– ಡಾ.ಬಿ.ಆರ್. ಸುಹಾಸ್
“ಶ್ರೀಕೃಷ್ಣನ ಮಹಿಮೆಯನ್ನು ವರ್ಣಿಸುವುದು ಸುಲಭದ ಕೆಲಸವಲ್ಲ. ಬಾಲಕ-ವೃಂದಾವನಚಂದ್ರ ಶ್ರೀಕೃಷ್ಣ, ಮಥುರೆಯ ಕಂಸ ಸಂಹಾರಿ ಕೃಷ್ಣ, ದ್ವಾರಕಾಧೀಶ ಶ್ರೀಕೃಷ್ಣ, ಪಾಂಡವಮಿತ್ರ, ಅಧರ್ಮಶತ್ರು, ಗೋಪೀವಲ್ಲಭ, ಅಷ್ಟಮಹಿಷಿಯರೊಡೆಯ…

ಅವನ ಸಾಹಸ-ಲೀಲೆಗಳೊಂದೇ ಎರಡೇ!? ಸಧ್ಯಕ್ಕೆ ಅನಂತ ಗುಣಗಣಿ ಶ್ರೀಕೃಷ್ಣನ ಮಿತ್ರತ್ವವನ್ನು ಸಾರುವ ‘ಅಪದ್ಬಾಂಧವ ಶ್ರೀಕೃಷ್ಣ” ಸರಣಿಯನ್ನು ಆರಂಭಿಸುತ್ತಿದ್ದೇವೆ. ಮುಂದೆ ಇದು ವಿವಿಧ ಮಾರ್ಗಗಳಲ್ಲಿ ಹರಿದು, ಶ್ರೀಕೃಷ್ಣನ ದಿವ್ಯ ಲೀಲೆಯನ್ನು ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಿದೆ.”
ಮಹಾವೃಕ್ಷವೊಂದರ ಎರಡು ದೊಡ್ಡ ಶಾಖೆಗಳು ಎದುರುಬದುರಾಗಿದ್ದವು! ಕುರುವಂಶವೇ ಆ ಮಹಾವೃಕ್ಷ! ಪಾಂಡವ, ಕೌರವರೆಂಬ ದಾಯಾದಿಗಳೇ ಆ ಎರಡು ಶಾಖೆಗಳು! ಜಗದ್ವಿಖ್ಯಾತವಾದ ಕುರುವಂಶದಲ್ಲಿ ಜನಿಸಿದ ಪಾಂಡವರೈವರೂ ನೂರು ಕೌರವರೂ ಒಬ್ಬರ ವಿರುದ್ಧ ಒಬ್ಬರು ತಿರುಗಿದ್ದರು!
ಅವರೀರ್ವರ ನಡುವೆ ಈಗ ಮಹಾ ಸಮರವೊಂದು ಜರುಗಬೇಕಿತ್ತು! ಪಕ್ಷಪಾತ ಮಾಡದ ರಣಭೂಮಿಯಲ್ಲಿ ಜಯಶಾಲಿಯೆಂದು ನಿರ್ಣಯಿಸಲ್ಪಟ್ಟವರು ಭೂಮ೦ಡಲದ ಚಕ್ರವರ್ತಿಯಾಗುತ್ತಿದ್ದರು! ಯುದ್ಧ ಮಾಡುತ್ತಾ ಅಸುನೀಗಿದವರು ವೀರಸ್ವರ್ಗ ಸೇರುತ್ತಿದ್ದರು!
ಗೆದ್ದರೆ ರಾಜ್ಯಲಕ್ಷ್ಮಿ, ಸತ್ತರೆ ಸ್ವರ್ಗ ಲಕ್ಷ್ಮಿ! ಈ ಮಹಾಯುದ್ಧದಲ್ಲಿ ಅನೇಕಾನೇಕ ರಾಜರು ಪಾಲ್ಗೊಳ್ಳುತ್ತಿದ್ದರು. ಕೆಲವರು ಪಾಂಡವರ ಕಡೆ, ಕೆಲವರು ಕೌರವ ಕಡೆ ನಿಂತು ತಮ್ಮ ಸಹಾಯ ಹಸ್ತ ನೀಡಲು ತಮ್ಮ ಬೃಹತ್ ಸೈನ್ಯಗಳೊಂದಿಗೆ ಕುರುಕ್ಷೇತ್ರಕ್ಕೆ ಹೊರಟಿದ್ದರು! ಏಕೆ ಈ ಯುದ್ಧ? ಏಕೆ ಅನೇಕ ನಿರಪರಾಧಿಗಳ ಸಾವು, ನೋವು? ಯುದ್ಧಗಳಿಗೆ ಕಾರಣವಾದರೂ ಏನು? ಹೆಣ್ಣು…ಹೊನ್ನು….ಮಣ್ಣು!
ಅಂಧ ದೊರೆ ಧೃತರಾಷ್ಟ್ರನ ರಾಜ್ಯಲಾಲಸೆಯೆಂಬ ವಿಷದ ತೊಟ್ಟು, ಅವನ ಔರಸ ಪುತ್ರ ದುರ್ಯೋಧನನ ಮೈ ತು೦ಬಾ ತುಂಬಿ ಅವನನ್ನು ವಿಷಸರ್ಪವಾಗಿಸಿಬಿಟ್ಟಿತು!
ವಿಷವುಣಿಸುವಿಕೆ, ಅರಗಿನ ಮನೆಯಲ್ಲಿ ಸುಡುವ ಯತ್ನ, ಜೂಜಿನ ಮೂಲಕ ವಂಚಿಸಿ ರಾಜ್ಯಾಪಹರಣಮಾಡುವುದು, ಸಭೆಯಲ್ಲಿ ಸಾಧ್ವಿ ಸ್ತ್ರೀಯ ಮಾನಭಂಗಯತ್ನ, ಶಾಂತವಾದ ಅರಣ್ಯದಲ್ಲೂ ಮನಶ್ಯಾಂತಿ ಕದಡುವ ಯತ್ನ, ಹೀಗೆ, ಸಾಧು ಶಿರೋಮಣಿಗಳಾದ ಪಾಂಡವರ ಮೇಲೆ ದುಷ್ಟ ದುರ್ಯೋಧನ ತನ್ನ ವಿಷ ಜ್ವಾಲೆಗಳನ್ನು ಒಂದೊಂದಾಗಿ ಕಕ್ಕಿ ಪರಮನೀಚ ಎನಿಸಿಕೊಂಡ!
ಈ ವಿಷಜ್ವಾಲೆಗಳು ಭೀಮಾರ್ಜುನರ ಕೋಪವೆಂಬ ಕಿಚ್ಚನ್ನು ಹೊತ್ತಿಸಿದ್ದರೂ, ಯುಧಿಷ್ಠಿರನ ಧರ್ಮಶ್ರದ್ಧೆ, ಕ್ಷಮೆ, ತಾಳ್ಮೆಗಳೆಂಬ ತಂಪಾದ ಜಲಬಿಂದುಗಳಿಂದ ಶಾಂತವಾಗಿ ತಣ್ಣಗಾಗಿಬಿಟ್ಟಿತ್ತು! ಎಷ್ಟಾದರೂ, ಧರ್ಮಮಾರ್ಗದ ಪಾಂಡವರು ಶಾಂತಿಪ್ರಿಯರು; ತಮ್ಮ ನೋವು, ಸೇಡುಗಳನ್ನು ಮರೆತು ತಮ್ಮ ಪಾಲಿನ ರಾಜ್ಯವನ್ನು ಅಪೇಕ್ಷಿಸಿದರು.
ಉಭಯಕುಲಹಿತಾರ್ಥಕ್ಕಾಗಿ, ಭಗವಂತ ಶ್ರೀಕೃಷ್ಣನೇ ಶಾಂತಿದೂತನಾಗಿ ಹೋದ! ಕೇವಲ ಐದು ಗ್ರಾಮಗಳನ್ನು ಕೊಟ್ಟರೂ ಸಾಕು, ಯುದ್ಧ ತಪ್ಪುವುದೆಂದ! ಶಾಂತಿಗಾಗಿ ವಿಶ್ವಪ್ರಯತ್ನ ಮಾಡಿದ! ಆದರೆ ದುರ್ಯೋಧನ, ಒಂದು ಸೂಜಿ ಮೊನೆಯಷ್ಟು – ಭೂಮಿಯನ್ನೂ ಕೊಡುವದಿಲ್ಲವೆಂದು ಹಟ ಹಿಡಿದ! ಕೃಷ್ಣನನ್ನೇ ಬಂಧಿಸಲು ಯತ್ನಿಸಿದ! ಹೀಗೆ ಶಾಂತಿ ಸಂಧಾನ ವಿಫಲವಾಯಿತು! ಶ್ರೀಕೃಷ್ಣನು ತನ್ನ ವಿಶ್ವರೂಪವನ್ನೇ ತೋರಿಸಿದರೂ ಕೌರವನಿಗೆ ಅವನ ಮಹಿಮೆ ತಿಳಿಯಲಿಲ್ಲ!
ಪಾಂಡವರು ಈಗೇನು ಮಾಡಬೇಕು? ಪುನಃ ಕಾಡಿಗೆ ಹೋಗಿ ಭಿಕ್ಷೆಯೆತ್ತಬೇಕೇ? ಅಥವಾ, ಯುದ್ಧ ಮಾಡಿ ತಮ್ಮ ರಾಜ್ಯ ಪಡೆದು ನಿಜ ಕ್ಷತ್ರಿಯರಂತೆ ಬಾಳಬೇಕೆ? ಅವರ ತಾಯಿ ಕುಂತಿಯೂ ಕೃಷ್ಣನೂ ಎರಡನೆಯದನ್ನೇ ಸಮರ್ಥಿಸಿದರು! ಯುದ್ಧ ಅನಿವಾರ್ಯವಾಯಿತು.
ಪಾಂಡವದ್ವೇಷಿಗಳೂ ಅಧರ್ಮಿಗಳೂ ಆದ ಅನೇಕ ರಾಜರು ಕೌರವನ ಕಡೆ ನಿಂತರು. ಹೀಗಾಗಿ ಅದು ಧರ್ಮಾಧರ್ಮಸೆಣಸಾಟವಾಗಿ, ಭಗವಂತನ ಭೂಭಾರಹರಣ ಕಾರ್ಯಕ್ರಮವೂ ಆಯಿತು! ದುರ್ಯೋಧನನ ಪಕ್ಷದಲ್ಲಿ ಅವನ ಅನ್ನದ ಋಣ ತೀರಿಸಲು ಭೀಷ್ಮ, ದ್ರೋಣ, ಕೃಪರು, ನಿಂತರಲ್ಲದೇ, ಕರ್ಣ, ಅಶ್ವತ್ಥಾಮ, ಜಯದ್ರಥ, ಭೂರಿಶ್ರವಸು, ಮೊದಲಾದ ಅಸಮಾನ ವೀರರಿದ್ದರು!
ಯುದ್ಧವೆಂಬ ಮಹಾಸಾಗರದಲ್ಲಿ ಮೊಸಳೆ, ತಿಮಿಂಗಿಲಗಳಂಥ ಇಂಥ ದುರತಿಕ್ರಮ ವೀರರಿಂದ ಪಾಂಡವರನ್ನು ಕಾಪಾಡುವವರಾರು? ಈ ದುರ್ಗಮ ಸಾಗರವನ್ನು ಕೂದಲೂ ಕೊ೦ಕದಂತೆ ದಾಟಿಸಬಲ್ಲ ಅಂಬಿಗನಾರು?! ಇನ್ನಾರು? ಸಂಸಾರಸಾಗರವನ್ನೇ ದಾಟಿಸುವ ದೇವೋತ್ತಮ ಪರಮ ಪುರುಷ ಶ್ರೀಕೃಷ್ಣ! ಇದುವರೆಗಿನ ಆಪತ್ತುಗಳಿಂದ ಕಾಪಾಡಿದ ಮಹಾಮಹಿಮ! ಅವನೇ ಪಾಂಡವರ ಬಲದ ಬೆಂಬಲ!
ಯುದ್ಧಕ್ಕೆ ಇನ್ನೂ ಸ್ವಲ್ಪ ಕಾಲವಿರಲು, ಮಧ್ಯಮಪಾಂಡವನಾದ ಅರ್ಜುನನು – ಯುದ್ಧದಲ್ಲಿ ತನ್ನ ಪರಮಮಿತ್ರ ಶ್ರೀಕೃಷ್ಣನ ಸಹಾಯವನ್ನು ಕೋರಲು ದ್ವಾರಕೆಗೆ ಹೊರಟ. ಈ ವಿಷಯವನ್ನು ಗೂಡಚಾರರ ಮುಖಾಂತರ ತಿಳಿದುಕೊಂಡ ಚತುರ ದುರ್ಯೋಧನ, ತಾನೂ ಅಂತಹ ಸಹಾಯವನ್ನು ಕೋರಲು ದ್ವಾರಕೆಗೆ ದೌಡಾಯಿಸಿದ!
ಇಬ್ಬರೂ ಏಕ ಕಾಲಕ್ಕೆ ದ್ವಾರಕೆಯನ್ನು ತಲುಪಿ ಶ್ರೀಕೃಷ್ಣನ ಅರಮನೆಯನ್ನು ಪ್ರವೇಶಿಸಿದರು! ಆಗ ಶ್ರೀಕೃಷ್ಣನು ಅಂತಃಪುರದಲ್ಲಿ ನಿದ್ರಿಸುತ್ತಿರುವನೆಂದು ಸೇವಕರಿಂದ ತಿಳಿಯಿತು. ಇಬ್ಬರೂ ಶಯನಾಗಾರಕ್ಕೆ ಹೋಗಿ, ಶ್ರೀಕೃಷ್ಣನ ಅರಮನೆಯನ್ನು ಪ್ರವೇಶಿಸಿದರು! ಆಗ ಶ್ರೀಕೃಷ್ಣನು ಏಳುವವರೆಗೂ ಅವನ ಬಳಿಯೇ ಕಾಯತೊಡಗಿದರು.
ಮೊದಲು ಒಳಬಂದ ದುರ್ಯೋಧನನು ಅವನ ತಲೆದಿಂಬಿನ ಬಳಿಯಿದ್ದ ಆಸನದಲ್ಲಿ ಕುಳಿತರೆ, ಅನಂತರ ಬಂದ ಅರ್ಜುನನು ಶ್ರೀಕೃಷ್ಣನ ಪಾದಗಳ ಬಳಿ, ಕೈಮುಗಿದುಕೊಂಡು ನಿಂತನು. ಸ್ವಲ್ಪ ಹೊತ್ತಿನ ಬಳಿಕ, ನಿದ್ರೆ ತಿಳಿದೆದ್ದು ಕೃಷ್ಣನು ತನ್ನ ಎದುರಿಗಿದ್ದ ಅರ್ಜುನನನ್ನು ಕಂಡು ಆಶ್ಚರ್ಯಗೊಂಡನು!
‘ಇದೇನು ಅರ್ಜುನ, ಧಿಡೀರನೆ!? ಯಾವಾಗ ಬಂದೆ?” ಕೃಷ್ಣನು ನಗುತ್ತಾ ಕೇಳಿದ.
“ಮೊದಲು ಬಂದದ್ದು ನಾನು ಕೃಷ್ಣ!” ಅರ್ಜುನನು ಉತ್ತರಿಸುವ ಮೊದಲೇ ದುರ್ಯೋಧನನು ಆತುರದಿಂದ ಹೇಳಿದ!
“ಓಹೋ! ದುರ್ಯೋಧನ! ನೀನೂ ಬಂದಿರುವೆಯಾ?” ಕೃಷ್ಣನು ಮುಖವನ್ನು ತಿರುಗಿಸಿ ನಗುತ್ತಾ ಹೇಳದ, “”ಇಬ್ಬರಿಗೂ ಸುಸ್ವಾಗತ! ಬನ್ನಿ…. ಕುಳಿತುಕೊಳ್ಳಿ! ಇಬ್ಬರೂ ಹೀಗೆ ಬಂದಿರುವುದುನ್ನು ನೋಡಿದರೆ ಏನೋ ಬಲವಾದ ಕಾರಣವೇ ಇರಬೇಕು…. ಹಸ್ತಿನಾವತಿಯಲ್ಲಿ ಎಲ್ಲರೂ ಕುಶಲವಷ್ಟೇ?”
‘ಎಲ್ಲರೂ ಕುಶಲ! ಈಗ ಇನ್ನೇನು ಆರಂಭವಾಗಲಿರುವ ಯುದ್ಧದಲ್ಲಿ ನಿನ್ನ ಸಹಾಯಹಸ್ತ ಯಾಚಿಸಿ ನಾವಿಬ್ಬರೂ ಬಂದಿರುತ್ತೇವೆ!” ದುರ್ಯೋಧನನೆಂದ, “ನಾವಿಬ್ಬರೂ ನಿನಗೆ ಸಮಾನ ಮಿತ್ರರೇ ಆಗಿದ್ದೇವೆ! ನಮ್ಮಿಬ್ಬರಲ್ಲೂ ನಿನಗೆ ಸಮಾನ ಬಾಂಧವ್ಯವಿದೆ.
ಆದರೆ ನಾನೇ ಇಲ್ಲಿಗೆ ಮೊದಲು ಆಗಮಿಸಿದುದರಿಂದ ನೀನು ನನ್ನ ಪ್ರಾರ್ಥನೆಯನ್ನೇ ಮನ್ನಿಸಿ ನನ್ನ ಪಕ್ಷಕ್ಕೇ ಸೇರಬೇಕೆಂದು ಕೋರಿಕೊಳ್ಳುವೆ! ಲೋಕದಲ್ಲಿ ಸತ್ಪುರುಷರು ಸದಾ ಪ್ರಥಮಾಗತನ ಪ್ರಾರ್ಥನೆಯನ್ನೇ ಪುರಸ್ಕರಿಸುತ್ತಾರೆ! ನೀನಾದರೋ ಪುರುಷೋತ್ತಮನು! ನಾನಿನ್ನೇನು ಹೇಳಬೇಕು?”
“ದುರ್ಯೋಧನ” ಕೃಷ್ಣನು ಹೇಳಿದ, “ನೀನು ಮೊದಲು ಬಂದಿರಬಹುದು! ಆದರೆ ನಾನು ಮೊದಲು ನೋಡಿದ್ದು ಅರ್ಜುನನನ್ನು! ನಾನು ನಿಮ್ಮಿಬ್ಬರಿಗೂ ಸಹಾಯ ಮಾಡುತ್ತೇನೆ! ಆದರೆ ಅರ್ಜುನ ನಿನಗಿಂತ ವಯಸ್ಸಿನಲ್ಲಿ ಚಿಕ್ಕವನಾದ್ದರಿಂದ ಮೊದಲು ಆರಿಸಿಕೊಳ್ಳುವ ಹಕ್ಕು ಶಾಸ್ತ್ರ ಸಮ್ಮತವಾಗಿ ಅವನಿಗಿದೆ…”

ಈ ಮಾತಿಗೆ ದುರ್ಯೋಧನನು ಅಸಮಾಧಾನಗೊಂಡರೂ ಏನೂ ಹೇಳದೆ ಸುಮ್ಮನಿದ್ದನು. ಆಗ ಕೃಷ್ಣನು ಅರ್ಜುನನ ಕಡೆಗೆ ತಿರುಗಿ ಹೇಳಿದನು, “ಪಾರ್ಥ! ನನ್ನಂತೆಯೇ ಬಲಾಢ್ಯರೂ ಅತುಳ ಪರಾಕ್ರಮಿಗಳೂ ದುರತಿಕ್ರಮರೂ ಆದ ನಾರಾಯಣರೆಂಬ ಹತ್ತುಕೋಟಿ ಯುದ್ಧ ಸಮರ್ಥ ಗೋಪಾಲಸೈನಿಕರಿದ್ದಾರೆ!
ನನಗೇ ಸೇರಿರುವ ಇವರೆಲ್ಲರೂ ಒಂದು ಪಕ್ಷದಲ್ಲಿದ್ದರೆ, ನಾನು ಇನ್ನೊಂದು ಪಕ್ಷದಲ್ಲಿರುತ್ತೇನೆ! ಆದರೆ ನಾನು ಆಯುಧವನ್ನೂ ಹಿಡಿಯುವುದಿಲ್ಲ, ಯುದ್ಧವನ್ನೂ ಮಾಡುವುದಿಲ್ಲ! ನಿನಗೆ ಯಾವುದು ಬೇಕೋ ಅದನ್ನು ಆರಿಸಿಕೋ! ಮೊದಲ ಅವಕಾಶ ನಿನಗೆ!”
”ಕೃಷ್ಣ!” ಅರ್ಜುನನು ಹೇಳಿದ, ““ನನಗೆ ನೀನು ಬೇಕು! ನೀನೇ ನನ್ನ ಪಕ್ಷದಲ್ಲಿರು!” “ಆಹಾ!! ಬಹಳ ಸಂತೋಷ!’ ದುರ್ಯೋಧನನು ನಗುಮೊಗದಿಂದ ಹೇಳಿದ, “”ನನಗೆ ಆ ಗೋಪಾಲ ಸೈನಿಕರೇ ಇರಲಿ!”
ತಾನು ಬ೦ದ ಕಾರ್ಯವು ಸಫಲವಾಯಿತೆಂದು ಸಂತುಷ್ಟನಾದ ದುರ್ಯೋಧನ, ಶ್ರೀಕೃಷ್ಣನಿಗೆ ಕೃತಜ್ಞತೆ ಸಲ್ಲಿಸಿ ತನ್ನ ನೆಚ್ಚಿನ ಗುರು ಬಲರಾಮನ ಬಳಿಗೆ ಹೋದ. ಬಲರಾಮನು ದುರ್ಯೋಧನನ ಗದಾಯುದ್ಧ ಕೌಶಲ್ಯದಲ್ಲಿ ಅಭಿಮಾನವುಳ್ಳವನಾಗಿದ್ದರೂ, ಸಹೋದರ ಶ್ರೀಕೃಷ್ಣನು ಯುದ್ಧವಿಮುಖನಾದುದರಿಂದ ತಾನೂ ಹಾಗೆಯೇ ಇರಬಯಸಿ ಯಾವ ಪಕ್ಷಕ್ಕೂ ಸೇರದೇ ತೀರ್ಥಯಾತ್ರೆ ಹೋಗಲು ನಿಶ್ಚಯಿಸಿರುವುದಾಗಿ ಅವನಿಗೆ ಹೇಳಿ ಅವನನ್ನು ಆಶೀರ್ವದಿಸಿದ.
ಅನಂತರ, ಕೃತವರ್ಮನೆಂಬ ಯಾದವವೀರನು ದುರ್ಯೋಧನನಿಗೆ ಒಂದು ಅಕ್ಷೌಹಿಣಿ ಸೈನ್ಯವನ್ನು ನೀಡಿದ! ಇನ್ನು ತನಗೇ ವಿಜಯವೆಂದು ಭಾವಿಸಿ ಹರ್ಷೋಲ್ಲಾಸಗಳಿಂದ ದುರ್ಯೋಧನನು ಹಸ್ತಿನಾವತಿಗೆ ಹಿಂದಿರುಗಿದ.
ಇತ್ತ, ಶ್ರೀಕೃಷ್ಣನು ಅರ್ಜುನನ್ನು ಪ್ರಶ್ನಿಸಿದ, “ಅರ್ಜುನ ನಾನು ಯುದ್ಧ ಮಾಡುವುದಿಲ್ಲವೆಂದು ತಿಳಿದ ಮೇಲೂ ನನ್ನನ್ನೇ ಏಕೆ ಆರಿಸಿಕೊಂಡೆ?”
”ಪುರುಷರ್ಷಭ! ಆಯುಧಸಹಿತವಾಗಿ ಇಲ್ಲವೇ ಆಯುಧರಹಿತನಾಗಿ, ನೀನೊಬ್ಬನೇ ಎಲ್ಲಾ ಶತ್ರುಗಳನ್ನೂ ಸಂಹರಿಸಲು ಸಮರ್ಥ! ಅಂತೆಯೇ, ನಿನ್ನ ಅನುಗ್ರಹದಿಂದ ನಾನೂ ಒಬ್ಬನೇ ಎಲ್ಲಾ ಶತ್ರುಗಳನ್ನೂ ಸಂಹರಿಸಬಲ್ಲೆ! ಕೀರ್ತಿವಂತನೆಂದು ಖ್ಯಾತನಾಗಿರುವ ನಿನ್ನ ಹಿಂದೆಯೇ ಕೀರ್ತಿದೇವತೆ ಓಡಿಬರುತ್ತಾಳೆ!
ಅಂಥ ನಿನ್ನನ್ನು ನನ್ನ ಪಕ್ಷದಲ್ಲಿಟ್ಟುಕೊಂಡರೆ ನನಗೂ ಮಹಾಕೀರ್ತಿ ಬರುವುದಲ್ಲವೇ? ಕೃಷ್ಣ! ಬಹುಕಾಲದಿಂದ ನನಗೊಂದು ಆಸೆಯಿದೆ; ಅದೆಂದರೆ ನಿನ್ನ ಸಾರಥ್ಯದಲ್ಲಿ ಯುದ್ಧ ಮಾಡಬೇಕೆನ್ನುವುದು! ನನ್ನ ಸಾರಥಿಯಾಗಿ ನನ್ನಾಸೆಯನ್ನು ಪೂರೈಸುವೆಯಾ?” ಅರ್ಜುನ ಹೇಳಿದ.
“ನನ್ನೊಂದಿಗೆ ಸ್ಪರ್ಧಿಸುವುದು ನಿನಗೆ ಯುಕ್ತವೇ ಹೌದು ಪಾರ್ಥ! ನಿನ್ನ ಆಸೆಯಂತೆ ನಾನು ನಿನ್ನ ಸಾರಥಿಯಾಗುತ್ತೇನೆ!” ಕೃಷ್ಣ ಹೇಳಿದ.
”ಬಹಳ ಸಂತೋಷ ಕೃಷ್ಣ!” ಅರ್ಜುನನು ನಗುತ್ತಾ ಕೃಷ್ಣನನ್ನು ಆಲಂಗಿಸಿದ, “ಇನ್ನೇನು ಶತ್ರುಗಳನ್ನು ಗೆದ್ದಂತೆಯೇ!”
ಕೃಷ್ಣಾರ್ಜುನರಿಬ್ಬರೂ ಯಾದವ ಪ್ರಮುಖರೊಂದಿಗೆ ಯುಧಿಷ್ಠಿರನ ಬಳಿಗೆ ಹೋದರು.
ಮಹಾಯುದ್ಧದ ದಿನ ಸಮೀಪಿಸುತ್ತಿತ್ತು. ಯುದ್ಧವು, ಧರ್ಮಕ್ಷೇತ್ರವೆನಿಸಿದ ಕುರುಕ್ಷೇತ್ರದಲ್ಲಿ ನಿಯೋಜಿಸಲ್ಪಟ್ಟಿತ್ತು. ಈ ಸಂದರ್ಭದಲ್ಲಿ ವೇದವ್ಯಾಸರು ಮಹಾರಾಜ ಧೃತರಾಷ್ಟ್ರನ ಬಳಿ ಬಂದು ಯುದ್ಧ ನೋಡಲು ಸಾಧ್ಯವಾಗುವಂತೆ ದೃಷ್ಟಿಯನ್ನು ಪರಿಪಾಲಿಸುವೆನೆಂದರು!
ಆದರೆ ತನ್ನ ಬಂಧು ಬಾಂಧವರೇ ಯುದ್ಧದಲ್ಲಿ ಕೊಲೆಯಾಗುವುದನ್ನು ನೋಡಲು ಇಷ್ಟಪಡದ ಅವನು, ಯುದ್ಧ ವಿವರಗಳನ್ನು ಮಾತ್ರ ಯಥಾವತ್ತಾಗಿ ಕೇಳಬೇಕೆಂದು ಆಸೆಪಟ್ಟ. ಆಗ ವ್ಯಾಸರು, ಸಂಜಯನೆಂಬ ಸಚಿವನಿಗೆ ದಿವ್ಯದೃಷ್ಟಿಯನ್ನು ದಯಪಾಲಿಸಿ ಕುಳಿತಲ್ಲೇ ಯುದ್ಧವನ್ನು ವೀಕ್ಷಿಸಲು ಸಾಧ್ಯವಾಗುವಂತೆ ಮಾಡಿದರು.
ಯುದ್ಧದ ದಿನ ಬಂದೇ ಬಂತು! ಧೃತರಾಷ್ಟ್ರನು ಕುತೂಹಲದಿಂದ ಪ್ರಶ್ನಿಸಿದ, ‘ಸಂಜಯ! ಆ ಕುರುಕ್ಷೇತ್ರದಲ್ಲಿ ಯುದ್ಧಕಾಂಕ್ಷಿಗಳಾದ ಪಾಂಡವರೂ ನನ್ನವರೂ ಏನು ಮಾಡಿದರು?”
ಸಂಜಯನು ವರ್ಣಿಸಿದ, ”ಮಹಾರಾಜ! ಎರಡೂ ಪಕ್ಷಗಳ ಬೃಹತ್ ಸೇನೆಗಳು ಸಜ್ಜಾಗಿ ನಿಂತಿವೆ! ಪಾಂಡವರ ಕಡೆ ಏಳು ಅಕ್ಷೌಹಿಣೀ ಸೈನ್ಯವಿದ್ದರೆ, ನಿನ್ನ ಮಗನ ಪಕ್ಷದಲ್ಲಿ ಹನ್ನೊಂದು ಅಕ್ಷೌಹಿಣೀ ಸೈನ್ಯವಿದೆ. ನಿನ್ನ ಮಗನ ಬಳಿಯೇ ಹೆಚ್ಚಿನ ಬಲವಿದ್ದರೂ ಅವನು ಅದೇಕೋ ಸ್ವಲ್ಪ ಅಳುಕಿನಲ್ಲಿ ದ್ರೋಣರ ಬಳಿ ಹೋಗಿ ಮಾತನಾಡುತ್ತಿದ್ದಾನೆ.”
‘ಗುರುವರ್ಯ!” ದುರ್ಯೋಧನ ಹೇಳಿದ, “ಖಾಂಡವರ ಸೈನ್ಯವನ್ನು ನೋಡಿದಿರಾ? ಹೇಗೆ ಸಜ್ಜಾಗಿ ನಿಂತಿದೆ….! ಹಾಗೆ ನಿಲ್ಲಿಸಿರುವುದು ಬೇರಾರೂ ಅಲ್ಲ; ನಿಮ್ಮ ಧೀಮಂತ ಶಿಷ್ಯ, ದ್ರುಪದ ಪತ್ರ ದೃಷ್ಟದ್ಯುಮ್ನ! ಅವನೇ ಅವರ ದಂಡನಾಯಕ! ಆ ಮಹಾಸೈನ್ಯದಲ್ಲಿ ಎಂತೆಂಥ ವೀರರು, ಶೂರರು…
ಅಬ್ಬಬ್ಬಾ! ಭೀಮಾರ್ಜುನರಿಗೆ ಸರಿಸಾಟಿಯೆಂಬಂತೆ ಸಾತ್ಯಕಿ, ವಿರಾಟರು! ಮಹಾರಥನಾದ ದ್ರುಪದ! ಧೃಷ್ಟಕೇತು, ಚೇಕಿತಾನ, ಕಾಶೀರಾಜ, ಪುರುಜಿತ್, ಕುಂತಿಭೋಜ, ಶೈಬ್ಯ, ಯುಧಾಮನ್ಯು, ಅಭಿಮನ್ಯು, ದ್ರೌಪದೇಯರು, ಇವರೆಲ್ಲಾ ಹತ್ತು ಸಾವಿರ ಜನರೊಡನೆ ಹೋರಾಡಬಲ್ಲ ಮಹಾರಥರು! ಆದರೆ ಗುರುಗಳೇ, ನಾವೇನೂ ಕಡಿಮೆಯಿಲ್ಲ…
ನೀವಿದ್ದೀರಿ, ಭೀಷ್ಮರಿದ್ದಾರೆ, ಕರ್ಣ, ಕೃಪ, ಜಯದ್ರಥ, ವಿಕರ್ಣ, ಸೋಮದತ್ತನ ಪುತ್ರ ಭೂರಿಶ್ರವ, ಮೊದಲಾದ ಅನೇಕಾನೇಕ ವೀರರಿದ್ದಾರೆ! ಆದರೂ ನಮ್ಮ ದಂಡನಾಯಕರಾದ ಭೀಷ್ಮರನ್ನು ರಕ್ಷಿಸಲು ನಮ್ಮ ಸೈನ್ಯ ಸಾಲದೆನಿಸುತ್ತಿದೆ…. ಆ ಭೀಮನ ರಕ್ಷಣೆಯಲ್ಲಿರುವ ಪಾಂಡವಸೈನ್ಯವೇ ಹೆಚ್ಚು ಸಮರ್ಥವಾದಂತಿದೆ… ನೀವೆಲ್ಲರೂ ಬೇರೆ ಬೇರೆ ದಿಕ್ಕುಗಳಲ್ಲಿದ್ದು ಭೀಷ್ಮರನ್ನು ರಕ್ಷಿಸಿರಿ….
ದುರ್ಯೋಧನನ ಮುಖದಲ್ಲಿ ದುಗುಡವನ್ನು ಕಂಡ ಭೀಷ್ಮರು ಅವನ ಮನದಲ್ಲಿ ಧೈರ್ಯೋತ್ಸಾಹಗಳನ್ನು ತುಂಬಲು ಭಯಂಕರವಾಗಿ ಸಿಂಹನಾದ ಮಾಡಿ ಶಂಖವನ್ನೂದಿದರು! ಆಗ ಒಮ್ಮೆಲೇ ಶಂಖಭೇರಿ ಪಣವ ನಗಾರಿಗಳು ಮೊಳಗಿ ಎಲ್ಲೆಲ್ಲೂ ಮಹಾ ಶಬ್ದವನ್ನುಂಟು ಮಾಡಿದವು!
ಆಗ ಶ್ರೀಕೃಷ್ಣನು ತನ್ನ ಪಾಂಚಜನ್ಯವನ್ನೂ ಅರ್ಜುನನು ತನ್ನ ದೇವದತ್ತ ಶಂಖವನ್ನೂ ಊದಿದರು. ಅದನ್ನು ಭೀಮನ ಪೌಂಡ್ರವೂ, ಧರ್ಮಜನ ಅನಂತ ವಿಜಯವೂ ನಕುಲನ ಸುಘೋಷವೂ, ಸಹದೇವನ ಮಣಿಪುಷ್ಪಕವೂ ಹಿಂಬಾಲಿಸಿದವು! ಅನಂತರ, ಪಾಂಡವಪಕ್ಷದ ಇತರ ಪ್ರಮುಖರೂ ತಂತಮ್ಮ ಶಂಖಗಳನ್ನೂದಿದರು! ಈ ಭಯಂಕರ ಶಬ್ದಗಳು ಭೂಮ್ಯಾಕಾಶಗಳನ್ನು ತುಂಬಿ, ಮಹಾಪ್ರತಿಧ್ವನಿಗೈಯುತ್ತಾ ಕೌರವರ ಎದೆಬಿರಿಯುವಂತೆ ಮಾಡಿದವು!
ಅರ್ಜುನನು ಕೃಷ್ಣನಿಗೆ ಹೇಳಿದ, ‘ಕೃಷ್ಣ! ನಾನೊಮ್ಮೆ ಇಡೀ ಕೌರವ ಸೈನ್ಯವನ್ನು ನೋಡಬೇಕೆಂದಿರುವೆ ಎರಡೂ ಸೈನ್ಯಗಳ ನಡುವೆ ನಮ್ಮ ರಥವನ್ನು, ನಿಲ್ಲಿಸುವೆಯಾ…?”

ನಾಲ್ಕು ಶ್ವೇತಾಶ್ವಗಳನ್ನು ಹೂಡಲಟ್ಟ ಹನುಮಧ್ವಜದಿಂದ ರಾರಾಜಿಸುತ್ತಾ ಸಂಪೂರ್ಣ ಸಜ್ಜಾಗಿದ್ದ ಅರ್ಜುನನ ರಥದಲ್ಲಿ, ಕೊಟ್ಟ ಮಾತಿನಂತೆ ಕುದುರೆಗಳ ನೊಗ ಹಿಡಿದು ಸಾರಥಿಯಾಗಿ ಕುಳಿತಿದ್ದ ಶ್ರೀಕೃಷ್ಣ; ಈಗ ಅರ್ಜುನನು ಹೇಳಿದಂತೆ ರಥವನ್ನು ನಡೆಸಿ ಎರಡೂ ಸೇನೆಗಳ ಮಧ್ಯೆ ನಿಲ್ಲಿಸಿದ.
ಅರ್ಜುನನು ಇಡೀ ಕೌರವ ಸೈನ್ಯವನ್ನು ಚೆನ್ನಾಗಿ ಅವಲೋಕಿಸಿದ. ಅಲ್ಲಿ ಇದ್ದವರಾದರೂ ಯಾರು? ಪಿತೃಸಮಾನರಾದ ರಾಜರು, ಪಿತಾಮಹ ಭೀಷ್ಮರು, ಗುರುಗಳಾದ ದ್ರೋಣರು, ಸೋದರ ಮಾವಂದಿರು, ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು… ವಿವಿಧ ಬಂಧುಗಳು! ಈಗ ರಾಜ್ಯಕ್ಕಾಗಿ ಈ ಬಂಧುಬಾಂಧವರನ್ನೇ ಕೊಲ್ಲಬೇಕೇ? ಅರ್ಜುನನಿಗೆ ಮರುಕವಾಯಿತು.
“ಕೃಷ್ಣ…” ಅರ್ಜುನನು ಅಳುಕುತ್ತಾ ಹೇಳಿದ, “ನನಗೆ ಈ ಯುದ್ಧ ಬೇಡ! ಅಲ್ಲಿರುವವರೆಲ್ಲರೂ ನಮ್ಮ ಬಂಧುಗಳೇ! ನಮ್ಮವರನ್ನೇ ಕೊಂದು ಅವರ ಸಮಾಧಿಯ ಮೇಲೆ ಕಟ್ಟಿದ ರಾಜ್ಯದಲ್ಲಿ ಭೋಗಗಳನ್ನನುಭವಿಸುವುದೇ?! ಕೂಡದು! ಅದಕ್ಕಿಂತಲೂ ಭಿಕ್ಷೆಬೇಡುವುದೇ ಮೇಲು!
ಖಂಡಿತವಾಗಿಯೂ ಇದೊಂದು ಪಾಪಕಾರ್ಯ! ನನಗಾಗದು… ನನಗೆ ಗಂಟಲು ಒಣಗುತ್ತಿದೆ…. ಮೈ ನಡುಗಿ – ರೋಮಾಂಚನವಾಗುತ್ತಿದೆ… ಅಯ್ಯೋ! ಬೇಕಾದರೆ ಅವರೇ ನನ್ನನ್ನು ಕೊಂದು ಹಾಕಲಿ! ನಾನು ಮಾತ್ರ ಯುದ್ಧ ಮಾಡೆನು!”
ಪಾಂಡವರ ವಿಜಯಕ್ಕೆ ಮೂಲಕಾರಣನಾಗಬೇಕಿದ್ದ ಅರ್ಜುನನೇ ಹೀಗೆ ಜುಗುಪ್ಸಿತನಾಗಿ ಕುಳಿತುಬಿಟ್ಟ! ಅವನು ಯುದ್ಧ ಮಾಡದಿದ್ದರೆ, ಪಾಂಡವರ ಪಾಲಿಗೆ ಅದೇ ಒಂದು ದೊಡ್ಡ ಆಪತ್ತಾಗಿಬಿಡುತ್ತಿತ್ತು! ಆಗ ಪುರುಷೋತ್ತಮ ಶ್ರೀಕೃಷ್ಣ ಅವನ ನೆರವಿಗೆ ಬಂದ!
“ಪಾರ್ಥ! ” ಶ್ರೀಕೃಷ್ಣ ಹೇಳಿದ, “ಇದೇನಿದು ಇಂಥ ಸಮಯದಲ್ಲಿ ನಿನ್ನಲ್ಲಿ – ಇಂಥ ದೌರ್ಬಲ್ಯವುಂಟಾಯಿತು? ಇದು ಸ್ವರ್ಗವನ್ನು ನೀಡದ ಮತ್ತು ನಿನ್ನ ಹೆಸರು, ಕೀರ್ತಿಗಳನ್ನು ಹಾಳು ಮಾಡುವ ಆಲೋಚನೆ! ನೀನೇನೋ ಪ್ರಜ್ಞಾವಂತರಂತೆ ಮಾತಾಡುತ್ತಿರುವೆ! ಆದರೆ ನಿಜವಾದ ಬುದ್ಧಿವಂತರು ಇರುವವರಿಗಾಗಲೀ ಹೋದವರಿಗಾಗಲೀ ಅಳುವುದಿಲ್ಲ!
ಇಲ್ಲಿ ನೋಡು, ಈ ರಾಜರಾಗಲೀ ನೀನಾಗಲೀ ನಾನಾಗಲೀ ಹಿಂದೆ ಇರಲಿಲ್ಲ ಅಥವಾ ಮುಂದೆ ಇರುವುದಿಲ್ಲವೆಂದಿಲ್ಲ! ಸದಾ ಇರುತ್ತೇವೆ! ಆತ್ಮ ಬೇರೆ, ದೇಹ ಬೇರೆ! ದೇಹದಲ್ಲಿರುವ ಆತ್ಮನಿಗೆ ಬಾಲ್ಯ, ಯೌವನ, ಮುಪ್ಪ ಎಂಬ ದೇಹಾವಸ್ಥೆಗಳುಂಟಾಗುವಂತೆ ಇನ್ನೊಂದು ದೇಹ ದೊರೆಯುವುದು! ಇದರಿಂದ ಜ್ಞಾನಿಗಳು ಶೋಕಿಸುವುದಿಲ್ಲ!
ಹಳೆಯ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ಧರಿಸುವಂತೆ ಆತ್ಮವು ಜೀರ್ಣವಾದ ದೇಹವನ್ನು ತೊರೆದು – ಹೊಸದೇಹವನ್ನು ಪ್ರವೇಶಿಸುತ್ತದೆ! ಈ ಆತ್ಮವು ಅವಿನಾಶಿ; ಅದನ್ನು ಶಸ್ತ್ರಗಳು ತುಂಡರಿಸಲಾರವು, ಅಗ್ನಿಯು ದಹಿಸಲಾರದು, ನೀರು ಶೋಷಿಸಲಾರದು, ವಾಯು ಒಣಗಿಸಲಾರದು! ಇನ್ನು ನೀನು ಕೊಲ್ಲುವೆನೆಂದರೆ ಅದು ಮೂರ್ಖತನವಾದೀತು! ಆದ್ದರಿಂದ ಏಳು, ಈ ಹೇಡಿತನವನ್ನು ಬಿಟ್ಟು ಯುದ್ಧ ಮಾಡಿ ಕೀರ್ತಿ ಪಡೆ!”
ಕೃಷ್ಣನ ಮಾತುಗಳು ಅರ್ಜುನನಲ್ಲಿ ಮಿಂಚಿನ ಸಂಚಾರವುಂಟುಮಾಡುತ್ತಿದ್ದವು!
ಶ್ರೀಕೃಷ್ಣನು ಮುಂದುವರೆಸಿದನು, “ಅರ್ಜುನ! ನಾವು ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ಒಂದು ಯಜ್ಞವೆಂಬಂತೆ ನಿರಾಸಕ್ತಿಯಿಂದ ಮಾಡಬೇಕು. ಪ್ರತಿಯೊಬ್ಬರೂ ಅವರ ಸ್ವಭಾವಕ್ಕೆ ತಕ್ಕಂತೆ ಕೆಲಸ ಮಾಡುತ್ತಲೇ ಇರುತ್ತಾರೆ; ಕೆಲಸ ಮಾಡದೇ ಯಾರೊಬ್ಬರೂ ಒಂದು ಕ್ಷಣವೂ ಸುಮ್ಮನಿರಲಾರ!
ಜೀವನ ನಿರ್ವಹಣೆಗಾಗಿಯಾದರೂ ಕೆಲಸ ಮಾಡಲೇಬೇಕಲ್ಲವೆ? ನೀನು ಕ್ಷತ್ರಿಯನಾದುದರಿಂದ ನಿನ್ನ ಸ್ವಭಾವಕ್ಕನುಗುಣವಾಗಿ ಯುದ್ಧ ಮಾಡುವುದು ನಿನ್ನ ಕರ್ತವ್ಯವೇ ಆಗಿದೆ! ಕೆಲಸ ಮಾಡಲು ನಿನಗೆ ಅಧಿಕಾರವಿದೆ; ಆದರೆ ಅದರ ಫಲಾಫಲಗಳನ್ನು ನೀನಿಟ್ಟುಕೊಳ್ಳದೇ ನನಗೆ ಅರ್ಪಿಸು! ನಿನಗೋಸ್ಕರ ಯುದ್ಧ ಮಾಡುವ ಬದಲು, ಅದೇ ಕಾರ್ಯವನ್ನು ಭಗವಂತನಾದ ನನಗಾಗಿ ಮಾಡು! ಆಗ ನಿನಗೆ ಯಾವ ಪಾಪವೂ ಸಂಭವಿಸುವುದಿಲ್ಲ”
ಅರ್ಜುನನಿಗೆ ಶ್ರೀಕೃಷ್ಣ ಮಾತುಗಳಲ್ಲಿ ಸ್ವಲ್ಪ ಸ್ವಲ್ಪವೇ ಶ್ರದ್ಧೆಯುಂಟಾಯಿತು.
”ಪಾರ್ಥ!” ಶ್ರೀಕೃಷ್ಣ ಹೇಳಿದನು, ”ಈ ಜ್ಞಾನವನ್ನೆಲ್ಲಾ ನಾನು ಮೊದಲು ಸೂರ್ಯದೇವನಿಗೆ ಉಪದೇಶಿಸಿದ್ದೆ. ಅವನು ಅದನ್ನು ತನ್ನ ಪುತ್ರ ಮನುವಿಗೂ ಮನವೂ ತನ್ನ ಪುತ್ರ ಇಕ್ಷ್ವಾಕುವಿಗೂ ಉಪದೇಶಿಸಿದ. ಆದರೆ ಅದು ಕಾಲಕ್ರಮದಲ್ಲಿ ಲುಪ್ತವಾಗಿ ಹೋಯಿತು…”
“ಅದು ಹೇಗೆ ಕೃಷ್ಣ!” ಅರ್ಜುನನು ಆಶ್ಚರ್ಯದಿಂದ ಕೇಳಿದ, “ನೀನಾದರೋ ಈಚಿನವನು! ಸಾವಿರಾರು ಯುಗಗಳ ಹಿಂದೆ ನೀನು ಸೂರ್ಯನಿಗೆ ಹೇಗೆ ಉಪದೇಶಿಸಲು ಸಾಧ್ಯ?”
“ಅರ್ಜುನ”, ಕೃಷ್ಣ ಹೇಳಿದ, “ನನಗೂ ನಿನಗೂ ಅನೇಕಾನೇಕ ಜನ್ಮಗಳಾಗಿ ಹೋಗಿವೆ! ಅವೆಲ್ಲವೂ ನನಗೆ ನೆನಪಿದೆ, ಆದರೆ ನಿನಗಿಲ್ಲ! ಏಕೆಂದರೆ ನಾನು ಈ ವಿಶ್ವದ ಒಡೆಯ; ಹುಟ್ಟು ಸಾವುಗಳಿಲ್ಲದ ಭಗವಂತ! ಆದರೂ ಧರ್ಮಕ್ಕೆ ಚ್ಯುತಿ ಬಂದಾಗಲೆಲ್ಲಾ ನಾನು ಸ್ಟೇಚ್ಛೆಯಿಂದಲೇ ಅವತರಿಸುತ್ತೇನೆ!
ಸಾಧುಗಳನ್ನು ರಕ್ಷಿಸುವುದೂ ದುಷ್ಟರನ್ನು ಶಿಕ್ಷಿಸುವುದೂ ನನ್ನ ಅವತಾರದ ಉದ್ದೇಶ! ನನ್ನ ಜನ್ಮಕರ್ಮಗಳೆಲ್ಲವೂ ದಿವ್ಯವಾದುವು! ಇವನ್ನು ತಿಳಿಯುವುದರಿಂದಲೇ ಮನುಷ್ಯನು ಸಂಸಾರಬಂಧನದಿಂದ ಮುಕ್ತನಾಗಿ ನನ್ನ ಧಾಮವನ್ನು ಸೇರುತ್ತಾನೆ!
ನಾನು ಹೇಳಿದ ಆತ್ಮ, ನನ್ನ ಅಂಶವೇ ತನ್ನ ವಿವಿಧ ಕರ್ಮಾನುಸಾರ ವಿವಿಧ ಜನ್ಮಗಳನ್ನು ತಳೆಯುತ್ತದೆ. ಈ ಇಡೀ ವಿಶ್ವ, ಮತ್ತು ಸಕಲ ಜೀವರಾಶಿಗಳೂ ಜನ್ಮತಳೆದಿರುವುದು ನನ್ನಿಂದಲೇ! ಯಾರು ಎಲ್ಲ ಜೀವಿಗಳೂ ನನ್ನಲ್ಲಿವೆಯೆಂದೂ ನಾನು ಎಲ್ಲ ಜೀವಿಗಳಲ್ಲೂ ಇದ್ದೇನೆಂದು ಕಾಣುವರೋ, ಯೋಗಯುಕ್ತನಾದ ಅ೦ಥ ಸಮದರ್ಶಿಯು ಜ್ಞಾನಿ!”
“ಕೃಷ!” ಅರ್ಜುನನು ಬೆರಗಾಗಿ ಹೇಳಿದ, ”ನೀನು ಹೇಳಿದುದು ಸರಿಯೇ. ನಿನ್ನ ಮಾತಿನಿಂದ ನನ್ನ ಅಜ್ಞಾನ ತೊಲಗಿತು. ನಿನ್ನ ಆ ವಿಶ್ವರೂಪವನ್ನು ನಾನು ನೋಡಬಲ್ಲೆನೇ?”
ಆ ನನ್ನ ವಿಶ್ವರೂಪವನ್ನು ನೋಡುವುದು ಬಹಳ ಕಷ್ಟ ಅರ್ಜುನ. ಕೃಷ್ಣ ಹೇಳಿದ, ”ಅದಕ್ಕಾಗಿ ನಿನಗೆ ದಿವ್ಯ ಚಕ್ಷುಗಳನ್ನೇ ನೀಡುತ್ತೇನೆ!”
ಅನಂತರ ಶ್ರೀಕೃಷ್ಣನು ತನ್ನ ವಿಶ್ವರೂಪವನ್ನು ಅರ್ಜುನನಿಗೆ ತೋರಿಸಿದ! ಆ ದಿವ್ಯರೂಪಕ್ಕೆ ಅಸಂಖ್ಯ ಮುಖಗಳು, ಅಸಂಖ್ಯ ತೋಳುಗಳು, ಅಸಂಖ್ಯೆ ನಡುಗಳಿದ್ದವು! ಸಾವಿರಾರು ಸೂರ್ಯಗಳಿಗೆ ಸಮಾನವಾದ ಕಾಂತಿಯನ್ನು ಆ ರೂಪವು ಬೀರುತ್ತಿತ್ತು! ಅಸಂಖ್ಯ ಆಭರಣಗಳನ್ನೂ ಆಯುಧಗಳನ್ನೂ ಧರಿಸಿದ್ದ ಆ ರೂಪದಲ್ಲಿ ಇಡೀ ಜಗತ್ತೇ ಇತ್ತು! ಇಷ್ಟಲ್ಲದೇ ಪಾಂಡವ ಕೌರವ ವೀರರನೇಕರು ಆ ರೂಪದ ಕೋರೆದಾಡೆಗಳುಳ್ಳ ಭಯಂಕರ ಬಾಯಿಗಳೊಳಗೆ ವೇಗವಾಗಿ ಪ್ರವೇಶಿಸುತ್ತಿದ್ದರು!

ಶ್ರೀಕೃಷ್ಣ ಹೇಳಿದ, ”ಈ ಲೋಕವನ್ನೇ ನಾಶಮಾಡಲು ಇರುವ ಕಾಲಪುರುಷನೇ ನಾನು! ನೀನು ಯುದ್ಧ ಮಾಡಿ ಕೊಲ್ಲದಿದ್ದರೂ ನಾನೇ ಇವರೆಲ್ಲರನ್ನೂ ಕೊಂದು ಹಾಕುವೆನು. ಭೀಷ್ಮದ್ರೋಣಾದಿಗಳೆಲ್ಲಾ ಈಗಾಗಲೇ ನನ್ನಿಂದ ಸತ್ತಿದ್ದಾರೆ. ನಿಮಿತ್ತ ಮಾತ್ರವಾಗಿ ನೀನು ಯುದ್ಧ ಮಾಡಿ ಕೀರ್ತಿಯನ್ನು ಪಡೆ.”
ಶ್ರೀಕೃಷ್ಣನ ಅದ್ಭುತ ರೂಪವನ್ನು ಕಂಡ ಅರ್ಜುನನು ಬೆಕ್ಕಸ ಬೆರಗಾಗಿ ರೋಮಾಂಚಿತನಾದ!
“ಕೃಷ್ಣ!” ಅರ್ಜುನನು ವಿನೀತನಾಗಿ ಹೇಳಿದ, “ನೀನೇ ಆದಿದೇವ! ಅತ್ಯಂತ ಪ್ರಾಚೀನ ಪುರುಷ! ಈ ವಿಶ್ವದ ಮೂಲಾಧಾರ! ಸಕಲವನ್ನೂ ತಿಳಿದವನು, ಸಕಲರಿಂದಲೂ ತಿಳಿಯಬೇಕಾದವನು! ಅನಂತರೂಪನು! ಆ ಬ್ರಹ್ಮನಿಗೂ ತಂದೆಯಾದ ನೀನೇ ಎಲ್ಲದಕ್ಕೂ ಕಾರಣ!
ಅಯ್ಯೋ….. ಅಂಥ ನಿನ್ನನ್ನು ನಾನು ಎಷ್ಟೋ ಬಾರಿ ‘ಗೆಳೆಯ’, ‘ಯಾದವ’ ಎಂದೆಲ್ಲಾ ಲಘುವಾಗಿ ಕರೆದು ಅಪಚಾರ ಮಾಡಿಬಿಟ್ಟೆ! ದಯವಿಟ್ಟು ಅದೆಲ್ಲವನ್ನೂ ಕ್ಷಮಿಸಿಬಿಡು! ಮೂರು ಲೋಕಗಳಲ್ಲೂ ಎಣೆಯಿಲ್ಲದ ಮಹಿಮೆಯುಳ್ಳ ನೀನು ನನ್ನಲ್ಲಿ ಪ್ರಸನ್ನನಾಗು! ದಯವಿಟ್ಟು ನಿನ್ನ ಹಿಂದಿನ ಸೌಮ್ಯರೂಪವನ್ನೇ ತಾಳು!”
ಶ್ರೀಕೃಷ್ಣನು ತನ್ನ ಹಿಂದಿನ ರೂಪವನ್ನೇ ತಾಳಿ ಅರ್ಜುನನನ್ನು ಸಮಾಧಾನಪಡಿಸಿದನು, ”ಈ ಭಯಂಕರ ರೂಪವನ್ನು ನೋಡಿ ಕಂಗಾಲಾಗಬೇಡ ಪಾರ್ಥ! ದೇವತೆಗಳೂ ನೋಡಬೇಕೆಂದು ಹಾತೊರೆಯುವ ಈ ನನ್ನ ವಿಶ್ವರೂಪವನ್ನು ನೀನಿಂದು ನೋಡಿರುವೆ! ವೇದಾಧ್ಯಯನ, ಯಜ್ಞ ದಾನ ಕರ್ಮಾದಿಗಳಿಂದಾಗಲೀ ಉಗ್ರ ತಪಸ್ಸಿನಿಂದಾಗಲೀ ಈ ವಿಶ್ವರೂಪದರ್ಶನ ಬಹು ದುರ್ಲಭ!
ಅರ್ಜುನ, ಅನನ್ಯವಾದ ಭಕ್ತಿಯಿಂದಷ್ಟೇ ನನ್ನನ್ನು ಅರಿಯಲು ಸಾಧ್ಯ! ಹಲವಾರು ಧರ್ಮ ವಿಚಾರಗಳಿಂದ ನಿನ್ನ ಮನಸ್ಸು ಗೊಂದಲಮಯವಾಗುತ್ತಿದ್ದರೆ ಅವೆಲ್ಲವನ್ನೂ ಬಿಟ್ಟು ನನ್ನೊಬ್ಬನಲ್ಲೇ ಶರಣಾಗು; ನಿನ್ನನ್ನು ಎಲ್ಲಾ ಪಾಪಗಳಿಂದಲೂ ಬಿಡಿಸಿ ಉದ್ಧರಿಸುತ್ತೇನೆ ದುಃಖಿಸಬೇಡ!”
“ಖಂಡಿತವಾಗಿಯೂ ನೀನು ಹೇಳಿದಂತೆಯೇ ಮಾಡುವೆ ಕೃಷ್ಣ” ಅರ್ಜುನನು ದೃಢಮನಸ್ಕನಾಗಿ ಹೇಳಿದ, “ನನ್ನ ಮೋಹವು ತೊಲಗಿತು! ಉತ್ತಮ ಜ್ಞಾನವು ಪ್ರಾಪ್ತವಾಯಿತು! ಧರ್ಮಸಂಸ್ಥಾಪನೆಗಾಗಿ ನನ್ನ ಕರ್ತವ್ಯವೆಂದು ಯುದ್ಧ ಮಾಡುವೆ!”
ಹೀಗೆ ಹೇಳಿ ಅರ್ಜುನನು ತನ್ನ ಗಾಂಢೀವ ಧನುಸ್ಸನ್ನು ಠೇಂಕರಿಸಿದನು! ಆ ಠೇಂಕಾರ ಶಬ್ದ, ಕೌರವರ ಎದೆಗಳನ್ನದುರಿಸಿತು!
ಸಂಜಯನು ಧೃತರಾಷ್ಟ್ರನಿಗೆ ಹೇಳಿದನು, “ಮಹಾರಾಜ! ಎಲ್ಲಿ ಯೋಗೇಶ್ವರನಾದ ಶ್ರೀಕೃಷ್ಣನಿರುವನೋ, ಎಲ್ಲಿ ಧನುರ್ಧಾರಿಯಾದ ಅರ್ಜುನನಿರುವನೋ, ಅಲ್ಲಿ ಸಂಪತ್ತು, ವಿಜಯ, ಅಭಿವೃದ್ಧಿ, ನೀತಿಗಳು ಸದಾ ನೆಲೆಸಿರುವವೆಂದು ನನ್ನ ಅಭಿಪ್ರಾಯವಾಗಿದೆ!”
ಯುದ್ಧಾರಂಭದಲ್ಲೇ ಮಹಾ ಆಪತ್ತಿಗೆ ಕಾರಣವಾಗುವುದರಲ್ಲಿದ್ದ ಅರ್ಜುನನ ಮೋಹವನ್ನು ತನ್ನ ಉಪದೇಶದಿಂದ ಕಳೆದು ಶ್ರೀಕೃಷ್ಣನು ಆಪದ್ಬಾಂಧವನಾದ! ಆ ಉಪದೇಶ, ಭಗವದ್ಗೀತೆಯೆಂದು ಪ್ರಸಿದ್ಧವಾಯಿತು!
ಮಹಾಯುದ್ಧವು ಇನ್ನೇನು ಆರಂಭವಾಗುವಷ್ಟರಲ್ಲಿ ಯುಧಿಷ್ಠಿರನು ತನ್ನ ಧನುರ್ಬಾಣಗಳನ್ನೂ ಕವಚವನ್ನೂ ತೆಗೆದಿಟ್ಟು ಕೌರವ ಸೈನ್ಯದ ಕಡೆಗೆ ಹೊರಟನು! ಆಶ್ಚರ್ಯಗೊಂಡ ಇತರ ಪಾಂಡವರೂ ಶ್ರೀಕೃಷ್ಣನೂ ಅವನನ್ನು ಹಿಂಬಾಲಿಸಿದರು. ಅವನು ಭೀಷ್ಮ, ದ್ರೋಣ, ಕೃಪ, ಶಲ್ಯರ ಬಳಿಗೆ ಹೋಗಿ ಅವರ ಆಶೀರ್ವಾದ ತೆಗೆದುಕೊಳ್ಳಲು, ಇತರ ಪಾಂಡವರೂ ಕೃಷ್ಣನೂ ಹಾಗೆಯೇ ಮಾಡಿದರು.
ಈ ಮಧ್ಯೆ, ಶ್ರೀಕೃಷ್ಣನು, ಯುದ್ಧಭೂಮಿಯಲ್ಲೇ ಇನ್ನೊಂದು ಕಡೆ ಬಿಡಾರ ಹೂಡಿದ್ದ ಕರ್ಣನ ಬಳಿಗೆ ಹೋದನು! ಭೀಷ್ಮರ ಮೇಲಿನ ದ್ವೇಷದಿಂದ, ಕರ್ಣನು ಅವರು ಕೆಳಗುರುಳುವವರೆಗೂ ಯುದ್ಧ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದನು. ಹಿಂದೆ ಸಂಧಾನಕ್ಕೆಂದು ಬಂದಿದ್ದಾಗ, ಶ್ರೀಕೃಷ್ಣನು ಕರ್ಣನಿಗೆ ಅವನು ನಿಜವಾಗಿ ಕುಂತಿಯ ಮೊದಲ ಮಗನೆಂದು ತಿಳಿಸಿದ್ದನು.
ಈಗ ಅವನಿಗೆ ಅದನ್ನೇ ನೆನಪಿಸಿ, ಭೀಷ್ಮರ ಸಂಹಾರವಾಗುವವರೆಗೂ ಪಾಂಡವರ ಪಕ್ಷದಲ್ಲಿದ್ದು ಅನಂತರ ಕೌರವ ಪಕ್ಷಕ್ಕೆ ಸೇರಬಹುದೆಂದು ಸೂಚಿಸಿದನು. ಆದರೆ ಕರ್ಣನು ಅದಕ್ಕೆ ಒಪ್ಪಲಿಲ್ಲ. ಪಾಂಡವರ ಹಿತಕ್ಕಾಗಿಯೇ ಪ್ರಯತ್ನಿಸಿದ ಕೃಷ್ಣನು ಹಿಂದಿರುಗಿದನು.
ಭೇರಿ ಕಹಳೆಗಳು ಮೊಳಗಲು ಮಹಾಯುದ್ಧವು ಆರಂಭವಾಯಿತು. ಮೊದಲನೆಯ ದಿನವೇ ಭೀಷ್ಮರು ಆತುಳಪರಾಕ್ರಮವನ್ನು ಮೆರೆದರು. ಮಧ್ಯಾಹ್ನದ ತೀಕ್ಷ್ಣ ಸೂರ್ಯನಂತೆ ಪಾಂಡವಸೇನೆಯನ್ನು ಸುಡತೊಡಗಿದರು. ಬೆಂಕಿಯಲ್ಲಿ ಬೀಳುವ ಪತಂಗಗಳಂತೆ ಪಾಂಡವ ಸೈನಿಕರು ಅವರ ಅಂಬಿನ ಸುರಿಮಳೆಗೆ ಆಹುತಿಯಾಗುತ್ತಿದ್ದರು.
ಇಂತ ಪರಾಕ್ರಮಿ ನಿಜವಾಗಿ ವೃದ್ಧರೇ ಎಂದು ಸಂದೇಹವಾಗುತ್ತಿತ್ತು! ಹೀಗೆ ಯುದ್ಧ ಮಾಡುತ್ತಾ ಅವರು ಕಾಲದಂಡದಂತೆ ಅತಿ ಘೋರವಾಗಿದ್ದ ತಮ್ಮ ಧನುಸ್ಸನ್ನು ಹಿಡಿದು ಅರ್ಜುನನೆಡೆಗೆ ಧಾವಿಸಿ ಬಂದರು! ಅರ್ಜುನನೂ ತನ್ನ ಗಾಂಡೀವಧನುಸ್ಸನ್ನು ಹಿಡಿದು ಅವರಿಗೆದುರಾಗಿ ಹೋದನು. ಇಬ್ಬರೂ ಒಬ್ಬರಿನ್ನೊಬ್ಬರನ್ನು ಸಹಸ್ರ ಸಹಸ್ರ ಬಾಣಗಳಿಂದ ಪ್ರಹರಿಸಿದರೂ ಯಾರೊಬ್ಬರೂ ಪರಾಭವ ಹೊಂದಲಿಲ್ಲ!
ಹೀಗೆಯೇ ಅನೇಕ ವೀರರು ದ್ವಂದ್ವಯುದ್ಧಗಳಲ್ಲಿ ತೊಡಗಿದರು. ಆಗ ವಿರಾಟನ ಮಗನಾದ ಉತ್ತರನು ಶಲ್ಯನೊಂದಿಗೆ ಯುದ್ಧ ಮಾಡುತ್ತಾ ಅವನಿಂದ ಹತನಾಗಲು, ಕೋಪಗೊಂಡ ಅವನ ಅಣ್ಣ ಶ್ವೇತನು ಕೌರ ಸೇನೆಯನ್ನು ಧ್ವಂಸ ಮಾಡತೊಡಗಿದನು! ಕಡೆಗೆ ಭೀಷ್ಮರೇ ಅವನಿಗೆ ಇದಿರಾಗಿ ನಿಂತು ಅವನ ವಧೆ ಮಾಡಿದರು!
ಅನಂತರ, ರಣೋತ್ಸಾಹ ಹೆಚ್ಚಿದ ಭೀಷ್ಮರು ಭಯಂಕರವಾಗಿ ಯುದ್ಧ ಮಾಡುತ್ತಾ ಪಾಂಡವ ಸೇನೆಯನ್ನು ಹಿಮ್ಮೆಟ್ಟಿಸಿದರು! ಅತಿಯಾದ ವೇಗದಿಂದ ಬಾಣ ಪ್ರಹಾರ ಮಾಡುತ್ತಾ ಅವರು ದಶದಿಕ್ಕುಗಳನ್ನೂ ಬಾಣಗಳಿಂದ ತುಂಬಿಬಿಟ್ಟರು! ಸಿಂಹಕ್ಕೆ ಹೆದರಿದ ಹಸುವಿನಂತೆ ಪಾಂಡವಸೇನೆ ಕಂಗಾಲಾಗಿ ಹೋಯಿತು! ಅಷ್ಟರಲ್ಲಿ ಸೂರ್ಯಾಸ್ತವಾಗಿ ಯುದ್ಧ ನಿಂತಿತು.
ಮೊದಲ ದಿನದ ಸೋಲಿನಿಂದ ಯುಧಿಷ್ಠಿರನು ಚಿಂತಾಗ್ರಸ್ತನಾಗಿ ಶ್ರೀಕೃಷ್ಣನಲ್ಲಿ ತನ್ನ ಅಳಲನ್ನು ತೋಡಿಕೊಂಡನು, ”ಕೃಷ್ಣ! ಭೀಷ್ಮರನ್ನೆದುರಿಸುವುದು ದುಸ್ಸಾಧ್ಯ! ಅನ್ಯಾಯವಾಗಿ ಈ ರಾಜರನ್ನು ಬಲಿಕೊಡುವ ಬದಲು ನಾನು ಅರಣ್ಯಕ್ಕೇ ಪುನಃ ಹೋಗುವುದು ವಾಸಿ…”
“ಛಿ! ಹಾಗೆನ್ನದಿರು! ಕೃಷ್ಣ ಆಶ್ವಾಸನೆಯಿತ್ತು ಹೇಳಿದ, “ಸಕಲ ಶಸ್ತ್ರಾಸ್ತ್ರಗಳ ರಹಸ್ಯವನ್ನೂ ಬಲ್ಲ ಅರ್ಜುನನಿಲ್ಲವೇ? ಮಹಾಪರಾಕ್ರಮಿ ದೃಷ್ಟದ್ಯುಮ್ನನಿಲ್ಲವೇ? ಭೀಷ್ಮರನ್ನೇ ಸಂಹರಿಸಲು ಶಿಖಂಡಿಯಿಲ್ಲವೇ? ನಿಶ್ಚಯವಾಗಿಯೂ ಗೆಲವು ನಿನ್ನದೇ ಆಗುವುದು, ಶೋಕಿಸದಿರು!”
ಎರಡನೆಯ ದಿನ, ಪಾಂಡವರು ತಮ್ಮ ಸೈನ್ಯವನ್ನು ಕ್ರೌಂಚಾರುಣವ್ಯೂಹದಲ್ಲಿ ನಿಲ್ಲಿಸಿ ಯುದ್ಧ ಮಾಡಿದರು. ಅಂದೂ ಭೀಷ್ಮಾರ್ಜುನರ ನಡುವೆ ಘನಘೋರ ಯುದ್ಧ ನಡೆದರೂ ಯಾರೊಬ್ಬರೂ ಗೆಲ್ಲಲೂ ಇಲ್ಲ, ಸೋಲಲೂ ಇಲ್ಲ! ಇನ್ನೊಂದು ಕಡೆ, ದ್ರೋಣರಿಗೂ ದೃಷ್ಟದ್ಯುಮ್ನನಿಗೂ ಯುದ್ಧವಾದರೆ, ಭೀಮನು ಏಕಾಕಿಯಾಗಿಯೇ ಕಲಿಂಗ ಮತ್ತು ನಿಷಾದ ಸೈನ್ಯಗಳನ್ನು ನಾಶಮಾಡಿದನು!
ಮೂರನೆಯ ದಿನ, ಭೀಷ್ಮರು ಕೌರವ ಸೈನ್ಯವನ್ನು ಗಾರುಡವ್ಯೂಹದಲ್ಲಿ ನಿಲ್ಲಿಸಿ ಆದರ ಕೊಕ್ಕಿನ ಭಾಗದಲ್ಲಿ ಅವರೇ ನಿಂತರು. ಯುದ್ಧವು ಪುನಃ ಭಯಂಕರವಾಗಿ ಆರಂಭವಾಯಿತು! ಎಲ್ಲೆಲ್ಲೂ ಕುದುರೆಗಳ ಹೇಷಾರವ, ಆನೆಗಳ ಘೀಳಿಡುವಿಕೆ, ಸೈನಿಕರ ಹಾಹಾಕಾರ, ಧನುಸ್ಸುಗಳ ಠೇಂಕಾರ, ಇವೇ ಕೇಳುತ್ತಿತ್ತು! ಮಾಂಸಮಜ್ಜೆಗಳ ಸಹಿತವಾದ ರಕ್ತಧಾರೆ ಅಲ್ಲಲ್ಲಿ ಹರಿಯುತ್ತಾ ನರಿಗಳಿಗೂ ಹದ್ದುಗಳಿಗೂ ಆನಂದವುಂಟುಮಾಡುತ್ತಿತ್ತು!

ತಂದೆ, ಮಗ, ಬಂಧು, ಮಿತ್ರರೆನ್ನದೇ ಎಲ್ಲರೂ ವಿಜಯಾಕಾಂಕ್ಷಿಗಳಾಗಿ ಹೊಡೆದಾಡುವುದರಲ್ಲೇ ಮಗ್ನರಾಗಿದ್ದರು! ಕ್ರಮೇಣ, ರಥಿಯು ರಥಿಕನೊಡನೆಯೂ ಪದಾತಿಯು ಪದಾತಿಯೊಡನೆಯೂ ಯುದ್ಧ ಮಾಡಬೇಕೆಂಬ ನೀತಿ ನಿಯಮಗಳನ್ನು ಮೀರಿ ಎಲ್ಲರೂ ಎಲ್ಲರೊಡನೆಯೂ ಯುದ್ಧ ಮಾಡತೊಡಗಿದರು!
ಹೀಗೆ ಯುದ್ಧ ನಡೆಯುತ್ತಿದ್ದಂತೆ, ಭೀಮನೂ ಅವನ ಪುತ್ರ ಘಟೋತ್ಕಜನೂ ಸೇರಿ ದುರ್ಯೋಧನನ ಸೈನ್ಯವನ್ನು ಧೂಳೀಪಟ ಮಾಡತೊಡಗಿದರು! ಆಗ ದುರ್ಯೋಧನನು ತಾನೇ ಯುದ್ಧಕ್ಕೆ ಧುಮುಕಿ ಸೈನಿಕರಿಗೆ ಉತ್ಸಾಹ ತುಂಬುತ್ತಾ ಭೀಮನೊಡನೆ ಹಣಾಹಣಿಗೆ ತೊಡಗಿದನು!
ಭೀಮನು ಅವನ ಎದೆಗೆ ಬಾಣ ಪ್ರಹಾರ ಮಾಡಲು ಅವನು ಮೂರ್ಛಹೋದನು! ಆಗ ಅವನ ಸಾರಥಿಯು ಕೂಡಲೇ ರಥ ನಡೆಸುತ್ತಾ ರಣಾಂಗಣದಾಚೆಗೊಯ್ದನು. ಇದನ್ನು ನೋಡಿ ಕೌರವನ ಸೇನೆ ಪಲಾಯನ ಮಾಡತೊಡಗಿತು! ಯುಧಿಷ್ಠಿರ ದೃಷ್ಟದ್ಯುಮ್ನರೂ ಬಾಣ ಪ್ರಹಾರ ಮಾಡುತ್ತಾ ಸೈನ್ಯವನ್ನು ಹಿಮ್ಮೆಟ್ಟಿಸತೊಡಗಿದರು! ಭೀಷ್ಮ ದ್ರೋಣರೂ ಅದು ಹಾಗೆ ಓಡುವುದನ್ನು ತಡೆಯಲಾಗಲಿಲ್ಲ!
ಸ್ವಲ್ಪ ಹೊತ್ತಿನ ಬಳಿಕ ಎಚ್ಚೆತ್ತ ದುರ್ಯೋಧನ, ತನ್ನ ಸೈನ್ಯಕ್ಕೊದಗಿದ ದುಸ್ಥಿತಿಯನ್ನು ಕಂಡು ಭೀಷ್ಮರನ್ನು ಸರಿಯಾಗಿ ಯುದ್ಧ ಮಾಡುತ್ತಿಲ್ಲವೆಂದು ನಿಂದಿಸಿದ! ಇದರಿಂದ ಕ್ರುದ್ಧರಾದ ಭೀಷ್ಮರು ಪಾಂಡವ ಸೈನ್ಯದೆಡೆಗೆ ಬಿರುಗಾಳಿಯಂತೆ ನುಗ್ಗಿ ತಮ್ಮ ಅದ್ಭುತ ಕೈಚಳಕವನ್ನು ಮೆರೆದರು!
ತಮ್ಮ ರಥದಲ್ಲೇ ಎಲ್ಲ ದಿಕ್ಕುಗಳಲ್ಲೂ ನೃತ್ಯ ಮಾಡುವಂತೆ ತಿರುತಿರುಗುತ್ತಾ ಒಂದೇ ಸಮನೆ ಲಕ್ಷ ಲಕ್ಷ ಯೋಧರು ಪ್ರಯೋಗಿಸುವಷ್ಟು ಬಾಣಪ್ರಯೋಗ ಮಾಡುತ್ತಾ ಪಾಂಡದ ಸೈನ್ಯವನ್ನು ಛಿದ್ರ ಛಿದ್ರೆ ಮಾಡತೊಡಗಿದರು! ಎಲ್ಲೆಲ್ಲಿ ನೋಡಿದರೂ ಅವರೇ ಕಾಣುತ್ತಿರಲು ಯುದ್ಧವನ್ನೇ ಮಾಡಲಾರದಂತಾಗಿ ಪ್ರಮುಖ ಯೋಧರೂ ಆ ಭೀಷ್ಮಾಗ್ನಿಯಲ್ಲಿ ಪತಂಗಗಳಂತೆ ತಪತಪನೆ ಕೆಳಗುರುಳುತ್ತಿದ್ದರು!
ಪಾಂಡವ ಸೈನಿಕರು ಹಸುಗಳಂತೆ ಹಾಹಾಕಾರ ಮಾಡುತ್ತಾ, ಕೆಲವರು ಕವಚಗಳನ್ನೂ ಕೆಲವರು ಕೂದಲನ್ನೂ ಬಿಚ್ಚಿಕೊಂಡು ಪ್ರಾಣವುಳಿದರೆ ಸಾಕೆಂದು ಸಾಮಾನ್ಯರಂತೆ ಓಡತೊಡಗಿದರು! ಭೀಷ್ಮರಂತೂ ಆ ದಿನ ಪಾಂಡವ ಸೈನ್ಯದಲ್ಲಿ ಪ್ರಳಯವನ್ನೇ ಉಂಟುಮಾಡುತ್ತಿದ್ದರು!
ಇದನ್ನು ಗಮನಿಸಿದ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದನು, “ಪಾರ್ಥ! ಇದೋ ನೋಡು! ನೀನು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಕಾಲವೊದಗಿ ಬಂದಿದೆ. ನೀನು ಹಿಂದೆ ಭೀಷ್ಮದ್ರೋಣಸಹಿತರಾದ ಕೌರವ ಸೈನಿಕರೆಲ್ಲರನ್ನೂ ಸಂಹರಿಸುವೆನೆಂದು ಹೇಳಿದ್ದೆ! ಈಗ ನೋಡು, ಭೀಷ್ಮರು ಕಾಲಯಮನಂತೆ ನಮ್ಮ ರಾಜರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ! ಈಗ ನೀನು ಮೋಹವಶನಾಗದೇ ಅವರನ್ನು ಸಂಹರಿಸು!”
”ವಾಸುದೇವ! ಆ ಭೀಷ್ಮರ ಬಳಿಗೆ ನನ್ನನ್ನು ಕರೆದೊಯ್ಯಿ! ಸೈನ್ಯವೆಂಬ ಈ ಮಹಾಸಾಗರದಲ್ಲಿ ಮುಳುಗಿ ದುರತಿಕ್ರಮರಾದ ಅವರನ್ನುರುಳಿಸುತ್ತೇನೆ”
ಶ್ರೀಕೃಷ್ಣನು ಅಂತೆಯೇ ಭೀಷ್ಮರ ಬಳಿಗೆ ರಥವನ್ನೋಡಿಸಿದನು. ಭೀಷ್ಮಾರ್ಜುನರ ಯುದ್ಧ ಮೊದಲಾಗಲು ಭೀಷ್ಮರು ಕ್ಷಣಮಾತ್ರದಲ್ಲಿ ಬಾಣಗಳಿಂದ ಅರ್ಜುನನ ರಥವನ್ನೇ ಮುಚ್ಚಿಬಿಟ್ಟರು! ಅರ್ಜುನನು ಮತ್ತೆ ಮತ್ತೆ ಅವರ ಧನುಸ್ಸನ್ನು ಕತ್ತರಿಸಿದರೂ ಅವರು ಕಣ್ಣಿವೆಯಿಕ್ಕುವಷ್ಟರಲ್ಲಿ ಹೊಸ ಧನುಸ್ಸನ್ನೆತ್ತಿಕೊಂಡು ಕೃಷ್ಣಾರ್ಜುನರನ್ನು ಬಲವಾಗಿ ಗಾಯಗೊಳಿಸಿದರು!
ಆಗ ಅವರಿಬ್ಬರೂ ಗೂಳಿಗಳ ಕಾಳಗದಲ್ಲಿ ಗಾಯಗೊಂಡ ಭಯಂಕರ ಗೂಳಿಗಳಂತೆ ಕಾಣುತ್ತಿದ್ದರು! ಕುದುರೆಗಳು ಬಹಳ ಗಾಯಗೊಂಡಿದ್ದರೂ ಕೃಷ್ಣನು ಚಾತುರ್ಯದಿಂದ ಅವನ್ನೋಡಿಸುತ್ತಿದ್ದನು! ಆದರೆ ಅವನೂ ಭೀಷ್ಮರ ಪ್ರತಾಪಕ್ಕೆ ನಡುಗಿದನು! ಈ ಮಧ್ಯೆ ಪಾಂಡವ ಸೈನ್ಯ ಹೆದರಿ ಓಡುತ್ತಲೇ ಇತ್ತು!

ಅರ್ಜುನನೋ, ತಾತನೆಂಬ ಮಮಕಾರಕ್ಕೊಳಗಾಗಿ ಮೃದುವಾಗಿ ಯುದ್ಧ ಮಾಡುತ್ತಿದ್ದನು! ಈ ಪರಿಸ್ಥಿತಿಯನ್ನು ಕಂಡ ಸಾತ್ಯಕಿಯು ಪಾರ್ಥನ ನೆರವಿಗೆ ಧಾವಿಸಿ, ಓಡಬಾರದೆಂದು ಸೈನಿಕರನ್ನು ಹುರಿದುಂಬಿಸತೊಡಗಿದನು. ಈಗ ಪಾಂಡವ ಸೈನ್ಯವನ್ನು ಕಾಪಾಡುವವರಾರು? ಇನ್ನಾರು? ಆಪದ್ಬಾಂಧವ, ಶ್ರೀಕೃಷ್ಣ!
‘ಭೀಷ್ಮರನ್ನು ಹೀಗೆಯೇ ಬಿಟ್ಟರೆ ಅವರು ಪಾಂಡವ ಸೈನ್ಯವನ್ನು ಹೆಚ್ಚುಕಾಲ ಉಳಿಸುವುದಿಲ್ಲ! ಅರ್ಜುನನೋ ಅವರ ಮೇಲಿನ ಗೌರವದಿಂದ ಬಹು ಮೃದುವಾಗಿ ಯುದ್ಧ ಮಾಡುತ್ತಿದ್ದಾನೆ! ತನ್ನ ಕರ್ತವ್ಯವನ್ನು ಮರೆಯುತ್ತಿದ್ದಾನೆ! ಈಗ ನಾನೇ ಅವರನ್ನು ಸಂಹರಿಸುವೆನು!”
ಹೀಗೆ ಯೋಚಿಸುತ್ತಾ ವಾಸುದೇವನು ಕೈಯಲ್ಲಿ ಚಕ್ರವನ್ನು ಹಿಡಿದು ರಥದಿಂದ ಧುಮುಕಿದನು.
“ಸಾತ್ಯಕಿ! ಓಡಿಹೋಗುವವರು ಓಡಿಹೋಗಲಿ! ಈಗ ನಾನೇ ಈ ಭೀಷ್ಮರನ್ನೂ ದ್ರೋಣರನ್ನೂ ಕೊಂದು ಪಾಂಡವರಿಗೆ ಸಂತಸವುಂಟು ಮಾಡುತ್ತೇನೆ.” ಹೀಗೆನ್ನುತ್ತಾ ಶ್ರೀಕೃಷ್ಣನು ಚಕ್ರಧಾರಿಯಾಗಿ ಮಹಾಕೋಪದಿಂದ ಭೀಷ್ಮರೆಡೆಗೆ ನುಗ್ಗಿದನು! ಹಾರಾಡುತ್ತಿದ್ದ ಪೀತಾಂಬರದಿಂದ ಆಗವನು ಮಿಂಚಿನಿಂದ ಯುಕ್ತವಾದ ಮೇಘದಂತೆ ಹೊಳೆಯುತ್ತಿದ್ದನು!
ಅವನ ಸುದರ್ಶನ ಚಕ್ರವು ಬಾಲ ಸೂರ್ಯನ ಬಣ್ಣದಿಂದ ಕೂಡಿದ್ದ ಆದಿಪದ್ಮದಂತೆಯೂ, ಅವನ ಸುಂದರ ತೋಳು ಪದ್ಮನಾಳದಂತೆಯೂ ಕಾಣುತ್ತಿತ್ತು! ಅವನ ದೇಹವೇ ಶ್ರೀಮನ್ನಾರಾಯಣನು ಮಲಗುವ ದೊಡ್ಡ ಸರೋವರದಂತಿತ್ತು! ಕಮಲದಳಗಳಂತಿದ್ದ ಅಲಗುಗಳನ್ನು ಹೊಂದಿದ್ದ ಪದ್ಮದಂಥ ಆ ಚಕ್ರ, ಶ್ರೀಕೃಷ್ಣನ ಕೋಪವೆಂಬ ಸೂರ್ಯೋದಯದಿಂದ ಅರಳಿತ್ತು!
ಶ್ರೀಕೃಷ್ಣನು ಹೀಗೆ ಭೀಷ್ಮರನ್ನು ಸಂಹರಿಸಲೆಂದು ಬರುತ್ತಿದ್ದರೂ, ಭೀಷ್ಮರು ಮಾತ್ರ ಸ್ವಲ್ಪವೂ ವಿಚಲಿತರಾಗದೇ ಅವನನ್ನು ಸ್ವಾಗತಿಸಿದರು, “ದೇವೇಶ! ಜಗನ್ನಿವಾಸ! ಮಾಧವ! ಚಕ್ರಪಾಣಿ! ನಿನಗೆ ನಮೋ ನಮಃ! ಹೇ ಲೋಕನಾಥ ಸರ್ವಶರಣ್ಯ! ಬಾ ದೇವ! ಬೇಗನೆ ನನ್ನನ್ನು ಸಂಹರಿಸು! ಇದರಿಂದ ನನಗೆ ಇಹಪರಗಳೆರಡರಲ್ಲಿಯೂ ಶ್ರೇಯಸ್ಸಾಗುತ್ತದೆ! ಮೂರು ಲೋಕಗಳಲ್ಲೂ ನನಗೇ ಕೀರ್ತಿಯುಂಟಾಗುತ್ತದೆ!”
ಅಷ್ಟರಲ್ಲಿ ಪಾರ್ಥನು ರಥದಿಂದ ಧುಮುಕಿ ಓಡಿಹೋಗಿ ತನ್ನೆರಡು ಬಲವಾದ ತೋಳುಗಳಿಂದ ಶ್ರೀಹರಿಯ ಕಾಲಗಳನ್ನು ಗಟ್ಟಿಯಾಗಿ ಹಿಡಿದು ಅವನನ್ನು ತಡೆಯಲೆತ್ನಿಸಿದನು! ಆದರೆ ಕೃಷ್ಣನು ಅರ್ಜುನನನ್ನೂ ಎಳೆದುಕೊಂಡೇ ಮುಂದೆ ಮುಂದೆ ಹೋಗತೊಡಗಿದನು!
“ಕೃಷ್ಣ….! ಕೃಷ್ಣಾ…! ಕೋಪವನ್ನು ಬಿಡು! ಪಾಂಡವರಿಗೆ ನೀನೇ ಗತಿ! ನಾನು ಪ್ರತಿಜ್ಞೆ ಮಾಡುತ್ತೇನೆ….” ಅರ್ಜುನನು ಬೇಡಿಕೊಂಡನು, “ನನ್ನ ಪುತ್ರರ ಮೇಲೂ ಸೋದರರ ಮೇಲೂ ಶಪಥ ಮಾಡಿ ಹೇಳುವೆ! ನಾನೇ ಕೌರವರನ್ನು ಸಂಹರಿಸುತ್ತೇನೆ! ದಯವಿಟ್ಟು ಹಿಂದಿರುಗು..!”
ಅರ್ಜುನನ ಪ್ರತಿಜ್ಞೆಯನ್ನು ಕೇಳಿ ಸಮಾಧಾನಹೊಂದಿದ ಕೃಷ್ಣನು ಚಕ್ರವನ್ನು ಹಿಡಿದೇ ರಥಕ್ಕೆ ಹಿಂದಿರುಗಿದನು; ತಾನು ಆಯುಧವನ್ನೇ ಧರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದರೂ ಭಗವಂತನು ತನ್ನ ಭಕ್ತನಿಗಾಗಿ, ಅವನ ಕರ್ತವ್ಯಪರತೆಯನ್ನೆಚ್ಚರಿಸುವುದಕ್ಕಾಗಿ ತನ್ನ ಪ್ರತಿಜ್ಞೆಯನ್ನೇ ಭಂಗಮಾಡಿದನು!
ಅನಂತರ ಶ್ರೀಕೃಷ್ಣನು ರಥವನ್ನು ಮುನ್ನಡೆಸುತ್ತಾ ತನ್ನ ಪಾಂಚಜನ್ಯವನ್ನು ರಣ ಭಯಂಕರವಾಗಿ ಊದಲು, ಉತ್ತೇಜಿತನಾದ ಅರ್ಜುನನು ವೀರಾವೇಶದಿಂದ ಕಾದುತ್ತಾ ಐಂದ್ರಾಸ್ತ್ರವನ್ನು ಪ್ರಯೋಗಿಸಿ ಕೌರವ ಸೇನೆಯಲ್ಲಿ ಅಪಾರ ನಷ್ಟವುಂಟುಮಾಡಿದನು! ಅಷ್ಟರಲ್ಲಿ ಸೂರ್ಯಾಸ್ತಮವಾಗಲು ಯುದ್ಧವು ನಿಂತಿತು.
(ಮುಂದುವರಿಯುವುದು)






Leave a Reply