ಜೀವನ ಶಕ್ತಿ

ನಾವು ಪರಮ ಪ್ರಮಾಣೀಕೃತನಾದ ಕೃಷ್ಣನಿಂದ ಜ್ಞಾನವನ್ನು ಪಡೆದನಂತರ ಆತ್ಮದ ಸ್ವರೂಪದ ಕುರಿತಾದ ತಪ್ಪು ನಿರ್ಣಯಗಳನ್ನು ತೊರೆಯುತ್ತೇವೆ.

ಶ್ರೀಲ ಪ್ರಭುಪಾದರು 31ನೇ ಆಗಸ್ಟ್ 1973ರಂದು ಲಂಡನ್ ನಲ್ಲಿ ನೀಡಿದ ಉಪನ್ಯಾಸ.

ದೇಹೀ ನಿತ್ಯಮವಧ್ಯೋಽಯಂ ದೇಹೇ ಸರ್ವಸ್ಯ ಭಾರತ |

ತಸ್ಮಾತ್‌ ಸರ್ವಾಣಿ ಭೂತಾನಿ ತ್ವಂ ಶೋಚಿತುಮರ್ಹಸಿ ||

”ಭರತ ವಂಶಜನಾದ ಅರ್ಜುನನೇ, ಈ ದೇಹದಲ್ಲಿ ವಾಸಿಸುವವನನ್ನು ಎಂದೂ ಕೊಲ್ಲಲು ಸಾಧ್ಯವಿಲ್ಲ. ಆದುದರಿಂದ ನೀನು ಯಾವ ಜೀವಿಗಾಗಿಯೂ ದುಃಖಿಸುವ ಕಾರಣವಿಲ್ಲ.” (ಭಗವದ್ಗೀತಾ – 2.30)

ಭಗವದ್ಗೀತೆಯ ಈ ಭಾಗದಲ್ಲಿ ಕೃಷ್ಣನು ಅನೇಕ ರೀತಿಯಲ್ಲಿ ದೇಹದಲ್ಲಿರುವ ಆತ್ಮವು ನಿತ್ಯವಾದದ್ದು, ನಾಶವಾಗದ್ದು ಮತ್ತು ನಿರ್ವಿಕಾರವಾದದ್ದು ಎಂದು ವಿವರಿಸುತ್ತಿದ್ದಾನೆ. ಅದು ಜನಿಸುವುದಿಲ್ಲ ಮತ್ತು ಸಾಯುವುದಿಲ್ಲ. ಅದು ಯಾವಾಗಲೂ ಒಂದೇ ಸಮಸ್ಥಿತಿಯಲ್ಲಿರುತ್ತದೆ.

ಇಲ್ಲಿ ಕೃಷ್ಣನು ಹೇಳುತ್ತಿದ್ದಾನೆ, ದೇಹೀ ನಿತ್ಯಮ್ ಅವಧ್ಯೋಽಯಮ್ ದೇಹೇ ಸರ್ವಸ್ಯ ಭಾರತ ”ಎಲ್ಲ ದೇಹಗಳಲ್ಲಿಯೂ ವಾಸಿಸುವಂಥಹ ಆತ್ಮವನ್ನು ಯಾರೂ ಕೊಲ್ಲಲಾಗುವುದಿಲ್ಲ. ಇದು ಅತಿ ಮುಖ್ಯವಾದದ್ದು. ಆತ್ಮವು ಕೇವಲ ಮಾನವ ದೇಹದಲ್ಲಿದೆ. ಆದರೆ ಬೇರೆ ದೇಹಗಳಲ್ಲಿ ಇಲ್ಲ ಎಂಬುದು ಮೂಢತನದ ಸಿದ್ಧಾಂತ.” ಕೃಷ್ಣ ಹೇಳುತ್ತಾನೆ, ದೇಹೇ ಸರ್ವಸ್ಯ, “ಪ್ರತಿಯೊಂದು ದೇಹದಲ್ಲಿದೆ.”

ಅಂದರೆ ಆತ್ಮವು ಒಂದು ಇರುವೆಯಿಂದ ಹಿಡಿದು ಆನೆಯಂತಹ ಪ್ರಾಣಿಯವರೆಗೂ, ಹಾಗೆಯೇ ದೈತ್ಯಾಕಾರದ ಅಶ್ವತ್ಥ ವೃಕ್ಷದಿಂದ ಹಿಡಿದು ಸೂಕ್ಷ್ಮ ಜೀವಾಣುಗಳಲ್ಲಿಯೂ ಕೂಡ ಇದೆ.

ಕೆಲವು ಮೂಢರು ಪ್ರಾಣಿಗಳಿಗೆ ಆತ್ಮವಿಲ್ಲ ಎಂದು ಹೇಳುತ್ತಾರೆ. ಇದು ತಪ್ಪು. ಪ್ರಾಣಿಗಳಿಗೆ ಆತ್ಮವಿಲ್ಲ ಎಂದು ಅವರು ಹೇಗೆ ಹೇಳುತ್ತಾರೆ? ಇಲ್ಲಿ ಕೃಷ್ಣನ ಪ್ರಮಾಣೀಕೃತವಾದ ಹೇಳಿಕೆ ಇದೆ.

ದೇಹ ಸರ್ವಸ್ಯ “ಆತ್ಮವು ಪ್ರತಿಯೊಬ್ಬ ದೇಹದಲ್ಲಿದೆ” ಇನ್ನೊಂದು ಕಡೆ (ಭಗವದ್ಗೀತಾ 14.4) ಕೃಷ್ಣ ಹೇಳುತ್ತಾನೆ, ಸರ್ವ ಯೋನಿಷು ಕೌಂತೇಯ ಮೂರ್ತಯಃ ಸಂಭವನ್ತಿ ಯಾಃ ‘ಎಲ್ಲ ಜೀವರಾಶಿಗಳಲ್ಲಿ ಪ್ರಕಟಗೊಳ್ಳುವ ಶರೀರ ರೂಪಿ ಜೀವಿಗಳು”, ತಾಸಾಂ ಬ್ರಹ್ಮ ಮಹದ್ಯೋನಿರ್‌  “ಈ ಐಹಿಕ ಪ್ರಕೃತಿಯಲ್ಲಿ ಹುಟ್ಟುವುದರಿಂದ” ಮತ್ತು ಅಹಂ ಬೀಜಪ್ರದಃ ಪಿತಾ “ನಾನು ಬೀಜಕೊಡುವ ತಂದೆಯಾಗಿದ್ದೇನೆ.”

ತಂದೆ ಮತ್ತು ತಾಯಿ ಇಬ್ಬರೂ ಇಲ್ಲದೆ ಯಾವ ಸಂತತಿಯೂ ಇಲ್ಲ. ಆದ್ದರಿಂದ ಕೃಷ್ಣನು ವಿಶ್ವದ ತಂದೆಯಾಗಿದ್ದಾನೆ ಮತ್ತು ಭೌತಿಕ ಪ್ರಕೃತಿ ಅಥವಾ ಆಧ್ಯಾತ್ಮಿಕ ಪ್ರಕೃತಿಯೇ ತಾಯಿಯಾಗಿದ್ದಾಳೆ.

ಎರಡು ರೀತಿಯ ಪ್ರಕೃತಿಗಳಿವೆ: ಭೌತಿಕ ಪ್ರಕೃತಿ ಮತ್ತು ಆಧ್ಯಾತ್ಮಿಕ ಪ್ರಕೃತಿ ಅಥವಾ ಕೀಳಾದ ಪ್ರಕೃತಿ ಮತ್ತು ಶ್ರೇಷ್ಠ ಪ್ರಕೃತಿ (ಇದನ್ನು ಭಗವದ್ಗೀತೆಯ 7ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ). ಆಧ್ಯಾತ್ಮಿಕ ಪ್ರಕೃತಿ ಮತ್ತು ಭೌತಿಕ ಪ್ರಕೃತಿ ಎರಡೂ ಒಂದೇ ಮೂಲವಾದ ಪರಮಸತ್ಯನಿಂದ ಬಂದರೂ ಕೂಡ ಒಂದು ಶ್ರೇಷ್ಠದ್ದಾಗಿದೆ ಮತ್ತೊಂದು ಕೀಳಾಗಿದೆ.

ಶ್ರೇಷ್ಠ ಮತ್ತು ಕೀಳು ಪ್ರಕೃತಿಗಳ ಮಧ್ಯೆ ವ್ಯತ್ಯಾಸವೇನು? ಕೀಳು ಪ್ರಕೃತಿ ಅಥವಾ ಭೌತಿಕ ಪ್ರಕೃತಿಯಲ್ಲಿ ದೈವ ಪ್ರಜ್ಞೆ ಬಹುತೇಕ ಇಲ್ಲ. ಸಾತ್ತ್ವಿಕ ಗುಣದಲ್ಲಿರುವವರಿಗೆ ಸ್ವಲ್ಪ ದೈವ ಪ್ರಜ್ಞೆ ಇರುತ್ತದೆ. ರಾಜಸಿಕ ಗುಣದಲ್ಲಿರುವ ವ್ಯಕ್ತಿಗೆ ಅತಿ ಸ್ವಲ್ಪ ದೈವ ಪ್ರಜ್ಞೆ ಇರುತ್ತದೆ ಮತ್ತು ತಾಮಸಿಕ ಗುಣದಲ್ಲಿರುವವರಿಗೆ ದೈವಪ್ರಜ್ಞೆಯೇ ಇರುವುದಿಲ್ಲ. ಅಂದರೆ ಅವರಲ್ಲಿ ಸಂಪೂರ್ಣವಾಗಿ ಇರುವುದೇ ಇಲ್ಲ.

ಆದ್ದರಿಂದ ಈ ಭೌತಿಕ ಶರೀರವು, ಆತ್ಮವು ಬಂದಿರುವ ಮೂಲದಿಂದಲೇ ಬಂದರೂ ಕೂಡ ಅದು ಕೀಳಾಗಿದೆ. ಆತ್ಮ ಭೌತಿಕ ಪ್ರಕೃತಿಗಿಂತ ಶ್ರೇಷ್ಠವಾಗಿದ್ದರೂ ಕೂಡ ಅದು ಭೌತಿಕ ಪ್ರಕೃತಿಯಿಂದ ಮಾಡಲ್ಪಟ್ಟಈ ದೇಹದಲ್ಲಿ ಬಂಧಿತನಾಗಿರುವುದರಿಂದ ಅದು ಕೃಷ್ಣನನ್ನು ಮರೆಯುತ್ತದೆ. ಇದುವೇ ಸಮಸ್ಯೆ.

ಆದ್ದರಿಂದ ಯಾರು ಮೂಢರಾಗಿರುವುದಿಲ್ಲ. ಯಾರು ಬುದ್ಧಿವಂತರಾಗಿರುತ್ತಾರೋ ಮತ್ತು ಪೂರ್ಣಜ್ಞಾನ ಹೊಂದಿರುತ್ತಾರೋ ಅವರು ಮಾನವ ಜೀವಿ ಮತ್ತು ಪ್ರಾಣಿಗಳ ಮಧ್ಯೆ ಭೇದ ಮಾಡುವುದಿಲ್ಲ. ಭಗವದ್ಗೀತೆಯಲ್ಲಿ (5.18) ಶ್ರೀ ಕೃಷ್ಣನು ಹೇಳುತ್ತಾನೆ.

ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನೀ

ಶುನಿ ಚೈವ ಶ್ವಪಾಕೇ ಪಂಡಿತಾಃ ಸಮದರ್ಶಿನಃ ||

“ನಮ್ರರಾದ ಜ್ಞಾನಿಗಳು, ನಿಜವಾದ ಜ್ಞಾನವನ್ನು ಪಡೆದವರಾದುದರಿಂದ, ವಿದ್ಯಾವಿನಯ ಸಂಪನ್ನನಾದ ಬ್ರಾಹ್ಮಣನನ್ನೂ, ಹಸುವನ್ನೂ, ಆನೆಯನ್ನು, ನಾಯಿಯನ್ನೂ, ನಾಯಿಯ ಮಾಂಸವನ್ನು ತಿನ್ನುವವನನ್ನೂ ( ಅಂತ್ಯಜನನ್ನೂ) ಒಂದೇ ರೀತಿ ಕಾಣುತ್ತಾರೆ.” ಆತ್ಮವು ಎಲ್ಲ ಕಡೆಯೂ ಇದೆ. ಅದು ಕೇವಲ ಮಾನವ ಜೀವಿಗಳು ಮತ್ತು ದೇವತೆಗಳಲ್ಲಿ ಅಷ್ಟೇ ಇದೆ, ಆದರೆ ಬಡ ಪ್ರಾಣಿಗಳಲ್ಲಿ ಇಲ್ಲ ಎಂದೇನಿಲ್ಲ. ಇಲ್ಲ, ಪ್ರತಿಯೊಬ್ಬರಿಗೂ ಆತ್ಮವಿದೆ – ದೇಹೇ ಸರ್ವಸ್ಯ ಭಾರತ.

ಆದ್ದರಿಂದ ನಾವು ಕೃಷ್ಣನ ಹೇಳಿಕೆಯನ್ನು ಸ್ವೀಕರಿಸಬೇಕೋ ಅಥವಾ ಮೂಢ ಜ್ಞಾನ ಅಥವಾ ಧಾರ್ಮಿಕವಾದಿ ಎಂದು ಕರೆಸಿಕೊಂಡವರ ಹೇಳಿಕೆಯನ್ನು ಸ್ವೀಕರಿಸಬೇಕೋ? ನಾವು ಪರಮ ಪ್ರಮಾಣೀಕೃತ, ಪರಮಜೀವಿಯಾದ ಕೃಷ್ಣನ ಹೇಳಿಕೆಯನ್ನು ಒಪ್ಪಿಕೊಳ್ಳಬೇಕು. ಭಗವದ್ಗೀತೆಯ ಅನೇಕ ಕಡೆಗಳಲ್ಲಿ ಆತ್ಮವು ಪ್ರತಿಯೊಬ್ಬರ ದೇಹದಲ್ಲಿದ್ದಾನೆಂದು ಹೇಳಲಾಗಿದೆ. ಆದ್ದರಿಂದ ಜ್ಞಾನಿಗಳಾದವರು ಪ್ರಾಣಿಗಳಲ್ಲಿ ಆತ್ಮವಿಲ್ಲ ಎಂದು ಹೇಳುವುದಿಲ್ಲ.

ಈಗ ಕೃಷ್ಣನು ಇನ್ನೊಂದು ಹೇಳಿಕೆಯಲ್ಲಿ ಆತ್ಮವು ನಿತ್ಯವಾದದ್ದು ಮತ್ತು ಅದನ್ನು ಕೊಲ್ಲಲಾಗುವುದಿಲ್ಲ ಎಂಬುದಕ್ಕೆ ಒತ್ತು ಕೊಡುತ್ತಿದ್ದಾನೆ. ಆದ್ದರಿಂದ ಕೃಷ್ಣ ಹೇಳುತ್ತಾನೆ, “ಯುದ್ಧ ಮಾಡುವುದು ನಿನ್ನ ಕರ್ತವ್ಯವಾಗಿದೆ, ನಿನ್ನ ಸ್ನೇಹಿತರ ಮತ್ತು ನೆಂಟರ ದೇಹವು ನಾಶವಾಗಬಹುದು, ಆದರೆ ಅವರ ದೇಹ ನಾಶವಾದ ನಂತರವೂ ಆತ್ಮವು ಇರುತ್ತದೆ. ಅವನಿಗೆ ಇನ್ನೊಂದು ದೇಹ ಸಿಗುತ್ತದೆ ಅಷ್ಟೇ. (ತಥಾ ದೇಹಾಂತರ – ಪ್ರಾಪ್ತಿಃ)

ಯಾರನ್ನು ಬೇಕಾದರೂ ತಮ್ಮ ಮನಸ್ಸಾ ಇಚ್ಛೆ ಕೊಲ್ಲಬಹುದು ಎಂದೇನಿಲ್ಲ. ಮುಂದಿನ ಶ್ಲೋಕದಲ್ಲಿ ವಿವರಿಸಲಾಗಿದೆ. ಕ್ಷತ್ರಿಯನು ಕೇವಲ ತನ್ನ ಶತ್ರುಗಳನ್ನು ಧಾರ್ಮಿಕ ರೂಪದ ಯುದ್ಧದಲ್ಲಿ ಕೊಲ್ಲಬಹುದು. ಆದರೆ ಅವನ ಉದ್ದೇಶ ಸರಿಯಾಗಿರಬೇಕು. ಆಗ ಅವನು ಹೋರಾಡುವುದು ಸರಿಯೇ, ಕ್ಷತ್ರಿಯನ್ನು ಧಾರ್ಮಿಕ ಯುದ್ಧದಲ್ಲಿ ತನ್ನ ಶತ್ರುಗಳನ್ನು ಕೊಂದರೆ ಅದು ಪಾಪವಲ್ಲ.

ಆದ್ದರಿಂದ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. “ನೀನು ನಿನ್ನ ಕರ್ತವ್ಯವನ್ನು ಮಾಡು, ನಿನ್ನ ಬಂಧುಗಳನ್ನು ಮತ್ತು ನಿನ್ನ ಅಜ್ಜನನ್ನು ಕೊಲ್ಲುತ್ತಿರುವೆ ಎಂದು ಚಿಂತಿಸಬೇಡ. ಆತ್ಮವನ್ನು ಕೊಲ್ಲಲಾಗುವುದಿಲ್ಲ. ಅದು ನಿತ್ಯವಾದದ್ದು ಎಂದು ನನ್ನಿಂದ ತಿಳಿದುಕೊ..”

ನೀವು ಗಮನಿಸಬೇಕಾದ ಇನ್ನೊಂದು ಮುಖ್ಯ ವಿಚಾರವೇನೆಂದರೆ ಪ್ರತಿಯೊಂದು ಜೀವಿಯಲ್ಲಿ ದೇಹವು ಚೇತನಾತ್ಮದ ಹಂತದ ಮೇಲೆ ಬೆಳೆಯುತ್ತದೆ. ದೇಹವು ದೈತ್ಯಾಕಾರ ಅಥವಾ ಚಿಕ್ಕದಾದರೂ ಪರವಾಗಿಲ್ಲ. ಅದು ಆತ್ಮದ ಹಂತ ಅಥವಾ ವೇದಿಕೆಯ ಮೇಲೆ ಬೆಳೆಯುತ್ತದೆ. ಚೇತನಾತ್ಮ ಅಥವಾ ಜೀವಂತ ಶಕ್ತಿಯು ಭೌತಿಕ ವಸ್ತುಗಳ ಸಂಯೋಜನೆಯಿಂದ ಅಸ್ತಿತ್ವಕ್ಕೆ ಬರುವುದಿಲ್ಲ. ಇಲ್ಲ, ಜಡವು ಆತ್ಮದ ಮೇಲೆ ಅವಲಂಬಿತವಾಗಿದೆ. (ಯಯೇದಮ್ ಧಾರ್ಯತೇ ಜಗತ್), ಆದ್ದರಿಂದ ಜಡವು ಚೇತನಕ್ಕಿಂತ ಕೀಳಾಗಿದೆ.

ಎರಡು ರೀತಿಯ ಚೇತನಗಳಿವೆ: ಆತ್ಮ ಮತ್ತು ಪರಮಾತ್ಮ ಅಥವಾ ಈಶ್ವರ ಮತ್ತು ಪರಮೇಶ್ವರ, ಬೃಹತ್ ವಿಶ್ವವು ಚೇತನದ ಮೇಲೆ ನಿಂತುಕೊಂಡಿದೆ – ಪರಮಚೇತನ ಕೃಷ್ಣ ಅಥವಾ ಅಂಶ ಚೇತನ ಜೀವಿಯಾಗಿರಬಹುದು. ಕೃಷ್ಣ ಭಗವದ್ಗೀತೆಯಲ್ಲಿ ವಿವರಿಸುತ್ತಾನೆ (7.5) –

ಅಪರೇಯಮಿತಸ್ತ್ವನ್ಯಾಂ

ಪ್ರಕೃತಿಂ ವಿದ್ಧಿ ಮೇ ಪರಾಮ್ |

ಜೀವಭೂತಾಂ ಮಹಾಬಾಹೋ

ಯಯೇದಂ ಧಾರ್ಯತೇ ಜಗತ್ ||

“ಮಹಾಬಾಹುವಾದ ಅರ್ಜುನನೆ, ಇವಲ್ಲದೆ ನನ್ನ ಇನ್ನೂ ಶ್ರೇಷ್ಠವಾದ ಮತ್ತೊಂದು ಶಕ್ತಿಯಿದೆ. ಅದು ಈ ಭೌತಿಕ ಮಟ್ಟ ಮತ್ತು ಕೆಳಮಟ್ಟದ ಪ್ರಕೃತಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿರುವ ಜೀವಿಗಳಿಂದ ಆದದ್ದು.”

ಏಕೆ ದೈತ್ಯಾಕಾರದ ಗ್ರಹಗಳು ಆಕಾಶದಲ್ಲಿ ಭಾರವಿಲ್ಲದೆ ತೇಲಾಡುತ್ತಿವೆ? ಕೃಷ್ಣ ಹೇಳುತ್ತಾನೆ. ಗಾಮ್ ಆವಿಶ್ಯ ಧಾರಯಾಮಿ ಅಹಂ ಓಜಸಾ “ನನ್ನ ಶಕ್ತಿಯಿಂದ ಗ್ರಹಗಳನ್ನು ಹಿಡಿದಿದ್ದೇನೆ (ಪೋಷಿಸುತ್ತಿದ್ದೇನೆ). ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

A747 ವಿಮಾನವು 500 ಅಥವಾ 600 ಪ್ರಯಾಣಿಕರನ್ನು ಹೊತ್ತು ಆಕಾಶದಲ್ಲಿ ಕಷ್ಟವಿಲ್ಲದೆ ಹಾರಾಡುತ್ತದೆ – ಏಕೆ? ಅದರಲ್ಲಿ ವಿಮಾನಚಾಲಕ ಇದ್ದಾನೆ. ಅದು ದೈತ್ಯಾಕಾರ ಅಥವಾ ಬೃಹತ್ ಯಂತ್ರದಿಂದ ಎಂದು ತಿಳಿಯಬೇಡಿ. ಇಲ್ಲ, ಅದರಲ್ಲಿ ವಿಮಾನ ಚಾಲಕ ಇರುವುದರಿಂದಲೇ ಅದು ಹಾರಾಡುತ್ತದೆ.

ಯಂತ್ರವು ಇದೆ. ಆದರೆ ಅದರ ಹಾರಾಟ ಯಾಂತ್ರಿಕ ವ್ಯವಸ್ಥೆಯ ಮೇಲೆ ಅವಲಂಬಿತವಾಗಿಲ್ಲ. ವಿಮಾನ ಚಾಲಕನ ಮೇಲೆ ಅದು ಅವಲಂಬಿತವಾಗಿದೆ. ಚಾಲಕ ಇಲ್ಲದೆ ಹೋಗಿದ್ದರೆ ಆ ಯಂತ್ರವು ಕೂಡಲೇ ಕೆಳಬೀಳುತ್ತಿತ್ತು. ಅದೇ ರೀತಿ ಕೃಷ್ಣ ಬೃಹತ್ ಗ್ರಹಗಳಲ್ಲಿ ಪ್ರವೇಶಿಸಿ ಬಾಹ್ಯಾಕಾಶದಲ್ಲಿ ಅದನ್ನು ಹಿಡಿದು ಪೋಷಣೆ ಮಾಡುತ್ತಾನೆ.

ಕೃಷ್ಣನ ಪ್ರವೇಶವಿಲ್ಲದೆ ಜಡವು ಕೆಲಸ ಮಾಡುವುದಿಲ್ಲ. ವಿಶ್ವದ ಚಿಪ್ಪಿನಲ್ಲಿ ಅವನು ಗರ್ಭೋದಕಶಾಯಿ ವಿಷ್ಣುವಾಗಿದ್ದಾನೆ. ಆದ್ದರಿಂದ ವಿಶ್ವವು ಅಸ್ತಿತ್ವದಲ್ಲಿದೆ ಮತ್ತು ಪ್ರತಿಯೊಬ್ಬರ ದೇಹದಲ್ಲಿಯೂ ಅವನು ಪರಮಾತ್ಮನಾಗಿದ್ದಾನೆ. ಕೇವಲ ಅವನು ಎಲ್ಲ ಜೀವರಾಶಿಗಳ ದೇಹಗಳಲ್ಲಿ ಮಾತ್ರವಲ್ಲ ಒಂದು ಅಣುವಿನಲ್ಲಿಯೂ ಇದ್ದಾನೆ, ಅಂಡಾಂತರಸ್ಥ ಪರಮಾಣು ಚಯಾಂತರಸ್ಥಂ, ವಿಜ್ಞಾನಿಗಳು ಅಣುಗಳನ್ನು ವಿಭಜಿಸಿ ವಿಭಜಿಸಿ ಅಧ್ಯಯನ ಮಾಡುತ್ತಿದ್ದಾರೆ.

ಆದರೆ ಯಾವುದೇ ತೀರ್ಮಾನಕ್ಕೆ ಬರುವುದಕ್ಕೆ ಅವರಿಗೆ ಕಷ್ಟವಾಗುತ್ತಿದೆ. ಏಕೆಂದರೆ ಪರಮಾತ್ಮನ ರೂಪದಲ್ಲಿರುವ ದೇವರು ಅಥವಾ ಕೃಷ್ಣನನ್ನು ಅಣುವಿನಲ್ಲಿ ಅವರಿಗೆ ಕಾಣಲಾಗುತ್ತಿಲ್ಲ.

ಆದ್ದರಿಂದ ಕೃಷ್ಣನ ಇರುವಿಕೆ ಇಲ್ಲದೆ ಯಾವುದೂ ಅಸ್ತಿತ್ವದಲ್ಲಿ ಇಲ್ಲ. ಆದ್ದರಿಂದ ಯಾರು ಕೃಷ್ಣಪ್ರಜ್ಞೆಯಲ್ಲಿ ಪ್ರಗತಿ ಹೊಂದಿದ್ದಾರೆ ಅವರು ಮಾತ್ರ ಕೃಷ್ಣನನ್ನು ಎಲ್ಲೆಡೆಯೂ ನೋಡುತ್ತಾರೆ. ಕೇವಲ ಬಾಹ್ಯ ಆವರಣದಲ್ಲಿ ಅಲ್ಲ. ಚೈತನ್ಯ ಚರಿತಾಮೃತದಲ್ಲಿ (ಮಧ್ಯಲೀಲಾ – 8.274) ಸ್ಥಾವರ ಜಂಗಮ ದೇಖೇ, ನಾ ದೇಖೇ ತಾರ ಮೂರ್ತಿ ಸರ್ವತ್ರ ಹಯ ನಿಜ ಇಷ್ಟ ದೇವ ಸ್ಫೂರ್ತಿ – ಎಂದು ಹೇಳಲಾಗಿದೆ.

ಇಲ್ಲಿ ಎರಡು ರೀತಿಯ ವಸ್ತುಗಳಿವೆ. ಚಲಿಸುವ ಮತ್ತು ಚಲಿಸದೇ ಇರುವುದು (ಸ್ಥಾವರ ಎಂದರೆ ‘ಚಲಿಸದ” ಮತ್ತು “ಜಂಗಮ” ಎಂದರೆ ಚಲಿಸುವ). ಕೃಷ್ಣನ ಶುದ್ಧ ಭಕ್ತನು ಇವೆರಡು ರೀತಿಯ ವಸ್ತುಗಳನ್ನು ನೋಡುತ್ತಾನೆ. ಆದರೆ ಅವನು ಅವುಗಳ ಸ್ಪಷ್ಟವಾದ ರೂಪಗಳನ್ನು ಕಾಣುವುದಿಲ್ಲ. ಅವನು ಖಚಿತವಾಗಿ ಕೃಷ್ಣನನ್ನು ಮಾತ್ರ ಕಾಣುತ್ತಾನೆ.

ಏಕೆಂದರೆ ಚಲಿಸುವ ವಸ್ತುಗಳಲ್ಲಿ ಕೃಷ್ಣನ ಜೀವಂತ ಶಕ್ತಿಯಿದೆ ಮತ್ತು ಜಡವು ಕೂಡ ಕೃಷ್ಣನ ಶಕ್ತಿಯೆಂದು ಅವನಿಗೆ ಗೊತ್ತಿರುತ್ತದೆ. ಆದ್ದರಿಂದ ಪ್ರತಿಯೊಂದರಲ್ಲಿ ಅವನು ಕೃಷ್ಣನನ್ನೇ ಕಾಣುತ್ತಾನೆ. ಬ್ರಹ್ಮ ಸಂಹಿತೆಯಲ್ಲಿ, ಪ್ರೇಮಾಂಜನಚ್ಛುರಿತ ಭಕ್ತಿ ವಿಲೋಚನೇನ ಸಂತಃ ಸದೈವ ಹೃದೇಯೇಷು ವಿಲೋಕಯಂತಿ ”ಯಾವ ಭಕ್ತನ ಕಣ್ಣು ಕೃಷ್ಣಪ್ರೇಮ ಅಂಜನದಿಂದ ಅಭಿವ್ಯಕ್ತವಾಗಿದೆ, ಅವನು ಸದಾ ಕೃಷ್ಣನನ್ನು ತನ್ನ ಹೃದಯದಲ್ಲಿ ಕಾಣುತ್ತಾನೆ” ಎಂದು ಹೇಳಲಾಗಿದೆ.

ಕೆಲವು ಸಲ ಜನರು, “ನೀವು ಭಗವಂತನನ್ನು ನೋಡಿದ್ದೀರಾ?” ಎಂದು ಕೇಳುತ್ತಾರೆ. ಅದಕ್ಕೆ ಉತ್ತರವೆಂದರೆ, ನಿಜವಾಗಿಯೂ ಪ್ರಗತಿಹೊಂದಿದ ಭಕ್ತನು ಒಳಗೂ ಮತ್ತು ಹೊರಗೂ ಕೃಷ್ಣನನ್ನೇ ಕಾಣುತ್ತಾನೆ.

ಕೃಷ್ಣನ ಹೊರತು ಬೇರೆ ಏನೂ ನೋಡುವುದಿಲ್ಲ. ನೀವು ಕೃಷ್ಣಪ್ರಜ್ಞೆಯಲ್ಲಿ ಎಷ್ಟು ಪ್ರಗತಿಯನ್ನು ಹೊಂದುತ್ತೀರೋ, ಅಷ್ಟೇ ಕೃಷ್ಣನನ್ನು ನೀವು ನೋಡುತ್ತೀರಿ ಮತ್ತು ಕೃಷ್ಣನನ್ನು ಸದಾ ನೋಡುವುದನ್ನು ನೀವು ರೂಢಿಸಿಕೊಂಡರೆ ಮರಣ ಸಮಯದಲ್ಲಿ ನೀವು ಅವನ ಬಗ್ಗೆಯೆ ಯೋಚನೆ ಮಾಡಿ ಭಗವದ್ಧಾಮಕ್ಕೆ ಹಿಂತಿರುಗುತ್ತೀರಿ. ಇದು ಕೃಷ್ಣನ ಬೋಧನೆ:ಮನ್‌ಮನಾ, ”ಸದಾ ನನ್ನನ್ನೇ ಯೋಚಿಸು.”

ಈಗ ಯಾರು ಸದಾ ಕೃಷ್ಣನನ್ನು ಯೋಚಿಸಲು ಸಾಧ್ಯ? ಭಕ್ತನಾದವನು ಮಾತ್ರ ಸದಾ ಕೃಷ್ಣನನ್ನು ಯೋಚಿಸುತ್ತಾನೆ. ಆದು ಏನು ಕಷ್ಟಕರ ಕೆಲಸವೇ? ನೀವು ಕೃಷ್ಣನನ್ನು ದೇವಸ್ಥಾನದಲ್ಲಿ ನೋಡುತ್ತಿದ್ದೀರಿ, ಅವನ ನಾಮಸಂಕೀರ್ತನೆ ಮಾಡುತ್ತಿದ್ದೀರಿ ಮತ್ತು ಅವನ ಸೇವೆಯಲ್ಲಿ ತೊಡಗಿರುವಿರಿ. ಬೇರೆ ಏನೂ ಇಲ್ಲ.

ಕೇವಲ ಕೃಷ್ಣ, ಕೃಷ್ಣ, ಕೃಷ್ಣ, ಕೃಷ್ಣಪ್ರಜ್ಞೆಯಲ್ಲಿ 24 ಘಂಟೆಯೂ ನೀವು ತೊಡಗಿದ್ದೀರಿ ಎಂದರೆ ಕೃಷ್ಣನನ್ನು ಸದಾ ನೋಡುವುದನ್ನು ನೀವು ರೂಢಿಸಿಕೊಂಡಿರಿ ಎಂದು ಅರ್ಥವಾಗುತ್ತದೆ. ಜನರಿಗೆ ಕೃಷ್ಣನನ್ನು ಒಂದು ಕ್ಷಣವೂ ಕೂಡ ಮರೆಯದಿರುವುದಕ್ಕೆ ತರಬೇತಿ ಕೊಡುವುದು ಈ ಕೃಷ್ಣಪ್ರಜ್ಞಾ ಚಳುವಳಿಯ ಉದ್ದೇಶ.

ಮತ್ತು ಅದುವೇ ಭಗವದ್ಗೀತೆಯಲ್ಲಿ ಕೃಷ್ಣನ ಬೋಧನೆಯಾಗಿದೆ (9.34): ಮನ್ ಮನಾ ಭವ ಮದ್ ಭಕ್ತೋ ಮದ್‌ಯಾಜೀ ಮಾಮ್ ನಮಸ್ಕರು. ”ನನ್ನನ್ನೇ ಯೋಚಿಸು, ನನ್ನ ಭಕ್ತನಾಗು, ನನಗೆ ಪೂಜಿಸು ಮತ್ತು ನನಗೆ ನಮಸ್ಕಾರ ಮಾಡು.”

ನೀವು ಕೃಷ್ಣ ಪ್ರೇಮವನ್ನು ಬೆಳೆಸಿಕೊಂಡಿದ್ದರೆ, ದೇವಸ್ಥಾನಕ್ಕೆ ಹೋಗಿ ವಿಗ್ರಹವನ್ನು ನೋಡಿದಾಗ ಅದರ ಗುರುತು ನಿಮ್ಮ ಮನಸ್ಸಿನಲ್ಲಿ ಮೂಡಿರುತ್ತದೆ ಮತ್ತು ನೀವು ದೇವಸ್ಥಾನದಿಂದ ಹೊರಬಂದಾಗ ನಿಮ್ಮ ಹೃದಯದಲ್ಲಿ ಆ ವಿಗ್ರಹವನ್ನು ಕಾಣಬಹುದು. ಒಂದು ವೇಳೆ ನೀವು ಕಾಟಾಚಾರಕ್ಕೆ ದೇವಸ್ಥಾನಕ್ಕೆ ಬಂದಿದ್ದರೆ, ಅಲ್ಲಿಂದ ಹೊರಟಕೂಡಲೇ ನೀವು, “ಓ ಇದು ಗೋಳು, ಇದನ್ನು ಮರೆಯೋಣ” ಎಂದು ಯೋಚಿಸುತ್ತೀರಿ. ಇದು ಬೇರೆ ವಿಷಯ.

ಕೃಷ್ಣಪ್ರಜ್ಞೆಯ ಪ್ರಕ್ರಿಯೆಯು ಕೃಷ್ಣಪ್ರೇಮವನ್ನು ಬೆಳೆಸುವುದಕ್ಕಾಗಿಯೇ ಇದೆ. ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿರಧೋಕ್ಷಜೇ ”ಮೊದಲನೆಯ ದರ್ಜೆಯ ಧಾರ್ಮಿಕ ಪದ್ಧತಿಯು ಕೃಷ್ಣಪ್ರೇಮ ಬೆಳೆಸಿಕೊಳ್ಳುವುದರಲ್ಲಿ ಅನುಕೂಲ ಮಾಡುತ್ತದೆ.” ಆದ್ದರಿಂದ ಕೃಷ್ಣಪ್ರಜ್ಞೆಯು ಮೊದಲನೆಯ ದರ್ಜೆಯ, ಉನ್ನತ ಧಾರ್ಮಿಕ ಪದ್ಧತಿಯಾಗಿದೆ, ಏಕೆಂದರೆ ಅದು ಜನರಿಗೆ ಸದಾ ಪರಮಪ್ರಭು ಕೃಷ್ಣನನ್ನು ಯೋಚಿಸಲು ಮತ್ತು ಅವನನ್ನು ಪ್ರೇಮಿಸಲು ಶಿಕ್ಷಣ ಕೊಡುತ್ತದೆ.

ನಾವು ಪ್ರೀತಿಸದೆ ಸದಾ ಒಬ್ಬರ ಬಗ್ಗೆ ಯೋಚಿಸಲಾಗುವುದಿಲ್ಲ. ಒಂದು ವೇಳೆ ಹುಡುಗ ಮತ್ತು ಹುಡುಗಿ ಪ್ರೇಮಿಸುತ್ತಿದ್ದಾರೆ. ಇಬ್ಬರೂ ಸದಾ ಒಬ್ಬರಿಗೊಬ್ಬರ ಬಗ್ಗೆಯೇ ಯೋಚಿಸುತ್ತಿರುತ್ತಾರೆ; “ಓ ನಾವು ಯಾವಾಗ ಪುನಃ ಭೇಟಿಯಾಗೋದು, ನಾವು ಪುನಃ ಯಾವಾಗ ಭೇಟಿಯಾಗೋದು?” ಅದೇ ರೀತಿ ನೀವು ಕೃಷ್ಣಪ್ರೇಮವನ್ನು ಬೆಳೆಸಿಕೊಂಡಿದ್ದರೆ ಸದಾ ಅವನನ್ನೇ ಕುರಿತು ಯೋಚಿಸಬಹುದು ಮತ್ತು ಭಕ್ತಿಸೇವೆಯಿಂದ ನೀವು ಕೃಷ್ಣಪ್ರೇಮವನ್ನು ಬೆಳೆಸಿಕೊಳ್ಳಬಹುದು. ಅದು ಅವಶಕ್ಯಕವಾಗಿದೆ.

ಆದ್ದರಿಂದ ಪ್ರಾಣಿಜೀವನದ ಕೆಳಮಟ್ಟದಲ್ಲಿಯೂ ಕೂಡ ಕೃಷ್ಣ ಅವರ ಹೃದಯದಲ್ಲಿದ್ದಾನೆ. ಅವನು ಇಲ್ಲಿ ದೇಹೇ ಸರ್ವಸ್ಯ ಭಾರತ ಎಂದು ಹೇಳುತ್ತಾನೆ. ಇನ್ನೊಂದು ಕಡೆ ಭಗವದ್ಗೀತೆಯ 13.3ನೇ ಶ್ಲೋಕದಲ್ಲಿ ಅವನು ಕ್ಷೇತ್ರಜ್ಞಮ್‌ ಚಾಪಿ ಮಾಂವಿದ್ಧಿ ಸರ್ವಕ್ಷೇತ್ರೇಷು ಭಾರತ ಎಂದು ಹೇಳುತ್ತಾನೆ – ದೇಹದ ಒಡೆಯ ಆತ್ಮ, ಕ್ಷೇತ್ರಜ್ಞನಾಗಿದ್ದಾನೆ, ಆದರೆ ಅದರಲ್ಲಿ ಇನ್ನೊಬ್ಬ ಕ್ಷೇತ್ರಜ್ಞ, ಇನ್ನೊಬ್ಬ ಒಡೆಯನಿದ್ದಾನೆ ಅವನೇ ಕೃಷ್ಣ. ಈ ಐಹಿಕ ದೇಹದಲ್ಲಿ ಆತ್ಮವಿರುವ ಹಾಗೆ ಪರಮಾತ್ಮನಾದ ಕೃಷ್ಣನು ಇದ್ದಾನೆ. ಆದ್ದರಿಂದ ಕೃಷ್ಣ ಪ್ರತಿಯೊಂದು ದೇಹಗಳ ಒಡೆಯ.

ಕೆಲವು ಸಲ ಮೂಢರು “ಅವನು ಏಕೆ ಬೇರೆಯವರ ಪತ್ನಿಯರ ಜೊತೆ ನರ್ತಿಸುತ್ತಿದ್ದಾನೆ?” ಎಂದು ಬಯ್ಯುತ್ತಾರೆ. ಆದರೆ ನಿಜವಾಗಿಯೂ ಅವನು ಪ್ರತಿಯೊಬ್ಬರ ಒಡೆಯ. ನಾವು ಒಡೆಯರಲ್ಲ, ಅವನು ಒಡೆಯ. ಆದ್ದರಿಂದ ಒಡೆಯ ತನ್ನನ್ನು ಭಕ್ತಿಯಿಂದ ಸೇವಿಸುವ ಹೆಂಗಸರ ಅಥವಾ ಭಕ್ತರೊಂದಿಗೆ ಕುಣಿದರೆ ತಪ್ಪು ಏನು? ಪ್ರತಿಯೊಬ್ಬರ ಶರೀರದಲ್ಲಿಯೂ ಆತ್ಮವಿದೆ.

ಆದರೆ ಪರಮಾತ್ಮ ದೇಹದ ನಿಜವಾದ ಒಡೆಯ. ಪ್ರಭು ಕೃಷ್ಣ ಹೇಳುತ್ತಾನೆ, ಭೋಕ್ತಾರಮ್ ಯಜ್ಞ ತಾಪಸಾಮ್ ಸರ್ವಲೋಕ ಮಹೇಶ್ವರಮ್. “ನಾನು ಭೋಕ್ತೃ ಮತ್ತು ಎಲ್ಲದರ ಒಡೆಯ” (ಭಗವದ್ಗೀತೆ -5.29). ಅವನೇ ಮಹೇಶ್ವರಮ್ – ಪರಮ ಒಡೆಯ ಮತ್ತು ಸುಹೃದಮ್ ಸರ್ವಭೂತನಾಮ್ – ಪ್ರತಿಯೊಬ್ಬರ ನಿಜವಾದ ಸ್ನೇಹಿತ ಕೂಡ. ನಿಮಗೆ ಒಬ್ಬ ಪ್ರೇಮಿ ಇದ್ದಾನೆಂದರೆ ನೀವು ಅವನಿಗೆ ಸ್ನೇಹಿತ ಎಂದು ಯೋಚಿಸುತ್ತೀರಿ, ಆದರೆ ನಿಜವಾಗಿಯೂ ನೀವು ಅವನ ಸ್ನೇಹಿತನಲ್ಲ, ಅವನ ನಿಜವಾದ ಸ್ನೇಹಿತ ಕೃಷ್ಣನಾಗಿದ್ದಾನೆ.

ಆದ್ದರಿಂದ ಗೋಪಿಯರು ತಮ್ಮ ನಿಜವಾದ ಸ್ನೇಹಿತನೊಂದಿಗೆ ನರ್ತಿಸಿದರೆ, ಅದರಲ್ಲಿ ತಪ್ಪೇನಿದೆ? ಆದರೆ ಯಾರು ಕೃಷ್ಣನನ್ನು ಅರಿಯದ ಮೂಢರಾಗಿರುತ್ತಾರೋ ಅವರು ಮಾತ್ರ ಕೃಷ್ಣನನ್ನು ನೀತಿಗೆಟ್ಟವನು ಎಂದು ಹೇಳುತ್ತಾರೆ. ಆದರೆ ಅವನು ನೀತಿಗೆಟ್ಟವನಲ್ಲ. ಅವನು ಸರಿಯಾದುದನ್ನೇ ಮಾಡುತ್ತಿದ್ದಾನೆ, ಏಕೆಂದರೆ ಕೃಷ್ಣನೇ ಪ್ರತಿಯೊಂದು ಹೆಂಗಸಿನ ನಿಜವಾದ ಗಂಡ.

ಅವನು 16,108 ಹೆಂಗಸರನ್ನು ಮದುವೆಯಾದ. ಏಕೆ ಕೇವಲ 16,108 ಹೆಂಗಸರನ್ನು ಮದುವೆಯಾದ? ಅವನು 16 ಕೋಟಿ – ಹೆಂಗಸರನ್ನು ಮದುವೆಯಾಗಿದ್ದರೂ ಅದರಲ್ಲಿ ಯಾವುದೇ ತಪ್ಪು ಇರುತ್ತಿರಲಿಲ್ಲ. ಏಕೆಂದರೆ ಅವನೇ ಪ್ರತಿ ಹೆಂಗಸಿನ ನಿಜವಾದ ಗಂಡ.

ಆದರೂ ಕೃಷ್ಣನನ್ನು ಅರಿಯದ ಮೂಢರು ಅವನನ್ನು ನೀತಿಗೆಟ್ಟ ಹೆಣ್ಣು ಬೇಟೆಗಾರ ಎಂದು ಬಯ್ಯುತ್ತಾರೆ. ಗೋಪಿಯರೊಂದಿಗಿನ ಕೃಷ್ಣನ ಪ್ರಸಂಗಗಳ ಚಿತ್ರಣಗಳನ್ನು ಚಿತ್ರಿಸುವುದರಿಂದ ಅವರಿಗೆ ಆನಂದವಾಗುತ್ತದೆ. ಆದರೆ ಅವರು ಕೃಷ್ಣ ಕಂಸನನ್ನು ಅಥವಾ ಬೇರೆ ಅಸುರರನ್ನು ಕೊಲ್ಲುತ್ತಿರುವ ಚಿತ್ರಗಳನ್ನು ಚಿತ್ರಿಸುವುದಿಲ್ಲ.

ಅವರು ಈ ಲೀಲೆಗಳನ್ನು ಇಷ್ಟಪಡುವುದಿಲ್ಲ. ಅವರ ಮನೋಭಾವನೆಯನ್ನು ಸಹಜೀಯ ಎಂದು ಕರೆಯಲಾಗುತ್ತದೆ. ಸಹಜೀಯರ ಕೆಲಸವೇ ವ್ಯಭಿಚಾರ ಮಾಡುವುದು. ಅದನ್ನು ಅವರು ಕೃಷ್ಣನ ಲೀಲೆಗಳನ್ನು ಹೇಳುತ್ತಾ ಸಮರ್ಥಿಸಿಕೊಳ್ಳುತ್ತಾರೆ: “ಕೃಷ್ಣ ಗೋಪಿಯರೊಂದಿಗೆ ನರ್ತಿಸಿದ; ಕೃಷ್ಣ ನೀತಿಗೆಟ್ಟವ, ಆದ್ದರಿಂದ ನಾವು ಕೂಡ ನೀತಿಗೆಟ್ಟವರೇ, ನಾವು ಕೃಷ್ಣನ ಶ್ರೇಷ್ಠ ಭಕ್ತರು. ಏಕೆಂದರೆ ನಾವು ನೀತಿಗೆಟ್ಟವರು, ಇದು ನಡೆಯುತ್ತಲೇ ಇದೆ.

ಆದ್ದರಿಂದ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಒಳ್ಳೆಯ ಬುದ್ಧಿಶಕ್ತಿ ಬೇಕು. ಕೃಷ್ಣ ಭಗವದ್ಗೀತೆಯಲ್ಲಿ (7.19) ಹೇಳುತ್ತಾನೆ.

ಬಹೂನಾಂ ಜನ್ಮನಾಮನ್ತೇ

ಜ್ಞಾನವಾನ್ಮಾಂ ಪ್ರಪದ್ಯತೇ

ವಾಸುದೇವಃ ಸರ್ವಮಿತಿ

ಮಹಾತ್ಮಾ ಸುದುರ್ಲಭಃ ||

” ಅನೇಕ ಜನ್ಮಗಳ ನಂತರ ಒಬ್ಬ ಜ್ಞಾನವಾನನಾಗುತ್ತಾನೆ.” ಜ್ಞಾನವಾನ್ ಎಂದರೆ ಮೊದಲನೆಯ ವರ್ಗದ ಬುದ್ಧಿಶಕ್ತಿಯನ್ನು ಹೊಂದಿರುವವನು.” ಆಮೇಲೆ ? ಮಾಮ್ ಪ್ರಪದ್ಯತೇ ”ನನ್ನಲ್ಲಿ ಅವನು ಶರಣಾಗತನಾಗುತ್ತಾನೆ.” ಏಕೆ? ವಾಸುದೇವಃ ಸರ್ವಮಿತಿ ”ಎಲ್ಲವೂ ವಾಸುದೇವ, ಕೃಷ್ಣನಾಗಿದ್ದಾನೆಯೆಂದು ಅವನು ಅರ್ಥಮಾಡಿಕೊಳ್ಳುತ್ತಾನೆ.” ಮತ್ತು ಮಹಾತ್ಮಾ ಸುದುರ್ಲಭಃ, “ಅಂಥಹ ಬುದ್ಧಿವಂತ ಮಹಾತ್ಮನು ತುಂಬಾ ವಿರಳ.”

ಅನೇಕ ಮೂಢ ಮಹಾತ್ಮರಿದ್ದಾರೆ, ಅವರು ಬಟ್ಟೆಗಳನ್ನು ಬದಲಾಯಿಸಿ ತಮ್ಮನ್ನು ಭಗವಂತ ಅಥವಾ ಕೃಷ್ಣನೆಂದು ಘೋಷಿಸಿಕೊಳ್ಳುತ್ತಾರೆ. ಅವರ ಮುಖಕ್ಕೆ ಒದೆಯಿರಿ. ನಿಜವಾದ ಮಹಾತ್ಮನು ಈ ಮೂಢರಿಂದ ಭಿನ್ನವಾಗಿರುತ್ತಾನೆ. ಏಕೆಂದರೆ ಅವನಿಗೆ ಕೃಷ್ಣ ಗೊತ್ತು. ನೀವು ಕೃಷ್ಣನನ್ನು ಅರ್ಥಮಾಡಿಕೊಂಡರೆ ನೀವು ಅದೃಷ್ಟವಂತರು; ಬ್ರಹ್ಮಾಂಡ ಭ್ರಮಿತೇ ಕೋನ ಭಾಗ್ಯವಾನ್ ಜೀವ ಗುರು ಕೃಷ್ಣ ಪ್ರಸಾದೇ ಪಾಯ ಭಕ್ತಿ ಲತಾ ಬೀಜ.

ಈ ವಿಶ್ವದಲ್ಲಿ ಅನೇಕ ಲಕ್ಷಾಂತರ, ಕೋಟ್ಯಾಂತರ ಜೀವರಾಶಿಗಳಿವೆ ಮತ್ತು ಅವು 84,00,000 ವಿವಿಧ ಜೀವರಾಶಿಗಳಲ್ಲಿ ಸುತ್ತುತ್ತಲೇ ಇವೆ. ಅವುಗಳಲ್ಲಿ ಅತ್ಯಂತ ಅದೃಷ್ಟವಂತರಾದವರು ಕೃಷ್ಣ ಮತ್ತು ಆಧ್ಯಾತ್ಮಿಕ ಗುರುವಿನ ಅನುಗ್ರಹ ಪಡೆಯುತ್ತಾರೆ. ಮತ್ತು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಅವಕಾಶ ಕೊಡಲ್ಪಡುತ್ತಾರೆ.

ಗುರು ಮತ್ತು ಕೃಷ್ಣನ ದಯೆಯಿಂದ ಒಬ್ಬರಿಗೆ ಭಕ್ತಿ ಸೇವೆಯ ಬೀಜ ಸಿಗುತ್ತದೆ. (ಯಾವುದನ್ನು ದೀಕ್ಷೆಯ ವೇಳೆ ಬೆಳೆಸಲಾಗುತ್ತದೆ) ಆಮೇಲೆ ಆ ಬೀಜಕ್ಕೆ ನೀರೆರೆಯಬೇಕು. ಒಂದು ವೇಳೆ ನಿಮಗೆ ಮರದ ಒಳ್ಳೆಯ ಬೀಜ ಸಿಕ್ಕಿರುತ್ತದೆ. ನೀವು ಅದನ್ನು ಬಿತ್ತಬೇಕು ಮತ್ತು ಅದರ ಮೇಲೆ ಸ್ವಲ್ಪ ನೀರು ಹಾಕಬೇಕು. ಆಗ ಅದು ಬೆಳೆಯುತ್ತದೆ.

ಅದೇ ರೀತಿ ಯಾರಾದರೂ ಅತೀವ ಅದೃಷ್ಟದಿಂದ ಕೃಷ್ಣಪ್ರಜ್ಞೆಯೊಂದಿಗೆ ಸಂಪರ್ಕಕ್ಕೆ ಬಂದು ಭಕ್ತಿ ಸೇವೆಯ ಬೀಜ ಪಡೆದಿದ್ದರೆ, ಅವರು ಅದಕ್ಕೆ ನೀರೆರೆಯಬೇಕು. ಅದು ಎಂಥಹ ನೀರು? ಶ್ರವಣ, ಕೀರ್ತನ ಕೃಷ್ಣನ ಬಗ್ಗೆ ಶ್ರವಣ ಮತ್ತು ಕೀರ್ತನೆ. ಆದ್ದರಿಂದ ಶ್ರೀಮದ್ಭಾಗವತಮ್ ತರಗತಿಗಳನ್ನು ತಪ್ಪಿಸಿಕೊಳ್ಳಬೇಡಿ, ಕೃಷ್ಣನ ವಿಷಯಗಳ ಬಗ್ಗೆ ಶ್ರವಣ ಮತ್ತು ಕೀರ್ತನವು ಭಕ್ತಿ ಸೇವೆಗೆ ನೀರೆರೆದಂತೆ. ಕೃಷ್ಣನ ಬಗ್ಗೆ ಶ್ರವಣ ಮತ್ತು ಕೀರ್ತನವು ಅತ್ಯಂತ ಮುಖ್ಯವಾದದ್ದು.

ಶ್ರವಣ, ಕೀರ್ತನ ಎಂದರೆ ಏನು ಬೇಕಾದರೂ ಕೇಳುವುದು ಮತ್ತು ಜಪಿಸುವುದಲ್ಲ. ಇಲ್ಲ, ಕೃಷ್ಣನ ಬಗ್ಗೆಯೇ ಶ್ರವಣ ಮತ್ತು ಕೀರ್ತನ ಮಾಡಬೇಕು. ಮೂಢರು “ಕಾಳಿ ಕೀರ್ತನ’ ಎಂದು ತಯಾರಿಸಿದ್ದಾರೆ. ಯಾವ ಶಾಸ್ತ್ರದಲ್ಲಿ ‘ಕಾಳಿ ಕೀರ್ತನ’ ಅಥವಾ ‘ಶಿವ ಕೀರ್ತನ’ ದ ಉಲ್ಲೇಖವಿದೆ? ಇಲ್ಲ. ಕೀರ್ತನೆ ಎಂದರೆ ಪರಮ ಪ್ರಭು ಕೃಷ್ಣನ ವೈಭವೀಕರಣ. ಅದುವೇ ಕೀರ್ತನೆ. ಬೇರೆಯವು, ಕೀರ್ತನೆಗಳು ಎಂದು ಎನಿಸಿಕೊಂಡಿರುವುದೆಲ್ಲ ಅವಿವೇಕವಾದದ್ದು. ಕೇವಲ ಕೃಷ್ಣ ಬಗ್ಗೆಯೇ ಶ್ರವಣ ಮತ್ತ ಕೀರ್ತನ ಮಾಡಬೇಕು.

ಕೃಷ್ಣ ಪೂಜಿಸಲ್ಪಡಬೇಕು, ಕೃಷ್ಣ ಕೇಳಲ್ಪಡಬೇಕು. ಕೃಷ್ಣ ಜಪಿಸಲ್ಪಡಬೇಕು ಮತ್ತು ಕೃಷ್ಣ ಸ್ಮರಿಸಲ್ಪಡಬೇಕು. ಈ ರೀತಿಯಾಗಿ ನೀವು ಕೃಷ್ಣಪ್ರಜ್ಞೆಯಲ್ಲಿ ಪ್ರಗತಿಯನ್ನು ಹೊಂದುತ್ತೀರಿ.

ಧನ್ಯವಾದಗಳು, ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi