ಶ್ರೇಷ್ಠ ವೈಷ್ಣವ ಮಹಿಳೆಯರು

– ಸಂಗ್ರಹಾನುವಾದ: ಶ್ರೀಮತಿ ಆಶಾ ಆರ್‌.ಉಪಾಧ್ಯಾಯ

ಸರ್ವದೇವೋತ್ತಮ ಪುರುಷ ವಿಷ್ಣು ಅಥವಾ ಕೃಷ್ಣನ ಭಕ್ತರನ್ನು ವೈಷ್ಣವ ಎಂದು ಕರೆಯುತ್ತಾರೆ. ಈ ಜಗತ್ತಿನಲ್ಲಿ ಲಕ್ಷೋಪಲಕ್ಷ ಜನರು ವೈಷವ ಧರ್ಮವನ್ನು ಅನುಸರಿಸಿದ್ದಾರೆ. ವೈಷ್ಣವ ಧರ್ಮವು ನಮ್ಮ ಆತ್ಮದ ಸಹಜ ಸ್ವರೂಪವನ್ನು ಸೂಚಿಸುತ್ತದೆ. ಯಾಕೆಂದರೆ ಎಲ್ಲಾ ಜೀವಿಗಳು ತಮ್ಮ ಸಹಜ ಸ್ವರೂಪದಲ್ಲಿ ಭಗವಂತನೊಂದಿಗೆ ಪ್ರೇಮ ಭಕ್ತಿಯ ಸಂಬಂಧವನ್ನು ಹೊಂದಿದ್ದಾರೆ.

‘ಮಹಿಳೆ’ ಒಂದು ಬಹು ಬಳಕೆಯ ಪದವಾದರೂ, ವೈಷ್ಣವ ಪದದ ಜೊತೆ ಸೇರಿಸಿದಾಗ ಅರ್ಥೈಸಲು ಬಹಳ ಕಷ್ಟ. ಪುರುಷ / ಮಹಿಳೆ ಎಂಬ ಪದ ವಿಭಾಗವು ದೇಹ ಸಂಬಂಧದಿಂದಾಗಿದೆ. ಆದರೆ ವೈಷ್ಣವ ಎಂಬ ಪದವು ಜೀವಿಯ ಸಹಜ ಸ್ಥಿತಿಯನ್ನು ಸೂಚಿಸುತ್ತದೆ. ಒಂದು ಅರ್ಥದಲ್ಲಿ ವೈಷ್ಣವ ಅಂದರೆ ಪುರುಷನೂ ಅಲ್ಲ ಮಹಿಳೆಯೂ ಅಲ್ಲ.

ಆದುದರಿಂದ ಪುರುಷ ವೈಷ್ಣವ ಅಥವಾ ಮಹಿಳಾ ವೈಷ್ಣವ ಎಂದು ಉಲ್ಲೇಖಿಸುವುದು ಅಷ್ಟೊಂದು ಸಮಂಜಸಕರವಲ್ಲ. ಆದರೆ ಈ ಲೌಕಿಕ ಪ್ರಪಂಚದಲ್ಲಿ ಸಾಮಾನ್ಯವಾಗಿ ರೂಢಿಯಲ್ಲಿರುವ ಈ ಸಂಭಾಷಣಾ ರೀತಿಯ ಭೇದ ಭಾವವನ್ನು ಅನಿವಾರ್ಯವಾಗಿಯಾದರೂ ಸ್ವೀಕರಿಸಲೇಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಮಹಿಳೆಯೂ ವೈಷ್ಣವ ಪದ್ಧತಿಯಲ್ಲಿ ತನ್ನ ಜೀವನವನ್ನು ರೂಪಿಸಿಕೊಂಡು ಭಗವಂತನ ಸೇವೆಯನ್ನು ಮಾಡಬಹುದು.

ಉದಾಹರಣೆಗೆ ತಾಯಿಯಾಗಿ ತನ್ನ ಮಕ್ಕಳನ್ನು ಶುದ್ಧ ವೈಷ್ಣವರನ್ನಾಗಿ ಬೆಳೆಸಬಹುದು. ಪುರುಷರಿಗೆ ಈ ಸೌಲಭ್ಯವು ಲಭ್ಯವಿಲ್ಲ. ಆದುದರಿಂದ ಮಹಿಳೆಯರು ಮತ್ತು ಪುರುಷರು ಆಧ್ಯಾತ್ಮಿಕವಾಗಿ ಸರಿ ಸಮಾನರೇ ಹಾಗೂ ತಮ್ಮ ತಮ್ಮ ಪರಿಮಿತಿಯಲ್ಲಿ ಭಗವಂತನ ಸೇವೆಯನ್ನು ಮಾಡಬಹುದು. ಆದುದರಿಂದ ಪ್ರಪಂಚದಲ್ಲಿರುವ ಪುರುಷ ಹಾಗೂ ಮಹಿಳೆ ಎಂಬ ಭೇದ ಭಾವವನ್ನು ಒಪ್ಪಿಕೊಳ್ಳಬೇಕು ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ಭಗವಂತನ ಸೇವೆಗಾಗಿ ಉಪಯೋಗಿಸಿಕೊಳ್ಳಬೇಕು. ಈ ಅರ್ಥದಲ್ಲಿ ನಾವು ಮಹಿಳಾ ವೈಷ್ಣವರ ಬಗ್ಗೆ ಮಾತನಾಡಬಹುದು.

ವೈದಿಕ ಸಂಸ್ಕೃತಿಯಲ್ಲಿ ಮಹಿಳೆಯರು

ಮಹಿಳಾ ವೈಷ್ಣವರು ಹಾಗೂ ಅವರ ಹಿರಿಮೆಯನ್ನು ಸಾರುವಂತಹ ಅವರ ಚಟುವಟಿಕೆಗಳನ್ನು ಅರ್ಥೈಸಿಕೊಳ್ಳಬೇಕಾದರೆ ನಾವು ವೈಷ್ಣವ ಧರ್ಮದ ತಳಹದಿಯಾದ ಪುರಾತನ ಭಾರತದ ವೈದಿಕ ಸಾಹಿತ್ಯ ಹಾಗೂ ಉತ್ಕೃಷ್ಟವಾದ ಆಧ್ಯಾತ್ಮಿಕ ಕೃತಿಗಳ ಬಗ್ಗೆ ಗಮನ ಹರಿಸಬೇಕು. ಪುರಾತನ ವೈದಿಕ ಗ್ರಂಥಗಳಲ್ಲಿ ಮಹಿಳೆಯನ್ನು ಮುಖ್ಯವಾಗಿ ಪತ್ನಿ ಅಥವಾ ತಾಯಿಯಾಗಿ ಗುರುತಿಸಿರುವುದನ್ನು ನಾವು ನೋಡಬಹುದು.

ಮನೆಯಲ್ಲಿ ಅವಳ ಸ್ಥಾನಮಾನದ ಬಗ್ಗೆ ಒತ್ತಿ ಹೇಳಲಾಗಿದೆ ಹಾಗೂ ಅವಳ ಕರ್ತವ್ಯಕ್ಕೆ ದೈವಿಕ ಸ್ಥಾನಮಾನವನ್ನು ನೀಡಲಾಗಿದೆ. ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣದ ನಿರ್ಮಾಣ ಹಾಗೂ ಮಕ್ಕಳನ್ನು ಉನ್ನತ ರೀತಿಯ ಭಕ್ತರನ್ನಾಗಿ ಬೆಳೆಸುವುದು ಧರ್ಮದ ಬಗೆಗಿನ ಅವಳ ಕರ್ತವ್ಯವಾಗಿದೆ. ಇದು ಅವಳ ಸ್ವಂತ ಆಧ್ಯಾತ್ಮಿಕತೆಯ ಸಾಧನೆಯು ಉನ್ನತ ಮಟ್ಟದಲ್ಲಿದ್ದು, ಅವಳ ಧ್ಯಾನಾಚರಣೆಗಳು ಉತ್ತಮ ರೀತಿಯಲ್ಲಿದ್ದರೆ ಮಾತ್ರ ಸಾಧ್ಯ. ಈ ಹಾದಿಯಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ಮಾರ್ಗದರ್ಶನವನ್ನು ನಮ್ಮ ಶಾಸ್ತ್ರಗ್ರಂಥಗಳಲ್ಲಿ ಕೊಡಲಾಗಿದೆ.

ಪುರುಷನಿಗಲ್ಲದೆ ಬರೀ ಮಹಿಳೆಗೆ ಯಾಕೆ ಗೃಹಕೃತ್ಯಗಳನ್ನು ವಹಿಸಲಾಗಿದೆ ಎಂಬ ಪ್ರಶ್ನೆ ಉದ್ಭವಿಸಬಹುದು. ವೇದ ಗ್ರಂಥಗಳಲ್ಲಿ ನೀಡಲಾದ ಒಂದು ಉತ್ತರದ ಪ್ರಕಾರ ಮಗು ಅವಳ ದೇಹದಿಂದ ಬಂದಿರುವ ಕಾರಣ ಸಹಜವಾಗಿ ಅವಳು ಮಗುವನ್ನು ಉತ್ತಮ ರೀತಿಯಲ್ಲಿ ದೇವರ ಭಕ್ತನನ್ನಾಗಿ ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾಳೆ.

ಮಗುವಿನಿಂದ ದೈಹಿಕವಾಗಿ ದೂರವಿರುವುದು ಅವಳಿಗೆ ಸಹಿಸಲಸಾಧ್ಯ ಸಂಗತಿ. ಅದೇ ಪತಿಯಾದವನು ಸಂಸಾರ ನಿರ್ವಹಣೆಗಾಗಿ ಮಗುವಿನಿಂದ ದೂರಾಗಿ ಹೊರಗೆ ಹೋಗಿ ದುಡಿಯಬೇಕಾಗುತ್ತದೆ. ಅದೇ ಪತ್ನಿಯಾದವಳು ಸಾಮಾನ್ಯವಾಗಿ ನೆಮ್ಮದಿಯಾಗಿ ಮನೆಯಲ್ಲಿರುವುದನ್ನೇ ಇಷ್ಟ ಪಡುತ್ತಾಳೆ.

ಇದು ಸಹಜ ಮತ್ತು ಹಿತಕರವಾಗಿರುತ್ತದೆ. ಈರ್ವರೂ ಅವರವರ ಪಾತ್ರಗಳನ್ನು ನಿರ್ವಹಿಸುತ್ತಾ ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣದ ಸೃಷ್ಟಿಗಾಗಿ, ಮುಖ್ಯವಾಗಿ ಸಂಸಾರದಲ್ಲಿ ತಮ್ಮ ಪಾತ್ರಗಳು ಕೃಷ್ಣನ ಸೇವೆಗಾಗಿ ಎಂದು ಭಾವಿಸಿ ದುಡಿಯುತ್ತಾರೆ. ಈ ಅರ್ಥದಲ್ಲಿ ಅವರ ಪಾತ್ರಗಳು ಪರಮ ಸತ್ಯವನ್ನು ಸೇವಿಸುವ ಬೇರೆ ಬೇರೆ ತರಹದ ಪೂರ್ಣ ಸತ್ಯವಾದ ವಿಧಾನಗಳು.

ವೇದ ಮಹಾಕಾವ್ಯ ರಾಮಾಯಣದಲ್ಲಿ ಆಧ್ಯಾತ್ಮಿಕ ಕುಟುಂಬದ ಸಮಾಜ ವ್ಯವಸ್ಥೆಯ ಬಗ್ಗೆ ವಿವರಣೆ ನೀಡಲಾಗಿದೆ. ಪತಿಯಾದವನು ಪತ್ನಿಗೆ ಗುರುವಾಗಿರುತ್ತಾನೆ. ಮತ್ತು ಪತ್ನಿ ಮಕ್ಕಳಿಗೆ ಸಿದ್ಧಾಂತವಾಗಿರುತ್ತಾಳೆ ಹಾಗೂ ಪರಂಪರೆಯಲ್ಲಿ ಬಂದಿರುವ ವೈಷ್ಣವ ಆಚಾರ್ಯರು ಪತಿಯ ಗುರುಗಳಾಗಿರುತ್ತಾರೆ.

ಇನ್ನೊಂದು ಅರ್ಥದಲ್ಲಿ ವೈದಿಕ ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಅಧಿಕಾರವಿತ್ತು ಹಾಗೂ ಇದರಿಂದಾಗಿ ಸಾಮಾಜಿಕ ಚಿತ್ತಸ್ವಾಸ್ಥ್ಯದ ಪಾಲನೆಯಾಗುತ್ತಿತ್ತು ಮತ್ತು ಕುಟುಂಬದ ಎಲ್ಲರೂ ಜೀವನದ ಅಂತಿಮ ಉದ್ದೇಶವಾದ ಆಧ್ಯಾತ್ಮಿಕ ಸಾಕ್ಷಾತ್ಕಾರದ ಪಥದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿತ್ತು.

ಪುರುಷ ಅಥವಾ ಮಹಿಳೆಯ ಸಾಂಪ್ರದಾಯಿಕ ಪಾತ್ರಗಳಿಗೆ ಹೊರತಾದ ಜೀವನ ಶೈಲಿಯನ್ನು ನಾವು ಚರಿತ್ರೆಯಲ್ಲಿ ಬರುವ ವೈಷ್ಣವ ಮಹಿಳೆಯರ ಜೀವನದಲ್ಲಿ ನೋಡಬಹುದು. ತಪಸ್ಯೆಯನ್ನು ಮೂಲವಾಗಿಟ್ಟುಕೊ೦ಡಿದ್ದ ವೈದಿಕ ಸಂಪ್ರದಾಯದಂತೆ ಪುರುಷರು ಮತ್ತು ಮಹಿಳೆಯರ ಮಧ್ಯೆ ಇದ್ದಂತಹ ಆಧ್ಯಾತ್ಮಿಕ ಸರಿ ಸಮಾನತೆಯನ್ನು ಒಪ್ಪುತ್ತಾ ಮಹಾನ್ ವೈಷ್ಣವ ಮಹಿಳಾ ಮಣಿಗಳ ಬಗ್ಗೆ ಹೇಳಲು ಉದ್ಯುಕ್ತವಾಗಿದ್ದೇವೆ.

ನಾವು ಪ್ರಧಾನವಾಗಿ ಗಮನಿಸಬೇಕಾದ ಅಂಶವೆಂದರೆ ವೈಷ್ಣವರಲ್ಲಿ ಪ್ರಮುಖ ಸ್ಥಾನ ಅಥವಾ ಅಗ್ರಸ್ಥಾನದಲ್ಲಿರುವವಳು ಶ್ರೀಮತಿ ರಾಧಾರಾಣಿ. ಆಕೆ ಒಬ್ಬ ಮಹಿಳೆ. ಆದರೆ ಅವರು ಭಗವಂತನ ಅಂಶವೇ ಆದುದರಿಂದ ಅವಳ ಬಗ್ಗೆ ಇಲ್ಲಿ ಪ್ರಸ್ತಾಪಿಸುವುದಿಲ್ಲ.

ವೈದಿಕ ಸಾಹಿತ್ಯದಲ್ಲಿ ಬಣ್ಣಿಸಿರುವ ಶ್ರೀರಾಮಚಂದ್ರನ ಮಡದಿ ಸೀತಾದೇವಿಯು ಆದರ್ಶ ಮಹಿಳೆಯ ಪ್ರತಿನಿಧಿ. ವೈದಿಕ ಸಾಹಿತ್ಯದಲ್ಲಿ ಹೇಳಿದಂತೆ ಆದರ್ಶ ಪತ್ನಿಗೆ ಇರಬೇಕಾದಂತಹ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡಿರುವವಳು. ಪಾರ್ವತಿ ದೇವಿ, ಲಕ್ಷ್ಮಿದೇವಿ ಹಾಗೂ ವೇದ ಕಾಲದ ಮಹಿಳೆಯರಾದ ಸಾವಿತ್ರಿ, ದಮಯ೦ತಿಯರೂ ಆದರ್ಶ ಪತ್ನಿಯರಾಗಿದ್ದರೂ, ಸೀತಾದೇವಿಯು ಪತಿವ್ರತೆಯರಲ್ಲಿ ಹೆಚ್ಚು ಸ್ಮರಣೀಯಳು. ಈ ಕಾಲದಲ್ಲಿ ಭಾರತ ದೇಶದ ಪ್ರತಿಯೊಬ್ಬ ತಾಯಿಯೂ ಈಗಲೂ ತನ್ನ ಮಗಳಿಗೆ ಸೀತಾದೇವಿಯಂತೆ ಇರು ಎಂದು ಉಪದೇಶಿಸುತ್ತಾಳೆ.

ಪ್ರಮುಖ ಮಹಿಳಾ ವೈಷ್ಣವರು

ವೈದಿಕ ಸಂಸ್ಕೃತಿಯಲ್ಲಿ ಸೀತಾದೇವಿಯಲ್ಲದೆ ದ್ರೌಪದಿ, ಕುಂತಿ ಮತ್ತು ಗಾಂಧಾರಿಯಂತಹ ಹಲವು ಪ್ರಮುಖ ಮಹಿಳೆಯರ ಉದಯವಾಗಿದೆ. ವೈದಿಕ ಕಾಲಾವಧಿಯಲ್ಲಿ ಬರುವಂತಹ ಪ್ರಸಿದ್ಧ ಮಹಿಳೆಯರನ್ನು ಹಲವು ಬಾರಿ ಚರಿತ್ರೆಯ ಪೂರ್ವದ ವ್ಯಕ್ತಿಗಳೆಂದು ಭಾವಿಸಲಾಗಿದೆ. ಯಾಕೆಂದರೆ ಅವರೆಲ್ಲ 5000 ವರುಷಕ್ಕೂ ಮೊದಲು ಈ ಭೂಮಿಯ ಮೇಲೆ ಬಾಳಿ ಬದುಕಿದವರು.

ಆ ಕಾಲವು ಈಗ ಪ್ರಾಚೀನತೆಯ ಮುಸುಕಿನಿಂದ ಮುಚ್ಚಲ್ಪಟ್ಟಿರುವುದರಿಂದ ಹಾಗೂ ಅವರ ಜೀವನ ಚರಿತ್ರೆಯನ್ನು ಪುರಾಣ ಕಥೆಗಳೆಂದು ತಪ್ಪರ್ಥ ಮಾಡಿಕೊಂಡಿರುವುದರಿಂದ ನಮ್ಮ ಚರ್ಚೆಯನ್ನು 500 ವರುಷಕ್ಕೂ ಈಚೆಯ ಮಹಿಳಾ ವೈಷ್ಣವರ ಬಗ್ಗೆ ಮಾತ್ರ ಸೀಮಿತಗೊಳಿಸಿದ್ದೇವೆ.

ಶಚೀದೇವಿ

ಶಚೀದೇವಿಯು ಹದಿನೈದನೆಯ ಶತಮಾನದ ಮಧ್ಯಭಾಗದಲ್ಲಿ ಬಂಗಾಳದಲ್ಲಿ ಆವಿರ್ಭವಿಸಿದರು. ಪೂರ್ಣ ಸ್ವರೂಪದ ತಾಯಿ ಮತ್ತು ಪತ್ನಿಯ ಪಾತ್ರ ವಹಿಸಿದ ಆಕೆ ಶ್ರೀ ಚೈತನ್ಯ ಮಹಾಪ್ರಭುಗಳ ತಾಯಿ ಹಾಗೂ ಜಗನ್ನಾಥ ಮಿಶ್ರ ಅವರ ಪತ್ನಿಯಾಗಿ ಕೀರ್ತಿಸಲ್ಪಡುತ್ತಾರೆ. ಗೌಡೀಯ ವೈಷ್ಣವ ಪಂಥದ ಸಂಸ್ಥಾಪಕರಾದ ಶ್ರೀ ಚೈತನ್ಯ ಮಹಾಪ್ರಭುಗಳು ರಾಧಾ ಮತ್ತು ಕೃಷ್ಣರ ಸಂಯೋಗದ ಅವತಾರ.

ಶಚೀದೇವಿಯು ಪೂರ್ವ ಬಂಗಾಳದಿಂದ (ಈಗಿನ ಬಾಂಗ್ಲಾದೇಶ) ವಲಸೆ ಬಂದು ನವದ್ವೀಪದಲ್ಲಿ ನೆಲಸಿದಂತಹ ಒಂದು ಪ್ರಸಿದ್ಧವಾದ ಬಂಗಾಳ ಮನೆತನದ ಮಗಳಾಗಿದ್ದರು. ಅವರ ತಂದೆ ನೀಲಾಂಬರ ಚಕ್ರವರ್ತಿಯು ಜ್ಯೋತಿಷ್ಯ ಶಾಸ್ತ್ರ ಹಾಗೂ ವೇದ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿರುವ ಕಾರಣ ಬಹು ವರ್ಚಸ್ಸಿನ ವ್ಯಕ್ತಿಯಾಗಿದ್ದರು.

ಜಗನ್ನಾಥ ಮಿಶ್ರರನ್ನು ಮದುವೆಯಾದ ಅನಂತರ ಶಚೀದೇವಿಯು ತಾಯಿಯಾಗಿ ಕಠಿಣ ಕಷ್ಟನಷ್ಟಗಳನ್ನು ಅನುಭವಿಸಿದರು. ಸಾಲಾಗಿ ಎಂಟು ಹೆಣ್ಣು ಶಿಶುಗಳನ್ನು ಕಳೆದುಕೊಂಡು ದುಃಖಿತರಾದ ಅವರು ಇನ್ನೂ ಸಂತತಿಗಾಗಿ ನಿರೀಕ್ಷಿಸಿದರು. ಅವರ ಮುಂದಿನ ಬದುಕುಳಿದ ಸಂತತಿಯು ಗಂಡು ಮಗುವಾಗಿದ್ದು ವಿಶ್ವರೂಪನೆಂದು ಕರೆಯಲ್ಪಡುತ್ತಾರೆ.

ಕೆಲವು ವರುಷಗಳ ಬಳಿಕ ಶಚೀದೇವಿಯು ಶ್ರೀ ಚೈತನ್ಯರಿಗೆ ಜನ್ಮವಿತ್ತರು. ನಿಮಾಯಿಯು (ಚೈತನ್ಯರ ಬಾಲ್ಯದ ಹೆಸರು ನಿಮಾಯಿ) ಮಗುವಾಗಿರುವಾಗಲೇ ವಿಶ್ವರೂಪರು ಪ್ರಾಪಂಚಿಕ ಸುಖಗಳನ್ನು ತ್ಯಜಿಸಿ ಸಂನ್ಯಾಸಿಯಾದರು. ಈ ಸಂಗತಿಯು ಶಚೀದೇವಿಗೆ ಹೇಳಲಾರದ ವಿಷಾದವನ್ನು ಉಂಟು ಮಾಡಿತು.

ಯಾಕೆಂದರೆ ವಿಶ್ವರೂಪರು ಈಗ ಮಿಶ್ರಾ ಮನೆತನಕ್ಕೆ ಯಾವ ಸಂತೋಷವನ್ನು ತರುವುದಿಲ್ಲ. ಅವರು ಈಗ ಹಳ್ಳಿಗಾಡುಗಳಲ್ಲಿ ತಿರುಗಾಡುತ್ತಾ ಧರ್ಮ ಬೋಧನೆಗಳನ್ನು ಮಾಡುತ್ತಾ ಹಾಗೂ ದೇವಾಲಯಗಳನ್ನು ಸಂದರ್ಶಿಸುತ್ತಾ ಭಗವಂತನ ಸೇವೆಯನ್ನು ಮಾಡುವರು.

ವಿಶ್ವರೂಪರ ಸಂನ್ಯಾಸ ದೀಕ್ಷೆಯ ಆಘಾತದಿಂದ ಜರ್ಝರಿತರಾದ ಜಗನ್ನಾಥ ಮಿಶ್ರರು ಬದುಕಿ ಉಳಿಯಲಿಲ್ಲ. ಎಲ್ಲವನ್ನೂ ಸಹಿಸಿಕೊಂಡ ಶಚೀದೇವಿಯು ತನ್ನ ಶಕ್ತಿ ಮೀರಿ ಚಿಕ್ಕ ನಿಮಾಯಿಯನ್ನು ಬೆಳೆಸಲು ನಿಶ್ಚಯಿಸಿದರು. ಅವರ ಶ್ರದ್ಧೆಯ ತೀವ್ರತೆ ಹಾಗೂ ಶುದ್ಧತೆಯಿಂದಾಗಿ ಅವರ ಕೊನೆಯ ಉಳಿದಿರುವಂತಹ ಮಗುವಿನ ಬಗೆಗಿನ ಅವರ ಆಸೆ ಆಕಾಂಕ್ಷೆಗಳೆಲ್ಲ ಕೈಗೂಡಿದವು.

ನಿಮಾಯಿ ಬೆಳೆದಂತೆ ಅಸಾಧಾರಣ ಶರೀರ ಲಕ್ಷಣಗಳಿಂದಲೂ, ಘನ ಪಾಂಡಿತ್ಯದಿಂದಲೂ ಹಾಗೂ ಭಕ್ತಿಯ ಮನೋವೃತ್ತಿಯಿಂದಲೂ ವರ್ಧಿಸಿದರು. ಶಾಸ್ತ್ರಗಳಲ್ಲಿ ಭವಿಷ್ಯ ನುಡಿದಂತೆ ಅವರ ಗುಪ್ತವಾಗಿದ್ದ ದೇವತ್ವವು ಅರಳಲು ಪ್ರಾರಂಭವಾಯಿತು.

ಆದರೆ ಶಚೀದೇವಿಯ ಈ ಕೌಟುಂಬಿಕ ಸುಖವು ಅಲ್ಪಾಯುವಾಗಿತ್ತು ಯಾಕೆಂದರೆ ಶ್ರೀ ಚೈತನ್ಯರು ತನ್ನ ಇಪ್ಪತ್ನಾಲ್ಕನೇ ವಯಸ್ಸಿನಲ್ಲಿ ಸಂನ್ಯಾಸಿಯಾಗುವ ಮೂಲಕ ತನ್ನಣ್ಣ ವಿಶ್ವರೂಪನ ಹಾದಿಯಲ್ಲಿ ನಡೆದರು. ಸಂಸಾರ ಸುಖದ ತನ್ನ ಕೊನೆಯ ಆಸೆಯು ಕಮರಿ ಹೋದರೂ ಭಕ್ತೆಯಾಗಿ ಶಚೀದೇವಿಯ ದೃಢ ಯತ್ನವು ಸ್ವಲ್ಪವೂ ಕುಂಠಿತವಾಗಲಿಲ್ಲ.

ವಾಸ್ತವವಾಗಿ ಶ್ರೀ ಚೈತನ್ಯರು ಸಂನ್ಯಾಸಿಯಾಗಿ ಭಗವಂತನ ಸೇವೆ ಮಾಡುವಂತಹ ಜೀವನ ನಡೆಸಲು ತನ್ನ ತಾಯಿಯ ಅಪ್ಪಣೆ ಕೋರಿದ್ದರು. ಈ ಸಂಗತಿಯು ಕಷ್ಟಕರವಾಗಿದ್ದರೂ ಆ ತಾಯಿಯು ಇದನ್ನು ಒಪ್ಪಿಕೊಂಡು ಮಹಾಪ್ರಭುಗಳ ಬಗ್ಗೆ ತಮಗೆ ಸುಲಭವಾಗಿ ಸಮಾಚಾರ ಲಭ್ಯವಾಗಲು ಅನುಕೂಲವಾಗುವಂತೆ ಪುರಿಯನ್ನು ತಮ್ಮ ಕಾರ್ಯಕೇಂದ್ರವನ್ನಾಗಿ ಮಾಡಿಕೊಳ್ಳುವಂತೆ ಮಗನಿಗೆ ಮನವಿ ಮಾಡಿಕೊಂಡರು.

ಶ್ರೀ ಚೈತನ್ಯರ ಸಂನ್ಯಾಸ ದೀಕ್ಷೆಯು ಗೌಡೀಯ ವೈಷ್ಣವ ಚರಿತ್ರೆಯ ದಿಕ್ಕನ್ನೇ ಬದಲಾಯಿಸುವ ಘಟನೆಯಾಗಿದ್ದರೂ, ಶಚೀದೇವಿಯ ತ್ಯಾಗವು ವೈಷ್ಣವ ಚರಿತ್ರೆಯ ಪುಟಗಳಲ್ಲಿ ಸಾಟಿಯಿಲ್ಲದ ಪ್ರಶಂಸೆಗೆ ಪಾತ್ರವಾಗಿದೆ. ಭಗವಂತನಿಗೆ ಅಂದರೆ ತನ್ನ ಮಗನಿಗೆ ಸಂನ್ಯಾಸ ಜೀವನವನ್ನು ನಡೆಸಲು ಅನುಮತಿ ನೀಡಿ ಅವರು ತಮ್ಮ ಜೀವನದ ಪರಮ ತ್ಯಾಗವನ್ನು ಮಾಡಿದರು.

ಭಗವಂತನ ಇಚ್ಛೆಯಂತೆ ಅವರು ಅಗಲಿಕೆಯ ಭಾವದಲ್ಲಿ ಭಗವಂತನನ್ನು ಪೂಜಿಸಲು ಒಪ್ಪಿಕೊಂಡರು. ಇದರಿಂದಾಗಿ ಶಚೀದೇವಿಯು ಭಗವತ್ಪ್ರೇಮದ ಅತ್ಯುನ್ನತ ಬಾಂಧವ್ಯವನ್ನು ಭಗವಂತನೊಡನೆ ಅನುಭವಿಸಿದರು ಮತ್ತು ಭಕ್ತಿಯಲ್ಲಿ ಕಿಂಚಿತ್ತು ರಾಜಿಯಾಗದ ಅವರ ಸ್ವಭಾವವನ್ನು ಮೀರಿಸಲು ಪ್ರಪಂಚದ ಎಲ್ಲಾ ವೈಷ್ಣವರು ಪ್ರಯತ್ನಿಸುತ್ತಾರೆ.

ವಿಷ್ಣುಪ್ರಿಯಾ ದೇವಿ

ಶಚೀದೇವಿಯು ಪರಿಪೂರ್ಣ ತಾಯಿಯಾಗಿರುವ ಹಾಗೆ, ವಿಷ್ಣುಪ್ರಿಯಾ ದೇವಿಯು ಪರಿಪೂರ್ಣ ಪತ್ನಿಯಾಗಿದ್ದರು. ಶ್ರೀ ಚೈತನ್ಯರ ಮೊದಲ ಪತ್ನಿ ಲಕ್ಷ್ಮಿ ಪ್ರಿಯಾ ದೇವಿಯು ಹಾವು ಕಡಿದು ಅಕಾಲಿಕ ಮರಣಕ್ಕೆ ತುತ್ತಾದರು. ಆಗ ಶಚೀಮಾತಾ ತನ್ನ ದೇವ ಮಾನವ ಮಗನನ್ನು ಮರು ವಿವಾಹವಾಗುವಂತೆ ವಿನಂತಿಸಿಕೊಂಡರು. ಇದಕ್ಕೆ ಒಪ್ಪಿಕೊಂಡ ಚೈತನ್ಯರು ಕುಲೀನ ಮನೆತನದ ಪ್ರಭಾವಿತ ರಾಜಕಾರಣಿ ಸನಾತನ ಮಿಶ್ರರ ಮಗಳು ವಿಷ್ಣುಪ್ರಿಯಾದೇವಿಯನ್ನು ವಿವಾಹವಾದರು.

ಮುಂದೆ ಶ್ರೀ ಚೈತನ್ಯರು ಸಂನ್ಯಾಸ ಬದುಕನ್ನು ಬೆನ್ನಟ್ಟಿ ಹೋದಾಗ, ವಿಷ್ಣುಪ್ರಿಯಾ ದೇವಿಯು ಶಚೀದೇವಿಯ ತರಹವೇ ಕಟ್ಟುಪಾಡಿನ ಹಾಗೂ ತ್ಯಾಗದ ಜೀವನವನ್ನು ನಡೆಸಿದರು. ಜೊತೆಗೆ ಮುಪ್ಪಿನಿಂದ ಬಲಹೀನರಾದ ಶಚೀಮಾತೆಯನ್ನು ನೋಡಿಕೊಳ್ಳುವ ಜವಾಬ್ದಾರಿಯು ಅವರ ಮೇಲಿತ್ತು.

ವಿಷ್ಣುಪ್ರಿಯಾದೇವಿಯು ಭಗವಂತನ ನಾಮಸ್ಮರಣೆಯಲ್ಲಿ ಕಳೆಯುವಷ್ಟು ಸಮಯವನ್ನು ತನ್ನ ಅತ್ತೆ ಶಚೀಮಾತಾ ಅವರ ಸೇವೆಯಲ್ಲೂ ಕಳೆದರು ಹಾಗೂ ವಿರಾಗಿಯಾಗಿ ಅವರ ಗೌರವವು ಗೌಡೀಯ ವೈಷ್ಣವ ಸಮೂಹದಲ್ಲಿ ಬಹಳಷ್ಟು ಬೆಳೆಯಿತು.

ಅವರು ಹರೇಕೃಷ್ಣ ಮಹಾಮಂತ್ರವನ್ನು 108 ಸಲ ಪಠಿಸಿದಾಗ ಒಂದು ಅಕ್ಕಿಕಾಳನ್ನು ಬದಿಗೆ ಎತ್ತಿಡುತ್ತಿದ್ದರೆಂದು ಹೇಳಲ್ಪಟ್ಟಿದೆ ಮತ್ತು ಆ ದಿನದ ಅವರ ಜಪವು ಪೂರ್ಣವಾದಾಗ ಅವರು ಬದಿಗಿರಿಸಿದ ಅಕ್ಕಿ ಕಾಳುಗಳನ್ನು ಬೇಯಿಸಿ ಅದನ್ನು ಮಾತ್ರವೇ ಆ ದಿನದ ಆಹಾರವಾಗಿ ಸೇವಿಸುತ್ತಿದ್ದರು.

ಅವರ ಉಗ್ರ ಸ೦ಯಮ ಹಾಗೂ ಅನುಕರಣೀಯ ಗುಣ ನಡತೆಗಳು ಬಹುಬೇಗನೆ ವೈಷ್ಣವ ಸಮಾಜದಲ್ಲಿ ಪ್ರಸಿದ್ಧಿಯನ್ನು ಪಡೆಯಿತು. ಅವರು ಪತಿವ್ರತಾ ಪತ್ನಿಗೆ ಆದರ್ಶ ಪ್ರಾಯರೆಂದೂ ಹಾಗೂ ಆಧ್ಯಾತ್ಮಿಕ ಸಂಪ್ರದಾಯದ ಸಂನ್ಯಾಸಿನಿಯಾಗಿ ಗೌರವಿಸಲ್ಪಟ್ಟಿದ್ದಾರೆ. ಇದು ಅವರನ್ನು ವೈಷ್ಣವ ಸಮಾಜದ ಮುಂದಾಳುವನ್ನಾಗಿ ಮಾಡಿತು.

ಜಾಹ್ನವಿ ದೇವಿ

ಬಹುಬೇಗನೆ ಹಲವು ಮುಖ್ಯ ಮಹಿಳಾ ವೈಷ್ಣವರು ಶ್ರೀ ಚೈತನ್ಯರ ಸಂಕೀರ್ತನಾ ಚಳವಳಿಯಲ್ಲಿ ಮಹತ್ವದ ಪಾತ್ರಗಳನ್ನು ವಹಿಸಿದರು ಹಾಗೂ ಗುರುವಿನ ಸ್ಥಾನವನ್ನು ಅಲಂಕರಿಸಿದರು. ಶ್ರೀ ಚೈತನ್ಯರ ನಿಕಟ ಸಹವರ್ತಿ ಹಾಗೂ ಅವರ ಸ್ವಾಂಶ ವಿಸ್ತರಣೆಯಾದ ನಿತ್ಯಾನಂದ ಪ್ರಭುಗಳ ಪತ್ನಿ ಜಾಹ್ನವಿದೇವಿಯು ಮಹಿಳಾ ಗುರುಗಳಲ್ಲಿ ಪ್ರಮುಖರಾದವರು.

ಸಾರಖಾಲ ಸೂರ್ಯದಾಸ ಪಂಡಿತರ ಇಬ್ಬರು ಹೆಣ್ಣುಮಕ್ಕಳು ಅತ್ಯಂತ ಧಾರ್ಮಿಕ ಭಕ್ತಿಯುಳ್ಳವರಾಗಿ ಮಹಾ ವೈಷ್ಣವರೆಂದು ಗುರುತಿಸಲ್ಪಡುತ್ತಿದ್ದರು. ನಿತ್ಯಾನಂದ ಪ್ರಭುಗಳು ಈ ಇಬ್ಬರನ್ನು ವಿವಾಹವಾದಾಗ ಇಡೀ ವೈಷ್ಣವ ಸಮೂಹವೇ ಅತ್ಯಂತ ಆನಂದೋನ್ಮಾದದಲ್ಲಿ ಹರ್ಷಿಸಿತು. ಕಿರಿಯ ಹೆಂಡತಿ ವಸುಧಾ ವೀರಭದ್ರನೆಂಬ ಮಗನಿಗೂ ಹಾಗೂ ಗಂಗಾದೇವಿಯೆಂಬ ಮಗಳಿಗೂ ಜನ್ಮವಿತ್ತರು.

ಅಲ್ಪ ಸಮಯದಲ್ಲಿ ಕಿರಿಯ ಪತ್ನಿ ವಸುಧಾ ಮೃತ್ಯುವಶಳಾದಾಗ ಜಾಹ್ನವಿ ದೇವಿಯು ತನ್ನ ತಂಗಿಯ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಅದಲ್ಲದೆ ಅವರು ರಾಮಚಂದ್ರನೆಂಬ ಒಬ್ಬಹುಡುಗನನ್ನು ದತ್ತು ಸ್ವೀಕರಿಸಿದರು. ಜಾಹ್ನವಿ ದೇವಿಯು ತನ್ನ ಯೌವನದ ಬಹಳಷ್ಟು ಕಾಲವನ್ನು ಈ ಮೂರು ಮಕ್ಕಳನ್ನು ಉತ್ತಮ ವೈಷ್ಣವರನ್ನಾಗಿ ಬೆಳೆಸುವುದರಲ್ಲಿ ಕಳೆದರು.

ಮುಖ್ಯವಾಗಿ ವೀರಭದ್ರರು ವೈಷ್ಣವ ಸಮೂಹಕ್ಕೆ ನಾಯಕರಾಗಿ ಬೆಳೆದರು ಹಾಗೂ ಅವರು ತನ್ನ ದೊಡ್ಡಮ್ಮ ಜಾಹ್ನವಿ ದೇವಿಯನ್ನು ಗುರುವಾಗಿ ಸ್ವೀಕರಿಸಿದಾಗ ಇನ್ನು ಕೆಲವು ಪ್ರಮುಖ ವೈಷ್ಣವರು ಅವರನ್ನು ಅನುಕರಿಸಿದರು. ಪ್ರಾರಂಭದಲ್ಲಿ ಜಾಹ್ನವಿದೇವಿಯ ಬಹುಮಟ್ಟಿನ ಪ್ರಸಿದ್ಧಿಯು ನಿತ್ಯಾನಂದ ಪ್ರಭುವಿನೊಂದಿಗಿದ್ದ ಅವರ ಸಂಬಂಧದಿಂದಾಗಿ ಬಂದಿತು. ಆದರೆ ಬಹುಬೇಗನೆ ಅವರ ಚಟುವಟಿಕೆಗಳು ಅವರ ಹಿರಿಮೆಯನ್ನು ಬಹಿರಂಗ ಪಡಿಸಿದವು ಮತ್ತು ಅವರು ಸ್ವಂತ ಯೋಗ್ಯತೆಯ ಪರಮ ವೈಷ್ಣವರಾಗಿ ಗೌರವಿಸಲ್ಪಟ್ಟರು.

ಶ್ರೀಕೃಷ್ಣನ ಪ್ರಸಿದ್ಧ ಗೋಪಿನಾಥ ವಿಗ್ರಹಕ್ಕೆ ಅವರ ಭಕ್ತಿಶ್ರದ್ಧೆಗಳು ಎಷ್ಟು ಅಪಾರವಾಗಿತ್ತೆಂದರೆ ಇದು ಅವರನ್ನು ಧರ್ಮಶ್ರದ್ಧೆ ಇದ್ದವರಿಗೂ ಹಾಗೂ ಇಲ್ಲದವರಿಗೂ ಪ್ರೀತಿಪಾತ್ರರನ್ನಾಗಿ ಮಾಡಿತು. ವಿಗ್ರಹಾರಾಧನೆಯನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಹಾಗೂ ಆಧ್ಯಾತ್ಮಿಕ ಪ್ರಯತ್ನಗಳಿಗೆ ಒಬ್ಬರ ಜೀವನವನ್ನು ಹೇಗೆ ಮುಡುಪಾಗಿಡಬೇಕೆಂಬುದನ್ನು ಅವರು ಸ್ವತಃ ತನ್ನ ಉದಾಹರಣೆಯ ಮೂಲಕ ತೋರಿಸಿಕೊಟ್ಟರು.

ಅವರು ದೊಡ್ಡ ದೊಡ್ಡ ವೈಷ್ಣವ ಉತ್ಸವಗಳ ಸಭಾಪತಿಗಳಾಗಿ ಕಾರ್ಯ ನಿರ್ವಹಿಸಿದರು ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಒಂದೇ ಸಮನಾಗಿ ಭೇದ ಭಾವವಿಲ್ಲದೆ ದೀಕ್ಷೆಯನ್ನು ನೀಡಿದರು. ಜಾಹ್ನವಿದೇವಿಯು ಶ್ರೀ ಚೈತನ್ಯರ ಪ್ರಧಾನ ಶಿಷ್ಯರಾದ ವೃಂದಾವನದ ಗೋಸ್ವಾಮಿಗಳೊಡನೆ ನಿಕಟ ಸಂಪರ್ಕವನ್ನು ಇರಿಸಿಕೊಳ್ಳುವಂತಹ ವಿವೇಕವನ್ನು ಹೊಂದಿದ್ದರು.

ಇದರಿಂದಾಗಿ ಅವರು ಬಂಗಾಳದ ಹಾಗೂ ವೃಂದಾವನದ ಗೌಡೀಯ ವೈಷ್ಣವ ಶಾಖೆಗಳ ಮಧ್ಯೆ ಐಕಮತ್ಯ ಮತ್ತು ಏಕೀಕರಣವನ್ನು ಕಾಪಾಡಿದರು. ಈಗ ಇರುವಂತಹ ಸುಸಂಬದ್ಧಾ ರೂಪದ ಗೌಡೀಯ ವೈಷ್ಣವ ಧರ್ಮವು ಬಹುತೇಕ ಅವರ ಪ್ರಯತ್ನದ ಫಲಿತಾಂಶವಾಗಿದೆ.

ಜಾಹ್ನವಿದೇವಿಯ ಜೀವಮಾನದಲ್ಲಿ ನಡೆದಂತಹ ಇನ್ನೊಂದು ಸಂಗತಿಯು ಚರ್ಚೆಗೆ ಯುಕ್ತವಾಗಿದೆ. ತಮ್ಮ ಗುರಿ ಮತ್ತು ಉದ್ದೇಶದ ಬಗ್ಗೆ ಅವರ ಶ್ರದ್ಧಾಭಕ್ತಿಗಳು ಎಷ್ಟು ಹೆಚ್ಚಾಯಿತೆಂದರೆ, ಅವರ ಜೀವಮಾನದ ಅವಧಿಯಲ್ಲಿಯೇ ಅವರ ವಿಗ್ರಹವನ್ನು ಮಾಡಲಾಯಿತು ಹಾಗೂ ಅದನ್ನು ಅವರು ಶ್ರದ್ಧೆಯಿಂದ ಪೂಜಿಸುತ್ತಿದ್ದ ಗೋಪಿನಾಥ ವಿಗ್ರಹದ ಪಕ್ಕದಲ್ಲಿ ಇಟ್ಟು ಪೂಜೆ ಮಾಡಬೇಕೆಂದು ನಿಶ್ಚಯಿಸಲಾಯಿತು.

ಜೈಪುರದಲ್ಲಿ ಒಂದು ಪರಿಷತ್ತು ಈ ವಿಷಯದ ಔಚಿತ್ಯವನ್ನು ನಿಶ್ಚಯಿಸಲು ಸಭೆ ಸೇರಿತು. ಜೈಪುರದ ರಾಜ ಹಾಗೂ ಅಲ್ಲಿ ಸೇರಿರುವಂತಹ ವೈಷ್ಣವರು ಜಾಹ್ನವಿ ದೇವಿಯ ಆಯುಷ್ಮಾನ್‌ ಅವಧಿಯಲ್ಲಿಯೇ ಅವರ ವಿಗ್ರಹವನ್ನು ಗೋಪಿನಾಥ ವಿಗ್ರಹದ ಪಕ್ಕ ಸ್ಥಾಪಿಸಬೇಕೆಂದು ಏಕಮತದಿಂದ ನಿರ್ಣಯಿಸಿದರು. ಈ ರೀತಿಯ ಪ್ರಮುಖ ಮನ್ನಣೆಯು ವೈಷ್ಣವ ಸಮೂಹದಲ್ಲಿಯೇ ಅಪರೂಪ.

ಹೇಮಲತಾ ಮತ್ತು ಗಂಗಾಮಾತಾ ಗೋಸ್ವಾಮಿ

ಶ್ರೀ ಚೈತನ್ಯ ಮತ್ತು ನಿತ್ಯಾನಂದ ಪ್ರಭುಗಳ ಅನಂತರ ಮುಂದಿನ ಪೀಳಿಗೆಯಲ್ಲಿ ಹಲವು ವೈಷ್ಣವ ಮಹಿಳೆಯರು ಜಾಹ್ನವಿದೇವಿಯ ಮೇಲ್ಪಂಕ್ತಿಯನ್ನು ಅನುಸರಿಸಿದರು. ಅವರಲ್ಲಿ ಹೇಮಲತಾ ಮತ್ತು ಗಂಗಾಮಾತಾ ಗೋಸ್ವಾಮಿ ಇವರಿಬ್ಬರು ಪ್ರಮುಖರು.

ಹೇಮಲತಾ ಠಾಕುರಿಣಿಯ ಬಗ್ಗೆ ಅಷ್ಟೊಂದು ಮಾಹಿತಿಗಳು ಲಭ್ಯವಿಲ್ಲ. ಅವರು ಶ್ರೀನಿವಾಸ ಆಚಾರ್ಯರ ಜೇಷ್ಠಪುತ್ರಿಯಾಗಿದ್ದರು ಹಾಗೂ ಬಹಳಷ್ಟು ಸಂಖ್ಯೆಯಲ್ಲಿ ಪುರುಷ ಮತ್ತು ಮಹಿಳಾ ಶಿಷ್ಯಂದಿರನ್ನು ಹೊಂದಿದ್ದರು. ಅವರು ಉನ್ನತ ಮಟ್ಟದ ಗೂಢ ಯೋಗಿಯಾಗಿದ್ದರು ಹಾಗೂ ಪರಮ ಮಟ್ಟದ ಭಗವತ್ಪ್ರೇಮದಿಂದ ಪಕ್ವಗೊಂಡಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ಗಂಗಾಮಾತಾ ಗೋಸ್ವಾಮಿಯವರ ಬಗ್ಗೆ ಗೌಡೀಯ ವೈಷ್ಣವ ಚರಿತ್ರೆಯ ಪುಟಗಳಲ್ಲಿ ಅದರಲ್ಲೂ ಮುಖ್ಯವಾಗಿ ನಿತ್ಯಾನಂದ ವಂಶಾವಳಿಯ ದಾಖಲೆಗಳಲ್ಲಿ ಬಹಳಷ್ಟು ಬರೆಯಲ್ಪಟ್ಟಿದೆ. ಗಂಗಾಮಾತಾ ಗೋಸ್ವಾಮಿಯವರು ನಿತ್ಯಾನಂದನ ವಂಶಸ್ಥರು. ಜಾಹ್ನವಿದೇವಿಯವರ ಅನುಯಾಯಿಯಾದ ಅನಂತಾಚಾರ್ಯರ ಶಿಷ್ಯರಾದ ಹರಿದಾಸ ಪಂಡಿತರು ಅವರ ಗುರುಗಳು. ಈ ರೀತಿಯಾಗಿಯೂ ಅವರ ಪರಂಪರೆಯು ನಿತ್ಯಾನಂದ ಪ್ರಭುಗಳ ಜೊತೆಗೆ ಜೋಡಣೆಯಾಗುತ್ತದೆ.

ಅವರು ಬಂಗಾಳದ ರಾಜ್ಸಾಹಿ ಜಿಲ್ಲೆಯಲ್ಲಿರುವ ಪುಂತವದ ರಾಜ ನರೇಶ ನಾರಾಯಣನ ಪುತ್ರಿ. ಮಿಕ್ಕಿದ ವೈಷ್ಣವ ಮಹಿಳೆಯರು ಅಥವಾ ಯೋಗಿಗಳಿಗೆ ವ್ಯತಿರಿಕ್ತವಾಗಿ ಗಂಗಾಮಾತಾ ಮದುವೆಯ ಬಂಧನದಲ್ಲಿ ಸಿಲುಕಲಿಲ್ಲ ಹಾಗೂ ಅವರ ಕಠಿಣ ಬ್ರಹ್ಮಚಾರಿಣಿ ವ್ರತದಿಂದಾಗಿ ಮತ್ತು ಪರಮ ಪ್ರಜ್ಞೆಯಿಂದಾಗಿ ಅವರಿಗೆ ಗೋಸ್ವಾಮಿಯೆಂಬ ಬಿರುದು ಪ್ರಾಪ್ತವಾಯಿತು.

ಅವರು ವಿಧ್ಯುಕ್ತ ರೀತಿಯಲ್ಲಿ ಸಂನ್ಯಾಸ ದೀಕ್ಷೆಯನ್ನು (ವೈದಿಕ ಪದ್ಧತಿಯಲ್ಲಿ ಹೇಳಲಾದ ವೈರಾಗ್ಯದಿಂದ ಕೂಡಿದ ಜೀವನ ಕ್ರಮ) ತೆಗೆದುಕೊಳ್ಳಲಿಲ್ಲ. ಯಾಕೆಂದರೆ ಶಾಸ್ತ್ರಗಳಲ್ಲಿ ಪುರುಷರು ಮಾತ್ರವೇ ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಬಹುದೆಂದು ಹೇಳಲಾಗಿದೆಯೆಂದು ಅವರ ಅನಿಸಿಕೆಯಾಗಿತ್ತು. ಆದರೆ ಅವರು ಸಂನ್ಯಾಸ ಜೀವನ ಕ್ರಮವನ್ನು ಅಳವಡಿಸಿಕೊಂಡಿದ್ದರು ಹಾಗೂ ಅದರಿಂದಾಗಿ ಅವರು ಗೋಸ್ವಾಮಿಯೆಂಬ ಬಿರುದನ್ನು ಪಡೆದರು.

ಅವರ ಆತ್ಮಕ್ಕೆ ಸಮೀಪವಾದ ವಿಗ್ರಹವು ವೃಂದಾವನದ ಮದನಗೋಪಾಲ ಹಾಗೂ ಕೃಷ್ಣನ ಈ ರೂಪವನ್ನು ಅವರು ಬಹಳ ಭಕ್ತಿಯಿಂದ ಪೂಜಿಸುತ್ತಿದ್ದರು. ತನ್ನ ಯೌವನ ಕಾಲದಲ್ಲಿ ಅವರು ವೃಂದಾವನದಲ್ಲಿ ವ್ಯಾಸಂಗ ಮಾಡಿದರು ಮತ್ತು ಹಲವು ವರ್ಷಗಳ ನಂತರ ಅವರು ಜಗನ್ನಾಥ ಪುರಿಯಲ್ಲಿ ನೆಲಸಿದರು.

ಅಲ್ಲಿ ಅವರು ಪಂಡಿತ ಸಾರ್ವಭೌಮ ಭಟ್ಟಾಚಾರ್ಯರ ಪುರಾತನವಾದ ಜೀರ್ಣವಾಗಿ ಹೋಗಿದ್ದ ಮನೆಯಲ್ಲಿ ವಾಸಿಸಿದರು. ಭಟ್ಟಾಚಾರ್ಯರು ಶ್ರೀ ಚೈತನ್ಯರ ಪ್ರಮುಖ ಶಿಷ್ಯರಾಗಿದ್ದರು ಹಾಗೂ ಇನ್ನೂರು ವರ್ಷಗಳ ಅನಂತರ ಅವರ ಮನೆಯು ಮೊದಲಿನ ರೂಪವನ್ನು ಉಳಿಸಿಕೊಳ್ಳದೆ ಪಾಳು ಬಿದ್ದಿದ್ದರೂ, ಗಂಗಾಮಾತಾ ಅದು ನೀಡುತ್ತಿದ್ದ ಆಧ್ಯಾತ್ಮಿಕ ಸ್ಫೂರ್ತಿಯನ್ನು ಪಡೆಯಲು ಅಲ್ಲಿಯೇ ನೆಲಸಿದರು.

ಆ ಮನೆಯಲ್ಲಿ ಅವರಿಗೆ ಒಂದು ಕಾಲದಲ್ಲಿ ಸ್ವತಃ ಸಾರ್ವಭೌಮರು ಪೂಜಿಸುತ್ತಿದ್ದ ಪವಿತ್ರವಾದ ದಾಮೋದರ ಶಿಲೆಯು ಸಿಕ್ಕಿತು. ಈ ವಿಗ್ರಹವನ್ನು ಅವರು ವೃಂದಾವನದ ಮದನಗೋಪಾಲನ ವಿಗ್ರಹದಷ್ಟೇ ಭಕ್ತಿಯಿಂದ ಪೂಜಿಸಿದರು.

ಪುರಿಯ ರಾಜನಾದ ಮುಕುಂದದೇವ ಮಹಾರಾಜನು ಒಮ್ಮೆ ಅವರು ಪಠಿಸುತ್ತಿದ್ದ ವೈಷ್ಣವರಿಗೆ ಪರಮಪೂಜ್ಯವಾದ ಶ್ರೀಮದ್ ಭಾಗವತ ಪುರಾಣವನ್ನು ಕೇಳಲು ಆಗಮಿಸಿದನು. ಅವರ ಶುದ್ಧ ಉಚ್ಚಾರಣೆ ಮತ್ತು ಸವಿಸ್ತಾರ ವಿವರಣೆಗಳಿಂದ ಸಂತುಷ್ಟನಾದ ರಾಜನು ಅವರ ಶಿಷ್ಯತ್ವವನ್ನು ಸ್ವೀಕರಿಸಿದನಲ್ಲದೆ, ಪುರಿಯ ಸಮಸ್ತ ಜನರೂ ಅವರ ಶಿಷ್ಯತ್ತ್ವವನ್ನು ಸ್ವೀಕರಿಸುವಂತೆ ಪ್ರೋತ್ಸಾಹಿಸಿದನು.

ಅವರು ಕಟ್ಟಿಸುತ್ತಿದ್ದ ದೇವಾಲಯಕ್ಕೆ ಧನ ಸಹಾಯವನ್ನು ನೀಡಿದನು. ಗಂಗಾಮಾತಾ ಗೋಸ್ವಾಮಿಯವರು ಒರಿಸ್ಸಾದ ಒಬ್ಬ ಪ್ರಮುಖ ವೈಷ್ಣವರಾಗಿ ತಿಳಿಯಲ್ಪಟ್ಟಿದ್ದಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi