ಕೃಷ್ಣ-ಬಲರಾಮರು ಗೋಕುಲದ ಹುಡುಗರನ್ನೆಲ್ಲ ಕಟ್ಕೊಂಡು ಗೋವುಗಳನ್ನು ಮೇಯಿಸಿ ಹೋಗ್ತಿದ್ರು. ಕೃಷ್ಣ ಇದ್ದುಬಿಟ್ರೆ ಸಾಕು ಆ ಎಲ್ಲ ಗೋಪಾಲಕ ಹುಡುಗರಿಗೂ ಎಲ್ಲಿಲ್ಲದ ಉಮೇದು! ಗೋಮಾಳದ ದಾರಿಯುದ್ದಕ್ಕೂ ಗಲಾಟೆ ಎಬ್ಬಿಸ್ತ, ನಗುನಗುತ್ತ ಅವರೆಲ್ಲ ಹೋಗ್ತಿದ್ರೆ ಪ್ರತಿ ಮನೆಯ ಗೋಪ-ಗೋಪಿಯರು ಬಾಗಿಲಲ್ಲಿ ಅವರನ್ನು ನೋಡ್ತಾ ನಿಂತು ಬಿಡ್ತಿದ್ರು.

ಒಂದಿನ ಹೀಗಾಯ್ತು. ಯಾವತ್ತಿನ ಹಾಗೆ ಕೃಷ್ಣ-ಬಲರಾಮ ಮತ್ತು ಅವನ ಗೆಳೆಯರು ಹಸುಗಳನ್ನ ಮೇಯಿಸ್ಲಿಕ್ಕೆ ಬಿಟ್ಟು ತಮ್ಮ ಪಾಡಿಗೆ ಆಟವಾಡ್ತಿದ್ರು. ಇತ್ತ ಹಸುಗಳು ಹೊಸತಾಗಿ ಚಿಗುರಿದ್ದ ಎಳೆ ಹುಲ್ಲಿನ ರುಚಿ ಹತ್ತಿ ಅಲೀತಾ ಅಲೀತಾ ದೂರದೂರ ಹೊರಟು ಹೋದ್ವು. ಹಾಗೆ ಹೋಗ್ತಾ ಹೋಗ್ತಾ ಅವು ತಲಪಿದ್ದು, ‘ಇಷಿಕಾಟವಿ’ ಅನ್ನೋ ಕಾಡನ್ನ.
ಆ ಕಾಡು ಹೊಕ್ಕು ದಾರಿ ತಪ್ಪಿದ ಹಸುಕರುಗಳಿಗೆ ಗಾಬರಿಯಾಗಿಹೋಯ್ತು ಸಾಲದ್ದಕ್ಕೆ ಕಾಡಿನ ಮಧ್ಯೆ ಬೆಂಕಿಯೂ ಹೊತ್ತಿಕೊಂಡಿತ್ತು. ಅವೆಲ್ಲ ದಿಕ್ಕು ತೋಚದೆ ಕೂಗತೊಡಗಿದವು.
ಇತ್ತ ಆಟವಾಡ್ತಿದ್ದ ಹುಡುಗರಿಗೆ ಇದ್ದಕ್ಕಿದ್ದಾಗೆ ತಮ್ಮ ಹಸುಗಳ ನೆನಪಾಯ್ತು, ಎಲ್ಲಿ ಹಸುಗಳು!? ಹೆದರಿದ ಅವ್ರೆಲ್ಲ ಕೃಷ್ಣನನ್ನು ಮುಂದೆ ಮಾಡ್ಕೊಂಡು ಹುಡುಕುತ್ತ ಹೊರಟುಬಿಟ್ರು. ಅಂತೂ ಇಂತು ಹಸುಕರುಗಳ ಆಕ್ರಂದನ ಬರ್ತಿದ್ದ ಜಾಗಕ್ಕೆ ಹೋಗಿ ತಲಪಿದ್ರು. ಅಲ್ಲಿ ನೋಡೋದೇನು!? ಧಗಧಗ ಬೆಂಕಿ!!
ಅದರ ಕಾವಿಂದ ತಪ್ಪಿಸ್ಕೊಂಡು ದಿಕ್ಕಾಪಾಲಾಗಿ ಹಸುಗಳು ಓಡ್ತಿದ್ವು. ಒಳಗೆ ಹೋಗ್ತಾ ಇದ್ದ ಹಾಗೆ ಹೊಗೇನೂ ತುಂಬ್ಕೊಂಡು ಏನೂ ಕಾಣದ ಹಾಗೆ ಆಗ್ಬಿಟ್ಟಿತ್ತು.

ತನ್ನ ಮುದ್ದಿನ ಗೋವುಗಳಿಗೆ ಬಂದ ಗತಿಯನ್ನ ನೋಡಿ ಕೃಷ್ಣ ಸಂಕಟಪಟ್ಟ. ಅವುಗಳ ಹೆಸರು ಹಿಡಿದು ಕೂಗಿದ. ಕೃಷ್ಣನ ದನಿ ಕೇಳಿದ ಹಸುಗಳು ಖುಷಿಯಿಂದ ಕಿವಿ ನಿಮಿರಿಸಿದವು. ಆದರೇನು? ಹೊಗೆ ತುಂಬಿ ಉಸಿರುಕಟ್ಟಿ ಅವುಗಳ ಬಲ ಉಡುಗಿಹೋಗಿತ್ತು.
ಅದಾಗಲೇ ಗೋಪಾಲಕ ಹುಡುಗರೆಲ್ಲ ಕಾಡಿಗೆ ಬಂದಿದ್ರು ಅಂದೆನಲ್ಲ? ಈಗ ಅವ್ರೂ ಒಬ್ಬೊಬ್ಬರ ತಲೆ ಸುತ್ತಿ ಬೀಳಲಿಕ್ಕೆ ಶುರುಮಾಡಿದ್ರು. ಹೊಗೆಯಿಂದ, ಬೆಂಕಿಯ ಕಾವಿಂದ ಅವರ ಉಸಿರು ಕಟ್ಟಿ ಹೋಗಿತ್ತು. ಅವರು ಕೃಷ್ಣನ ಎದುರು ನಿಂತು ʼನಮ್ಮನ್ನ ಕಾಪಾಡು’ ಅಂತ ಕೇಳಿಕೊಂಡು, ಅವರೆಲ್ಲೂ ಆಯಾಸದಿಂದ ಕಣ್ ಕಣ್ ಬಿಡುತ್ತ ನಿಂತುಬಿಟ್ಟಿದ್ರು.
ಬಲರಾಮ ಕೂಡ ಸ್ನೇಹಿತರ ಕೋರಿಕೆ ಮನ್ನಿಸು ಅಂತ ಕೃಷ್ಣನ್ನ ಕೇಳ್ಕೊಂಡ. ಆ ಹೊತ್ತಿಗೆ ಕೃಷ್ಣಂಗೂ ತನ್ ಸ್ನೇಹಿತರ ಪಾಡು ನೋಡಿ ‘ಅಯ್ಯೋ’ ಅನಿಸಿಬಿಟ್ಟಿತ್ತು. ಕರುಣೆ ತುಂಬಿದ ಕಣ್ಗಳಿಂದ ಅವರನ್ನೂ ಒಮ್ಮೆ ನೋಡಿದ ಕೃಷ್ಣ ಅವರೆಲ್ಲರಿಗಿಂತ ಮುಂದೆ ಹೋಗಿ ನಿಂತ.
ಗೆಳೆಯರೆಲ್ಲ ಒಬ್ಬೊಬ್ಬರಾಗೇ ಎಚ್ಚರ ತಪ್ಪಿದ್ರು. ಬಲರಾಮ ಮಾತ್ರ ತನ್ನ ತಮ್ಮನ ಸಾಹಸವನ್ನು ಕೈಕಟ್ಕೊಂಡು ನೋಡುತ್ತ ನಿಂತ್ ಬಿಟ್ಟ.

ಸೊಂಟದ ಮೇಲೆ ಕೈ ಇಟ್ಕೊಂಡ ಕೃಷ್ಣ ಬೆಂಕಿಯ ಜ್ವಾಲೆಗಳ್ನೆಲ್ಲ ಉಸಿರಿನ ಜೊತೆ ಎಳ್ಕೊಳೋಕೆ ಶುರು ಮಾಡ್ದ. ಹಾಗೇ ಆ ಬೆಂಕಿಯನ್ನೆಲ್ಲ ನುಂಗಿಬಿಟ್ಟ! ಅಷ್ಟಾದ್ರೂ ನೀರು ಕುಡಿದವರ ಹಾಗೆ ನಗುನಗುತ್ತ ನಿಂತಿದ್ದ ಪುಟ್ಟ ಕೃಷ್ಣ.
ಇಷ್ಟೆಲ್ಲಾ ಆದ ಸ್ವಲ್ಪ ಹೊತ್ನಲ್ಲೇ ಹುಡುಗರಿಗೆ ಎಚ್ಚರ ಆಯ್ತು, ಕಣ್ಣುಜ್ಜಿಕೊಂಡು ಹೆದರ್ಕೊಂಡು ಸುತ್ತ ನೋಡಿದ್ರು. ಅರೆ! ಕಾಳ್ಗಿಚ್ಚು ಮಾಯ!? ಹಸು-ಕರುಗಳೂ ಋಷಿಯಿಂದ ಕೃಷ್ಣನ ಸುತ್ತಮುತ್ತ ಜಿಗಿದಾಡ್ತಾ ಇವೆ! ಅವರೆಲ್ಲೂ ಗಟ್ಟಿಯಾಗಿ ‘ಕೃಷ್ಣಂಗೆ ಜೈ! ಕೃಷ್ಣಂಗೆ ಜೈ!!’ ಅಂತ ಕೂಗುತ್ತ ಓಡಿ ಬಂದು ಅವನನ್ನ ಮೇಲೆತ್ತಿ ಕುಣಿದಾಡಿಬಿಟ್ರು!
ಅಂತೂ ಇಂತೂ ಕಾಳ್ಗಿಚ್ಚಿನ ಹಾಗೆ ಬಂದಿದ್ದ ಕಂಟಕ ಕೃಷ್ಣನಿಂದಾಗಿ ಕಳೆದಿತ್ತು.






Leave a Reply