ಒಂದು ಸಕಾಲಿಕ ಪ್ರವಾಸ

ತತ್ತ್ವದರ್ಶನ

– ಆಂಗ್ಲಮೂಲ: ರಾಧಾಕೃಷ್ಣ ಸ್ವಾಮಿ, ಅನುವಾದ: ಎಂ.ಕೆ.ಬದರಿನಾಥ್‌

ಖ್ಯಾತ ವಿಜ್ಞಾನಿ ಐನ್ ಸ್ಟೀನ್‌ನ ಆಧುನಿಕ ಕಾಲದ ಮಹತ್ವದ ಸಂಶೋಧನೆಯಾದ ‘ಸಾಪೇಕ್ಷ ಸಿದ್ಧಾಂತ’ ದಲ್ಲಿನ ಕೆಲವು ಇಂಗಿತಾರ್ಥಗಳನ್ನು ನಮ್ಮ ವೇದ ಕಾಲದ ಪ್ರಾಜ್ಞರು ಬಹಳಷ್ಟು ಹಿಂದೆಯೇ ಅರ್ಥ ಮಾಡಿಕೊಂಡಿದ್ದರು.

ಪ್ರಾಚೀನ ಭಾರತದ ಪ್ರಾಜ್ಞರ ವೈಜ್ಞಾನಿಕ ತಿಳಿವಳಿಕೆಗಳ ಬಗ್ಗೆ ಪ್ರಸ್ತಾಪಿಸುತ್ತಾ ಒಮ್ಮೆ ದಿವಂಗತ ಪ್ರಧಾನ ಮಂತ್ರಿಗಳಾದ ಶ್ರೀಮತಿ ಇಂದಿರಾ ಗಾಂಧಿಯವರು ಈ ರೀತಿ ಬರೆದಿದ್ದರು: ವಿಶಾಲ ದೃಷ್ಟಿ ಅನಂತ ಗಗನದ ಬಗೆಗಿನ ಅಪಾರ ತಿಳಿವಳಿಕೆ, ಕಾಲ ಮತ್ತು ಸಂಖ್ಯಾ ಶಾಸ್ತ್ರ(ಖಗೋಲ) ಇವುಗಳ ಕುರಿತ ವೈಚಾರಿಕ ಸಾಮರ್ಥ್ಯ ಮುಂತಾದವುಗಳ ಬಗ್ಗೆ ಪ್ರಾಚೀನ ಭಾರತ ಹೊಂದಿದ್ದ ಉತ್ತಮ ಗುಣಮಟ್ಟ ಅದ್ಭುತವಾಗಿದ್ದು, ಸದರಿ ಸಾಮರ್ಥ್ಯ ಇಂದಿನ ಗಣಿತ ಶಾಸ್ತ್ರಜ್ಞರಿಗೆ ಮಾತ್ರ ಸರಿಸಾಟಿಯಾಗಿದೆ.

ಸಾವಿರಾರು ವರ್ಷಗಳಷ್ಟು ಹಿಂದೆಯೇ ಭಾರತದ ವೈಜ್ಞಾನಿಕ ತಿಳಿವಳಿಕೆ ಬಹಳಷ್ಟು ಮುಂದುವರಿದಿತ್ತು. ಭೂಮಿಯ ಆಕಾರ ಚಪ್ಪಟೆಯಾಗಿಲ್ಲದೆ, ಗುಂಡಗಿದೆ; ನಮ್ಮ ಭೂಗ್ರಹ ಜಗತ್ತಿನ ಕೇಂದ್ರ ಬಿಂದುವಲ್ಲಿ ಒಂದೇ ಒಂದು ಚುಕ್ಕಿ ಮತ್ತು ಜಗತ್ತು ನಿರ್ದಿಷ್ಟ ದಿನಾಂಕದಂದು (25-5-5478) ಒಮ್ಮೆಗೇ ಸೃಷ್ಟಿಯಾಗಲಿಲ್ಲ ಮುಂತಾದ ವಿಷಯಗಳು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿತ್ತು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ಸತ್ಯಾಂಶಗಳನ್ನು ಕೇವಲ ಕೆಲವು ನೂರು ವರ್ಷಗಳನ್ನು ಹಿಂದೆ ಮಾತ್ರ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಭಾರತೀಯರ ತಿಳಿವಳಿಕೆ ಅದ್ಭುತವೆಂದೇ ಹೇಳಬೇಕು.

ಅದೃಷ್ಟವಶಾತ್ ಆಧುನಿಕ ವಿಜ್ಞಾನ ಮುಂದುವರಿಯುತ್ತಿದ್ದು, ಅದು ದಿನೇ ದಿನೇ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಒಪ್ಪತಕ್ಕದೆಂದು ಭಾವಿಸಲಾಗಿರುವ ಈ ಶತಮಾನದ ಅತ್ಯಂತ ಮಹತ್ತ್ವದ ಸಂಶೋಧನೆಗಳಲ್ಲಿ ಒಂದಾದ ಆಲ್ಬರ್ಟ್ ಐನ್‌ ಸ್ಟೀನ್‌ ರ ಸಾಪೇಕ್ಷ ಸಿದ್ಧಾಂತ, ಗುರುತ್ವಾಕರ್ಷಣೆ ಮತ್ತು ವೇಗ ಪ್ರಮಾಣದ ಅಂಶಗಳಡಿಯಲ್ಲಿ ಕಾಲದ ವರ್ತನೆ ಮತ್ತು ಮಾಪನವನ್ನು ವಿವರಿಸುತ್ತದೆ. ಆಶ್ಚರ್ಯಕರವೆಂದರೆ, ಭೌತಶಾಸ್ತ್ರದ ಇಂತಹ ಮುಂದುವರಿದ ಪರಿಕಲ್ಪನೆಗಳು ಸಹ, ಬುದ್ಧಿವಂತಿಕೆಯ ಪ್ರತೀಕವೆನಿಸಿದ ವೇದ ಸಾಹಿತ್ಯ ಪುಸ್ತಕಗಳಲ್ಲಿ ಕಾಣಸಿಗುತ್ತವೆ.

ಸಾಪೇಕ್ಷ ಸಿದ್ಧಾಂತ ಯಾವ ರೀತಿ ಕಾರ್ಯರೂಪಕ್ಕೆ ಬರುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಕಥೆಯೊಂದನ್ನು ಶ್ರೀಮದ್ ಭಾಗವತದ 9ನೇ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿದೆ. ಸದರಿ ಕಥೆ ಕಕುದ್ಮಿ ಎಂಬ ದೊರೆ ಮತ್ತು ಆತನ ಮಗಳು ರೇವತಿಗೆ ಸಂಬಂಧಿಸಿದುದಾಗಿದೆ.

ಕಕುದ್ಮಿ ತನ್ನ ಮಗಳ ಮದುವೆ ಮಾಡಲು ನಿರ್ಧರಿಸಿ, ಬ್ರಹ್ಮನ ಪ್ರಭಾವದಿಂದ ತನ್ನ ಮಗಳಿಗೆ ಅನುರೂಪವಾದ ವರ ದೊರೆಯಬಹುದೆಂಬ ಖಚಿತ ಭರವಸೆಯಿಂದ ಬ್ರಹ್ಮ ಲೋಕಕ್ಕೆ ಹೋಗಲು ನಿರ್ಧರಿಸಿದ. ಬ್ರಹ್ಮನು ಮುಖ್ಯ ದೇವತೆಯಾಗಿದ್ದು, ಈ ಜಗತ್ತಿನ ಸೃಷ್ಟಿಯ ಮುಖ್ಯ ಅಭಿಯಂತರರ ಸ್ಥಾನವನ್ನು ಅಲಂಕರಿಸಿರುವವನು. ಈತನ ಜೀವನಾವಧಿ ಇಡೀ ಜಗತ್ತಿನ ಜೀವನಾವಧಿಗೆ ಸಮ.

ಈತನ ವಾಸಸ್ಥಾನವಾದ ಬ್ರಹ್ಮಲೋಕ ಈ ಜಗತ್ತಿನಲ್ಲಿಯೇ ಅತ್ಯಂತ ಎತ್ತರದಲ್ಲಿರುವ ಸ್ಥಳ. ಅಲ್ಲಿನ ವಾಸಿಗಳಿಗೆ ನಿಗೂಢ ಶಕ್ತಿಯಿದ್ದು, ದ್ವೇಷ, ನೋವು ಮತ್ತು ಆತಂಕ ಮುಂತಾದ ಯಾವುವೂ ಸುತರಾಂ ಅವರನ್ನು ಕಾಡುವುದಿಲ್ಲ; ಅವರು ಸುಖಪಡುವ ಸಾಮರ್ಥ್ಯ ಭೂಮಿಯಲ್ಲಿನ ಜನಕ್ಕಿಂತ ಸಾವಿರಾರು ಪಟ್ಟು ಅಧಿಕ; ಆಧ್ಯಾತ್ಮಿಕ ಪ್ರಗತಿ ಸುಲಭ ಸಾಧ್ಯ.

ರಾಜ ಕುಕುದ್ಮಿ ತನ್ನ ಮಗಳು ರೇವತಿಯನ್ನು ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋದಾಗ, ಬ್ರಹ್ಮನು ಯಾವುದೋ ಸಂಗೀತ ಕಚೇರಿಯಲ್ಲಿ ಪಾಲ್ಗೊಂಡಿದ್ದ ಕಾರಣ, ಸ್ವಲ್ಪ ಕಾಲ ಮಾತನಾಡಲಾಗಲಿಲ್ಲ. ಒಂದಷ್ಟು ಹೊತ್ತು ಕಾದ ಕಕುದ್ಮಿ, ಬ್ರಹ್ಮನನ್ನು ಸಂಧಿಸಿ, ವಂದನೆ ಸಲ್ಲಿಸಿ, ತನ್ನ ಬೇಡಿಕೆಯನ್ನು ಮುಂದಿಟ್ಟ.

ಆತನ ಬೇಡಿಕೆಯನ್ನು ಆಲಿಸಿದ ಅನಂತರ ಬ್ರಹ್ಮ ಒಮ್ಮೆ ದೊಡ್ಡದಾಗಿ ನಕ್ಕು, “ಎಲೈ ದೊರೆಯೇ, ನಿನ್ನ ಮಗಳ ಕೈ ಹಿಡಿಯಬೇಕೆಂದು ನೀನು ಯಾರು ಯಾರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆಯೋ, ಅವರೆಲ್ಲರ ದೇಹಾಂತ್ಯ ಬಹಳ ಹಿಂದೆಯೇ ಆಗಿಹೋಗಿದೆ. ನೀನು ನಿನ್ನ ರಾಜ್ಯವನ್ನು ಬಿಟ್ಟು ಲಕ್ಷಾಂತರ ವರ್ಷಗಳು ಕಳೆದಿವೆ. ಅವರು, ಅವರ ಮಕ್ಕಳು, ಮೊಮ್ಮಕ್ಕಳು ಹಾಗೂ ಅವರ ವಂಶದ ಮುಂದಿನ ಪೀಳಿಗೆಯವರು ಸಹ ನಿಧನರಾಗಿದ್ದು, ಅವರೆಲ್ಲರನ್ನೂ ಜನ ಮರೆತು ಹೋಗಿದ್ದಾರೆ’ ಎಂದು ಹೇಳಿದ.

ಇದನ್ನು ಕೇಳಿದ ರಾಜ ತನ್ನ ರಾಜ್ಯಕ್ಕೆ ಹೋಗಿ ನೋಡಿದಾಗ ಅದು ಖಾಲಿಯಾಗಿತ್ತು. ಪ್ರವಾಹ, ಅನ್ಯರ ಆಕ್ರಮಣ ಮತ್ತು ನೈಸರ್ಗಿಕ ವಿಕೋಪಗಳಿಂದ ಪುರಾತನ ನಾಗರಿಕತೆಗಳು ನಶಿಸಿ ಹೋಗಿರುವುದನ್ನು ಕಂಡು ಹಿಡಿಯುವ ಆಧುನಿಕ ವಿಜ್ಞಾನಿಗಳಂತೆ, ಕಕುದ್ಮಿಯೂ ತನ್ನ ರಾಜ್ಯಕ್ಕೆ ಹೋದ. ಶತ್ರುಗಳ ಆಕ್ರಮಣಕ್ಕೆ ಹೆದರಿ ತನ್ನ ಪೀಳಿಗೆಯವರು ರಾಜ್ಯವನ್ನು ತ್ಯಜಿಸಿ ಹೋಗಿರುವುದನ್ನು ಕಂಡುಕೊಂಡ.

ರಾಜ ಕಕುದ್ಮಿಯು ಬ್ರಹ್ಮ ಲೋಕದಲ್ಲಿದ್ದಾಗ, ಅವನ ಮಗಳನ್ನು ಬಲರಾಮ ಪ್ರಭುವಿಗೆ ಕೊಟ್ಟು ಮದುವೆ ಮಾಡುವಂತೆ ಬ್ರಹ್ಮಸಲಹೆ ನೀಡಿದ. ವೇದ ಗ್ರಂಥಗಳ ಪ್ರಕಾರ ಬಲರಾಮ ಪ್ರಭು ಕೃಷ್ಣನ ವಿಸ್ತೃತ ರೂಪವಾಗಿದ್ದು, ಇಡೀ ಜಗತ್ತನ್ನು ಶುದ್ಧೀಕರಿಸುವ ಕೆಲಸದಲ್ಲಿ ದೇವೋತ್ತಮ ಪರಮ ಪುರುಷ ಕೃಷ್ಣನಿಗೆ ಸಹಾಯಕ. ಕುಕುದ್ಮಿಯು ಸುಂದರಿಯಾದ ತನ್ನ ಮಗಳನ್ನು ಬಲರಾಮನಿಗೆ ಕೊಟ್ಟು ಮದುವೆ ಮಾಡಿದ ಅನಂತರ ಆತ ಗೃಹಸ್ಥಾಶ್ರಮವನ್ನು ತ್ಯಜಿಸಿ ಅನೇಕ ಸಾಧು-ಸಂತರು ಆಧ್ಯಾತ್ಮಿಕ ಪರಿಪೂರ್ಣತೆ ಸಾಧಿಸಲು ಹೋಗುವ ಬದರಿಕಾಶ್ರಮಕ್ಕೆ ತೆರಳಿದ.

ಕಾಲದ ಪ್ರಭಾವವನ್ನು ಒಪ್ಪುವ ಐನ್‌ ಸ್ಟೀನ್‌ನ ಸಾಪೇಕ್ಷ ಸಿದ್ಧಾಂತವನ್ನು ಒಂದು ರೀತಿಯಲ್ಲಿ ಕಕುದ್ಮಿ ಅನುಭವಿಸಿದ. ಸಾಮಾನ್ಯವಾಗಿ ಕಾಲ ಇಡೀ ಜಗತ್ತಿನಲ್ಲಿ ಒಂದೇ ಮತ್ತು ಸಮಗ್ರವೆಂದು ಭಾವಿಸಿರುತ್ತೇವೆ. ಆದರೆ ಸಾಪೇಕ್ಷ ಸಿದ್ಧಾಂತವು ಕಾಲ ಎಲ್ಲ ಕಡೆಯೂ ಸಮಗ್ರವಲ್ಲವೆಂದು ಪ್ರತಿಪಾದಿಸುತ್ತದೆ. ಬದಲಿಗೆ ನಾವು ಈ ಜಗತ್ತಿನಲ್ಲಿರುವ ಸ್ಥಳ, ಚಲಿಸುವ ವೇಗ ಮುಂತಾದವುಗಳ ವೈಶಿಷ್ಟ್ಯಪೂರ್ಣ ಪ್ರಭಾವಕ್ಕೆ ಒಳಗಾಗಿರುತ್ತೇವೆ.

ಇದಕ್ಕೆ ನಿದರ್ಶನವಾಗಿ ಅವಳಿ ಮಕ್ಕಳಿಬ್ಬರ ಒಂದು ಅದ್ಭುತ ಉದಾಹರಣೆ ಇದೆ. ಅವಳಿಯ ಪೈಕಿ ಒಬ್ಬ ವ್ಯಕ್ತಿ ನಮ್ಮ ಸೌರ ಮಂಡಲದಾಚೆಯ ನಕ್ಷತ್ರವೊಂದಕ್ಕೆ ರಾಕೆಟ್‌ನಲ್ಲಿ ಪ್ರಯಾಣ ಬೆಳೆಸುತ್ತಾನೆ. ಬೆಳಕಿನ ವೇಗದಲ್ಲಿ (ಒಂದು ಕ್ಷಣಕ್ಕೆ 1,86,000 ಮೈಲು) ಚಲಿಸುವ ಅವನು, ಒಂದು ಪೂರ್ಣ ಸುತ್ತು ಹಾಕಲು ಇಪತ್ತೆರಡು ಭೂವರ್ಷಗಳನ್ನು (Earth years) ತೆಗೆದುಕೊಳ್ಳುತ್ತಾನೆ ಆದರೆ ಅತ್ಯಂತ ಹೆಚ್ಚಿನ ವೇಗದಿಂದ ಚಲಿಸುವ ಕಾರಣದಿಂದ ಕಾಲ ಅವನ ಮೇಲೆ ಭಾಗಶಃ ಪರಿಣಾಮ ಮಾತ್ರ ಬೀರುತ್ತದೆ.

ಹಾಗೂ ಅವನು ವಾಪಸ್ಸಾದಾಗ ತನ್ನ ಸೋದರನಿಗಿಂತ ವಯಸ್ಸಿನಲ್ಲಿ ಹನ್ನೆರಡೂವರೆ ವರ್ಷ ಚಿಕ್ಕವನಾಗಿರುವುದು ಅನುಭವಕ್ಕೆ ಬರುತ್ತದೆ!

ಭೂಮಿಯ ಮೇಲೂ ಇದೇ ತತ್ತ್ವ (ಸಿದ್ಧಾಂತ) ಅನ್ವಯವಾಗುತ್ತದೆ. ಸಮುದ್ರ ಮಟ್ಟದಲ್ಲಿ ಜೀವಿಸುವ ಒಬ್ಬ ಅವಳಿ, ಪರ್ವತವೊಂದರ ಮೇಲೆ ಜೀವಿಸುವ ತನ್ನ ಸೋದರನಿಗಿಂತ ಆರು ಕ್ಷಣಗಳಷ್ಟು ಚಿಕ್ಕವನಾಗಿ ಕಾಣುತ್ತಾನೆ. ಇದು ತೀರ ಉಪೇಕ್ಷಿಸುವಷ್ಟು ಅಲ್ಪಾವಧಿ ಆದ ಕಾರಣ, ಅದು ನಮ್ಮ ಗಮನಕ್ಕೆ ಬರುವುದೇ ಇಲ್ಲ.

ರಾಜ ಕಕುದ್ಮಿ ಸಾಪೇಕ್ಷ ಸಿದ್ಧಾಂತದಲ್ಲಿ ಹೇಳಲಾದ ತತ್ತ್ವವನ್ನು ಅನುಭವಿಸಿದ. ರಾಜನು ಬ್ರಹ್ಮಲೋಕದಲ್ಲಿದ್ದಾಗ, ಕಾಲವು ಭೂಮಿಯ ಮೇಲಿದ್ದ ಅವನ ಪರಿವಾರ ಹಾಗೂ ಪ್ರಜೆಗಳ ಮೇಲೆ ಬೀರಿದ್ದಕ್ಕಿಂತ, ಅವನು ಭೂಮಿಯಿಂದ (ವಂಶಜರಿಂದ) ಎಷ್ಟು ಅವಧಿ ದೂರವಿದ್ದನೋ ಅಷ್ಟರ ಮಟ್ಟಿಗೆ ಅವನ ಮೇಲೆ ಬೇರೆಯದೇ ರೀತಿಯ ಪ್ರಭಾವ ಬೀರಿತು.

ಶ್ರೀಮದ್‌ ಭಾಗವತದಂತಹ ಕೃತಿಗಳಲ್ಲಿ ಕಾಣುವ ಇಂತಹ ಮಾಹಿತಿಗಳು ಮಕ್ಕಳಾಟಕ್ಕಾಗಿ ಸರಬರಾಜಾದ ವಿಷಯಗಳಲ್ಲ ಅಥವಾ ವಿಜ್ಞಾನಿಗಳು ಆರಾಮವಾಗಿ ಕುರ್ಚಿಯ ಮೇಲೆ ಕೂತು ನೀಡಿದ ಹೇಳಿಕೆಗಳಲ್ಲ. ಈ ಗ್ರಂಥಗಳಲ್ಲಿನ ವಿಷಯಗಳ ಒಟ್ಟಾರೆ ಉದ್ದೇಶವೆಂದರೆ, ಜೀವನದ ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಉತ್ತೇಜನ ನೀಡುವುದು ಹಾಗೂ ಈ ಸಂಬಂಧ ಹೇಗೆ ಕಾರ್ಯೋನ್ಮುಖರಾಗಬೇಕು ಎಂದು ಬೋಧಿಸುವುದೇ ಆಗಿದೆ.

ಒಮ್ಮೆಗೆ ನಮ್ಮ ಸ್ಥಳದಿಂದ ಹೊರಟು, ಸಾವಿರಾರು ವರ್ಷಗಳ ಅನಂತರ ನಮ್ಮ ಸ್ವಸ್ಥಾನಕ್ಕೆ ಹಿಂದಿರುಗುವ ರಾಜ ಕಕುದ್ಮಿಯಂತಹುದೇ ಪ್ರವಾಸವನ್ನು ನಾವು ಕೈಗೊಳ್ಳುವುದಾದರೆ, ಎಲ್ಲವೂ ಬದಲಾಗಿದ್ದು, ನಮ್ಮ ಜೀವನವನ್ನು ನಾವು ಸಂಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ನೋಡುವಂತಾಗಬಹುದು.

ಇಂತಹ ಪ್ರವಾಸದ ಸಮಯದಲ್ಲಿ, ಅನೇಕ ದೇಶಗಳು ನಿರ್ಮಾಣವಾಗಿ ನಶಿಸಿಹೋಗಿರುತ್ತವೆ; ಅನೇಕ ವಂಶಗಳು ಮತ್ತು ಬಣಗಳು ಆರಂಭವಾಗಿ ಅಂತ್ಯಗೊಂಡಿರುತ್ತವೆ; ವಿವಿಧ ಜೀವನ ಶೈಲಿ ಮತ್ತು ಜನಪ್ರಿಯ ನಂಬಿಕೆಗಳು ಬಂದು ಹೋಗಿರುತ್ತವೆ; ಭೂವಿಜ್ಞಾನ ಮತ್ತು ಪರಿಸರ ಆಗಾಗ ಉತ್ಕ್ರಾಂತಿ ಕಂಡಿರುತ್ತವೆ.

ಇವುಗಳನ್ನು ಗಮನಿಸಿದಾಗ ಸಹಜವಾಗಿಯೇ ನಾವು ”ಕಾಲ ಕಾಲಕ್ಕೂ ಈ ಎಲ್ಲ ಕಷ್ಟ ಕಾರ್ಪಣ್ಯಗಳು ಮರೆಯಾಗದಿದ್ದಲ್ಲಿ (ಅಥವಾ ಎಂದೆಂದಿಗೂ ಒಂದೇ ರೀತಿ ಇದ್ದಲ್ಲಿ), ಜೀವನದಲ್ಲಿ ನಿರೀಕ್ಷಿಸಬಹುದಾದಂತಹ ಉತ್ತಮವಾದದ್ದು ಏನಿದೆ?” ಎಂದು ಕೇಳಬೇಕಾಗುತ್ತದೆ.

ಭಗವದ್ಗೀತೆಯ (2-16)ಲ್ಲಿ ಕೃಷ್ಣನು ಹೇಳುತ್ತಾನೆ: “ಇಲ್ಲದ ವಸ್ತುವಿಗೆ (ಒಂದು ಕಡೆ ಒಂದು ಕಾಲದಲ್ಲಿ ಬಿಡಿಬಿಡಿಯಾಗಿರುವುದಕ್ಕೆ) ಅಂತ್ಯ ಇಲ್ಲ. ಇರುವ ವಸ್ತುವಿಗೆ (ಎಲ್ಲೆಲ್ಲಿಯೂ ಯಾವಾಗಲೂ ಇರುವ ಆತ್ಮಕ್ಕೆ) ವಿನಾಶ ಅಥವಾ ಇಲ್ಲದಿರುವಿಕೆಯು ಇರುವುದಿಲ್ಲ. ಆತ್ಮದ ಸ್ವರೂಪವನ್ನು ಕಂಡವರು ಇವೆರಡರ ನೆಲೆಯನ್ನು ಕಾಣುವರು.

ನಾವು ನಮ್ಮ ಕುಟುಂಬ, ಸಮಾಜ, ಜೀವನ ಶೈಲಿ, ಕೌಶಲ್ಯ ಮುಂತಾದವುಗಳಿಗೆ ಸಾಮಾನ್ಯವಾಗಿ ಅತಿಯಾದ ಪ್ರಾಮುಖ್ಯವನ್ನು ಕೊಡುತ್ತೇವೆ ಮತ್ತು ನಮ್ಮ ಹಿನ್ನೆಲೆ, ಸ್ಥಾನ ಮತ್ತು ಕಾಲವನ್ನು ಸಮಗ್ರವಾಗಿ ನೋಡುತ್ತೇವೆ. ಆದರೆ ಭಗವಂತ ಕೃಷ್ಣನು ಇವೆಲ್ಲವೂ ನಶ್ವರ ಹಾಗೂ ಅಮುಖ್ಯ ಎಂದು ಹೇಳುತ್ತಾನೆ. ಹೀಗಾಗಿ ಇವೆಲ್ಲವೂ ‘ಇಲ್ಲದ್ದು’ ಎಂದು ವಿವರಿಸುತ್ತಾನೆ.

ಈ ‘ಸಕಾಲಿಕ ಪ್ರವಾಸ’ ದಲ್ಲಿನ ರಾಜ ಕಕುದ್ಮಿಯ ಅನುಭವವು ಇತರ ಪ್ರಾಜ್ಞರ ಅಭಿಪ್ರಾಯ/ನಿರ್ಣಯಗಳನ್ನು ಖಚಿತಪಡಿಸುತ್ತವೆ. ನಮ್ಮ ಭೌತಿಕ ಜೀವನಕ್ಕೆ ನಾವು ಅತಿಯಾದ ಪ್ರಾಮುಖ್ಯ ಕೊಡುವುದರಿಂದ, ನಮ್ಮನ್ನು ನಾವೇ, ಎಂದರೆ ನಮ್ಮ ನಿಜವಾದ ಶಾಶ್ವತ ಉಳಿವನ್ನು ಪ್ರತಿನಿಧಿಸುವ ‘ಆತ್ಮ’ವನ್ನೇ ಮರೆತು ಬಿಡುತ್ತೇವೆ.

ಆಧ್ಯಾತ್ಮಿಕ ಜ್ಞಾನವನ್ನು ವೃದ್ಧಿಸಿಕೊಳ್ಳುವುದರಿಂದ, ನಾವು ಆತ್ಮವನ್ನು ಎಚ್ಚರಿಸಬಹುದು, ನಮ್ಮ ಪ್ರಕೃತಿಯನ್ನು ಐಹಿಕ ಜಗತ್ತಿನ ಸಂಬಂಧಗಳಾಚೆಗೂ ಅರ್ಥಮಾಡಿಕೊಳ್ಳಬಹುದು ಮತ್ತು ಶಾಶ್ವತವಾದ ಆಧ್ಯಾತ್ಮಿಕ ಉಳಿವಿನ ಸಾಮ್ರಾಜ್ಯವನ್ನು ಪ್ರವೇಶಿಸಬಹುದು. ಇದನ್ನು ಸಾಧಿಸುವುದೇ ಜೀವನದ ಉದ್ದೇಶವಾಗಿದೆ. ಹರೇ ಕೃಷ್ಣ ಮಂತ್ರ ಪಠಿಸುವುದರೊಂದಿಗೆ ಪ್ರಾರಂಭವಾಗುವ ಕೃಷ್ಣಪ್ರಜ್ಞಾಚಳವಳಿಯ ಪ್ರಕ್ರಿಯೆಯು ಇದನ್ನು ಸಾಧಿಸುವ ಕಾರಣಕ್ಕಾಗಿಯೇ ಇದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi