸುಲಭ. ಅಭೇದದಲ್ಲಿ ಭೇದವಿದೆ. ಆದರೆ ಅದು ಅಚಿಂತ್ಯವಾಗಿದೆ.
ಈ ಸೃಷ್ಟಿ ಭಗವಂತನದು. ಅ೦ದರೆ ಅದು ಭಗವಂತನ ಹಾಗೆಯೇ ಇದೆ. ಆದರೆ ಭಗವಂತ ಈ ಸೃಷ್ಟಿಗಿಂತ ಭಿನ್ನ. ಒಂದೆಡೆ ಸಾಮ್ಯ, ಮತ್ತೊಂದೆಡೆ ವ್ಯತ್ಯಾಸ, ಹೀಗೆ ಏಕಕಾಲಕ್ಕೆ ಹೋಲಿಕೆ ಮತ್ತು ವ್ಯತ್ಯಾಸಗಳನ್ನ ʼಅಚಿಂತ್ಯ’ ಅನ್ನುವ ಪದ ಹೇಳುತ್ತದೆ.

ಶಂಕರರಲ್ಲಿ : ಅದ್ವೈತ, ಎಲ್ಲವೂ ಒಂದೇ ಅನ್ನುವಂಥ ಭಾವನೆ. ವ್ಯತ್ಯಾಸವೇ ಇಲ್ಲ. ಮಾಧ್ವರಲ್ಲಿ ವ್ಯತ್ಯಾಸವೇ ಎಲ್ಲ. ಆದರೆ, ರಾಮಾನುಜಾಚಾರ್ಯರು ಮೊತ್ತ ಮೊದಲ ಬಾರಿಗೆ ಇವೆರಡರ ಈ ಸೂಕ್ಷ್ಮವನ್ನು ಗ್ರಹಿಸಿದರು. ಮೊದಲು ಹೇಳಿದವರು ಅವರು. ಅದನ್ನ ಚೈತನ್ಯರು ಮತ್ತೆ ಮುಂದುವರಿಸಿದರು.
ಜೀವದಲ್ಲಿ ದೇವನ ಗುಣ ಇದೆ. ಆದರೆ ದೇವನಷ್ಟು ಗಾತ್ರದಲ್ಲಿ ಜೀವ ವಿಕಾಸಗೊಂಡಿಲ್ಲ. ಭಗವಂತನ ಗುಣ ಜೀವನಲ್ಲಿದೆ. ಆದರೆ ಗಾತ್ರದಲ್ಲಿ ಜೀವ, ದೇವನಿಗಿಂತ ಬೇರೆ. ದೇವನಿಗೆ ಪೂರ್ಣಜ್ಞಾನವಿದೆ. ಜೀವನಿಗೆ ಅಲ್ಪಜ್ಞಾನವಿದೆ. ದೇವ ಸಂಪೂರ್ಣ ಆಕರ್ಷಕ. ಆದ್ರೆ ಮನುಷ್ಯ? ಎಲ್ಲೋ ಮಹಾತ್ಮನಿಗೆ ಸ್ವಲ್ಪ ಆಕರ್ಷಣೆಯಿರುತ್ತದೆಯಷ್ಟೆ, ದೇವ ಸರ್ವತ್ರ ವ್ಯಾಪಿಯಾಗಿದ್ದಾನೆ.
ಮನುಷ್ಯ ಇದ್ದಲ್ಲೇ ಇರುತ್ತಾನೆ. ಹೀಗೆ ಅಚಿಂತ್ಯ ಭೇದಾಭೇದ ಅನ್ನೋದು ಗಂಭೀರ ಆಲೋಚನೆಗಳನ್ನೊಳಗೊಂಡಂತಹ ಒಂದು ವಿಶಿಷ್ಟ ಸಿದ್ಧಾಂತ. ಈ ಹಿನ್ನೆಲೆಯಲ್ಲಿ ಚೈತನ್ಯಪಂಥ ಇದೆ. ಆದರೆ ದಾಸ ಸಾಹಿತ್ಯದಲ್ಲಿ ಮಧ್ವಾಚಾರ್ಯರ ದೈತ ಸಿದ್ಧಾಂತವನ್ನು ನಾವು ನೋಡಬಹುದು. ಹೀಗಾಗಿ ಚೈತನ್ಯಪಂಥದಲ್ಲಿ ನಾವು ಮಧುರ ಭಾವನೆಯನ್ನ ಕಾಣಬಹುದು.
‘ಸದಾ ಭಗವದ್ಧ್ಯಾನ’ ಇದು ಚೈತನ್ಯ ಪಂಥದ ಉಸಿರು. ಆದರೆ, ಆ ಧ್ಯಾನದಲ್ಲಿ ಬೇಡಿಕೆಗಳ ಪಟ್ಟಿ ಇಲ್ಲ. ನಮ್ಮಲ್ಲಿ ಸಾಮಾನ್ಯವಾಗಿ ನಾವು ಭಗವಂತನನ್ನ ಭಜಿಸುವುದು ಅಂದರೆ, ನಮ್ಮ demandಗಳ list ಅನ್ನು ಅವನೆದುರು ಇಡೋದು. ಆದರೆ, ನಿಜವಾದ ಭಗವತ್ ಪ್ರೀತಿಯಲ್ಲಿ ಬೇಡಿಕೆಗಳಿರೋದಿಲ್ಲ.
ಭಗವದ್ಗೀತೆಯ ಪ್ರಕಾರ ಹೇಳುವುದಾದರೆ, ಇದೇ ‘ಕರ್ಮಯೋಗ.’ ದಾಸ ಸಾಹಿತ್ಯದಲ್ಲೂ ಇಂಥಹಾ ಒಲವುಗಳನ್ನ, ಒಳ ನೋಟಗಳನ್ನ ನೋಡಬಹುದು. “ಕೆರೆಯ ನೀರನು ಕೆರೆಗೆ ಚೆಲ್ಲಿ” ನನ್ನದೇನಿದೆ ಅಲ್ಲಿ? ನಿನ್ನಿಂದ ನನಗೇನು ಬಂದಿದೆಯೋ ಅದನ್ನ ನಿನಗೇ ಸಮರ್ಪಿಸುತ್ತೇನೆ ಅಂತ ಪುರಂದರದಾಸರು ಹೇಳುತ್ತಾರೆ.
ಚೈತನ್ಯ ಪಂಥಕ್ಕೂ ದಾಸ ಪಂಥಕ್ಕೂ ಹಲವು ಸಮೀಕರಣಗಳನ್ನ ನಾವು ನೋಡಬಹುದು.
“ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ.”
ಈ ಜನ್ಮ ಬಹಳ ಮುಖ್ಯವಾದುದು ಅದನ್ನು ಹಾಳು ಮಾಡಿಕೊಳ್ಳಬೇಡ ಎನ್ನುವ ಮಾತಿನ ಹಿಂದೆ ಕರ್ಮಯೋಗದ ಸಿದ್ಧಾಂತವನ್ನು ನಾವು ಕಾಣಬಹುದು. ಆದರೆ, ಚೈತನ್ಯ ಪಂಥಕ್ಕಿಂತ ದಾಸಪಂಥ ವಿಭಿನ್ನವಾಗೋದು ಒಂದು ಕಡೆ – ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎನ್ನುವ ಸಾಲಿನಲ್ಲಿ ಈ ಜಗತ್ತಿನ ಮಿಥ್ಯತೆಯನ್ನು ಹೇಳುವ ವೈರಾಗ್ಯದ ಉತ್ತುಂಗ ಎದ್ದು ಕಾಣುತ್ತದೆ.
ಇನ್ನೊಂದು ಪ್ರಮುಖ ವ್ಯತ್ಯಾಸ – ಚೈತನ್ಯ ಪಂಥದಲ್ಲಿ ಕೃಷ್ಣ ಸ್ವಯಂಪೂರ್ಣ ಅವತಾರ. ಆದರೆ ದಾಸ ಸಾಹಿತ್ಯದಲ್ಲಿ ಆತನನ್ನ ವಿಷ್ಣುವಿನ 8ನೇ ಅವತಾರವಾಗಿ ಪರಿಗಣಿಸ್ತೇವೆ. ಆದರೆ ಚೈತನ್ಯ ಪಂಥದಲ್ಲಿ ಅವನೇ ಮೂಲ ಪ್ರತಿಪಾದನೆ. ಮೂಲ ರೂಪ ಅವನೇ. ಅವನು ಅವತಾರಿಯಲ್ಲ ಇದು ಸೈದ್ಧಾಂತಿಕವಾಗಿ ಬಹಳ ಮೂಲಭೂತ ವ್ಯತ್ಯಾಸ.
ಆದರೆ, ಒಟ್ಟಿನಲ್ಲಿ ಈ ಎರಡೂ ಪಂಥಗಳು ಭಾರತೀಯ ಮಣ್ಣಿನಲ್ಲಿ ಭಕ್ತಿಯ ಭಾವುಕತೆಯ ಬೀಜವನ್ನು ಬಿತ್ತಿ, ನಮ್ಮನ್ನು ಆಧ್ಯಾತ್ಮಿಕ ಅನುಭಾವದ ಬಂಧದಲ್ಲಿ ಬೆಸೆದು ಭಾರತಾದ್ಯಂತ ಬೆಳೆದ ಭಕ್ತಿಯ ಸ್ರೋತದಲ್ಲಿ ನಾವು ಇದನ್ನು ನೋಡಬಹುದು. ಹೀಗಾಗಿ, ಚೈತನ್ಯ ಮತ್ತು ದಾಸ ಪಂಥಗಳನ್ನ ‘ಭಕ್ತಿ ಚಳುವಳಿಯ ವಿಶಿಷ್ಟ ಕೊಡುಗೆಗಳು ಎಂದು ನಾವು ನಿಸ್ಸಂದೇಹವಾಗಿ ಹೇಳಬಹುದು.
ನಮಸ್ಕಾರ.






Leave a Reply