– ಸಂಗ್ರಹ: ದಶಂ
ಜಗತ್ತಿಗೆ ಕಣ್ಣಾದ ಸೂರ್ಯನ ಚಲನೆಯ ಹಬ್ಬ ಸಂಕ್ರಮಣ ಅಥವಾ ಸಂಕ್ರಾಂತಿ. ಸಂಸ್ಕೃತದಲ್ಲಿ “ಕ್ರಮಣ” ಎಂದರೆ “ಹೆಜ್ಜೆ ಇಡುವಿಕೆ” (ಕ್ರಮುಪಾದನಿಕ್ಷೇಪೇ) ಎಂದರ್ಥ. “ಸಂಕ್ರಮಣ” ಎಂದರೆ ಚೆನ್ನಾಗಿ ಹೆಜ್ಜೆ ಇಡುವಿಕೆ.

ಸೂರ್ಯನು ಒಂದು ರಾಶಿಯಲ್ಲಿ ತನ್ನ ಇರುವನ್ನು ಮುಗಿಸಿ ಇನ್ನೊಂದು ರಾಶಿಗೆ ಹೆಜ್ಜೆ ಇಡುವುದೇ ಸಂಕ್ರಮಣ ಅಥವಾ ಸಂಕ್ರಾಂತಿ. ಆದ್ದರಿಂದ ಸೂರ್ಯನ ಚಲನೆಯ ಹಬ್ಬ, ಈ ಸಂಕ್ರಾಂತಿ. ವರ್ಷಕ್ಕೆ ಹನ್ನೆರಡು ಸಂಕ್ರಾಂತಿ ಅಥವಾ ಸಂಕ್ರಮಣಗಳು. (ಏಕೆಂದರೆ ರಾಶಿಗಳು ಹನ್ನೆರಡು; ಸೌರಮಾನಗಳೂ ಹನ್ನೆರಡು) ಆದರೆ ಇವುಗಳಲ್ಲಿ ಪ್ರಮುಖವಾದವು ಎರಡು ಮಾತ್ರ.
ಸೂರ್ಯನು ಮಿಥುನರಾಶಿಯನ್ನು ಬಿಟ್ಟು ಕರ್ಕಾಟಕ ರಾಶಿಯನ್ನು ಪ್ರವೇಶಿಸುವ “ಕರ್ಕಾಟಕ ಸಂಕ್ರಮಣ” ಮತ್ತು ಧನುರ್ ರಾಶಿಯನ್ನು ಬಿಟ್ಟು ಮಕರರಾಶಿಯನ್ನು ಸಂಕ್ರಮಿಸುವ “ಮಕರಸಂಕ್ರಮಣ”. ಇವು ಸೂರ್ಯನ ಪಯಣಕ್ಕೆ ಸಂಬಂಧಿಸಿದ “ದಕ್ಷಿಣಾಯಣ” ಮತ್ತು “ಉತ್ತರಾಯಣ”ವನ್ನು ಸೂಚಿಸುವುದರಿಂದ ಇವೆರಡಕ್ಕೆ ಹೆಚ್ಚಿನ ಮಹತ್ವ.
ಉತ್ತರಾಯಣವನ್ನು “ದೇವಯಾನ” ಮತ್ತು ದಕ್ಷಿಣಾಯನವನ್ನು “ಪಿತೃಯಾನ” ಎಂದು ವೇದಗಳು ಕರೆದಿವೆ. ಉಪನಿಷತ್ತು, ಭಗವದ್ಗೀತೆ ಮತ್ತು ಮಹಾಭಾರತಗಳಲ್ಲಿ ದೇವಯಾನದ ಪ್ರಶಂಸೆ ಇದೆ. ಆಧ್ಯಾತ್ಮಿಕ ದೃಷ್ಟಿಯಿಂದ ಈ ಉತ್ತರಾಯಣ – ದಕ್ಷಿಣಾಯನ ಮಾರ್ಗಗಳು ದೇಹದ ನಾಡಿಗಳನ್ನು ಅನುಸರಿಸಿ ಇವೆ ಎಂದು ಬ್ರಹ್ಮಸೂತ್ರಗಳು ಹೇಳುತ್ತವೆ. ಯೋಗಿಗಳು ಉತ್ಕ್ರಮಣಕ್ಕೆ ಕಾಲನಿಯಮವಿಲ್ಲ ಆದರೂ ಭೀಷ್ಮಾದಿಗಳು ಉತ್ತರಾಯಣವನ್ನು ನಿರೀಕ್ಷಿಸಿದರು.
ಎಳ್ಳು – ಬೆಲ್ಲದ ಹಬ್ಬ
ಯುಗಾದಿಯು ಬೇವು – ಬೆಲ್ಲದ ಹಬ್ಬವಾದರೆ, ಸಂಕ್ರಾಂತಿಯು ಎಳ್ಳು – ಬೆಲ್ಲದ ಹಬ್ಬ. ಅಂದು ಎಳ್ಳೆಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ, ಎಳ್ಳಿನ ದಾನ, ಎಳ್ಳಿನ ಹೋಮ, ಎಳ್ಳೆಣ್ಣೆಯ ದೀಪಗಳನ್ನು ಬೆಳಗಿಸುವುದು – ಇವೆಲ್ಲಕ್ಕೂ ವಿಶೇಷ ಪ್ರಾಶಸ್ತ್ಯ.
“ಎಳ್ಳು ಯಾವಾಗಲೂ ಪಾಪಗಳನ್ನು ಪರಿಹರಿಸುವುದು ದೇಹದ ಬಲ ಮತ್ತು ಪುಷ್ಟಿಗಳನ್ನು ಬೆಳೆಸುವುದು. ಆದ್ದರಿಂದ ಅದನ್ನು ಈಗ ದಾನಮಾಡುತ್ತಿರುವೆನು. ಇದರಿಂದ ನನಗೆ ಶಾಂತಿಯನ್ನು ಕೊಡು” ಎಂಬುದೇ ಎಳ್ಳುದಾನ ಮಾಡುವ ಸಂದರ್ಭದಲ್ಲಿ ಹೇಳುವ ಶ್ಲೋಕದ ಸಾರ. ಬರಿಯ ಎಳ್ಳನ್ನು ಕೊಡುವುದು ಅಷ್ಟು ಪ್ರಶಸ್ತವಲ್ಲವೆಂದು, ಜೊತೆಗೆ ಬೆಲ್ಲವನ್ನು ಸೇರಿಸಲಾಗುವುದು. “ಎಳ್ಳು – ಬೆಲ್ಲ ತಿಂದು ಒಳ್ಳೆಯ ಮಾತನಾಡು” ಎಂಬುದು ಈ ಸಂದರ್ಭದ ಹಾರೈಕೆ.

ಚಳಿಗಾಲದಲ್ಲಿ ನಮ್ಮ ದೇಹದಲ್ಲಿರುವ ತೈಲ (Fat) ಅಂಶವು ಶಾಖಕ್ಕಾಗಿ ಖರ್ಚಾಗಿ, ಕೊರತೆ ಏರ್ಪಡುವುದು ಇದರ ಜೊತೆಗೆ ಶೀತ-ವಾತ ಸಂಬಂಧಿ ರೋಗಗಳು ಈ ಕಾಲದಲ್ಲಿ ಕಾಣಿಸುವ ಸಾಧ್ಯತೆಗಳಿವೆ. ಎಳ್ಳಿನ ಸೇವನೆ ಈ ಕೊರತೆಯನ್ನು ತುಂಬಿ, ಈ ರೋಗಗಳನ್ನು ದೂರಮಾಡಬಲ್ಲದು.
ಇದು ರೂಢಿಯ ವೈದ್ಯಕೀಯ ಹಿನ್ನೆಲೆ. ಹಾಗೆಯೇ ಎಣ್ಣೆಯ ಅಂಶ ಹೆಚ್ಚಾಗಿರುವ ಒಣಕೊಬ್ಬರಿ ನೆಲಗಡಲೆಬೀಜ – ಇವುಗಳನ್ನು ಎಳ್ಳಿನ ಜತೆಗೆ ಸೇರಿಸಲಾಗುವುದು. ಬೆಲ್ಲದ ಬದಲು ಸಕ್ಕರೆ, ಬರೀ ಸಕ್ಕರೆಯ ಬದಲು ಸಕ್ಕರೆಯಿಂದ ಮಾಡಿದ ವಿವಿಧ ಆಕಾರದ ಅಚ್ಚುಗಳು, ಕುಸುರಿಕಾಳು, ಹಣ್ಣುಗಳು, ಕಬ್ಬಿನ ತುಂಡು – ಹೀಗೆ ಈ ವೈವಿದ್ಯಗಳೆಲ್ಲ ಸದಭಿರುಚಿ ಮತ್ತು ಕಲಾವಂತಿಕೆಗಳ ಕುರುಹುಗಳಾಗಿವೆ. ಇವುಗಳನ್ನು ಮನೆಮನೆಗೆ ಕೊಂಡೊಯ್ದು ಇಷ್ಟಮಿತ್ರರಿಗೆ ವಿತರಿಸುವುದು – ಎಳ್ಳು ಬೀರುವುದು ಈ ಹಬ್ಬದ ಸಂಭ್ರಮ.
ಪ್ರಾದೇಶಿಕ ವೈಶಿಷ್ಟ್ಯ
ಸಂಕ್ರಾಂತಿಯ ಆಚರಣೆಯಲ್ಲಿ ಪ್ರಾದೇಶಿಕ ವೈಶಿಷ್ಟ್ಯಗಳಿವೆ. ತಮಿಳುನಾಡಿನಲ್ಲಿ ಇದು ಮೂರು ದಿನಗಳ “ಪೊಂಗಲ್” ಹಬ್ಬ. ಹಿಂದಿನ ದಿನ ಭೋಗಿ ಪೊಂಗಲ್ ಮಧ್ಯೆದ ದಿನ ಸೂರ್ಯ ಪೊಂಗಲ್ ಮತ್ತು ಮೂರನೆಯ ದಿನ ಹಸುಗಳ ಪೊಂಗಲ್. ಹಸುಗಳಿಗೆ ವಿಧವಿಧವಾದ ಅಲಂಕಾರ, ಮೆರವಣಿಗೆಗಳು, ಸೂರ್ಯನ ಪೂಜೆ, ಆಟಗಳ ಸ್ಪರ್ಧೆ, ವಿವಿಧ ವಿನೋದಗಳು ನಡೆಯುತ್ತವೆ.
ಆಂಧ್ರದಲ್ಲಿ ಇದು ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ಪಡೆದ ದಿನವೆಂದು ಆಚರಣೆ. ಹಾಗೆಯೇ ದಿವಂಗತರಾದ ಪಿತೃಗಳು ತಮ್ಮ ಮಕ್ಕಳ ಮನೆಗಳಿಗೆ ಬಂದು ಪೂಜೆಯನ್ನು ಸ್ವೀಕರಿಸುವ ದಿನವೆಂದೂ ನಂಬಿಕೆ.

ಚಳಿಗಾಲದಲ್ಲಿ ಹಗಲು ಕಡಮೆ; ರಾತ್ರಿ ಹೆಚ್ಚು; ಶೀತವೂ ಹೆಚ್ಚು. ಹೀಗಾಗಿ ಈ ಸಮಯದಲ್ಲಿ ಜೀವಲೋಕವೆಲ್ಲಾ ಕುಗ್ಗುವುದು. ಸಂಕ್ರಾಂತಿಯ ಈ ಸ್ಥಿತಿ ಮುಗಿದು, ಮತ್ತೆ ಹಗಲು ಹೆಚ್ಚಾಗಿ ರಾತ್ರಿ ಕಡಮೆಯಾಗಿ ಶೀತವೂ ಕಡಮೆಯಾಗಿ, ಶಾಖ ಹೆಚ್ಚಿ ಜೀವಲೋಕವು ಹಿಗ್ಗುವುದನ್ನು ಸೂಚಿಸುತ್ತದೆ. ಈ ಸಂತೋಷವನ್ನು ವ್ಯಕ್ತಗೊಳಿಸುವುದೇ ಈ ಹಬ್ಬಗಳ ಸಂಭ್ರಮಗಳ ಅರ್ಥ.
ಸುಗ್ಗಿ ಕಾಲವನ್ನು ಸೂಚಿಸಲು ಪೊಂಗಲನ್ನು ಮಾಡುವರು. ಧಾನ್ಯ ಸಂಪತ್ತಿಗೆ ಕಾರಣವಾದ ಪಶುಗಳಿಗೂ ಕೃತಜ್ಞತೆ ಸೂಚಿಸಿ, ಬೆಂಕಿಯನ್ನು ಹಾಯಿಸಿ, ರೋಗ ನಿವೃತ್ತಿ ಮಾಡುವರು.
ಸಂಕ್ರಾಂತಿ ಪುರುಷನ ವೇಷಧರಿಸಿದವನೊಬ್ಬನು ಮೊದಲು ಬೆಂಕಿಯನ್ನು ಹಾಯ್ದುಕೊಂಡು ಹೋಗುವುದನ್ನು ಈಗಲೂ ಮೈಸೂರು ಕಡೆ ನೋಡಬಹುದು. ಸಂಕ್ರಾಂತಿ ಪುರುಷನ ಆಕಾರವನ್ನು, ಮಕರಸಂಕ್ರಾಂತಿ ಯಾವ ವಾರ, ಯೋಗ, ಕರಣ, ತಿಥಿ, ಕಾಲದಲ್ಲಿ ನಡೆಯುತ್ತದೆ ಎಂಬುದರ ಆಧಾರದ ಮೇಲೆ ನಿಶ್ಚಯಿಸಬೇಕೆಂದು “ಕಾಲಪ್ರಕಾಶ” ಇತ್ಯಾದಿ ಗ್ರಂಥಗಳು ಹೇಳಿವೆ.
ಇತರ ಹಬ್ಬಗಳು ಬೇರೆ ಬೇರೆ ದಿನಗಳಲ್ಲಿ ಬರಬಹುದು ಸೌರಮಾನ – ಚಾಂದ್ರಮಾನ ಗಣನೆಯ ಭೇದ, ಪ್ರಾದೇಶಿಕ ರೂಢಿ ಭೇದ, ಮತೀಯ ಕಾರಣ ಇತ್ಯಾದಿಗಳಿಂದಾಗಿ ಒಂದು ಹಬ್ಬ ಒಬ್ಬೊಬ್ಬರಿಗೆ ಒಂದೊಂದು ದಿನ ಬೇರೆ ಬೇರೆಯಾಗಿ ಬರಬಹುದು.
ಆದರೆ ಖಗೋಳದ ಒಂದು ನಿಶ್ಚಿತ ಘಟನೆಯನ್ನು ಆಧರಿಸಿದ ಸಂಕ್ರಾಂತಿಯು ಮಾತ್ರ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಎಲ್ಲ ಕಡೆಗಳಲ್ಲಿಯೂ ನಿಶ್ಚಿತವಾಗಿ ಒಂದೇ ದಿನ ಬರುವ ಹಬ್ಬ. ಆದ್ದರಿಂದ ಸಂಕ್ರಾಂತಿ ಒಂದು ಜಾಗತಿಕ ಹಬ್ಬ; ಸಂಭ್ರಮದ ಹಬ್ಬ.

ಸಂಪಾದಕರ ಟಿಪ್ಪಣಿ: ಇದಲ್ಲದೆ ಜಯದೇವ ಗೋಸ್ವಾಮಿಯವರ ಪುಣ್ಯತಿಥಿ ಆಚರಣೆ ಮತ್ತು ಗೀತ ಗೋವಿಂದ ಉತ್ಸವ, ಮಕರ ಸಂಕ್ರಮಣದಿಂದ ಮಂಗಲವಾಗುತ್ತದೆ. ಗೋಪಿಯರು ಕೃಷ್ಣನೊಲುಮೆಗೆ ವ್ರತ ಮಾಡಿದ್ದು, ಆಂಡಾಳ್ರವರ “ತಿರುಪ್ಪಾವೈ” ಲೀಲೆ ಸಂಭವಿಸಿದ್ದೂ ಸಂಕ್ರಾಂತಿಯ ಆಜುಬಾಜೆ! ಭೀಷ್ಮಾಚಾರ್ಯರು, ಭೀಷ್ಮನೀತಿ ಉಪದೇಶಿಸಿದ್ದು, ಮಹಾನಿರ್ವಾಣ ಹೊಂದಿದ್ದು ಸಂಕ್ರಾಂತಿಯಲ್ಲೇ.






Leave a Reply