ಸಂಕೀರ್ತನ ಯಶೋಗಾಥೆಗಳು
– ಆಧಾರ: ಸಾಯಂಷಿದಾಸ
ಸಂಕೀರ್ತನ ಒಂದು ಸಮಾರಂಭ. ಇಲ್ಲಿ ಎಲ್ಲರಿಗೂ ಸ್ಥಾನವಿದೆ. ಗಂಡಸರು, ಹೆಂಗಸರು ಮಕ್ಕಳೆಂಬ ಭೇದವಿಲ್ಲ. ಶ್ರೀಕೃಷ್ಣಪ್ರೇಮವನ್ನು ಹೊಂದಲು ಈ ಭೇದವಿಲ್ಲವೆಂದ ಮೇಲೆ, ಕೃಷ್ಣನಿಗೆ ಪ್ರಿಯವಾದ ಕೆಲಸವನ್ನು ಮಾಡುವಲ್ಲಿ ಈ ಭೇದ ಏಕೆ?
ಹಾಗೆ ನೋಡಿದರೆ ಸಂಕೀರ್ತನೆಯಲ್ಲಿ ತೊಡಗಿಕೊಳ್ಳಲು ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಅವಕಾಶಗಳು ದೊರೆಯುತ್ತವೆ. ಇದು ಪೂರ್ಣಾವಧಿ ಭಕ್ತರ ವಿಷಯದಲ್ಲಿ ಅಲ್ಲ. ಭಕ್ತರು ಭಕ್ತರೇ. ಅಲ್ಲಿ ಗಂಡು ಹೆಣ್ಣು ಎಂದು ವಿಭಜಿಸಿ ನೋಡಲಾಗದು.
ಸಾಮಾನ್ಯವಾಗಿ ಅರೆಕಾಲಿಕ ಪುಸ್ತಕ ವಿತರಣೆಯಲ್ಲಿ ತೊಡಗಿಕೊಳ್ಳುವ ಸಂಸಾರೀ ಭಕ್ತರು ತಮ್ಮದೇ ಆದ ನೂರೆಂಟು ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಕಚೇರಿಗೆ ಹೋಗುವ ಸಮಯದಲ್ಲಿ ಅವರು ಅದನ್ನು ಮಾಡಲಾರರು. ಆದರೆ ಮಹಿಳೆಯರಿಗೆ ಹಾಗಲ್ಲ. ಅವರು ಬಹುತೇಕ ಮನೆಯಲ್ಲಿ ಇರುವುದರಿಂದ ನಿತ್ಯದ ಕೆಲಸಗಳು ಮುಗಿದ ಅನಂತರ ಪುಸ್ತಕ ಹಿಡಿದು ಹೊರಗೆ ಹೊರಡಬಹುದು.
ಪ್ರತಿಯೊಬ್ಬರೂ, ತಮ್ಮ ಕೈಲಾದಷ್ಟು ಸೇವೆ ಮಾಡಲೇಬೇಕು. ಭಗವಂತನು ಪ್ರತಿಯೊಬ್ಬರ ಕಾಣಿಕೆಯನ್ನೂ ಸ್ವೀಕರಿಸುವನು. ಲಂಕೆಗೆ ಸೇತುವೆ ಕಟ್ಟುವಾಗ ಶ್ರೀರಾಮ ಅಳಿಲಿನ ಸೇವೆಯನ್ನು ಒಪ್ಪಿಕೊಳ್ಳಲಿಲ್ಲವೇ?

ಪುಸ್ತಕ ವಿತರಣೆಯಲ್ಲಿ ಯಾರು ಎಷ್ಟು ಹೆಚ್ಚು ವಿತರಿಸಿದರು ಎಂಬ ಪ್ರಶ್ನೆ ಬರುವುದಿಲ್ಲ. ಹಾಗೆಂದು ನಾವು ಪ್ರಯತ್ನ ಹಾಕುವಲ್ಲಿ ಸೋಮಾರಿತನ ಮಾಡಬಾರದು, ಕೃಷ್ಣನಿಗಾಗಿ ನಾವು ಶೇಕಡಾ ನೂರರಷ್ಟು ಪ್ರಯತ್ನ ಹಾಕಿದರೆ, ಕೃಷ್ಣನೂ ನಮ್ಮೆಡೆಗೆ ಶೇಕಡಾ ನೂರರಷ್ಟೇ ಕರುಣೆ ಹರಿಸುತ್ತಾನೆ.
ನಾವು ಎಂದಿಗೂ ಮಾಯೆಯ ಹಿಂದೆ ಬಿದ್ದು ನಮ್ಮ ಸಾಮರ್ಥ್ಯ ನಷ್ಟವಾಗದಂತೆ ನೋಡಿಕೊಳ್ಳಬೇಕು. ಪ್ರತಿಯೊಂದನ್ನೂ ಶ್ರೀಕೃಷ್ಣನತ್ತ ತಿರುಗಿಸುವಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಕೆಲವರು ಹೇಳುತ್ತಾರೆ, “ಹೆಣ್ಣು ಮಕ್ಕಳು ಹೆಚ್ಚು ಪುಸ್ತಕಗಳನ್ನು ವಿತರಿಸಲು ಸಾಧ್ಯವಿಲ್ಲ.
ಅವರು ದುರ್ಬಲರಾಗಿದ್ದು, ಅವರ ದೇಹರಚನೆ ಸಂಕೀರ್ತನೆಗೆ ಹೊಂದುವಂತಿಲ್ಲ” ಎಂದು. ಇದು ನಿಜಕ್ಕೂ ನಮಗೊಂದು ಸವಾಲು. ದೇಹ ದುರ್ಬಲವಾಗಿದ್ದೀತು, ಮನಸ್ಸಿನ ಬಗ್ಗೆ ಹೇಗೆ ಹೇಳಬಲ್ಲಿರಿ? ಅದು ನಾವು ಕೃಷ್ಣನಿಗೆ ಸೇವೆ ಸಲ್ಲಿಸಬೇಕೆನ್ನುವ ನಮ್ಮ ಆಕಾಂಕ್ಷೆಯ ಮೇಲೆ ನಿರ್ಧಾರಿತವಾಗುತ್ತದೆ. ನಮ್ಮ ಅಪೇಕ್ಷೆ ಹೆಚ್ಚಿದಷ್ಟು ನಾವು ಹೆಚ್ಚು ಬಲಿಷ್ಠರಾಗುತ್ತೇವೆ. ಇದರಿಂದ ನಾವು ಪುಸ್ತಕ ವಿತರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.
ನೀನು ಪುಸ್ತಕ ಮತ್ತು ಪತ್ರಿಕೆಯ ವಿತರಣೆಯಲ್ಲಿ ನಿನ್ನೆಲ್ಲ ಪರಿಶ್ರಮವನ್ನು ಧಾರೆ ಎರೆದಿರುವುದು ನನಗೆ ಸಂತೋಷ ತಂದಿದೆ. ಪುಸ್ತಕಗಳು ಎಷ್ಟು ಹೆಚ್ಚು ವಿತರಿಸಲ್ಪಟ್ಟವು ಎಂಬುದು ಮುಖ್ಯವಲ್ಲ. ಕೃಷ್ಣನೆಡೆಗಿನ ಪ್ರಾಮಾಣಿಕತೆ ಮುಖ್ಯವಾಗುತ್ತದೆ. ಕೃಷ್ಣ ಬಯಸುವುದು ಇದನ್ನೇ.
-ಶ್ರೀಲ ಪ್ರಭುಪಾದರು, 03.02.1975ರಂದು ಗೌರಿದಾಸಿಗೆ ಬರೆದ ಪತ್ರದಲ್ಲಿ.






Leave a Reply