ಆಕರ : ಶ್ರೀ ಚಂಚಲಾಪತಿ ದಾಸ, ಉಪಾಧ್ಯಕ್ಷರು, ಇಸ್ಕಾನ್ ಬೆಂಗಳೂರು ಇವರ ಆಂಗ್ಲ ಉಪನ್ಯಾಸ
ಸೂರ್ಯನನ್ನು ನೋಡಿ … ಕಣ್ ಕುಕ್ಕುವ ಪ್ರಭೆ ಆತನದು. ಅಸ್ತಮಾನದ ನೋಟ ನೋಡುವಾಗಲೂ ನೋಡುತ್ತ ನೋಡುತ್ತ, ಅವನ ಪ್ರಕಾಶವನ್ನೆದುರಿಸಲಾಗದೆ ಕಣ್ ಕತ್ತಲೆಗಟ್ಟುತ್ತದೆ ಅಲ್ಲವೇ?

ಕೋಟ್ಯಂತರ ವರ್ಷಗಳಿಂದ ಶಾಖವನ್ನು – ಬೆಳಕನ್ನು ಹರಿಸುತ್ತಿದ್ದರೂ ಅವನ ಶಕ್ತಿಯಲ್ಲೇನೂ ಕೊರತೆಯಾಗಿಲ್ಲ. ಇದನ್ನು ಲೆಕ್ಕ ಹಾಕಿದರೆ, ಸೂರ್ಯ ಶಕ್ತಿಯ ಅಪರಿಮಿತ ಸ್ರೋತವೆಂದೇ ಹೇಳಬಹುದು. ಆದರೆ, ವೈದಿಕ ಶಾಸ್ತ್ರಗಳ ಪ್ರಕಾರ, ಎಲ್ಲ ಭೌತಿಕ ವಸ್ತುಗಳಿಗೂ ಅಂತ್ಯ ಇದ್ದೇ ಇರುತ್ತದೆ. ಇದು ಸೂರ್ಯನಿಗೂ ಅನ್ವಯಿಸುತ್ತದೆ. ಆದರೆ ಅಲ್ಪಾಯುಷಿಯಾದ ಸಾಮಾನ್ಯ ಮನುಷ್ಯನೊಬ್ಬನಿಗೆ, ಸೂರ್ಯನ ಶಕ್ತಿಯು ಅಂತ್ಯವೇ ಇಲ್ಲದ್ದು ಎನಿಸುವುದರಲ್ಲಿ ಆಶ್ವರ್ಯವೇನಿಲ್ಲ.
ಕೃಷ್ಣನೂ ಸೂರ್ಯನಂತೆ, ಅಸೀಮ, ಎಲ್ಲ ವಿಧದಿಂದಲೂ ಅಪರಿಮಿತನಾದವನು. ಅವನ ಆನಂದವೂ ಮಿತಿ ಇಲ್ಲದ್ದು, ವೇದಾಂತದಲ್ಲಿ ಆತನನ್ನು “ಆನಂದಮಯೋSಭ್ಯಾಸಾತ್” – ಅಂದರೆ, ತನಗೆ ತಾನೆ ಸಹಜವಾಗಿ ಅಲೌಕಿಕ ಆನಂದದಿಂದ ಕೂಡಿರುವವನು ಎಂದು ಹೇಳಿದೆ. ನಾವು ಕೃಷ್ಣನನ್ನು ನೋಡಿದಾಗ, ಅವನು ಎಲ್ಲ ಸನ್ನಿವೇಶಗಳಲ್ಲೂ ಆನಂದಭರಿತನಾಗಿಯೇ ಕಂಡುಬರುತ್ತಾನೆ.
ಅವನನ್ನು ಯಾರೂ ವ್ಯಾಕುಲಗೊಳಿಸಲಾರನು. ಅವನಿಗೆ ಉದ್ವೇಗವೆಂಬುದಿಲ್ಲ. ಭಾಗವತದಲ್ಲಿ ಆತನನ್ನು ಸಚ್ಚಿದಾನಂದ (ಸತ್ ಚಿತ್ ಆನಂದ) ವಿಗ್ರಹ ಎಂದು ವರ್ಣಿಸಲಾಗಿದೆ. ಅಂದರೆ, ಆತನ ದೇಹವು ಅಲೌಕಿಕವೂ ಶಾಶ್ವತವೂ ಆಗಿದ್ದು ಆನಂದ ಮತ್ತು ಜ್ಞಾನದಿಂದ ತುಂಬಿರುವಂಥದ್ದಾಗಿದೆ. ಭಗವದ್ಗೀತೆಯಲ್ಲಿ ಆತನನ್ನು “ಅವ್ಯಯ” ಅಂದರೆ ನಾಶವಿಲ್ಲದವನು ಎಂದು ಕರೆಯಲಾಗಿದೆ. ವಿಶೇಷವಾಗಿ ಶ್ರೀಕೃಷ್ಣನು ತನ್ನ ಆನಂದಾನುಭೂತಿಯಲ್ಲಿ ಅವ್ಯಯನು. ಅದು ಗಳಿಗೆಯಿಂದ ಗಳಿಗೆಗೆ ವಿಸ್ತರಿಸುತ್ತಲೇ, ಹೆಚ್ಚಾಗುತ್ತಲೇ ಇರುವಂಥದ್ದು!
ಶ್ರೀ ಕೃಷ್ಣನು ಸ್ವತಃ ಭಗವದ್ಗೀತೆಯಲ್ಲಿ ಘೋಷಿಸಿರುವಂತೆ, ನಾವೆಲ್ಲರೂ ಅವನ ವಿಭಿನ್ನಾಂಶಗಳು –
ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ |
ಮನಃ ಷಷ್ಠಾನೀನ್ದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ॥ 15.7
“ಈ ಬದ್ಧ ಜಗತ್ತಿನಲ್ಲಿರುವ ಜೀವಿಗಳು ನನ್ನ ನಿತ್ಯವಾದ ಸಣ್ಣ ಸಣ್ಣ ಭಾಗಗಳು ಬದ್ಧ ಜೀವನದಿಂದಾಗಿ ಅವರ ಮನಸ್ಸೂ ಸೇರಿದಂತೆ ಆರು ಇಂದ್ರಿಯಗಳೊಡನೆ ಬಹಳವಾಗಿ ಕಷ್ಟಪಡುತ್ತಾರೆ.”
ಭಗವಂತನಿಗೆ ಸೇವೆ ಸಲ್ಲಿಸುವ ಮೂಲಕ ಅವನ ಅಪರಿಮಿತ ಆನಂದದಲ್ಲಿ ಭಾಗಿಯಾಗುವುದು ನಮ್ಮ ವಿಶೇಷಾಧಿಕಾರವಾಗಿದೆ. ಅದರ ಬದಲು ನಾವು ಭೌತಿಕ ಪ್ರಕೃತಿಯ ಬಿಗಿ ಹಿಡಿತಕ್ಕೆ ಒಳಗಾಗಿದ್ದೇನೆ.
ಕರ್ಮದ ಕಠಿಣ ನಿಯಮಗಳು ನಮ್ಮನ್ನು ಯಾತನೆಗೆ ಗುರಿಯಾಗಿಸುತ್ತಿದೆ. ನಮ್ಮ ಯಾತನೆಗಳು ತಾಪತ್ರಯಗಳ ರೂಪದಲ್ಲಿ ವ್ಯಕ್ತವಾಗುತ್ತವೆ. ಅವು ನಮ್ಮದೇ ದೇಹ – ಮನಸ್ಸುಗಳಿಂದ, ಇತರ ಜೀವಿಗಳಿಂದ ಮತ್ತು ನಿಸರ್ಗದ ವೈಪರೀತ್ಯಗಳ ಮುಖಾಂತರ ಬಂದೆರಗುತ್ತವೆ.
ಯಾತನೆ ಎಂದರೆ ಏನೆಂದು ನೋಡಬೇಕಾದರೆ, ಅದಕ್ಕೆ ಆಸ್ಪತ್ರೆಯೇ ಸೂಕ್ತ ಸ್ಥಳ. ಆಸ್ಪತ್ರೆಗಳಲ್ಲಿ ಐ.ಸಿ.ಯು. ಘಟಕದಲ್ಲಿ ಇರಿಸಲ್ಪಟ್ಟ ರೋಗಿಗಳ ದೇಹಸ್ಥಿತಿ ಅತಿ ಸೂಕ್ಷ್ಮವಾಗಿ, ನಿತ್ರಾಣವಾಗಿ ಬಿಟ್ಟಿರುತ್ತದೆ.
ಒಮ್ಮೆ ವೃದ್ಧೆಯೊಬ್ಬರು, ತಮ್ಮ ತಂದೆಯ ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಹೇಳುತ್ತಿದ್ದರು. ಸಾಯುವ ಮೊದಲೊಮ್ಮೆ ತೀರ್ಥಯಾತ್ರೆ ಮಾಡಬೇಕೆಂಬುದು ಆ ವೃದ್ಧ ತಂದೆಯ ಬಯಕೆಯಾಗಿತ್ತು. ಅದರಂತೆ ಅವರ ಕುಟುಂಬದ ಸದಸ್ಯರೆಲ್ಲರೂ ಕೂಡಿ ತೀರ್ಥಯಾತ್ರೆಗೆ ಹೋಗಿಬಂದರು. ನಾನು ಆಕೆಯನ್ನು ಕುರಿತು, ಈಗ ಅವರು ಕೊಂಚ ಸುಧಾರಿಸಿರುವರೇ ಎಂದು ವಿಚಾರಿಸಿದೆ.
ಆಕೆ, ತಮ್ಮ ತಂದೆಯ ಸ್ಥಿತಿ ತೀರಾ ಚಿಂತಾಜನಕವಾಗಿದೆಯೆಂದೂ, ಅವರು ಇನ್ನೂ ಎಷ್ಟು ದಿನ ಹೀಗೆ ನರಳಿಕೊಂಡು ಇರುವರೋ ಎಂಬ ಚಿಂತೆಯೇ ಮನೆ ಮಂದಿಯನ್ನು ಆವರಿಸಿದೆ ಎಂದು ಹೇಳಿದರು..

ಇಂಥದ್ದೆ ಮತ್ತೊಂದು ಘಟನೆ ನನ್ನ ಕೃತಿಯಲ್ಲಿದೆ. ನನ್ನ ಅಜ್ಜಿಗೆ ಬಹಳ ವಯಸ್ಸಾಗಿತ್ತು. ಅವರು ಹೆಚ್ಚು ಕಡಮೆ ಮರಣಶಯ್ಯೆಯಲ್ಲೇ ಇದ್ದರು. ಆ ದಿನಗಳಲ್ಲಿ ನಾನಿನ್ನೂ ಶಾಲೆಗೆ ಹೋಗುತ್ತಿದ್ದವನು. ಪ್ರತಿ ಮುಂಜಾನೆ ನಾನು ಎದ್ದ ಕೂಡಲೇ ಅವರನ್ನು ನೋಡಲು ಅವರಿದ್ದ ಕೋಣೆಗೆ ಹೋಗುತ್ತಿದ್ದೆ.
ಕೆಲವೊಮ್ಮೆ ಅವರು ನಮ್ಮ ಸಂಬಂಧಿಯೊಬ್ಬರ ಮನೆಯಲ್ಲಿರುತ್ತಿದ್ದರು. ನಾನು ಆಕೆಯನ್ನು ನೋಡಲು ಅಲ್ಲಿಗೇ ಹೋಗುತ್ತಿದ್ದೆ. ನಾನು ಅಲ್ಲಿಗೆ ಹೋದಾಗಲೆಲ್ಲ ನನ್ನ ಸಂಬಂಧಿಯು, ‘ನೀನು ನೋಡುವ ಮೊದಲು ಕಾಫಿ ಕುಡಿದು ಹೋಗು. ನೀನು ಒಳ ಹೋಗುವ ಹೊತ್ತಿಗೆ ಅವರ ಜೀವ ಹೋಗಿಬಿಟ್ಟಿದ್ದರೆ, ಮತ್ತೆ ನೀನು ಅಡುಗೆ ಮನೆಗೆ ಬರಲು ಆಗುವುದಿಲ್ಲ. (ಸೂತಕದ ಕಾರಣದಿಂದ) ನೀನು ಕಾಫಿ ಕುಡಿದೇ ಒಳಹೋಗು ಎನ್ನುತ್ತಿದ್ದರು.
ಈ ಪರಿಸ್ಥಿತಿ ನಮಗೂ ಒಂದು ದಿನ ಬಂದೇ ಬರುವುದೆಂದು ನಾವು ಅರಿತುಕೊಳ್ಳುವುದೇ ಇಲ್ಲ. ನಮ್ಮ ಇಳಿವಯಸ್ಸಿನಲ್ಲಿ ನಮ್ಮ ಮಕ್ಕಳು – ಮೊಮ್ಮಕ್ಕಳು ನಮ್ಮ ಬಗ್ಗೆ ಹೀಗೆ ಯೋಚಿಸುತ್ತಾರೆ. ”ಈ ವೃದ್ಧ ಎಂದು ಹೋಗುವನೋ ! ನಾವು ಸಹಜವಾದ (ನಿರುದ್ವಿಗ್ನ) ಜೀವನ ನಡೆಸಲು ಎಂದಿಗೆ ಸಾಧ್ಯವಾಗುವುದೋ” ಎಂದು!
ಹೀಗೆ ನಮ್ಮ ದೈನಂದಿನ ಚಟುವಟಿಕೆಗಳು ನಿರಾತಂಕವಾಗಿ ಸಾಗುವಂತಾಗಲು ಮತ್ತೊಬ್ಬರ ಸಾವನ್ನು ಎದುರು ನೋಡುವುದು ಎಷ್ಟು ಭಯಾನಕವಲ್ಲವೇ?
ಮೂಲಕಾರಣ
ವಾಸ್ತವವಾಗಿ ನಮ್ಮ ವಿಶೇಷಾಧಿಕಾರದಿಂದ ಹೆಚ್ಚುತ್ತಲೇ ಇರುವ ಅಪರಿಮಿತ ಆನಂದದಿಂದ ಕೂಡಿದ ಅವ್ಯಯನಾದ ಪರಮಪುರುಷನ ಸಂಸರ್ಗದಲ್ಲಿ ಇರಬಹುದಾದರೂ ನಾವು ಭೌತಿಕ ಜಗತ್ತಿನ ಈ ಯಾತನಾಮಯ ಬಂಧನದಲ್ಲಿ ಸಿಕ್ಕಿಕೊಳ್ಳುತ್ತಿರುತ್ತೇವೆ. ಕೃಷ್ಣನು, ಅವನ ಅಂಶಗಳಾದ ನಾವು ಆತನ ನೆಲೆಗೆ ಮರಳಿ, ಅವನ ಶಾಶ್ವತ ಆನಂದದಲ್ಲಿ ಭಾಗಿಯಾಗುವುದನ್ನೇ ಎದುರು ನೋಡುತ್ತಿರುತ್ತಾನೆ.
ನಮ್ಮ ಇಂದಿನ ಈ ದುಃಸ್ಥಿತಿಗೆ, ನಾವು ಕೃಷ್ಣನ ಹೊರತಾದ ಆನಂದವನ್ನು ಅನುಭವಿಸ ಬಯಸುತ್ತಿರುವುದೇ ಕಾರಣವಾಗಿದೆ. ಇದುವೇ ‘ಕರ್ಮ’ ಎಂದು ಕರೆಯಲ್ಪಡುವ ಭೌತಿಕ ಇಂದ್ರಿಯ ಭೋಗಾಕಾಂಕ್ಷೆಯಾಗಿದೆ. ಇಲ್ಲಿ ಆನಂದವು ಇಂದ್ರಿಯಗಳನ್ನು ತೃಪ್ತಿಪಡಿಸುವುದರ ಮೂಲಕ ನಾವು ಪಡೆಯಲೆತ್ನಿಸುತ್ತೇವೆ. ಆದ್ದರಿಂದ, ‘ಕರ್ಮ’ವು, ನಾವು ನಮ್ಮ ಇಂದ್ರಿಯಗಳನ್ನು ಸ್ಟೇಚ್ಛೆಯಿಂದ ಅನುಭೋಗಿಸುವ ಒಂದು ಕಾಯಿಲೆಯೆಂದರೂ ತಪ್ಪಾಗದು!
ಇದಕ್ಕೆ ಶ್ರೀಲ ಪ್ರಭುಪಾದರು ಖೈದಿಯನ್ನು ಉದಾಹರಿಸುತ್ತಾರೆ. ಖೈದಿಯ ಜೀವನ ಸಂತೋಷಕರವಾಗೇನೂ ಇರುವುದಿಲ್ಲ. ಅವನು ತನಗೆ ವಿಧಿಸಲಾದ ಅವಧಿಯವರೆಗೂ ಸೆರೆವಾಸವನ್ನು ಅನುಭವಿಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ಅವನು ಸಾಕಷ್ಟು ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅವನು ಸೆರೆಮನೆಯ ಅಧಿಕಾರಿಗಳನ್ನು ಟಿ.ವಿ. ಬೇಕೆಂದು ಕೇಳಲು ಆಗುವುದಿಲ್ಲ. ಆದರೆ ಅವನು, ಅಧಿಕಾರಿಗಳು ತನ್ನ ಮೇಲೆ ತೋರುವ ದರ್ಪವನ್ನು ಸಹಿಸಬೇಕಾಗುತ್ತದೆ. ಕಲ್ಲಿನ ಮೇಲೆ ಮಲಗುವುದು, ಒಣ ಚಪಾತಿ ತಿನ್ನುವುದು, ಕಷ್ಟಕರ ಕೆಲಸಗಳನ್ನು ಮಾಡುವುದು – ಇವೆಲ್ಲವೂ ಅವನ ಶಿಕ್ಷೆಯ ಭಾಗಗಳೇ ಆಗಿರುತ್ತವೆ.
ಈ ಜಗತ್ತು ಸಹಾ ಕೇವಲ ಯಾತನೆಯಿಂದ ಕೂಡಿದ್ದು, ಸೆರೆಮನೆಯಂತೆಯೇ ಇದೆ. ಇಲ್ಲಿನ ಯಾತನೆಗಳು – ಜನನ, ಮರಣ, ವೃದ್ಧಾಪ್ಯ, ರೋಗ ಮತ್ತು ಸಾವು, ವ್ಯಕ್ತಿಯೊಬ್ಬ ಎಷ್ಟೇ ಶ್ರೀಮಂತನಾಗಿರಬಹುದು, ಆದರೂ ಅವನು ರೋಗ ಮುಪ್ಪು ಮೊದಲಾದ ಯಾತನೆಗಳಿಂದ ಪಾರಾಗಲು ಸಾಧ್ಯವಿಲ್ಲ.
ಅವನೂ ಕೊನೆಗೊಂದು ದಿನ ಸಾವನ್ನಪ್ಪುವವನೇ ಆಗಿರುತ್ತಾನೆ. ಶ್ರೀಮಂತ ವ್ಯಕ್ತಿಯು ಬಡವನಿಗಿಂತ ಕಡಮೆ ನೋವನ್ನು ಅನುಭವಿಸುತ್ತಾನೆ ಎಂದೇನೂ ಇಲ್ಲ. ಭೌತಿಕ ಪಕೃತಿಯ ನಿಯಮಗಳು ಅತಿ ಕಠಿಣವಾಗಿದ್ದು, ಜೀವರಾಶಿಗಳನ್ನು ಬಲವಾಗಿ ಸುತ್ತಿಕೊಂಡಿರುತ್ತವೆ. ಜೀವರಾಶಿಯು ಭೌತಿಕ ಪ್ರಕೃತಿಯ ಪ್ರಬಲ ಸರಪಳಿಯಲ್ಲಿ ಸಂಪೂರ್ಣವಾಗಿ ಬಂಧಿಸಲ್ಪಟ್ಟಿರುತ್ತದೆ.

ವ್ಯಕ್ತಿಯು ಶ್ರೀಮಂತನೇ ಆಗಿರಬಹುದು, ಬುದ್ಧಿವಂತನಿರಬಹುದು, ಬಲಶಾಲಿ, ಸುಂದರ – ಹೀಗೆ ಏನೇ ಆಗಿರಬಹುದು. ಅಂಥವನು ಈ ಭೌತಿಕ ಜಗತ್ತಿನಲ್ಲಿ ಆನಂದದಿಂದ ಇರುವನೆಂಬ ಮೂರ್ಖ ಯೋಚನೆಯನ್ನು ಯಾರೂ ಮಾಡಬಾರದು. ಆಧ್ಯಾತ್ಮಿಕ ಜಗತ್ತಿನಲ್ಲಿ ಭೌತಿಕ ಜಗತ್ತಿನಲ್ಲಿರುವಂಥಹ ಕಟ್ಟುನಿಟ್ಟಿನ ನಿಯಮಗಳು ಇಲ್ಲದಿರುವುದರಿಂದ ಅದು ಹೆಚ್ಚು ಗಮನ ಸೆಳೆಯುತ್ತದೆ.
ಆಧ್ಯಾತ್ಮಿಕ ಜಗತ್ತಿನಲ್ಲಿ ಯಾರೊಬ್ಬರೂ ಅಸಂತೋಷದಿಂದಿರಲು ಸಾಧ್ಯವೇ ಇಲ್ಲ. ಇದು, ಅಸೀಮ ಆನಂದದ ತಾಣವಾಗಿದೆ. ಪ್ರತಿಯೊಬ್ಬರೂ ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಸ್ಥಳವನ್ನು ಸೇರಿ, ಶ್ರೀಕೃಷ್ಣನ ಚರಣಕಮಲಗಳಲ್ಲಿ ಆಶ್ರಯವನ್ನು ಪಡೆಯಬೇಕು.
ಕೃಷ್ಣನ ಆನಂದಾನುಭೂತಿಯ ಸ್ವರೂಪ
ಶ್ರೀ ಕೃಷ್ಣ ಮತ್ತವನ ಭಕ್ತರು ಆಧ್ಯಾತ್ಮಿಕ ಜಗತ್ತಿನಲ್ಲಿ ಹೇಗೆ ಆನಂದಿಸುತ್ತಾರೆ ಎಂಬುದು ಬಹಳ ಆಸಕ್ತಿಕರವಾಗಿದೆ. ಶ್ರೀಕೃಷ್ಣನು ನಮ್ಮಂತೆ ಹೊರಗಿನಿಂದ ಆನಂದವನ್ನು ಪಡೆಯಲು ಯತ್ನಿಸಬೇಕಿಲ್ಲ. ಬದಲಿಗೆ, ಕೃಷ್ಣನ ಅಪರಿಮಿತ ಆನಂದವು ಅವನದೇ ವ್ಯಕ್ತಿತ್ವದ ಒಂದು ವಿಶೇಷತೆಯಾಗಿದೆ. ಆದ್ದರಿಂದಲೇ ವೇದಾಂತ ಸೂತ್ರಗಳು ಶ್ರೀಕೃಷ್ಣನನ್ನು ‘ರಸವಿಗ್ರಹ’ ಎಂದು ವರ್ಣಿಸಿರುವುದು.
ವೇದಸಾಹಿತ್ಯಗಳು ದೇವೋತ್ತಮನು ಆನಂದವನ್ನು ಹೇಗೆ ಅನುಭವಿಸುತ್ತಾನೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತವೆ. ಶ್ರೀ ಚೈತನ್ಯ ಮಹಾಪ್ರಭುಗಳು ಮತ್ತವರ ಪ್ರಮುಖ ಶಿಷ್ಯರಾದ ಆರು ಗೋಸ್ವಾಮಿಗಳು ಈ ವಿಷಯದ ಬಗ್ಗೆ ಪ್ರಕಾಶಮಾನವಾಗಿ ವಿವರಿಸಿದ್ದಾರೆ. ಶ್ರೀ ಚೈತನ್ಯ ಮಹಾಪ್ರಭುಗಳು ಈ ಆನಂದವು ‘ರಸ’ದ ರೂಪದಲ್ಲಿ ಅನುಭವವೇದ್ಯವಾಗುವುದೆಂದು ವರ್ಣಿಸುತ್ತಾರೆ.
‘ರಸ’ ಎನ್ನುವುದೊಂದು ವಿಶಿಷ್ಟ ಪದ. ಇದಕ್ಕೆ ಪಾರ್ಯಾಯ ಪದವಾಗಲೀ ಸಮಾನಾಂತರ ಪದಗಳಾಗಲೀ ಇಲ್ಲ. ಈ ಜಗತ್ತಿನಲ್ಲಿ ಅನುಭವಕ್ಕೆ ಬರುವ ಭೌತಿಕ ಆನಂದವೂ ಈ ರಸಗಳಲ್ಲಿ ಒಂದು. ಉದಾಹರಣೆಗೆ, ನೀವು ನಿಮ್ಮ ಅತಿ ಪ್ರೀತಿಪಾತ್ರರೊಬ್ಬರಿಗಾಗಿ ಎದುರು ನೋಡುತ್ತಿರುವಿರೆಂದುಕೊಳ್ಳಿ.
ಕೊನೆಗೂ ಅವರು ಎದುರಾದಾಗ ನೀವು ಅವರನ್ನು ಕಂಡು, ವಿಚಾರ ವಿನಿಮಯ ಮಾಡಿಕೊಳ್ಳುತ್ತ ಬೆಚ್ಚನೆಯ ಭಾವನೆಯನ್ನು ಅನುಭವಿಸುತ್ತ ಅತಿ ಹೆಚ್ಚಿನ ಸಂತೋಷ ವ್ಯಕ್ತಪಡಿಸುತ್ತೀರಿ. ನಾವಿಲ್ಲಿ ರಸವನ್ನು ಅನುಭವಿಸುತ್ತಿದ್ದೇವೆಯೇ ಹೊರತು ಆ ವ್ಯಕ್ತಿಯನ್ನಲ್ಲ.
ಕೆಲವೊಮ್ಮೆ ನಾವು ನಮ್ಮ ಸ್ನೇಹಿತರೊಂದಿಗೆ ಸಂತೋಷ ಅನುಭವಿಸುತ್ತೇವೆ. ಆದರೆ ಕೆಲವು ಬಾರಿ ಅದೇ ಸ್ನೇಹಿತರೊಂದಿಗೆ ವಿಷಾದ ಹೊಂದುತ್ತೇವೆ. ಇಲ್ಲಿ ನಾವು ವಿವಿಧ ರಸಗಳನ್ನು ಅನುಭವಿಸುತ್ತಿದ್ದೇವಷ್ಟೆ.
ಕೆಲವೊಮ್ಮೆ ಏಕಕಾಲದಲ್ಲಿ ವಿರೋಧಾಭಾಸದಿಂದ ಕೂಡಿದ ರಸಗಳನ್ನು ನಾವು ಅನುಭವಿಸುತ್ತೇವೆ. ನಮ್ಮ ಪ್ರೀತಿ ಪಾತ್ರರು ಎದುರಾದ ಕ್ಷಣದಲ್ಲಿ ನಮ್ಮ ಮನಸ್ಸು ಪ್ರೇಮದಿಂದ ಅರಳುತ್ತದೆ. ಅದೇ ಸಮಯಕ್ಕೆ ನಮ್ಮ ಶತ್ರುವೂ ಕಾಣಿಸಿಕೊಂಡರೆ, ಅದು ದ್ವೇಷದಿಂದ ಸಿಡಿಗುಟ್ಟುತ್ತದೆ. ನಾವು ಯಾವಾಗಲೂ ಸಂತೋಷ ನೀಡುವ ರಸವನ್ನೇ ಆಸ್ವಾದಿಸಬಯಸುತ್ತೇವೆ.
ಆದರೆ ಆಧ್ಯಾತ್ಮಿಕ ಜಗತ್ತಿನಲ್ಲಿ ಹಾಗಲ್ಲ. ಅಲ್ಲಿ ಪ್ರೇಮ-ದ್ವೇಷ ಎಲ್ಲವೂ ಆನಂದಿಸಲ್ಪಡುತ್ತವೆ. ಅಲ್ಲಿ ಎಲ್ಲವೂ ಸಂತೋಷದಾಯಕವೇ! ಏಕೆಂದರೆ, ಆಧ್ಯಾತ್ಮಿಕ ಜಗತ್ತಿನಲ್ಲಿ ಎಲ್ಲರೂ ಶ್ರೀ ಕೃಷ್ಣನೊಬ್ಬನೇ ಭೋಕ್ತೃವೆಂದೂ ಉಳಿದೆಲ್ಲ ಜೀವಿಗಳೂ ಅವನ ಅಂಶಗಳೆಂದೂ ತಿಳಿದಿರುತ್ತಾರೆ.
ಆದ್ದರಿಂದ, ಕೃಷ್ಣನು ಆನಂದಿಸಿದಾಗ, ಅವನ ಭಕ್ತರೆಲ್ಲರೂ ಉತ್ಕೃಷ್ಟವಾದ ಸಂತೋಷವನ್ನು ಹೊಂದುತ್ತಾರೆ. ಅಸ್ತಿತ್ವದಲ್ಲಿರುವ ಪ್ರತಿಯೊಂದು ವಸ್ತುವೂ ಕೃಷ್ಣನ ಆನಂದಕ್ಕಾಗಿಯೇ ಇವೆ, ಮತ್ತು ಆಧ್ಯಾತ್ಮಿಕ ಜಗತ್ತಿನ ಎಲ್ಲವೂ ಭಕ್ತರಿಗೆ ಆನಂದದಾಯಕವಾಗಿರುತ್ತವೆ.
ಭೌತಿಕ ಜಗತ್ತಿನ ರಸಗಳು ಹೆಚ್ಚು ಕಾಲ ಬಾಳುವುದಿಲ್ಲ. ಅದಕ್ಕೆ ವಿರುದ್ಧವಾಗಿ, ಆಧ್ಯಾತ್ಮಿಕ ಜಗತ್ತಿನ ರಸಗಳು ಶಾಶ್ವತವಾಗಿದ್ದು, ನಿರಂತರ ಧಾರೆಯಾಗಿ ಹರಿಯುತ್ತಿರುತ್ತವೆ. ಇದುವೇ ಆಧ್ಯಾತ್ಮಿಕ ಜಗತ್ತಿನ ರಸಾನುಭವ ಮತ್ತು ಲೌಕಿಕ ಜಗತ್ತಿನ ರಸಾನುಭವಗಳಿಗಿರುವ ವ್ಯತ್ಯಾಸ.
ವೈದಿಕ ಶಾಸ್ತ್ರಗಳಲ್ಲಿ 12 ರೀತಿಯ ರಸಗಳನ್ನು ಉಲ್ಲೇಖಿಸಲಾಗಿದೆ. ಅವುಗಳು ಹೀಗಿವೆ: 1 ರೌದ್ರ 2) ಅದ್ಭುತ 3) ಶೃಂಗಾರ 4) ಹಾಸ್ಯ 5) ವೀರ 6) ದಯಾ 7) ದಾಸ್ಯ 8) ಸಖ್ಯ 9) ಭಯಾನಕ 10) ಬೀಭತ್ಸ 11) ಶಾಂತ 12) ವಾತ್ಸಲ್ಯ. ಈ ಎಲ್ಲ ರಸಗಳ ಯಥಾವತ್ ಪಡಿನೆರಳನ್ನು ನಾವು ಈ ಭೌತಿಕ ಜಗತ್ತಿನಲ್ಲಿಯೂ ಕಾಣಬಹುದು. ಆದರೆ ಅವು, ಆಧ್ಯಾತ್ಮಿಕ ಜಗತ್ತಿನ ಅಪರಿಮಿತ ರಸಗಳೊ೦ದಿಗೆ ಹೋಲಿಸಿದಾಗ ತೀರ ದುರ್ಬಲವಾಗಿ ತೋರುತ್ತವೆ.






Leave a Reply