ಜೀವನ ಚರಿತ್ರೆ
– ಆಂಗ್ಲಮೂಲ: ಸತ್ಯರಾಜಾದಾಸ, ಅನುವಾದ: ಉಷಾ ಪೋತಿ
ದ್ರೌಪದಿ ಐದು ಮಹಾವೀರರೊಂದಿಗೆ ವಿವಾಹವಾದರೂ ಸಹ ಕೃಷ್ಣನು ಮಾತ್ರ ಅವಳನ್ನು ರಕ್ಷಿಸಲು ಸಾಧ್ಯವಾಯಿತು.

ಶ್ರೀಕೃಷ್ಣನ ಧರ್ಮ ರಕ್ಷಣಾಕಾರ್ಯದಲ್ಲಿ ದ್ರೌಪದಿಯು ಅತಿ ಮುಖ್ಯ ಕಾರ್ಯಕಾರಣ ನಿಮಿತ್ತಳಾಗಿದ್ದಳು. ಶ್ರೀಕೃಷ್ಣನಲ್ಲಿ ಅಪರಿಮಿತ ಭಕ್ತಿಯುಳ್ಳವಳೂ ದೇವೋತ್ತಮನಿಂದ ಅನುಗ್ರಹಿತಳೂ ಆಗಿದ್ದ ದ್ರೌಪದಿ ಶರಣಾಗತಿ ಭಾವದ ಸತ್ಫಲಗಳಿಗೆ ಅತಿ ಮುಖ್ಯ ಉದಾಹರಣೆಯಾಗಿ ಕಾಣಿಸಿಕೊಳ್ಳುತ್ತಾಳೆ.
ವಿಶ್ವದ ಧಾರ್ಮಿಕ ಸಂಪ್ರದಾಯದಲ್ಲಿ, ಭಗವಂತನು ಕೆಲವು ಸಲ ಅವನ ಸಾನ್ನಿಧ್ಯವನ್ನು ಸಾಮಾನ್ಯ ಸಾಧನೆಗಳ ಮೂಲಕ ಪ್ರಕಟಿಸುತ್ತಾನೆಂದು ನಾವು ತಿಳಿಯುತ್ತೇವೆ. ದೃಷ್ಟಾಂತವಾಗಿ ಬೈಬಲ್‌ನಲ್ಲಿ ಮೋಸೆಸ್‌ನ ಎದುರಿಗೆ ಅವನು ಒಂದು ಉರಿಯುವ ಪೊದೆಯಾಗಿ ಕಂಗೊಳಿಸುತ್ತಾನೆ.
ಅನ್ಯತ್ರ ಬೈಬಲ್‌ನಲ್ಲಿ ಒಂದು ಪ್ರಕಾಶಿತ ಕಿರಣದಂತೆ ಮತ್ತು ಆಕಾಶವಾಣಿಯಂತೆ ಅವನ ಉಪಸ್ಥಿತಿಯನ್ನು ಸೂಚಿಸುತ್ತದೆ. ಮಹಾಭಾರತ ಕಾಲದಲ್ಲಿ ರಾಜಸಭೆಯಲ್ಲಿ ನೆರೆದಿದ್ದವರಿಗೆ ತಾನು ಅಗೋಚರನಾಗಿದ್ದುಕೊಂಡೇ ಶ್ರೀಕೃಷ್ಣನು ತನ್ನ ಭಕ್ತಳಾದ ದ್ರೌಪದಿಗೆ ಅಕ್ಷಯ ವಸ್ತ್ರವನ್ನು ಒದಗಿಸುವ ಮೂಲಕ ತನ್ನ ಇರುವಿಕೆಯನ್ನು ಪ್ರಕಟಿಸಿದ್ದು ಆಶ್ಚರ್ಯವೇನಾಗಿರಲಿಲ್ಲ.
ವೈಷ್ಣವ ಪರಂಪರೆಯು ದ್ರೌಪದಿಯನ್ನು ವಾಸ್ತವವಾಗಿ ಭಗವಂತನಲ್ಲಿ ಶರಣಾಗತಿಯ ಒಂದು ಪ್ರತೀಕವೆಂದೇ ಪರಿಗಣಿಸಲಾಗಿದೆ. ಆಕೆಯು ಪಾಂಚಾಲ ರಾಜ್ಯದ ರಾಜಕುಮಾರಿಯಾಗಿದ್ದಳು. ಆಕೆಯನ್ನು ಶ್ರೀ ವಿಷ್ಣುವಿನ ಪತ್ನಿಯಾದ ಲಕ್ಷ್ಮೀದೇವಿಯ ಒಂದು ವಿಸ್ತರಿಸಿದ ರೂಪ ಎಂದು ಮಹಾಭಾರತದಲ್ಲಿ ಹೇಳಿದೆ.
ದ್ರೌಪದಿಯಾಗಿ ಜನಿಸುವ ಮುನ್ನ ಪೂರ್ವಜನ್ಮದ ಜೀವನದಲ್ಲಿ ಆಕೆ ನಳಯಾನಿ ಎಂಬ ಹೆಸರಿನ ತಪಸ್ವಿನಿಯಾಗಿದ್ದಳು. ದೇವ ದೇವತೆಗಳ ಶ್ರೇಷ್ಠವಾದ ಮಹಾಶಿವನು ಆಕೆಗೆ ಮುಂದಿನ ಜನ್ಮದಲ್ಲಿ ಸದ್ಗುಣಿಗಳಾದ ಐದು ಪತಿಯಂದಿರುವರೆಂದು ಅನುಗ್ರಹಿಸಿದನು.
ಅಂತೆಯೇ ಆಕೆಯು ಮಹಾಭಾರತದ ವೀರಶೂರರಾದ ಪಾಂಡವ ಸಹೋದರರ ಪತ್ನಿಯಾದಳು. (ಐದು ಸಾವಿರ ವರ್ಷಗಳ ಹಿಂದೆ ಆಗಿನ ಕಾಲದಲ್ಲಿಯೂ ಏಕಪತ್ನಿತ್ವದ ಆದರ್ಶ (ಶಾಸನ) ವಿದ್ದರೂ ಸಹ, ವೀರ ಸೈನಿಕವರ್ಗದವರಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವದ ವಿವಾಹಗಳು ನಡೆಯುತ್ತಿದ್ದವು.)
ದ್ರೌಪದಿಯ ವಿವಾಹ
ದ್ರೌಪದಿಯು ಮದುವೆಯ ವಯಸ್ಸಿಗೆ ಬಂದಾಗ ಆಕೆ ಅವಳ ಪತಿಯನ್ನು ಆಯ್ಕೆಮಾಡಲು ಆಕೆಯ ತಂದೆ ರಾಜ ದ್ರುಪದನು, ಒಂದು ಭವ್ಯವಾದ ಸ್ವಯಂವರವನ್ನು ಏರ್ಪಡಿಸಿದ್ದನು.

ಆಕೆಯ ಕೈಹಿಡಿಯಲು ಎಲ್ಲೆಡೆಯಿಂದ ವೀರರು ಅವರ ಸಾಂಗ್ರಾಮಿಕ ನೈಪುಣ್ಯದ ಕೌಶಲ್ಯವನ್ನು ಪ್ರದರ್ಶಿಸಿ ಸ್ಪರ್ಧಿಸಲು ಅಲ್ಲಿಗೆ ಆಗಮಿಸಿದ್ದರು. ಪಾಂಡವ ಸಹೋದರರಲ್ಲಿ ಅತ್ಯಂತ ನೈಪುಣ್ಯವುಳ್ಳ ಧನುರ್ಧರನಾದ ಅರ್ಜುನನು ಅತಿ ಸುಲಭವಾಗಿ ಸ್ಪರ್ಧೆಯಲ್ಲಿ ಗೆದ್ದು ಮದುಮಗಳನ್ನು ಪಡೆದನು.
ಅರ್ಜುನನು ತನ್ನ ಮನೆಗೆ ಹಿಂತೆರಳಿಬಂದು ತನ್ನ ತಾಯಿ ಕುಂತಿದೇವಿಗೆ ತಾನು ಒಂದು ಅಮೂಲ್ಯವಾದ ಬಹುಮಾನವನ್ನು ಜಯಸಿದ್ದೇನೆಂದು ಹೇಳಿದನು. (ಭ.ವೇ.ದ, ಮೇ-ಜೂನ್ 2000ದಲ್ಲಿ ವೀಕ್ಷಿಸಿರಿ) ಹಿಂತಿರುಗಿ ನೋಡದೇ “ಅದು ಯಾವುದಾದರೂ ಸಹ ನಿನ್ನ ಸಹೋದರರೊಂದಿಗೆ ಪಾಲು ಮಾಡಿಕೊ” ಎಂದು ಕುಂತಿಯು ಉತ್ತರಿಸಿದಳು.
ಕುಂತಿಯು ಸಚ್ಚಾರಿತ್ರ್ಯವಂತಳಾಗಿದ್ದರಿಂದ ಅವಳ ಮಾತು ಎಂದಿಗೂ ಹುಸಿಯಾಗುತ್ತಿರಲಿಲ್ಲ. ಆದ್ದರಿಂದ ಆಕೆಯ ಮಾತಿನಂತೆ ನಡೆಯಲು ಪಂಚಪಾಂಡವರು ನಿರ್ಧರಿಸಿದರು. ತಮ್ಮತಮ್ಮಲ್ಲೇ ಈ ರೀತಿಯ ವಿವಾಹದ ಬಗ್ಗೆ ಪರಾಮರ್ಶಿಸಿ ಅನಂತರ ಸರ್ವ ಸಮ್ಮತಿಯಿಂದ ಐವರು ದ್ರೌಪದಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದರು.
ಪತಿವ್ರತೆಯೂ ಕರ್ತವ್ಯಪರಳೂ ಆಗಿದ್ದ ದ್ರೌಪದಿಯು ತನ್ನ ಪತಿಯಂದಿರು ಜೂಜಿನಲ್ಲಿ ರಾಜ್ಯ ಕಳೆದುಕೊಂಡಾಗ ತಾನೂ ಅವರೊಂದಿಗೆ ವನವಾಸಕ್ಕೆ ಹೊರಟಳು.
ಅವರಿಗೆ ಬಂದೊದಗಿದ್ದ ದುರ್ದೆಸೆಯನ್ನು ತನ್ನದೆಂದೇ ಭಾವಿಸಿ ಅಂಗೀಕರಿಸಿದಳು. ವನವಾಸದ ಸಂದರ್ಭದಲ್ಲಿ ಸದಾ ಅವರನ್ನು ಉಲ್ಲಸಿತರನ್ನಾಗಿರಿಸುತ್ತ, ಪ್ರೋತ್ಸಾಹದ ಮಾತುಗಳನ್ನಾಡಿ ಉತ್ತೇಜನಗೊಳಿಸುತ್ತಿದ್ದಳು.
ಒಬ್ಬ ಧೈರ್ಯ ಹಾಗೂ ದೃಢ ಚಿತ್ತದ ಮಹಿಳೆಯಾದ ದ್ರೌಪದಿಯು ಅನ್ಯಾಯದ ವಿರುದ್ಧ ನಿಶ್ಚಯವಾಗಿ ಸಿಡಿದೇಳುತ್ತಿದ್ದಳು. ಯುಧಿಷ್ಠಿರನು ಜೂಜಾಡಿ ರಾಜ್ಯವನ್ನು ಕಳೆದುಕೊಂಡ ಗಂಭೀರವಾದ ತಪ್ಪಿಗೆ ಆಕೆ ಆತನನ್ನು ನಿಂದಿಸಿದಳು. ಯುಧಿಷ್ಠಿರನು ದ್ರೌಪದಿಯ ಮಾನವನ್ನು ಮತ್ತು ಆಕೆಯ ಬಾಳನ್ನು ಕೂಡ ದಾಳದಲ್ಲಿ ಹಾಕಿ ಬಿಟ್ಟನು.
ರಾಜ್ಯವನ್ನು ಕಳೆದುಕೊಳ್ಳುವ ಮುನ್ನ ಯುಧಿಷ್ಠರನು ದ್ರೌಪದಿಯನ್ನು ಪಂಥ ಕಟ್ಟಿ ಸೋತನು. ಅದರಂತೆ ಪಾಂಡವರ ಜನ್ಮ ಶತ್ರುಗಳಾದ ಕೌರವರು, ತಾವೇ ದ್ರೌಪದಿಯ ಹಕ್ಕುದಾರರೆಂದು ಅಧಿಕಾರ ತೋರಿಸಿದರು. ಕೌರವನಾದ ದುಶ್ಯಾಸನನು, ದ್ರೌಪದಿಯನ್ನು ಆಕೆಯ ಕೇಶದಿಂದ ಹಿಡಿದು, ಜೂಜಾಟದ ಅಂಗಣದಲ್ಲಿ ಉಪಸ್ಥಿತ ರಾಜಪದದವರು ಮತ್ತು ಹಿರಿಯರ ಮುಂದೆ ಸೆಳೆದೊಯ್ದನು.
ಜೂಜಾಟದ ಪಂಥದಲ್ಲಿ ಅಕ್ರಮದಿಂದ ಯುಧಿಷ್ಠಿರನನ್ನು ಕೌರವರು ಮೋಸಗೊಳಿಸಿದರೆಂದು, ತೇಜೋಭಂಗಿತಳಾದ ಮತ್ತು ಕೆರಳಿದ ದ್ರೌಪದಿಯು ವಾದ ಹೂಡಿದಳು. ಮತ್ತು ಆಕೆಯು ಎಲ್ಲ ಪಂಚಪಾಂಡವರ ಪತ್ನಿಯಾಗಿರುವುದರಿಂದ ಅವಳನ್ನು ಪಂಥಕಟ್ಟಲು ಯುಧಿಷ್ಠಿರನಿಗೆ ಒಂಟಿಯಾಗಿ ಮಾತ್ರ ನಿಶ್ಚಯಿಸಲು ಯಾವ ಅಧಿಕಾರವಿಲ್ಲವೆಂದು ಹೇಳಿದಳು. ಈ ಇಡೀ ಘಟನೆಯಲ್ಲಿ ನೀತಿ ತತ್ತ್ವಗಳೇನಿವೆ ಎಂದು ಆಕೆ ಪ್ರಶ್ನಿಸಿದಳು ಮತ್ತು ಕೌರವರ ವಂಚನೆಯ ಬಗ್ಗೆ ಸ್ಪಷ್ಟವಾಗಿ ನುಡಿದಳು.

ಆದರೆ ಕೌರವರು ಇದನ್ನು ಸಮ್ಮತಿಸಲಿಲ್ಲ. ಅವರು ಆಕೆಯನ್ನು ನಿಂದಿಸಿದರು ಮತ್ತು ದುಶ್ಯಾಸನನು ಆಕೆಯ ಸೀರೆಯನ್ನು ಬಲತ್ಕಾರದಿಂದ ಸೆಳೆಯಲು ಪ್ರಯತ್ನಿಸಿದನು. ಆಕೆ ತನ್ನ ಮಾನ ಉಳಿಸಿಕೊಳ್ಳಲು ಯತ್ನಿಸಿದಳು. ಆದರೆ ದುಶ್ಯಾಸನನ ಬಾಹುಬಲದ ಎದುರಿಗೆ ಸೋತುಹೋದಳು. ಕೊನೆಗೆ ಬಾಹುಗಳನ್ನು ಮೇಲಕ್ಕೆತ್ತಿ ಶ್ರೀಕೃಷ್ಣನಲ್ಲಿ ಶರಣಾಗತಳಾದಳು.
“ಹೇ ಗೋವಿಂದಾ ! ಹೇ ಕೇಶವಾ! ಹೇ ಗೋಪಿಯರ ಪ್ರಿಯತಮನೇ ಮತ್ತು ವೃಂದಾವನದ ಒಡೆಯನೇ ! ಹೇ ಜನಾರ್ದನಾ, ನೀನು ಎಲ್ಲ ದುಃಖಗಳನ್ನು ಧ್ವಂಸಗೊಳಿಸುವವನು. ನಾನು ದುಃಖ ಸಾಗರದಲ್ಲಿ ಮುಳುಗುತ್ತಿದ್ದೇನೆ ಹೇ ಭಗವಂತನೇ, ಹೇ ವಿಶ್ವದ ಜೀವಾತ್ಮನೇ, ಹೇ ಜಗತ್ತಿನ ಸೃಷ್ಟಿಕರ್ತನೇ ನನ್ನನ್ನು ರಕ್ಷಿಸು! ನಾನು ವಿಪತ್ತಿಗೀಡಾಗಿದ್ದೇನೆ, ಮತ್ತು ಈ ಪಾಪಿಗಳ ಸಭೆಯಲ್ಲಿ ನನ್ನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದೇನೆ”
ನೂರಾರು ಮೈಲಿ ದೂರದಲ್ಲಿ ಕೃಷ್ಣನು ದ್ವಾರಕದಲ್ಲಿ ಆಕೆಯ ಮೊರೆಯನ್ನು ಕೇಳಿದನು, ಅವನು ಅಕ್ಷಯವಾದ ಉಡುಗೆಯನ್ನು ಒದಗಿಸಿ, ಆಕೆಯನ್ನು ರಕ್ಷಿಸಲು ಬಂದನು. ದುಶ್ಯಾಸನನು ದ್ರೌಪದಿಯ ಸೀರೆಯನ್ನು ಎಳೆಯುತ್ತಾ ಹೋದಂತೆ ಅದು ಹೆಚ್ಚುತ್ತಾ ಹೋಯಿತು. ತನ್ನ ಎದುರಿನ ಚಮತ್ಕಾರದಿಂದ ಬೆರಗಾಗಿ ದುಶ್ಯಾಸನನು ನೆಲದ ಮೇಲೆ ಕುಸಿದುಬಿದ್ದನು.
ಕೃಷ್ಣನಿಗೆ ಶರಣಾಗತಳಾಗಿ ಕೈಗಳನ್ನು ಮೇಲೆತ್ತಿದ ದ್ರೌಪದಿಯ ಭಾವಚಿತ್ರವು, ಇಂದಿಗೂ ಸಹ ಭಕ್ತರಲ್ಲಿ ಶರಣಾಗತಿಯ ಸ್ಫೂರ್ತಿಗೆ ದ್ಯೋತಕವಾಗಿದೆ.
ಶ್ರೀ ಕೃಷ್ಣನು ಅಕ್ಷಯವಾದ ಉಡುಗೆಯನ್ನು ದ್ರೌಪದಿಗೆ ಒದಗಿಸಿದ್ದು, ಪಾಂಡವರ ರಾಜ್ಯ ಇಂದ್ರಪ್ರಸ್ಥದಲ್ಲಿ ನಡೆದ ಒಂದು ಘಟನೆಯ ಮುಂದುವರಿಕೆಯಾಗಿದೆ. ಶ್ರೀ ಕೃಷ್ಣನು ದ್ರೌಪದಿಯನ್ನು ಭೇಟಿಯಾಗಲು ಬಂದಾಗ ಅನೇಕ ಪರಿಚಾರಕರುಳ್ಳವಳಾದರೂ ಸಹ, ಆಕೆ ಅವನ ಪ್ರೀತಿಯನ್ನು ಗಳಿಸಿ, ಖುದ್ದಾಗಿ ಬಡಿಸಿದಳು. ಒಂದು ದಿನ ಕೃಷ್ಣನು ಹಣ್ಣನ್ನು ಹೆಚ್ಚುತ್ತಿರುವಾಗ ತನ್ನ ಬೆರಳನ್ನು ಕೊಯ್ದು ಗಾಯಮಾಡಿಕೊಂಡನು, ಒಡನೇ ದ್ರೌಪದಿಯು ಆ ಗಾಯಕ್ಕೆ ಪಟ್ಟಿಕಟ್ಟಲು ತನ್ನ ಸೀರೆಯ ಒಂದು ಭಾಗವನ್ನು ಹರಿದಳು.
ಆ ಪಟ್ಟಿಕಟ್ಟಿದ ಬಟ್ಟೆಯನ್ನು ಸ್ವೀಕರಿಸುತ್ತಾ ಶ್ರೀ ಕೃಷ್ಣನು ಮುಗುಳುನಕ್ಕನು ಮತ್ತು ”ಹೇ ದಯಾಳು ಸ್ತ್ರೀಯೇ, ಈ ಸೀರೆಯ ಋಣವನ್ನು ನಿಶ್ಚಯವಾಗಿಯೂ ಭರಿಸಿ ಕೊಡುತ್ತೇನೆ” ಎಂದು ನುಡಿದನು.
ಕೃಷ್ಣನ ಶರೀರವು ಸಂಪೂರ್ಣವಾಗಿ ಆಧ್ಯಾತ್ಮಿಕವಾದರೂ ಸಹ ತನ್ನ ಮತ್ತು ಭಕ್ತರ ನಡುವೆಯ ಪ್ರೀತಿ ಸಲುಗೆಯನ್ನು ಹೆಚ್ಚಿಸುವಂತೆ ಮಾಡಲು ಅವನು ರಕ್ತ ಸುರಿಸಲು ಸಹ ಸಿದ್ಧನಾಗುತ್ತಾನೆ.
ಕುರುಕ್ಷೇತ್ರದ ಕಾಳಗದ ಅಂತ್ಯದಲ್ಲಿ ಬೆರಗುಗೊಳಿಸಿದ ಒಂದು ಘಟನೆಯು, ದ್ರೌಪದಿಯ ಮೆರೆಯಿಸಿದ ಅನುಕಂಪವನ್ನು ಬೆಳಕಿಗೆ ತರುತ್ತದೆ. ಪಾಂಡವರ ಸೈನ್ಯಪಡೆಗಳ ಶಿಕ್ಷಕನಾದ ದ್ರೋಣಾಚಾರ್ಯನ ಪುತ್ರ ಅಶ್ವತ್ಥಾಮನು, ದ್ರೌಪದಿಯ ಐದು ಪುತ್ರರು ನಿದ್ರಿಸುತ್ತಿರುವಾಗ ವಧಿಸಿದನು.

ಈ ಹೇಡಿತನದ ಉಗ್ರವಾದ ನಡತೆಗೆ, ಅರ್ಜುನನು ಅವನನ್ನು ಸೆರೆಹಿಡಿದು, ಅವನ ವಿಧಿಯನ್ನು ನಿರ್ಣಯಿಸಲು ದ್ರೌಪದಿಯ ಮುಂದೆ ಕರೆದೊಯ್ದನು. ಕೃಷ್ಣನಿಂದ ಹುರಿದುಂಬಿಸಲ್ಪಟ್ಟ ಅರ್ಜುನನು ಅಶ್ವತ್ಥಾಮನನ್ನು ಆ ಕ್ಷಣವೇ ವಧಿಸಲು ಸಿದ್ಧನಾದನು. ಆದರೆ ದ್ರೌಪದಿಯು ಅವನನ್ನು ತಡೆಗಟ್ಟಿದಳು.
“ಅವನನ್ನು ಬಿಡುಗಡೆ ಮಾಡು. ದ್ರೋಣನ ಪತ್ನಿಯನ್ನು ನನ್ನಂತೆ ಕಣ್ಣೀರಿಡುವಂತೆ ಮಾಡಬೇಡ”- ಎಂದು ಹೇಳಿದಳು.
ಈ ರೀತಿ ದ್ರೌಪದಿಯು ನಿಸ್ವಾರ್ಥದ ಪ್ರೀತಿ ಹಾಗೂ ವೈಷ್ಣವ ಪ್ರಾಮಾಣಿಕತೆಯ ಒಂದು ಪರಾಕಾಷ್ಠೆಯ ಆದರ್ಶವನ್ನು ಪ್ರಪಂಚಕ್ಕೆ ತೋರಿಸಿದಳು.
ಶ್ರೀಕೃಷ್ಣನ ಮೇಲಿನ ಅಪರಿಮಿತ ಭಕ್ತಿಯ ಫಲವಾಗಿ ಸಾವಿನನಂತರ ಆಕೆ ಕೃಷ್ಣ ಸಾನ್ನಿಧ್ಯವನ್ನು ಹೊಂದಿದಳು. ಶ್ರೀಕೃಷ್ಣನ ದಿವ್ಯ ಲೀಲೆಗಳಲ್ಲಿ ಭಾಗಿಯಾಗಿ ಪಾತ್ರವಹಿಸಿದ ದ್ರೌಪದಿ ಮತ್ತು ಆಕೆಯ ಪತಿಯಂದಿರು ಸಶರೀರಿಗಳಾಗಿಯೇ ಆಧ್ಯಾತ್ಮಿಕ ಲೋಕಕ್ಕೆ ತೆರಳಿದರೆಂದು ಶ್ರೀಮದ್ಭಾಗವತದಲ್ಲಿ ಹೇಳಲಾಗಿದೆ.
ದ್ರೌಪದಿಯ ಜನನ ಮತ್ತು ಚರಿತ್ರೆ
ಭಾರದ್ವಾಜ ಮುನಿಯ ಪುತ್ರನಾದ ದ್ರೋಣ ಮತ್ತು ರಾಜ ದ್ರುಪದ, ಇವರಿಬ್ಬರೂ ಯೌವನದಲ್ಲಿ ಬಹಳ ಅಕ್ಕರೆಯ ಮಿತ್ರರಾಗಿ, ಒಟ್ಟಿಗೆ ಓದಿ ಆಟ ಆಡುತ್ತಿದ್ದರು. ಆದರೆ ದ್ರುಪದನು ರಾಜನಾದಾಗ ದ್ರೋಣನನ್ನು ಅತಿ ಹೀನಾಯವಾಗಿ ಕಾಣುತ್ತಿದ್ದನು ಮತ್ತು ಅವನ ಗೆಳೆತನವನ್ನು ನಿರಾಕರಿಸಿದನು.
ದ್ರೋಣನು ಈ ಸೇಡು ತಿರಿಸಲು ಶಪಥಮಾಡಿ ಹಸ್ತಿನಾಪುರಕ್ಕೆ ಪ್ರಯಾಣ ಮಾಡಿದನು. ಅಲ್ಲಿ ಕುರುವಂಶದ ಹಿರಿಯ ಶ್ರೇಷ್ಠನಾದ ಭೀಷ್ಮನು ತನ್ನ ಪಾಂಡವ ಮತ್ತು ಕುರುವಂಶದ ಮೊಮ್ಮಕ್ಕಳಿಗೆ ಶಿಕ್ಷಣವನ್ನು ನೀಡಲು ದ್ರೋಣನೊಂದಿಗೆ ಕೋರಿದನು.

ದ್ರೋಣನು ಬ್ರಾಹ್ಮಣನಾಗಿದ್ದರೂ ಸಹ, ಅಧರ್ಮವನ್ನು ಪಾಲಿಸುವ ವರ್ಗದವರನ್ನು ನಾಶಪಡಿಸಲು ಇಳಿದು ಬಂದ ಕೃಷ್ಣನ ಅವತಾರಿಯಾದ ಪರಶುರಾಮನಿಂದ ದಿವ್ಯವಾದ ಶಸ್ತ್ರಗಳನ್ನು ಪಡೆದಿದ್ದನು. ದ್ರೋಣನು ತನ್ನ ವಿದ್ಯಾರ್ಥಿಗಳಿಗೆ ವೀರೋಚಿತವಾದ ಎಲ್ಲ ಕಲಾಕೌಶಲ್ಯಗಳನ್ನು ಬೋಧಿಸಿದನಂತರ ಅವರನ್ನು ದ್ರುಪದನ ರಾಜ್ಯವನ್ನು ವಶಪಡಿಸಲು ಕಳುಹಿಸಿದನು.
ಅವನೆದುರಿಗೆ ಅವರು ದ್ರುಪದನನ್ನು ಕರೆತಂದಾಗ ಈಗ ಅವರಿಬ್ಬರಿಗೂ ರಾಜ್ಯವಿರುವುದರಿಂದ, ಅವರಿಬ್ಬರೂ ಈಗ ಮಿತ್ರರಾಗಿ ಬಾಳಬಹುದು, ಎಂದನು. ಮತ್ತು ದ್ರೋಣನ ವಿದ್ಯಾರ್ಥಿಗಳಿಂದ ವಶಪಡಿಸಿಕೊಂಡ ದ್ರುಪದನ ಅರ್ಧಭಾಗದಷ್ಟು ರಾಜ್ಯವನ್ನು ದ್ರೋಣನು ಇರಿಸಿಕೊಂಡು ಇನ್ನರ್ಧ ಭಾಗವನ್ನು ದ್ರುಪದನು ಇಟ್ಟುಕೊಳ್ಳಲಿ ಎಂದನು.
ಅವಮಾನಿತನಾದ ದ್ರುಪದ, ದ್ರೋಣನನ್ನು ವಧಿಸುವಂತಹ ಪುತ್ರನನ್ನು ಪಡೆಯಬೇಕೆಂಬ ದೃಢ ಬಯಕೆಯಿಂದ ಕೂಡಿದವನಾಗಿ ಹಸ್ತಿನಾಪುರದಿಂದ ತೆರಳಿದನು. ಆತನ ಗುರಿಯನ್ನು ಈಡೇರಿಸಲು ಯಜಮುನಿಯನ್ನು ನೆರವಾಗಲು ಮನ ಒಲಿಸಿದನು. ದ್ರುಪದನ ರಾಣಿಯು ಯಾವ ವಿಶಿಷ್ಟವಾದ ಅನ್ನವನ್ನು ಬಳಸುವುದರಿಂದ ಅವಳಿ ಮಕ್ಕಳನ್ನು ಹೊಂದಬಹುದೋ ಅಂತಹದನ್ನು ಯಜನು ತಯಾರು ಮಾಡಿದನು, ಮತ್ತು ಆ ಅನ್ನವನ್ನು ಅಗ್ನಿಕುಂಡಕ್ಕೆ ಆಹುತಿ ಮಾಡಿದನು.
ಆ ಅಗ್ನಿಯಿಂದ ಜ್ವಾಲೆಯಂತೆ ಪ್ರಕಾಶಿಸುತ್ತಾ, ಒಬ್ಬ ಯೋಧನು ಹೊರಬಂದನು, ಒಬ್ಬ ವೀರನ ಉಡುಪನ್ನು ಧರಿಸಿದ ಅವನು ಕಾಳಗದ ಘೋರವಾದ ಧ್ವನಿಯನ್ನು ಝೇಂಕರಿಸಿದನು. ಯಜನು ಅವನಿಗೆ ದುಷ್ಟದ್ಯುಮ್ನ ಎಂದು ಹೆಸರಿಟ್ಟನು, ಅಂದರೆ ತೇಜಸ್ಸಿನ ಪ್ರಕಾಶದಿಂದ ಜನಿಸಿದ ಧೈರ್ಯ ಹಾಗೂ ಪ್ರತಿಭಾವಂತ ಮಹಾನುಭಾವನೆಂದು ಅರ್ಥ, ಆತನು ದ್ರೋಣನನ್ನು ವಧಿಸಲು ಉದ್ದೇಶಿತನಾಗಿದ್ದನು.
ಅನಂತರ ಅಗ್ನಿಕುಂಡದ ಮಧ್ಯಭಾಗದಿಂದ ಒಬ್ಬಮನರಂಜಿಸುವ ಕನ್ನಿಕೆಯು ಉದಯಿಸಿದಳು. ಭೂಮಿಯಲ್ಲಿನ ಯಾವ ಸ್ತ್ರೀಯೂ ಕೂಡ ಆಕೆಯ ಸೌಂದರ್ಯಕ್ಕೆ ಸರಿಸಮಾನಳಾಗಿರಲಿಲ್ಲ, ಆಕೆ ಧರ್ಮಪ್ರಸಾರಕ ಕಾರ್ಯಗಳನ್ನು ಈಡೇರಿಸಲು ಮತ್ತು ಅನೇಕ ರಾಜರನ್ನು ವಿನಾಶಗೊಳಿಸಲು ಆಗಮಿಸಿದಳೆಂದು, ಆಕಾಶವಾಣಿ ನುಡಿಯಿತು.
ಶ್ರೀ ಕೃಷ್ಣನ ಅತಿ ದೊಡ್ಡ ಭಕ್ತಳಾಗಿರುವಳೆಂದೂ ಮತ್ತು ಆಕೆ ಕಪ್ಪುಬಣ್ಣದವಳಾಗಿದ್ದುದರಿಂದ, ಅವಳಿಗೆ ಕೃಷ್ಣಾ ಎಂದು ಹೆಸರಿಡಬೇಕೆಂದೂ ಯಜನು ಪ್ರಕಟಿಸಿದನು.
ಆಕೆ ದ್ರೌಪದಿಯೆಂದು ಕೂಡ ಹೆಸರಾದಳು, ಹಾಗೂ ಯುಧಿಷ್ಠಿರ ಮತ್ತು ಶಕುನಿಯ ನಡುವಿನ ಜೂಜಾಟದ ಪಂಥದಲ್ಲಿ ಆಕೆಯನ್ನು ತೇಜೋಭಂಗಗೊಳಿಸಿದ್ದು, ಕುರುಕ್ಷೇತ್ರದ ಸಮರದ ಒಂದು ಮೂಲ ಕಾರಣವಾಗಿತ್ತು. ದುಷ್ಟ ರಾಜರಿಂದ ಪೀಡಿಸಲ್ಪಟ್ಟ ಈ ಭೂಮಿಯ ವೇದನೆಯನ್ನು ತೊಲಗಿಸಲು ಶ್ರೀ ಕೃಷ್ಣನು ಕೊನೆಗೆ ಆ ಯುದ್ಧವನ್ನು ಆಯೋಜಿಸಿದನು.






Leave a Reply