– ಆಂಗ್ಲಮೂಲ: ರೋಹಿಣೀನಂದನ ದಾಸ, ಅನುವಾದ: ಈಶ್ವರಚಂದ್ರ
ಹರೇ ಕೃಷ್ಣ ಆಂದೋಲನವು “ಸಂನ್ಯಾಸಿಗಳಿಗಾಗಿ ಮಾತ್ರ” ಎಂಬಂಥ ಕ್ಲಬ್ ಅಲ್ಲ.

ಐದು ಶತಮಾನಗಳ ಹಿಂದೆ, ಸ್ವತಃ ಪರಮ ಪ್ರಭು ಕೃಷ್ಣನ ಅವತಾರ ಸ್ವರೂಪರೂ, ಹರೇ ಕೃಷ್ಣ ಆಂದೋಲನದ ಸಂಸ್ಥಾಪಕರೂ ಆದ ಚೈತನ್ಯ ಮಹಾಪ್ರಭುಗಳು, ಜಗತ್ತಿನ ಪ್ರತಿಯೊಂದು ಪಟ್ಟಣ ಮತ್ತು ಗ್ರಾಮದಲ್ಲೂ ಭಗವಂತನ ಪವಿತ್ರನಾಮಗಳು ಅನುರಣಿಸುತ್ತವೆ ಎಂದು ಭವಿಷ್ಯ ನುಡಿದಿದ್ದರು.
ಇಪ್ಪತ್ತನಾಲ್ಕು ವರ್ಷಗಳ ಹಿಂದೆ, ಚೈತನ್ಯ ಮಹಾಪ್ರಭುಗಳ ಶ್ರದ್ಧಾವಂತ ಅನುಯಾಯಿಯಾಗಿದ್ದ ಶ್ರೀ ಶ್ರೀಮದ್ ಎ.ಸಿ.ಭಕ್ತಿವೇಂದಾತ ಸ್ವಾಮಿ ಪ್ರಭುಪಾದರು ಭಾರತದಿಂದ ಪಾಶ್ಚಾತ್ಯ ದೇಶಗಳಿಗೆ ಪಯಣ ಬೆಳೆಸಿ ಕೃಷ್ಣ ಪ್ರಜ್ಞೆಯನ್ನು ಹುರುಪಿನಿಂದ ಪರಿಚಯಿಸಲಾರಂಭಿಸಿದರು.
ತತ್ಪರಿಣಾಮವಾಗಿ ಬ್ಯಾಕ್ ಟು ಗಾಡ್ ಹೆಡ್ ನಿಯತಕಾಲಿಕೆಯ ರೂಪದಲ್ಲಿ, ಶ್ರೀಲ ಪ್ರಭುಪಾದರ ಪುಸ್ತಕಗಳ ರೂಪದಲ್ಲಿ, ಕೃಷ್ಣ ಭಕ್ತಿರು ಬೀದಿಗಳಲ್ಲಿ ಉತ್ಸಾಹದಿಂದ ತುಂಬಿ ತುಳುಕುತ್ತ ಸಂಕೀರ್ತನೆ ಮತ್ತು ನರ್ತನ ಮಾಡುವ ರೂಪದಲ್ಲಿ, ಮನೆಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಭಕ್ತರು ಬೋಧಿಸುವ ರೂಪದಲ್ಲಿ, ಉತ್ಸವಗಳ ರೂಪದಲ್ಲಿ, ಸುಂದರವಾದ ದೇವಾಲಯಗಳ ರೂಪದಲ್ಲಿ, ಕೃಷ್ಣನಿಗೆ ಅರ್ಪಿಸಿದ ಸ್ವಾದಿಷ್ಟವಾದ ಸಸ್ಯಾಹಾರದ ರೂಪದಲ್ಲಿ ಜನರಿಗೆ ಎಲ್ಲೆಲ್ಲೂ “ಹರೇಕೃಷ್ಣ ಅನುಭವ” ಎದುರಾಗತೊಡಗಿತು.
ಥಾಮಸ್ ಜೆ.ಹಾಪ್ಕಿನ್ಸ್ ಅವರಂತಹ ಇತಿಹಾಸಕಾರರು ಮತ್ತು ಧಾರ್ಮಿಕ ಬರಹಗಾರರು ಪ್ರಾಚೀನ “ಸಾಮಾಜಿಕ ವ್ಯವಸ್ಥೆ” ಮತ್ತು “ಸಾಂಸ್ಕೃತಿಕ ಸಂಪ್ರದಾಯ” ಎಂದು ಕರೆದಂತಹ ಕೃಷ್ಣ ಪ್ರಜ್ಞಾ ಆಂದೋಲನದ ವ್ಯಾಪಕ ಪರಿಚಯವಾದಮೇಲೂ, ಈ ಸಂಘಕ್ಕೆ ಸದಸ್ಯರಾಗಲು ಪರಮ ವೈರಾಗ್ಯ ಮತ್ತು ಪ್ರಾಪಂಚಿಕ ನಿರಾಸಕ್ತಿಯ ಅಗತ್ಯವಿದೆ ಎಂದು ಜನರು ಆಗಾಗ ಭಾವಿಸುವುದುಂಟು.
ಮಹಿಳೆಯರ ಸ್ಥಾನ, ವಿವಾಹ, ಸಾಂಸಾರಿಕ ಜೀವನ ಮುಂತಾದವುಗಳ ಬಗೆಗೆ ವೃಥಾ ಅಳುಕಿನಿಂದ ಜನರು ಕೃಷ್ಣಪ್ರಜ್ಞೆಯಿಂದ ದೂರವಿರಲು ಪ್ರಯತ್ನಿಸುತ್ತಾರೆ. ಅನೇಕ ಸಲ ನನ್ನನ್ನೇ “ಕೃಷ್ಣಪ್ರಜ್ಞೆಯಲ್ಲಿರುತ್ತ ವಿವಾಹವಾಗಬಹುದೆ?” ಎಂದು ಅಂಜುತ್ತಾ ಕೇಳಿರುವುದುಂಟು. ಆದರೆ ಈಚಿನ ದಿನಗಳಲ್ಲಿ ನಿಮ್ಮ ಕೈ ತೋಟದ ಗೋಡೆಯ ಆಚೆ ನೋಡಿದರೆ ಕೃಷ್ಣ ಪ್ರಜ್ಞೆಯ ದಂಪತಿ ತಮ್ಮ ಮಕ್ಕಳೊಡನೆ ಆಡುತ್ತಿರುವುದನ್ನು ನೋಡಬಹುದೇನೋ.
ಇದು ಇನ್ನಷ್ಟು ಪ್ರಶ್ನೆಗಳು ಏಳಲು ಅವಕಾಶ ಮಾಡಿಕೊಡುತ್ತದೆ: ಕೃಷ್ಣಪ್ರಜ್ಞೆಯ ಭಕ್ತರು ವಿವಾಹವಾಗಿ ಸಂಘದ ಸಾಮಾನ್ಯ ಸದಸ್ಯರ ಜೊತೆಯಲ್ಲೇ ಬಾಳಲಾರಂಭಿಸಿದರೆ, ಭಕ್ತರು ತಮ್ಮ ಹುರುಪಿನ ಪ್ರಾರ್ಥನೆ ಮತ್ತು ಬೋಧನೆಯ ಜೀವನವನ್ನು ನಿಲ್ಲಿಸಿಬಿಡುತ್ತಾರೆಯೆ?
ಕೃಷ್ಣ ಪ್ರಜ್ಞೆಯನ್ನು ಗಂಭೀರವಾಗಿ ಆಚರಿಸುವುದೆಂದರೆ ಕೆಲವೇ ಜನ ಭಾಗ್ಯವಂತರು (ಅಥವಾ ಕೆಲವರು ಹೇಳುವಂತೆ ನಿಂದಿತರು) ಕೆಲವು ದೇವಸ್ಥಾನಗಳಲ್ಲಿ ಜೀವಿಸುವುದೆಂದೆ? ಉಳಿದವರು ದೂರದರ್ಶನ ವೀಕ್ಷಣೆ, ಗಾಲ್ಫ್ ಆಟ ಅಥವಾ ಸಂತೋಷ ಕೂಟಗಳಿಗೆ ಹೋಗುವುದರ ನಡುವಿನ ಬಿಡುವಿನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದು ನಿರೀಕ್ಷಿಸಬಹುದೆ? ಜನ ಸಾಮಾನ್ಯರ ದೈನಂದಿನ ಚಟುವಟಿಕೆಗಳಲ್ಲಿ ಕೃಷ್ಣಪ್ರಜ್ಞೆಯು ಎಷ್ಟರ ಮಟ್ಟಿಗೆ ಮುಖ್ಯವಾದುದು?
ವೈದಿಕ ಸಾಹಿತ್ಯದ ಪ್ರಕಾರ ನಾವು ಈಗ ಜೀವಿಸುತ್ತಿರುವ ಯುಗವನ್ನು ಕಲಿಯುಗ ಎಂದು ಕರೆಯುತ್ತಾರೆ. ಇದು ಜಗಳದ ಯುಗ. ಆಕರ್ಷಣೆ, ಭಿನ್ನಾಭಿಪ್ರಯ ಮತ್ತು ಉದ್ವೇಗಗಳ ಯುಗ. ಐದು ಸಾವಿರ ವರ್ಷಗಳ ಹಿಂದೆ ರಚಿತವಾದ ಶ್ರೀಮದ್ ಭಾಗವತದಲ್ಲಿ ಕಲಿಯುಗವು ಆಧ್ಯಾತ್ಮಿಕ ಅಸಮಂಜಸತೆ ಮತ್ತು ತನ್ಮೂಲಕವಾದ ಸಾಮಾಜಿಕ ಅಧಃಪತನವನ್ನು ಹೊಂದಿರುತ್ತದೆಂದು ಭವಿಷ್ಯ ನುಡಿಯಲಾಗಿದೆ.
ಕಾಲಾನುಕ್ರಮದಲ್ಲಿ ಪರಿಸ್ಥಿತಿಗಳು ಆಧೋಗತಿಗೆ ಇಳಿಯುತ್ತವೆ. ಆದರೆ ಈಗಾಗಲೇ ವೈಯಕ್ತಿಕ ಸಂಬಂಧಗಳು ಸಂಕಷ್ಟಗಳಿಂದ ತುಂಬಿ ತುಳುಕುತ್ತಿವೆ. ಸುಖೀ ಸಂಸಾರದ ಕನಸನ್ನು ಈಡೇರಿಸಿಕೊಳ್ಳುವುದು ಸುಲಭ ಸಾಧ್ಯವಲ್ಲದ ಸವಾಲಾಗಿ ತೋರುತ್ತದೆ. “ಪ್ರೇಮ ಭಾರ” ವು ಹೊರಲಾರದ ಹೊರೆಯಾಗುತ್ತಿದೆ.
ಮನೆಗಳಲ್ಲಿ ಮುಕ್ತ ವಾತಾವರಣ, ಉತ್ತಮ ಸಂವಹನ, ಗೌರವ, ವಿಧೇಯತೆ, ನಿಷ್ಠೆ ಮತ್ತು ಉಲ್ಲಾಸ ಮುಂತಾದವುಗಳಿಗೆ ಪ್ರೋತ್ಸಾಹ ಕೊಡುವುದು ಈಗ ಅಪರೂಪವಾಗುತ್ತಿದೆ. ಮನೆಯ ಹೊರಗೆ ಅತ್ಯಂತ ಸಮರ್ಥರಾಗಿರುವಂತಹ ಜನರಿಗೆ ಕೂಡ ಅತ್ಯಂತ ಸರಳವಾದ ಸಾಂಸಾರಿಕ ಸಮಸ್ಯೆಗಳು ದುರ್ಲಂಘ್ಯವಾಗಿ ತೋರುತ್ತವೆ.
ಕೌಟುಂಬಿಕ ಸಂಘರ್ಷಗಳ ಅಂತರ್ಗತ ಕಾರಣಗಳನ್ನು ಅರಿತುಕೊಳ್ಳುವುದರಲ್ಲಿಯೇ ಈ ಸಮಸ್ಯೆಗಳು ಪರಿಹಾರವು ಅಡಗಿದೆ.

“ಆದರೆ ಗುರಿ ಎಂಬುದೇ ಇಲ್ಲವಲ್ಲ? ಜೀವನಕ್ಕೆ ಏನೂ ಅರ್ಥವೇ ಉಳಿದಿಲ್ಲ.” ಎಂದು ಎರಡು ಮಕ್ಕಳ ತಾಯಿಯೊಬ್ಬರು ನನ್ನ ಬಳಿ ಒಮ್ಮೆ ಒತ್ತಿ ಹೇಳಿದರು.
“ಏನೂ ಅರ್ಥವೇ ಇಲ್ಲವೆ?” ಎಂದು ನಾನು ಪ್ರಶ್ನಿಸಿದೆ.
“ನನ್ನ ಜೀವನದಲ್ಲಿರುವ ಏಕಮೇವ ಅರ್ಥವೆಂದರೆ ನನ್ನ ಮಕ್ಕಳು.”
“ಆದರೆ ನಿಮ್ಮ ಜೀವನ ಅರ್ಥಶೂನ್ಯವಾಗಿದ್ದರೆ, ನಿಮ್ಮ ಮಕ್ಕಳು ಅದನ್ನು ಹೇಗೆ ತಾನೆ ಅರ್ಥಪೂರ್ಣವಾಗಿ ಮಾಡಬಲ್ಲರು?”
ನಮ್ಮ ದೈನಂದಿನ ಜೀವನದಲ್ಲಿ ನಮ್ಮ ಮನಸ್ಸನ್ನು ತುಂಬಿ ನಮ್ಮನ್ನು ಪ್ರೇರೇಪಿಸುವಂತಹ ಅರ್ಥಗಳನ್ನೂ ಗುರಿಗಳನ್ನೂ ನಾವು ಕಾಣುತ್ತೇವೆ. ಪ್ರತಿದಿನ ಬೆಳಗ್ಗೆ ನಾವು ಎಚ್ಚರಗೊಂಡಾಗಲೂ ಹೆಂಡತಿ, ಗಂಡ, ಪ್ರೀತಿಪಾತ್ರರು, ಮಕ್ಕಳು, ಕೆಲಸ, ಹಣ, ಜೀವನ ಪಥ, ಮನೆ ಕೆಲಸ ಅಥವಾ ಕೇವಲ ಬೆಳಗಿನ ತಿಂಡಿ ಮುಂತಾದವನ್ನು ಕುರಿತು ನಮ್ಮ ಮನಸ್ಸಿನಲ್ಲಿ ಆಲೋಚನೆಗಳು ನುಗ್ಗಿ ಬರುತ್ತವೆ.
ನಾವು ದೇಹಸ್ಥವಾದ ಆತ್ಮಗಳಾಗಿರುವುದರಿಂದ ನಮ್ಮ ದೇಹಗಳನ್ನು ಕುರಿತು ಅಥವಾ ಇತರರ ದೇಹಗಳ ವಿದ್ಯಮಾನಗಳನ್ನು ಕುರಿತು ಯೋಚಿಸುವುದೇ ನಮ್ಮ ಪ್ರಪ್ರಥಮ ಮತ್ತು ಪ್ರಮುಖ ಕರ್ತವ್ಯ ಎಂದು ಭಾವಿಸುತ್ತೇವೆ. ಆದರೆ ವೇದಗಳು ಹೇಳುತ್ತವೆ. “ಅಲ್ಲ ಇದಕ್ಕಿಂತ ಇನ್ನೂ ಉನ್ನತವಾದ ಗುರಿಗಳಿವೆ!
ಮಾನವ ಜೀವನವು ಆತ್ಮಸಾಕ್ಷಾತ್ಕಾರವನ್ನು ಪಡೆಯಲು ಉದ್ದಿಷ್ಟವಾಗಿದೆ. ನಿಮ್ಮ ದೇಹ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಕುರಿತು ಹಗಲೂ ಇರುಳೂ ನೀವು ಯೋಚನಾ ಮಗ್ನರಾಗಿದ್ದರೆ ಅಮೂಲ್ಯವಾದ ಅವಕಾಶವೊಂದನ್ನು ನೀವು ವ್ಯರ್ಥಗೊಳಿಸಿದಂತಾಗುತ್ತದೆ. ತತ್ಪರಿಣಾಮವಾದ ಆತಂಕ, ಬಳಲಿಕೆ ಮತ್ತು ಉದ್ವಿಗ್ನತೆಗಳು, ನಿಮ್ಮ ಪ್ರೇಮಪೂರ್ವಕ ಸಂಬಂಧಗಳು ಒಡೆದು ಚೂರು ಚೂರಾಗುವಂತೆ ಮಾಡುತ್ತವೆ. ಸಂಕಟ ಮಾತ್ರ ಉಳಿಯುತ್ತದೆ.”
ದೇಹಾಧಾರಿತರಾದ ಇತರರಿಗೆ ಸಹಾಯ ಮಾಡುವ ಪ್ರಯತ್ನಗಳು ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತವಷ್ಟೆ ಎಂದು ವೇದಗಳು ಸೂಚಿಸುತ್ತವೆ. ಆದ್ದರಿಂದ ವೈರಾಗ್ಯವನ್ನು ಅನುಸರಿಸಬೇಕೆಂದು ವೇದಗಳು ಒತ್ತಾಯಪೂರ್ವಕವಾಗಿ ಹೇಳುತ್ತವೆ. ಇದು ಕೇವಲ ಕೆಲವು ಸಂನ್ಯಾಸಿಗಳಿಗೆ ಮಾತ್ರ ಅನ್ವಯವಾಗುವುದಲ್ಲ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ.
“ಒಂದು ಕ್ಷಣ ತಾಳಿ! ಎಲ್ಲರೂ ಪ್ರಾಪಂಚಿಕತೆಯನ್ನು ತ್ಯಾಗ ಮಾಡಿ ಹರೇಕೃಷ್ಣ ಆಂದೋಲನಕ್ಕೆ ಸೇರಿದರೆ, ದೈನಂದಿನ ವ್ಯವಹಾರಗಳು ನಡೆಯುವುದು ಹೇಗೆ?”
“ದೈನಂದಿನ ವ್ಯವಹಾರಗಳು ಹೇಗೆ ನಡೆಯಬೇಕೆಂದು ನೀವು ಯೋಚಿಸುತ್ತೀರೋ ಹಾಗಂತೂ ನಡೆಯುವುದಿಲ್ಲ” ಎಂದು ಶ್ರೀಲ ಪ್ರಭುಪಾದರು ಮಾರ್ನುಡಿಯುತ್ತಾರೆ.
ಆದರೂ ಪ್ರತಿಯೊಬ್ಬರೂ ದೇವಸ್ಥಾನಕ್ಕೆ ವಲಸೆಹೋಗಬೇಕು ಎಂದು ಶ್ರೀಲ ಪ್ರಭುಪಾದರು ಬೋಧಿಸುವುದಿಲ್ಲ. ಆದರೆ ಸ್ವಾರ್ಥದಿಂದ ಕೂಡಿದ ಮತ್ತು ದುರಾಚಾರದ ಚಟುವಟಿಕೆಗಳತ್ತ ತುಯ್ಯುವ ನಮ್ಮ ಪ್ರವೃತ್ತಿಯನ್ನು ತೊರೆಯಬೇಕು. ಮನೆಯಲ್ಲಿ ಅಥವಾ ನಾವು ಎಲ್ಲಿ ಇರುತ್ತೇವೋ ಅಲ್ಲಿ ಆಧ್ಯಾತ್ಮಿಕ ಜೀವನವನ್ನು ಅಭ್ಯಾಸ ಮಾಡಲು ನಾವು ಪ್ರಾರಂಭಿಸಬೇಕು.

“ಆದರೆ ನಮ್ಮ ಸಾಂಸಾರಿಕ ಸಮಸ್ಯೆಗಳನ್ನು ಪರಿಹರಿಸಲು ವೈರಾಗ್ಯವು ಹೇಗೆ ಸಹಾಯ ಮಾಡುತ್ತದೆ? ಈಗ ನಾನು ನೋಡುತ್ತಿರುವಂತೆ, ಹೆಂಡತಿ ಮತ್ತು ಮಕ್ಕಳೊಡನೆ ನಿಕಟವಾಗಿರುವಂತಹ ಬಾಂಧವ್ಯ ಸಾಕಷ್ಟು ಪ್ರಮಾಣದಲ್ಲಿ ಇರುವಂತಿಲ್ಲ.”
ಹೌದು! ಸಾಕಷ್ಟು ಆಧ್ಯಾತ್ಮಿಕ ಅನುರಾಗ ಇಲ್ಲಿಲ್ಲ. ಸ್ವಾರ್ಥಮೂಲವಾದ ಲೈಂಗಿಕ ಉಪಭೋಗಗಳಿಗೆ ನಾವು ಅಂಟಿಕೊಂಡಿದ್ದಷ್ಟೂ ನಮ್ಮ ಸಂಬಂಧಗಳಲ್ಲಿ ಸ್ವಾರ್ಥಪೂರ್ಣವಾಗಿಯೇ ನಾವು ಉಳಿಯುತ್ತೇವೆ. ನನ್ನ ಸಂಗಾತಿಯು ನನ್ನ ಇಂದ್ರಿಯಗಳನ್ನು ಸಂತುಷ್ಟಪಡಿಸುವ ಯಂತ್ರವಷ್ಟೇ ಅಲ್ಲ, ಅವರೂ ಕೂಡ ಒಬ್ಬರು ವ್ಯಕ್ತಿ ಎಂದು ಪರಿಗಣಿಸಲು ಆಗದಂತೆ ಸ್ವಾರ್ಥಮೂಲ ಲೈಂಗಿಕತೆಯು ನನ್ನನ್ನು ತಡೆಯುತ್ತದೆ.
ಇದು ನಮ್ಮ ಸಂಬಂಧವನ್ನು ನಾಶ ಮಾಡುವತ್ತ ಸಾಗುತ್ತದೆ. ಏಕೆಂದರೆ ನನ್ನ ಸಂಗಾತಿಯ ದೇಹವೋ ಪರಿಮಿತವಾದದ್ದು ಮತ್ತು ನನ್ನ ಕಾಮನೆಗಳೋ ಅಪರಿಮಿತವಾದವುಗಳು. ಅನತಿ ಕಾಲದಲ್ಲಿಯೇ ಅದೇ ಕಾಮನೆಗಳ ಕಾರಣದಿಂದಾಗಿ, ವಿಭಿನ್ನದೇಹದ ಹಾಗೂ ಹೊಸ ಉಪಭೋಗಾನುಭವವನ್ನು ನೀಡುವ ಇನ್ನೊಬ್ಬರು ಸಂಗಾತಿಯನ್ನು ಹುಡುಕಿಕೊಂಡು ನಾನು ಹೊರಡುತ್ತೇನೆ.
ಇದಕ್ಕೆ ಪರಿಹಾರವೆಂದರೆ ನನ್ನ ಆಧ್ಯಾತ್ಮಿಕ ಅರಿವನ್ನು ಜಾಗೃತಗೊಳಿಸುವುದು. ಅದೆಂದರೆ ಒಬ್ಬ ವ್ಯಕ್ತಿಯು ವಾಸ್ತವದಲ್ಲಿ ಒಂದು ಆತ್ಮ ಮಾತ್ರ. ಎಷ್ಟೇ ಲೈಂಗಿಕ ಉಪಭೋಗದಿಂದಲೂ ಆತ್ಮವನ್ನು ಸಂತುಷ್ಟಿಗೊಳಿಸಲಾಗುವುದಿಲ್ಲ. ಪರಮ ಆತ್ಮನೊಡನೆ ಪ್ರೀತಿಪೂರ್ವಕ ಸಂಬಂಧವನ್ನು ಸ್ಥಾಪಿಸುವಂತೆ ಅವನನ್ನು ಜಾಗೃತಗೊಳಿಸಬೇಕು.
ಆದ್ದರಿಂದ ಒಟ್ಟಾಗಿ ಪ್ರಾರ್ಥನೆ ಮಾಡುವ ಕುಟುಂಬವು ಒಟ್ಟಾಗಿ ಉಳಿಯುತ್ತದೆ ಎಂದು ಹೇಳಲಾಗಿದೆ. ಐಹಿಕ ಬಂಧನಗಳಿಂದ ನಾವು ಬಿಡುಗಡೆ ಹೊಂದಿದಷ್ಟೂ ಇತರರ ಬಗೆಗೆ ಹೆಚ್ಚು ಕಾಳಜಿವಹಿಸಲು ನಮಗೆ ಸಾಧ್ಯವಾಗುತ್ತದೆ.
ಮರದ ಬೇರಿಗೆ ನೀರೆರೆದರೆ ಇಡೀ ವೃಕ್ಷಕ್ಕೇ ಪುಷ್ಟಿ ದೊರೆಯುತ್ತದೆ. ಅದೇ ರೀತಿಯಲ್ಲಿ ಒಂದು ಕುಟುಂಬದ ಸದಸ್ಯರು ಎಲ್ಲದರ ಮೂಲವಾದ ದೇವರನ್ನು ಹುಡುಕುತ್ತಾ, ಅವನನ್ನು ಸಂತುಷ್ಟಿಗೊಳಿಸಲು ಪ್ರಯತ್ನಿಸಿದರೆ, ಅವರ ಸಂಬಂಧಗಳು ಶಾಂತಿ, ಏಕತೆ ಮತ್ತು ಸಂತೋಷದಿಂದ ಪುಷ್ಟಿಗೊಳ್ಳುವುದನ್ನು ಕಾಣಬಹುದು.
ಚೈತನ್ಯ ಚರಿತಾಮೃತದಲ್ಲಿ (ಮಧ್ಯಲೀಲೆ, ಅಧ್ಯಾಯ ೭) ಚೈತನ್ಯ ಮಹಾಪ್ರಭುಗಳು ದಕ್ಷಿಣಭಾರತದಲ್ಲಿ ಸಂನ್ಯಾಸಿಯಾಗಿ ಸಂಚಾರ ಮಾಡುತ್ತಿರುವಾಗ ಅನುಸರಿಸಿದ ಉಪದೇಶ ವಿಧಾನದ ವರ್ಣನೆ ಇದೆ. ಪವಿತ್ರ ನಾಮಗಳನ್ನು ಸಂಕೀರ್ತನೆ ಮಾಡುವಂತೆ ಜನರ ಮೇಲೆ ಪ್ರಭಾವ ಬೀರಿದ ಅವರು, ಜನರನ್ನು ವೈಷ್ಣವ ಮತಕ್ಕೆ ಸೇರುವಂತೆ ಪರಿವರ್ತಿಸಿದರು. ಈ ಮತದಲ್ಲಿ ಪರಮ ಪ್ರಭುವಾದ ಕೃಷ್ಣನನ್ನು ಪೂಜಿಸಿ ಸೇವೆ ಸಲ್ಲಿಸಲಾಗುತ್ತದೆ.
ಒಂದು ಗ್ರಾಮದಲ್ಲಿ ಕೂರ್ಮ ಎಂಬ ವೈದಿಕ ಬ್ರಾಹ್ಮಣನೊಬ್ಬನು ಚೈತನ್ಯ ಮಹಾಪ್ರಭುಗಳನ್ನು ತನ್ನ ಮನೆಗ ಆಹ್ವಾನಿಸಿ ಹೀಗೆ ಪ್ರಾರ್ಥಿಸಿದನು: “ನನ್ನ ಪ್ರೀತಿಯ ಪ್ರಭುಗಳೇ, ದಯವಿಟ್ಟು ನನಗೊಂದು ಉಪಕಾರ ಮಾಡಿ. ನಿಮ್ಮೊಂದಿಗೆ ಬರಲು ನನಗೆ ಅವಕಾಶ ಕೊಡಿ. ಐಹಿಕ ಜೀವನದಿಂದ ಉಂಟಾಗುತ್ತಿರುವ ಕ್ಲೇಶ ಪರಂಪರೆಯನ್ನು ತಡೆದುಕೊಳ್ಳಲು ಇನ್ನು ನನಗೆ ಸಾಧ್ಯವಿಲ್ಲ.”
ಶ್ರೀ ಚೈತನ್ಯ ಮಹಾಪ್ರಭುಗಳು ಉತ್ತರಿಸಿದರು. “ಮತ್ತೊಮ್ಮೆ ಹಾಗೆ ಮಾತನಾಡಬೇಡ. ಮನೆಯಲ್ಲಿಯೇ ಇದ್ದು ಕೃಷ್ಣನ ಪವಿತ್ರನಾಮವನ್ನು ಸಂಕೀರ್ತನೆ ಮಾಡುವುದೇ ಶ್ರೇಷ್ಠವಾದದ್ದು.”
ಶ್ರೀಲ ಪ್ರಭುಪಾದರು ಹೀಗೆ ವ್ಯಾಖ್ಯಾನ ಮಾಡುತ್ತಾರೆ:
ಈ ಕಲಿಯುಗದಲ್ಲಿ ಇದ್ದಕ್ಕಿದ್ದಂತೆಯೇ ಒಬ್ಬ ವ್ಯಕ್ತಿಯು ತನ್ನ ಸಂಸಾರವನ್ನು ತೊರೆಯುವುದು ಸೂಕ್ತವಲ್ಲ. ಏಕೆಂದರೆ ಜನರಿಗೆ ಯೋಗ್ಯವಾದ ಬ್ರಹ್ಮಚರ್ಯ ಜೀವನ ಹಾಗೂ ಗೃಹಸ್ಥ ಜೀವನದ ತರಬೇತಿ ದೊರೆತಿರುವುದಿಲ್ಲ. ಆದ್ದರಿಂದ ಕೌಟುಂಬಿಕ ಜೀವನವನ್ನು ತೊರೆಯಲು ಅತಿಯಾದ ಉತ್ಸುಕತೆಯನ್ನು ತೋರದಂತೆ ಆ ಬ್ರಾಹ್ಮಣನಿಗೆ ಶ್ರೀ ಚೈತನ್ಯ ಮಹಾಪ್ರಭುಗಳು ಉಪದೇಶಿಸಿದರು.

ಸಂಸಾರದಲ್ಲಿ ಇರುತ್ತಲೇ ಗುರುಗಳ ಮಾರ್ಗದರ್ಶನದಂತೆ ಹರೇಕೃಷ್ಣ ಮಹಾಮಂತ್ರವನ್ನು ಬಿಡದೆ ಜಪಿಸುತ್ತಾ ಪರಿಶುದ್ಧನಾಗಲು ಪ್ರಯತ್ನಿಸುವುದು ಶ್ರೇಷ್ಠವಾದದ್ದು. ಇದು ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆ. ಪ್ರತಿಯೊಬ್ಬರೂ ಈ ತತ್ತ್ವವನ್ನು ಅನುಸರಿಸಿದರೆ ಸಂನ್ಯಾಸವನ್ನು ಅಂಗೀಕರಿಸುವ ಅಗತ್ಯವೇ ಇಲ್ಲ.
ಹರೇಕೃಷ್ಣ ಮಹಾಮಂತ್ರವನ್ನು ಯಾವುದೇ ರೀತಿಯ ಲೋಪವಿಲ್ಲದೆ ಜಪಿಸುತ್ತ ತಾನು ಭೇಟಿಯಾಗುವ ಪ್ರತಿಯೊಬ್ಬರಿಗೂ ಅದೇ ತತ್ತ್ವವನ್ನು ಬೋಧಿಸುವ ಮೂಲಕ ಆದರ್ಶ ಗೃಹಸ್ಥನಾಗುವಂತೆ ಶ್ರೀಚೈತನ್ಯ ಮಹಾಪ್ರಭುಗಳು ಮುಂದಿನ ಶ್ಲೋಕದಲ್ಲಿ ಪ್ರತಿಯೊಬ್ಬರಿಗೂ ಬೋಧಿಸುತ್ತಾರೆ.
ಮುಂದಿನ ಶ್ಲೋಕವು ಹೀಗೆ ಹೇಳುತ್ತದೆ; “ಭಗವದ್ಗೀತೆ ಮತ್ತು ಶ್ರೀಮದ್ಭಾಗವತದಲ್ಲಿ ಕೊಟ್ಟಿರುವಂತೆ ಪ್ರಭು ಕೃಷ್ಣನ ಆದೇಶಗಳನ್ನು ಅನುಸರಿಸುವಂತೆ ಪ್ರತಿಯೊಬ್ಬರಿಗೂ ಬೋಧಿಸಿ. ಈ ರೀತಿಯಲ್ಲಿ ಗುರುಗಳಾಗಿ ಮತ್ತು ಈ ಭೂಮಿಯಲ್ಲಿರುವ ಪ್ರತಿಯೊಬ್ಬರನ್ನೂ ಉದ್ಧಾರ ಮಾಡುಲು ಪ್ರಯತ್ನಿಸಿ.”
ಇದೇ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಮಹೋನ್ನತ ಅಭಿಯಾನ. ಸಂಘಕ್ಕೆ ಸೇರಲು ಸಂಸಾರವನ್ನು ತೊರೆಯಬೇಕೆ ಎಂದು ಅನೇಕರು ಬಂದು ನನ್ನನ್ನು ಕೇಳುತ್ತಾರೆ. ಆದರೆ ಇದು ನಮ್ಮ ಅಭಿಯಾನವಲ್ಲ. ವ್ಯಕ್ತಿಯು ಸೌಕರ್ಯದಿಂದ ತನ್ನ ಮನೆಯಲ್ಲಿಯೇ ಉಳಿಯಬಹುದು.
ಮಹಾಮಂತ್ರವನ್ನು ಸಂಕೀರ್ತನೆ ಮಾಡಿ ಎನ್ನವುದೊಂದೇ ನಮ್ಮ ಕೋರಿಕೆ: ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ\ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ. ವ್ಯಕ್ತಿಯು ಅಕ್ಷರಸ್ಥನಾಗಿದ್ದು ಭಗವದ್ಗೀತಾ ಯಥಾರೂಪ ಮತ್ತು ಶ್ರೀಮದ್ ಭಾಗವತವನ್ನು ವಾಚನ ಮಾಡುವಂತಿದ್ದರೆ ಅದು ಇನ್ನೂ ಉತ್ತಮ.
ಈ ಗ್ರಂಥಗಳ ಇಂಗ್ಲಿಸ್ ಅನುವಾದ ಈಗ ಉಪಲಬ್ಧ. ಎಲ್ಲ ವರ್ಗದ ಜನರಿಗೂ ಪ್ರಿಯವಾಗುವಂತೆ ಬಹಳ ಅಧಿಕೃತವಾಗಿ ಈ ಅನುವಾದಗಳನ್ನು ಮಾಡಲಾಗಿದೆ. ಐಹಿಕ ಚಟುವಟಿಕೆಗಳಲ್ಲಿ ಮುಳುಗಿಹೋಗದೆ, ಪ್ರಪಂಚದಾದ್ಯಂತ ಜನರು ಈ ಆಂದೋಲನದ ಲಾಭವನ್ನು ಪಡೆದು ಮನೆಯಲ್ಲಿಯೇ ತಮ್ಮ ಕುಟುಂಬವರ್ಗದವರೊಡನೆ ಹರೇಕೃಷ್ಣ ಮಹಾಮಂತ್ರವನ್ನು ಸಂಕೀರ್ತನೆ ಮಾಡಬೇಕು. ಅಲ್ಲದೆ ವ್ಯಕ್ತಿಯು ಪಾಪಪೂರಿತವಾದ ಚಟುವಟಿಕೆಗಳಾದ ನಿಷಿದ್ಧಕಾಮ, ಮಾಂಸಭಕ್ಷಣೆ, ಜೂಜು ಮತ್ತು ಅಮಲು ಬರಿಸುವ ವಸ್ತುಗಳ ಸೇವನೆಯಿಂದ ದೂರವಿರಬೇಕು.
ಕೇಂದ್ರದಲ್ಲಿ ಕೃಷ್ಣ
ಮನೆಯಲ್ಲಿಯೇ ಪರಿಪೂರ್ಣತೆಯ ಪಥವನ್ನು ಕ್ರಮಿಸುವ ಪ್ರಾರಂಭದಲ್ಲಿ ವ್ಯಕ್ತಿಯು ದೇವರೇ ಮನೆಯ ಒಡೆಯ ಎನ್ನುವುದನ್ನು ಗುರುತಿಸಬೇಕು. “ನನ್ನ ಹೆಂಡತಿ”, “ನನ್ನ ಗಂಡ”, “ನನ್ನ ಮಕ್ಕಳು”, “ನನ್ನ ಕೆಲಸ, ಹಣ ಮತ್ತು ಜೀವನ ಪಥ” ಅಥವಾ “ನನ್ನ ಉಪಹಾರ” ಎಂದೆಲ್ಲ ಯೋಚಿಸುವುದು ತಪ್ಪು.
ಶ್ರೀಲ ಪ್ರಭುಪಾದರು 1966ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಕೃಷ್ಣಪ್ರಜ್ಞಾ ಆಂದೋಲನವನ್ನು ಪರಿಚಯಸಿದಾಗ, ಅನೇಕ ಯುವ ಜನರು ಅಲ್ಲಿದ್ದ ಏಕಮೇವ ಕೃಷ್ಣ ದೇವಾಲಯಕ್ಕೆ ಬಂದು ನೆಲಸಲು ಮುಂದಾದರು. ಇಷ್ಟಾದರೂ ಮನೆಯಲ್ಲಿಯೇ ಕೃಷ್ಣ ಪ್ರಜ್ಞೆಯನ್ನು ಅಭ್ಯಾಸ ಮಾಡಿಕೊಳ್ಳುವುದನ್ನು ಕುರಿತು ಶ್ರೀಲ ಪ್ರಭುಪಾದರು ಹೇಳುತ್ತಿದ್ದರು;
ವೈದಿಕ ಪದ್ಧತಿಯ ಪ್ರಕಾರ ಒಬ್ಬ ಗೃಹಸ್ಥನು ಚಿತ್ರದ ರೂಪದಲ್ಲಿಯೋ ಅಥವಾ ವಿಗ್ರಹದ ರೂಪದಲ್ಲಿಯೋ ಪರಮ ಪ್ರಭುವಿನ ರೂಪವನ್ನು ಸ್ಥಾಪಿಸಿ ದೇವರ ಸಂತುಷ್ಟಿಗಾಗಿ ಸೇವೆಸಲ್ಲಿಸುತ್ತಾನೆ. ಭಾರತದಲ್ಲಿ ಮನೆಯೊಳಗೆ “ದೇವರ ಮನೆ” ಎಂಬ ಕೋಣೆಯಲ್ಲಿ ರಾಧಾ ಕೃಷ್ಣರ ವಿಗ್ರಹವನ್ನು ಇಟ್ಟುಕೊಂಡು ಸೇವೆಸಲ್ಲಿಸುವ ಅನೇಕ ಕುಟುಂಬಗಳು ಇಂದಿಗೂ ಇವೆ. (ನಾನು ಗೃಹಸ್ಥನಾಗಿದ್ದಾಗ ನನ್ನ ಮನೆಯಲ್ಲೂ ಹೀಗಿತ್ತು.)
ಕುಟುಂಬದ ಸದಸ್ಯರು ನಿತ್ಯಕರ್ಮವೆಂಬಂತೆ ಪ್ರಾತಃಕಾಲದಲ್ಲಿ ಎದ್ದು, ದೇವರ ಮನೆಯ ಬಾಗಿಲನ್ನು ತೆರೆದು, ಅದನ್ನು ಶುಚಿಮಾಡಿ, ಪ್ರಾರ್ಥನೆಗಳನ್ನೂ ದೇವರನಾಮಗಳನ್ನೂ ಸಲ್ಲಿಸಿ ಅನಂತರವೇ ಫಲಾಹಾರವನ್ನು ಸೇವಿಸಿ ದೈನಂದಿನ ಕೆಲಸಗಳನ್ನು ಆರಂಭಿಸುತ್ತಾರೆ.

ಇಲ್ಲಿನ ಮುಖ್ಯ ಸಂಗತಿ ಏನೆಂದರೆ ಪರಮ ಪ್ರಭುವೇ ಮನೆಯ ಒಡೆಯ. ಕುಟುಂಬದ ಸದಸ್ಯರೆಲ್ಲ ಅವನ ನೌಕರರು ಅಥವಾ ದಾಸರು.ಗೃಹಕೃತ್ಯಗಳು ನಡೆಸಲು ಅಗತ್ಯವಾದ ಧನ ಸಂಪಾದನೆ ಮಾಡಲು ವ್ಯಕ್ತಿಯು ತನ್ನ ಕಚೇರಿಗೋ ಅಥವಾ ಇತರ ಕಾರ್ಯಕ್ಷೇತ್ರಕ್ಕೋ ಹೋದಾಗ, “ಹಣಬೇಕು, ಇಲ್ಲದಿದ್ದರೆ ದೇವರ ಸೇವೆ ನಿಂತು ಹೋಗುತ್ತದೆ” ಎಂದು ಯೋಚಿಸುತ್ತಾನೆ. ಈ ರೀತಿಯಲ್ಲಿ ಒಬ್ಬ ಗೃಹಸ್ಥನು ದ್ರವ್ಯಾರ್ಜನೆ ಮಾಡುವಾಗಲೂ, ನಿರ್ಲಿಪ್ತನಾಗಿ ತನ್ನ ಕರ್ತವ್ಯವನ್ನು ಮಾಡುತ್ತಾ ದೈವ ಪ್ರಜ್ಞಾವಂತನಾಗಿ ಯೋಗದಲ್ಲಿ ಸ್ಥಿತನಾಗಿರಬಹುದು.
ಅವನು ಮಾರುಕಟ್ಟೆಗೆ ಹೋದಾಗ ಹೀಗೆ ಯೋಚಿಸಬಹುದು. “ಓಹ್ ಇದು ಬಹಳ ಸೊಗಸಾಗಿದೆ. ಇದನ್ನು ಪ್ರಭು ಕೃಷ್ಣನಿಗೆ ಸಮರ್ಪಿಸಬಹುದು.” ಸ್ನೇಹಿತರೊಬ್ಬರ ಮನೆಗೆ ಪ್ರೀತಿ ವಿಶ್ವಾಸಗಳಿಂದ ನೀವು ಹೂವು ಅಥವಾ ಹಣ್ಣುಗಳನ್ನು ತರುವ ಹಾಗೆ, ದೇವರಿಗೂ ತರುವುದನ್ನು ಕುರಿತು ನೀವು ಯೋಚಿಸಬಹುದು. ನಮ್ಮ ಪ್ರತಿಯೊಂದು ಚಟುವಟಿಕೆಯಲ್ಲೂ ದೈವ ಪ್ರಜ್ಞೆ ಇರುವ ರೀತಿಯಲ್ಲಿ ನಮ್ಮ ಜೀವನವನ್ನು ಅಳವಡಿಸಿಕೊಳ್ಳಬೇಕು.
ಪತಿಯು ಅಡಿಗೆಯ ಪದಾರ್ಥಗಳನ್ನು ತಂದು ಪತ್ನಿಗೆ ಒಪ್ಪಿಸಿದಾಗ, ಅವಳು ಯೋಚಿಸುತ್ತಾಳೆ: “ನಾನು ಇದನ್ನು ಪ್ರಭು ಕೃಷ್ಣನಿಗಾಗಿ ಅಡಿಗೆ ಮಾಡುತ್ತೇನೆ.” ಕೃಷ್ಣನ ಸೇವೆಗಾಗಿ ಆ ಕೆಲಸವನ್ನು ಮಾಡುವುದರಿಂದ ಅವಳು ಅಡಿಗೆ ಮನೆಯನ್ನು ವಿಶೇಷವಾಗಿ ಶುಚಿಯಾಗಿ ಇಡುತ್ತಾಳೆ.
ಅಡಿಗೆ ಮಾಡುತ್ತಾ ಅದರ ರುಚಿಯನ್ನು ಅವಳು ಪರೀಕ್ಷಿಸುವುದಿಲ್ಲ, ಅಷ್ಟೇಕೆ ಅದನ್ನು ಅವಳು ಆಘ್ರಾಣಿಸುವುದೂ ಇಲ್ಲ. ಕೃಷ್ಣನಿಗೆ ಮೊದಲು ಸಮರ್ಪಿಸಿದ ಹೊರತು ಯಾವುದೇ ಪದಾರ್ಥವನ್ನು ತಿನ್ನುವ ಯೋಚನೆ ಮಾಡಬಾರದು ಎಂಬ ತರಬೇತಿಯನ್ನು ಮಕ್ಕಳಿಗೂ ನೀಡಲಾಗಿರುತ್ತದೆ. ಅಡಿಗೆ ಮಾಡಿ ನೈವೇದ್ಯ ಮಾಡಿದ ಮೇಲೆ ಪ್ರತಿಯೊಬ್ಬರೂ ತಮಗೆ ಬೇಕಾದಷ್ಟನ್ನು ಸೇವಿಸಬಹುದು.
ಕೆಲಸ ಮಾಡುವುದು ಮತ್ತು ಅಡಿಗೆ ಮಾಡುವುದು ನಡೆಯುತ್ತಲೇ ಇರುತ್ತದೆ. ಆದರೆ ದೇವರನ್ನು ಸಂತುಷ್ಟಿಗೊಳಿಸಲು ಎಲ್ಲ ಕೆಲಸಗಳನ್ನೂ ಮಾಡುವ ಸರಳ ತಂತ್ರವನ್ನು ಕಲಿಯುವ ಮೂಲಕ ವ್ಯಕ್ತಿಯ ದೈವ ಪ್ರಜ್ಞೆಯು ಸೊಗಸಾಗಿ ವಿಕಾಸಹೊಂದುತ್ತದೆ. ಈ ಯೋಚನಾ ಕ್ರಮದಲ್ಲಿ ವ್ಯಕ್ತಿಯು ಮುಂದುವರಿದಂತೆಲ್ಲ, ಪ್ರಭುವಿನ ಸೇವೆಗಾಗಿ ದೇಹವನ್ನು ಅರ್ಹ ಸ್ಥಿತಿಯಲ್ಲಿ ಇಟ್ಟುಕೊಳ್ಳುವ ಸಲುವಾಗಿ ಆಹಾರ ಸೇವನೆ ಮತ್ತು ನಿದ್ದೆಯನ್ನು ಮಾಡುವುದು ಹೇಗೆ ಎಂದು ಕಲಿಯುತ್ತಾನೆ.
ಇದೇ ಜೀವನದ ದೈಹಿಕ ವೇದಿಕೆಯಲ್ಲವೇ ಎಂದು ಒಬ್ಬ ವ್ಯಕ್ತಿಯು ಯೋಚಿಸಬಹುದು. ಅಲ್ಲ, ಇದು ಆಧ್ಯಾತ್ಮಿಕ ವೇದಿಕೆ. ಏಕೆಂದರೆ ದೇಹವು ಪ್ರಭು ಕೃಷ್ಣನಿಗೆ ಸೇರಿದ್ದು ಎನ್ನುವುದನ್ನು ವ್ಯಕ್ತಿಯು ಕಂಡುಕೊಳ್ಳುತ್ತಾನೆ. ಈ ಸರಳವಾದ ತಂತ್ರವಿಧಾನವನ್ನು ಅರಿತುಕೊಂಡು ಅದರ ಪ್ರಕಾರ ನಡೆಯಲು ನಾವು ಕಲಿತುಕೊಂಡರೆ, ನಾವು ಮುಕ್ತರಾಗಿ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಪಡೆಯುತ್ತೇವೆ.
ಹೀಗೆ ಸ್ವಲ್ಪ ಪ್ರಮಾಣದ ಮಾರ್ಗದರ್ಶನದಿಂದಲೇ ನಾವು ಬಹಳ ಸುಲಭವಾಗಿ ಕೃಷ್ಣಪ್ರಜ್ಞೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ವಿಗ್ರಹ ರೂಪದಲ್ಲಿರುವ ಕೃಷ್ಣನಿಗೆ ಸಣ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸುವುದನ್ನು ನಾವು ಪ್ರಾರಂಭಿಸಬಹುದು. ಅನಂತರ ನಾವು ಇಷ್ಟಪಟ್ಟರೆ, ನಮ್ಮ ಆರಾಧನಾ ವಿಧಿಗಳಿಗೆ ಮತ್ತಷ್ಟು ವಿಧಾನಗಳನ್ನು ನಾವು ಸೇರಿಸಿಕೊಳ್ಳಬಹುದು.
ನಾವು ಧೂಪ ಮತ್ತು ಪುಷ್ಪಗಳನ್ನು ಸಮರ್ಪಿಸಬಹುದು. ಹಾಡು ಹೇಳಬಹುದು. ವಾದನಗಳನ್ನು ನುಡಿಸಬಹುದು. ನರ್ತನ ಮಾಡಬಹುದು. ಕುಟುಂಬದಲ್ಲಿರುವ ಪ್ರತಿಯೊಬ್ಬರೂ ಇದನ್ನು ಅಭ್ಯಾಸ ಮಾಡಿಕೊಳ್ಳಬಹುದು. ಕೃಷ್ಣನನ್ನು ಒಟ್ಟಾಗಿ ಪೂಜಿಸುವುದು, ಅವನ ಮಹಿಮೆಗಳನ್ನು ಕುರಿತು ಹಾಡುವುದು ಅವನನ್ನು ಕುರಿತು ಶ್ರವಣ ಮಾಡುವುದು ಬಹಳ ಆನಂದದ ಸಂಗತಿ.
ಜೀವನದ ಅಂತಿಮ ಗುರಿಯನ್ನು ಇವೆಲ್ಲ ಸದಾ ನಮಗೆ ನೆನಪಿಸುತ್ತಿರುತ್ತವೆ. ದಿನದ ಮೊದಲ ಕಾರ್ಯವೆಂದು ಇವನ್ನು ನಾವು ತಪ್ಪದೆ ನಡೆಸಿದರೆ, ಕಲಿಯುಗದ ಪ್ರಭಾವವು ನಮ್ಮ ಪ್ರಾಕಾರದ ಹೊರಗೇ ಉಳಿಯುವುದನ್ನು ನಾವು ಗಮನಿಸಬಹುದು. ಒಳಗಿರುವುದೆಲ್ಲ ಅತ್ಯಂತ ಗ್ರಾಹ್ಯವಾಗಿರುತ್ತದೆ. ನೀವೇ ಪ್ರಯತ್ನಿಸಿ ನೋಡಿ!
ಸ್ನೇಹಿತರು
ಸಂಕೀರ್ತನಾ ಆಂದೋಲನವು ಒಂದು ಸಾಮಾಜಿಕ ಆಂದೋಲನ. ನಾವು ಯೋಗ್ಯವಾದ ರೀತಿಯಲ್ಲಿ ವಿಕಾಸಹೊಂದಿ ಪ್ರೌಢರಾಗಲು, ಕೃಷ್ಣನಿಗೆ ಭಕ್ತಿ ಸೇವೆಯನ್ನು ಸಲ್ಲಿಸುವ ಕೈಂಕರ್ಯದಲ್ಲಿ ಭಕ್ತರೊಡನೆ ಸಹಚರಿಸುವುದು ಅತ್ಯಗತ್ಯ. ಆದ್ದರಿಂದ ನಾವು ಭಕ್ತರನ್ನು ನಮ್ಮ ಮನೆಗಳಿಗೆ ಆಹ್ವಾನಿಸಬೇಕು.

ಶ್ರೀಲ ಪ್ರಭುಪಾದರ ಶಿಷ್ಯರಲ್ಲಿ ಒಬ್ಬರು ವಿವಾಹವಾದಾಗ ವಿಶೇಷ ಉಪದೇಶಕ್ಕಾಗಿ ಅವರಲ್ಲಿ ಕೋರಿದರು. ಪ್ರಭುಪಾದರು ಅವರಿಗೆ ಹೀಗೆ ಹೇಳಿದರು: “ನೀವು ಯಾವಾಗಲೇ ಪ್ರಸಾದವನ್ನು ಸ್ವೀಕರಿಸಿದರೂ ಜೊತೆಗೆ ಅತಿಥಿಗಳಿರಲಿ.” ಭಕ್ತರಾದ ಅತಿಥಿಗಳನ್ನು ಆಹ್ವಾನಿಸುವುದರಿಂದ ಗೃಹಲೋಕದಲ್ಲಿ ಕೃಷ್ಣ ಪ್ರಜ್ಞೆಯು ಜೀವಂತವಾಗಿ ಉಳಿಯುತ್ತದೆ.
ಅವರ ಸ್ವಾಗತ ಮತ್ತು ಮನರಂಜನೆಗಾಗಿ ಕುಟುಂಬದ ಜನರೆಲ್ಲ ಸಿದ್ಧತೆಯ ಸಂಭ್ರಮದಲ್ಲಿರಬಹುದು. ಗೃಹಸ್ಥನು ಮಧ್ಯಾಹ್ನದ ಭೋಜನಕ್ಕೆ ಅತಿಥಿಗಳನ್ನು ಆಹ್ವಾನಿಸುವುದು ಒಂದು ವೈದಿಕ ಸಂಪ್ರದಾಯವಾಗಿದೆ. ಒಂದು ಪಕ್ಷ ಅತಿಥಿಗಳು ಬರದಿದ್ದರೆ ಅವನು ಬೀದಿಗೆ ಹೋಗಿ, “ಯಾರಾದರೂ ಹಸಿದವರಿದ್ದರೆ ದಯವಿಟ್ಟು ಬಂದು ನಮ್ಮೊಡನೆ ಭೋಜನವನ್ನು ಸ್ವೀಕರಿಸಬೇಕು!” ಎಂದು ಘೋಷಿಸುತ್ತಿದ್ದ.
ಇಂತಹ ಬೇರೆಯವರ ಸಲುವಾಗಿ ನಮ್ಮನ್ನು ನಾವು ವಿಸ್ತರಿಸಿಕೊಂಡರೆ, ಇಂದಿನ ವಿಭಕ್ತ ಕುಟುಂಬಗಳ “ನಾನು, ನನ್ನದು” ಎಂಬ ರೋಗ ಲಕ್ಷಣಗಳಿಂದ ನಾವು ವಿಚಲಿತರಾಗುವುದಿಲ್ಲ. ಅದು ಸುಖಮಯ ಸಂಬಂಧಗಳನ್ನು ತೊಡೆದು ಹಾಕುವತ್ತ ಸಾಗುತ್ತದೆ; ಆಧ್ಯಾತ್ಮಿಕ ಪರಿಪೂರ್ಣತೆಯ ಸಾಮರ್ಥ್ಯವನ್ನು ನಾಶಪಡಿಸುತ್ತದೆ.
ಒಮ್ಮೆ ನಾನು ಸ್ವರ್ಗ ಮತ್ತು ನರಕಗಳನ್ನು ಚಿತ್ರಿಸುವ ಕೆಲವು ಚೀನಾ ದೇಶದ ಚಿತ್ರಗಳನ್ನು ನೋಡಿದೆ. ಸ್ವರ್ಗದಲ್ಲಿ ಅನೇಕ ಜನರು ಅನ್ನದ ಬಟ್ಟಲು ಮತ್ತು ಊಟದ ಕಡ್ಡಿಗಳನ್ನು ಹಿಡಿದುಕೊಂಡು ಕುಳಿತಿದ್ದರು. ಅವರು ಪರಸ್ಪರ ಸಂತೋಷದಿಂದ ಆಹಾರವನ್ನು ಹಂಚಿಕೊಂಡು ತಿನ್ನುತ್ತಿದ್ದರು. ನರಕದಲ್ಲಿ ಜನರು ತಮ್ಮಷ್ಟಕ್ಕೆ ತಾವೇ ತಿನ್ನುತ್ತಿದ್ದರು.
ಉತ್ಸವಗಳು
ಕೃಷ್ಣಪ್ರಜ್ಞಾ ಆಂದೋಲನದಲ್ಲಿರುವ ಭಕ್ತರು ಉತ್ಸವಗಳಿಂದ ಇಡುಕಿರಿದಿರುವ ಪಂಚಾಂಗವನ್ನು ಅನುಸರಿಸುತ್ತಾರೆ. ವಿಶೇಷವಾಗಿ ಪ್ರಮುಖ ಹಬ್ಬದ ದಿನಗಳಂದು, ಪ್ರತಿಯೊಬ್ಬರೂ ವಿವಿಧ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನೆಯು ಸಂಭ್ರಮದ ಚಟುವಟಿಕೆಗಳಿಂದ ತುಂಬಿರುತ್ತದೆ.
ಶುಚಿಗೊಳಿಸುವುದು, ಅಡಿಗೆ ಮಾಡುವುದು, ಅಲಂಕರಿಸುವುದು, ಸಂಬಂಧಪಟ್ಟ ಕೃಷ್ಣಪ್ರಜ್ಞಾ ಲೀಲೆಗಳು ಅಥವಾ ಕ್ರೀಡೆಗಳನ್ನು ಮಕ್ಕಳೊಡನೆ ಸಿದ್ಧಪಡಿಸುವುದು ಮುಂತಾದವುಗಳಿಂದ ವಾತಾವರಣವು ಆಧ್ಯಾತ್ಮಿಕ ಶಕ್ತಿಯಿಂದ ತುಂಬಿ ತುಳುಕುತ್ತಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ನೇಹಿತರನ್ನು ನಮ್ಮ ಮನೆಗೆ ಆಹ್ವಾನಿಸಬಹುದು ಅಥವಾ ನಾವೇ ಅವರ ಮನೆಗೆ ಹೋಗಬಹುದು.
ಪ್ರತಿಯೊಬ್ಬರೂ ಸಹಕಾರದ ಸಂತೋಷ ಸಂಭ್ರಮಗಳಲ್ಲಿ ಮುಳುಗುತ್ತಿರುತ್ತಾರೆ. ಯಾರು ತಾನೆ ಉತ್ತಮ ಸಂಗೀತ, ಆಹಾರ, ನರ್ತನ, ಹಾಡು, ನಾಟಕಗಳು, ಕಥೆಗಳು, ಕೀರ್ತನೆಗಳು, ಆಟಗಳು ಮತ್ತು ಅವುಗಳಲ್ಲಿ ಪಾಲ್ಗೊಳ್ಳಲು ಬರುವ ಸ್ನೇಹಿತರು ಇವುಗಳಿಂದ ಕೂಡಿರುವ ಉತ್ಸವಗಳನ್ನು ಇಷ್ಟಪಡುವುದಿಲ್ಲ?
ಉತ್ಸವಗಳಿಗೆ ಅತಿಥಿಗಳನ್ನು ಆಹ್ವಾನಿಸುವುದರಿಂದ ನಮ್ಮ ಹೃದಯಗಳು ನೀಡುವ ಮನೋಧರ್ಮದಿಂದ ಮೃದುವೂ, ವಿಶಾಲವೂ ಆಗುತ್ತವೆ. ನಮ್ಮ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಡನೆ ನಮ್ಮ ಸಂಬಂಧಗಳು ಸರಾಗವೂ ಸಂತೋಷದಾಯಕವೂ ಆಗುತ್ತವೆ.
ಕಾರುಗಳು, ಮಕ್ಕಳು ಮತ್ತು ಕೈದೋಟಗಳಿಂದ ಕೂಡಿದ ನಮ್ಮ ಮನೆಗಳು ವಾಸ್ತವದಲ್ಲಿ ಹೇಗೆ ಪ್ರಭು ಕೃಷ್ಣನಿಗೆ ಸೇರಿದವುಗಳಾಗಿವೆ ಎಂಬುದನ್ನು ನಾವು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಂಡರೆ, ಅವನ ಮನೆಯಲ್ಲಿ ನಾವೇ ಹೇಗೆ ಅತಿಥಿಗಳಾಗಿದ್ದೇವೆ ಎಂದು ತಿಳಿದುಕೊಂಡರೆ, ಪ್ರತಿದಿನದ ಪ್ರತಿಗಳಿಗೆಯಲ್ಲೂ ಕೃಷ್ಣಪ್ರಜ್ಞೆಯ ಸಂತೋಷ ಮತ್ತು ಸಂಭ್ರಮದಲ್ಲಿರುತ್ತೇವೆ.
ಹೀಗೆ ಪ್ರತಿಯೊಂದು ಪಟ್ಟಣ ಮತ್ತು ಗ್ರಾಮದಲ್ಲಿಯೂ ಪವಿತ್ರನಾಮ ಸಂಕೀರ್ತನೆಯು ಮೊಳಗುತ್ತದೆ ಎಂಬ ಚೈತನ್ಯ ಮಹಾಪ್ರಭುಗಳು ನುಡಿದ ಭವಿಷ್ಯವು ನಮ್ಮ ಮನೆಗಳಲ್ಲಿ ಮತ್ತು ಹೃದಯಗಳಲ್ಲಿ ಬಿಳಿಯ ಕಮಲದಂತೆ ಅರಳುವ ಮೂಲಕ ಈಡೇರಿದಂತಾಗುತ್ತದೆ.
ನಮ್ಮ ಜೀವನದ ಕೇಂದ್ರಭಾಗದಲ್ಲಿ ಕೃಷ್ಣನನ್ನು ಸ್ಥಾಪಿಸಿಕೊಳ್ಳಲು ಮತ್ತು ಆ ಮೂಲಕ ಅವನ ದಿವ್ಯ ಸ್ಮರಣೆಯಲ್ಲಿ ಸಂತೋಷದಿಂದ ಒಂದಾಗಿ ಬಾಳಲು ಇನ್ನೂ ಅನೇಕ ವಿಧಾನಗಳಿವೆ. ನೀವು ಬಯಸಿದರೆ, ಯಾವುದೇ ಹರೇಕೃಷ್ಣ ದೇವಸ್ಥಾನಕ್ಕೆ ಭೇಟಿಕೊಡುವ ಮೂಲಕ ಅಥವಾ ಪತ್ರ ಬರೆಯುವ ಮೂಲಕ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.






Leave a Reply