ಶ್ರೀಲ ರಸಿಕಾನಂದ

ಶ್ರೀಲ ರಸಿಕಾನಂದರು 1590ನೇ ಇಸವಿಯಲ್ಲಿ ದೀಪಾವಳಿಯ ದಿನದಂದು ಜನ್ಮತಾಳಿದರು. ಅವರ ತಂದೆ ರಾಜಾ ಶ್ರೀ ಅಚ್ಯುತದೇವ ರಾಯಣಿ (ಅಥವಾ ರೋಹಿಣಿ) ಗ್ರಾಮದ ದೊಡ್ಡ ಜಮೀನ್ದಾರರು. ರಸಿಕಾನಂದರ ಮತ್ತೊಂದು ಹೆಸರು ‘ಮುರಾರಿ’ ಎಂಬುದಾಗಿತ್ತು.

ಸಲ್ಲಕ್ಷಣಗಳಿಂದ ಕೂಡಿದ್ದ ರಸಿಕಾನಂದರು ತೀಕ್ಷ್ಣಮತಿಯಾಗಿದ್ದರು. ಸಮರ್ಥ ಗುರುವಿನ ಮಾರ್ಗದರ್ಶನಕ್ಕಾಗಿ ಅವರು ಹಂಬಲಿಸುತ್ತಿದ್ದಾಗ ಅವರಿಗೆ ಶ್ಯಾಮಾನಂದ ಪ್ರಭುಗಳ ಬಳಿ ಸಾರಿ ದೀಕ್ಷೆ ಪಡೆಯುವಂತೆ ಬೋಧೆಯಾಯಿತು. ಅದಕ್ಕೆ ಸರಿಯಾಗಿ ಶ್ಯಾಮಾನಂದ ಪ್ರಭುಗಳು ರೋಹಿಣಿ ಗ್ರಾಮದತ್ತ ಪ್ರಯಾಣ ಬೆಳೆಸಿದ್ದರು.

ಕೃಷ್ಣಪ್ರೇಮರಸ ಮತ್ತರಾಗಿದ್ದ ಅವರನ್ನು ಸುಲಭವಾಗಿ ಗುರುತಿಸಿದ ರಸಿಕಾನಂದರು ಸಾಷ್ಟಾಂಗವೆರಗಿ ಆಶ್ರಯ ಬೇಡಿದರು. ಅವರ ವಿನಮ್ರತೆಯಿಂದ ಸಂಪ್ರೀತರಾದ ಶ್ಯಾಮಾನಂದ ಪ್ರಭುಗಳು ರಸಿಕಾನಂದ ಮತ್ತು ಅವರ ಪತ್ನಿ ಶ್ಯಾಮ ದಾಸಿ-ಇವರಿಬ್ಬರಿಗೂ ರಾಧಾಕೃಷ್ಣ ಮಂತ್ರ ದೀಕ್ಷೆ ನೀಡಿದರು.

ಹೆಚ್ಚಿನ ಸಮಯವನ್ನು ಗುರು ಸೇವೆಗಾಗಿ, ಅವರ ಆಜ್ಞಾಪಾಲನೆಗಾಗಿ ಮೀಸಲಿಡುತ್ತಿದ್ದ ರಸಿಕಾನಂದರಿಗೆ ಶ್ಯಾಮಾನಂದರು ತಾವು ಪ್ರತಿಷ್ಠಾಪಿಸಿದ ಗೋಪೀಜನವಲ್ಲಭ ಪುರ ದೇಗುಲದ ಜವಾಬ್ದಾರಿ ವಹಿಸಿದರು. ಅಂದಿನಿಂದ ರಸಿಕಾನಂದರು ದೇಗುಲದ ಬಗ್ಗೆ ಆಸಕ್ತಿ ವಹಿಸುತ್ತಾ ಸದಾ ಕಾಲವೂ ಮೂರ್ತಿಗಳ ಭಕ್ತಿಸೇವೆ ನೆರವೇರಿಸುತ್ತ ಶ್ರೀ ಶ್ರೀ ಗೌರ- ನಿತ್ಯಾನಂದರ ಸಂದೇಶಗಳನ್ನು ಬೋಧಿಸುತ್ತಾ ತಮ್ಮ ಜೀವಿತಾವಧಿಯನ್ನು ಸಾರ್ಥಕಗೊಳಿಸಿಕೊಂಡರು.

ಅವರು ಸುಮಾರು 46 ವರ್ಷಗಳ ಕಾಲ ತಮ್ಮ ಗುರುವಿನ ಆದೇಶದಂತೆ ಶ್ರೀ ಗೌರಚಂದ್ರರ ಬೋಧನೆಗಳನ್ನು ವಿತರಿಸುತ್ತ ಅದರಲ್ಲಿ ಸಂಪೂರ್ಣವಾಗಿ ಲೀನವಾಗಿ ಹೋಗಿದ್ದರು. ಅನೇಕಾನೇಕ ನಾಸ್ತಿಕರು, ದುಷ್ಟರು, ದರೋಡೆಕೋರರು, ರಾಜಾಧಿರಾಜರುಗಳು ಕೂಡ ಶ್ರೀ ರಸಿಕಾನಂದ ಪ್ರಭುಗಳಿಗೆ ಶರಣಾಗಿ ಭಕ್ತರಾಗಿ ಪರಿವರ್ತನೆ ಹೊಂದಿದರು.

ಮುಂದೆ, 1652 ರಲ್ಲಿ ಅವರು ರೇಮುನಾಕ್ಕೆ ತೆರಳಿ, ಅಲ್ಲಿ ಎಲ್ಲರಿಗೂ ಕೃಷ್ಣನನ್ನ ಭಜಿಸುವಂತೆ ಬೋಧಿಸಿ, ಶ್ರೀ ಗೋಪೀನಾಥನ ಚರಣ ಕಮಲವನ್ನು ವಂದಿಸುತ್ತ ಅಂತರ್ಧಾನರಾಗಿಹೋದರು.

ಶ್ರೀ ಶ್ಯಾಮನಂದ ಶತಕ ಮತ್ತು ಶ್ರೀಮದ್ಭಾಗವತಾಷ್ಟಕವೂ ಸೇರಿದಂತೆ ರಸಿಕಾನಂದರೇ ಹಲವಾರು ಕೃತಿಗಳನ್ನು ರಚಿಸಿರುವರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi