– ಆಂಗ್ಲಮೂಲ: ರಾಯರಾಮದಾಸ ಬ್ರಹ್ಮಚಾರಿ, ಅನುವಾದ: ಗೀತಾ ಶ್ರೀನಾಥ
ಅತ್ಯಂತ ಕುತೂಹಲಭರಿತ ಹಾಗೂ ವಿಲಕ್ಷಣ ನಾಯಕನನ್ನು ಒಳಗೊಂಡ ಕತೆಗಳನ್ನು ಹೆಣೆಯುವ ಚಂದಮಾಮ ಕಥೆಗಾರನೊಬ್ಬನನ್ನು ಇತ್ತೀಚೆಗೆ ಕೆಲವು ಕಾಲೇಜು ವಿದ್ಯಾರ್ಥಿಗಳು ಗೌರವದಿಂದ ಆತ ನಮ್ಮ ಆಧುನಿಕ ಕಾಲ್ಪನಿಕ ಕಥೆಗಾರ ಎಂದು ಅತ್ಯುತ್ಸಾಹದಿಂದ ಸಾರಿದ್ದಾರೆ.

ಕಾಲ್ಪನಿಕ ಕಥೆ ಅಥವಾ ಪುರಾಣ ಕಥೆಗಳನ್ನು ಜನ ನಂಬುತ್ತಾರೆ. ಇಲ್ಲವೇ ನಂಬುತ್ತಿದ್ದರು ಎನ್ನುವುದನ್ನು ಅವರ ಈ ಸಾರುವಿಕೆ ಪ್ರತಿಬಿಂಬಿಸುತ್ತದೆ ಎಂದು ನನಗನ್ನಿಸಿತು. ‘ಮಿತ್'(myth) ಎನ್ನುವ ಪದಕ್ಕೆ ನಿಘಂಟು ನೀಡುವ ವಿವರಣೆ ಹೀಗಿದೆ.
‘ಜನ ಜೀವನದ ವಿಶಾಲ ನೋಟದ ಒಂದು ಭಾಗವನ್ನು ತೆರೆದಿಡುವ ಚಾರಿತ್ರಿಕ ಘಟನಾವಳಿಗಳನ್ನು ಒಳಗೊಂಡ ತೋರಿಕೆಯ ಸಾಂಪ್ರಾದಾಯಿಕ ಕಥೆ ಅಥವಾ ಒಂದು ಆಚರಣೆ, ನಂಬಿಕೆ ಇಲ್ಲವೇ ನೈಸರ್ಗಿಕ ಸಂಗತಿಗಳನ್ನು ವಿಶೇಷವಾಗಿ ಒಂದು ಹಿತಾಸಕ್ತಿಯ ಗುಂಪು ಹೊಂದಿರುವ ಕೆಟ್ಟ ನಂಬಿಕೆಗಳನ್ನು ವಿವರಿಸುತ್ತದೆ.’
ಸ್ಪಷ್ಟವಾಗಿ ಹೇಳುವುದಾದರೆ ಚಂದಮಾಮ ಕಥೆಗಳಿಗೆ ಈ ವ್ಯಾಖ್ಯೆ ಸರಿಹೊಂದುವುದಿಲ್ಲ. ಏಕೆಂದರೆ ಅವು ನಿಜವಾದ ಕಥೆಗಳು ಎಂದು ಅನ್ನಿಸುವುದಿಲ್ಲ. ಅವು ಕಥೆಗಳಷ್ಟೇ, ನಿಖರವಾದ ಪುರಾಣ ಕಥೆಗಳಲ್ಲಿ, ಆಧುನಿಕ ಕಾಲದ ಪ್ರಸ್ತುತ ಕಾಲ್ಪನಿಕ ಕಥೆಗಳನ್ನು ನಾವು ಪರ್ಯಾಲೋಚಿಸಲು ಬಯಸಿದ್ದೇ ಆದಲ್ಲಿ ಆಧುನಿಕ ಮಾನವ ಪ್ರಸ್ತುತ ನಂಬಿಕೆಗಳು ವಿಮರ್ಶೆಗೆ ಯೋಗ್ಯವಲ್ಲದ್ದು’ ಎಂದು ಹೇಳುವುದನ್ನು ನಾವು ಗಮನಿಸಬೇಕಾಗುತ್ತದೆ.
ಅಂತಹ ಹಲವಾರು ನಂಬಿಕೆಗಳಿವೆ. ಪ್ರಬಲವಾದ ಮತ್ತು ಹೆಚ್ಚು ಸ್ಥಿರವಾದ ಮಾದರಿಯನ್ನು ಹೊಂದಿರುವುದು ‘ವೈದ್ಯರ ಶಿಫಾರಸು’ ಎನ್ನುವ ವ್ಯಾಪಾರೀ ಘೋಷಣೆ. ಇದು ವಿಜ್ಞಾನದ ಯುಗ. ನಾಗರಿಕ ಮಾನವನ ದಿನನಿತ್ಯದ ಆಲೋಚನೆ, ಮಾತು ಮತ್ತು ಕೆಲಸ ಎಲ್ಲದರ ತೀರ್ಮಾನ ಹಾಗೂ ಪೂಜ್ಯ ಭಾವಗಳನ್ನು ವಿಜ್ಞಾನವು ಸರ್ವೋಚ್ಚವಾಗಿ ಆಳುತ್ತದೆ.
ಒಂದು ಕಾಲದಲ್ಲಿ ಬ್ಯಾಬಿಲೋನಿಯರು ಮತ್ತು ಗ್ರೀಕರ ಜೀವನದ ಮೇಲೆ ದಿವ್ಯವಾಣಿ, ಶಕುನ ಹಾಗೂ ನಕ್ಷತ್ರಗಳು ಹೇಗೆ ಪ್ರಭಾವ ಬೀರುತ್ತಿದ್ದವೋ ಹಾಗೆ. ಉದಾಹರಣೆಗೆ ಶಿಕ್ಷಣ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆಗಳಿಗೆ ಹೇರಳವಾಗಿ ಹಣ ವಿನಿಯೋಗವಾಗುತ್ತಿದೆ.
ಕಲಿಕೆಯ ಉಳಿದ ಎಲ್ಲಾ ರಂಗಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ವಾಸ್ತವದ ಸಂಗತಿ ಏನೆಂದರೆ, ಅತ್ಯಂತ ಉನ್ನತ ಸ್ಥಾನದಲ್ಲಿರುವ ವೈಜ್ಞಾನಿಕ ಮನಸ್ಸುಗಳು ಅತ್ಯಂತ ಸರಳವಾದ ಇಂಗ್ಲಿಷ್ನಲ್ಲಿ ವರದಿಗಳನ್ನು ಬರೆಯಲಾರವು ಎನ್ನುವುದನ್ನು ಬಹುತೇಕ ನಿಗಮಗಳು ಮನಗಂಡಿವೆ.
ಪ್ರೊ. ಜೇಮ್ಸ್ ಎಚ್. ಬಿಲ್ಲಿಂಗ್ಟನ್ ಅವರು ಬರೆದ ‘ದಾರ್ಶನಿಕರ ಹೃದಯಬಡಿತ ಸೋತಿದೆ’ ಎನ್ನುವ ಲೇಖನದಲ್ಲಿ ಹೀಗೆ ಹೇಳುತ್ತಾರೆ. ಸರ್ಕಾರ ಸಂಶೋಧನೆಗಾಗಿ ಬಿಡುಗಡೆ ಮಾಡಿದ ನಿಧಿಯಲ್ಲಿ ಪ್ರತಿ ಸಾವಿರ ಡಾಲರ್ನಲ್ಲಿ ಒಂದು ಭಾಗ ಮಾನವೀಯತೆಯ ಅಧ್ಯಯನಕ್ಕೆ ವಿನಿಯೋಗವಾಯಿತು.
ಸಂಶೋಧನೆ ಮತ್ತು ಬೋಧನೆಗಾಗಿ ಖಾಸಗಿ ಪ್ರತಿಷ್ಠಾನಗಳು ನೀಡಿದ ಅತ್ಯಲ್ಪ ಮೊತ್ತದಲ್ಲಿ ಮಾನವೀಯತೆ ಅಧ್ಯಯನಕ್ಕಿಂತಲೂ ವಿಜ್ಞಾನಕ್ಕಾಗಿ 23 ಪಟ್ಟು ಹಣ ವಿನಿಯೋಗವಾಯಿತು. ಇವೆಲ್ಲವೂ ದೊಡ್ಡ ವ್ಯತ್ಯಾಸಗಳು. ವಿಜ್ಞಾನವು ಉಳಿದೆಲ್ಲ ಅಧ್ಯಯನಗಳು ಹಾಗೂ ಉದ್ಯೋಗಗಳಿಗಿಂತ ಹೆಚ್ಚು ಮೌಲ್ಯಯುತವಾದದ್ದು ಎನ್ನುವ ತೀರ್ಮಾನಕ್ಕೆ ಬರುವುದು ಆತುರದ ನಿರ್ಧಾರ ಎನಿಸುವುದಿಲ್ಲ.
ವಿಜ್ಞಾನವು ತನಗೆ ತಾನೇ ಕೆಟ್ಟದ್ದೂ ಅಲ್ಲ ಒಳ್ಳೆಯದೂ ಅಲ್ಲ. ಅದು ಕತ್ತಿಯಂತಹ ಒಂದು ಸಾಧನ. ಕ್ಯಾನ್ಸರ್ ಗಡ್ಡೆಯನ್ನು ತೆಗೆಯುವ ಬದಲು ಕುತ್ತಿಗೆಯನ್ನೇ ಕೊಯ್ಯುವುದಕ್ಕೆ ಇದನ್ನು ಬಳಸಿದ್ದೇ ಆದಲ್ಲಿ, ಅದರ ದೋಷ ಇರುವುದು ಅದನ್ನು ನಿಯಂತ್ರಿಸುತ್ತಿರುವ ಮನುಷ್ಯರ ಹೃದಯ ಹಾಗೂ ಮನಸ್ಸುಗಳಲ್ಲಿ.
ವಿಜ್ಞಾನವು – ಗ್ರಹಿಸುವಿಕೆಯ ಹಾಗೂ ಹೊಂದಾಣಿಕೆ ಇಲ್ಲವೇ ನಿಯಂತ್ರಣದ ಯತ್ನವಾಗಿದ್ದು ಐಹಿಕ ಪ್ರಕೃತಿಯು – ಕೆಲವು ಉತ್ತಮ ದಕ್ಷತೆಗಳನ್ನು ಒಳಗೊಂಡಿದೆ. ರೋಗ ನಿಯಂತ್ರಣ, ಸಂಪರ್ಕ, ಶಾಖ, ಸಾರಿಗೆ ಇವುಗಳನ್ನು ನೆತ್ತಿಯ ಮೇಲಿಟ್ಟು ಹತ್ಯೆಯ ವಿಚಾರಣೆ ನಡೆಸುವುದು ಅವಿವೇಕದ ಖಂಡನೆಯೇ ಸರಿ.
ಇದೇ ವೇಳೆ, ಮನುಷ್ಯ ಪ್ರಜ್ಞೆಯ ನಿಜವಾದ ಬೆಳವಣಿಗೆಯ ಸ್ಥಿತಿಯಲ್ಲಿ ಇದು ಬದುಕಿಗೆ ಒಂದು ಅರ್ಥ ನೀಡುವ ಕೊಡುಗೆಯನ್ನು ಕೊಟ್ಟಿದೆ ಎಂದು ಹೊಗಳುವುದೂ ಕೂಡ ಅಷ್ಟೇ ಅವಿವೇಕದಿಂದ ಕೂಡಿದ್ದು, ಇದು ಕಬ್ಬಿಣದ ಶ್ವಾಸಕೋಶ ಹೊಂದಿದವನಿಗೆ ನೊಬೆಲ್ ಬಹುಮಾನ ಕೊಟ್ಟಂತೆ.
ಜೀವನದ ಗುಣಮಟ್ಟ:
ಪ್ರತಿಯೊಂದು ಜೀವವೂ ಸಾಯಲೇಬೇಕು. ವಿಶ್ವವೂ ಕೂಡ ಜೀವಿಸುತ್ತದೆ ಹಾಗೂ ಸಾಯುತ್ತದೆ – ಹಾಗಾಗಿ ದೀರ್ಘವಾಗಿ ಬದುಕುವುದು ಅಂತ್ಯದ ವಿರುದ್ಧ ಮಾಡಿಕೊಳ್ಳುವ ವಿಮೆ ಅಲ್ಲ. “ಯಾವಾಗ ಬರಬೇಕೋ ಆಗ ಸಾವು ಬರುತ್ತದೆ. ಹಾಗಾಗಿ, ಶ್ರೇಷ್ಠ ವಿಜ್ಞಾನಿಗಳಿಗೂ ಕೂಡ ತನ್ನ ಅವಧಿಗಿಂತಲೂ ಹೆಚ್ಚಾಗಿ ಬದುಕನ್ನು ಹಿಡಿದಿಟ್ಟುಕೊಂಡಿರಲು ಸಾಧ್ಯವಾಗಿಲ್ಲ.
ಕೆಲವು ವರ್ಷಗಳ ಹಿಂದೆ ಭಾರತದ ಸುಪ್ರಸಿದ್ಧ ಭೌತವಿಜ್ಞಾನಿ ಒಂದು ವಿಮಾನ ಅಪಘಾತದಲ್ಲಿ ಮೃತಪಟ್ಟರು. ವಿಜ್ಞಾನದ ಎಲ್ಲ ಆವಿಷ್ಕಾರಗಳು (ವಿಮಾನವನ್ನು ಸೇರಿಸಿಕೊಂಡು) ಅವರ ನೆರವಿಗೆ ಬರಲಿಲ್ಲ ಎನ್ನುವುದನ್ನು ಸಾಬೀತು ಪಡಿಸಿದವು.
ಹಾಗಾದರೆ ನಾವು ದುಡಿಯುವುದು ಸಾವನ್ನು ನಿಯಂತ್ರಿಸುವುದಕ್ಕಲ್ಲ. ಆದರೆ ನಮ್ಮ ಬದುಕಿನಲ್ಲಿ ಕೆಲವು ನಿಜವಾದ ಗುಣಗಳನ್ನು ತುಂಬಿ, ಅದನ್ನು ಬಳಸಿಕೊಂಡು ಸುಖವಾಗಿ ಮತ್ತು ವಿವೇಚನೆಯಿಂದ ಬದುಕುವುದಕ್ಕಾಗಿ. ಇದಿಲ್ಲದೇ ಹೋದರೆ, ಎಷ್ಟೇ ಉತ್ತಮವಾಗಿ ಬದುಕಿದರೂ ಅದು ಬದುಕಿದ್ದೂ ಸತ್ತಂತೆ.
ಜಗತ್ತಿನ ಪವಿತ್ರ ಗ್ರಂಥಗಳಾದ ಬೈಬಲ್, ಕುರಾನ್, ಭಗವದ್ಗೀತೆ ಮೊದಲಾದವುಗಳ ಪ್ರಕಾರ, ಮನುಷ್ಯ ಜೀವನವು ಒಂದು ಮಹೋನ್ನತ ಪರಿಪೂರ್ಣತೆಯನ್ನು ಗಳಿಸಬೇಕಾದರೆ ದೇವರೊಂದಿಗೆ ಮುಖಾಮುಖಿಯಾಗಬೇಕು. ಈ ಮುಖಾಮುಖಿಯು ಅವನಲ್ಲಿ ಶರಣಾಗತಿ, ಪ್ರೀತಿ ಹಾಗೂ ಚಿರಂತನ ಸಂಬಂಧವನ್ನು ನೀಡುತ್ತದೆ.
ಚಿರಂತನ ಸಂಬಂಧ ಎಂದರೆ, ಅಸ್ತಿತ್ವವನ್ನು ಮತ್ತು ಭಗವಂತನ ಪ್ರೀತಿಯನ್ನು ಜಾಗೃತಗೊಳಿಸುವುದು. ಜೀವಿಯು ಐಹಿಕ ಜಗತ್ತಿನ ಬಂಧನ ಹಾಗೂ ಗುರಿಗಳಿಂದ ಮುಕ್ತವಾದರೂ, ದೇಹ ಮತ್ತು ಅದರ ಪಾಲಕನ ನಾಶ ಪ್ರಾಥಮಿಕವಾದದ್ದು.

ಗುರಿಯಿಲ್ಲದ ಬದುಕು, ಗುಣಮಟ್ಟವಿಲ್ಲದ ಜೀವನ, ಮೌಲ್ಯರಹಿತ ಬದುಕನ್ನು ಗುರುತಿಸುವುದು ಒಂದು ಸರಳ ವಿಷಯವಾಗಿ ತೋರುತ್ತದೆ. ಅದು ಯಾಂತ್ರಿಕ ಬದುಕು, ರೋಬಾಟ್ ಜೀವನ. ಆಧುನಿಕ ಯಂತ್ರಗಳ ಸಂಕೀರ್ಣದಲ್ಲಿ ಮಾನವನ ಮನಸ್ಸನ್ನು ಒಂದು ನಿರ್ದಿಷ್ಟ ಸ್ಥಿತಿಗೆ ಬಂಧಿಸುವ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲೆಗಳಿರುವುದು ಬದುಕಿಯೂ ಸತ್ತಂತಿರುವವರಿಗಾಗಿ ಆಧುನಿಕ ಶಾಲಾ ವ್ಯವಸ್ಥೆಯಲ್ಲಿ ವಿಕಾಸವಾದಕ್ಕೆ ಬದಲಾಗಿ ದೇವರನ್ನಿಟ್ಟು ಆ ಮೂಲಕ ಮಾನವನ ಚಿಂತನಾ ಪ್ರಕ್ರಿಯೆಯು ಕೇವಲ ಭ್ರಮಿಷ್ಠರನ್ನು ತಯಾರಿಸುತ್ತದೆ ಎನ್ನುವುದನ್ನು ಸಾಬೀತು ಪಡಿಸಲು ನಾನು ಪ್ರಯತ್ನಿಸಿದ್ದೇನೆ.
ಆದರೆ, ಒಂದು ದೋಷವೂ ಇದೆ. ಮಾನವ ಭ್ರಮಿಷ್ಠನಾಗಿ ನಟಿಸಲು ಬಯಸುವುದಿಲ್ಲ. ಅದರ ಪರ್ಯಾಯಗಳಲ್ಲಿ ಬಂಡಾಯ, ಭ್ರಷ್ಟಾಚಾರ ಹಾಗೂ ನಮ್ಮ ನಾಗರಿಕತೆಯನ್ನು ಹಾಳುಗೆಡಹುವ ಅಂಶಗಳಿವೆ.
ವಿಕಾಸವಾದ ಮತ್ತು ಸಮಾಜ:
ದೇವರನ್ನು ಸಂತುಷ್ಟಗೊಳಿಸುವುದಕ್ಕೆ ಬದಲಾಗಿ ಆಧುನಿಕ ಮಕ್ಕಳಿಗೆ ‘ವಿಕಾಸವಾದವನ್ನು ಸಂತುಷ್ಟ ‘ ಗೊಳಿಸುವ ಹಾಗೂ ಅದು ಹೇಗಿವೆಯೋ ಹಾಗೇ ಸಂತುಷ್ಟಗೊಳಿಸುವುದನ್ನು ಕಲಿಸಲಾಗುತ್ತಿದೆ. ಕುರುಡು ಅವಕಾಶದಿಂದ ಉಂಟಾದ ಅರಾಜಕತೆಯಿಂದ ಮಾನವ ಕುಲವನ್ನು ಹೊರಹಾಕಲಾಗಿದೆ ಎಂದು ಅವರಿಗೆ ಕಲಿಸಲಾಗುತ್ತದೆ.
(ಅಥವಾ ‘ನೀನು ಬಯಸುವ ದೇವರು’ ಎಂದು ಶಿಕ್ಷಕರು ನಮಗೆ ಹೇಳುತ್ತಿದ್ದರು. ಅಮೆರಿಕದ ಪಬ್ಲಿಕ್ ಶಾಲೆಗಳು ಇನ್ನೂ ಅದನ್ನೇ ಅನುಸರಿಸುತ್ತಿವೆಯೇ ಎನ್ನುವುದು ನನಗೆ ತಿಳಿಯದು) ಕುರುಡು ಅವಕಾಶವು ನಮ್ಮನ್ನು ಸುಲಭವಾಗಿ ಮತ್ತೆ ಹೊರಕ್ಕೆಸೆಯುತ್ತದೆ ಮತ್ತು ಉಳಿಯುವ ಅನಿವಾರ್ಯತೆಯಲ್ಲಿ ನಿಸ್ಸಂಶಯವಾಗಿ ನಡೆಸುವ ನಿರ್ದಯ ಹೋರಾಟದಲ್ಲಿ ಎದುರಾಗುವ ಕುರುಡು ಅವಕಾಶ ಮತ್ತು ಉಳಿದ ಜೀವಿಗಳು ಅದೇ ಕಾಲದಲ್ಲಿ ಒಡ್ಡುವ ಸ್ಪರ್ಧೆಯಿಂದ ಅವುಗಳನ್ನು ಸೋಲಿಸುವುದಕ್ಕೆ ಅಗತ್ಯವಾಗಿ ಬೇಕಾದ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ.
ಮಾನವಕುಲ ಈ ಸಮಾಜವನ್ನು ನಿರ್ಮಿಸಿದೆ ಮತ್ತು ಸಮಾಜವು ಶಾಶ್ವತವಾಗಿ ಮುನ್ನಡೆಯುವುದಕ್ಕೆ ಬೇಕಾದ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ವಿಕಾಸವಾದ ನಡೆದೇ ಇಲ್ಲ ಎನ್ನುವ ರೀತಿಯಲ್ಲಿ ನಮಗೆ ಕಲಿಸಲಾಗುತ್ತದೆ.
ಈ ಅರ್ಥದಲ್ಲಿ ಸಮಾಜವನ್ನು ಹೀಗೆ ತಿಳಿಯಬಹುದು. ಒಂದು ಸಮುದಾಯದ ಇಲ್ಲವೇ ಜೀವರಾಶಿಯ ಬದುಕನ್ನು ಬೆಳೆಸುವುದಕ್ಕೆ ಬೇಕಾದ ರಚನೆ ಹಾಗೂ ಸಮಾನ ಮನಸ್ಕ ಜೀವಿಗಳನ್ನು ಬೆಸೆಯುವ ಕೆಲಸ ನಡೆಯುತ್ತದೆ. ಉಳಿದೆಲ್ಲ ಜೀವಿಗಳ ಶಕ್ತಿ ಕುಂದಿಸುವ ಇಲ್ಲವೇ ನಿರ್ನಾಮಗೊಳಿಸುವ ಕ್ರಿಯೆ ಪ್ರತ್ಯಕ್ಷವಾಗಿಯೇ ನಡೆಯುತ್ತದೆ.
ಇದೊಂದು ಮೋಸದಿಂದ ಕೂಡಿದ ಪಾಶವೀಕೃತ್ಯದ ಪರಿಕಲ್ಪನೆ. ಹಾವಳಿಯನ್ನು ಉಂಟುಮಾಡುವ ವ್ಯಾಧಿ ಇಲ್ಲವೇ ಇರುವೆಗಳ ಸೈನ್ಯದ ದಾಳಿಗಿಂತಲೂ ಇದು ವಸ್ತುಸ್ಥಿತಿ ಹಾಗೂ ತತ್ತ್ವ ಎರಡರಲ್ಲಿಯೂ ಅತ್ಯಂತ ಕ್ರೂರವಾದದ್ದು. ಇರುವೆಯೊಂದರ ನರಳಾಟದ ಹಾಗೆ ಇದು ತಮೋಗುಣ ಆಧಾರವಾದದ್ದು.
ಅದಕ್ಕಿಂತಲೂ ಗಾಢವಾದ ಪ್ರಜ್ಞೆಯಿಂದಲ್ಲ, ಏಕೆ೦ದರೆ ಇರುವೆ ಕನಿಷ್ಠ ಪಕ್ಷ ಇರುವೆಯಂತೆಯೇ ವರ್ತಿಸುತ್ತದೆ. ಮಾನವ ಪ್ರಜ್ಞೆಯು ವಿಕಾಸವಾದದ ಶಾಲೆಯಿಂದ ‘ಪದವಿ’ ಗಳಿಸಿ ನಿತ್ಯಗಟ್ಟಳೆಯ ಕೆಲಸದ ಆಧ್ಯಾತ್ಮಿಕ ಜಗತ್ತಿನ ಜೀವನಕ್ಕೆ ಬರುವಂತಹ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅದನ್ನು ಈ ರೀತಿ ಬಳಸಿಕೊಳ್ಳದೇ ಹೋದಲ್ಲಿ ಅವನು ಮಾನವನೇ ಅಲ್ಲ.
ಇಲ್ಲಿ ಆ ಶ್ರೇಷ್ಠತಮೋಗುಣವು, ಇತರ ಜೀವಿಗಳನ್ನು ಕೊಲ್ಲುವ ಅಥವಾ ಪ್ರಕೃತಿಯ ಅತ್ಯಂತ ತೊಡಕಿನ ಕಾರ್ಯಗಳನ್ನು ನಿಯಂತ್ರಿಸಲು ಪ್ರಯತ್ನಿಸುವ ಯೋಚನೆಯಾಗಿ ಅವನ ಅಥವಾ ಅವನ ಕುಲದ ಇಲ್ಲವೇ ಜೀವರಾಶಿಯ ಶಾಶ್ವತ ಅಸ್ತಿತ್ವಕ್ಕೆ ದಾರಿ ಮಾಡಿಕೊಡುತ್ತದೆ. ಇದು ರೇಡಿಯೋದಲ್ಲಿ ಟಿ.ವಿ.ಚಾನೆಲ್ ಹುಡುಕುವ ಪ್ರಯತ್ನವೇ ಆಗುತ್ತದೆ.
ಈ ದೇಹವು ಭೌತಿಕ ಪ್ರಕೃತಿಯ ಉತ್ಪನ್ನ. ಪ್ರಕೃತಿಯ ಮೊದಲ ನಿಯಮ ಬದಲಾವಣೆ. ಆದ್ದರಿಂದ ಒಂದಲ್ಲ ಒಂದು ರೂಪದಲ್ಲಿರುವ ದೇಹವು ಸಾಯಬೇಕು. ಆತ್ಮ ಅಥವಾ ಪ್ರಜ್ಞೆಯೂ ಚಲಿಸುತ್ತಲೇ ಇರುತ್ತದೆ. ಏಕೆಂದರೆ ಶುದ್ಧ ಸ್ವರೂಪದಲ್ಲಿರುವ ಈ ಪ್ರಜ್ಞೆಯು ಪ್ರಕೃತಿಯಲ್ಲಿ ಸ್ವತಂತ್ರವಾಗಿ ಇರುತ್ತದೆ.
ಅಮೃತತ್ವ:
ಜೀವನವನ್ನು ಬೆಳೆಸುವ ಮತ್ತು ಸಾವನ್ನು ಮುಂದಕ್ಕೆ ಹಾಕುವ ಇಂತಹ ಪ್ರಯತ್ನಗಳು, ಎಲ್ಲ ಬಗೆಯ ಜೀವಿಗಳಲ್ಲೂ ಕಂಡುಬರುವ ಅಮರತ್ವದ ಆಕರ್ಷಣೆಯ ಅದಮ್ಯ ಪ್ರವೃತ್ತಿಯ ಪ್ರತಿಬಿಂಬಗಳಾಗಿವೆ. ಇದಕ್ಕೆ ಮುಖ್ಯ ಕಾರಣ ಎಲ್ಲ ಬಗೆಯ ಜೀವಿಗಳಲ್ಲೂ ಇರುವ ಆತ್ಮದ ಚಿರಂತನ ಪ್ರಕೃತಿ.
ರೂಪ ತಾತ್ಕಲಿಕವಾದದ್ದು. ಆದರೆ ಆತ್ಮವಲ್ಲ. ತಮೋಗುಣದಲ್ಲಿ ಅದು ತನ್ನ ಮೂಲಸ್ಥಾನಕ್ಕೆ ಮರಳುವ ಪ್ರಯತ್ನವನ್ನು ಮಾಡುತ್ತಿರುತ್ತದೆ. ತನ್ನ ತಮೋಗುಣದಲ್ಲಿ ಉಳಿಯುವುದಕ್ಕಾಗಿ ಹೋರಾಟ, ಉಳಿದ ಎಲ್ಲ ಬಗೆಯ ಜೀವಿಗಳೊಂದಿಗೆ ಸ್ಪರ್ಧೆ ಸತತವಾಗಿ ನಡೆದು ಶಕ್ತಿ, ಏಕಾಗ್ರತೆ ಮತ್ತು ಜೀವಿಯ ಭರವಸೆಗಳನ್ನು ಸಾಯುವವರೆಗೂ ವ್ಯಯ ಮಾಡುತ್ತದೆ. ಮತ್ತೊಂದು ಪ್ರಯತ್ನಕ್ಕಾಗಿ ಹೊಸ ದೇಹವನ್ನು ಪಡೆಯುತ್ತದೆ.
‘ವಿಕಾಸವಾದವನ್ನು ತೃಪ್ತಿ’ ಪಡಿಸುವ ಪ್ರಯತ್ನದಲ್ಲಿನ ತೊಡಕುಗಳಲ್ಲಿ – ಅಂದರೆ, ಒಬ್ಬನ ಅಭಿವೃದ್ಧಿಯೆಂದರೆ ಒಂದು ಕುಲದ ಅಭಿವೃದ್ಧಿ. ವೈಯಕ್ತಿಕವಾಗಲ್ಲದಿದ್ದರೂ ಉಳಿದುಕೊಂಡು ಹೋಗುವುದು – ಯಾವುದು ಕೆಲಸಕ್ಕೆ ಬರುತ್ತದೆ ಮತ್ತು ಯಾವುದು ದೀರ್ಘಕಾಲ ಬರುವುದಿಲ್ಲ ಎನ್ನುವ ವಿಚಾರ ಯಾರಿಗೂ ತಿಳಿದಿಲ್ಲ.
ಅಂತಹ ತಳಹದಿಯ ಮೇಲೆ ನೈತಿಕತೆಯನ್ನು ನಿರ್ಮಿಸಲು ಹಲವಾರು ಆಧುನಿಕ ನೀತಿ ಬೋಧಕರು ಪ್ರಯತ್ನಿಸಿದ್ದಾರೆ. ಆದರೆ, ವಸ್ತುಸ್ಥಿತಿ ಏನೆಂದರೆ, ವಿಕಾಸವಾದ ಒಂದು ತತ್ತ್ವವಾಗಿಯೇ ಉಳಿದಿದೆ. ಅದರ ಹಲವು ವಿವರಗಳು ಸಂದಿಗ್ಧವಾಗಿಯೇ ಉಳಿದು ದೃಢವಾಗಿ ಮತ್ತು ಸುಸಂಗತವಾಗಿ ನಡೆಸುವ ಪ್ರತಿಯೊಂದು ಪ್ರಯತ್ನವೂ ನಿಷ್ಫಲವಾಗುತ್ತದೆ.
ಲಿಕಾಮ್ಟೆಡಿ ನೂಯೆ ಪಾಪಕ್ಕೆ ನೀಡಿದ ‘ವಿಕಾಸವಾದದಿಂದ ಇದನ್ನು ತೆಗೆದು ಹಾಕು’ ಎನ್ನುವ ಹೊಸ ನುಡಿಗಟ್ಟಿನಂತೆ ಮಾನವ ಕುಲದಲ್ಲಿ ಯಾವ ರೀತಿಯ ಚಟುವಟಿಕೆಗಳು ನಡೆಯುತ್ತವೆ ಎನ್ನುವುದು ಯಾರಿಗೂ ತಿಳಿಯದು. ಹಾಗೆಯೇ ಯಾವ ಚಟುವಟಿಕೆಯೂ ಇದನ್ನು ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ ಎನ್ನುವುದೂ ತಿಳಿಯದು.
ಇಲ್ಲಿ ಯಾವುದೇ ತಿಳಿದ ಮೂಲ ತತ್ತ್ವಗಳಿಲ್ಲ, ಜೀವೋತ್ಪತ್ತಿಯ ತತ್ತ್ವಗಳೆಲ್ಲವೂ ತಿಂಗಳಿಗೊಮ್ಮೆ ಬದಲಾಗುತ್ತವೆ. ಹಾಗೆಯೇ ನೈತಿಕತೆಯನ್ನು ಸ್ಥಾಪಿಸುವ ಪ್ರಯತ್ನವೂ ಕೂಡ ಅದೊಂದೇ ಏಕೆ, ಎಲ್ಲ ವ್ಯವಸ್ಥೆಗಳೂ ಕೂಡ ಶೂನ್ಯಕ್ಕೆ ಬಂದು ನಿಲ್ಲಬೇಕು.

ಗುರಿಯನ್ನು ತಲಪಲು ಹೇಗೆ ನಡೆದುಕೊಳ್ಳಬೇಕು ಎನ್ನುವುದೇ ನೈತಿಕತೆ. ಆದರೆ, ಗೊತ್ತಿಲ್ಲದ, ಅನಿರ್ದಿಷ್ಟ, ಅಪ್ರಯತ್ನಪೂರ್ವಕ, ಅನಿಶ್ಚಿತ ಹಾಗೂ ಸ್ನೇಹಪೂರ್ವಕವಾಗಿಲ್ಲದ ಗುರಿ ಹೊಂದಿದ್ದರೆ, ಅಂತಹ ನೈತಿಕತೆಗೆ ಇರುವ ಉದ್ದೇಶವಾದರೂ ಏನು ? ಅಲ್ಲದೆ ನೈತಿಕತೆ, ಇಲ್ಲದ, ಪರಸ್ಪರ ಒಪ್ಪಿಕೊಳ್ಳುವಂತಹ ಆದರ್ಶ, ನಡತೆ ಇಲ್ಲದ ಸಮಾಜ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ನಮಗೆ ಹೇಳಿದಂತೆ ಸಮಾಜವು “ವಿಕಾಸವಾದವನ್ನು ತೃಪ್ತಿ” ಪಡಿಸುವ ಮೂಲಕ ನಾವು ಉಳಿಯುವುದಕ್ಕೆ ಸಹಕಾರಿಯಾಗುತ್ತದೆ.
(ಹಾಗಾಗಿ, ಭೌತಿಕವಾಗಿ ನೀತಿವಂತರನ್ನಾಗಿಸುವ ಇಡೀ ಯೋಜನೆಯೇ ಒಂದು ಅಸಂಗತ ದೋಷದಿಂದ ಕೂಡಿದ್ದು, ಇದರಿಂದಾಗಿ ನಾವು ದ್ವಂದ್ವ ಬಂಧನಕ್ಕೆ ಒಳಗಾಗಿದ್ದೇವೆ. ವಿಕಾಸವಾದ ಏನನ್ನು ಬಯಸುತ್ತದೆ ಎನ್ನುವುದನ್ನು ತಿಳಿಯದೆ ನಾವು “ವಿಕಾಸವಾದವನ್ನು ತೃಪ್ತಿ”ಪಡಿಸುವ ಪ್ರಯತ್ನದಲ್ಲಿದ್ದೇವೆ.)
ವಿಕಾಸವಾದದ ಪ್ರಕ್ರಿಯೆ ಮತ್ತು ತತ್ತ್ವ:
ವಿಕಾಸವಾದ ಮತ್ತು ಅದರ ಗುರಿ ಹಾಗೂ ಅಂತ್ಯ ಇವುಗಳ ಪ್ರಕ್ರಿಯೆ ತಪ್ಪೆಂದು ಸ್ಥಾಪಿಸಲು ಸಾಧ್ಯವಿಲ್ಲ. ವಸ್ತುಸ್ಥಿತಿ ಏನೆಂದರೆ, ವಿಕಾಸವಾದದ ಕಲ್ಪನೆಯನ್ನು ಅತ್ಯಂತ ಪ್ರಾಚೀನ ವೈದಿಕ ಸಾಹಿತ್ಯವಾದ ಪದ್ಮಪುರಾಣದಲ್ಲಿ ಕಾಣಬಹುದಾಗಿದೆ.
ಪದ್ಮಪುರಾಣದಲ್ಲಿ ಉಲ್ಲೇಖಿಸಿರುವಂತೆ ಈ ಜಗತ್ತಿನಲ್ಲಿ ಜೀವಿಯು ಮೊದಲು ಜಲಚರಗಳಿಂದ ಹುಟ್ಟಿ ಆ ಬಳಿಕ ನೆಲದ ಮೇಲಿನ ಸಸ್ಯಗಳಾಗಿ ಹುಟ್ಟಿ, ಅನಂತರ ಸರೀಸೃಪಗಳು, ಕೀಟಗಳು, ಹಕ್ಕಿಗಳು, ಕ್ರೂರಮೃಗಗಳಾಗಿ ಅಂತಿಮವಾಗಿ ಮಾನವ ರೂಪ ಪಡೆಯಿತು. ಕೊನೆಗೆ ಅತ್ಯಂತ ಅನಿಶ್ಚಿತಮತಿ ವಿದ್ವಾಂಸರೂ ಕೂಡ ಪದ್ಮ ಪುರಾಣವು ಡಾರ್ವಿನ್ಗಿಂತಲೂ ನೂರಾರು ವರ್ಷ ಮೊದಲೇ ಇತ್ತು ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ.
ಇದೊಂದು ಆಶ್ಚರ್ಯವನ್ನುಂಟುಮಾಡುವ ವೈಜ್ಞಾನಿಕ ಸೂತ್ರವಾಗಿದೆ. ಬಹಳ ಹಿಂದೆ ಅಪೌರುಷೇಯ ಯಾವುದನ್ನು ಹೇಳಿದೆಯೋ ಅದನ್ನೇ ಅನುಸರಿಸಿ ಹೇಳುವ ಕೆಲಸವನ್ನು ವೈಜ್ಞಾನಿಕ ಸೂತ್ರ ಮಾಡಿತು. ವೇದಗಳ ಪ್ರಕಾರ ವಿಕಾಸವಾದ ಎನ್ನುವುದು ದೇಹದಿಂದ ದೇಹಕ್ಕೆ ಕ್ರಮ ಕ್ರಮವಾಗಿ ಪ್ರಜ್ಞೆಯು ಬೆಳೆಯುತ್ತಾ ಹೋಗುತ್ತದೆ.
ಈ ಪ್ರಜ್ಞೆಯು ನಾಗರಿಕ ಮಾನವ ಹಂತವನ್ನು ತಲಪುವವರೆಗೂ ಬೆಳೆಯುತ್ತಲೇ ಇರುತ್ತದೆ. ಪ್ರಜ್ಞೆಯ ಬೆಳವಣಿಗೆ ಎಂದರೆ, ಅದು ಹೆಚ್ಚು ಸಂಕೀರ್ಣವಾದದ್ದು. ಕೇವಲ ಭಿನ್ನವಾದದ್ದಲ್ಲ. ಒಂದು ಮರ ಸೂರ್ಯನ ತಾಪ ಹಾಗೂ ರಾತ್ರಿಯ ತಂಪನ್ನು ಅನುಭವಿಸಿದಂತೆ ಓಡುವ ಇಲ್ಲವೇ ನೆಗೆಯುವ ಅನುಭವವನ್ನು ಪಡೆಯಲಾರದು.
ಆದರೆ ಮಾನವ, ಮರಕ್ಕೆ ಗೊತ್ತಿರುವ ಎಲ್ಲವನ್ನು ಮತ್ತು ಅದಕ್ಕಿಂತ ಹೆಚ್ಚಿನದನ್ನು ತಾತ್ವಿಕವಾಗಿ ಅನುಭವಿಸುತ್ತಾನೆ. ಈ ರೀತಿಯಲ್ಲಿ ಪರಿಪೂರ್ಣ ಪ್ರಜ್ಞೆ ಅಥವಾ ಪ್ರಜ್ಞೆಯ ಬೆಳವಣಿಗೆಯ ಪೂರ್ಣ ವಿಕಸನ ಅಂದರೆ ಸಂಪೂರ್ಣವಾಗಿ ಎಲ್ಲದರ ಅನುಭವವೇ ಪರಮ ಸತ್ಯ. ಆ ಪರಮ ಸತ್ಯವೇ ದೇವರು.
ಹಾಗಾಗಿ, ಜೀವಿಯ ವಿಕಾಸವಾದದ ಗುರಿ, ಹಲವಾರು ಜನ್ಮಗಳ ಅನುಭವಗಳ ಬಳಿಕ ದೇಹವು (ಪದ್ಮ ಪುರಾಣವು 84 ಲಕ್ಷ ಜೀವರಾಶಿಗಳನ್ನು ಹೆಸರಿಸುತ್ತದೆ) ತನ್ನ ನೈಜತೆಯ ಅರಿವನ್ನು ಪಡೆದುಕೊಂಡು ದೇವೋತ್ತಮನಾದ ಕೃಷ್ಣನ ಜತೆಗಿನ ಅತೀಂದ್ರಿಯ ಸ್ಥಿತಿಯನ್ನು ತಿಳಿದುಕೊಳ್ಳುವುದು.
ಈ ದಿಕ್ಕಿನ ಬೆಳವಣಿಗೆಯೇ “ಸ್ವಾಭಾವಿಕವಾದದ್ದು” ಮಾನವ ಜೀವನದ ಪ್ರಗತಿಯ ರೂಪದಲ್ಲಿ ಇದು ನಿಸ್ಸಂಶಯವಾದ ಮತ್ತು ಸಂಕಲ್ಪಿತ ದಾರಿ. ಉಳಿದೆಲ್ಲ ಜೀವ ರೂಪಗಳೂ ಕೂಡ ಶಾಲೆಗಳಲ್ಲಿ ಒಂದು ವರ್ಷದಿಂದ ಇನ್ನೊಂದು ವರ್ಷಕ್ಕೆ ಸಾಗುವುದಕ್ಕೆ ಬೇಕಾದ ಮೆಟ್ಟಿಲುಗಳು. ಉನ್ನತ ಪದವಿ ಪಡೆದ ಮೇಲೆ ಅವನು ಅಲ್ಲೇ ಉಳಿಯಲೂಬಾರದು ಇಲ್ಲವೇ ಮತ್ತೆ ಹಿಂದಕ್ಕೆ ಹೋಗಲೂ ಬಾರದು. ಮುಂದಿನ ಗುರಿ ಶಾಲೆಯನ್ನು ಬಿಟ್ಟು ಹೊರಬರುವುದು.
ಮಾನವನ ಉದ್ದೇಶ :
ಮಾನವ ಜೀವನದಲ್ಲಿರುವ ಈ ಪ್ರೌಢ ಪ್ರಜ್ಞೆಯಿಂದಾಗಿ ಅವನಲ್ಲಿ ಉಂಟಾಗುವ ಸಹಜ ‘ಸ್ವಭಾವ’ವೆಂದರೆ, ಉಳಿಯುವಿಕೆಗಾಗಿ ನಡೆಸುತ್ತಿರುವ ಹೋರಾಟದಿಂದ ಹೊರಬರುವ ಮಾರ್ಗವನ್ನು ಹುಡುಕುವುದು. ಅಂದರೆ ಒಗಟಾಗಿರುವ ಸಾವಿಗೆ ವಿರುದ್ಧವಾಗಿ ಅಮರತ್ವವನ್ನು ಪಡೆಯುವ ಪರಿಹಾರ ಮಾರ್ಗ ಹುಡುಕುವುದು.
ಬಹುತೇಕ ತತ್ತ್ವಜ್ಞಾನಿಗಳು ಮಾಡುವ ಹಾಗೆ ಯಾರಾದರೂ ಅರಿವಿನ ಈ ಕತ್ತಿಯ ಮೊನೆಯನ್ನು ಹರಿತವಿಲ್ಲದಂತೆ ಮಾಡಿದ್ದೇ ಆದಲ್ಲಿ ಅವರು ದಿಕ್ಕು ತಪ್ಪುತ್ತಾರೆ. ಅದೇ ವೇಳೆ ಸಂತಸವನ್ನು ಪಡೆಯುತ್ತಾರೆ. ಸಂತಸ ಎಂದರೆ ಈಡೇರಿಕೆ.
ಮಾನವ ಜೀವನದ ಈಡೇರಿಕೆ ಎಂದರೆ ಪರಿಪೂರ್ಣ ಪ್ರಜ್ಞೆಯನ್ನು ಪ್ರಕೃತಿ ಅಥವಾ ಕಾಲದ ಸ್ಥಿತಿಗಳಿಂದ ಮುಕ್ತವಾಗಿ ಹೊಂದುವುದು. ಇದೇ ಅಂತಿಮ ಪರಿಪೂರ್ಣತೆ ಇದನ್ನು ಇಲ್ಲಿ ಮತ್ತೆ ನಾನು ಸ್ಪಷ್ಟವಾಗಿ ಉಲ್ಲೇಖಿಸುವುದಾದಲ್ಲಿ, ಪರಿಪೂರ್ಣತೆಯನ್ನು ಪಡೆಯುವ ತುಡಿತ ಮಾನವರಲ್ಲಿ ʼಸಹಜʼವಾಗಿ ಇರುತ್ತದೆ.
ಅನಿಶ್ಚಿತವಾದ ಪ್ರಾಪಂಚಿಕ ನಾಗರಿಕತೆಯು ಈ ತುಡಿತಗಳನ್ನು ಈಡೇರಿಸಿಕೊಳ್ಳಲು ನಿರಂತರವಾಗಿ ಮುಂದಾಗುತ್ತದೆ. ಆಧ್ಯಾತ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ಇದನ್ನು ಗಳಿಸುವ ಬದಲು ಪ್ರಕೃತಿಯನ್ನು ಶೋಷಿಸುವ ಮೂಲಕ ಪಡೆಯುತ್ತದೆ. ವಿಕಾಸವಾದ ತತ್ತ್ವದ ಆವಿಷ್ಕಾರ ಮತ್ತು ಬೆಳವಣಿಗೆ ಕೇವಲ ಅಮರತ್ವವನ್ನು ಪಡೆಯುವ ಹಾಗೂ ತನ್ನ ಬಗ್ಗೆ ಪೂರ್ಣಜ್ಞಾನವನ್ನು ಸಂಪಾದಿಸಲು ಮಾನವನಲ್ಲಿ ಬೆಳೆದ ಒಂದು ಪ್ರಯತ್ನವಷ್ಟೇ.
ಪ್ರಕೃತಿಯ ಈ ಶೋಷಣೆ ಆಶಾಭಂಗಕ್ಕೆ ದಾರಿ ಮಾಡಿಕೊಡುತ್ತದೆ. ಅಣ್ವಸ್ತ್ರ ಶಕ್ತಿಯನ್ನು ಉದಾಹರಣೆಗೆ ತೆಗೆದುಕೊಳ್ಳಿ. ಅತ್ಯುತ್ಕೃಷ್ಟ ಸಾಮರ್ಥ್ಯದ ಪ್ರಮಾಣದ ಜತೆಗೆ ನೆಮ್ಮದಿಯಿಂದಿರುವ ಈ ಕೌತುಕ ಜಗತ್ತು ಬಾಂಬ್ನ ಘೋರ ಸತ್ಯವನ್ನು ಕಾಣುತ್ತದೆ.
ಭೌತಿಕ ಪ್ರಕೃತಿ ಕೊನೆಯಿಲ್ಲದಂತೆ ಬದಲಾಗುತ್ತಿದ್ದು ಅದರ ವಿನ್ಯಾಸಗಳೂ ಕೂಡ ಮಿತಿ ಇಲ್ಲದಂತೆ ಬದಲಾಗುತ್ತಿವೆ. ಇದರಿಂದಾಗಿ ಪ್ರಕೃತಿಯ ಬಳಕೆ ಹಾಗೂ ನಿಯಂತ್ರಣಗಳ ಮೇಲೆ ಹೇರಬಹುದಾದ ಯೋಜನೆಗಳು ಸೋಲುತ್ತವೆ; ಕನಿಷ್ಠ ಪಕ್ಷ ಯಾವುದಾದರೊಂದು ಸಂದರ್ಭದಲ್ಲಿನ ಬದಲಾವಣೆ ಎಲ್ಲವನ್ನು ಬದಲು ಮಾಡುತ್ತಿದೆ.

ಇದಕ್ಕೆ ಉತ್ತಮ ಉದಾಹರಣೆ ವಿಕಾಸವಾದದ ತತ್ತ್ವವೇ ಆಗಿದೆ; ಒಂದು ಹೆಜ್ಜೆ ಮುಂದೆ ಹೋಗುವ ಭರದಲ್ಲಿ ಪ್ರಕೃತಿಯ ಗತಿಯನ್ನೇ ಬದಲಾಯಿಸುವ ಪ್ರಯತ್ನದ ಮೂಲಕ ವೈಯಕ್ತಿಕ್ತವಾಗಲ್ಲದಿದ್ದರೂ ಆ ಜೀವರಾಶಿಯನ್ನು ಸಂರಕ್ಷಿಸುವುದೇ ಆಗಿದೆ. ಆಧುನಿಕ ನಾಗರಿಕತೆಯ ಅಳಿವಿಗೆ ಈ ತತ್ತ್ವವೇ ಕಾರಣವಾಗಲಿದೆ ಎನ್ನುವುದನ್ನು ಸಾಬೀತುಗೊಳಿಸುವುದೇ ಈ ಲೇಖನದ ಉದ್ದೇಶವಾಗಿದೆ.
ಭೌತಿಕ ತಳಹದಿಯ ಮೇಲೆ ಎಲ್ಲಿಯವರೆಗೂ ದೃಢವಾದ ಕಾಲುಗಳನ್ನು ಊರಲಾಗುತ್ತದೆಯೋ ಅಲ್ಲಿಯವರೆಗೂ ಅದರಿಂದ ಬಿಡುಗಡೆಯಾಗದಂತೆ ಮತ್ತದೇ ದ್ವಂದ್ವ ಬಂಧನ ನಮ್ಮನ್ನು ಕಟ್ಟಿ ಹಾಕುತ್ತದೆ. ಎಲ್ಲವೂ ಕೂಡ ಸ್ವಯಂಚಾಲಿತ ಮತ್ತು ಭವಿಷ್ಯ ನುಡಿಯುವಂತಾದಾಗ ಜೀವನ ತನ್ನ ಉತ್ಸಾಹವನ್ನು ಕಳೆದುಕೊಳ್ಳುತ್ತದೆ.
ಮತ್ತು ಮಾನವ ಸ್ವಭಾವ ಈ ಮೊದಲು ಆಗಿಹೋದ ಅವಶೇಷಗಳ ಮೇಲೆ ಪರಮವನ್ನು ಕಠೋರವಾಗಿ ಬೆನ್ನಟ್ಟಿಕೊಂಡು ಹೋಗುವ ಮೂಲಕ ಹೊಸ ಜಾಡಿನ ಹುಡುಕಾಟದ ಉರಿ ಏಳುತ್ತದೆ. ಈ ರೀತಿಯ ಮಿತಿ ಮೀರಿದ ಕುತರ್ಕವೇ ಸಾಮಾನ್ಯವಾಗಿ ಸಮಾಜದ ಅವನತಿಯ ಮುನ್ಸೂಚಕವಾಗುತ್ತದೆ.
ಜನ ತಮಗೆಲ್ಲವೂ ತಿಳಿದಿದೆ ಎಂದು ಭಾವಿಸುವ ಮೂಲಕ ತಮ್ಮ ದಡ್ಡತನವನ್ನು ಪ್ರದರ್ಶಿಸಿ ಬದುಕುವ ಉದ್ದೇಶವನ್ನೇ ಕಳೆದುಕೊಳ್ಳುತ್ತಾರೆ. ಪೂರ್ಣ ಜ್ಞಾನವು ಅನಾವೃತವಾದದ್ದು ಎಂಬ ಕಾರಣದಿಂದಲ್ಲ, ಆದರೆ ಅವರು ಅದನ್ನು ಸರಿಯಾಗಿ ತಿಳಿದಿರುವುದಿಲ್ಲ. ಅಹಂಕಾರ ಇಲ್ಲವೇ ಶಿಕ್ಷಣ ಫಲವಾಗಿ ಅವರು ‘ಎಲ್ಲʼ ವನ್ನೂ ದಡ್ಡತನದಿಂದಲೇ ಒಪ್ಪಿಕೊಳ್ಳುತ್ತಾರೆ. ಇದು ನಿಜಕ್ಕೂ ಈಡೇರಿಸಲು ಅಸಾಧ್ಯವಾದದ್ದು. ಇಂತಹ ದುಃಖದ ಸ್ಥಿತಿಯಲ್ಲಿ ವಿಸ್ಮೃತಿಯೇ ಸ್ವಾಗತಾರ್ಹ ಪ್ರತೀಕ್ಷೆಯಾಗುತ್ತದೆ.
ಆಧ್ಯಾತ್ಮಿಕ ತೃಪ್ತಿ :
ಲೌಕಿಕವನ್ನು ಬೆನ್ನಟ್ಟಿ ಹೋಗುವುದರಿಂದ ಅಂತಿಮವಾಗಿ ಸಿಗುವುದು ಸೋಲು. ಅದರ ಬದಲು ಆಧ್ಯಾತ್ಮಿಕ ಜೀವನ ಒಂದು ಚಿರಂತನ ಸಾಹಸ. ಅಲ್ಲಿ ಸಂಪೂರ್ಣವಾಗಿ ಜಾಗೃತವಾಗಿರುವ ಪ್ರಜ್ಞೆಯ ಮೂಲಕ ಲೌಕಿಕ ಜಗತ್ತಿನ ಅನುಭವಗಳಿಗೆ ಸರಿಗಟ್ಟಲಾರದಂತಹ ತೃಪ್ತಿಯನ್ನು ಪಡೆಯುತ್ತೇವೆ.
ಎಲ್ಲಾ ಶ್ರೇಷ್ಠ ಸಂತರ ಹಾಗೂ ಯೋಗಿಗಳ ಮಾತು ಇದನ್ನು ದೃಢಪಡಿಸುತ್ತದೆ. ಮತ್ತು ದೇವರ ಜತೆಯ ಪ್ರೇಮ ಸಂಬಂಧದ ಬೆಳವಣಿಗೆಯಲ್ಲಿ ಆನಂದವನ್ನು ಪಡೆಯುವುದಕ್ಕಿಂತ ಅದನ್ನು ನೀಡುವುದರಲ್ಲೇ ಚಿರಂತನವಾದ ಸ್ಪರ್ಧೆ ಇರುತ್ತದೆ – ಇದು ಭಕ್ತ ಮತ್ತು ಕೃಷ್ಣನ ನಡುವಿನ ಸ್ಪರ್ಧೆ. ಕೃಷ್ಣ ಇದಕ್ಕೆ ಸಂತೋಷದಿಂದ ಪ್ರತಿಕ್ರಿಯಿಸುತ್ತಾನೆ. ಲೌಕಿಕ ತತ್ತ್ವಶಾಸ್ತ್ರದ ಕಲ್ಪನೆಯು ಸ್ಥಿರಪಡಿಸಲಾರದ ಚಿರಂತನ ಬದುಕಿನ ನಂಬಿಕೆಗೆ ಭದ್ರತೆಯನ್ನು ಒದಗಿಸುತ್ತದೆ.
ಆಧುನಿಕ ವಿಜ್ಞಾನದಲ್ಲಿ ನಂಬಿಕೆ ಎನ್ನುವುದು ಮಂಥನ ಮಾಡುವ ಹುಡುಗನಂತೆ. ಆದರೆ ಯಾವುದೇ ವಿಜ್ಞಾನಿಗೆ ಮಾನವನಿಗೆ ಸಂತಸವನ್ನು ನೀಡುವ ನಿಟ್ಟಿನಲ್ಲಿ ಒಂದು ತತ್ತ್ವವನ್ನು ಅಥವಾ ತರತಮ ರೂಪಗಳ ಬಳಿ ಸಾರುವ ಪರಿಕಲ್ಪನೆಯನ್ನು ನೀಡಲು ಸಾಧ್ಯವಾಗಿಲ್ಲ. ಇದಕ್ಕೆ ವಿರುದ್ಧವಾಗಿ ಆಧುನಿಕ ಸಿನಿಕರು, ದೇವರನ್ನು ಒಳ್ಳೆಯತನವನ್ನು ಹಾಗೂ ಆತ್ಮದ ಅಮರತ್ವವನ್ನು ನಂಬುವವರೊಂದಿಗೆ ಹೋಲಿಸಿದಾಗ ಅವರು ಸತ್ತ ಕಲ್ಲುಗಳಿಗಿಂತಲೂ ಒಂದು ಕೈ ಜಾಸ್ತಿಯೇ ಇರುತ್ತಾರೆ.
ಆಧುನಿಕ ಮನಸ್ಸುಗಳ ಹತಾಶ ಸ್ಥಿತಿಗೆ ಕಾರಣ ನಂಬಿಕೆಯನ್ನು ಕಳೆದುಕೊಂಡಿರುವುದು. ಒಂದು ವೇಳೆ ಇದೇ ಪ್ರಗತಿಯಾದಲ್ಲಿ ಅದು ಎತ್ತ ಸಾಗುತ್ತಿದೆ ಎನ್ನುವ ಆಶ್ಚರ್ಯ ಎಂತಹರಲ್ಲೂ ಉಂಟಾಗುತ್ತದೆ. ನಂಬಿಕೆ ಯಾವಾಗಲೂ ನಿಂತು ಬಿಡುತ್ತದೆ ಎಂದಲ್ಲ. ಅದು ಅತ್ಯಂತ ಸರಳವಾಗಿ ಈಗ ಜೀವನದ ಲೌಕಿಕ ಪರಿಕಲ್ಪನೆಯಲ್ಲಿ ಸ್ಥಿರವಾಗಿದೆ. ಮುಂದೆ ವಿಜ್ಞಾನ, ವಿಕಾಸವಾದಗಳಿಗೂ ಇದು ಅನ್ವಯವಾಗುತ್ತದೆ.
ಈ ಹಂತದಲ್ಲಿ ಲೌಕಿಕವಾದಿ ಮತ್ತು ಆಧ್ಯಾತ್ಮಿಕವಾದಿಯ ಗುರಿಯ ವ್ಯಾಪ್ತಿ ಒಂದೇ; ಚಿರಂತನ ಜೀವನ (ವೈಯಕ್ತಿವಾಗಿ ಇಲ್ಲವೇ ತನ್ನ ಕುಲ ಅಥವಾ ನೀವು ಬಯಸಿದ ಹಾಗೆ), ಪೂರ್ಣ ಜ್ಞಾನ ಮತ್ತು ಆನಂದ. ನಾವು ಕೊನೆಯ ಎರಡು ವಿಷಯಗಳಾದ ಜ್ಞಾನ ಮತ್ತು ಆನಂದವನ್ನು ಮತ್ತಷ್ಟು ಗಮನಿಸಿದಾಗ ಅವು ಅರಿವು ಅಥವಾ ಪ್ರಜ್ಞೆಯ ಗುಣಗಳು. ಆನಂದ ಮತ್ತು ಜ್ಞಾನವನ್ನು ಹೊಂದಲು ವ್ಯಕ್ತಿಯು ತನ್ನ ಪ್ರಜ್ಞೆಯನ್ನು ಸರಿಯಾಗಿ ಹೊಂದಿಸಿಕೊಳ್ಳುವುದಕ್ಕಿಂತ ಹೆಚ್ಚಿನದೇನೂ ಬೇಕಾಗುವುದಿಲ್ಲ.
ಹಾಗೇ ಚಿರಂತನ ಜೀವನವೂ ಕೂಡ. ಇದು ಕಡಮೆ ಪ್ರತ್ಯಕ್ಷವಾಗಿರುತ್ತದೆ. ಆದರೂ ಕೂಡ ವ್ಯಕ್ತಿಯು ತನ್ನ ಪ್ರಜ್ಞೆಯನ್ನು ತನ್ನತನದ ಅರಿವಿನಿಂದ ದೂರಮಾಡಿ ಕೇವಲ ಲೌಕಿಕ ಜಗತ್ತಿನ ಊಹಿಸಲಾರದ ಸಂಕೀರ್ಣ ಯಂತ್ರ ವಿಜ್ಞಾನವನ್ನು ತಿಳಿಯುವುದಕ್ಕೆ ತೊಡಗಿಸಿಕೊಳ್ಳುವುದರ ಪರಿಣಾಮವಾಗಿ ತಮೋಗುಣ ಮತ್ತು ಸಂಕಟವನ್ನು ಅನುಭವಿಸುತ್ತಾನೆ. ಸಾವು ಕೂಡ ಸೇರಿಕೊಳ್ಳುತ್ತದೆ. ಇಲ್ಲಿಯೂ ಅದು ಕಡಮೆ ಪ್ರತ್ಯಕ್ಷವಾಗಿರುತ್ತದೆ.
ನೈತಿಕತೆ :
ಈ ಮೇಲೆ ಹೇಳಿದಂತೆ ವ್ಯಕ್ತಿ ತನ್ನ ಗುರಿಯನ್ನು ಹೇಗೆ ತಲಪಬೇಕೆನ್ನುವುದನ್ನೇ ನೈತಿಕತೆ ಎಂದು ಕರೆಯುತ್ತಾರೆ. ಈ ಅಂಶವನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕು; ಕೇವಲ ಒಬ್ಬನ ವರ್ತನೆಯಲ್ಲ ಒಂದು ಗುರಿಯತ್ತ ಅವನು ಸಾಗುವ ರೀತಿ.
ಅವನು ತನ್ನ ತಂದೆ, ತಾಯಿಯರನ್ನು ಸಮಾಜವನ್ನು ವಿಕಾಸವಾದ, ಶಿಕ್ಷಕರು, ದೇವರು, ಕಾಮ ಮೊದಲಾದವುಗಳನ್ನು ತೃಪ್ತಿಪಡಿಸಲು ಬಯಸಬಹುದು. ಆದರೆ ಒಬ್ಬರ ನಡತೆ ಅದರಲ್ಲಿಯೂ ಮಾನವರ ನಡತೆಗೆ ಒಂದು ದಿಕ್ಕು ಇರಬೇಕು. ಈ ನಡತೆ ಹಾಗೂ ದಿಕ್ಕುಗಳನ್ನೇ ನೈತಿಕತೆ ಎಂದು ಕರೆಯಲಾಗುತ್ತದೆ.
ನಾವೆಲ್ಲ ತಿಳಿದಿರುವ ಹಾಗೆ ನೈತಿಕತೆ ಎನ್ನುವುದು ಇಂದು ಕುಸಿದು ಬಿದ್ದಿದೆ. ಏಕೆಂದರೆ ಗುರಿ ಯಾವುದೇ ಇರಲಿ, ಅದು ಅಪೇಕ್ಷಣೀಯವಲ್ಲದ್ದು ಎನ್ನುವುದು ಸ್ಪಷ್ಟ. ಅನಿಶ್ಚಿತ ತತ್ತ್ವಗಳ ಧಾತುಗಳ ಮೂಲಕ ಜನರನ್ನು ಕಣ್ಣುಮುಚ್ಚಿಕೊಂಡು ಒಳ್ಳೆಯತನಕ್ಕೆ ಒಪ್ಪಿಸಿಕೊಳ್ಳಿ ಎಂದು ಹೇಳಲಾಗುತ್ತದೆಯೇ ವಿನಾ ‘ವಿಕಾಸವಾದವನ್ನು ತೃಪ್ತಿ ಪಡಿಸು’ ಎಂದು ಬುದ್ಧಿವಂತ ವ್ಯಕ್ತಿಗೆ ಕೋರಿಕೆಯನ್ನು ನೆರವೇರಿಸು ಎನ್ನುವ ರೀತಿಯ ಮನವಿಯಲ್ಲ.
ಹಾಗೆಯೇ ನಮ್ಮ ಇಂದಿನ ಯುವಕರೂ ಕೂಡ ಇವರೇ ಪೂರ್ಣ ಪ್ರಮಾಣದ ವಿಕಸನವಾದದ ನಿಜವಾದ ಮೊದಲ ಗುರಿ. ಅದರ ವಿರುದ್ಧ ಬಂಡಾಯವೆದ್ದು ನಂಬಿಕೆಯನ್ನು ಕಳೆದುಕೊಂಡು ಹಳೆಯ ಸಮಾಜವನ್ನು ನಾಶಪಡಿಸುವ ಗುರಿಯಲ್ಲದೆ ಅದನ್ನು ಕುರುಡು ಮತ್ತು ಕ್ರೂರತನದಿಂದ ಬದಲಾಯಿಸುವಿಕೆಯು ಅತ್ಯಂತ ಸ್ವೇಚ್ಛಾಚಾರದಿಂದ ಕೂಡಿದ ಅರಾಜಕತೆ.
ಪ್ರಾಪಂಚಿಕ ನಿಯಮಗಳ ಜತೆಯಲ್ಲಿ ನಿಜವಾದ ನೈತಿಕತೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ಏಕೆಂದರೆ ಅಂತ್ಯದಲ್ಲಿ ಲೌಕಿಕವು ತನ್ನ ಭಕ್ತರಿಗೆ ಸಾವನ್ನು ಮಾತ್ರ ಕರುಣಿಸುತ್ತದೆ. ದೇವರಿಂದ ದೂರವಾದ ಶಿಕ್ಷಣವು ತಮ್ಮನ್ನು ಆರೈಕೆ ಮಾಡದ ಪ್ರಕೃತಿಗೆ ತಮ್ಮ ಜೀವನವನ್ನು ಸಮರ್ಪಿಸುವಂತಹ ಉತ್ಸಾಹ ಶೂನ್ಯ ನಿರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

ಇಂದಿನ ಆಧುನಿಕ ಯುವಕರು ಹಳೆಯ ಮೌಲ್ಯಗಳನ್ನು ತಿರಸ್ಕರಿಸಿದ್ದಾರೆ ಎನ್ನುವುದು ಒಂದು ಚಿಕ್ಕ ಆಶ್ಚರ್ಯ. ಎಷ್ಟು ಕಡಮೆ ಸಮಯದಲ್ಲಿ ಸಾಧ್ಯವೋ ಅಷ್ಟು ಬೇಗ ಪೂರ್ಣ ಪ್ರಮಾಣದ ಇಂದ್ರಿಯ ತೃಪ್ತಿಯನ್ನು ಗ್ರಹಿಸುವುದಕ್ಕೆ ಅವರು ಎಲ್ಲ ಶಕ್ತಿಯನ್ನೂ ವ್ಯಯಿಸುತ್ತಾರೆ. ಇದು ಕೇವಲ ಪರಿಸ್ಥಿತಿಯ ಅಡಿಯಲ್ಲಿ ನಡೆಯುವ ಬುದ್ಧಿವಂತಿಕೆಯ ಕೆಲಸ.
“ನೀತಿವಂತ” ಜನಸಾಮಾನ್ಯರು :
ಯಾರು ತಮ್ಮನ್ನು ತಾವೇ ನೀತಿವಂತರೆಂದು ಭಾವಿಸಿ, ದೇವರ ಅಸ್ತಿತ್ವವನ್ನು ಅರ್ಥಮಾಡಿಕೊಂಡಿರುವುದಿಲ್ಲವೋ ಅಂತಹವರು ತಮ್ಮ ಜೀವನವನ್ನೇ ಕಾಮ ಮತ್ತು ಮದ್ಯಕ್ಕೆ ವಿನಿಯೋಗಿಸುವವರಿಗಿಂತ ಪಾಪಾತ್ಮರು. ಕನಿಷ್ಠ ಪಕ್ಷ ಪಾಪಿಗಳು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವುದಿಲ್ಲ ಅಲ್ಲದೆ, ಅವರು ವಿವೇಚನಾಯುಕ್ತ ವಾದಗಳಿಂದ ಉಳಿದುಕೊಳ್ಳಲು ಸಾಧ್ಯ.
ಸ್ವಧರ್ಮಿಷ್ಠಾತಾಭಿಮಾನಿ, ತನ್ನ ಪರಿಪೂರ್ಣತೆಯನ್ನು ಮನದಟ್ಟು ಮಾಡಿಕೊಂಡವನ ಬಳಿ ಮನುಷ್ಯರಾಗಲಿ ಅಥವಾ ದೇವರಾಗಿ ಸಮೀಪಿಸುವುದಕ್ಕಾಗುವುದಿಲ್ಲ. ಅವರು ಸಮಾಜದ ನಿಜವಾದ ದುಷ್ಟರು, ನೀಚ ಮನುಷ್ಯರು, ಇವರಿಂದಾಗಿಯೇ ಸಮಾಜದಲ್ಲಿ ಅರಾಜಕತೆ, ಭ್ರಷ್ಟಾಚಾರಗಳು ಹುಟ್ಟುತ್ತಿರುವುದು.
ಇಂತಹ ‘ನೀತಿವಂತರು’ – ಬೇರೆ ಬಗೆಯವರ ಅಸ್ತಿತ್ವ ಇಂದಿನ ದಿನಗಳಲ್ಲಿ ಸಿಗುತ್ತಿಲ್ಲ ಎನ್ನಬಹುದು – ಬಂಡೆದ್ದು ಭೂತಕಾಲವನ್ನು ಸಂಪೂರ್ಣ ಕ್ರೂರತನದಿಂದ ನಾಶಪಡಿಸುತ್ತಿದ್ದಾರೆ. ಈ ಕೃತ್ಯ ನಡೆಯುತ್ತಿರುವುದು ‘ಕೆಟ್ಟವರಿಂದ’ ಅಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ. ದುಷ್ಕರ್ಮಿಗಳು ಸಮಾಜಕ್ಕೆ ‘ಒಳ್ಳೆಯವರು’ ಎಂದು ಹೇಳುತ್ತಿಲ್ಲ.
ಆದರೆ ಅವರು ‘ಒಳ್ಳೆಯವರ’ ಕೃಪೆಗೆ ಪಾತ್ರರಾಗಿರುತ್ತಾರೆ. ಒಳ್ಳೆಯವರು ಅವರಿಗೆ ಒಳ್ಳೆಯದು ಹಾಗೂ ಕೆಟ್ಟದ್ದರ ನ್ಯಾಯ ಸಮ್ಮತ ನಿಯಮಗಳನ್ನು ಕಲಿಸಿರುತ್ತಾರೆ. ಯಾವಾಗ ದೇವರು ಮೌಲ್ಯಗಳನ್ನು ಸ್ಥಾಪಿಸುತ್ತಾನೋ ಅಂದರೆ, ವೇದಗಳಲ್ಲಿ ತನ್ನನ್ನು ತಾನು ಹೇಗೆ ಪ್ರಕಟಗೊಳಿಸಿಕೊಳ್ಳುತ್ತಾನೋ ಹಾಗೆ ಮನುಷ್ಯನ ಹಾಗೂ ಎಲ್ಲ ಜೀವಗಳ ನಿಜವಾದ ಮೌಲ್ಯಗಳು ಸ್ಥಾಪಿತವಾಗುತ್ತವೆ.
ಇದು ಕಾರ್ಯಸಾಧ್ಯವಲ್ಲದ ಆದರ್ಶ ಯೋಜನೆ ಎಂದು ಅನ್ನಿಸಬಹುದು. ಆದರೆ ಇದು ಇಂದಿನ ಸೋಗಿನ ಕನಸುಗಾರರ ಸ್ವಾಮಿನಿಷ್ಠೆಯಂತೂ ಅಲ್ಲ ಎನ್ನುವುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಕಾರ್ಯಸಾಧ್ಯವಲ್ಲದ ಆದರ್ಶ ಯೋಜನೆಗಳನ್ನು ನಿರ್ಮಿಸುವಲ್ಲಿ ಅರೇಬಿಯಾದ ಯೋಗಿಗಳಿಗಿಂತಲೂ ಹೊರತಾಗಿ ಮಿತಿ ಮೀರಿದ ವರ್ತನೆಯನ್ನು ವಿಕಸನವಾದಿಗಳು ಮತ್ತು ಲೌಕಿಕವಾದಿಗಳು ಸಾಮಾನ್ಯವಾಗಿ ತೋರಿಸುತ್ತಾರೆ.
ಕಾರ್ಯ ಸಾಧನೆ ಮಾಡುವಲ್ಲಿ ಲೌಕಿಕ ಕಾರ್ಯಸಾಧ್ಯವಲ್ಲದ ಆದರ್ಶ ಯೋಜನೆಗಳು ವಿಫಲವಾಗುತ್ತಿವೆ ಎನ್ನುವುದೊಂದೇ ಸಮಸ್ಯೆ. ನೋಡಿ, ನಿಮಗೆ ಇದಕ್ಕೊಂದು ಉದಾಹರಣೆ ಬೇಕಾದರೆ ಯಾವುದೇ ದರ್ಜೆಯ ಶಾಲಾ ಪಠ್ಯಪುಸ್ತಕವನ್ನು ನೋಡಿ, ನ್ಯೂಯಾರ್ಕ್ ಸಿಟಿಯ ಬಗ್ಗೆ ಓದಿ. ಎಷ್ಟೊಂದು ಸುಂದರವಾಗಿ!
ಬೃಹದಾಕಾರದ ಕಟ್ಟಡಗಳು, ಅಸಂಖ್ಯಾತ ಸೇತುವೆಗಳು, ಲೆಕ್ಕವಿಲ್ಲದಷ್ಟು ರೈಲುಗಳು, ಎಷ್ಟೊಂದು ಸಂಗ್ರಹಾಲಯಗಳು ಮತ್ತು ಸ್ಮಾರಕಗಳು, ಎಷ್ಟೊಂದು ಜನ, ಲಕ್ಷೋಪಲಕ್ಷ ಡಾಲಗಳು, ರಾಶಿ ರಾಶಿ ಆಹಾರ, ಹತ್ತಾರು ಉಪಹಾರಗೃಹಗಳು, ನೂರಾರು ರಂಗಮಂದಿರಗಳು, ಹಲವು ಉದ್ಯಾನವನಗಳು, ಮೃಗಾಲಯಗಳು, ತೋಟಗಳು, ಅದೊಂದು ಸುಯುಗ.
ಆ ಬಳಿಕ ನೂಯಾರ್ಕ್ ಸಿಟಿಯ ಬೀದಿಗಳಲ್ಲಿ ಓಡಾಡಿ, ಜನರೊಂದಿಗೆ ಮಾತನಾಡಿ, ದೊಡ್ಡ ಸದ್ದು ಮಾಡಿ ಒಡೆದುಹೋಗುವ ಬಲೂನಿನಂತೆ, ಮಾತು ಕೇಳಿಸುತ್ತದೆ ‘ನನಗೆ ಇಲ್ಲಿ ಜೀವಿಸಲು ಇಷ್ಟವಿಲ್ಲ’, ಲೌಕಿಕ ಯಶಸ್ಸಿನ ಹತಾಶೆಯ ಲಕ್ಷಣವಿದು. ದೇವರಿಲ್ಲದೆ ಯಾವ ಯಶಸ್ಸೂ ಸಾಧ್ಯವಿಲ್ಲ ಎನ್ನುವುದು ಸತ್ಯ. ಯಾರ ಹೃದಯ ದೇವರಲ್ಲಿ ನಿಲ್ಲುತ್ತದೆಯೋ ಅವರಿಗೆ ಸೋಲಿಲ್ಲ.
ವ್ಯಕ್ತಿ ಲಕ್ಷಣ :
ಎಲ್ಲಕ್ಕಿಂತ ಮಿಗಿಲಾಗಿ ವಿಕಾಸವಾದವನ್ನು ತೃಪ್ತಿ ಪಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದ ಮೂಲದಲ್ಲಿ ಕೊರತೆ ಇದೆ. ವ್ಯಕ್ತಿಯ ಭರವಸೆ ಹಾಗೂ ಆಸೆಗಳನ್ನು ಅಂಗೀಕರಿಸುವಂತಹ ಗುರಿ ಆ ಶಿಕ್ಷಣದಲ್ಲಿ ಇಲ್ಲದಿರುವುದು.
ಎಲ್ಲವೂ ಕೂಡ ಪೂರ್ಣತೆಗಾಗಿ ತ್ಯಾಗ ಮಾಡಬೇಕು, ದೇಶಕ್ಕಾಗಿ, ಇಲ್ಲವೇ ಕುಲಕ್ಕಾಗಿ ಅಥವಾ ಜೀವರಾಶಿಗೆ ಇಲ್ಲವೇ ಜೀವನ ಶಕ್ತಿಗೆ. ಅಂತಹ ತತ್ತ್ವಶಾಸ್ತ್ರವು ಕ್ಯಾಲ್ವಿನ್ನಿನ ದೈವಜ್ಞಾನ ಮತಕ್ಕಿಂತ ಹೆಚ್ಚು ಘೋರವಾದದ್ದು, ಹೆಚ್ಚು ನಿರಾಶಾದಾಯಕವಾದದ್ದು ಮತ್ತು ನಾರ್ವೆ ದೇಶದ ಪುರಾಣಗಳಿಗಿಂತಲೂ ಬರ್ಬರವಾದದ್ದು.
ಮಾನವ ಜೀವನದಲ್ಲಿ ‘ ಸಹಜ’ ವಾಗಿರುವ ಅತ್ಯುನ್ನತ ಪ್ರಜ್ಞೆಯು ದಿಕ್ಕು ತಪ್ಪಿ, ಗುರಾಣಿಗೆ ಬಡಿದು ಹಿಂದಕ್ಕೆ ಬರುವ ಕತ್ತಿಯ ಹಾಗೆ, ಅದು ಅದನ್ನು ಹಿಡಿದವನ ಕುತ್ತಿಗೆಯನ್ನು ಕತ್ತರಿಸಲೂಬಹುದು. ನಿಜವಾದ ದಾರಿಯನ್ನು ಬೆನ್ನಟ್ಟಿಕೊಂಡು ಹೋಗುವುದರಿಂದ ನಿಯಂತ್ರಿತನಾದ ಆಧುನಿಕ ಮಾನವ – ಅದರಲ್ಲಿಯೂ ಇಂದಿನ ಆಧುನಿಕ ಯುವ ಜನಾಂಗ-ಚಡಪಡಿಕೆ ಮತ್ತು ಶೂನ್ಯ, ನಿರಾಶಾದಾಯಕ ಮತ್ತು ಕೋಪ, ವ್ಯಾಕುಲತೆ ಮತ್ತು ದುರಂತ ಹಾಗೂ ಅಪಾಯಕಾರಿಯಾಗುತ್ತಿದ್ದಾನೆ.
ತತ್ತ್ವಶಾಸ್ತ್ರವಾಗಲಿ, ನೈತಿಕತೆಯಾಗಲಿ, ಆಲೋಚನಾ ಪದ್ಧತಿಯಾಗಲಿ ಅಥವಾ ಶಿಸ್ತಾಗಲಿ ದೇವರನ್ನು ತಲಪುವ ಸಾಧನವಾಗುವಂತಹ ನಿಜವಾದ ಧರ್ಮವನ್ನು ವ್ಯಾವಹಾರಿಕವಾಗಿ ರೂಪಿಸುವುದಕ್ಕೆ ಸಾಧ್ಯವಾಗಿಲ್ಲ. ದೇವರ ಪ್ರಜ್ಞೆಯಲ್ಲಿ ವ್ಯಕ್ತಿಯು ತನ್ನ ನಿರ್ದಿಷ್ಟವಾದ, ಚಿರಂತನವಾದ ಸಂಬಂಧವನ್ನು ಸೃಷ್ಟಿಕರ್ತನೊಂದಿಗೆ, ಪ್ರೇಮಿಯೊಂದಿಗೆ, ಗೆಳೆಯನೊಂದಿಗೆ ಮತ್ತು ಎಲ್ಲರಿಗೂ ತಂದೆಯಾಗಿರುವ ಅವನೊಂದಿಗೆ ಹೊಂದಿರುತ್ತಾನೆ.
ಗೆಳೆಯನಂತೆ, ಮಗುವಿನಂತೆ, ಪ್ರೇಮಿಯಂತೆ ಮತ್ತು ದೇವರು ಸೃಷ್ಟಿಸಿದ ಜೀವಿಯಂತೆ ವರ್ತಿಸಿದಾಗ ವ್ಯಕ್ತಿಯು ಬದುಕಿರುವ ಎಲ್ಲಕ್ಕೂ ಉಪಕಾರಿಯಾಗಬಲ್ಲ, ಉಳಿಯುವುದಕ್ಕಾಗಿ ನಡೆಸುವ ಹೋರಾಟದಿಂದ ಹೊರಬರುವಂತಹ ಅವಕಾಶವನ್ನು ಅವರಿಗೆ ನೀಡುವ ಮೂಲಕ ಅವರನ್ನು ಪರಮದ ಪ್ರೀತಿಯ ದಿವ್ಯ ಸ್ಥಾನಕ್ಕೆ ತರಬಲ್ಲ.
ಈ ರೀತಿಯಾಗಿ ಕೃಷ್ಣಪ್ರಜ್ಞೆಯು ವ್ಯಕ್ತಿಯ, ಸಮುದಾಯದ ಮಾನವನ ಮತ್ತು ವಿಶ್ವ ಇವೆರಡರ – ಮತ್ತು ಅಖಂಡದ ಎಲ್ಲ ಅವಶ್ಯಕತೆಗಳನ್ನು ಪರಿಪೂರ್ಣವಾಗಿ ಮತ್ತು ಶಾಶ್ವತವಾಗಿ ಈಡೇರಿಸುತ್ತದೆ. ಇದೇ ದೇವೋತ್ತಮನಾದ ಶ್ರೀ ಕೃಷ್ಣನ ಬಯಕೆಯೂ ಆಗಿದೆ. ಇದು ಗೊಂದಲ ಹಾಗೂ ಅರಾಜಕತೆಗಳಿಗೆ ಕೇವಲ ಪರ್ಯಾಯವಲ್ಲ. ಇಂತಹ ಪರ್ಯಾಯ ಲೌಕಿಕಕ್ಕೆ ಅತ್ಯಗತ್ಯವಾದದ್ದು. ಜೀವಿಗಳಿಗೆ ಇದೇ ಕೊನೆಯ ಪರಿಹಾರ ಮಾರ್ಗ. ಇದೇ ವಿಕಾಸವಾದದ ಅಂತ್ಯ.






Leave a Reply