ಶರೀರ ಮತ್ತು ಆತ್ಮಗಳ ಕರ್ತವ್ಯ

ಶ್ರೀಲ ಪ್ರಭುಪಾದರು ದಿನಾಂಕ 1ನೇ ಸೆಪ್ಟೆಂಬರ್‌ 1973ರಲ್ಲಿ ಲಂಡನ್‌ನಲ್ಲಿ ನೀಡಿದ ಪ್ರವಚನ

– ಅನುವಾದ: ಡಾ.ಕೆ.ವೈ.ಬಾಲರಾಜ್‌

ಕೃಷ್ಣನು ಅರ್ಜುನನಿಗೆ ಬೋಧನೆ ಮಾಡುವಾಗ ಸಾಮಾನ್ಯ ಮನುಷ್ಯ ಮತ್ತು ಆತ್ಮಸಾಕ್ಷತ್ಕಾರಗೊಂಡವರ ಕರ್ತವ್ಯದ ಬಗ್ಗೆ ಒತ್ತು ಕೊಟ್ಟಿದ್ದಾನೆ.

ಸ್ವಧರ್ಮಮಪಿ ಚಾವೇಕ್ಷ್ಯ ವಿಕಂಪಿತುಮ್ ಅರ್ಹಸಿ |

ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋಽನ್ಯತ್‌ ಕ್ಷತ್ರಿಯಸ್ಯ ವಿದ್ಯತೇ ||

“ನೀನು ಕ್ಷತ್ರಿಯನಾಗಿ ಸ್ವಧರ್ಮವನ್ನು ಪರಿಗಣಿಸಿದಾಗ ಧರ್ಮಕ್ಕಾಗಿ ಹೋರಾಡುವುದಕ್ಕಿಂತ ಶ್ರೇಯಸ್ಕರವಾದ ಕಾರ್ಯ ಇನ್ನೊಂದಿಲ್ಲ ಎನ್ನುವುದನ್ನು ನೀನು ತಿಳಿದುಕೊಳ್ಳಬೇಕು. ಆದುದರಿಂದ ಹಿಂಜರಿಕೆಗೆ ಅವಕಾಶವೇ ಇಲ್ಲ.” (ಭಗವದ್ಗೀತಾ 2.31)

ಸ್ವಧರ್ಮಮ್ ಸ್ವ ಎಂದರೆ ”ಸ್ವಂತ’ ಮತ್ತು ಧರ್ಮಮ್ ಎಂದರೆ ‘ವೃತ್ತಿ’ ಎಂದರ್ಥ. ವೈದಿಕ ನಾಗರಿಕತೆ ಪ್ರಕಾರ ಪ್ರತಿಯೊಬ್ಬರಿಗೂ ತಮ್ಮದೆ ಆದ ಸ್ವಂತ ಧರ್ಮ ಇದೆ. ಮೂಢರಾದವರು ಇದನ್ನು ತಪ್ಪಾಗಿ ವ್ಯಾಖ್ಯಾನಿಸಿ ಸ್ವಧರ್ಮವೆಂದರೆ ತಮ್ಮದೇ ಸ್ವಂತ ಧಾರ್ಮಿಕ ಸಿದ್ಧಾಂತವನ್ನು ಶೋಧಿಸುವುದು ಎಂದು ಹೇಳುತ್ತಾರೆ.

ಯಥಾಮತಃ ತಥಾ ಪಥಾಃ ‘ನೀವು ಯಾವುದನ್ನು ಧಾರ್ಮಿಕ ಸಿದ್ಧಾಂತ ಎಂದು ಯೋಚಿಸುತ್ತೀರಿ, ಅದೇ ಸರಿಯಾದುದು” ಇದು ನಡೆಯುತ್ತಲೇ ಇದೆ. ಆದರೆ ಅದರ ಅರ್ಥ ಇದಲ್ಲ. ಸ್ವಧರ್ಮ ಎಂದರೆ ‘ಸ್ವಂತವೃತ್ತಿ” ನಿಜವಾಗಿಯೂ ಧರ್ಮವೆಂದರೆ “ಯಾವುದನ್ನು ಬಿಟ್ಟುಕೊಡಲಾಗುವುದಿಲ್ಲವೋ ಅದು.” ಆದ್ದರಿಂದ ಅದನ್ನು ನಿಮ್ಮ ಅಸ್ತಿತ್ವಕ್ಕಾಗಿ ಹಿಡಿದಿಟ್ಟುಕೊಳ್ಳಬೇಕು.

ಶರೀರ ಮತ್ತು ಆತ್ಮವೆಂಬ ಎರಡು ಬೇರೆ ಬೇರೆ ವಸ್ತುಗಳನ್ನು ನಾವು ಹೊಂದಿರುವುದರಿಂದ ನಾವು ಆತ್ಮ ಮತ್ತು ದೇಹದ ಸಂಯೋಜನೆಯಾಗಿದ್ದೇವೆ. ಆದ್ದರಿಂದ ಸ್ವಧರ್ಮವೆಂದರೆ ಆತ್ಮದ ವೃತ್ತಿ. ಈ ಭೌತಿಕ ಸ್ಥಿತಿಯಲ್ಲಿ ನಮಗೆ ನಾವು ಯಾರು, ನಾವು ಈ ಶರೀರ ಅಥವಾ ಆತ್ಮವೋ ಎಂದು ಅರ್ಥವಾಗುವುದಿಲ್ಲ. ನಾವು ಈ ಶರೀರವಲ್ಲ ಆತ್ಮವೆಂದು ಬಹಳ ಜನರಿಗೆ ಗೊತ್ತಿರುವುದಿಲ್ಲ.

ಈ ದೇಹ- ಅಥವಾ ಶರೀರವೆಂಬುದು ಬಟ್ಟೆ ಇದ್ದ ಹಾಗೆ ಅಥವಾ ಬಾಹ್ಯ ಆವರಣದಂತೆ. ಎಲ್ಲಿಯವರೆಗೆ ಒಬ್ಬ ವ್ಯಕ್ತಿ ಈ ದೇಹ ಕಲ್ಪನೆಯಲ್ಲಿಯೇ ಇರುವನೋ ಅವನಿಗೆ ಈ ದೈಹಿಕ ಕಲ್ಪನೆಗೆ ಅನುಗುಣವಾಗಿ ಬೇರೆ ಬೇರೆ ವೃತ್ತಿ ಕರ್ತವ್ಯ ಇರುತ್ತದೆ. ಪ್ರತಿಯೊಬ್ಬರ ಸ್ವಭಾವವು ಈ ಐಹಿಕ ಪ್ರಕೃತಿಯ ತ್ರಿಗುಣಗಳಾದ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳಿಂದ ನಿರ್ವಹಿಸಲ್ಪಡುತ್ತಿರುತ್ತದೆ.

ಆದುದರಿಂದ ಒಬ್ಬ ವ್ಯಕ್ತಿಯ ಸ್ವಭಾವದ ಪ್ರಕಾರ ವೃತ್ತಿ ಕರ್ತವ್ಯ ಇರುತ್ತದೆ. ಅದು ಸಮಾಜದ ವೈಜ್ಞಾನಿಕ ವಿಭಜನೆಯೂ ಹೌದು, ವಿವರಣೆಯೂ ಹೌದು. ಈಗಿನ ಕಾಲದಲ್ಲಿ ಅಂತಹ ವಿಭಜನೆಯಿಲ್ಲ. ಆದ್ದರಿಂದ ಜನರು ಕೀಳುಗುಣವಾದ ತಾಮಸ ಮತ್ತು ಶೂದ್ರತನಕ್ಕೆ ಅವನತಿ ಹೊಂದುತ್ತಿದ್ದಾರೆ. ಅವರು ಶೂದ್ರ ತತ್ತ್ವಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ನಿನ್ನೆಯ ದಿವಸ ನನ್ನ ಮುಂದೆ ಒಂದು ಪತ್ರಿಕೆಯನ್ನು ಪ್ರಸ್ತುತ ಪಡಿಸಲಾಗಿತ್ತು. ಅದರಲ್ಲಿ ಜನರಿಗೆ ಸಣ್ಣ ಕೈಗಾರಿಕಾ ಉದ್ಯಮವನ್ನು ಪ್ರಾರಂಭಿಸಲು ಸಹಾಯ ಮಾಡಲು ಭಾರತೀಯ ಸರ್ಕಾರದ ಯೋಜನೆಯಿತ್ತು. ಅಂದರೆ ಸರ್ಕಾರವು ಜನರಿಗೆ ಮೋಟಾರಿನ ಬಿಡಿ ಭಾಗಗಳನ್ನು ಸಿದ್ಧಪಡಿಸುವ ಸಣ್ಣ ಕೈಗಾರಿಕಾ ಉದ್ಯಮವನ್ನು ಪ್ರಾರಂಭಿಸಲು ಸಹಾಯ ಮಾಡಬಯಸಿದೆ.

ಆದರೆ ಇಂಥ ಕೈಗಾರಿಕಾ ಚಟುವಟಿಕೆಗಳಲ್ಲಿ ಜನರನ್ನು ತೊಡಗಿಸಿದರೆ ಅವರನ್ನು ಶೂದ್ರ ಹಂತಕ್ಕೆ ತಳ್ಳಿದಂತಾಗುತ್ತದೆ ಎಂದು ಸರ್ಕಾರಕ್ಕೆ ಗೊತ್ತಿಲ್ಲ. ಪ್ರತಿಯೊಂದು ಸರ್ಕಾರವು ಜನರನ್ನು ಶೂದ್ರರಾಗಲು ಪ್ರೋತ್ಸಾಹಿಸುತ್ತಿದೆ. ಹೇಗೆ ನಮ್ಮ ಶರೀರದಲ್ಲಿ ತಲೆ, ಕೈ, ಕಾಲು ಮತ್ತು ಹೊಟ್ಟೆಯೆಂಬ ಬೇರೆ ಬೇರೆ ಅವಯವಗಳು ಇವೆಯೋ, ಅದರ ಹಾಗೆಯೇ ಈ ಮಾನವ ಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರವೆಂಬ ನಾಲ್ಕು ವಿಭಾಗಗಳಲ್ಲಿ ವಿಭಜಿಸಬೇಕು.

* ಕೇವಲ ಕಾಲುಗಳು ಮಾತ್ರ ಇರಲಿ. ತಲೆ, ಕೈಗಳು ಮತ್ತು ಉದರದ ಅವಶ್ಯಕತೆ ಇಲ್ಲ’ ಎಂದು ನೀವು ಹೇಳಲಾಗುವುದಿಲ್ಲ. ಅದು ಸರಿ ಕಾಣಿಸುತ್ತದೆಯೇ? ನೀವು ಎಲ್ಲ ಭಾಗಗಳನ್ನು ಕತ್ತರಿಸಿ, ಬರೀ ಕಾಲು ಇರಲಿ ಎಂದು ಹೇಳಿದರೆ ಅದು ಸರಿ ಕಾಣಿಸುತ್ತದೆಯೇ? ಕಾಲುಗಳ ಅವಶ್ಯಕತೆ ಇದೆ. ಆದರೆ ಆ ಕಾಲುಗಳು ದೇಹದೊಂದಿಗೆ ಇರಬೇಕು. ಇಲ್ಲವಾದರೆ ಅದೊಂದು ಮೃತ ಶರೀರದಂತಾಗಿ ಹೋಗುತ್ತದೆ.

ನಮಗೆ ವಿಶೇಷವಾಗಿ ತಲೆಯ ಅವಶ್ಯಕತೆ ಇದೆ. ಒಂದು ವೇಳೆ ತಲೆಯನ್ನು ಕತ್ತರಿಸಿದರೆ, ಆ ದೇಹವು ಸತ್ತಂತೆ. ನೀವು ಕೈಗಳನ್ನು ಕತ್ತರಿಸಬಹುದು, ಕಾಲನ್ನು ಕತ್ತರಿಸಬಹುದು. ಆದರೆ ತಲೆ ಅಥವಾ ಹೊಟ್ಟೆಯನ್ನು ಕತ್ತರಿಸಿದರೆ ಅದು ಮೃತದೇಹವಾಗುತ್ತದೆ.

ಆದ್ದರಿಂದ ಸ್ವ- ಧರ್ಮವೆಂದರೆ ಸಮಾಜದ ವಿಭಾಗಗಳಾದ ಬ್ರಾಹ್ಮಣ ವಿಭಾಗ, ಕ್ಷತ್ರಿಯ ವಿಭಾಗ, ವೈಶ್ಯ ವಿಭಾಗ ಮತ್ತು ಶೂದ್ರ ವಿಭಾಗ ಎಲ್ಲದರ ಅವಶ್ಯಕತೆಯಿದೆ. ಶೂದ್ರನ ಅವಶ್ಯಕತೆ ಇಲ್ಲ ಎಂದು ಹೇಳುವ ಹಾಗಿಲ್ಲ. ಶೂದ್ರನ ಅವಶ್ಯಕತೆ ಇದೆ. ಆದರೆ ಎಲ್ಲ ಜನರನ್ನು ಶೂದ್ರನನ್ನಾಗಿ ಮಾಡಿದರೆ ಯಾರು ನಿರ್ದೇಶನ ಮಾಡುತ್ತಾರೆ? ಒಂದು ವೇಳೆ ಮುಖ್ಯಸ್ಥರೇ ಇಲ್ಲದೇ ಹೋದರೆ ಯಾರು ನಿರ್ದೇಶನ ಮಾಡುತ್ತಾರೆ?

ಕ್ಷತ್ರಿಯನಿಗೆ ಕಠಿಣವಾದ ಕೆಲಸವನ್ನು ಹೊರಿಸಲಾಗಿದೆ. ಕ್ಷತ್ರಿಯ ಎಂದರೆ ಅದು ಆಡಳಿತ ವಿಭಜನೆ. ಆಡಳಿತ ವಿಭಾಗಕ್ಕೆ ಪ್ರಮುಖವಾದ ಕರ್ತವ್ಯವಿದೆ. ಅದು ಪ್ರತಿಯೊಬ್ಬರು ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿರುವುದರ ಬಗ್ಗೆ ನೋಡಿಕೊಳ್ಳಬೇಕು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರು ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆಯೋ ಇಲ್ಲವೋ ಎಂದು ನೋಡಿಕೊಳ್ಳಬೇಕು.

ಈ ದಿನಗಳಲ್ಲಿ ಭಾರತವು ಧರ್ಮನಿರಪೇಕ್ಷ ಸರ್ಕಾರವಾಗಿದೆ. ”ನಿರಪೇಕ್ಷ ಸರ್ಕಾರ’ ಎಂದರೆ ಯಾವುದೇ ಧಾರ್ಮಿಕ ಪದ್ಧತಿಗಳಿಗೆ ಅದು ನಿಷ್ಪಕ್ಷಪಾತವಾಗಿರುವುದು. ಜನರು ಧಾರ್ಮಿಕ ಪದ್ಧತಿಗಳಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಸರ್ಕಾರವು ಸುಮ್ಮನಿರಬಾರದು. ಸರ್ಕಾರವು ಈ ರೀತಿ ಮಾಡಬಾರದು. “ಹಿಂದೂಗಳು, ಮುಸಲ್ಮಾನರು, ಬೌದ್ಧರು ಮತ್ತು ಕ್ರೈಸ್ತರು ತಮ್ಮ ತಮ್ಮ ಧಾರ್ಮಿಕ ಪದ್ಧತಿಗಳನ್ನೇ ಆಚರಣೆ ಮಾಡಬೇಕು” ಎಂದು ಸರ್ಕಾರವು ಘೋಷಿಸಬೇಕು.

ಯಾರು ಏನನ್ನಾದರೂ ಅನುಸರಿಸಲಿ, ಏನನ್ನಾದರೂ ಮಾಡಲಿ ಎಂದು ಸರ್ಕಾರವು ತಟಸ್ಥವಾಗಿರಬಾರದು. ಯಾರಾದರು “ನಾನು ಹಿಂದೂ” ಎಂದು ಹೇಳಿಕೊಂಡರೆ ಸರ್ಕಾರದ ಕರ್ತವ್ಯ, ಆ ವ್ಯಕ್ತಿ ನಿಜವಾಗಿಯೂ ಹಿಂದೂ ಧರ್ಮದ ಸಿದ್ಧಾಂತಗಳನ್ನು ಅನುಸರಿಸುತ್ತಿದ್ದಾನೆಯೇ ಎಂದು ನೋಡಿಕೊಳ್ಳುವುದು.

ಅದುವೇ ಧರ್ಮನಿರಪೇಕ್ಷ ಸರ್ಕಾರ. ನೀವು ನಿಮ್ಮನ್ನು ಮುಸಲ್ಮಾನ್ ಅಥವಾ ಕ್ರಿಶ್ಚಿಯನ್ ಎಂದು ಕರೆದುಕೊಳ್ಳುತ್ತಿದ್ದರೆ, ಸರ್ಕಾರದ ಕರ್ತವ್ಯ ನೀವು ಆ ಧರ್ಮದ ಸಿದ್ಧಾಂತಗಳನ್ನು ನಿಜವಾಗಿಯೂ ಆಚರಿಸುತ್ತಿದ್ದೀರೋ ಇಲ್ಲವೋ ಎಂದು ಗಮನಿಸುವುದು. ನೀವು ಏನಾದರೂ ಮಾಡಿಕೊಳ್ಳಬಹುದು ಎಂಬುದಲ್ಲ. ಇದುವೇ ನಿಜವಾದ ಧರ್ಮ ನಿರಪೇಕ್ಷ ಸರಕಾರ.

ಅದೇ ರೀತಿ ಯಾರಾದರೂ ತಾವು ಬ್ರಾಹ್ಮಣನೆಂದು ಹೇಳಿಕೊಳ್ಳುತ್ತಿದ್ದರೆ ಸರ್ಕಾರದ ಕರ್ತವ್ಯ ಆ ವ್ಯಕ್ತಿ ಸಮ, ದಮ, ತಿತಿಕ್ಷ್ವ, ಆರ್ಜವಂ ಮೊದಲಾದ ಬ್ರಾಹ್ಮಣೀಯ ಸಿದ್ಧಾಂತಗಳನ್ನು ಅನುಸರಿಸುತ್ತಿದ್ದಾನೆಯೇ ಎಂದು ನೋಡಿಕೊಳ್ಳುವುದಾಗಿದೆ. ಆ ವ್ಯಕ್ತಿ ಹೇಗೆ ಸ್ವನಿಯಂತ್ರಿತನಾಗಿರುವನು? ಸದಾ ಶುದ್ಧತೆ, ಶುಚಿಯನ್ನು ಅನುಸರಿಸುತ್ತಿದ್ದಾನೆಯೇ ಎಂದು ನೋಡಿಕೊಳ್ಳುವುದಾಗಿದೆ.

ಬ್ರಾಹ್ಮಣನ ಇನ್ನೊಂದು ಹೆಸರೇ ಶುಚಿ, ”ಸದಾ ಶುದ್ಧ”ಎಂದಾಗಿದೆ. ಅದೇ ರೀತಿ ಆರ್ಜವಂ ಎಂದರೆ ಸರಳತೆ. ಬ್ರಾಹ್ಮಣನ ಜೀವನ ಸದಾ ಸರಳವಾಗಿರಬೇಕು. ಅವರು ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರನ್ನು ಅನುಕರಿಸಬಾರದು.

ಬ್ರಾಹ್ಮಣನಾದವನು ಬ್ರಾಹ್ಮಣೀಯ ಸಿದ್ಧಾಂತಗಳನ್ನು ನಿಜವಾಗಿಯೂ ಅನುಸರಿಸುತ್ತಿದ್ದಾನೆಯೇ ಎಂದು ಸರ್ಕಾರ ನೋಡಿಕೊಳ್ಳಬೇಕು. ಆದ್ದರಿಂದ ಕೃಷ್ಣನು ಹೇಳುತ್ತಾನೆ – “ ಕ್ಷತ್ರಿಯನಾಗಿ ನೀನು ಕ್ಷತ್ರಿಯ ಸಿದ್ಧಾಂತಗಳನ್ನು ಅನುಸರಿಸಬೇಕು.” ಕ್ಷತ್ರಿಯರ ಸಿದ್ಧಾಂತಗಳೇನು? ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋಽನ್ಯತ್‌ ಕ್ಷತ್ರಿಯಸ್ಯ ನ ವಿದ್ಯತೇ.

ಜನರು ತಮ್ಮ ಧರ್ಮದ ಸಿದ್ಧಾಂತಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು ನೋಡಿಕೊಳ್ಳಲು ಕ್ಷತ್ರಿಯನು ಸದಾ ಸಿದ್ಧನಿರಬೇಕು. ಅದುವೇ ಕ್ಷತ್ರಿಯನ ಕರ್ತವ್ಯ. ಸ್ವಧರ್ಮ ಎಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಅರ್ಜುನನು ಕ್ಷತ್ರಿಯನಾಗಿದ್ದನು. ಆದ್ದರಿಂದ ಹೋರಾಡುವುದೇ ಅವನ ಸ್ವಧರ್ಮ, ವೃತ್ತಿ ಕರ್ತವ್ಯವಾಗಿತ್ತು.

ನಿಜವಾದ ಸ್ವಧರ್ಮವು ಆಧ್ಯಾತ್ಮಿಕ ಸ್ವಧರ್ಮವಾಗಿದೆ. ಈ ವಿಷಯದಲ್ಲಿ ಆಳವಾಗಿ ಹೋದರೆ ನಿಮಗೆ ನಿಜವಾದ ಸ್ವಧರ್ಮವು ”ನಾನು ಈ ದೇಹವಲ್ಲ, ನಾನು ಆತ್ಮ” ವೆಂದು ಅರ್ಥವಾಗುತ್ತದೆ. ಆ ನಿಜವಾದ ಸ್ವಧರ್ಮದ ವೃತ್ತಿಯಾದರೂ ಏನು? ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳುವುದೇ ಸ್ವಧರ್ಮವಾಗಿದೆ.

”ಜೀವೇರ ಸ್ವರೂಪ ಹಯ-ಕೃಷ್ಣೇರ ನಿತ್ಯದಾಸ.” ಪ್ರತಿಯೊಬ್ಬ ಜೀವಾತ್ಮನು ಪ್ರಭು ಶ್ರೀಕೃಷ್ಣನ ನಿತ್ಯ ಸೇವಕನಾಗಿದ್ದಾನೆ. ಅದುವೇ ಆಧ್ಯಾತ್ಮಿಕ ಸ್ವಧರ್ಮ ಮತ್ತು ಲೌಕಿಕ ಸ್ವಧರ್ಮವೆಂದರೆ ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಮತ್ತು ಶೂದ್ರ.

ಆದ್ದರಿಂದ ಒಬ್ಬ ವ್ಯಕ್ತಿ ಆಧ್ಯಾತ್ಮಿಕ ಹಂತವನ್ನು ಏರಿದ ಅನಂತರ ಸ್ವಧರ್ಮವು ಬದಲಾಗುತ್ತದೆ. ಇದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. “ಸ ಗುಣಾನ್ ಸಮತೀ ತ್ಯೈತಾನ್ ಬ್ರಹ್ಮ – ಭೂಯಾಯ ಕಲ್ಪತೇ.” ಯಾರು ಭಕ್ತಿಸೇವೆಯಲ್ಲಿ ತೊಡಗಿಕೊಳ್ಳುತ್ತಾರೋ ಅವರು ಪಾರಮಾರ್ಥಿಕರಾಗಿರುತ್ತಾರೆ.

ಜೀವನದ ದೈಹಿಕ ಕಲ್ಪನೆಯಲ್ಲಿ ಅವರ ಸ್ವಧರ್ಮವಿರುವುದಿಲ್ಲ. ಏಕೆಂದರೆ ಅವನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರನಾಗಿರುವುದಿಲ್ಲ. ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ, “ನಾನು ಬ್ರಾಹ್ಮಣ ಅಥವಾ ಕ್ಷತ್ರಿಯ ಅಥವಾ ಶೂದ್ರ ಅಥವಾ ವೈಶ್ಯನಲ್ಲ. ನಾನು ಬ್ರಹ್ಮಚಾರಿ ಅಥವಾ ಸಂನ್ಯಾಸಿಯೂ ಅಲ್ಲ.”

ಈ ರೀತಿಯಾಗಿ ಅವರು ವರ್ಣಾಶ್ರಮ ಧರ್ಮದ ಎಂಟು ವಿಧಾನಗಳನ್ನು ಅಲ್ಲಗಳೆಯುತ್ತಾರೆ. ಸ್ವಧರ್ಮ ಎಂದರೆ ವರ್ಣಾಶ್ರಮ- ಧರ್ಮ. ವರ್ಣ ಮತ್ತು ಆಶ್ರಮ. ನಾಲ್ಕು ವರ್ಣಗಳು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಮತ್ತು ನಾಲ್ಕು ಆಶ್ರಮ ಧರ್ಮಗಳು ಬ್ರಹ್ಮಚರ್ಯ, ಗೃಹಸ್ಥ ವಾನಪ್ರಸ್ಥ ಹಾಗೂ ಸಂನ್ಯಾಸ.

“”ನಾನು ಇದು ಅಲ್ಲ, ನಾನು ಅದು ಅಲ್ಲ” ಎಂದು ಚೈತನ್ಯ ಮಹಾಪ್ರಭುಗಳು ತಾವು ಯಾವುದಕ್ಕೂ ಸಂಬಂಧಪಟ್ಟಿಲ್ಲವೆಂದು ಅಲ್ಲಗಳೆಯುತ್ತಾರೆ. ಹಾಗಾದರೆ ನೀನು ಏನು? ಗೋಪೀ-ಭರ್ತು ಪದ ಕಮಲಯೋ‌ರ್‌ ದಾಸದಾಸಾನುದಾಸಃ” ಗೋಪಿ ಭರ್ತುಃ ಎ೦ದರೆ ”ಗೋಪಿಯರ ಪಾಲಕ (ಕೃಷ್ಣ”. “”ನಾನು ಕೃಷ್ಣನ ಪಾದಕಮಲಗಳ ಸೇವೆಯಲ್ಲಿ ತೊಡಗಿರುವ ದಾಸರ, ದಾಸನ ದಾಸಾನುದಾಸ.”

ಯಾರು ಕೃಷ್ಣ ಪ್ರಜ್ಞೆಯಲ್ಲಿರುತ್ತಾರೆ, ಅವರು ಕೇವಲ ಕೃಷ್ಣನೊಬ್ಬನಿಗೆ ಸೇವೆ ಮಾಡಲು ನಿಶ್ಚಯಿಸಿರುತ್ತಾರೆ. ಅಂತಹವರಿಗೆ ದೈಹಿಕ ಸ್ವಧರ್ಮವಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಬ್ರಹ್ಮಚಾರಿ ಅಥವಾ ವಾನಪ್ರಸ್ಥಾ ಎಂಬ ವರ್ಗಗಳು ಇರುವುದಿಲ್ಲ. ಅವರೆಲ್ಲರೂ ಪಾರಮಾರ್ಥಿಕರಾಗಿರುತ್ತಾರೆ. ಇದು ಪ್ರತಿಯೊಂದು ಶಾಸ್ತ್ರಗಳಲ್ಲಿ ದೃಢಪಟ್ಟಿದೆ.

ಎಲ್ಲಿಯವರೆಗೂ ನಮ್ಮ ದೈಹಿಕ ಕಲ್ಪನೆ ಸಂಪೂರ್ಣವಾಗಿ ನಾಶವಾಗುವುದಿಲ್ಲವೋ ನಾವು ದೇಹದ ಸ್ವಧರ್ಮವನ್ನು ಅನುಸರಿಸಲೇಬೇಕು. ಯಾವಾಗ ಒಬ್ಬ ವ್ಯಕ್ತಿ ನಿಜವಾಗಿಯೂ ಪ್ರಗತಿಯನ್ನು ಹೊಂದುತ್ತಾನೆ, ಅವನು ಮಹಾಭಾಗವತನಾಗುತ್ತಾನೆ. ನಾವು ಅದನ್ನು ಅನುಕರಿಸಬಾರದು. ಆದರೆ ಯಾವಾಗ ಕೃಷ್ಣ ಪ್ರಜ್ಞೆಯಲ್ಲಿ ನಾವು ಪ್ರಗತಿಯನ್ನು ಹೊಂದುತ್ತೇವೆ, ಆವಾಗ ದೈಹಿಕ ಕಲ್ಪನೆಯಲ್ಲಿ ನಾವು ಪಾರಮಾರ್ಥಿಕರಾಗುತ್ತೇವೆ.

ಕೃಷ್ಣನು ಹೇಳುತ್ತಾನೆ. “ಮಾಮ್ ಚ ಯೋ ವ್ಯಭಿಚಾರೇಣ ಭಕ್ತಿ-ಯೋಗೇನ ಸೇವತೇ | ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮ – ಭೂಯಾಯ ಕಲ್ಪತೆ”

ಆದ್ದರಿಂದ ಯಾರು ಭಗವಂತನ ಭಕ್ತಿಸೇವೆಯಲ್ಲಿ ತೊಡಗಿರುತ್ತಾರೆಯೋ ಅವರು ವರ್ಣಾಶ್ರಮದ ಎಂಟು ವರ್ಗಗಳಲ್ಲಿ ಇರುವುದಿಲ್ಲ. ಅವರು ಪಾರಮಾರ್ಥಿಕರಾಗಿರುತ್ತಾರೆ. ಕೃಷ್ಣ ಪ್ರಜ್ಞೆಯುಳ್ಳ ವ್ಯಕ್ತಿಯು ಕೃಷ್ಣನ ಆಜ್ಞೆಯ ಮೇರೆಗೆ ಯಾವುದೇ ವರ್ಗದಲ್ಲಿಯೂ ನಟಿಸಬಹುದು. ಅವನು ಬ್ರಾಹ್ಮಣನಾಗಿ ಅಥವಾ ಶೂದ್ರನಾಗಿಯೂ ನಟಿಸಬಹುದು.

ಏಕೆಂದರೆ ಅವನ ಪ್ರಮುಖ ಕರ್ತವ್ಯವು ಕೃಷ್ಣನ ಆಜ್ಞೆಯನ್ನು ಪರಿಪಾಲಿಸುವುದೇ ಆಗಿದೆ. ಅವನು ಸ್ವಧರ್ಮದ ಯಾವ ವರ್ಗಕ್ಕೂ ಸೇರಿದವನಾಗಿರುವುದಿಲ್ಲ. ಕೃಷ್ಣನು ಅರ್ಜುನನಿಗೆ ಯುದ್ಧವೊಂದನ್ನು ಬಿಟ್ಟು ಬೇರೆ ಆಯ್ಕೆಯನ್ನು ಉಳಿಸುವುದಿಲ್ಲ. ”ಈ ರೀತಿಯಾಗಿಯಾದರೂ ಆಗಲಿ, ಆ ರೀತಿಯಾಗಿಯಾದರೂ ಆಗಲಿ ನೀನು ಹೋರಾಡಲೇಬೇಕು.

ದೈಹಿಕ ಕಲ್ಪನೆಯಲ್ಲಿ ನೀನು ಇಲ್ಲವೆಂದು ತಿಳಿದುಕೊಂಡರೂ ನನ್ನ ಆಜ್ಞೆಯಂತೆ ನೀನು ಹೋರಾಡಲೇಬೇಕು. ಒಂದು ವೇಳೆ ಈ ದೈಹಿಕ ಕಲ್ಪನೆಯಲ್ಲಿಯೇ ನೀನು ಇರುವೆ ಎಂದು ತಿಳಿದುಕೊಂಡರೂ, ಆಗ ನೀನು ಕ್ಷತ್ರಿಯನಾಗಿರುತ್ತೀಯಾ, ಆಗಲೂ ಕೂಡ ನೀನು ಹೋರಾಡಲೇಬೇಕು. ಒಟ್ಟಿನಲ್ಲಿ ನೀನು ಎರಡು ರೀತಿಯಾಗಿಯೂ ಹೋರಾಡಲೇಬೇಕು.” ಇದು ಕೃಷ್ಣನ ನಿರ್ಣಯ.

ಧನ್ಯವಾದಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi