ಶ್ರೀಲ ಈಶ್ವರ ಪುರಿ

ಶ್ರೀ ಈಶ್ವರ ಪುರಿಯವರು ಶ್ರೀ ಚೈತನ್ಯ ಮಹಾಪ್ರಭುಗಳ ದೀಕ್ಷಾ ಗುರುಗಳು, ಶ್ರೀ ಮಾಧವೇಂದ್ರ ಪುರಿಗಳ ಆಪ್ತ ಶಿಷ್ಯರೂ ಆಗಿದ್ದರು.

ಚೈತನ್ಯ ಚರಿತಾಮೃತದ ಕರ್ತೃ ಶ್ರೀಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ಶ್ರೀ ಈಶ್ವರ ಪುರಿಯವರ ಗುರುಭಕ್ತಿಯನ್ನು ಹೀಗೆ ವಿವರಿಸಿದ್ದಾರೆ:

“ಮಾಧವೇಂದ್ರ ಪುರಿಗಳ ಲೀಲಾ ಸಮಾಪ್ತಿಯ ದಿನಗಳಲ್ಲಿ ಅವರ ಅವಯವಗಳು ಸಂಪೂರ್ಣ ನಿಷ್ಕ್ರಿಯವಾಗಿದ್ದವು. ಈ ಸಂದರ್ಭದಲ್ಲಿ ಈಶ್ವರಪುರಿ ಅವರಿಗೆ, ಅತ್ಯುನ್ನತ ಸೇವೆಯನ್ನು ಸಲ್ಲಿಸಿದರು.

ಗುರುಗಳ ಪ್ರತಿಯೊಂದು ಕಾರ್ಯದಲ್ಲು ನೆರವಾಗುತ್ತ, ಅವರ ಮಲ-ಮೂತ್ರಾದಿಗಳನ್ನೂ ಸ್ವಚ್ಛಗೊಳಿಸುತ್ತ, ಸದಾ ನಾಮಜಪ ಮತ್ತು ಮಾಧವೇಂದ್ರ ಪುರಿಗಳೊಡನೆ ಕೃಷ್ಣಲೀಲೆಯ ಬಗ್ಗೆ ವಾರ್ತಾಲಾಪ ಮಾಡುತ್ತ ಅವರನ್ನು ಸಂತಸಪಡಿಸುತ್ತಿದ್ದರು.

ಇದರಿಂದ ಸಂತುಷ್ಟರಾದ ಮಾಧವೇಂದ್ರ ಪುರಿಯವರು ಅವರಿಗೆ “ ಶ್ರೀಕೃಷ್ಣಪ್ರೇಮವು ನಿನಗೆ ಸಿದ್ಧಿಸಲಿ” ಎಂದು ಆರ್ಶೀವದಿಸಿದರು. ಹೀಗೆ, ತಮ್ಮ ಆಧ್ಯಾತ್ಮಿಕ ಗುರುಗಳ ಕರುಣೆಯ ಫಲವಾಗಿ ಈಶ್ವರಪುರಿಯವರು ಪರಮ ಪ್ರಭುವಿನ ಪ್ರೇಮಸಾಗರದಲ್ಲಿ ಅತಿ ಶ್ರೇಷ್ಠ ಭಕ್ತರಾಗಿ ಪ್ರಗತಿ ಹೊಂದಿದರು.”

ಇಂತಹ ಮಹಾನ್‌ ಸಾಧಕರಾದ ಈಶ್ವರ ಪುರಿಯವರು ತಮ್ಮ ಗುರುಗಳಿಗೆ ಸಲ್ಲಿಸಿದ ಸೇವೆಯಿಂದಲೇ ಶ್ರೀ ಚೈತನ್ಯ ಮಹಾಪ್ರಭುಗಳನ್ನು ತಮ್ಮ ಶಿಷ್ಯರನ್ನಾಗಿ ಪಡೆಯಲು ಸಾಧ್ಯವಾಯಿತು ಎಂದು ಶ್ರೀಲ ಪ್ರಭುಪಾದರು ತಮ್ಮ ಭಾವಾರ್ಥದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಶ್ರೀ ಈಶ್ವರ ಪುರಿಯವರು ಕೆಲಸಮಯ ನವದ್ವೀಪಧಾಮದಲ್ಲಿ ತಂಗಿದ್ದಾಗ ಅವರು ಚೈತನ್ಯ ಮಹಾಪ್ರಭುಗಳನ್ನು ಕಂಡರು. ದಿವ್ಯ ಶರೀರ ಚಿಹ್ನೆಗಳಿಂದಲೂ ಮುಖ ಕಾಂತಿಯಿಂದಲೂ ಸಂಪನ್ನರಾಗಿದ್ದ ತರುಣ ವಿದ್ಯಾರ್ಥಿಯಾಗಿದ್ದ ಮಹಾಪ್ರಭುಗಳ ಪರಿಚಯ ಈಶ್ವರ ಪುರಿಯವರಿಗಿರಲಿಲ್ಲ.

ಮಹಾಪ್ರಭುಗಳ ತೇಜಸ್ಸಿನ ಆಕರ್ಷಣೆಗೆ ಒಳಗಾದ ಈಶ್ವರಪುರಿಯವರು ಅವರನ್ನು ಕರೆದು ಪರಿಚಯ ವಿಚಾರಿಸಿದರು. ಆ ತರುಣನೇ “ನಿಮಾಯ್‌ ಪಂಡಿತ” ರೆಂದು ತಿಳಿದಾಗ ಅವರ ಆನಂದಕ್ಕೆ ಪಾರವೇ ಇಲ್ಲ! ಮಹಾಪ್ರಭುಗಳು ಕೂಡ ವಿನಮ್ರತೆಯಿಂದ ಅವರನ್ನು ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಿದರು. ಹೀಗೆ ನಡೆಯಿತು ಭಾವೀ ಗುರುಶಿಷ್ಯರ ಪ್ರಥಮ ಭೇಟಿ.

ನವದ್ವೀಪಧಾಮದಲ್ಲಿ ಕೆಲವು ತಿಂಗಳು ಕಳೆದ ಈಶ್ವರಪುರಿಯವರು ಅಲ್ಲಿಂದ ಕೆಲವು ಭಕ್ತರೊಡಗೂಡಿ “ಗಯೆ”ಗೆ ತೆರಳುತ್ತಾರೆ. ಆ ವೇಳೆಗೆ ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಪಿತೃಗಳಿಗೆ ತರ್ಪಣ ನೀಡುವ ಸಲುವಾಗಿ ಅಲ್ಲಿಗೆ ಬರುತ್ತಾರೆ. ಇಲ್ಲಿ ಮತ್ತೊಂದು ಮಹಾ ಮಿಲನ ಸಂಭವಿಸುತ್ತದೆ.

ಶ್ರೀ ಈಶ್ವರ ಪುರಿಯವರನ್ನು ನೋಡಿದ ಮಹಾಪ್ರಭುಗಳು ಅವರಿಗೆ ಪ್ರಣಾಮ ಸಲ್ಲಿಸಿ, “ನಾನು ಗಯೆಗೆ ಬಂದದ್ದು ಈಗ ನಿಜಕ್ಕೂ ಸಾರ್ಥಕವಾಯಿತು. ಪಿತೃಗಳಿಗೆ ಪಿಂಡ ಇಡುವ ಮೂಲಕ ವ್ಯಕ್ತಿಯೊಬ್ಬನು ತನ್ನ ಪೂರ್ವಜರಿಗೆ ಮುಕ್ತಿಯನ್ನು ದೊರಕಿಸಿಕೊಡುತ್ತಾನೆ.

ಆದರೆ ನಿಮ್ಮ ಚರಣಕಮಲಗಳ ದರ್ಶನದಿಂದ ಲಕ್ಷ ಲಕ್ಷ ಪೂರ್ವಜರ ಪಾಪಗಳೆಲ್ಲವು ಕಳೆದು ಅವರು ಭೌತಿಕ ಬಂಧನಗಳಿಂದ ಮುಕ್ತರಾಗಿ ಅಲೌಕಿಕವಾದ ಮೋಕ್ಷವನ್ನು ಪಡೆಯುತ್ತಾರೆ. ನಿಮ್ಮ ಪುಣ್ಯದಾಯಿಯೂ ಮಂಗಳಕರವೂ ಆದ ಪಾದಪದ್ಮಗಳ ದರ್ಶನದಿಂದ ಪುನೀತನಾದೆ” ಎಂದು ಹರ್ಷಪಡುತ್ತಾರೆ.

ಮುಂದೆ ಸ್ವಲ್ಪ ಕಾಲದವರೆಗೆ ಗಯೆಯಲ್ಲೇ ಉಳಿದ ಈಶ್ವರಪುರಿಯವರು ಚೈತನ್ಯ ಮಹಾಪ್ರಭುಗಳ ಕೋರಿಕೆಯಂತೆ “ಗಾಯತ್ರಿ ಮಂತ್ರ”ದ ಉಪದೇಶ ನೀಡುತ್ತಾರೆ. ಅವರಿಂದ ಮಂತ್ರ ದೀಕ್ಷಿತರಾದ ಮಹಾಪ್ರಭುಗಳು ಈಶ್ವರಿಪುರಿಯವರನ್ನು ಗುರುವಾಗಿ ಸ್ವೀಕರಿಸಿ ಭಕ್ತಿಸೇವೆಯನ್ನು ಅರ್ಪಿಸುತ್ತಾರೆ.

ತಮ್ಮ ಆ‍ಧ್ಯಾತ್ಮಿಕ ಗುರು ಮಾಧವೇಂ‍ದ್ರಪುರಿಯವರಿಗೆ ವೈಯಕ್ತಿಕ ಸೇವೆ ಅರ್ಪಿಸುವ ಮೂಲಕ ಈಶ್ವರ ಪುರಿಯವರು ಗುರು ಸೇವೆಯ ಉನ್ನತ ಮಾದರಿ ಹಾಕಿಕೊಟ್ಟರೆ, ಅವರ ಶಿಷ್ಯರಾದ ಶ್ರೀ ಚೈತನ್ಯ ಮಹಾಪ್ರಭುಗಳು ಅವರನ್ನು ಅತ್ಯಂತ ಗೌರವದಿಂದ ಕಂಡು ಗುರುಗಳಾಗಿ ಸ್ವೀಕರಿಸಿ, ಗುರುಪರಂಪರೆಯ ಮಹತ್ತ್ವವನ್ನು ಎತ್ತಿ ತೋರಿಸಿದ್ದಾರೆ.

ಶ್ರೀ ಚೈತನ್ಯ ಮಹಾಪ್ರಭುಗಳು ಗಯೆಯಿಂದ ಮರಳಿದ ಅನಂತರ ಸಂನ್ಯಾಸ ಸ್ವೀಕರಿಸಿ, ತಮ್ಮ ತಾಯಿಯ ಕೋರಿಕೆಯಂತೆ ಪುರಿ ಜಗನ್ನಾಥ ಧಾಮದಲ್ಲಿ ನೆಲೆಸಲು ತೆರಳುತ್ತಾರೆ. ಈ ಸಮಯಕ್ಕೆ ಪರಮಪ್ರಭುವಿನ ಚೈತನ್ಯ ಲೀಲೆಯಲ್ಲಿ ತಮ್ಮ ಪಾತ್ರ ಸಮಾಪ್ತಿಯಾದುದನ್ನು ಅರಿತ ಶ್ರೀ ಈಶ್ವರಪುರಿಯವರು ದೇಹತ್ಯಜಿಸಿ ಭಗವದ್ಧಾಮಕ್ಕೆ ಮರುಳುತ್ತಾರೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi