ಮೌಢ್ಯದ ಯುಗದಲ್ಲಿ ಪೊಳ್ಳು ಪ್ರತಿಷ್ಠೆ

ಸ್ಥಳ: ಹ್ಯಾಂಬರ್ಗ್, ಡಿಸೆಂಬರ್ 1969, ಶ್ರೀಲ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರು ಮತ್ತು ಅತಿಥಿಗಳೊಂದಿಗೆ ಬೆಳಗಿನ ಜಾವದ ವಾಕಿಂಗ್‌ನಲ್ಲಿ ನಡೆದ ಸಂವಾದ

– ಅನುವಾದ: ಡಾ.ಕೆ.ವೈ.ಬಾಲರಾಜ್‌

ಶ್ರೀಲ ಪ್ರಭುಪಾದ : ನಿನ್ನೆಯ ರಾತ್ರಿಯ ಉಪನ್ಯಾಸದಲ್ಲಿ ಆಧ್ಯಾತ್ಮಿಕ ಜೀವನದ ಬಗ್ಗೆ ನಮ್ಮ ವಿವರಣೆ ಸರಿಯಾಗಿತ್ತಾ?

ಶಿಷ್ಯ : ಹೌದು ಶ್ರೀಲ ಪ್ರಭುಪಾದರೆ, ಇನ್ನೂ ಬಹಳಷ್ಟು ಜನ ಬರುವವರಿದ್ದರು, ಆದರೆ ಈ ವಾರ ವಿಶ್ವ ಪುಟ್ಬಾಲ್ ಚಾಂಪಿಯನ್‌ಷಿಪ್ ಪಂದ್ಯ ನಡೆಯುತ್ತಿರುವುದರಿಂದ ಬಹಳಷ್ಟು ಜನ ಬಂದಿಲ್ಲ. ಎಲ್ಲರೂ ಆ ಪಂದ್ಯವನ್ನು ನೋಡಬಯಸುತ್ತಾರೆ. ಆದ್ದರಿಂದ ಅವರು ಮನೆಯಲ್ಲಿಯೇ ಕುಳಿತುಕೊಂಡು ದೂರದರ್ಶನದಲ್ಲಿ ಆ ಪಂದ್ಯಗಳನ್ನು ವೀಕ್ಷಿಸುತ್ತಾರೆ ಅಥವಾ ಕ್ರೀಡಾಂಗಣಕ್ಕೆ (ಸ್ಟೇಡಿಯಂ) ಹೋಗಿ ವೀಕ್ಷಿಸುತ್ತಾರೆ. ಎಲ್ಲರೂ ಆ ಪಂದ್ಯಗಳನ್ನು ನೋಡಲು ಇಷ್ಟಪಡುತ್ತಾರೆ.

ಶ್ರೀಲ ಪ್ರಭುಪಾದ : ಅವರಿಗೆ ಇದನ್ನೇ ಕಲಿಸಲಾಗಿರುವುದರಿಂದ ಅವರು ಹೀಗೆಯೇ ಇದ್ದಾರೆ. ಇದರಲ್ಲಿ ಅವರ ತಪ್ಪೇನು? ಅವರಿಗೆ ಮನುಷ್ಯ ಜೀವನದ ಪ್ರಾಮುಖ್ಯ ಗೊತ್ತಿಲ್ಲ. ಅವರಿಗೆ ”ತಿನ್ನಿರಿ, ಕುಡಿಯಿರಿ, ಸಂತೋಷವಾಗಿರಿ” ಎಂದು ಕಲಿಸಲಾಗಿದೆ.

ಮತ್ತೆ ಮುಂದಿನ ಜನ್ಮದಲ್ಲಿ ನಾಯಿಯಾಗಿರಿ. ಅಷ್ಟೆ. ಆದರೆ ಜನರಿಗೆ ಗೊತ್ತಿಲ್ಲ. ಅವರು ಹೇಳುತ್ತಾರೆ ”ಪರವಾಗಿಲ್ಲ, ಮುಂದಿನ ಜನ್ಮದಲ್ಲಿ ನಾನು ನಾಯಿಯೇ ಆಗುತ್ತೇನೆ. ಅಷ್ಟರ ಮೇಲೆ ಮುಂದಿನ ಜನ್ಮದಲ್ಲಿ ನಾನು ಎಲ್ಲವನ್ನೂ ಮರೆತಿರುತ್ತೇನೆ.”

ಈ ಬ್ರಹ್ಮಾಂಡದಲ್ಲಿ ಅನೇಕ ಲೋಕಗಳಿವೆ (ಗ್ರಹಗಳು), ಅದೇ ರೀತಿಯಾಗಿ ಅನೇಕ ಜೀವನದ ಪ್ರಮಾಣದ ಹಂತಗಳಿವೆ, ಆದರೆ ಜನರಿಗೆ ಏನೂ ಗೊತ್ತಿಲ್ಲ.

ಅತಿಥಿ : ಆದರೆ ಬೇರೆ ಲೋಕಗಳ ಮೇಲಿರುವ ಜೀವಿಗಳಿಗೆ ನಮಗಿಂತ ಹೆಚ್ಚಿನ ಆಧ್ಯಾತ್ಮಿಕ ರೂಪಗಳು ಇರಬಹುದು.

ಶ್ರೀಲ ಪ್ರಭುಪಾದ : ಇಲ್ಲ ಅವರಿಗೂ ಭೌತಿಕ ರೂಪಗಳೇ ಇವೆ. ಉದಾಹರಣೆಗೆ, ನೀವು ನೀರಿನಲ್ಲಿ ಇರಲಿಕ್ಕೆ ಆಗುವುದಿಲ್ಲ. ಮೀನುಗಳಿಗೆ ಮಾತ್ರ ನೀರಿನಲ್ಲಿ ಇರಲು ಸಾಧ್ಯ. ಆದರೂ ಮೀನಿನ ದೇಹ ಆಧ್ಯಾತ್ಮಿಕ ರೂಪವಾದುದಲ್ಲ. ಅದು ಭೌತಿಕವಾದುದೇ. ಅದೇ ರೀತಿಯಾಗಿ ನೀವು ಸೂರ್ಯನ ಬಳಿಗೆ ಹೋಗಲು ಆಗುವುದಿಲ್ಲ. ಏಕೆಂದರೆ ಅಲ್ಲಿಯ ವಾತಾವರಣ ಬೇರೆಯೇ ಇದೆ. ಆದರೂ ಸೂರ್ಯನಲ್ಲಿ ಜೀವಿಸುವಂತಹ ಜೀವಿಗಳು ಇವೆ. ಅವರಿಗೆ ಅವರದೇ ಆದ ಭೌತಿಕ ದೇಹಗಳು ಇವೆ.

ಅತಿಥಿ : ಆದರೆ ಜನರಿಗೆ ಇದೆಲ್ಲ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ.

ಶ್ರೀಲ ಪ್ರಭುಪಾದ : ಅವರಿಗೆ ಮೂರ್ಖರಾಗಲು ತರಬೇತಿ ಕೊಡಲಾಗಿದೆ. (ನಗು) ಹೇಗೆ ಅವರಿಗೆ ಇವೆಲ್ಲ ಅರ್ಥವಾಗುತ್ತದೆ? ಅವರು ಹುಲಿ ಮತ್ತು ನಾಯಿಗಳಂತೆ ಮಾಂಸಭಕ್ಷಣೆ ಮಾಡುವ ಮೂರ್ಖರು ಅಷ್ಟೆ. ಹುಲಿಯು ಶಕ್ತಿವಂತವಾಗಿರಬಹುದು. ಆದರೆ ಅದಕ್ಕೆ ಬುದ್ಧಿ ಇದೆಯೇ? ಬುದ್ಧಿ ಇಲ್ಲ. (ನಗು)

ಬುದ್ಧಿ ಇರಬೇಕಾದರೆ ಬ್ರಾಹ್ಮಣರಾಗಿರಬೇಕು. ಶಮೋ ದಮಸ್ ತಪಃ ಶೌಚಮ್ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ. ನಿಜವಾದ ಬುದ್ಧಿಯೆಂದರೆ ಒಬ್ಬ ವ್ಯಕ್ತಿ ಶಾಂತನಾಗಿರಬೇಕು. ಬುದ್ಧಿ ಹೊಂದಿರಬೇಕಾದರೆ ಆಧ್ಯಾತ್ಮಿಕವಾಗಿ ಅರ್ಹನಾಗಿರಬೇಕು. ಹುಲಿ ಬಲಶಾಲಿ ಇದೆ, ಅದು ನನ್ನ ಮೇಲೆ ಆಕ್ರಮಣ ಮಾಡಿ ನನ್ನನ್ನು ಕೊಲ್ಲಬಹುದು. ಇದರ ಅರ್ಥ ಅದಕ್ಕೆ ನನಗಿಂತ ಉತ್ತಮವಾದ ಬುದ್ಧಿ ಇದೆ ಎಂದು ಅಲ್ಲ.

ಅತಿಥಿ : ಹೌದು, ಹೌದು.

ಶ್ರೀಲ ಪ್ರಭುಪಾದ : ಈ ಆಧುನಿಕ ನಾಗರಿಕತೆಯು ಜನರಿಗೆ ಅಣುಬಾಂಬುಗಳನ್ನು ಹೇಗೆ ತಯಾರಿಸುವುದು ಮತ್ತು ಅದರಿಂದ ಹೇಗೆ ತಾವು ಭೌತಿಕವಾಗಿ ಶಕ್ತಿಶಾಲಿಯಾಗಿ ಇನ್ನೊಬ್ಬರನ್ನು ಕೊಲ್ಲಬಹುದು ಎಂದು ಕಲಿಸಿ ಜನರನ್ನು ಹುಲಿಗಳ ಹಾಗೆ ಮಾಡುತ್ತಿದೆ. ಜನರು ನಾಯಿಗಳಂತೆ ಇನ್ನೊಂದು ನಾಯಿಗಳ ಮೇಲೆ ಹೇಗೆ ಆಕ್ರಮಣ ಮಾಡಬಹುದೆಂಬುದರಲ್ಲಿಯೇ ನಿರತರಾಗಿದ್ದಾರೆ ಅಷ್ಟೆ.

ಅತಿಥಿ : ಪ್ರಭುಪಾದರೆ, ನಿಮ್ಮ ಆಧ್ಯಾತ್ಮಿಕ ಪಂಗಡಕ್ಕೆ ಇದು ಒಳ್ಳೆಯ ವಾತಾವರಣವಾಗಿದೆ.

ಶ್ರೀಲ ಪ್ರಭುಪಾದ : ಹೌದು, ಹೌದು.

ಅತಿಥಿ : ಇಲ್ಲಿರುವ ಜನರಿಗೆ ಇದು ಒಳ್ಳೆಯ ಉದಾಹರಣೆಯಾಗುತ್ತದೆಂದು ನಾನು ಭಾವಿಸುತ್ತೇನೆ.

ಶ್ರೀಲ ಪ್ರಭುಪಾದ : ಪ್ರಗತಿ ಹೊಂದಿರುವವರು ಎಂದು ಕರೆಯಿಸಿಕೊಳ್ಳುವ ಮನುಷ್ಯ ಜೀವಿಗಳು ಇಲ್ಲಿಗೆ ಬೇಟೆಯಾಡಲು ಬರುತ್ತಾರೆ. ಅವರು ಇಲ್ಲಿ ಪ್ರಾಣಿಗಳನ್ನು ಕೊಲ್ಲಲು ಬರುತ್ತಾರೆ.

ಅತಿಥಿ : ಹೌದು.

ಶ್ರೀಲ ಪ್ರಭುಪಾದ : ಪ್ರಾಣಿಗಳು ತಮ್ಮದೇ ಆದ ವಾತಾವರಣದಲ್ಲಿ ಶಾಂತವಾಗಿಯೇ ವಾಸಿಸುತ್ತಿವೆ. ಈ ಜನರು ಅವುಗಳನ್ನು ಕೊಲ್ಲಲು ಬರುತ್ತಾರೆ. ಪ್ರಸ್ತುತ ಯುಗದಲ್ಲಿ ಈ ಕೊಲ್ಲುವ ಪ್ರವೃತ್ತಿ ಪ್ರಮುಖವಾಗಿಬಿಟ್ಟಿದೆ. ಆದ್ದರಿಂದಲೇ ತಾಯಿಯ ಗರ್ಭದಲ್ಲಿಯೇ ಅನೇಕ ಜೀವಿಗಳು ಕೊಲ್ಲಲ್ಪಡುತ್ತಿವೆ.

ಗರ್ಭಪಾತದ ಮೂಲಕ ಮಕ್ಕಳನ್ನು ಕೊಲ್ಲಲಾಗುತ್ತದೆ. ಪ್ರಕೃತಿ ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ಕೊಲ್ಲುತ್ತಿದ್ದೀರಿ. ಅದಕ್ಕೆ ತಾಯಿಯ ಗರ್ಭದಲ್ಲಿಯೇ ನಿಮ್ಮನ್ನು ಕೊಲ್ಲಲಾಗುತ್ತದೆ. ನೀವು ಸೂರ್ಯನ ಬೆಳಕನ್ನೇ ನೋಡುವುದಿಲ್ಲ. ನೀವು ಎಷ್ಟು ಪ್ರಾಣಿಗಳನ್ನು ಕೊಲ್ಲುತ್ತೀರಿ ಅಷ್ಟು ಸಲ ಜನ್ಮ ಜನ್ಮಾಂತರದಲ್ಲಿ ಕೊಲ್ಲಲ್ಪಡುತ್ತೀರಿ. ಜನರಿಗೆ ಇದೆಲ್ಲ ಗೊತ್ತಿಲ್ಲ.

ಈ ಯುಗದಲ್ಲಿ ಜನರಿಗೆ ಆಹಾರ ಸಿಗದೆ, ಮನುಷ್ಯ ಮನುಷ್ಯನನ್ನೇ ತಿನ್ನಲು ಕೊಲ್ಲುವ ಒಂದು ಕಾಲವು ಬರುತ್ತದೆ. ಹೌದು ಆ ಕಾಲವು ಬರುತ್ತದೆ. ಈಗ ಅವರು ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ. ಪ್ರಾಣಿಗಳು ಹುಲ್ಲು ಮತ್ತು ಕಾಳುಗಳು ತಿಂದು ಜೀವಿಸುತ್ತವೆ. ಯಾವಾಗ ಹುಲ್ಲು ಮತ್ತು ಕಾಳುಗಳು ಸಿಗುವುದಿಲ್ಲವೋ, ಆಗ ಪ್ರಾಣಿಗಳು ಇರುವುದಿಲ್ಲ. ಆಗ ಜನರಿಗೆ ಪ್ರಾಣಿಗಳು ಎಲ್ಲಿ ಸಿಗುತ್ತವೆ? ಅವರು ತಮ್ಮ ಮಕ್ಕಳನ್ನೇ ಕೊಂದು ತಿನ್ನುತ್ತಾರೆ. ಆ ಕಾಲವು ಬರುತ್ತದೆ.

ನಿಮ್ಮ ಆಹಾರವನ್ನು ನೀವೇ ಬೆಳೆಯಬೇಕು. ಇದು ಪ್ರಕೃತಿಯ ನಿಯಮ. ಆದರೆ ಜನರಿಗೆ ಆಹಾರ ಬೆಳೆಯುವುದರಲ್ಲಿ ಆಸಕ್ತಿ ಇಲ್ಲ. ಅವರು ನಟ್ಟು, ಬೋಲ್ಟ್ ಗಳನ್ನು ತಯಾರಿಸುವುದರಲ್ಲಿಯೇ ಆಸಕ್ತರಾಗಿದ್ದಾರೆ.

ಅತಿಥಿ : ತಯಾರಿಸುತ್ತಿದ್ದಾರೆ…?

ಶ್ರೀಲ ಪ್ರಭುಪಾದ: ಬೋಲ್ಟ್‌ ಮತ್ತು ನಟ್‌ಗಳನ್ನು.

ಅತಿಥಿ : ಹೌದು, ಹೌದು, ಹೌದು.

ಶ್ರೀಲ ಪ್ರಭುಪಾದ : ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ತಯಾರಿಸಿದ ನಟ್ಟು ಬೋಲ್ಟ್ ಗಳನ್ನೇ ಅವರು ತಿನ್ನಬೇಕಾಗುತ್ತದೆ. ಅವರಿಗೆ ಆಹಾರ ಕಾಳುಗಳು ಎಲ್ಲಿ ಸಿಗುತ್ತವೆ? ಅವರು ಪ್ರಾಣಿಗಳನ್ನು ತಿಂದು ನಟ್ಟು ಬೋಲ್ಟ್ ಗಳನ್ನು ತಯಾರಿಸೋಣವೆಂದು ಯೋಚಿಸುತ್ತಾರೆ. ಆದರೆ ಎಲ್ಲ ಪ್ರಾಣಿಗಳು ತೀರಿದ ಅನಂತರ ಅವರೇನು ತಿನ್ನುತ್ತಾರೆ?

ಶಿಷ್ಯ : ಶ್ರೀಲ ಪ್ರಭುಪಾದರೆ, ವಿಜ್ಞಾನಿಗಳು ಕೃತಕ ಆಹಾರವನ್ನು ತಯಾರಿಸುತ್ತಿದ್ದಾರೆ. ಆದ್ದರಿಂದ ಅವರು ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ.

ಶ್ರೀಲ ಪ್ರಭುಪಾದ : ಹೌದು, ಹೌದು. ಅದಕ್ಕೆ ನಾನು ನಟ್ಟು ಬೋಲ್ಟ್ ಗಳ ಬಗ್ಗೆ ಮಾತನಾಡುತ್ತಿರುವೆ. ಕೃತಕ ಆಹಾರವೆಂದರೆ ನಟ್ಟು ಬೋಲ್ಟ್ ಗಳು. ನನಗೆ ಯಾರೋ ಹೇಳಿದ್ದರು. ವಿಜ್ಞಾನಿಗಳು ಕೃತಕವಾದ ಬೆಣ್ಣೆಯನ್ನು ತಯಾರಿಸಿದ್ದರೆಂದು, ಅದನ್ನು ತಿಂದು ಜನರು ವಾಂತಿ ಮಾಡಿಕೊಂಡಿದ್ದರು. ಈಗಾಗಲೇ ಸಾಕಷ್ಟು ಬೆಣ್ಣೆ ಸಿಗುತ್ತದೆ. ಆದರೆ ಏಕೆ ಈ ಮೂಢರು ತಮ್ಮ ವೈಜ್ಞಾನಿಕ ಬುದ್ಧಿಯನ್ನು ತೋರಿಸಿಕೊಳ್ಳಲು ಕೃತಕವಾಗಿ ಬೆಣ್ಣೆ ತಯಾರಿಸಲು ಆಸಕ್ತರಾಗಿದ್ದಾರೆ.

ನೋಡಿ ಎಂತಹ ಮೂಢರಿದ್ದಾರೆ ಇವರು! ಕೃಷ್ಣನು ಅಪರಿಮಿತವಾದ ಬೆಣ್ಣೆಯನ್ನು ತನ್ನ ತಾಯಿಯಿಂದ ಕದ್ದು ಕೋತಿಗಳಿಗೆ ಎಸೆಯುತ್ತಿದ್ದ. ಹಾಗೇ ತಾವುಗಳು ಕೂಡ ಅಪರಿಮಿತವಾದ ಬೆಣ್ಣೆಯನ್ನು ತಯಾರಿಸಬಹುದು ಎಂದು ಅವರು ತಿಳಿದುಕೊಂಡಿದ್ದಾರೆ. ಬೆಣ್ಣೆ ಪ್ರಭುವಿನ ಹಸುಗಳಿಂದಲೇ ಉತ್ಪತ್ತಿಯಾಗುತ್ತದೆ.

ಅದನ್ನು ಪ್ರತಿಯೊಬ್ಬರೂ ಪುಷ್ಕಳವಾಗಿ ತಿನ್ನಬಹುದು. ಆದರೆ ಇಲ್ಲಿ ಈ ಜನರು, “ಪ್ರಾಣಿಗಳನ್ನು ಕೊಲ್ಲಿ. ಕೃತಕವಾದ ಬೆಣ್ಣೆಯನ್ನು ತಿನ್ನಿ ಮತ್ತು ವಾಂತಿಯನ್ನು ಮಾಡಿ” ಎಂದು ಹೇಳುತ್ತಾರೆ. ಅಷ್ಟೇ ನೋಡಿ ಅವರ ಬದ್ಧಿಯನ್ನು ಅವರಿಗೆ ತಮ್ಮ ಅಭಿವೃದ್ಧಿ ಹೊಂದಿದ ನಾಗರಿಕರ ಬಗ್ಗೆ ಹೆಮ್ಮೆ ಇದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi