ಯುಗಾದಿ ಹಬ್ಬದ ವಿಶೇಷ ಭಕ್ಷ್ಯಗಳು

– ಎಸ್‌.ವಿ.ಗಾಯತ್ರಿ ಶೆಣೈ

‘ಯುಗಾದಿ’ ಎನ್ನುವ ಶಬ್ದವು ಯುಗ ಮತ್ತು ಆದಿ ಎಂಬ ಎರಡು ಶಬ್ದಗಳ ಸಂಯೋಜನೆಯಿಂದ ಬ೦ದಿದೆ ಮತ್ತು ಬ್ರಹ್ಮದೇವನು ಈ ದಿನದಂದೇ ಸೃಷ್ಟಿಯ ರಚನೆ ಮಾಡಿದನೆಂದು ಪ್ರತೀತಿ ಇದೆ. ಭಾರತದ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾಮಾನ್ಯವಾಗಿ ಚಂದ್ರನ ಕಾಲಗತಿಯನ್ನು ಅನುಸರಿಸಿ ‘ಚಂದ್ರಮಾನಯುಗಾದಿ’ಯನ್ನು ಮತ್ತು ತಮಿಳುನಾಡಿನಲ್ಲಿ ಸೂರ್ಯನ ಕಾಲಗತಿಯನ್ನು ಅನುಸರಿಸಿ ‘ಸೌರಮಾನ ಯುಗಾದಿ’ ಯನ್ನು ಆಚರಿಸುತ್ತಾರೆ.

ತೆಂಗಿನಕಾಯಿ ಹೋಳಿಗೆ (ಒಬ್ಬಟ್ಟು)

ಹೊರಗಿನ ಹಿಟ್ಟಿಗೆ (ಕಣಕಕ್ಕೆ)

ಬೇಕಾಗುವ ಪದಾರ್ಥ:

ಮೈದಾಹಿಟ್ಟು – 1 ಬಟ್ಟಲು

ಚಿರೋಟಿ ರವೆ – 1 ಬಟ್ಟಲು

ಉಪ್ಪು – 2 ಚಿಟಿಕೆ

ಅಡಿಗೆ ಎಣ್ಣೆ -1 ದೊಡ್ಡ ಚಮಚ

ಮಾಡುವ ವಿಧಾನ : ಮೈದಾ, ರವೆಯನ್ನು ಜರಡಿ ಹಿಡಿದು ಚೆನ್ನಾಗಿ ಆರಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಉಪ್ಪು, ಮೈದಾ, ರವೆಯನ್ನು ಒಟ್ಟಿಗೆ ಹಾಕಿ ಮತ್ತು ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ (ಹಿಟ್ಟು ತೆಳುವೂ ಆಗದಂತೆ, ಗಟ್ಟಿಯೂ ಆಗದಂತೆ ಸ್ವಲ್ಪ ಮೃದುವಾಗಿರುವಂತೆ ಕಲೆಸಿ) ನಂತರ ಎಣ್ಣೆ ಹಾಕಿ ಚೆನ್ನಾಗಿ ನಾದಿ 1 1/2 ಯಿಂದ 2 ತಾಸು ಮುಚ್ಚಿಡಿ.

ಹೂರಣಕ್ಕೆ ಬೇಕಾಗುವ ಪದಾರ್ಥ:

ತೆಂಗಿನಕಾಯಿ ತುರಿ – 1 1/4 ಬಟ್ಟಲು

ಗಸಗಸೆ – 3/4 ಬಟ್ಟಲು

ಬೆಲ್ಲದ ತುರಿ – 1 1/4 ಬಟ್ಟಲು

ಏಲಕ್ಕಿ -7-8

ತುಪ್ಪ – 1 ದೊಡ್ಡ ಚಮಚ

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ತುಪ್ಪ ಕಾಯಿಸಿ ತೆ೦ಗಿನಕಾಯಿ ತುರಿಯನ್ನು ಸ್ವಲ್ಪ ಹುರಿದುಕೊಳ್ಳಿ. ಅದಕ್ಕೆ ಬೆಲ್ಲದ ಪುಡಿಯನ್ನು ಸೇರಿಸಿ, ತೆಂಗಿನ ತುರಿಯೊಂದಿಗೆ ಬೆಲ್ಲ ಬೆರೆತ ಕೂಡಲೇ ಉರಿ ಆರಿಸಿ.

ತೆ೦ಗಿನ ತುರಿ-ಬೆಲ್ಲದ ಮಿಶ್ರಣ ಸ್ವಲ್ಪ ಆರಿದ ನಂತರ ಏಲಕ್ಕಿಯೊಂದಿಗೆ ರುಬ್ಬಿ, ಅದು ಹೆಚ್ಚು ನುಣ್ಣಗಾಗುವುದು ಬೇಡ. ಮತ್ತೊಂದು ಬಾಣಲೆಯಲ್ಲಿ ಗಸಗಸೆಯನ್ನು ಹುರಿದು ಇದೇ ಹೂರಣಕ್ಕೆ ಬೆರೆಸಿ, ಚೆನ್ನಾಗಿ ಕಲೆಸಿ.

ಹೋಳಿಗೆಯನ್ನು ಮಾಡುವ ವಿಧಾನ : ಮೊದಲು ಮೈದಾಹಿಟ್ಟಿನ ಕಣಕವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಚಿಕ್ಕ ಚಿಕ್ಕ ಪೂರಿಯಾಕಾರದಲ್ಲಿ ಲಟ್ಟಿಸಿಕೊಳ್ಳಿ. ನಂತರ ಹೂರಣವನ್ನು ದೊಡ್ಡ ಲಿ೦ಬೆಹಣ್ಣಿನಷ್ಟು ಹದಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ.

ಈಗ ಲಟ್ಟಿಸಿದ ಚಿಕ್ಕ ಮೈದಹಿಟ್ಟಿನ ಪೂರಿಯ ಮೇಲೆ ಸ್ವಲ್ಪ ತುಪ್ಪವನ್ನು ಹಚ್ಚಿ ಹೂರಣದ ಉಂಡೆಯನ್ನಿಟ್ಟು ಎಲ್ಲಾ ಬದಿಯಿಂದ ಮುಚ್ಚಿ ಹೂರಣ ಹೊರಗೆ ಬಾರದಂತೆ ಮಾಡಿಕೊಂಡು, ಒಂದು ಪ್ಲಾಸ್ಟಿಕ್ ಹಾಳೆಗೆ ಸ್ವಲ್ಪ ತುಪ್ಪ ಸವರಿ ಅದರ ಮೇಲೆ ತೆಳುವಾಗಿ ಲಟ್ಟಿಸಿ, ಲಟ್ಟಿಸುವಾಗ ಹೆಚ್ಚು ಬಲ ಬಿಡದೆ ಬೇಕಾದರೆ ಮತ್ತೊಂದು ಪ್ಲಾಸ್ಟಿಕ್ ಹಾಳೆಗೂ ಸ್ವಲ್ಪ ತುಪ್ಪ ಸವರಿ ಅದರ ಮೇಲಿಟ್ಟು ಲಟ್ಟಿಸಬಹುದು. ಇಲ್ಲದಿದ್ದರೆ ಬಾಳೆ ಎಲೆಗೆ ಸ್ವಲ್ಪ ತುಪ್ಪ ಸವರಿ ಅದರ ಮೇಲೆ ಹೋಳಿಗೆಯ ಉಂಡೆಗಳನ್ನಿಟ್ಟು ತೆಳುವಾಗಿ ಲಟ್ಟಿಸಬಹುದು.

ಲಟ್ಟಿಸಿದ ಹೋಳಿಗೆಯನ್ನು ಕಾದ ತವೆಯ ಮೇಲೆ ಹಾಕಿ ಎರಡು ಬದಿಯನ್ನು ಹುರಿದು ತೆಗೆಯಿರಿ. ಹೋಳಿಗೆ ಹುರಿಯುವಾಗ ಬೇಕಾದರೆ ಹ೦ಚಿಗೆ ತುಪ್ಪ ಹಚ್ಚಿ ಹುರಿಯಬಹುದು. ಹುರಿದ ನಂತರ ಕರಂಡಿಕೆಯಲ್ಲಿ ಶೇಖರಿಸಿರುವ ಮೊದಲು ಅಗಲವಾದ ತಟ್ಟೆಯಲ್ಲಿ ಹಾಕಿ ಆರಿಸಿ ನಂತರ ತೆಗೆದಿಡಿ. ಅದಕ್ಕು ಮೊದಲು ರಾಧಾಕೃಷ್ಣರಿಗರ್ಪಿಸುವುದನ್ನು ಮರೆಯದಿರಿ.

ಸೂಂಥ್‌ ಪಾನಕ್ (ಮಹಾರಾಷ್ಟ್ರದ ವಿಶೇಷ)

ಮಹಾರಾಷ್ಟ್ರದಲ್ಲಿ ‘ಯುಗಾದಿ ಹಬ್ಬವನ್ನು ‘ಗುಡಿಪಡ್ವ’ ಎನ್ನುತ್ತಾರೆ. ಅಂದು ಇತರ ಭಕ್ಷ್ಯಗಳೊಂದಿಗೆ ಶುಂಠಿಯನ್ನು ಬಳಸಿ ತಯಾರಿಸುವ ಪಾನಕವನ್ನು ಸೇವಿಸುತ್ತಾರೆ ಅಥವಾ ಸ್ವಲ್ಪ ಗಟ್ಟಿಯಾದ ಲೇಹ್ಯದಂತೆ ತೆಗೆದುಕೊಳ್ಳುತ್ತಾರೆ.

ಬೇಕಾಗುವ ಪದಾರ್ಥ :

ಗೋದಿಹಿಟ್ಟು : 4 ಚಿಕ್ಕ ಚಮಚ

ಬೆಲ್ಲದ ತುರಿ: 100-150 ಗ್ರಾಂ

ಒಣಶುಂಠಿ ಪುಡಿ : 1 ದೊಡ್ಡ ಚಮಚ

ಕೊಬ್ಬರಿ ತುರಿ: 1 ದೊಡ್ಡ ಚಮಚ

ಬಾದಾಮಿ ಚೂರು : 1 ದೊಡ್ಡ ಚಮಚ

ಏಲಕ್ಕಿಪುಡಿ : 1 1/2 ಚಿಕ್ಕ ಚಮಚ

ತುಪ್ಪ: 4 ದೊಡ್ಡ ಚಮಚ

ಮಾಡುವ ವಿಧಾನ : ಒಂದು ದಪ್ಪತಳದ ಬಾಣಲೆಯಲ್ಲಿ ಅರ್ಧ ತುಪ್ಪ ಬಿಸಿಮಾಡಿ, ಗೋಧಿಹಿಟ್ಟನ್ನು ಹಾಕಿ ತುಸು ನಸುಗೆಂಪು ಬಣ್ಣದೊಂದಿಗೆ ಪರಿಮಳ ಬರುವವರೆಗೂ ಹುರಿಯಿರಿ. ಹುರಿದ ಹಿಟ್ಟನ್ನು ಮತ್ತೊಂದು ಪಾತ್ರೆಯಲ್ಲಿ ತೆಗೆದಿಟ್ಟು ಈಗ ಉಳಿದ ತುಪ್ಪ ಹಾಕಿ, ಜೊತೆಗೆ ಬೆಲ್ಲದ ಪುಡಿ ಸೇರಿಸಿ ತುಪ್ಪದಲ್ಲಿ ಬೆಲ್ಲ ಕರುಗುವವರೆಗೂ ಸಣ್ಣ ಉರಿಯಲ್ಲಿಡಿ. ತೆಳುಪಾಕ ಬಂದಕೂಡಲೇ ಉರಿ ಆರಿಸಿ.

ಈಗ ಹುರಿದ ಗೋದಿಹಿಟ್ಟು ಹಾಗೂ ಉಳಿದ ಪದಾರ್ಥಗಳನ್ನು ಇದಕ್ಕೆ ಸೇರಿಸಿ ಚೆನ್ನಾಗಿ ನಾದಿ ಆರಲು ಬಿಡಿ. ಆರಿದ ನಂತರ ಭಗವಂತನಿಗರ್ಪಿಸಿ ನೀವೂ ಸ್ವೀಕರಿಸಿ. ಇದು 3-4 ವಾರಗಳಷ್ಟು ಕಾಲ ಕೆಡುವುದಿಲ್ಲ. ಹಾಗಾಗಿ ಕರಂಡಿಕೆಯಲ್ಲಿ ಶೇಖರಿಸಿಟ್ಟು ಆಗಾಗ ಸ್ವಲ್ಪ ತೆಗೆದುಕೊಳ್ಳಬಹುದು.

ಮಾವು ಬೇವು ಪಚಡಿ (ಮಹಾರಾಷ್ಟ್ರ ಹಾಗೂ ಆಂಧ್ರದ ವಿಶೇಷ)

ಬೇಕಾಗುವ ಪದಾರ್ಥ :

ಬೇವಿನ ಹೂಗಳು : 2 ಚಿಕ್ಕ ಚಮಚ

ಮಾವಿನಕಾಯಿ – 1 ಚಿಕ್ಕ ಗಾತ್ರದ್ದು

ಬೆಲ್ಲದ ಪುಡಿ – 4 ದೊಡ್ಡ ಚಮಚ

ಸಾಸಿವೆ – 1/4 ಚಿಕ್ಕ ಚಮಚ

ಹುಣಸೆಹಣ್ಣು – 3 ಚಿಕ್ಕ ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮೆಣಸಿನಕಾಯಿಪುಡಿ – 1/4 ಚಿಕ್ಕ ಚಮಚ ಅಥವಾ ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಹುಣಸೆ ಹಣ್ಣನ್ನು ಸುಮಾರು 1 ರಿಂದ 1 1/2 ಬಟ್ಟಲು ನೀರಿನಲ್ಲಿ ಅರ್ಧಗಂಟೆಕಾಲ ನೆನೆಸಿ, ರಸ ಹಿಂಡಿ ತೆಗೆದು ಚರಟವನ್ನು ಎಸೆಯಿರಿ. ನಂತರ ಒಂದು ದಪ್ಪ ತಳದ ಸಣ್ಣ ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ, ಆರಲು ಬಿಡಿ.

ಅನ೦ತರ ಮಾವಿನಕಾಯಿಯನ್ನು ತೊಳೆದು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಕತ್ತರಿಸಿ ಈ ಹುಣಸೆರಸದಲ್ಲಿ ಹಾಕಿ ಕುದಿಸಿ. ಮಾವಿನಕಾಯಿ ಚೂರುಗಳು ಬೇಯುತ್ತಾ ಬರುವಾಗ ಬೆಲ್ಲದಪುಡಿ ಸೇರಿಸಿ ತಳಹತ್ತದಂತೆ ಆಗಾಗ ಕೈಯಾಡಿಸಿ, ಬೆಲ್ಲ ಕರಗಿ ಕುದಿಬಂದನಂತರ ಉರಿ ಆರಿಸಿ ಕೆಳಗಿಡಿ.

ಒಗ್ಗರಣೆ ಬಾಣಲೆಯಲ್ಲಿ ಅಡಿಗೆ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಬೇವಿನ ಹೂಗಳನ್ನು ಹಾಕಿ ತುಸು ನಸುಗೆಂಪು ಬಣ್ಣ ಬರುವವರೆಗೆ ಬಾಡಿಸಿ, ಹುಣಸೆ ಬೆಲ್ಲದ ಪಾಕಕ್ಕೆ ಸೇರಿಸಿ ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮೆಣಸಿನಕಾಯಿ ಪುಡಿಯನ್ನು ಬೆರೆಸಿ ಮಾವು-ಬೇವಿನ ಪಚಡಿ ಸಿದ್ಧ. ಬೇಕಾದರೆ ಸ್ವಲ್ಪ ಕೊಬ್ಬರಿತುರಿಯನ್ನು ಹಾಕಬಹುದು. ಅನಂತರ ಗೋವಿಂದನಿಗರ್ಪಿಸಿ ನೀವೂ ಸ್ವೀಕರಿಸಿ.

ಬಿಬ್ಬೆ ಉಪ್ಪರಿ (ದಕ್ಷಿಣ ಕನ್ನಡದ ವಿಶೇಷ)

ಸಾಮಾನ್ಯವಾಗಿ ಚೈತ್ರ ಮಾಸದಲ್ಲಿ ಹಸಿಬಿಬ್ಬೆ (ಗೋಡಂಬಿ) ಯನ್ನು ಹೆಚ್ಚಾಗಿ ದಕ್ಷಿಣ ಕನ್ನಡದಲ್ಲಿ ಕಾಣಬಹುದು. ಈ ಹಸಿಗೋಡಂಬಿ ಅಥವಾ ಗೇರುಬೀಜ ಯಾವುದೇ ಉಡುಪಿ ಅಂಗಡಿ ಮತ್ತು ಮಂಗಳೂರು ಪದಾರ್ಥಗಳನ್ನು ಮಾರುವ ಅಂಗಡಿಗಳಲ್ಲಿ ಯುಗಾದಿ ಸಮಯದಲ್ಲಿ ದೊರಕುತ್ತದೆ. ಇಲ್ಲದಿದ್ದಲ್ಲಿ ಒಣ ಗೋಡಂಬಿಯನ್ನು ನೆನೆಸಿ ಕೂಡ ಇದನ್ನು ಮಾಡಬಹುದು.

ಬೇಕಾಗುವ ಪದಾರ್ಥ :

ಬಿಬ್ಬೆ (ಹಸಿಗೋಡಂಬಿ) – 250 ಗ್ರಾಂ

ಅಡಿಗೆ ಎಣ್ಣೆ- ಒಣಗೋಡಂಬಿ 1 ½ ದೊಡ್ಡ ಚಮಚ

ಸಾಸಿವೆ – 1 ಚಕ್ಕ ಚಮಚ

ಹಿಂಗಿನ ಪುಡಿ – 2-3 ಚಿಟಿಕೆ

ಕರಿಬೇವು – 2 ಎಸಳು

ಹಸಿಮೆಣಸಿನಕಾಯಿ – 2 / ರುಚಿಗೆ ತಕ್ಕಷ್ಟು

ಒಣಮೆಣಸಿನಕಾಯಿ – 2 / ರುಚಿಗೆ ತಕ್ಕಷ್ಟು

ತೆಂಗಿನಕಾಯಿ ತುರಿ – 1 ಬಟ್ಟಲು

ಮಾಡುವ ವಿಧಾನ : ಹಸಿ ಗೋಡಂಬಿಯನ್ನು ಸಿಪ್ಪೆ ತೆಗೆದು ತೊಳೆಯಿರಿ. ಒಣಗೋಡಂಬಿಯಾದರೆ ಉಗುರು ಬೆಚ್ಚಗಿನ ನೀರಿನಲ್ಲಿ ಸುಮಾರು 2 ತಾಸು ನೆನೆಸಿಡಿ. ನಂತರ ಒಂದು ಬಾಣಲೆಯಲ್ಲಿ ಅಡಿಗೆ ಎಣ್ಣೆ ಬಿಸಿಮಾಡಿ ಸಾಸಿವೆ, ಕರಿಬೇವು ಒಗ್ಗರಣೆ ಮಾಡಿ, ಉರಿಯನ್ನು ಸಣ್ಣಗೆ ಮಾಡಿದ ನಂತರ ಹಿಂಗಿನ ಪುಡಿ, ಹಸಿಮೆಣಸಿನಕಾಯಿ ಚೂರು ಮತ್ತು ಒಣಮೆಣಸಿನಕಾಯಿ ಚೂರುಗಳನ್ನು ಹಾಕಿ ಹುರಿಯಿರಿ.

ಆನಂತರ ಗೋಡಂಬಿಯನ್ನು ಇದಕ್ಕೆ ಸೇರಿಸಿ 2-3 ನಿಮಿಷ ಹುರಿಯಿರಿ. ನಂತರ ಗೋಡಂಬಿ ಬೇಯಲು ಸ್ವಲ್ಪ ನೀರು ಹಾಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿ. ಗೋಡ೦ಬಿ ಬೆಂದು ಮುದ್ದೆಯಾಗದಂತೆ ಆಗಾಗ ಕೈಯಾಡಿಸಿ.

ಕೊನೆಯಲ್ಲಿ ತೆಂಗಿನ ತುರಿಯನ್ನು ಸೇರಿಸಿ 2-3 ನಿಮಿಷ ಮುಚ್ಚಳ ಮುಚ್ಚಿಡಿ. ಈಗ ಗೋಡಂಬಿ ಪಲ್ಯ (ಬಿಬ್ಬೆ ಉಪ್ಪರಿ ಅಥವಾ ಉಸ್ಲಿ) ಸಿದ್ಧ. ಸಾಮಾನ್ಯವಾಗಿ ಇದನ್ನು ಬೇಳೆಸಾರಿನ ಅನ್ನದೊ೦ದಿಗೆ ತಿನ್ನುವ ರೂಢಿಯಿದೆ. ಈ ಗೋಡಂಬಿ ಪಲ್ಯವನ್ನು ಗೋವಿಂದನಿಗರ್ಪಿಸಿ ನೀವೂ ಸ್ವೀಕರಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi